ಉಡುಪಿ : ಜಿಲ್ಲೆಯಾದ್ಯಂತ ವ್ಯಾಪಕವಾಗಿ ಡೆಂಗ್ಯೂ ಹಾಗೂ ಇತರ ಕೆಲವು ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುತ್ತಿದ್ದು ರೋಗಿಗಳು ಸ್ವ-ಔಷಧೋಪಾಚಾರ ಮಾಡಿಕೊಳ್ಳುವುದರಿಂದ ರೋಗ ಪತ್ತೆ ಮಾಡಿ, ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯದೆ ಪ್ರಾಣಾಪಾಯಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಔಷಧ ವ್ಯಾಪಾರಿಗಳು ಕಡ್ಡಾಯವಾಗಿ ವೈದ್ಯರ ಸಲಹಾ ಚೀಟಿ ಇಲ್ಲದೆ ಪ್ಯಾರಾಸಿಟಿಮಲ್ ಮತ್ತು ಇತರೆ ಆಂಟಿಬಯೋಟಿಕ್ ಔಷಧಗಳ ಮಾರಾಟ ಮಾಡಬಾರದು. ಹಾಗೂ ಜಿಲ್ಲೆಯ ಎಲ್ಲಾ ರಕ್ತ ಕೋಶ ಕೇಂದ್ರದವರು ರಕ್ತ ಹಾಗೂ ರಕ್ತ ಉತ್ಪನ್ನಗಳ ಕೊರತೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ರಕ್ತದಾನಿಗಳ ಪಟ್ಟಿಯನ್ನು ಸಿದ್ಧ ಪಡಿಸಿಟ್ಟುಕೊಂಡು ಅವಶ್ಯಕತೆಗೆ ಅನುಗುಣವಾಗಿ ರಕ್ತವನ್ನು ಪಡೆದು ದಾಸ್ತಾನು ಇಟ್ಟುಕೊಳ್ಳಬೇಕೆಂದು ಉಡುಪಿ ಸಹಾಯಕ ಔಷಧಿ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Udupi
ಉಡುಪಿಯಲ್ಲಿ “ಜೆಸಿಬಿ” ಅಸ್ತ್ರ! ಗುತ್ತಿಗೆದಾರನಿಂದ ಕಳಪೆ ರಸ್ತೆ ಕಾಮಗಾರಿ; ಜೆಸಿಬಿಯಿಂದ ರಸ್ತೆ ಅಗೆಸಿ ವಾರ್ನಿಂಗ್!
ಉಡುಪಿ : ಮಳೆಗೆ ನಗರದ ಹಲವು ರಸ್ತೆಗಳು ಹದಗೆಟ್ಟಿದ್ದು ಸವಾರರು ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಾ ಮುಂದೆ ಸಾಗುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಡಾಂಬರೀಕರಣ ಮಾಡಿದ್ದ ರಸ್ತೆಗಳೂ ಹದಗೆಟ್ಟಿದ್ದು ಹೊಂಡಗಳಿಂದ ಕೂಡಿವೆ. ನಗರದ ಬ್ರಹ್ಮಗಿರಿಯಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆವರೆಗಿನ ಮುಖ್ಯ ರಸ್ತೆ ಕೆಲವು ತಿಂಗಳುಗಳ ಹಿಂದೆಯಷ್ಟೆ ಡಾಂಬರೀಕರಣಗೊಂಡಿತ್ತು. ಇದೀಗ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಎದುರಾಗಿದೆ.

ನಗರಸಭೆ ಪರ್ಯಾಯ ಮಹೋತ್ಸವದ ಅನುದಾನವಾಗಿ ಈ ರಸ್ತೆಗೆ 35 ಲಕ್ಷ ಹಣ ಮಂಜೂರು ಮಾಡಿತ್ತು. ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸಿ, ಇತ್ತೀಚೆಗೆ ಅದರ ಮೇಲೆ ತೇಪೆ ಹಚ್ಚಿಸಿದ್ದರು. ಇದರ ವಿರುದ್ಧ ಸಮಾಜಸೇವಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೂ ಮುಂದಾಗಿದ್ದರು.
ಇಂದು ನಗರಸಭೆ ಆಯುಕ್ತ ರಾಯಪ್ಪ ನೇತೃತ್ವದಲ್ಲಿ ಈ ರಸ್ತೆಯ ತೇಪೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.ಬಳಿಕ ಮಾತನಾಡಿ, ಮಳೆ ಮುಗಿದ ತಕ್ಷಣ ಈ ರಸ್ತೆಯನ್ನು ವೈಜ್ಞಾನಿಕವಾಗಿ ಮತ್ತೆ ಮಾಡಿಕೊಡಬೇಕು. ಗುತ್ತಿಗೆದಾರನ 45 ಲಕ್ಷ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಸಂಪೂರ್ಣ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಮಾಡಿದ ನಂತರ ಅವರ ಹಣ ಕೊಡಲಾಗುವುದು, ಇದು ಎಲ್ಲ ಗುತ್ತಿಗೆದಾರರಿಗೂ ಎಚ್ಚರಿಕೆ ಎಂದು ಹೇಳಿದ್ದಾರೆ.
ಕಡಲ್ಕೊರೆತ ಪ್ರದೇಶಕ್ಕೆ ಉಡುಪಿ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ; ಸಮಸ್ಯೆ ಬಗೆಹರಿಸುವ ಭರವಸೆ
ಪಡುಬಿದ್ರಿ : ಇಲ್ಲಿನ ನಡಿಪಟ್ಣ ಬಳಿ ಕಡಲ್ಕೊರೆತದಿಂದ ಅಪಾಯದಂಚಿನಲ್ಲಿರುವ ಪ್ರದೇಶಕ್ಕೆ ಇಂದು ಉಡುಪಿ ಜಿಲ್ಲಾಧಿಕಾರಿ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ತಾತ್ಕಾಲಿಕ ಪರಿಹಾರವಾಗಿ ಸಮುದ್ರ ತಟಕ್ಕೆ ಕಲ್ಲು ಹಾಕುವ ಭರವಸೆ ವ್ಯಕ್ತ ಪಡಿಸಿದರು.ಕೆಲವು ದಿನಗಳಿಂದ ಕಡಲು ಕೊರೆತ ತೀವ್ರಗೊಂಡಿದ್ದರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಹಿನ್ನಲೆಯಲ್ಲಿ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಯವರನ್ನು ಸ್ಥಳೀಯರು ಒತ್ತಾಯಿಸಿದರು.
ಸದ್ಯ ಅಪಾಯದಂಚಿನಲ್ಲಿರುವ ಮೀನುಗಾರಿಕಾ ಪರಿಕರಗಳ ಶೇಕರಣ ಕೊಠಡಿ ಸಮುದ್ರ ಪಾಲಾಗುವ ಸಾಧ್ಯತೆ ಇರುವ ಕಾರಣ ಸುಮಾರು 60ಲಕ್ಷ ರೂಪಾಯಿಗಳ ಪರಿಕರಗಳನ್ನು ಸ್ಥಳಾಂತರ ಮಾಡಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ವಿದ್ಯಾ ಕುಮಾರಿಯವರ ಗಮನಕ್ಕೆ ಮೀನುಗಾರ ಪ್ರಮುಖರು ತಂದರು. ತಾತ್ಕಾಲಿಕವಾಗಿ ಬಂಡೆ ಹಾಕುವ ಕಾರ್ಯ ಶೀಘ್ರ ಪ್ರಾರಂಭಿಸಲಾಗುವುದು. ಅದು ಈ ಕಡಲಬ್ಬರದ ಮಧ್ಯೆ ಎಷ್ಟು ಪರಿಣಾಮಕಾರಿ ಎಂಬುದು ತಿಳಿಯದು. ಈ ಪ್ರದೇಶಕ್ಕೆ ಯಾರೂ ಬಾರದಂತೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್, ಕಾಪು ತಹಶಿಲ್ದಾರ್ ಪ್ರತಿಭಾ, ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶೋಭಾ ಹಾಗೂ ಸ್ಥಳೀಯ ಮೀನುಗಾರ ಪ್ರಮುಖರು ಸ್ಥಳದಲ್ಲಿದ್ದರು.
ಉಡುಪಿಯ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳಿಂದ ಸಾವಿರಾರು ಭಕ್ತರಿಗೆ ತಪ್ತಮುದ್ರಾಧಾರಣೆ
ಉಡುಪಿ : ಉಡುಪಿಯ ಶ್ರೀಕೃಷ್ಣಮಠದಲ್ಲಿಂದು ಪ್ರಥಮನ ಏಕಾದಶಿ ಪ್ರಯುಕ್ತ ಪರ್ಯಾಯ ಪುತ್ತಿಗೆ ಶ್ರೀಗಳು ಸಾವಿರಾರು ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಿದರು.
ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ ಮಹಾಪೂಜೆ ಪೂರೈಸಿದ ಪರ್ಯಾಯ ಪುತ್ತಿಗೆ ಸುಗುಣೇಂದ್ರ ಶ್ರೀಗಳು ಸಾವಿರಾರು ಭಕ್ತರಿಗೆ ಮುದ್ರಾಧಾರಣೆ ನಡೆಸಿದರು. ಮುದ್ರಾಧಾರಣೆಗಾಗಿ ಬಂದವರ ಸರತಿ ಸಾಲು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಶ್ರೀಕೃಷ್ಣಮಠದ ಮುಂಭಾಗದಲ್ಲಿತ್ತು.
ಮುದ್ರಾಧಾರಣೆ ಮಾಡುವ ಮುನ್ನ ವೈದಿಕರು ಸುದರ್ಶನ ಹೋಮ ನಡೆಸಿದರು. ಅದರಲ್ಲಿ ಬಿಸಿ ಮಾಡಿದ ಶಂಖ ಚಕ್ರಗಳ ಚಿಹ್ನೆಗಳನ್ನು ಪರ್ಯಾಯ ಶ್ರೀಗಳು ಭಕ್ತರ ತೋಳಿನಲ್ಲಿ ಮುದ್ರಿಸಿದರು. ಉಡುಪಿ ಮಾತ್ರವಲ್ಲದೆ ನಾಡಿನ ಬಹುತೇಕ ಮಠಗಳಲ್ಲಿ ವಿವಿಧ ಮಠಾಧೀಶರುಗಳು ಈ ದಿನ ಭಕ್ತರಿಗೆ ತಪ್ತಮುದ್ರಾಧಾರಣೆ ಮಾಡುವ ಸಂಪ್ರದಾಯವಿದೆ.
ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಸಮಾಜಮುಖಿ ಕಾರ್ಯ : ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಮಂಗಳೂರು : ದೇವಾಲಯಗಳನ್ನು ಮೊದಲು ಸ್ವಾಯತ್ತಗೊಳಿಸುವ ಅಗತ್ಯವಿದೆ. ಸರಕಾರ ಕೈಯಿಂದ ವಿಮುಕ್ತಗೊಳಿಸಬೇಕು ಎಂದು ಈ ಹಿಂದೆ ಹಲವು ಬಾರಿ ಆಗ್ರಹಸಿದ್ದೇವೆ. ಸರಕಾರ ತನ್ನ ಕೈಯಲ್ಲಿ ಇಟ್ಟುಕೊಂಡು ದೇವಸ್ಥಾನಗಳಲ್ಲಿ ಸಮಾಜಮುಖಿ ಕೆಲಸ ಆಗುತ್ತಿಲ್ಲ ಎನ್ನುವುದು ದೊಡ್ಡ ತಪ್ಪು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಮಂಗಳೂರಿನದಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಈ ವಿಚಾರವಾಗಿ ಸರಕಾರಗಳು ಸರ್ವೋಚ್ಚ ನ್ಯಾಯಲಯದ ನಿರ್ದೇಶನವನ್ನು ಅನುಷ್ಟಾನಕ್ಕೆ ತರಬೇಕು. ದೇವಸ್ಥಾನಗಳಿಗೆ ಭಕ್ತರೇ ನೀಡಿರುವ ಸಂಪತ್ತು ಭಕ್ತರಿಗೇ ಪುನಃ ಸಿಗಬೇಕು. ಹಾಗಾದಾಗ ಮಾತ್ರ ಪ್ರತಿ ದೇವಾಲಯದಲ್ಲೂ ಶಿಕ್ಷಣ-ವೈದ್ಯಕೀಯ ಸಂಸ್ಥೆ ನಿರ್ಮಾಣ ಮಾಡಲು ಸಾಧ್ಯವಿದೆ. ಆ ಮೂಲಕ ಸಮಾಜದ ಉದ್ಧಾರವೂ ಸಾಧ್ಯವಿದೆ ಎಂದರು.
ಅಯೋಧ್ಯೆಯಲ್ಲಿ ಕಾಮಗಾರಿ ಆರಂಭ
ಅಯೋಧ್ಯೆಯಲ್ಲಿ ಕಾಮಗಾರಿಗಳು ಮತ್ತೆ ಪ್ರಾರಂಭವಾಗಿವೆ. ಪ್ರಾಣ ಪ್ರತಿಷ್ಟೆಯ ಮರುದಿನದಿಂದಲೇ ಬೇಕಾದ ತಯಾರಿಗಳನ್ನು ಮಾಡಿಕೊಂಡು ಕಾಮಗಾರಿಯ ಮುಂದುವರಿದ ಭಾಗ ನಡೆಯುತ್ತಲೇ ಇದೆ. ನಾಲ್ಕೈದು ದಿನದ ಹಿಂದೆ ಅಯೊಧ್ಯೆಗೆ ಹೋಗಿ ಬಂದಿದ್ದೇವೆ ಎಂದರು.
ಕೆಮ್ಮಣ್ಣು : ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಹೂಡೆ ಇವರ ಸಹಯೋಗದೊಂದಿಗೆ ಆರೋಗ್ಯ ಕೇಂದ್ರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಖಿಲಾ ಡಿ., ಹಾಗೂ ಡಾ. ಶ್ರೀಕಾ, ಡಾ. ನಂದನಾ, ಡಾ. ಶ್ವೇತಾ, ಡಾ.ಉತ್ಕರ್ಷ್ ಅಗರ್ವಾಲ್, ಡಾ. ಅನಂತ್ ಸಿಂಗಲ್, ಡಾ. ಸುಜಿತ್ ಬಿಕ್ಕುಮಾನ್ಲಾ ಮತ್ತು ಸೆಂಟ್ರಲ್ ಮಿಚಿಗನ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೂದಲು ಕಸಿ ಕ್ಲಿನಿಕ್ (ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್) ಪ್ರಾರಂಭ
ಮಣಿಪಾಲ : ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ತನ್ನ ಅತ್ಯಾಧುನಿಕ ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ ಅನ್ನು ಇಂದು ಹೆಮ್ಮೆಯಿಂದ ಉದ್ಘಾಟಿಸಿದೆ. ಈ ಹೊಸ ಕ್ಲಿನಿಕ್ ಸುಧಾರಿತ ಕೂದಲು ಕಸಿ ಸೇವೆಗಳನ್ನು ನೀಡುತ್ತದೆ, ಪರಿಣಾಮಕಾರಿ ಕೂದಲು ಪುನಃಸ್ಥಾಪನೆ ಪರಿಹಾರಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸುತ್ತದೆ.
ಕೂದಲು ಕಸಿ ಮಾಡುವಿಕೆಯು ಕನಿಷ್ಟ ಆಕ್ರಮಣಶೀಲ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ಕೂದಲು ಕಿರುಚೀಲಗಳನ್ನು ದಟ್ಟವಾದ ಬೆಳವಣಿಗೆಯನ್ನು ಹೊಂದಿರುವ ಪ್ರದೇಶಗಳಿಂದ ಅಂದರೆ , ಸಾಮಾನ್ಯವಾಗಿ ನೆತ್ತಿಯ ಹಿಂಭಾಗ ಅಥವಾ ಬದಿಗಳಿಂದ, ಕೂದಲು ಉದುರುವಿಕೆ ಅನುಭವಿಸುತ್ತಿರುವ ಪ್ರದೇಶಗಳಿಗೆ ಸ್ಥಳಾಂತರಿಸುತ್ತದೆ. ಈ ತಂತ್ರವು ಸಂಸ್ಕರಿಸಿದ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಕಾಣುವ ಕೂದಲು ಬೆಳವಣಿಗೆಗೆ ಕಾರಣವಾಗುತ್ತದೆ. ಈ ಕಾರ್ಯವಿಧಾನಕ್ಕೆ ಸೂಕ್ತವಾದ ಅಭ್ಯರ್ಥಿಗಳು ಆನುವಂಶಿಕ ಅಂಶಗಳು, ಆಘಾತ ಅಥವಾ ಕೆಲವು ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ಗಮನಾರ್ಹ ಕೂದಲು ಉದುರುವಿಕೆಯನ್ನು ಅನುಭವಿಸುವ ವ್ಯಕ್ತಿಗಳು ಮತ್ತು ಅಭ್ಯರ್ಥಿಯು ಪ್ರದೇಶದಲ್ಲಿ ಸಾಕಷ್ಟು ಆರೋಗ್ಯಕರ ಕೂದಲು ಕಿರುಚೀಲಗಳನ್ನು ಹೊಂದಿರಬೇಕು .
ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಡಾ. ಶರತ್ ಕುಮಾರ್ ರಾವ್ ಅವರು, ವಿಶೇಷವಾಗಿ ಯುವ ಜನರಲ್ಲಿ ಕೂದಲು ಉದುರುವಿಕೆಯ ಹೆಚ್ಚುತ್ತಿರುವ ಪ್ರಾಬಲ್ಯವನ್ನು ಒತ್ತಿ ಹೇಳಿದರು. ಅವರು ಕೂದಲು ಉದುರುವಿಕೆಗೆ ಕಾರಣವಾಗುವ ಆನುವಂಶಿಕ ಅಂಶಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳು ಸೇರಿದಂತೆ ವಿವಿಧ ಕಾರಣಗಳನ್ನು ಹೈಲೈಟ್ ಮಾಡಿದರು ಮತ್ತು ಆರಂಭಿಕ ಕೂದಲು ನಷ್ಟದ ಮಾನಸಿಕ ಪರಿಣಾಮವನ್ನು ಒಪ್ಪಿಕೊಂಡರು. “ಕೂದಲು ಕಸಿ ಮಾತ್ರ ಇದಕ್ಕೆ ಕಾರ್ಯಸಾಧ್ಯವಾದ ಪರಿಹಾರವಾಗಿದೆ” ಎಂದು ಡಾ. ರಾವ್ ಹೇಳಿದರು, ಕೂದಲು ಉದುರುವಿಕೆಯಿಂದ ಬಳಲುತ್ತಿರುವ ಯುವಕರು ಮತ್ತು ಇತರರು ಹೊಸ ಚಿಕಿತ್ಸಾಲಯದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಒತ್ತಾಯಿಸಿದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎಚ್.ಅಶೋಕ ಮಾತನಾಡಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ವಿನೂತನ ಸೇವೆಗಳನ್ನು ಪರಿಚಯಿಸುವ ಬದ್ಧತೆಯನ್ನು ಹೊಂದಿದೆ ಎಂದು ಶ್ಲಾಘಿಸಿದರು. ಉಡುಪಿ ಜಿಲ್ಲಾ ಆಸ್ಪತ್ರೆಯೊಂದಿಗೆ ಆಸ್ಪತ್ರೆಯ ಸಹಯೋಗವನ್ನು ಗಮನಿಸಿದ ಅವರು ಈ ಪ್ರದೇಶದಲ್ಲಿ ರೋಗಿಗಳ ಆರೈಕೆಯನ್ನು ಹೆಚ್ಚಿಸಲು 250 ಹಾಸಿಗೆಗಳ ಹೊಸ ಬ್ಲಾಕ್ನ ಯೋಜನೆಯನ್ನು ಘೋಷಿಸಿದರು. “ನಾವು ಈ ವಿಸ್ತರಣೆಗೆ ನಿಮ್ಮ ಸಹಕಾರವನ್ನು ಬಯಸುತ್ತೇವೆ ಮತ್ತು ಹೊಸ ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ಗೆ ಉತ್ತಮ ಯಶಸ್ಸನ್ನು ಬಯಸುತ್ತೇವೆ” ಎಂದು ಡಾ. ಅಶೋಕ ಹೇಳಿದರು.
ಕಾರ್ಯಕ್ರಮದಲ್ಲಿ ಕೆಎಂಸಿಯ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಒಒ ಡಾ.ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ಶಿರಾನ್ ಶೆಟ್ಟಿ ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಜೋಸೆಫ್ ಥಾಮಸ್ ಅವರು ಕ್ಲಿನಿಕ್ನ ಸೇವೆಗಳ ಅವಲೋಕನವನ್ನು ನೀಡಿದರು ಮತ್ತು ಸಭೆಗೆ ಆತ್ಮೀಯ ಸ್ವಾಗತವನ್ನು ನೀಡಿದರು.
ಕಸ್ತೂರ್ಬಾ ಆಸ್ಪತ್ರೆಯಲ್ಲಿರುವ ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ ಈಗ ಸಾರ್ವಜನಿಕರಿಗೆ ತೆರೆದಿದ್ದು, ಕೂದಲು ಉದುರುವಿಕೆಯೊಂದಿಗೆ ಹೋರಾಡುತ್ತಿರುವವರಿಗೆ ಭರವಸೆ ಮತ್ತು ಸುಧಾರಿತ ಆರೈಕೆಯನ್ನು ನೀಡುತ್ತದೆ.
ಬ್ರಹ್ಮಾವರ ಕೃಷಿ ಡಿಪ್ಲೋಮ ಜೊತೆಗೆ ಕೃಷಿ ಕಾಲೇಜು ಆರಂಭಿಸಲಿ : ಯಶ್ಪಾಲ್ ಸುವರ್ಣ ಆಗ್ರಹ
ಉಡುಪಿ : ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಸ್ಥಳೀಯ ಜನತೆಯ ಒಕ್ಕೊರಲ ಬೇಡಿಕೆಯಾಗಿದ್ದ ಕೃಷಿ ಮಹಾವಿದ್ಯಾಲಯ ಆರಂಭಿಸುವ ಮನವಿಯನ್ನು ಪರಿಗಣಿಸದೆ ರಾಜ್ಯ ಸರ್ಕಾರ ಡಿಪ್ಲೋಮ ಪದವಿಯನ್ನು ಪುನರಾರಂಭಿಸಲು ಆದೇಶ ನೀಡಿದ್ದು, ಸರಕಾರ ಈ ನಿರ್ಧಾರವನ್ನು ಪುನರ್ ಪರಿಶೀಲಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಕೃಷಿ ಕಾಲೇಜು ಆರಂಭಿಸುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಈಗಾಗಲೇ ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಕರಾವಳಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೃಷಿ ವಿಭಾಗದಲ್ಲಿ ಪದವಿ ಶಿಕ್ಷಣಕ್ಕೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಕರಾವಳಿ ಕೃಷಿ ಕಾಲೇಜು ಹೋರಾಟ ಸಮಿತಿ, ಬಿಜೆಪಿ ರೈತ ಮೋರ್ಚಾ ಹಾಗೂ ವಿವಿಧ ಸಂಘಟನೆಗಳು ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕೃಷಿ ಸಚಿವರಾದ ಚೆಲುವರಾಯ ಸ್ವಾಮಿಯವರು ಬ್ರಹ್ಮಾವರಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಕೃಷಿ ಕಾಲೇಜು ಆರಂಭಕ್ಕೆ ಮನವಿ ಮಾಡಿದ್ದೇನೆ.
2022ರಲ್ಲಿ ರಾಜ್ಯ ಸರ್ಕಾರ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಡಿಪ್ಲೋಮ ಕೋರ್ಸ್ಗಳನ್ನು ಮುಂದುವರೆಸದಂತೆ ಆದೇಶ ನೀಡಿದೆ. ಡಿಪ್ಲೋಮ ಕೋರ್ಸಿನ ಮಾನ್ಯತೆಯ ಗೊಂದಲ, ಉದ್ಯೋಗಾವಕಾಶ ಹಾಗೂ ಭವಿಷ್ಯದ ಅನಿಶ್ಚಿತತೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಡಿಪ್ಲೋಮ ಕೋರ್ಸಿಗೆ ಪ್ರವೇಶ ಪಡೆಯಲು ಅಸಕ್ತಿ ತೋರುತ್ತಿಲ್ಲ.
ರಾಜ್ಯ ಸರಕಾರ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಕೃಷಿ ಕಾಲೇಜು ಆರಂಭಿಸಲು ಪೂರಕವಾಗಿರುವ 300 ಎಕ್ರೆ ಜಾಗದೊಂದಿಗೆ ಸುಸಜ್ಜಿತ ಕಟ್ಟಡ ಹಾಗೂ ಮೂಲಸೌಕರ್ಯಗಳನ್ನು ಹೊಂದಿದ್ದು, ಸರ್ಕಾರಕ್ಕೆ ಯಾವುದೇ ಹೆಚ್ಚಿನ ಆರ್ಥಿಕ ಹೊರೆಯಿಲ್ಲದ ಕಾರಣ ಮುಂದಿನ ಶೈಕ್ಷಣಿಕ ವರ್ಷದಿಂದ ಕೃಷಿ ಕಾಲೇಜು ಆರಂಭಿಸಿ ಕರಾವಳಿ ಭಾಗದ ರೈತರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತೆ ರಾಜ್ಯ ಸರಕಾರಕ್ಕೆ ಆಗ್ರಹ ಮಾಡುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿನಿ ಆರ್. ಶೆಟ್ಟಿ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾಪ
ಉಡುಪಿ : ನಗರದ ಅಂಬಲಪಾಡಿ ನಿವಾಸಿ, ಬಿಜೆಪಿ ಮಹಿಳಾ ಮೋರ್ಚಾ ಉಡುಪಿ ನಗರ ಅಧ್ಯಕ್ಷೆ ಅಶ್ವಿನಿ ಆರ್. ಶೆಟ್ಟಿ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಸಂತಾನ ವ್ಯಕ್ತಪಡಿಸಿದೆ.
ಈ ಹಿಂದೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾಗಿ, ಪ್ರಸಕ್ತ ಉಡುಪಿ ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಅಶ್ವಿನಿ ಆರ್. ಶೆಟ್ಟಿ ಅವರ ಅಗಲುವಿಕೆ ಪಕ್ಷ ಹಾಗೂ ಮಹಿಳಾ ಮೋರ್ಚಾ ತಂಡಕ್ಕೆ ತುಂಬಲಾರದ ನಷ್ಟವೆನಿಸಿದೆ.
ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಮಕ್ಕಳು ಮತ್ತು ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ, ಶ್ರೀ ಕೃಷ್ಣ ಮಠ ಉಡುಪಿಯಲ್ಲಿ ಉದ್ವಾರ್ಚನೆಯ ಪ್ರಯುಕ್ತ ಪರ್ಯಾಯ ಮಠಾಧೀಶರು ವಿಶೇಷ ಪೂಜೆ ನಡೆಸಿದರು. ಪರ್ಯಾಯ ಶ್ರೀಪುತ್ತಿಗೆ ಮಠದ ಇಬ್ಬರು ಸ್ವಾಮೀಜಿಗಳು ಶ್ರೀಕೃಷ್ಣ ಮಠದ ಒಳಗೆ ಸಾಂಪ್ರದಾಯಿಕ ಆಚರಣೆಗಳಿಗೆ ಸಾಕ್ಷಿಯಾದರು. ಮಠದ ಗರ್ಭಗುಡಿಯನ್ನು ವರ್ಷಕ್ಕೊಮ್ಮೆ ಉದ್ವಾರ್ಚನೆಯ ಮೂಲಕ ಸ್ವಚ್ಛಗೊಳಿಸಲಾಗುತ್ತದೆ.
ಈ ವೇಳೆ ಶ್ರೀ ಕೃಷ್ಣದೇವರ ಮೂಲ ಪ್ರತಿಮೆಯನ್ನು ಬುಟ್ಟಿಯಿಂದ ಮುಚ್ಚಿಡುವ ಅಪರೂಪದ ಪದ್ಧತಿ ಇದೆ. ಆ ದಿನದಂದು ಸಾರ್ವಜನಿಕರಿಗೆ ಮಹಾಪೂಜೆಯವರೆಗೆ ಶ್ರೀ ಕೃಷ್ಣನ ದರ್ಶನಕ್ಕೆ ಅವಕಾಶಗಳಿರುವುದಿಲ್ಲ. ಆ ಸಮಯದಲ್ಲಿ ಶ್ರೀ ಕೃಷ್ಣನ ವಿಗ್ರಹ ಸೇರಿದಂತೆ ಮಠದಲ್ಲಿನ ಗರ್ಭಗುಡಿ ಪ್ರತಿಯೊಂದು ಭಾಗದಲ್ಲಿ ಮತ್ತು ಪ್ರತೀ ಕಡೆಗಳಲ್ಲಿ ಶುಚಿಗೊಳಿಸಲಾಗುತ್ತದೆ. ಶ್ರೀ ಕೃಷ್ಣನ ಉದ್ವಾರ್ಚನೆಯ ನಂತರ ಪರ್ಯಾಯ ಶ್ರೀಗಳು ಕೃಷ್ಣನಿಗೆ ಮಹಾಪೂಜೆಯನ್ನು ನೆರೆವೇರಿಸಿದರು. ಆ ಬಳಿಕ ಸಾರ್ವಜನಿಕರಿಗೆ ಶ್ರೀ ಕೃಷ್ಣನ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತಾರೆ.