ಉಡುಪಿ : ಆಯುಧ ಪೂಜೆಯ ಪ್ರಯುಕ್ತ ಅಕ್ಟೋಬರ್ 11 ರಂದು ನಗರ ಸಭೆಯ ಕಸ ಸಂಗ್ರಹಣೆ ಹಾಗೂ ಸಾಗಾಣಿಕೆ ವಾಹನಗಳ ಪೂಜೆ ಇರುವುದರಿಂದ ಸದರಿ ದಿನದಂದು ನಗರಸಭಾ ವ್ಯಾಪ್ತಿಯ ಮನೆ ಮನೆ ಕಸ ಸಂಗ್ರಹಣೆ ಇರುವುದಿಲ್ಲ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
Udupi
ಯುವ ಜನರು ಸ್ವಯಂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು : ವಾರ್ತಾಧಿಕಾರಿ ಮಂಜುನಾಥ್ ಬಿ
ಉಡುಪಿ : ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಎನ್.ಎಸ್.ಎಸ್ ನಂತಹ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರೊಂದಿಗೆ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಕರೆ ನೀಡಿದರು.
ಅವರು ಮಲ್ಪೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ ಇವರ ವತಿಯಿಂದ ಆಯೋಜಿಸಿದ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಪಠ್ಯದ ಚಟುವಟಿಕೆಗಳ ಜೊತೆಗೆ ಇತರೆ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದರೊಂದಿಗೆ ಸಮುದಾಯದ ಸಮಸ್ಯೆಗಳನ್ನು ಅರಿತು ಸಹಾಯ ಮಾಡಲು ಮುಂದಾಗಬೇಕು. ಸಮಸ್ಯೆಗಳನ್ನು ಪರಿಹರಿಸುವುದರಿಂದ ಕೌಶಲ್ಯ ಹಾಗೂ ಜ್ಞಾನ ಬೆಳೆಯುತ್ತದೆ ಎಂದರು.
ಯುವಜನರು ಸ್ವಯಂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂಬುದು ಮಹಾತ್ಮಾ ಗಾಂಧೀಜಿಯವರ ಆಶಯವಾಗಿತ್ತು. ಸರಕಾರ ಶಿಕ್ಷಣದೊಂದಿಗೆ ಸೇವಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಎನ್.ಎಸ್.ಎಸ್ ಶಿಬಿರಗಳನ್ನು ಆಯೋಜಿಸಿದೆ. ಇದು ವಿದ್ಯಾರ್ಥಿಗಳ ಜೀವನದಲ್ಲಿ ನಾಯಕತ್ವ, ಶಿಸ್ತಿನ ಜತೆಗೆ ಸಾರ್ವತ್ರಿಕ ಪ್ರಜ್ಞೆಯನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್ ಮಾತನಾಡಿ, ಶಿಬಿರಗಳು ಅವಕಾಶಗಳ ವೇದಿಕೆಯಾಗಿದೆ, ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡ ವಿದ್ಯಾರ್ಥಿಗಳು ಸಮಾಜ ಸೇವಕರಾಗಿ ಪರಿವರ್ತನೆಗೊಂಡು ಉತ್ತಮ ಕಾರ್ಯಗಳನ್ನು ಮಾಡುವುದರೊಂದಿಗೆ ಸಮಾಜದ ಏಳಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದರು.
ಯುವ ಶಕ್ತಿ ಸಾಮರ್ಥ್ಯವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳುವ ಮೂಲಕ ಯುವಜನರಲ್ಲಿ ಸಮುದಾಯ ಸೇವೆಯ ಉತ್ಸಾಹವನ್ನು ಮೂಡಿಸುವುದರೊಂದಿಗೆ ಅರ್ಥಪೂರ್ಣವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಸೇವೆಯಲ್ಲಿ ಸ್ವಾರ್ಥವಿರಬಾರದು. ಸಮಯಪ್ರಜ್ಞೆಯನ್ನು ಮೈಗೂಡಿಸಿಕೊಂಡಾಗ ಯಶಸ್ಸು ನಮ್ಮದಾಗುತ್ತದೆ ಎಂದರು.
ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಮುಖ್ಯೋಪಾಧ್ಯಾಯಿನಿ ಸಂಧ್ಯಾ ಮಾತನಾಡಿ, ಎನ್.ಎಸ್.ಎಸ್ ಶಿಬಿರದಲ್ಲಿ ವಿದ್ಯಾರ್ಥಿನಿಯರು ಪಡೆದ ಅನುಭವಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಹಾಗೂ ಉತ್ತಮವಾಗಿ ಶಿಬಿರದಲ್ಲಿ ಭಾಗವಹಿಸಿದವರಿಗೆ ಬಹುಮಾನವನ್ನು ನೀಡಲಾಯಿತು.
ಕಾಲೇಜಿನ ಶಿಕ್ಷಣ ಸೇವಾ ಸಮಿತಿಯ ಖಜಾಂಜಿ ಶೇಖರ್ ಕೋಟ್ಯಾನ್, ಮಲ್ಪೆಯ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯ ಸದಾನಂದ ಸಾಲ್ಯಾನ್, ಖಜಾಂಜಿ ಚಂದ್ರಶೇಖರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಯಾನಂದ, ಶಿಕ್ಷಣ ತಜ್ಞ ವಿಶ್ವನಾಥ ಬಾಯರಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವರ್ಗೀಸ್ ಪಿ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ) ವಿಭಾಗದ ಮುಖ್ಯೋಪಾಧ್ಯಾಯಿನಿ ಇಂದಿರಾ, ಉಪನ್ಯಾಸಕರುಗಳು, ಶಿಬಿರದ ನಾಯಕಿ ಸಹನಾ ಶಿಬಿರಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಶುಭಗೀತಾ ಸ್ವಾಗತಿಸಿ, ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಉಪನ್ಯಾಸಕಿ ಭವ್ಯಾ ಧನ್ಯವಾದ ಸಮರ್ಪಿಸಿದರು.
2024ರ ದಸರಾ ಸಿಎಂ ಕಪ್ ಬಾಕ್ಸಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದ ಕುಮಾರಿ ಅನುಶ್ರೀ ನಾಯ್ಕ್
ಮಣಿಪಾಲ : ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಪ್ರತಿಷ್ಠಿತ ರಾಜ್ಯಮಟ್ಟದ ದಸರಾ ಸಿಎಂ ಕಪ್ 2024ರಲ್ಲಿ 52-54 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನರ್ಸ್ ಪ್ರಾಕ್ಟೀಷನರ್ ಕುಮಾರಿ ಅನುಶ್ರೀ ನಾಯ್ಕ್ ಅವರು ತಮ್ಮ ಅದ್ಭುತ ಬಾಕ್ಸಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.
ಬಾಕ್ಸಿಂಗ್ನಲ್ಲಿ ಸತತವಾಗಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ಅನುಶ್ರೀ, ಈ ಹಿಂದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಅವರ ಇತ್ತೀಚಿನ ಸಾಧನೆಯನ್ನು ಗುರುತಿಸಿ, ಕಸ್ತೂರ್ಬಾ ಆಸ್ಪತ್ರೆಯು ಅನುಶ್ರೀ ಅವರನ್ನು ಅಭಿನಂದಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರು ಅನುಶ್ರೀ ಅವರಿಗೆ ಬಾಕ್ಸಿಂಗ್ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವಿದೆ, ಅವರ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ, ಅವರು ಇನ್ನೂ ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರ ಎರಡಕ್ಕೂ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.

ಉಡುಪಿ : ದೇಶದ ದಿಗ್ಗಜ ಉದ್ಯಮಿ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ಭಾರತದ ಮುಂಚೂಣಿ ಉದ್ಯಮಿಯಾಗಿದ್ದ ಅವರು ಸರಳತೆಗೆ ಹೆಸರುವಾಸಿಯಾಗಿದ್ದರು. ಸದಾ ಮಾಮೂಲಿ ದಿರಿಸು ತೊಡುವುದರ ಜೊತೆ ತಾನೊಬ್ಬ ಆಟೊಮೊಬೈಲ್ ಉದ್ಯಮಿಯಾಗಿದ್ದರೂ ಮಾಮೂಲಿ ಕಾರುಗಳಲ್ಲೇ ಓಡಾಡುತ್ತಿದ್ದರು. ಇಂತಹ ಉದ್ಯಮಿ ಉಡುಪಿ ಜೊತೆಗೆ ನಂಟು ಹೊಂದಿದ್ದರು.
ಇವತ್ತಿನ ಪರ್ಯಾಯ ಪುತ್ತಿಗೆ ಮಠಾಧೀಶರ ಆಹ್ವಾನದ ಮೇರೆಗೆ ಅವರು ಕೆಲವು ವರ್ಷಗಳ ಹಿಂದೆ ಉಡುಪಿಗೆ ಆಗಮಿಸಿದ್ದರು.
ಉಡುಪಿ ಸಮೀಪದ ಪುತ್ತಿಗೆ ಮಠದ ಮೂಲ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಹಿರಿಯ ಉದ್ಯಮಿ ಅಲ್ಲಿ ಕೆಲವು ಹೊತ್ತು ಕಳೆದಿದ್ದರು. ಇವರ ಆಗಮನದ ನಿರೀಕ್ಷೆಯಲ್ಲಿ ಸಾಕಷ್ಟು ಜನರು ಹಿರಿಯಡ್ಕ ಮೂಲಮಠದಲ್ಲಿ ಸೇರಿದ್ದರು. ಟಾಟಾ ಗತ್ತು ನೋಡಲು ಸೇರಿದ ಜನರಿಗೆ ಅವರ ಆಗಮನ ಕಂಡು ಆಶ್ಚರ್ಯ ಕಾದಿತ್ತು. ಯಾಕೆಂದರೆ ದೇಶದ ಶ್ರೀಮಂತ ಉದ್ಯಮಿಯಾಗಿದ್ದರೂ ಅತ್ಯಂತ ಸರಳ ರೀತಿಯಲ್ಲಿ ಬಂದು ಗ್ರಾಮೀಣ ಪರಿಸರದ ಮಠದಲ್ಲಿ ಸಮಯ ಕಳೆದಿದ್ದರು. ಮಠದಲ್ಲಿ ಮಾಮೂಲಿ ಜನರಂತೆಯೇ ಕಾಲ ಕಳೆದಿದ್ದರು.
ರತನ್ ಟಾಟಾ ಅಗಲಿಕೆ ವಿಷಯ ತಿಳಿದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ದೇಶ ಮೊದಲು ಎಂಬ ತತ್ವ ರತನ್ ಟಾಟಾ ಅವರದ್ದು. ಆದರ್ಶಮಯ ಜೀವನ ನಡೆಸಿದ ಅವರು ಮಠಕ್ಕೆ ಆಗಮಿಸಿ, ದೇವರ ದರ್ಶನ ಪಡೆದಿದ್ದರು.
ಭಗವದ್ಗೀತೆ ಬಗ್ಗೆ ತಮಗಿರುವ ಆದರ ವ್ಯಕ್ತಪಡಿಸಿದ್ದರು. ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರು ಅವರ ಆತ್ಮಕ್ಕೆ ಸದ್ಗತಿ ಕೊಡಲಿ ಎಂದು ಶ್ರೀಗಳು ತಮ್ಮ ಸಂತಾಪ ಸೂಚಿಸಿದ್ದಾರೆ.
ರಸ್ತೆ ದಾಟುತ್ತಿದ್ದ ಪತಿ ಪತ್ನಿಗೆ ಖಾಸಗಿ ಬಸ್ ಡಿಕ್ಕಿ – ಪತಿ ಸ್ಥಳದಲ್ಲೇ ಸಾವು, ಪತ್ನಿಗೆ ಗಂಭೀರ ಗಾಯ
ಪಡುಬಿದ್ರಿ : ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಪತಿ-ಪತ್ನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪತಿ ಸ್ಥಳದಲ್ಲೇ ಮೃತಪಟ್ಟು, ಪತ್ನಿ ತೀವ್ರವಾಗಿ ಗಾಯಗೊಂಡ ಘಟನೆ ಮೂಳೂರು ಮಿರ್ಚಿ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಮೃತರನ್ನು ಕಾಪು ಭಾರತ್ ನಗರದ ನಿವಾಸಿ ಹಿದಾಯತುಲ್ಲಾ (55) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಇವರ ಪತ್ನಿ ಸಾವರ್ ಎಂಬವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಚ್ಚಿಲ ಕಡೆಯಿಂದ ಕಾಪು ಕಡೆಗೆ ಹೋಗುತ್ತಿದ್ದ ಇವರು, ದಾರಿ ಮಧ್ಯೆ ಮೂಳೂರಿನಲ್ಲಿ ರಸ್ತೆಯ ಇನ್ನೊಂದು ಬದಿಯಲ್ಲಿರುವ ಹೋಟೆಲಿಗೆ ಹೋಗಲು ಬೈಕನ್ನು ನಿಲ್ಲಿಸಿ ಪತ್ನಿ ಜೊತೆ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಖಾಸಗಿ ಬಸ್ಸು ಇವರಿಬ್ಬರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಪತಿ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಇವರು ರಜೆಯಲ್ಲಿ ಊರಿಗೆ ಬಂದಿದ್ದರು. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮಣಿಪಾಲ : ಕಾರು ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದ್ರಾಳಿಯಲ್ಲಿ ಬುಧವಾರ ಸಂಭವಿಸಿದೆ.
ಮೃತ ದುರ್ದೈವಿ ಮಣಿಪಾಲದ ಉದ್ಯೋಗಿ ದೀಪೇಶ್ ದೇವಾಡಿಗ ಎಂದು ಗುರುತಿಸಲಾಗಿದೆ. ಇಂದ್ರಾಳಿ ದೇವಸ್ಥಾನದಿಂದ ಕಾರು ಕೆಳಗೆ ಬರುತ್ತಿದ್ದ ವೇಳೆ ಬ್ರೇಕ್ ಫೇಲ್ ಆಗಿದ್ದು, ಎರಡೂ ಬದಿಯಲ್ಲಿದ್ದ ವಾಹನಗಳು ಸಹಿತ ಜನರಿಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಕೆಲವು ಮಂದಿ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
ಉಡುಪಿ : ಷೇರು ಮಾರುಕಟ್ಟೆ ಟ್ರೇಡಿಂಗ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ ರಫಿಯತ್ ಎಂಬವರಿಗೆ ದುಷ್ಕರ್ಮಿಗಳು ಷೇರು ಮಾರುಕಟ್ಟೆ ಟ್ರೇಡಿಂಗ್ ಬಗ್ಗೆ ವಾಟ್ಸಾಪ್ನಲ್ಲಿ ಮಾಹಿತಿಯನ್ನು ನೀಡುತ್ತಿದ್ದು, ಇದರಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿಗೆ ಹಣ ನೀಡುವುದಾಗಿ ತಿಳಿಸಿದ್ದರು. ಅದರಂತೆ ರಫಿಯತ್ ಅವರಿಂದ ದುಷ್ಕರ್ಮಿಗಳು ಒಟ್ಟು 16,78,500ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಉಡುಪಿ : ಎಟಿಎಂ ಕಾರ್ಡ್ ಮೂಲಕ ಹಣ ತೆಗೆಯಲು ಹೋಗಿದ್ದ ಗ್ರಾಹಕರೊಬ್ಬರಿಗೆ ವ್ಯಕ್ತಿಯೊಬ್ಬ ಮಾಹಿತಿ ನೀಡುವ ನೆಪದಲ್ಲಿ ಬ್ಯಾಂಕ್ ವಿವರ ಪಡೆದು ಲಕ್ಷಾಂತರ ರೂ. ಹಣ ದೋಚಿದ ಘಟನೆ ಸಂಭವಿಸಿದೆ.
ಕೆಳಾರ್ಕಳಬೆಟ್ಟುವಿನ ಜಗದೀಶ ರಾವ್ ಅವರು ಸಂತೆಕಟ್ಟೆಯಲ್ಲಿರುವ ಎಸ್ಬಿಐ ಬ್ಯಾಂಕ್ ಎಟಿಎಂನಿಂದ ಅವರ ಕೆನರಾ ಬ್ಯಾಂಕ್ ಸೇವಿಂಗ್ ಖಾತೆಯಿಂದ 10,000 ರೂ. ತೆಗೆದಿದ್ದರು. ಅನಂತರ ಖಾತೆಯ ಸ್ಟೇಟ್ಮೆಂಟ್ ತೆಗೆಯುತ್ತಿರುವಾಗ ಅವರ ಹಿಂದಿದ್ದ ಓರ್ವ ವ್ಯಕ್ತಿ ಸಹಾಯ ಮಾಡುವಂತೆ ನಟಿಸಿ ಅವರ ಎಟಿಎಂ ಕಾರ್ಡ್ ಪಡೆದು ಅವರ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾನೆ.
ಜಗದೀಶ್ ಅವರು ಮನೆಗೆ ಬಂದಾಗ ಅವರ ಕೆನರಾ ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ನಂಬರ್ಗೆ ಹಂತ-ಹಂತವಾಗಿ 2,29,998 ರೂ.ಗಳು ಕಡಿತವಾಗಿರುವ ಬಗ್ಗೆ ಸಂದೇಶ ಬಂದಿದೆ. ಕೂಡಲೇ ಖಾತೆಯನ್ನು ಪರಿಶೀಲಿಸಿದಾಗ ಅದರಲ್ಲಿ ಕೇವಲ 32,192 ರೂ.ಮಾತ್ರ ಇತ್ತು. ಅಪರಿಚಿತ ವ್ಯಕ್ತಿಯು ಜಗದೀಶ್ ಅವರ ಗಮನಕ್ಕೆ ಬಾರದೇ ಅವರ ಬ್ಯಾಂಕ್ ಖಾತೆಯಿಂದ ಒಟ್ಟು 2,40,000 ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾಗಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೀತಾಂಜಲಿ ಪುರುಷರ ವಸ್ತ್ರ ಮಳಿಗೆ ಶುಭಾರಂಭ : ಸ್ವದೇಶಿ – ವಿದೇಶದ 22ಕ್ಕೂ ಅಧಿಕ ಬ್ರ್ಯಾಂಡ್ಗಳ ಬಟ್ಟೆಗಳು ಕೈಗೆಟುಕುವ ದರದಲ್ಲಿ ಲಭ್ಯ
ಉಡುಪಿ: ಕಳೆದ ನಾಲ್ಕು ದಶಕಗಳಿಂದ ಜವಳಿ ವ್ಯವಹಾರದಲ್ಲಿ ಮನೆಮಾತಾಗಿರುವ ಆರ್ಕೆ ಸಹೋದರು ಇದೀಗ ನಗರದ ಗೀತಾಂಜಲಿ ಶಾಪರ್ ಸಿಟಿಯಲ್ಲಿರುವ ತಮ್ಮ ಗೀತಾಂಜಲಿ ಸಿಲ್ಕ್ಸ್ನಲ್ಲಿ ನೂತನವಾಗಿ ಆರಂಭಿಸಿರುವ ಪುರುಷರ ಪ್ರತ್ಯೇಕ ವಿಭಾಗವನ್ನು ಬುಧವಾರ ಗ್ರಾಹಕರಿಂದಲೇ ಉದ್ಘಾಟಿಸಲಾಯಿತು.

ಉದ್ಯಮಿ ಡಾ.ಜಿ ಶಂಕರ್ ಮಾತನಾಡಿ, ಸಣ್ಣ ಅಂಗಡಿಯ ಮೂಲಕ ಸತತ ಪರಿಶ್ರಮ, ಶ್ರದ್ದೆಯಿಂದ ದುಡಿಯುತ್ತಾ, ಪ್ರಸ್ತುತ ಜಿಲ್ಲೆಯಲ್ಲಿಯೇ ಬೃಹತ್ ವಸ್ತ್ರ ವೈವಿಧ್ಯಗಳ ಮಳಿಗೆಯನ್ನು ತೆರೆಯುವ ಸಾಧನೆ ಮಾಡಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ, ಗುಣಮಟ್ಟದ ವಸ್ತ್ರ ವಿನ್ಯಾಸಗಳನ್ನು ನೀಡಿದಾಗ ವ್ಯಾಪಾರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ಶುಭ ಹಾರೈಸಿದರು.
ಮಾಂಡೋವಿ ಬಿಲ್ಡರ್ಸ್ನ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ ಮಾತನಾಡಿ, ನಾಲ್ಕು ದಶಕಗಳ ಹಿಂದೆ ಗುಣಮಟ್ಟದ ವಸ್ತ್ರಗಳ ಖರೀದಿಗೆ ದೂರದ ಪಟ್ಟಣಗಳಿಗೆ ತೆರಳಬೇಕಿತ್ತು. ಆದರೆ ಪ್ರಸ್ತುತ, ಗೀತಾಂಜಲಿ ಸಿಲ್ಕ್ಸ್ನಲ್ಲಿ ಉಡುಗೆ ತೊಡುಗೆಗಳು ಲಭ್ಯವಿದೆ ಎಂದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಪ್ರಮುಖರಾದ ಡಾ. ರವಿರಾಜ್ ಆಚಾರ್ಯ, ಶ್ರೀಶ ನಾಯಕ್ ಪೆರ್ಣಂಕಿಲ, ಅಂಡಾರು ದೇವಿ ಪ್ರಸಾದ್ ಶೆಟ್ಟಿ, ನೈನಾ ಫ್ಯಾನ್ಸಿ ಮಾಲಕ ಮಹಮ್ಮದ್ ಮೌಲಾ, ಮಲಬಾರ್ ಗೋಲ್ಡ್ ಹಫೀಝ್ ರೆಹಮಾನ್, ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ನಾರಾಯಣ ಸರಳಾಯ ಶುಭ ಹಾರೈಸಿದರು.
ಗ್ರಾಹಕ ಪ್ರಮುಖರಾದ ಉದ್ಯಮಿ ಪುರುಷೋತ್ತಮ್ ಶೆಟ್ಟಿ, ಶಕುಂತಲಾ ಮಣಿಪಾಲ, ಧನರಾಜ್, ಅಮಿತಾ ವಾಸು ರಾಜಸ್ಥಾನ, ಮಾಲತಿ ತೀರ್ಥಹಳ್ಳಿ, ಕಿಶನ್ ಪ್ರಭು ಪಳ್ಳಿ, ಪ್ರದೀಪ್ ನಾಯಕ್ ನೀರೆ, ಪ್ರಶಾಂತ್ ಅಂಬಲಪಾಡಿ, ಇಬ್ರಾಹಿಂ ಉಚ್ಚಿಲ, ನಾರಾಯಣ ಶೆಣೈ, ಕೃಷ್ಣಮೂರ್ತಿ, ಸತ್ಯಾನಂದ ನಾಯಕ್, ಉಪೇಂದ್ರ ಶೆಣೈ ಮಣಿಪಾಲ, ರಘುರಾಮ ಪ್ರಭು ಎಣ್ಣೆಹೊಳೆ, ಜಯರಾಂ ಕಾರ್ಕಳ, ಪ್ರಕಾಶ್ ಪ್ರಭು, ರತ್ನಾಕರ ಪೆರ್ಡೂರು, ಆಸಿಫ್, ನಿತ್ಯಾನಂದ ನಾಯಕ್, ಸಂಸ್ಥೆಯ ಪಾಲುದಾರರಾದ ಲಕ್ಷ್ಮಣ ನಾಯಕ್, ರಮೇಶ್ ನಾಯಕ್, ಹರೀಶ್ ನಾಯಕ್ ಕುಟುಂಬಸ್ಥರು, ಸಿಬ್ಬಂದಿ, ಹಿತೈಷಿಗಳು, ಗ್ರಾಹಕರು ಸೇರಿದಂತೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಕರಾವಳಿ ಕರ್ನಾಟಕದ ಅತೀ ವಿಶಾಲವಾದ ಗೀತಾಂಜಲಿ ಸಿಲ್ಕ್ಸ್ ಮಳಿಗೆಯಲ್ಲಿ ಈಗಾಗಲೇ ಮಹಿಳೆಯರ ಮತ್ತು ಮಕ್ಕಳ ಬಟ್ಟೆಗಳ ಪ್ರತ್ಯೇಕ ಮಹಡಿಗಳನ್ನು ಹೊಂದಿದ್ದು, ಇದೀಗ ಒಂದನೇ ಮಹಡಿಯಲ್ಲಿ ಪುರುಷರ ಸ್ವದೇಶಿ ಮತ್ತು ವಿದೇಶದ 22ಕ್ಕೂ ಅಧಿಕ ಬ್ರ್ಯಾಂಡ್ಗಳ ಮಳಿಗೆ ಶುಭಾರಂಭಗೊಂಡಿತು.
ಈ ಮಹಡಿಯಲ್ಲಿ ಮದುವೆ ಇತ್ಯಾದಿ ಧಾರ್ಮಿಕ ಸಮಾರಂಭಗಳಿಗೆ ಅಗತ್ಯವಿರುವ ಪಾರಂಪರಿಕ ಮತ್ತು ಆಧುನಿಕ ಶೈಲಿಯ ಬಟ್ಟೆಗಳು, ಆಫೀಸ್ ವೇರ್, ಡೈಲಿ ವೇರ್, ಕ್ಯಾಶುವಲ್ ವೇರ್, ಪಾರ್ಟಿ ವೇರ್ ಇತ್ಯಾದಿಗಳ ವಿಫುಲ ಸಂಗ್ರಹವನ್ನಡಲಾಗಿದೆ. ಅಲ್ಲದೇ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಸೂಟಿಂಗ್ಸ್ – ಶರ್ಟಿಂಗ್ಸ್ ಜೊತೆಗೆ ಒಳಉಡುಪುಗಳು ಲಭ್ಯವಿದೆ.
ಸುಮಾರು 15 ಸಾವಿರ ಚದರಡಿ ವಿಸ್ತೀರ್ಣದ ಈ ಮಹಡಿಯಲ್ಲಿ ದೇಶಿ ಮತ್ತು ವಿದೇಶಿ ಬ್ರ್ಯಾಂಡ್ ಗಳ ಪ್ರತ್ಯೇಕ ವಿಭಾಗಗಳಿವೆ. ಅಲ್ಲದೇ ಪೀಟರ್ ಇಂಗ್ಲೆಡ್, ಲಿನನ್ ಕ್ಲಬ್, ಕಿಲ್ಲರ್, ಫ್ಲೈಯಿಂಗ್ ಮೇಶಿನ್, ಅಲನ್ ಸೂಲಿ, ವ್ಯಾನ್ ಹುಸೇನ್, ಲೂಯಿಸ್ ಪಿಲಿಪ್, ಜಾನ್ ಪ್ಲೇಯರ್, ಲೆವಿಸ್ ಇತ್ಯಾದಿ ಬ್ರ್ಯಾಂಡ್ ಗಳ ಫಾರ್ಮಲ್, ಜೀನ್ಸ್ ಬಟ್ಟೆಗಳು ಲಭ್ಯ ಇವೆ ಎಂದು ಸಂಸ್ಥೆಯ ಪಾಲುದಾರ ಸಂತೋಷ್ ವಾಗ್ಲೆ ಗ್ರಾಹಕರಿಗೆ ವಿವರಣೆ ನೀಡಿದರು.
ಪಾಲುದಾರ ಸಂತೋಷ್ ವಾಗ್ಲೆ ಸ್ವಾಗತಿಸಿ, ರಾಮಕೃಷ್ ನಾಯಕ್ ವಂದಿಸಿದರು. ನಿಖಿತಾ ಎರ್ಲಾಪಾಡಿ ಕಾರ್ಯಕ್ರಮ ನಿರೂಪಿಸಿದರು.
ಜಾತಿಗಣತಿ ವರದಿ ಓದದೆ ವಿರೋಧ ಮಾಡಬೇಡಿ – ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ
ಉಡುಪಿ : ಜಾತಿಗಣತಿ ವರದಿ ಜಾರಿ ವಿಚಾರವಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದು, ಈ ವರದಿ ಓದದೆ ವಿರೋಧ ಮಾಡಬೇಡಿ, ವರದಿ ಓದಿದ ಬಳಿಕ ಬದಲಾವಣೆಗಳಿದ್ದರೆ ಸೂಚಿಸಿ ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಫೆಬ್ರವರಿ 29ಕ್ಕೆ ಅಧ್ಯಕ್ಷನಾಗಿ ನನ್ನ ಅವಧಿಯ ಕೊನೆಯ ದಿನವಾಗಿತ್ತು.
ಅದೇ ದಿನ ಮುಖ್ಯಮಂತ್ರಿಗಳಿಗೆ ವರದಿ ಹಸ್ತಾಂತರಿಸಿದ್ದೇನೆ. ವರದಿ ಬಹಿರಂಗ ಮಾಡುವಂತೆ ಇಷ್ಟರವರೆಗೆ ನಾವು ಒತ್ತಡ ಹಾಕುತ್ತಿದ್ದೆವು. ಈಗ ಹಿಂದುಳಿದ ವರ್ಗದವರು ಒತ್ತಡ ಹಾಕುತ್ತಿದ್ದಾರೆ. ಮೊನ್ನೆ ಮುಖ್ಯಮಂತ್ರಿಗಳು ಸಭೆ ಕರೆದಿದ್ದರು, ನಾನದರಲ್ಲಿ ಭಾಗವಹಿಸಿದ್ದೆ ಎಂದು ಹೇಳಿದರು.
ಕಾಂತರಾಜ್ ಸಮೀಕ್ಷೆಯನ್ನು ಹಿಂದಿನ ಸರಕಾರಗಳು ಒಪ್ಪಿಲ್ಲ ಎಂದ ಅವರು, ನಾನು ತಯಾರಿಸಿದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಈ ವರದಿಯನ್ನು 18ನೇ ತಾರೀಕಿಗೆ ಕ್ಯಾಬಿನೆಟಿನಲ್ಲಿ ಇರಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಇದಕ್ಕಿಂತ ಖುಷಿಯ ವಿಚಾರ ಬೇರೆ ಇಲ್ಲ. ನಮ್ಮ ಒಂದು ವರದಿ ಕ್ಯಾಬಿನೆಟ್ ಮುಂದೆ ಹೋಗುತ್ತಿರುವುದು ಸಂತೋಷ. ಇದೊಂದು ಶಾಶ್ವತ ದಾಖಲೆಯಾಗಿ ಉಳಿಯಲಿದೆ. ಆದಷ್ಟು ಬೇಗ ಕ್ಯಾಬಿನೆಟ್ನಲ್ಲಿ ಇಟ್ಟು ಚರ್ಚಿಸಿ. ಅಥವಾ ಸಬ್ ಕಮಿಟಿ ಮೂಲಕ ಚರ್ಚೆಗೆ ಕೊಡಬಹುದು ಎಂದರು. ವರದಿಗೆ ಕಾಂಗ್ರೆಸ್ ಪಕ್ಷದ ಕೆಲ ನಾಯಕರ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಕ್ಯಾಬಿನೆಟ್ನಲ್ಲಿ ಚರ್ಚೆ ಆಗುವಾಗ ಎಲ್ಲಾ ನಾಯಕರಿಗೂ ವಿಷಯ ತಿಳಿಯಲಿದೆ.
ಸ್ವತಃ ಮುಖ್ಯಮಂತ್ರಿಗಳೇ ವರದಿಯನ್ನು ಓದಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯವರು ವರದಿ ಒಪ್ಪಿರುವುದು ಉತ್ತಮ ಬೆಳವಣಿಗೆ.
ಆರ್.ಅಶೋಕ್ ಕೂಡ ಹೇಳಿಕೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ಕೂಡ ಅಶೋಕ್ ಹೇಳಿಕೆಯಿಂದ ನಿರಾಳವಾಗಿದೆ ಎಂದು ಹೇಳಿದ್ದಾರೆ ಎಂದು ಹೆಗ್ಡೆ ಹೇಳಿದ್ದಾರೆ.