ಉಡುಪಿ : ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಉಡುಪಿಯ ಅಂಚೆ ವಿಭಾಗದ ಅಧೀಕ್ಷಕ ರಮೇಶ್ ಪ್ರಭು, ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠ್ಠಲ ಭಟ್, ವಸಂತ ಹಾಗೂ ಉಪ ಅಂಚೆ ಪಾಲಕಿ ಪೂರ್ಣಿಮಾ ಜನಾರ್ದನ್, ಅಂಚೆ ಸಿಬ್ಬಂದಿ ಪ್ರಜ್ವಲ್ರವರು ಉಡುಪಿ ವಿಧಾನಸಭಾ ಶಾಸಕ ಯಶ್ಪಾಲ್ ಸುವರ್ಣರನ್ನು ಭೇಟಿಯಾಗಿ ಮುಖ್ಯಮಂತ್ರಿ, ಸಂಸ್ಕ್ರತಿ ಮತ್ತು ಪ್ರವಾಸೋದ್ಯಮ ಇಲಾಖೆ, ಭಾರತ ಸರಕಾರ ಇವರ ಪತ್ರವನ್ನು ಭಾರತೀಯ ಅಂಚೆ ಇಲಾಖೆಯಲ್ಲಿ ಲಭ್ಯವಿರುವ ತಿರಂಗಾ ರಾಷ್ಟ್ರಧ್ವಜದೊಂದಿಗೆ ಹಸ್ತಾಂತರಿಸಿದರು.
Udupi
ಉಡುಪಿ: ಶೀರೂರು ಮಠ ಉಡುಪಿ ಹಾಗೂ ಹಿಂದೂ ಯುವಸೇನೆ ಉಡುಪಿ ಜಿಲ್ಲೆ ಇದರ ವತಿಯಿಂದ ಕೀರ್ತಿಶೇಷ ಲಕ್ಷ್ಮೀವರ ತೀರ್ಥ ಶ್ರೀಪಾದರ 6ನೇ ಆರಾಧಾನ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಸ್ಥಳೀಯ ಮತ್ತು ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ, ಮುದ್ದುಕೃಷ್ಣ ಸ್ಪರ್ಧೆ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ ವಿತರಣಾ ಸಮಾರಂಭವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯಶ್ಪಾಲ್ ಸುವರ್ಣ ಪರಮ ಪೂಜ್ಯ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಧಾರ್ಮಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ಸಮಾಜ ಸೇವೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಾ ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿ ಸಂಘಟನೆಯ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುವ ಮೂಲಕ ಹಿಂದೂ ಸಮಾಜಕ್ಕೆ ಪ್ರೇರಕ ಶಕ್ತಿಯಾಗಿದ್ದರು ಎಂದರು.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಶ್ರೀಗಳ ಸಮಾಜಮುಖಿ ಸೇವಾ ಚಿಂತನೆ ನಮಗೆಲ್ಲ ಸದಾ ಆದರ್ಶವಾಗಿರಲಿದೆ ಎಂದರು. ಸಮಾರಂಭದಲ್ಲಿ ಹಿಂದೂ ಯುವ ಸೇನೆ ಜಿಲ್ಲಾಧ್ಯಕ್ಷರಾದ ಅಜಿತ್ ಕೊಡವೂರು, ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ, ಹಿಂದೂ ಯುವಸೇನೆಯ ಪ್ರಮುಖರಾದ ಶೇಖರ್ ಶೆಟ್ಟಿ ಹಿರಿಯಡ್ಕ, ಕಾರ್ಯದರ್ಶಿ ಅರುಣ್, ಉಡುಪಿ ನಗರ ಅಧ್ಯಕ್ಷ ಸುನೀಲ್ ನೇಜಾರ್, ಪ್ರದೀಪ್ ಶೆಟ್ಟಿ ಶೀರೂರು, ರೋಹಿತ್ ಶೆಟ್ಟಿ ಬೆಳ್ಳರ್ಪಾಡಿ, ಸುರೇಶ್ ಸಾಲ್ಯಾನ್, ಮೋಹನ್ ಭಟ್, ಬೆಳ್ಳರ್ಪಾಡಿ ಘಟಕದ ಅಧ್ಯಕ್ಷರಾದ ಸದಾಶಿವ ಪೂಜಾರಿ, ಪವನ್ ಹೆರ್ಗ, ನವೀನ್ ಪುತ್ರನ್, ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಯುವಮೋರ್ಚಾ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ
ಕಾಪು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ “ಹರ್ ಘರ್ ತಿರಂಗಾ” “ಪ್ರತಿ ಮನೆ ಮೇಲೆ ತ್ರಿವರ್ಣ ಧ್ವಜ” ಹಾರಿಸುವಂತೆ ಕರೆ ನೀಡಿದ್ದು, ಇಂದು ಕಾಪು ಮಂಡಲ ಬಿಜೆಪಿ ಯುವಮೋರ್ಚಾ ವತಿಯಿಂದ ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾದ “ಹರ್ ಘರ್ ತಿರಂಗಾ” ಅಭಿಯಾನಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸುರೇಂದ್ರ ಪಣಿಯೂರು ಅವರ ಮನೆಯಲ್ಲಿ ತ್ರಿವರ್ಣ ಧ್ವಜ ನೀಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ, ಕಾಪು ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಸೋನು ಪಾಂಗಾಳ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಉಚ್ಚಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಚಂದ್ರಶೇಖರ್, ಬೆಳಪು ಶಕ್ತಿ ಕೇಂದ್ರದ ಸುರೇಶ್ ದೇವಾಡಿಗ, ಬೆಳಪು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಭಟ್ ಹಾಗೂ ಕಾಪು ಮಂಡಲ ಬಿಜೆಪಿ ಯುವಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ : ಸಂತೆಕಟ್ಟೆ ಸಮೀಪದ ಆಶೀರ್ವಾದ ಜಂಕ್ಷನ್ ಬಳಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಮಹೀಂದ್ರಾ ಪಿಕಪ್ ಮತ್ತು ಆಟೋರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋರಿಕ್ಷಾ ಚಾಲಕನ ತಲೆ ಹಾಗೂ ಕೈ ಕಾಲುಗಳಿಗೆ ಪೆಟ್ಟಾಗಿ ತೀವ್ರ ಗಾಯಗೊಂಡ ಘಟನೆ ಸಂಭವಿಸಿದೆ.
ಈ ಘಟನೆ ನಡೆದು ಕೆಲ ಹೊತ್ತಾದರೂ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಯಾರೂ ಮುಂದೆ ಬಂದಿಲ್ಲ. ಅದೇ ದಾರಿಯಾಗಿ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಮಲ್ಪೆಯ ಬ್ರದರ್ಸ್ ಟೂರಿಸ್ಟ್ ಬಸ್ಸು ಚಾಲಕ ಬುರ್ಹಾನ್ ಮಲ್ಪೆ ಹಾಗೂ ನವೀನ್ ಹನುಮಾನ್ ನಗರ ಬಸ್ಸನ್ನು ನಿಲ್ಲಿಸಿ ವಿಚಾರಿಸಿದರು.
ಪ್ರಜ್ಞಾಹೀನರಾಗಿ ರಕ್ತಸಿಕ್ತವಾಗಿ ಬಿದ್ದಿದ್ದ ಗಾಯಾಳುವನ್ನು ಕಂಡು ತತ್ಕ್ಷಣ ತಮ್ಮ ಟೂರಿಸ್ಟ್ ಬಸ್ನ ಮುಖಾಂತರ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಒಳಗಡೆ ಬಸ್ಸನ್ನೇ ಕೊಂಡು ಹೋಗಿ ಗಾಯಾಳುವನ್ನು ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಮಳೆಯಿಂದ ಇದುವರೆಗೆ ಅಂದಾಜು 183 ಕೋಟಿ ರೂ. ನಷ್ಟ : ಅಪರ ಜಿಲ್ಲಾಧಿಕಾರಿ ಮಮತಾದೇವಿ
ಉಡುಪಿ : ಪ್ರಸಕ್ತ ಸಾಲಿನ ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ.41ರಷ್ಟು ಸುರಿದ ಅಧಿಕ ಮುಂಗಾರು ಮಳೆಯಿಂದಾಗಿ ಜಿಲ್ಲೆಯ ರಸ್ತೆ, ಮೇಲ್ಸೇತುವೆ, ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್ ಹಾಗೂ ಲೈನ್ಗಳು, ಶಾಲೆಗಳು, ಅಂಗನವಾಡಿ ಕಟ್ಟಡಗಳು ಸೇರಿದಂತೆ ಉಂಟಾಗಿರುವ ವಿವಿಧ ಹಾನಿಗಳಿಂದಾಗಿ ಜಿಲ್ಲೆಯಲ್ಲಿ ಇದುವರೆಗೆ ಸುಮಾರು 183 ಕೋಟಿ ರೂ. ಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ತಿಳಿಸಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮಳೆಯಿಂದಾಗಿ ಈಗಾಗಲೇ ಹಾನಿಗೊಂಡಿರುವ ಮೂಲ ಸೌಕರ್ಯಗಳು, ವಿವಿಧ ಸೊತ್ತುಗಳ ಪುನರ್ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು ಶೀಘ್ರದಲ್ಲೇ ಅವುಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟುಕೊಡಬೇಕು ಎಂದರು.
ಮಳೆಗಾಲದಲ್ಲಿ ಸಂಭವಿಸುವ ಭೂಕುಸಿತಗಳಿಂದಾಗುವ ಅಪಾಯಗಳನ್ನು ತಪ್ಪಿಸಿ, ಜನ ಹಾಗೂ ಜಾನುವಾರುಗಳ ಜೀವಕ್ಕೆ ಅಪಾಯವಾಗದಂತೆ ಸಾಕಷ್ಟು ಮುಂಚಿತವಾಗಿಯೇ ಮುನ್ನಚ್ಚರಿಕೆ ವಹಿಸುವ ಉದ್ದೇಶದಿಂದ ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ಸಂಭಾವ್ಯ ಭೂಕುಸಿತ ಪ್ರದೇಶಗಳನ್ನು ನಿಖರವಾಗಿ ಗುರುತಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಪ್ರತಿನಿತ್ಯ ಅಂತಹ ಪ್ರದೇಶಗಳ ಸ್ಥಳಗಳನ್ನು ಪರಿಶೀಲಿಸಬೇಕು. ಭೂಕುಸಿತ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ತಡೆಗೋಡೆ ಕಾಮಗಾರಿ ಕೈಗೊಳ್ಳಬೇಕು ಎಂದರು.
ಉಡುಪಿ : ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಮುಂಬರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬ ಪ್ರಯುಕ್ತ ಒಂದು ತಿಂಗಳ ಕಾಲ ಆಚರಿಸಲ್ಪಡುತ್ತಿರುವ ಶ್ರೀ ಕೃಷ್ಣ ಮಾಸೋತ್ಸವದ ಅಂಗವಾಗಿ ಉಡುಪಿಯ ಮಠದಲ್ಲಿ ಚಾತುರ್ಮಾಸ್ಯದಲ್ಲಿರುವ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಭಗವದ್ಗೀತೆಯ 15ನೆಯ ಅಧ್ಯಾಯದ ಪ್ರವಚನವನ್ನು ಆಯೋಜಿಸಲಾಗಿದೆ.
ಉಪನ್ಯಾಸ ಕಾರ್ಯಕ್ರಮವನ್ನು ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದದ್ವಯರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.
ಈ ಉಪನ್ಯಾಸವು ಅಗಸ್ಟ 17ರ ವರೆಗೆ ಪ್ರತಿನಿತ್ಯ ಸಂಜೆ 6 ಘಂಟೆಯಿಂದ ರಾಜಾಂಗಣದಲ್ಲಿ ನಡೆಯಲಿದೆ.
ಉಡುಪಿ : ಮುಂಬೈಯ ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ವೈದ್ಯರಾಗಿರುವ ಡಾ. ಅರುಣ್ ಕುಮಾರ್ (53) ಹಣ ಕಳೆದುಕೊಂಡ ವ್ಯಕ್ತಿ. ಜು.29ರಂದು ಡಾ. ಅರುಣ್ ಅವರಿಗೆ ಅಪರಿಚಿತರು ಕಸ್ಟಮ್ಸ್ನಿಂದ ಕರೆ ಮಾಡಿ, ನಿಮ್ಮ ಆಧಾರ್ ನಂಬ್ರ ಬಳಸಿ ಬುಕ್ ಆಗಿರುವ ಕೊರಿಯರ್ನಲ್ಲಿ 5 ಪಾಸ್ಪೋರ್ಟ್, 5 ಎಟಿಎಂ ಕಾರ್ಡ್, 200ಗ್ರಾಂ ಎಂಡಿಎಂಎ ಹಾಗೂ 5000 ಯುಎಸ್ ಡಾಲರ್ ಇದ್ದು, ಕೋರಿಯರ್ ಮುಂಬಯಿ ಕಸ್ಟಮ್ಸ್ರವರ ವಶದಲ್ಲಿ ಇರುವುದಾಗಿ ತಿಳಿಸಿದರು.
ಬಳಿಕ ಪೊಲೀಸ್ ಅಧಿಕಾರಿ ಎಂದು ನಂಬಿಸಿ ಅರುಣ್ ಕುಮಾರ್ಗೆ ಕರೆ ಮಾಡಿ, ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯ ಬಗ್ಗೆ ದೂರನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.
ನಿಮ್ಮ ಆಧಾರ್ ಕಾರ್ಡ್ನ್ನು ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿದ್ದು, ಈ ದೂರಿಗೆ ಸಂಬಂಧಿಸಿ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿದ್ದರು.
ಜು.29ರಿಂದ ಆ.9ರ ತನಕ ಅವರ ಮನೆಯ ರೂಮ್ ಒಂದರಲ್ಲಿ ಇರುವಂತೆ ಹಾಗೂ ಬೇರೆಯವರೊಂದಿಗೆ ಸಂಪರ್ಕಿಸದಂತೆ ಸೂಚಿಸಿದ್ದರು.
ಈ ಪ್ರಕರಣವನ್ನು ಸರಿಪಡಿಸಲು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ ತಿಳಿಸಿದ್ದು ಅದರಂತೆ ಅರುಣ್ ಕುಮಾರ್, ಖಾತೆಯಿಂದ ಆ.6ರಿಂದ ಆ.9ರತನಕ ಹಂತ ಹಂತವಾಗಿ ಒಟ್ಟು 1,33,81,000 ರೂ. ಹಣವನ್ನು ವರ್ಗಾಯಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಿದ ಮಾಹೆ ಮಣಿಪಾಲದ “ಆಟಿದ ತುಳು ಪರ್ಬ” ಆಚರಣೆಯ ಉದ್ಘಾಟನೆ
ಮಣಿಪಾಲ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಮಣಿಪಾಲವು ತುಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ರೋಮಾಂಚಕ ಆಚರಣೆಯಾದ “ಆಟಿದ ತುಳು ಪರ್ಬ”ವನ್ನು ಹೆಮ್ಮೆಯಿಂದ ಉದ್ಘಾಟಿಸಿತು. ಕೆಎಂಸಿ ಮಣಿಪಾಲದ ಡಾ.ಟಿ.ಎಂ.ಎ ಪೈ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಮುದಾಯದ ಬಾಂಧವರು ತುಳುನಾಡಿನ ಸಂಪ್ರದಾಯಗಳು ಮತ್ತು ಆಚಾರ-ವಿಚಾರಗಳಲ್ಲಿ ದಿನವಿಡೀ ತಲ್ಲೀನರಾಗಿದ್ದರು.
ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅವರು ಉದ್ಘಾಟನೆಯನ್ನು ನೆರವೇರಿಸಿ, ತುಳುನಾಡಿನ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸುವ ಮತ್ತು ಪ್ರಚಾರ ಮಾಡುವಲ್ಲಿ ತುಳು ಪರ್ಬದ ಮಹತ್ವವನ್ನು ಒತ್ತಿ ಹೇಳಿದರು. ಡಾ. ಬಲ್ಲಾಳ್ ತಮ್ಮ ಭಾಷಣದಲ್ಲಿ, “ತುಳುನಾಡು ಅದರ ಭೌಗೋಳಿಕ ಮತ್ತು ಭಾಷಾ ಗುರುತುಗಳಿಗಿಂತ ಮಿಗಿಲಾದದ್ದು. ಇದು ಒಂದು ಜೀವಂತ, ಉಸಿರಾಟದ ಸಾಂಸ್ಕೃತಿಕ ರಚನೆಯಾಗಿದ್ದು ಅದು ತನ್ನ ಜನರನ್ನು ತನ್ನದೇ ಆದ ಸಂಪ್ರದಾಯಗಳು, ಆಚರಣೆಗಳು ಮತ್ತು ಸಂಸ್ಕೃತಿಯ ಮೂಲಕ ಬಂಧಿಸುತ್ತದೆ. ಈ ಆಚರಣೆಯು ತುಳುನಾಡಿನ ಅಸ್ಮಿತೆಯನ್ನು ವ್ಯಾಖ್ಯಾನಿಸುವ ಆಳವಾದ ಬೇರೂರಿರುವ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ” ಎಂದರು.
ಉದ್ಘಾಟನೆಯ ನಂತರ ಮಣಿಪಾಲದ ಮಾಧವ ಕೃಪಾ ಶಾಲೆಯ ವಿದ್ಯಾರ್ಥಿನಿ ಕುಮಾರಿ ದೃತಿ ಶೆಟ್ಟಿ ತುಳು ಭಾಷೆಯಲ್ಲಿ ಮನಮುಟ್ಟುವ ಭಾಷಣ ಮಾಡಿ, ತುಳುನಾಡಿನ ರೋಮಾಂಚಕ ಸಾಂಸ್ಕೃತಿಕ ಆಚರಣೆಗಳನ್ನು ಎತ್ತಿ ತೋರಿಸಿದರು. ಅವರ ಭಾಷಣವು ತುಳುನಾಡನ್ನು ಅನನ್ಯವಾಗಿಸುವ ಸಂಪ್ರದಾಯಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡಿತು, ಈ ಪ್ರದೇಶದ ಅಸ್ಮಿತೆಗೆ ಅವಿಭಾಜ್ಯವಾಗಿರುವ ಪ್ರಕೃತಿ ಮತ್ತು ಕೃಷಿಯೊಂದಿಗಿನ ಸಮುದಾಯದ ಸಂಬಂಧದ ಬಗ್ಗೆ ಉತ್ಕಟಭಾವದಿಂದ ಮಾತನಾಡಿದರು.
ಡಾ. ರವಿರಾಜ ಎನ್.ಎಸ್., ಸಿಒಒ ಮಾಹೆ, ಮಣಿಪಾಲ ಇವರು ಗೌರವ ಅಥಿತಿಯಾಗಿದ್ದರು . ಅವರು ಮಾತನಾಡುತ್ತಾ , ಪ್ರಾದೇಶಿಕ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಮಾಹೆಯ ಪಾತ್ರವನ್ನು ಎತ್ತಿ ತೋರಿಸುತ್ತಾ, “ನಮ್ಮ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಮತ್ತು ಪ್ರಚಾರ ಮಾಡುವಲ್ಲಿ ಮಾಹೆ ಯಾವಾಗಲೂ ಮುಂಚೂಣಿಯಲ್ಲಿದೆ. ಯಕ್ಷಗಾನ ಕೇಂದ್ರ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಂತಹ ಪ್ರಾದೇಶಿಕ ಸಂಪನ್ಮೂಲ ಕೇಂದ್ರಗಳ ಉಪಕ್ರಮಗಳ ಮೂಲಕವು ತುಳುನಾಡಿನ ಸಂಪ್ರದಾಯಗಳ ಶ್ರೀಮಂತಿಕೆಯನ್ನು ದಾಖಲಿಸಲು ಮತ್ತು ಪ್ರಸಾರ ಮಾಡಲು ನಾವು ಬದ್ಧರಾಗಿದ್ದೇವೆ” ಎಂದರು.
ಗೌರವ ಅಥಿತಿಯಾಗಿದ್ದ ಮಾಹೆ ಮಣಿಪಾಲದ ಅಂತರಾಷ್ಟ್ರೀಯ ಸಹಯೋಗದ ನಿರ್ದೇಶಕ ಡಾ.ಕರುಣಾಕರ ಕೋಟೆಗಾರ್ ಎ ಅವರು, “ತುಳು ಪರ್ಬ ಕೇವಲ ಒಂದು ಕಾರ್ಯಕ್ರಮವಲ್ಲ, ಇದು ತುಳುನಾಡನ್ನು ವ್ಯಾಖ್ಯಾನಿಸುವ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಏಕತೆಯ ಆಚರಣೆಯಾಗಿದೆ. ವಿದ್ಯಾರ್ಥಿಗಳು ಮತ್ತು ವಿಶಾಲ ಸಮುದಾಯವು ನಮ್ಮ ಪ್ರದೇಶವನ್ನು ಅನನ್ಯವಾಗಿಸುವ ರೋಮಾಂಚಕ ಸಂಪ್ರದಾಯಗಳಲ್ಲಿ ಮುಳುಗಲು ಒಂದು ಅಪರೂಪದ ಸಮಯವಾಗಿದೆ ಎಂದರು”.
ಆಟಿದ ತುಳು ಪರ್ಬವು ತುಳುನಾಡಿನ ಶ್ರೀಮಂತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನ್ಯಾಸಗೊಳಿಸಿ ಇಡೀ ದಿನದ ರೋಮಾಂಚಕಾರಿ ಚಟುವಟಿಕೆಗಳನ್ನು ನೀಡಿತು. “ತುಳು ರಂಗ್” ಎಂಬ ಚಿತ್ರಕಲೆ ಸ್ಪರ್ಧೆಯೊಂದಿಗೆ ಚಟುವಟಿಕೆ ಪ್ರಾರಂಭವಾಯಿತು, ಇದರಲ್ಲಿ ಸ್ಪರ್ದಿಗಳು ತುಳುನಾಡಿನ ಸಾಂಸ್ಕೃತಿಕ ಲಕ್ಷಣಗಳನ್ನು ಪ್ರತಿಬಿಂಬಿಸುವ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಇದಾದ ನಂತರ ತುಳು ಜಾನಪದ ಸಮೂಹ ನೃತ್ಯ ಸ್ಪರ್ಧೆ “ತುಳು ನಲಿಕೆ” ತುಳು ಸಂಸ್ಕೃತಿಯ ರೋಮಾಂಚಕ ಲಯ ಮತ್ತು ಚಲನೆಗಳಿಗೆ ಜೀವ ತುಂಬಿತು.
ಮಧ್ಯಾಹ್ನದ ನಂತರ ತುಳುನಾಡಿನ ಸಂಸ್ಕೃತಿ ಕುರಿತು ನಡೆದ – “ತುಳು ಬದ್ಕ್ ” ಪ್ರಸ್ತುತಿಯನ್ನು ಆನಂದಿಸಿದರು, ಇದು ತುಳು ನಾಡನ್ನು ವ್ಯಾಖ್ಯಾನಿಸುವ ಇತಿಹಾಸ, ಪದ್ಧತಿಗಳು ಮತ್ತು ಸಂಪ್ರದಾಯಗಳ ಬಗ್ಗೆ ವಿವರವಾದ ಒಳನೋಟಗಳನ್ನು ಒದಗಿಸಿತು. “ಭೂತ” ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರ ಪ್ರದರ್ಶನವು ದಿನದ ವಿಶೇಷವಾಗಿತ್ತು, ನಂತರ ಭೂತಾರಾಧನೆ, ಕಂಬಳ, ಯಕ್ಷಗಾನ ಮತ್ತು ಕರಕುಶಲತೆ ಸೇರಿದಂತೆ ತುಳು ಸಾಂಸ್ಕೃತಿಕ ಆಚರಣೆಗಳಲ್ಲಿ ಪರಿಣಿತರನ್ನು ಒಳಗೊಂಡ ಸಂವಾದವು ನಡೆಯಿತು.
ಪಾಲ್ಗೊಂಡವರು ದಿನವಿಡೀ, ಸ್ಥಳೀಯ ಕುಶಲಕರ್ಮಿಗಳನ್ನು ಒಳಗೊಂಡ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲ ಪ್ರದರ್ಶನ ನಡೆಯಿತು, ತುಳುನಾಡು ಪಾಕಪದ್ಧತಿಯೊಂದಿಗೆ ಪಾಕಶಾಲೆಯ ಆನಂದವನ್ನು ಆನಂದಿಸಿದರು ಮತ್ತು ಪ್ರದೇಶದ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಹೆಗ್ಗುರುತುಗಳನ್ನು ಅನ್ವೇಷಿಸುವ ಮಾರ್ಗದರ್ಶಿ ಪರಂಪರೆಯ ನಡಿಗೆಗಳಲ್ಲಿ ಭಾಗವಹಿಸಿದರು.
ಡಾ. ಪ್ರವೀಣ್ ಶೆಟ್ಟಿ, ಸಂಯೋಜಕರು, ಎಂಯು ಕೇಂದ್ರ – ಮಾನವಿಕ ಮತ್ತು ನಿರ್ವಹಣೆ ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಶ್ರೀಮತಿ ಶೃತಿ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಉಡುಪಿ : ಉಡುಪಿ ತುಳುಕೂಟವು ನೀಡುವ 29ನೇ ವರ್ಷದ ‘ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ’ಗೆ ಮಂಗಳೂರಿನ ಕರಂಗಲ್ಪಾಡಿಯ ರೂಪಕಲಾ ಆಳ್ವ ಅವರ ‘ಪಮ್ಮಕ್ಕೆನ ಪೊರುಂಬಾಟ’ ಎಂಬ ಕಾದಂಬರಿ ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಆ. 18 ರಂದು, ಸಂಜೆ 4 ಗಂಟೆಗೆ ಯಕ್ಷಗಾನ ಕಲಾರಂಗದ ನೂತನ ಸಭಾಂಗಣ ಐವೈಸಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುಕೂಟದ ಜಯಕರ್ ಶೆಟ್ಟಿ ಇಂದ್ರಾಳಿ ವಹಿಸಲಿದ್ದು, ಅತಿಥಿಗಳಾಗಿ ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ, ಮಂಗಳೂರಿನ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಉದ್ಯಮಿ ವೈ. ಸುಧೀರ್ ಕುಮಾರ್ ಮತ್ತು ಸಮಾಜಸೇವಕ ಯು. ವಿಶ್ವನಾಥ ಶೆಣೈ ಭಾಗವಹಿಸಲಿದ್ದಾರೆ. ಪ್ರಶಸ್ತಿ ಪುರಸ್ಕೃತ ಕಾದಂಬರಿಯನ್ನು ಅಮಿತಾಂಜಲಿ ಕಿರಣ್ ಅವರು ಪರಿಚಯಿಸಲಿದ್ದಾರೆ. ಇದೇ ಸಂದರ್ಭದಲ್ಲಿ, ತುಳುಭಾಷೆಯನ್ನು ತೃತೀಯ ಐಚ್ಛಿಕ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಈ ಬಾರಿಯ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇ 100 ಅಂಕ ಪಡೆದ ಜಿಲ್ಲೆಯ 17 ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ ಎಂದು ತುಳುಕೂಟದ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಹಾಗೂ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಸಂಚಾಲಕಿ ತಾರಾ ಉಮೇಶ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಚಿನಡ್ಕ ಟೋಲ್ಗೇಟ್ ಸ್ಥಾಪನೆ ವಿವಾದ – ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳಿಗೆ ತರಾಟೆ; ವಿರೋಧದಿಂದ ವಾಪಾಸಾದ ಅಧಿಕಾರಿಗಳು
ಪಡುಬಿದ್ರಿ : ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ ಕಂಚಿನಡ್ಕದಲ್ಲಿ ನಿರ್ಮಿಸಲುದ್ದೇಶಿಸಿರುವ ಟೋಲ್ಗೇಟ್ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳನ್ನು ಟೋಲ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರು ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆದಿದೆ.
ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣದ ಸ್ಥಳ ಪರಿಶೀಲನೆಗಾಗಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಎಕ್ಸಿಕ್ಯೂಟಿವ್ ಎಂಜಿನಿಯರ್ ರಘು ಎಲ್ ಹಾಗೂ ಸಹಾಯಕ ಎಂಜಿನಿಯರ್ ಹೇಮಂತ್ ಕುಮಾರ್ ಆಗಮಿಸಿದ್ದರು. ಅಧಿಕಾರಿಗಳು ಸ್ಥಳ್ಕಕೆ ಬರುವ ಸುದ್ದಿ ತಿಳಿದು ಟೋಲ್ ವಿರೋಧಿ ಹೋರಾಟಗಾರರು ಸ್ಥಳದಲ್ಲಿ ಜಮಾಯಿಸಿದರು.
ಸ್ಥಳಕ್ಕೆ ಬಂದ ಅಧಿಕಾರಿಗಳು ಟೋಲ್ವಿರೋಧಿ ಮುಖಂಡರೊಂದಿಗೆ ಟೋಲ್ನ ವಿವರವನ್ನು ನೀಡಿದರು. ಈ ವೇಳೆ ಯಾವುದೇ ಕಾರಣಕ್ಕೂ ಇಲ್ಲಿ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಟೋಲ್ ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಸಿಬ್ಬಂದಿಗಳು ಟೋಲ್ವಿರೋಧಿ ಹೋರಾಟಗಾರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಹೋರಾಟಗಾರರು ಟೋಲ್ ಕಂಪೆನಿ ಸಿಬ್ಬಂದಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಪೊಲೀಸರ ಮಧ್ಯೆಸ್ಥಿಕೆಯಲ್ಲಿ ಅವರನ್ನು ಕಾರಿನಲ್ಲಿ ಅಲ್ಲಿಂದ ತೆರಳುವಂತೆ ಸೂಚಿಸಲಾಯಿತು. ಇತ್ತ ಪೊಲೀಸರು ಹೋರಾಟಗಾರರನ್ನು ಸಮಾಧಾನ ಪಡಿಸಿದರು.