Udupi
ತಾಲೂಕು ಕಚೇರಿ ಲಿಫ್ಟ್ ಬಂದ್; ಅರ್ಧ ಗಂಟೆ ಲಿಫ್ಟ್ನೊಳಗೇ ಪರದಾಡಿದ ಸಾರ್ವಜನಿಕರು
ಉಡುಪಿ : ವಿದ್ಯುತ್ ಸಂಪರ್ಕ ಕಡಿತಗೊಂಡು ನಾಲ್ಕು ಮಂದಿ ಲಿಫ್ಟ್ನಲ್ಲೇ ಸಿಲುಕಿದ ಘಟನೆ ಗುರುವಾರ ಬೆಳಗ್ಗೆ ಬನ್ನಂಜೆಯಲ್ಲಿರುವ ಉಡುಪಿ ತಾಲೂಕು ಕಚೇರಿಯಲ್ಲಿ ನಡೆದಿದೆ.
ತಾಲೂಕು ಕಚೇರಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಕಾರಣ ನಾಲ್ಕು ಮಂದಿ ಲಿಫ್ಟ್ನಲ್ಲಿ ಸಿಲುಕಿ ಅರ್ಧಗಂಟೆ ಸಾರ್ವಜನಿಕರು ಪರದಾಡಿದ್ದಾರೆ.
ಜನರೇಟರಿನಲ್ಲಿ ಇಂಧನವಿಲ್ಲದೆ ಲಿಫ್ಟ್ ಕಾರ್ಯಾಚರಣೆ ಸ್ಥಗಿತಗೊಂಡಿದೆ. ತಾಲೂಕು ಕಚೇರಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ : ಚಲಿಸುತ್ತಿದ್ದ ಶಾಲಾ ಬಸ್ನಲ್ಲೇ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದ ಖಾಸಗಿ ಶಾಲಾ ಬಸ್ ಚಾಲಕ ಇಂದು ಮುಂಜಾನೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮೃತ ಶಾಲಾ ಬಸ್ ಚಾಲಕನನ್ನು ಪೇತ್ರಿ ನಿವಾಸಿ ಆಲ್ವಿನ್ ಡಿ’ಸೋಜಾ (53) ಎಂದು ಗುರುತಿಸಲಾಗಿದೆ.
ಆಲ್ವಿನ್ ಡಿ’ಸೋಜಾ ಬ್ರಹ್ಮಾವರದ ಖಾಸಗಿ ಶಾಲೆಯಿಂದ ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲದತ್ತ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರಿಗೆ ಲಘು ಹೃದಯಾಘಾತವಾಗಿತ್ತು. ಅವರು ಇಂದು ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಗಾಂಜಾ ಸಂಗ್ರಹ – ಕೇರಳ ವಿದ್ಯಾರ್ಥಿ ಪೊಲೀಸ್ ವಶಕ್ಕೆ
ಮಣಿಪಾಲ : ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಅಪಾರ್ಟ್ಮೆಂಟ್ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಪಾರ್ಟ್ಮೆಂಟ್ ರೂಮ್ ಮೇಲೆ ದಾಳಿ ಮಾಡಿ, ರೂಮ್ನಲ್ಲಿದ್ದ ಕೇರಳ ತಿರುವನಂತಪುರದ ಸಿದ್ದಾರ್ಥ್ (22) ಎಂಬಾತನನ್ನು ವಶಕ್ಕೆ ಪಡೆದು ಆತನಿಂದ 20,000 ರೂ. ಮೌಲ್ಯದ ಸುಮಾರು 388 ಗ್ರಾಂ ಗಾಂಜಾ ಹಾಗೂ 45,000 ರೂ. ಮೌಲ್ಯದ ಮೊಬೈಲ್ ಫೋನ್ನ್ನು ಜಪ್ತಿ ಮಾಡಲಾಗಿದೆ. ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಈ ಗಾಂಜಾವನ್ನು ವಿದ್ಯಾರ್ಥಿ ಶೇಖರಿಸಿಟ್ಟಿರುವುದು ತನಿಖೆಯಿಂದ ಕಂಡು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 134/2024 ಕಲಂ: 20(ಬಿ) NDPS Actರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ತನಿಖೆಯಲ್ಲಿರುತ್ತದೆ.
ಮಣಿಪಾಲ ಠಾಣೆ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ.ವಿ ರವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಕೊಲ್ಲೂರು : ಕೃಷ್ಣನಗರಿ ಉಡುಪಿ ಜಿಲ್ಲೆಯ ಪ್ರವಾಸದಲ್ಲಿರುವ ಗೃಹ ಸಚಿವ ಜಿ.ಪರಮೇಶ್ವರ್ ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಳದ ಪ್ರಧಾನ ಅರ್ಚಕ ನರಸಿಂಹ ಅಡಿಗ ಮತ್ತು ಸುಬ್ರಹ್ಮಣ್ಯ ಅಡಿಗ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಸಹಾಯಕ ಕಾರ್ಯನಿರ್ವಣಾಧಿಕಾರಿ ಪುಷ್ಪಲತಾ ಅವರು ಗೃಹಸಚಿವರಿಗೆ ದೇವಿಯ ಪ್ರಸಾದ ನೀಡಿ ಗೌರವಿಸಿದರು.
ಈ ವೇಳೆ ಬೈಂದೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರವಿಂದ ಪೂಜಾರಿ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಕಾಂಗ್ರೆಸ್ ಮುಖಂಡ ರಮೇಶ್ ಗಾಣಿಗ, ಮುನಿಯಾಲು ಉದಯಕುಮಾರ್ ಶೆಟ್ಟಿ ಮತ್ತಿತರರು ಸಚಿವರ ಜತೆಗಿದ್ದರು.
ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎಬಿವಿಪಿ ರಾಷ್ಟ್ರಾದ್ಯಂತ ಕೈಗೊಳ್ಳುತ್ತಿರುವ ಆಕ್ಸಿಜನ್ ಚಾಲೆಂಜ್ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧ ಹಾಸ್ಟೆಲ್ಗಳಲ್ಲಿ ವಿಶೇಷವಾಗಿ ಆಚರಿಸಲಾಯಿತು.
ಕೋವಿಡ್-19 ದೇಶಾದ್ಯಂತ ವ್ಯಾಪಕವಾದ ಸಂದರ್ಭದಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆಯನ್ನು ಕಂಡಿರುತ್ತೇವೆ ಮತ್ತು ಅದರ ಮಹತ್ವವನ್ನು ಸ್ಪಷ್ಟವಾಗಿ ಮನಗಂಡಿರುತ್ತೇವೆ. ಆ ಒಂದು ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು ತಮ್ಮ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ಸಿಜನ್ ಚಾಲೆಂಜ್ ಅಭಿಯಾನವನ್ನು ಕೈಗೊಂಡಿದ್ದರು. ಒಬ್ಬ ವಿದ್ಯಾರ್ಥಿ ಗಿಡವನ್ನು ನೆಟ್ಟು ಮತ್ತೊಬ್ಬನಿಗೆ ಪ್ರೇರೇಪಿಸಿ ಕೈಗೊಂಡಂತಹ ವಿಶಿಷ್ಟ ಅಭಿಯಾನವನ್ನು ಇಂದಿಗೂ ಎಬಿವಿಪಿ ದೇಶಾದ್ಯಂತ ಮುಂದುವರೆಸಿಕೊಂಡು ಬಂದಿದೆ.
ಎಬಿವಿಪಿ ಉಡುಪಿ ವತಿಯಿಂದ ಬಲೈಪಾದೆ, ಮಂಚಿ, ಹಿರಿಯಡ್ಕ, ಹೆಬ್ರಿ, ಬನ್ನಂಜೆ ಸೇರಿದಂತೆ ಅನೇಕ ಹಾಸ್ಟೆಲ್ಗಳಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು. ವಿವಿಧ ಕಡೆಗಳಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ, ತಾಲೂಕು ಸಂಚಾಲಕ ಅಜಿತ್ ಜೋಗಿ, ನಗರ ಕಾರ್ಯದರ್ಶಿ ಶ್ರೀವತ್ಸ, ಸಹ ಕಾರ್ಯದರ್ಶಿ ಕಾರ್ತಿಕ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸಂಹಿತಾ, ಮತ್ತು ಪ್ರಮುಖರಾದ ನವೀನ್, ಸ್ವಸ್ತಿಕ್, ಮನು, ಅನಂತಕೃಷ್ಣ, ಪ್ರಶ್ಮಾ, ರಕ್ಷಿತಾ ಸೇರಿದಂತೆ ಹಲವಾರು ಭಾಗವಹಿಸಿದರು.
ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ – 2024 ಸುಮಿತ್ ಮೇತ್ರಿ ಹಾಗೂ ಜಯಶ್ರೀ ಕದ್ರಿ ಆಯ್ಕೆ
ಉಡುಪಿ : ವಿಶ್ವ ಭಾರತ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಪ್ರಾಯೋಜಿತ ಕವಿ ದಿ| ಕುರಾಡಿ ಸೀತಾರಾಮ ಅಡಿಗರ ನೆನಪಿನ ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ಗಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಸಂಸ್ಥೆಯು 2023ರಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಕಟಣೆಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಿತ್ತು.
ವಿಜಯಪುರದ ಸುಮಿತ್ ಮೇತ್ರಿಯವರ ‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ಹಾಗೂ ಮಂಗಳೂರಿನ ಜಯಶ್ರೀ ಬಿ. ಕದ್ರಿ ‘ಕೇಳಿಸದ ಸದ್ದುಗಳು’ ಕೃತಿಗಳು ಆಯ್ಕೆಯಾಗಿರುತ್ತವೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕರಾದ ರವಿರಾಜ್ ಎಚ್. ಪಿ. ತಿಳಿಸಿದರು.
ಪ್ರಶಸ್ತಿಗೆ 42 ಕೃತಿಗಳು ಬಂದಿದ್ದು, ಕನ್ನಡ ಸಾಹಿತ್ಯ ಲೋಕದ ಹಿರಿಯ ವಿಮರ್ಶಕರಾದ ಬೆಂಗಳೂರಿನ ಪ್ರೊ. ಎಚ್. ದಂಡಪ್ಪ ಹಾಗೂ ಉಡುಪಿಯ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡ್ಕ ಅವರು ತೀರ್ಪುಗಾರರಾಗಿ ಸಹಕರಿಸಿದ್ದರು.
ಪ್ರಶಸ್ತಿಯು ರೂಪಾಯಿ 10,000 ಗೌರವ ನಗದಿನೊಂದಿಗೆ ಪ್ರಶಸ್ತಿಪತ್ರ ಹಾಗೂ ಫಲಕವನ್ನು ಒಳಗೊಂಡಿದ್ದು ಇಬ್ಬರಿಗೆ ಹಂಚಿಹೋಗಿವೆ. ಆಗಸ್ಟ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ನಡೆಸಲಾಗುವುದು ಎಂದು ಪ್ರಶಸ್ತಿ ಸಮಿತಿಯ ಸಂಚಾಲಕಿ ಪೂರ್ಣಿಮಾ ಜನಾರ್ದನ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿರುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಉಡುಪಿ ವಿಶ್ವನಾಥ ಶೆಣೆೈ, ಅಧ್ಯಕ್ಷರಾದ ಪ್ರೊಫೆಸರ್ ಶಂಕರ್ ಹಾಗೂ ವಿಶ್ವ ಭಾರತ ಕರ್ನಾಟಕ ಪ್ರತಿಷ್ಠಾನದ ನಿರ್ದೇಶಕರಾದ ನಾರಾಯಣ ಮಡಿ ಉಪಸ್ಥಿತರಿದ್ದರು.
ಉಡುಪಿ : ಜಿಲ್ಲೆಯ ಕೆದೂರಿನ ಆವರಣವಿಲ್ಲದ ಬಾವಿಗೆ ಬಿದ್ದ ಜಿಂಕೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ರಕ್ಷಿಸಿದ್ದಾರೆ.
ಅರಣ್ಯ ಪ್ರದೇಶದಿಂದ ಬಂದ ಜಿಂಕೆ, ರಾತ್ರಿ ವೇಳೆ 25 ಅಡಿ ಆಳದ ಬಾವಿಗೆ ಬಿದ್ದಿತ್ತು. ಬೆಳಗಿನ ಜಾವ ಜಿಂಕೆಯ ಬಾವಿಗೆ ಬಿದ್ದ ವಿಷಯವನ್ನು ಸ್ಥಳೀಯರು ಗಮನಿಸಿದ ಬಳಿಕ ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ಬಾವಿಯಲ್ಲಿದ್ದ ಜಿಂಕೆಯನ್ನು ಸುರಕ್ಷಿತವಾಗಿ ರಕ್ಷಿಸಿ ಅದನ್ನು ಅರಣ್ಯಕ್ಕೆ ಬಿಡುಗಡೆ ಮಾಡಿದರು.
ಉಡುಪಿ : ವಿಶ್ವ ಪರಿಸರ ದಿನಾಚಾರಣೆಯನ್ನು ಮಲಬಾರ್ ಗೋಲ್ಡ್ & ಡೈಮಂಡ್ಸ್ನಲ್ಲಿ ವಿಶೇಷವಾಗಿ ಹಾಗೂ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಉಡುಪಿ ಮಲಬಾರ್ ಗೋಲ್ಡ್ & ಡೈಮಂಡ್ಸ್ಗೆ ಬರುವ ಗ್ರಾಹಕರಿಗೆ ಗಿಡ ನೀಡುವ ಮೂಲಕ ವಿಶ್ವ ಪರಿಸರ ದಿನಾಚಾರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಗಿಡ ಸ್ವೀಕರಿಸಿದ ಗ್ರಾಹಕರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ಮುಸ್ತಫಾ ಎ.ಕೆ, ರಾಘವೇಂದ್ರ ನಾಯಕ್, ತಂಝೀಮ್ ಶಿರ್ವ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.