ಕುಂದಾಪುರ : ಲೈಂಗಿಕ ಕಿರುಕುಳದ ಆರೋಪದಡಿ ಬಂಧಿತರಾದ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಡಾ. ರಾಬರ್ಟ್ ರೆಬೆಲ್ಲೋಗೆ ಮಧ್ಯಂತರ ಜಾಮೀನು ನೀಡಿ ನ್ಯಾಯಾಲಯ ಆದೇಶಿಸಿದೆ. ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿರುವ ಡಾ. ರಾಬರ್ಟ್ ರೆಬೆಲ್ಲೋ, ತಮ್ಮ ಸಹದ್ಯೋಗಿಯೋರ್ವರ ಜೊತೆಗೆ ಅಸಭ್ಯ ವರ್ತನೆ ತೋರಿ ಲೈಂಗಿಕ ಶೋಷಣೆ ಎಸಗಿದ್ದಾಗಿ ಆರೋಪಿಸಲಾಗಿತ್ತು. ಈ ಸಂಬಂಧ ಸಹೋದ್ಯೋಗಿ ಮಹಿಳಾ ವೈದ್ಯೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದು, ನಂತರ ಪೊಲೀಸರು ಮುಂಬೈಯಲ್ಲಿ ಬಂಧಿಸಿದ್ದರು. ಬಂಧನದ ಬಳಿಕ ಆರೋಪಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದು ಅದನ್ನು ಪುರಸ್ಕರಿಸಿದ ನ್ಯಾಯಾಧೀಶರು ಮಧ್ಯಂತರ ಜಾಮೀನು ನೀಡಿ ಆದೇಶ ಮಾಡಿದ್ದಾರೆ.
Udupi
ವಿವಿಧ ಉಪಕ್ರಮಗಳ ಉದ್ಘಾಟನೆಯೊಂದಿಗೆ ಮಾಹೆ ಆರೋಗ್ಯ ವಿಜ್ಞಾನ ಸಂಶೋಧನ ದಿನ ಸಂಪನ್ನ
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನಲ್ಲಿ ‘ಮಾಹೆ ಆರೋಗ್ಯ ವಿಜ್ಞಾನ ಸಂಶೋಧನ ದಿನ 2024’ ಕಾರ್ಯಕ್ರಮವು ಇಂದು ಇಂಟರಾಕ್ಟ್ ಕೆಎಂಸಿ ಲೆಕ್ಚರ್ ಹಾಲ್ಸ್ನಲ್ಲಿ ಆಯೋಜನೆಗೊಂಡಿದ್ದು ಮಾಹೆಯ ಸಹ-ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಇದಕ್ಕೆ ಸಂಬಂಧಿಸಿ ಐದು ಪ್ರಮುಖ ಸಂಶೋಧನ ಉತ್ತೇಜಕ ಕಾರ್ಯಕ್ರಮಗಳ ಉದ್ಘಾಟನೆಯೂ ನಡೆದಿದ್ದು, ಅವುಗಳೆಂದರೆ, ‘ಕಿರಿಯರಿಗೆ ಪ್ರೇರಣೆ (ಇನ್ಸ್ಪಾಯರ್ ಜೂನಿಯರ್], ಅಧ್ಯಯನಾಕಾಂಕ್ಷಿಗಳಿಗೆ ಸ್ಫೂರ್ತಿ [ಇನ್ಸ್ಪಾಯರ್ ಲರ್ನರ್], ವೃತ್ತಿಪರರಿಗೆ ಉತ್ತೇಜನ [ಇನ್ಸ್ಪಾಯರ್ ಪ್ರೊಫೆಶನಲ್], ಆರೋಗ್ಯವಿಜ್ಞಾನದಲ್ಲಿ ಸಂಶೋಧನ ಸಹಭಾಗಿತ್ವ [ಕೊಲ್ಯಾಬೊರೇಟ್ ಹೆಲ್ತ್ ರಿಸರ್ಚ್ ಎಕ್ಸಫೊ], ಸಂಶೋಧನ ಸಂಪನ್ಮೂಲಗಳನ್ನು ಲಭ್ಯತೆಯನ್ನು ಹೆಚ್ಚಿಸುವುದು [ಎನ್ರಿಚ್ ಆಕ್ಸೆಸ್ ಟು ರೀಸರ್ಚ್ ರಿಸೋರ್ಸಸ್];ಈ ಕಾರ್ಯಕ್ರಮಗಳಲ್ಲಿ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳ ಸುಮಾರು 5000 ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು.
‘ಕಿರಿಯರಿಗೆ ಪ್ರೇರಣೆ’ ಕಾರ್ಯಕ್ರಮವು 8ನೆಯ ತರಗತಿಯಿಂದ 12ನೆಯ ತರಗತಿಯವರೆಗಿನ ವಿದ್ಯಾರ್ಥಿಗಳತ್ತ ಕೇಂದ್ರೀಕೃತವಾಗಿದ್ದು, ವಿವಿಧ ಪ್ರಯೋಗಾಲಯಗಳಿಗೆ ಮಾರ್ಗದರ್ಶಿಗೆ ಪ್ರವಾಸ, ಜೈವಿಕ ಮಾದರಿಗಳ ವೀಕ್ಷಣೆ, ಉಪಕರಣಗಳು, ಪ್ರದರ್ಶಕಗಳು, ಆರೋಗ್ಯ ವಿಜ್ಞಾನ ಕ್ಷೇತ್ರದ ಪ್ರಯೋಗಗಳು-ವಿವಿಧ ವಿಷಯಗಳನ್ನು ಒಳಗೊಂಡಿದೆ. ಇದು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಧರ್ಮ ಮತ್ತು ಆಯಾ ಕ್ಷೇತ್ರಗಳಲ್ಲಿ ಸಕ್ರಿಯವಾಗಲು ಪ್ರೇರೇಪಿಸುತ್ತದೆ.
ಡಾ. ಎಚ್. ಎಸ್. ಬಲ್ಲಾಳ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಯುವ ಮನಸ್ಸುಗಳನ್ನು ಸಂಶೋಧನೆಯತ್ತ ಪ್ರೇರೇಪಿಸುವ ಮತ್ತು ವಿಜ್ಞಾನ ಹಾಗೂ ಸಂಶೋಧನ ಕ್ಷೇತ್ರಗಳಲ್ಲಿ ಅವಕಾಶವನ್ನು ಅರಸುವಂತೆ ಉತ್ತೇಜಿಸುವ ಅಗತ್ಯವನ್ನು ಒತ್ತಿಹೇಳಿದರು. “ಯುವ ವಿದ್ಯಾರ್ಥಿಗಳನ್ನು ವೈಜ್ಞಾನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮತ್ತು ಅತ್ಯಾಧುನಿಕ ಸಂಶೋಧನೆಗೆ ಒಡ್ಡಿಕೊಳ್ಳುವ ಮೂಲಕ, ನಾವು ಮುಂದಿನ ಪೀಳಿಗೆಯ ಆರೋಗ್ಯ ವೃತ್ತಿಪರರು ಮತ್ತು ಸಂಶೋಧಕರಿಗೆ ಅಡಿಪಾಯ ಹಾಕುತ್ತಿದ್ದೇವೆ. ಆರೋಗ್ಯ ಆರೈಕೆ ಮತ್ತು ವಿಜ್ಞಾನ ಕ್ಷೇತ್ರದ ಸುಧಾರಣೆಗಳ ಭವಿಷ್ಯವನ್ನು ರೂಪಿಸುವಲ್ಲಿ ‘ಕಿರಿಯರಿಗೆ ಪ್ರೇರಣೆ’ ಕಾರ್ಯಕ್ರಮವು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಆರೋಗ್ಯ ಆರೈಕೆ ಕ್ಷೇತ್ರದಲ್ಲಿ ವೃತ್ತಿಪರರ ಮತ್ತು ಸಂಶೋಧಕರ ಪೀಳಿಗೆಯನ್ನು ಬೆಳೆಸಬಹುದು. ಇದು ರಾಷ್ಟ್ರದ ಭವಿಷ್ಯಕ್ಕೆ ನೀಡುವ ಕೊಡುಗೆಯೂ ಹೌದು ಎಂದರು.
ಡಾ. ಬಲ್ಲಾಳ್ ಅವರು ಮಾಹೆಯ ಆರೋಗ್ಯ ವಿಜ್ಞಾನಗಳ ಹಂಶೋಧನ ದಿನದ ಮಹತ್ತ್ವವನ್ನು ಎತ್ತಿಹಿಡಿಯುತ್ತ, ‘ಇದು ಅಂತರ್ಶಿಸ್ತೀಯ ಸಹಭಾಗಿತ್ವವನ್ನು ಮತ್ತು ಸಂಶೋಧನೆಯ ಮೂಲಭೂತ ಆಕರಗಳ ಲಭ್ಯತೆಯನ್ನು ಹೆಚ್ಚಿಸಲಿದೆ. ಒಟ್ಟಾರೆಯಾಗಿ ಈ ಎಲ್ಲ ಉಪಕ್ರಮಗಳು ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ನಾವೀನ್ಯಕ್ಕೆ ಅವಕಾಶ ನೀಡುವ ವಾತಾವರಣವನ್ನು ಸೃಷ್ಟಿಸಲಿವೆ’ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
‘ಅಧ್ಯಯನಾಕಾಂಕ್ಷಿಗಳಿಗೆ ಸ್ಫೂರ್ತಿ’ ಕಾರ್ಯಕ್ರಮವನ್ನು ಮಾಹೆಯ ಆರೋಗ್ಯವಿಜ್ಞಾನ ವಿಭಾಗದ ಸಹಕುಲಪತಿಗಳಾದ ಡಾ. ಶರತ್ ರಾವ್ ಮತ್ತು ಮಾಹೆಯ ಯೋಜನಾವಿಭಾಗದ ನಿರ್ದೇಶಕ, ನಿಯೋಜಿತ ಮುಖ್ಯ ನಿರ್ವಹಣಾಧಿಕಾರಿ ಡಾ. ರವಿರಾಜ್ ಎನ್. ಎಸ್. ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಸಂಶೋಧನ ಕೌಶಲವನ್ನು ಹೆಚ್ಚಿಸುವ ಅಗತ್ಯದ ಕುರಿತು ಗಮನ ಸೆಳೆದರು.
ಮಾಹೆಯ ಸಂಶೋಧನ ನಿರ್ದೇಶನಾಲಯದ ನಿರ್ದೇಶಕ ಡಾ. ಬಿ.ಎಸ್. ಸತೀಶ ರಾವ್ ಮತ್ತು ಸಾಂಸ್ಥಿಕ ಸಂಪರ್ಕ (ಕಾರ್ಪೊರೇಟ್ ರಿಲೇಶನ್ಸ್) ವಿಭಾಗದ ನಿರ್ದೇಶಕ ಡಾ. ಹರೀಶ್ ಕುಮಾರ್ ಎನ್. ಎಸ್. ಅವರು ‘ವೃತ್ತಿಪರರಿಗೆ ಉತ್ತೇಜನ’ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮವು ಆರೋಗ್ಯ ಕ್ಷೇತ್ರ ಸಂಶೋಧನ ಕ್ಷೇತ್ರದ 20 ತಜ್ಞರ ಭಾಷಣ ಮತ್ತು ಸಮಾಲೋಚನೆಯನ್ನು ಒಳಗೊಂಡಿದೆ.
‘ಆರೋಗ್ಯ ಸಂಶೋಧನ ಕ್ಷೇತ್ರದಲ್ಲಿ ಸಹಭಾಗಿತ್ವ’ ಕಾರ್ಯಕ್ರಮವನ್ನು ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ-ಕುಲಪತಿಗಳಾದ ಡಾ.ನಾರಾಯಣ ಸಭಾಹಿತ್ ಮತ್ತು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜ [ಎಂಐಟಿ] ಯ ನಿರ್ದೇಶಕ ಕ್ಯಾ. [ಡಾ.] ಅನಿಲ್ ರಾಣ ಉದ್ಘಾಟಿಸಿದರು; ಈ ಕಾರ್ಯಕ್ರಮವು ಅತ್ಯಾಧುನಿಕ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಅಂತರ್ಶಿಸ್ತೀಯ ಸಹಭಾಗಿತ್ವವನ್ನು ಪ್ರೋತ್ಸಾಹಿಸಲಿದೆ.
‘ಸಂಶೋಧನ ಸಂಪನ್ಮೂಲಗಳ ಲಭ್ಯತೆಯ ಹೆಚ್ಚಳ’ ಉಪಕ್ರಮವನ್ನು ಮಾಹೆಯ ಕಾರ್ಯತಂತ್ರ ಮತ್ತು ಯೋಜನ ವಿಭಾಗದ ಸಹ-ಉಪಕುಲಪತಿಗಳಾದ ಡಾ. ಎನ್. ಎನ್. ಶರ್ಮ ಮತ್ತು ಮಾಹೆಯ ಕುಲಸಚಿವ [ರಿಜಿಸ್ಟ್ರಾರ್] ಡಾ. ಪಿ. ಗಿರಿಧರ ಕಿಣಿ ಉದ್ಘಾಟಿಸಿದರು.
ಅಧ್ಯಯನಾಕಾಂಕ್ಷಿಗಳನ್ನು ಪ್ರೋತ್ಸಾಹಿಸುವ ‘ಅಧ್ಯಯನಾರ್ಥಿಗಳಿಗೆ ಪ್ರೇರಣೆ’ ಕಾರ್ಯಕ್ರಮವು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಲಿದೆ. ‘ಸಂಶೋಧನಾ ಸಹಭಾಗಿತ್ವ’ ಕಾರ್ಯಕ್ರಮವು ಸಂಶೋಧನಾರ್ಥಿಗಳಿಗೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಪರಸ್ಪರ ಪಾಲ್ಗೊಳ್ಳುವಿಕೆಗೆ ವೇದಿಕೆಯನ್ನು ಒದಗಿಸಲಿದೆ.
ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನಗಳ ಸಹ ಕುಲಪತಿ ಡಾ. ಶರತ್ ಕುಮಾರ್ ರಾವ್ ಅವರ ಮಾರ್ಗದರ್ಶನದಲ್ಲಿ ನಡೆದ 2024 ರ ಸಂಪೂರ್ಣ ಮಾಹೆ ಆರೋಗ್ಯ ವಿಜ್ಞಾನ ಸಂಶೋಧನಾ ದಿನವು ಭವ್ಯವಾಗಿ ಯಶಸ್ವಿಯಾಗಿದೆ. ಅವರ ನಾಯಕತ್ವ ಮತ್ತು ದೃಷ್ಟಿ ಆರೋಗ್ಯ ಸಂಶೋಧನೆಯಲ್ಲಿ ಉತ್ಕೃಷ್ಟತೆಯನ್ನು ಹೆಚ್ಚಿಸುವ ಸಹಯೋಗದ ವಾತಾವರಣವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಗಂಗೊಳ್ಳಿಯ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ತಡರಾತ್ರಿ ಬೆಂಕಿ ಅವಘಡ – ಲಕ್ಷಾಂತರ ರೂ. ನಷ್ಟ
ಗಂಗೊಳ್ಳಿ : ಇಲ್ಲಿನ ಅಂಬಾ ಎಲೆಕ್ಟ್ರಾನಿಕ್ಸ್ ಸೆಂಟರ್ನಲ್ಲಿ ತಡರಾತ್ರಿ 10.30 ಸುಮಾರಿಗೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಮಳಿಗೆಯಲ್ಲಿದ್ದ ಎಲೆಕ್ಟ್ರಾನಿಕ್ಸ್ ಸೊತ್ತುಗಳಿಗೆ ಹಾನಿಯಾಗಿದೆ. ತಕ್ಷಣ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು.
ಸುಧಾಕರ್ ಶೆಟ್ಟಿ ಎಂಬವರಿಗೆ ಸೇರಿದ ಎಲೆಕ್ಟ್ರಾನಿಕ್ಸ್ ಶೋ ರೂಮ್ ಇದಾಗಿದೆ. ತಡರಾತ್ರಿ ಏಕಾಏಕಿ ಬೆಂಕಿ ಹತ್ತಿಕೊಂಡಾಗ ಸ್ಥಳೀಯರ ನೆರವಿನೊಂದಿಗೆ ಅಗ್ನಿಶಾಮಕ ದಳದ ಸಿಬ್ವಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಶಾರ್ಟ್ ಸರ್ಕ್ಯುಟ್ನಿಂದ ಈ ದುರ್ಘಟನೆ ನಡೆದಿದ್ದು ಲಕ್ಷಾಂತರ ರೂ.ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.
ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ.ಅರವಿಂದ್ ಶಾನಭಾಗ್ ಅವರು ಈಗ ಡಾ.ಟಿ.ಎಂ.ಎ.ಪೈ ಆಸ್ಪತ್ರೆ, ಉಡುಪಿಯಲ್ಲಿ ಪೂರ್ಣಾವಧಿ ಸಮಾಲೋಚನೆಗಾಗಿ ಲಭ್ಯ
ಉಡುಪಿ : ಹೆಸರಾಂತ ಮೂಳೆ ಮತ್ತು ಕೀಲು ಶಸ್ತ್ರಚಿಕಿತ್ಸಕ ಡಾ. ಅರವಿಂದ್ ಶಾನಭಾಗ್ ಅವರು ಡಾ.ಟಿ.ಎಂ.ಎ ಪೈ ಆಸ್ಪತ್ರೆ, ಉಡುಪಿಯಲ್ಲಿ ಸಮಾಲೋಚನೆಗೆ ಲಭ್ಯ. ಜೂನ್ 1, 2024ರ ಶನಿವಾರದಿಂದ ಡಾ. ಶಾನಭಾಗ್ ಅವರು ಎಲ್ಲಾ ಕೆಲಸದ ದಿನಗಳಲ್ಲಿ (ಮೂರನೇ ಶನಿವಾರ ಸೇರಿದಂತೆ) ಪೂರ್ಣ ಸಮಯದ ಸಮಾಲೋಚನೆಗಾಗಿ 9:00 AM ರಿಂದ 5:00 PM ವರೆಗೆ ಲಭ್ಯವಿರುತ್ತಾರೆ.
ಡಾ. ಅರವಿಂದ್ ಶಾನಭಾಗ್ ಅವರು ಮೂಳೆ ಮತ್ತು ಅಪಘಾತ ಪ್ರಕರಣಗಳನ್ನು ನಿರ್ವಹಿಸುವಲ್ಲಿ 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಈ ಮೊದಲು ಅವರು ಕಾರ್ಕಳದಲ್ಲಿ ಪ್ರಮುಖ ಮೂಳೆ ಮತ್ತು ಕೀಲು ಶಸ್ತ್ರಚಿಕಿತ್ಸಕರಾಗಿದ್ದರು. ಅವರ ಪರಿಣತಿಯು ಸಂಧಿವಾತ, ದೀರ್ಘಕಾಲದ ಕುತ್ತಿಗೆ ಮತ್ತು ಬೆನ್ನು ನೋವು, ಮತ್ತು ಕ್ರೀಡಾ ಗಾಯಗಳು ಸೇರಿದಂತೆ ಎಲ್ಲ ರೀತಿಯ ಮೂಳೆ ಮತ್ತು ಕೀಲು ಸಮಸ್ಯೆಗಳಿಗೆ ಚಿಕಿತ್ಸೆ ಪರಿಹಾರ ವ್ಯಾಪಿಸಿದೆ.
ಡಾ. ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಅವರು ಹೊಸ ಸೇರ್ಪಡೆಯ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು: “ನಮ್ಮ ಗೌರವಾನ್ವಿತ ಆರೋಗ್ಯ ವೃತ್ತಿಪರರ ತಂಡಕ್ಕೆ ಡಾ. ಅರವಿಂದ್ ಶಾನಭಾಗ್ ಅವರನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ಅವರ ಪರಿಣತಿಯು ಉಡುಪಿ ಸಮುದಾಯಕ್ಕೆ “ಲಭ್ಯವಿರುವ ಮೂಳೆಚಿಕಿತ್ಸೆಯ ಸೇವೆಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ” ಎಂದು ಹೇಳಿದ್ದಾರೆ.
ಅಪಾಯಿಂಟ್ಮೆಂಟ್ಗಳು ಅಥವಾ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಆಸ್ಪತ್ರೆಯನ್ನು 7259032864ನಲ್ಲಿ ಸಂಪರ್ಕಿಸಿ.
ಉಡುಪಿ : ಸಂಗೀತ ಕ್ಷೇತ್ರದಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎನ್ನುವ ಸದಾಶಯದಿಂದ ರೂಪುಗೊಂಡ ಉಡುಪಿಯ ಝೇಂಕಾರ ಟ್ರೂಪ್ನ 10ನೇ ವಾರ್ಷಿಕೋತ್ಸವ ಜೂ.9 ರಂದು ಉಡುಪಿಯ ಪುರಭವನದಲ್ಲಿ ನಡೆಯಲಿದೆ.
ಸಂಸ್ಥೆಯ ಚೇತನ್ ನಾಯಕ್, ವಿಠಲ್ ನಾಯಕ್ರವರು ಸುದ್ದಿಗೋಷ್ಠಿ ನಡೆಸಿ ಬೆಳಗ್ಗೆ 8.45 ರಿಂದ ರಾತ್ರಿ 9 ಗಂಟೆಯವೆರೆಗೆ ಪ್ರಸಿದ್ಧ ಸಂಗೀತಜ್ಞರುಗಳಿಂದ ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9 ಕ್ಕೆ ಉದಯ ರಾಗ ಕಾರ್ಯಕ್ರಮದಲ್ಲಿ ಸಮೀರ್ ರಾವ್ ಅವರಿಂದ ಕೊಳಲು ವಾದನ ನಡೆಯಲಿದೆ. ಬೆಳಗ್ಗೆ 10.45 ಕ್ಕೆ ದಾಸವಾಣಿ ಕಾರ್ಯಕ್ರಮದಲ್ಲಿ ಶಂಕರ್ ಶಾನುಬೋಗ್ ಅವರಿಂದ ಹಾಡುಗಾರಿಕೆ, ಮದ್ಯಾಹ್ನ 1.45 ಕ್ಕೆ ಅವಧೂತ್ ಗಾಂಧಿ ಹಾಗೂ ತಂಡದವರಿಂದ ಮಹಾರಾಷ್ಟ್ರದ ಋಷಿ ಸಾಹಿತ್ಯದಲ್ಲಿ ಜಾನಪದ ಸಂಗೀತ ಬಗ್ಗೆ, ಅಪರಾಹ್ನ 3.30 ಕ್ಕೆ ಸ್ವರಾಂಜಲಿ ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಬೆಳ್ಮಣ್ಣು ಅವರಿಂದ ಹಿಂದೂಸ್ತಾನಿ ಸಂಗೀತ, ಸಂಜೆ 5.30ಕ್ಕೆ ಅಭಿನಂದನಾ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಗೀತ ಗುರುಗಳಿಗೆ ಗೌರವಾರ್ಪಣೆ ನಡೆಯಲಿದೆ. ರಾತ್ರಿ 7 ಗಂಟೆಗೆ ನಾದ ಝೇಂಕಾರ ಕಾರ್ಯಕ್ರಮದಲ್ಲಿ ವಿದುಷಿ ಸೂರ್ಯಗಾಯತ್ರಿ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಂಗೀತಾಸಕ್ತರಿಗೆ ಉಚಿತ ಪ್ರವೇಶವಿದೆ ಎಂದು ತಿಳಿಸಿದರು.
10 ವರ್ಷಗಳ ಹಿಂದೆ ಉಡುಪಿ ತೆಂಕಪೇಟೆಯ ಶ್ರೀ ಲಕ್ಷಿ ವೆಂಕಟೇಶ ದೇವಳದಲ್ಲಿ 8 ಮಂದಿ ಸಮಾನ ಮನಸ್ಕರಿಂದ ಆರಂಭಗೊಂಡ ಈ ಸಂಸ್ಥೆಯಲ್ಲಿ ಇಂದು 25 ಮಂದಿ ಸದಸ್ಯರಿದ್ದು, ಭಜನೆ, ಸಂಗೀತ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸದಸ್ಯರುಗಳಾದ ಕಾರ್ತಿಕ್ ನಾಯಕ್, ಪ್ರಸಾದ್ ಶೆಣೈ, ಶ್ರೀಶ ಶೆಣೈ ಹಾಗೂ ಸಂದೀಪ್ ನಾಯಕ್ ಉಪಸ್ಥಿತರಿದ್ದರು.
ಕಾರ್ಕಳ : ಸಾಹಿತ್ಯ, ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿ ಅಗಲಿದ ಪತ್ರಕರ್ತ ಡಾ. ಶೇಖರ ಅಜೆಕಾರು ಅವರ ಹೆಸರಿನಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಡಾ ಶೇಖರ ಅಜೆಕಾರು ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಸಾಹಿತ್ಯ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಷರೀಫ್ ತಿಳಿಸಿದರು. ಅವರು ಕಾರ್ಕಳ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರವನ್ನು ನೀಡಿದರು. ಸಾಹಿತ್ಯ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಕನಿಷ್ಠ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಪತ್ರಕರ್ತರು ಯಾ ಸಾಹಿತಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪ್ರಶಸ್ತಿಯು ಹತ್ತು ಸಾವಿರ ಪ್ರಶಸ್ತಿ ನಗದು ಹಾಗೂ ರಜತ ಫಲಕ ಒಳಗೊಂಡಿರುತ್ತದೆ.
ಸ್ವವಿವರ ಹಾಗೂ ಇತ್ತೀಚಿನ ಭಾವಚಿತ್ರವನ್ನೊಳಗೊಂಡ ಅರ್ಜಿಯನ್ನು ಮೊಹಮ್ಮದ್ ಶರೀಫ್ ಅಧ್ಯಕ್ಷರು, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಗ್ಲೆಗುಡ್ಡೆ ಪೋಸ್ಟ್ ಕುಕ್ಕುoದೂರು, ಕಾರ್ಕಳ ತಾಲೂಕು 576117, ಇವರಿಗೆ ಜೂನ್ 21 ತಾರೀಕಿನೊಳಗೆ ಕಳುಹಿಸಿಕೊಡಬಹುದಾಗಿದೆ. ತದನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ 9845846213, 9945857561 ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕಾರ್ಯದರ್ಶಿ ಹರೀಶ್ ಆಚಾರ್ಯ, ಕೋಶಾಧಿಕಾರಿ ಮಹಮ್ಮದ್ ಖಲೀಲ್ ಉಪಸ್ಥಿತರಿದ್ದರು.
ಸರ್ಕಾರಿ ಬಸ್ ದುರಾವಸ್ಥೆಯ ವಿರುದ್ಧ ಎಬಿವಿಪಿ ನೇತೃತ್ವದಲ್ಲಿ ಶಾಸಕ ಗಂಟಿಹೊಳೆ ಪ್ರತಿಭಟನೆ
ಕುಂದಾಪುರ : ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಅನುಷ್ಠಾನದ ಹಿಂದೆ ಬಿದ್ದು ರಾಜ್ಯದ ಹಿತವನ್ನು ಮರೆತಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಅವರು, ಸರ್ಕಾರಿ ಬಸ್ ಅವ್ಯವಸ್ಥೆಯ ವಿರುದ್ಧ ಕುಂದಾಪುರದ ಶಾಸ್ತ್ರಿ ಸರ್ಕಲ್ನಲ್ಲಿ ಕುಂದಾಪುರ ಎಬಿವಿಪಿ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಗಂಟಿಹೊಳೆ ಅವರು, ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ವಿದ್ಯಾರ್ಥಿಗಳು, ಜನಸಾಮಾನ್ಯರು ಹೈರಾಣಾಗಿದ್ದಾರೆ. ವಿದ್ಯಾರ್ಥಿಗಳಿಗೆ ದಿನನಿತ್ಯ ಓಡಾಡಲು ಸರಿಯಾದ ಬಸ್ ವ್ಯವಸ್ಥೆಯನ್ನೂ ಕಲ್ಪಿಸುವಲ್ಲಿ ಸರ್ಕಾರ ಎಡವಿದೆ ಎಂದು ಟೀಕಿಸಿದರು. ವಿದ್ಯಾರ್ಥಿಗಳು ಏನೇ ದೂರು ತೆಗೆದುಕೊಂಡು ಬಂದರೂ, ಅಧಿಕಾರಿಗಳು ಅದಕ್ಕೆ ಸೂಕ್ತವಾಗಿ ಸ್ಪಂದಿಸಬೇಕು, ಅದನ್ನು ಬಿಟ್ಟು ವಿದ್ಯಾರ್ಥಿಗಳಿಗೆ ಗದರುವುದು, ಬೆದರಿಸುವುದು ಇತ್ಯಾದಿಗಳನ್ನು ಮಾಡಿದರೆ ನಾವು ಅದನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧವೂ ಕಿಡಿಕಾರಿದರು.
ಜಿಲ್ಲಾಡಳಿತ ಈ ಕೂಡಲೇ ಕಾರ್ಯ ಪ್ರವೃತ್ತವಾಗಿ ಸರ್ಕಾರಕ್ಕೆ ಸರ್ಕಾರಿ ಬಸ್ ದುರವಸ್ಥೆಯ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಈಗ ಆಗುತ್ತಿರುವ ಅನಾನುಕೂಲವನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆ ವೇಳೆ ಎಡೆಬಿಡದೆ ಮಳೆ ಸುರಿಯುತ್ತಿದ್ದರೂ, ಮಳೆಯನ್ನು ಲೆಕ್ಕಸಿದೆ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ್ದು ವ್ಯಾಪಕ ಮೆಚ್ಚುಗೆಗೂ ಕಾರಣವಾಗಿದೆ.
ಉಡುಪಿ : ಬಿಜೆಪಿಯಿಂದ ಬಂಡಾಯ ನಿಂತಿದ್ದ ಮಾಜಿ ಶಾಸಕರಾದ ರಘುಪತಿ ಭಟ್ ಸೋಲಿನ ನಂತರ ತಮ್ಮ ಹೇಳಿಕೆಯಲ್ಲಿ, “ನನ್ನ ಸ್ಪರ್ಧೆಯಿಂದ ಸಿಟಿ ರವಿಗೆ ನ್ಯಾಯ ಸಿಕ್ಕಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. “ಹಿಂದೂತ್ವ ಮತ್ತು ರಾಷ್ಟ್ರೀಯತೆಗೆ ಈ ಮೂಲಕ ವಿಧಾನ ಪರಿಷತ್ತಿನಲ್ಲಿ ಅವಕಾಶ ಸಿಕ್ಕಿದೆ” ಎಂದು ಅವರು ಹಿನ್ನಲೆ ವಿವರಿಸಿದ್ದಾರೆ.
“ಅವಕಾಶ ವಂಚಿತರಿಗೆ ಈ ಹಿಂದೆ ಪದವಿಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಅವಕಾಶ ಸಿಗುತ್ತಿತ್ತು” ಎಂದ ಭಟ್, “ಈ ಚುನಾವಣೆಯಲ್ಲಿ ನನಗೆ ಸಮಯದ ಕೊರತೆ ಆಯಿತು. ಗೆಲ್ಲುವ ವಿಶ್ವಾಸದಲ್ಲೇ ನಾನು ಸ್ಪರ್ಧಿಸಿದ್ದೆ. ಈ ಮಟ್ಟದ ಸೋಲು ನನಗೆ ಅನಿರೀಕ್ಷಿತ. ಇದು ಮತದಾರರ ನಿರ್ಣಯ, ಅದನ್ನು ಸ್ವೀಕರಿಸಬೇಕು.” ಐದು ಜಿಲ್ಲೆಗಳಿಗೂ ಪ್ರವಾಸ ಮಾಡಿ ಅಭಿನಂದಿಸುವುದಾಗಿ ತಿಳಿಸಿದ ಅವರು, “ಸೋಲಿನಿಂದ ನಾನು ಓಡಿ ಹೋಗುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ತಮ್ಮ ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳನ್ನು ಮುಂದುವರಿಸುವ ಭರವಸೆ ನೀಡಿದ ರಘುಪತಿ ಭಟ್, “ಕಾರ್ಯಕರ್ತರ ಧ್ವನಿಯಾಗಿ ಇರ್ತೇನೆ,” ಮತ್ತು “ಪಕ್ಷವನ್ನು ಎದುರು ಹಾಕಿಕೊಂಡು ನಿಂತಿದ್ದೇನೆ,” ಎಂದರು. “ನನ್ನ ಜೊತೆ ಬಂದವರ ಪರ ಇರೋದು ನನ್ನ ಜವಾಬ್ದಾರಿ” ಎಂದು ಹೇಳಿದರು.
“ಎಚ್ಚರಿಸುವ ಕೆಲಸ ಆಗಬೇಕಿತ್ತು, ಅದನ್ನು ಮಾಡಿದ್ದೇನೆ,” ಮತ್ತು “ಸಾಮಾಜಿಕ ರಾಜಕೀಯ ಜೀವನದಿಂದ ಹಿಂದೆ ಸರಿಯುವುದಿಲ್ಲ,” ಎಂದು ಭರವಸೆ ನೀಡಿದ ರಘುಪತಿ ಭಟ್, “ನನ್ನ ಮನೆ ಸದಾ ನೊಂದವರಿಗೆ, ಸಮಸ್ಯೆ ಇರುವವರಿಗೆ ತೆರೆದಿರುತ್ತದೆ,” ಎಂದು ತಿಳಿಸಿದರು.
ಉಡುಪಿ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಬೈಂದೂರು ತಾಲೂಕು ಯಡ್ತರೆ ಸಮೀಪದ ರಾಹುತನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಲಾವೃತವಾಗಿದೆ.
ತರಗತಿ ಕೋಣೆಗಳಿಗೆ ನೀರು ನುಗ್ಗಿದ ಪರಿಣಾಮ ಶಾಲಾ ಮಕ್ಕಳಿಗೆ ಇಂದು ರಜೆ ಘೋಷಿಸಲಾಗಿದೆ.
ಶಾಲೆ ಸಮೀಪ ಸಮರ್ಪಕವಾದ ಚರಂಡಿ ವ್ಯವಸ್ಥೆಗಳಿಲ್ಲದೆ, ರಾಷ್ಟ್ರೀಯ ಹೆದ್ದಾರಿಯಿಂದ ಹರಿದ ನೀರು ನೇರವಾಗಿ ಶಾಲೆಗೆ ನುಗ್ಗಿದೆ.
ಕಳೆದ ಹಲವು ವರ್ಷಗಳಿಂದ ಮಳೆಗಾಲದ ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡದಿರುವುದರಿಂದ ಇಲಾಖೆ ವಿರುದ್ಧ ಆಕ್ರೋಶ ಹೆಚ್ಚಾಗಿದೆ.
ಮುಂದೆ ಬರುವ ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರಿಗೆ ಆತಂಕ ಹೆಚ್ಚಿದೆ. ಕನ್ನಡ ಶಾಲೆಯ ಅಭಿವೃದ್ದಿಗೆ ನಿಷ್ಕಾಳಜಿ ತೋರುತ್ತಿರುವ ಬಗ್ಗೆ ಪಾಲಕರು ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಪೆ ಕೆಸರಲ್ಲಿ ಹೂತು ಹೋಗಿದ್ದ 2 ಲಕ್ಷ ಮೌಲ್ಯದ ಚಿನ್ನದ ಬಳೆಯನ್ನು ಹುಡುಕಿ ಕೊಟ್ಟ ಈಶ್ವರ್ ಮಲ್ಪೆ
ಮಲ್ಪೆ : ಮಲ್ಪೆಯ ಆಪದ್ಭಾಂಧವ ಎಂದೇ ಕರೆಸಿಕೊಳ್ಳುವ ಈಶ್ವರ್ ಮಲ್ಪೆ ಈ ಭಾಗದಲ್ಲಿ ಹಲವು ಜನೋಪಯೋಗಿ ಸೇವೆಗೆ ಪ್ರಸಿದ್ಧರು. ನೀರಲ್ಲಿ ಬಿದ್ದವರನ್ನು ರಕ್ಷಣೆ ಮಾಡುವುದು, ನೀರಲ್ಲಿ ಮುಳುಗಿ ಮೃತಪಟ್ಟ ಹೆಣ ಮೇಲೆತ್ತುವುದು ಇವರಿಗೆ ಚಿಟಿಕೆ ಹೊಡೆದಷ್ಟೇ ಸುಲಭದ ಕೆಲಸ. ಅದೇ ರೀತಿ ನೀರಲ್ಲಿ ಬಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನೂ ಇವರು ಹುಡುಕಿ ಕೊಟ್ಟು ಶಹಬ್ಬಾಶ್ ಗಿಟ್ಟಿಸೊಕೊಂಡವರು.
ಮಲ್ಪೆಗೆ ಸ್ನೇಹಿತರ ಜೊತೆ ಬಂದಿದ್ದ ಪ್ರವೀಣ್ ಎಂಬ ಯುವಕನ ಎರಡು ಲಕ್ಷ ಮೌಲ್ಯದ ಚಿನ್ನದ ಬಳೆ ಮಲ್ಪೆ ಬಂದರಿನ ನೀರಿನಲ್ಲಿ ಕಳೆದುಹೋಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಈಶ್ವರ್ ಮಲ್ಪೆ ನೀರಿನಾಳಕ್ಕೆ ತೆರಳಿ ಕೆಸರಲ್ಲಿ ಹೂತು ಹೋಗಿದ್ದ ಚಿನ್ನದ ಬಳೆಯನ್ನು ಕ್ಷಣಾರ್ಧದಲ್ಲಿ ಹುಡುಕಿ ಕೊಟ್ಟಿದ್ದಾರೆ. ಈಶ್ವರ್ ಅವರ ಈ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು.