ಉಡುಪಿ : ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುವ ಮೂಲಕ ಜನಾಕ್ರೋಶ ಯಾತ್ರೆ ಎಂಬ ರಾಜ್ಯ ಬಿಜೆಪಿ ನಾಯಕರ ಪ್ರತಿಭಟನೆಗೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.
ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಬೆಲೆ ಏರಿಕೆ ಮಾಡಿರುವುದಾಗಿ ಬಾಯಿ ಬಡಿದುಕೊಳ್ಳುತ್ತಿರುವ ಬಿಜೆಪಿ ನಾಯಕರಿಗೆ ಕೇಂದ್ರದವರು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸಿರುವುದಕ್ಕೆ ಉತ್ತರವಿದೆಯೇ? ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಇಳಿಯುತ್ತಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಒಂದೇ ಸಮನೆ ಏರಿಸುತ್ತಾ ಹೋಗಲು ಕಾರಣ ಏನು ಎಂಬುದನ್ನು ಬಿಜೆಪಿ ನಾಯಕರು ರಾಜ್ಯದ ಜನರಿಗೆ ತಿಳಿಸಬೇಕಾಗಿದೆ.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಪ್ರಧಾನಿ ಮೋದಿಯವರು ತೈಲ ಹಾಗೂ ಅನಿಲ ಬೆಲೆ ಏರಿಕೆ ಮಾಡುವುದರೊಂದಿಗೆ ದೇಶದ ಜನತೆಗೆ ಮೋದಿ ಕೀ ಗ್ಯಾರಂಟಿ ನೀಡಿದ್ದಾರೆ. ಅಕ್ಕಿ, ಬೇಳೆ, ಮೀನು, ಮಾಂಸ, ತರಕಾರಿಯಿಂದ ಹಿಡಿದು ಹೊಟೇಲ್ ತಿಂಡಿವರೆಗೆ ಎಲ್ಲದರ ಬೆಲೆ ಏರಿಕೆಗೆ ಮೂಲ ಕಾರಣ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುತ್ತಲೇ ಇರುವ ಕೇಂದ್ರ ಸರ್ಕಾರದ ಜನವಿರೋಧೀ ನೀತಿ ಮತ್ತೊಮ್ಮೆ ಸಾಬೀತಾಗಿದೆ.
ರಾಜ್ಯದಲ್ಲಿ ಬೆಲೆ ಏರಿಕೆ ಆಗಿದೆ ಎಂದು ಹೇಳಿಕೊಳ್ಳುವ ಬಿಜೆಪಿಗರಿಗೆ ನಿಜವಾದ ಜನಪರ ಕಾಳಜಿ ಇದ್ದರೆ ಮೊದಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಕೇಂದ್ರ ಸರ್ಕಾರ ಹೆಚ್ಚಿಸಿರುವ ಬೆಲೆಯನ್ನು ಇಳಿಸುವಂತೆ ಮಾಡಲಿ ಇಲ್ಲವಾದಲ್ಲಿ ರಾಜ್ಯದ ಬಿಜೆಪಿ ನಾಯಕರಿಗೆ ಜನರೇ ಬುದ್ದಿ ಕಲಿಸುವ ದಿನ ದೂರವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.