ಉಡುಪಿ : ಆಯುಧ ಪೂಜೆಯ ಪ್ರಯುಕ್ತ ಅಕ್ಟೋಬರ್ 11 ರಂದು ನಗರ ಸಭೆಯ ಕಸ ಸಂಗ್ರಹಣೆ ಹಾಗೂ ಸಾಗಾಣಿಕೆ ವಾಹನಗಳ ಪೂಜೆ ಇರುವುದರಿಂದ ಸದರಿ ದಿನದಂದು ನಗರಸಭಾ ವ್ಯಾಪ್ತಿಯ ಮನೆ ಮನೆ ಕಸ ಸಂಗ್ರಹಣೆ ಇರುವುದಿಲ್ಲ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
Udupi
ಯುವ ಜನರು ಸ್ವಯಂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು : ವಾರ್ತಾಧಿಕಾರಿ ಮಂಜುನಾಥ್ ಬಿ
ಉಡುಪಿ : ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಎನ್.ಎಸ್.ಎಸ್ ನಂತಹ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರೊಂದಿಗೆ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಕರೆ ನೀಡಿದರು.
ಅವರು ಮಲ್ಪೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ ಇವರ ವತಿಯಿಂದ ಆಯೋಜಿಸಿದ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಪಠ್ಯದ ಚಟುವಟಿಕೆಗಳ ಜೊತೆಗೆ ಇತರೆ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದರೊಂದಿಗೆ ಸಮುದಾಯದ ಸಮಸ್ಯೆಗಳನ್ನು ಅರಿತು ಸಹಾಯ ಮಾಡಲು ಮುಂದಾಗಬೇಕು. ಸಮಸ್ಯೆಗಳನ್ನು ಪರಿಹರಿಸುವುದರಿಂದ ಕೌಶಲ್ಯ ಹಾಗೂ ಜ್ಞಾನ ಬೆಳೆಯುತ್ತದೆ ಎಂದರು.
ಯುವಜನರು ಸ್ವಯಂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂಬುದು ಮಹಾತ್ಮಾ ಗಾಂಧೀಜಿಯವರ ಆಶಯವಾಗಿತ್ತು. ಸರಕಾರ ಶಿಕ್ಷಣದೊಂದಿಗೆ ಸೇವಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಎನ್.ಎಸ್.ಎಸ್ ಶಿಬಿರಗಳನ್ನು ಆಯೋಜಿಸಿದೆ. ಇದು ವಿದ್ಯಾರ್ಥಿಗಳ ಜೀವನದಲ್ಲಿ ನಾಯಕತ್ವ, ಶಿಸ್ತಿನ ಜತೆಗೆ ಸಾರ್ವತ್ರಿಕ ಪ್ರಜ್ಞೆಯನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್ ಮಾತನಾಡಿ, ಶಿಬಿರಗಳು ಅವಕಾಶಗಳ ವೇದಿಕೆಯಾಗಿದೆ, ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡ ವಿದ್ಯಾರ್ಥಿಗಳು ಸಮಾಜ ಸೇವಕರಾಗಿ ಪರಿವರ್ತನೆಗೊಂಡು ಉತ್ತಮ ಕಾರ್ಯಗಳನ್ನು ಮಾಡುವುದರೊಂದಿಗೆ ಸಮಾಜದ ಏಳಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದರು.
ಯುವ ಶಕ್ತಿ ಸಾಮರ್ಥ್ಯವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳುವ ಮೂಲಕ ಯುವಜನರಲ್ಲಿ ಸಮುದಾಯ ಸೇವೆಯ ಉತ್ಸಾಹವನ್ನು ಮೂಡಿಸುವುದರೊಂದಿಗೆ ಅರ್ಥಪೂರ್ಣವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಸೇವೆಯಲ್ಲಿ ಸ್ವಾರ್ಥವಿರಬಾರದು. ಸಮಯಪ್ರಜ್ಞೆಯನ್ನು ಮೈಗೂಡಿಸಿಕೊಂಡಾಗ ಯಶಸ್ಸು ನಮ್ಮದಾಗುತ್ತದೆ ಎಂದರು.
ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಮುಖ್ಯೋಪಾಧ್ಯಾಯಿನಿ ಸಂಧ್ಯಾ ಮಾತನಾಡಿ, ಎನ್.ಎಸ್.ಎಸ್ ಶಿಬಿರದಲ್ಲಿ ವಿದ್ಯಾರ್ಥಿನಿಯರು ಪಡೆದ ಅನುಭವಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಹಾಗೂ ಉತ್ತಮವಾಗಿ ಶಿಬಿರದಲ್ಲಿ ಭಾಗವಹಿಸಿದವರಿಗೆ ಬಹುಮಾನವನ್ನು ನೀಡಲಾಯಿತು.
ಕಾಲೇಜಿನ ಶಿಕ್ಷಣ ಸೇವಾ ಸಮಿತಿಯ ಖಜಾಂಜಿ ಶೇಖರ್ ಕೋಟ್ಯಾನ್, ಮಲ್ಪೆಯ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯ ಸದಾನಂದ ಸಾಲ್ಯಾನ್, ಖಜಾಂಜಿ ಚಂದ್ರಶೇಖರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಯಾನಂದ, ಶಿಕ್ಷಣ ತಜ್ಞ ವಿಶ್ವನಾಥ ಬಾಯರಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವರ್ಗೀಸ್ ಪಿ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ) ವಿಭಾಗದ ಮುಖ್ಯೋಪಾಧ್ಯಾಯಿನಿ ಇಂದಿರಾ, ಉಪನ್ಯಾಸಕರುಗಳು, ಶಿಬಿರದ ನಾಯಕಿ ಸಹನಾ ಶಿಬಿರಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಶುಭಗೀತಾ ಸ್ವಾಗತಿಸಿ, ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಉಪನ್ಯಾಸಕಿ ಭವ್ಯಾ ಧನ್ಯವಾದ ಸಮರ್ಪಿಸಿದರು.
ಕುಂದಾಪುರ : ಕುಂದಗನ್ನಡ ಸಮೃದ್ಧವಾದ ಭಾಷೆ. ಈ ಭಾಷೆಯೊಂದಿಗೆ ಬೆಸೆದುಕೊಂಡ ಸಂಸ್ಕೃತಿ ಉಳಿಯುವಂತಾಗಬೇಕಾದರೆ ಶಾಲಾ-ಕಾಲೇಜುಗಳ ಪಠ್ಯಕ್ರಮದಲ್ಲಿಯೂ ಈ ಭಾಷೆಯನ್ನು ಅಳವಡಿಸುವಂತಾಗಬೇಕು ಮತ್ತು ಭಾಷೆಯನ್ನು ಬಳಸಿದಾಗ ಮಾತ್ರ ಅದು ಉಳಿಯಲು ಸಾಧ್ಯ ಎಂದು ಕುಂದಾಪುರದ ಹಿರಿಯ ನ್ಯಾಯವಾದಿಗಳು ಹಾಗೂ ಸಾಂಸ್ಕೃತಿಕ ಚಿಂತಕರಾದ ಶ್ರೀ ಎ.ಎಸ್.ಎನ್. ಹೆಬ್ಬಾರ್ ಹೇಳಿದರು.
ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕುಂದಗನ್ನಡ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಕುಂದಗನ್ನಡ ಭಾಷೆಯ ಅನನ್ಯತೆ ಮತ್ತು ಇಲ್ಲಿನ ಸಂಸ್ಕೃತಿಯ ಅಸ್ಮಿತೆಯನ್ನು ಉಳಿಸುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯ ಎಂದರು.
ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಕುಂದಗನ್ನಡ ಸಂಘದ ಸಂಯೋಜಕರಾದ ಶ್ರೀಮತಿ ರೇಷ್ಮಾ ಶೆಟ್ಟಿ ಮತ್ತು ಶ್ರೀಮತಿ ಪ್ರವೀಣಾ ಮಹಾಬಲ ಪೂಜಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಶ್ಮಿತಾ ಸ್ವಾಗತಿಸಿ, ವಿಸ್ಮಿತಾ ಅತಿಥಿಗಳನ್ನು ಪರಿಚಯಿಸಿ, ಗಗನ್ ವಂದಿಸಿ, ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.
ಕೋಟ : ಕೋಟೇಶ್ವರ ಶ್ರೀ ಕಾಳಾವರ ವರದರಾಜ್ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ರಸ್ತೆ ಸಂಚಾರಕ್ಕೆ ಸುರಕ್ಷಿತ ಕ್ರಮಕ್ಕಾಗಿ ಮನವಿ ಸಲ್ಲಿಸಲಾಯಿತು.
ಇತ್ತೀಚಿಗೆ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಬಿ.ಎಸ್ಸಿ ತರಗತಿ ವಿದ್ಯಾರ್ಥಿ ಧನುಷ್ ಯು ಅಮೀನ್ ತನ್ನಲ್ಲದ ತಪ್ಪಿಗೆ ಅಮಾಯಕವಾಗಿ ರಸ್ತೆ ಅಪಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದರು.
ಕೋಟೇಶ್ವರ ಹಾಲಾಡಿ ರಾಜ್ಯ ಹೆದ್ದಾರಿಯಲ್ಲಿ ತುರ್ತಾಗಿ ಸೂಕ್ತ ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕು ಮತ್ತು ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆ ಮಾಡುವ ಚಾಲಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್. ನಾಯಕ್ ಅವರ ನೇತೃತ್ವದಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ನಿಯೋಗ ಉಡುಪಿ ಜಿಲ್ಲಾಧಿಕಾರಿಗಳು, ಕುಂದಾಪುರ ತಹಸಿಲ್ದಾರ್, ಕುಂದಾಪುರ ಪೋಲೀಸ್ ನಿರೀಕ್ಷಕರು, ಕುಂದಾಪುರ ಸಂಚಾರಿ ಪೋಲೀಸ್ ಠಾಣಾಧಿಕಾರಿ ಮತ್ತು ಗ್ರಾಮ ಪಂಚಾಯತ್ ಕೋಟೇಶ್ವರ ಇವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
2024ರ ದಸರಾ ಸಿಎಂ ಕಪ್ ಬಾಕ್ಸಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದ ಕುಮಾರಿ ಅನುಶ್ರೀ ನಾಯ್ಕ್
ಮಣಿಪಾಲ : ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಪ್ರತಿಷ್ಠಿತ ರಾಜ್ಯಮಟ್ಟದ ದಸರಾ ಸಿಎಂ ಕಪ್ 2024ರಲ್ಲಿ 52-54 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನರ್ಸ್ ಪ್ರಾಕ್ಟೀಷನರ್ ಕುಮಾರಿ ಅನುಶ್ರೀ ನಾಯ್ಕ್ ಅವರು ತಮ್ಮ ಅದ್ಭುತ ಬಾಕ್ಸಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.
ಬಾಕ್ಸಿಂಗ್ನಲ್ಲಿ ಸತತವಾಗಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ಅನುಶ್ರೀ, ಈ ಹಿಂದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಅವರ ಇತ್ತೀಚಿನ ಸಾಧನೆಯನ್ನು ಗುರುತಿಸಿ, ಕಸ್ತೂರ್ಬಾ ಆಸ್ಪತ್ರೆಯು ಅನುಶ್ರೀ ಅವರನ್ನು ಅಭಿನಂದಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರು ಅನುಶ್ರೀ ಅವರಿಗೆ ಬಾಕ್ಸಿಂಗ್ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವಿದೆ, ಅವರ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ, ಅವರು ಇನ್ನೂ ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರ ಎರಡಕ್ಕೂ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.

ಉಡುಪಿ : ಖ್ಯಾತ ಉದ್ಯಮಿ ರತನ್ ಟಾಟಾ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ದೂರದೃಷ್ಟಿಯ ಮೂಲಕ ಉದ್ಯಮ ಜಗತ್ತನ್ನು ಆಳಿದ ರತನ್ ಟಾಟಾ, ಇಡೀ ದೇಶಕ್ಕೆ ಸ್ಫೂರ್ತಿಯಾಗಿದ್ದರು. ದೇಶದ ಇತಿಹಾಸದಲ್ಲಿ ಶಾಶ್ವತವಾಗಿ ತಮ್ಮ ಹೆಸರು ಉಳಿಯುವಂತೆ ಮಾಡಿದ್ದಾರೆ ಎಂದು ಹೆಬ್ಬಾಳಕರ್ ಸ್ಮರಿಸಿದ್ದಾರೆ.
ಭಾರತದ ಅಸ್ಮಿತೆ ಬೆಳೆಸಲು ಟಾಟಾ ಅವರ ಪಾತ್ರ ಅತ್ಯಂತ ದೊಡ್ಡದು. ಯುವ ಉದ್ಯಮಿಗಳಿಗೆ ಅವರು ದೊಡ್ಡ ಆದರ್ಶ. ಅವರ ನಿಧನದಿಂದ ದೇಶಕ್ಕೆ ಅಪಾರ ನಷ್ಟವಾಗಿದೆ. ಕೇವಲ ಉದ್ಯಮಿಯಾಗಿ ಮಾತ್ರವಲ್ಲ, ಅವರ ಟ್ರಸ್ಟ್ಗಳ ಮೂಲಕ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ. ಅವರು ತಮ್ಮ ಸರಳತೆ ಹಾಗೂ ಪರೋಪಕಾರಕ್ಕಾಗಿ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಕುಟುಂಬಕ್ಕೆ ಮತ್ತು ಟಾಟಾ ಸಮೂಹಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.
ಉಡುಪಿ : ದೇಶದ ದಿಗ್ಗಜ ಉದ್ಯಮಿ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ಭಾರತದ ಮುಂಚೂಣಿ ಉದ್ಯಮಿಯಾಗಿದ್ದ ಅವರು ಸರಳತೆಗೆ ಹೆಸರುವಾಸಿಯಾಗಿದ್ದರು. ಸದಾ ಮಾಮೂಲಿ ದಿರಿಸು ತೊಡುವುದರ ಜೊತೆ ತಾನೊಬ್ಬ ಆಟೊಮೊಬೈಲ್ ಉದ್ಯಮಿಯಾಗಿದ್ದರೂ ಮಾಮೂಲಿ ಕಾರುಗಳಲ್ಲೇ ಓಡಾಡುತ್ತಿದ್ದರು. ಇಂತಹ ಉದ್ಯಮಿ ಉಡುಪಿ ಜೊತೆಗೆ ನಂಟು ಹೊಂದಿದ್ದರು.
ಇವತ್ತಿನ ಪರ್ಯಾಯ ಪುತ್ತಿಗೆ ಮಠಾಧೀಶರ ಆಹ್ವಾನದ ಮೇರೆಗೆ ಅವರು ಕೆಲವು ವರ್ಷಗಳ ಹಿಂದೆ ಉಡುಪಿಗೆ ಆಗಮಿಸಿದ್ದರು.
ಉಡುಪಿ ಸಮೀಪದ ಪುತ್ತಿಗೆ ಮಠದ ಮೂಲ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಹಿರಿಯ ಉದ್ಯಮಿ ಅಲ್ಲಿ ಕೆಲವು ಹೊತ್ತು ಕಳೆದಿದ್ದರು. ಇವರ ಆಗಮನದ ನಿರೀಕ್ಷೆಯಲ್ಲಿ ಸಾಕಷ್ಟು ಜನರು ಹಿರಿಯಡ್ಕ ಮೂಲಮಠದಲ್ಲಿ ಸೇರಿದ್ದರು. ಟಾಟಾ ಗತ್ತು ನೋಡಲು ಸೇರಿದ ಜನರಿಗೆ ಅವರ ಆಗಮನ ಕಂಡು ಆಶ್ಚರ್ಯ ಕಾದಿತ್ತು. ಯಾಕೆಂದರೆ ದೇಶದ ಶ್ರೀಮಂತ ಉದ್ಯಮಿಯಾಗಿದ್ದರೂ ಅತ್ಯಂತ ಸರಳ ರೀತಿಯಲ್ಲಿ ಬಂದು ಗ್ರಾಮೀಣ ಪರಿಸರದ ಮಠದಲ್ಲಿ ಸಮಯ ಕಳೆದಿದ್ದರು. ಮಠದಲ್ಲಿ ಮಾಮೂಲಿ ಜನರಂತೆಯೇ ಕಾಲ ಕಳೆದಿದ್ದರು.
ರತನ್ ಟಾಟಾ ಅಗಲಿಕೆ ವಿಷಯ ತಿಳಿದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ದೇಶ ಮೊದಲು ಎಂಬ ತತ್ವ ರತನ್ ಟಾಟಾ ಅವರದ್ದು. ಆದರ್ಶಮಯ ಜೀವನ ನಡೆಸಿದ ಅವರು ಮಠಕ್ಕೆ ಆಗಮಿಸಿ, ದೇವರ ದರ್ಶನ ಪಡೆದಿದ್ದರು.
ಭಗವದ್ಗೀತೆ ಬಗ್ಗೆ ತಮಗಿರುವ ಆದರ ವ್ಯಕ್ತಪಡಿಸಿದ್ದರು. ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರು ಅವರ ಆತ್ಮಕ್ಕೆ ಸದ್ಗತಿ ಕೊಡಲಿ ಎಂದು ಶ್ರೀಗಳು ತಮ್ಮ ಸಂತಾಪ ಸೂಚಿಸಿದ್ದಾರೆ.
ಕುಂದಾಪುರ : ರೈಲು ಡಿಕ್ಕಿಯಾಗಿ ಚಿರತೆಯೊಂದು ಸಾವನ್ನಪ್ಪಿದ ಘಟನೆ ನಾಡ ಗ್ರಾಮದ ಬಡಾಕೆರೆಯ ಸೌಪರ್ಣಿಕ ನದಿಗೆ ನಿರ್ಮಿಸಲಾದ ರೈಲ್ವೇ ಮೇಲ್ಸೇತುವೆಯಲ್ಲಿ ಸಂಭವಿಸಿದೆ.

ಸುಮಾರು 5 ವರ್ಷದ ಗಂಡು ಚಿರತೆಯು ಅರಣ್ಯದಿಂದ ಆಹಾರ ಅರಸಿಕೊಂಡು ಬಂದು ರೈಲ್ವೆ ಹಳಿ ದಾಟುವಾಗ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಕುಂದಾಪುರ ವಲಯ ಅರಣ್ಯಾಧಿಕಾರಿ ಹಾಗೂ ಸಿಬಂದಿ ಚಿರತೆಯ ಕಳೇಬರ ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಬಳಿಕ ಚಿರತೆಯ ಕಳೇಬರವನ್ನು ದಹನ ಮಾಡಲಾಯಿತು.
ಉಡುಪಿ : ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದಲ್ಲಿ, ಅಪರೂಪದ ಕಾರ್ಯಕ್ರಮ ನಡೆಯಿತು. ಏಕಕಾಲದಲ್ಲಿ 101 ಮಂದಿ ಕಲಾವಿದರು ಸಾಮೂಹಿಕವಾಗಿ ವೀಣೆ ನುಡಿಸುವ ಮೂಲಕ ಕೇಳುಗರನ್ನು ರೋಮಾಂಚನಗೊಳಿಸಿದರು. ದೇವರಸ್ತುತಿಗಳನ್ನು ಶೃತಿಬದ್ಧವಾಗಿ ಕೇಳುವ ಅಪೂರ್ವ ಅವಕಾಶ ಭಕ್ತರಿಗೆ ಸಿಕ್ಕಿತು.
ವಿದ್ವಾನ್ ಪವನಾ ಆಚಾರ್ಯ ಅವರ ನೇತೃತ್ವದ ತಂಡ ಎರಡು ಗಂಟೆಗಳಿಗೂ ಅಧಿಕಕಾಲ ಈ ಅಪೂರ್ವ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಉಚ್ಚಿಲ ದಸರಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ನಿಟ್ಟಿನಲ್ಲಿ, ವರ್ಷಂ ಪ್ರತಿ ಈ ಸಾಮೂಹಿಕ ವೀಣಾ ವಾದನ ಕಾರ್ಯಕ್ರಮ ನಡೆಸಲಾಗುತ್ತದೆ. ಏಕಕಾಲದಲ್ಲಿ 101 ವೀಣೆಗಳ ಜೇಂಕಾರ ಕೇಳುವುದೇ ಒಂದು ಅಪೂರ್ವ ಅನುಭವವಾಗಿದೆ.
ಕುಂದಾಪುರ : ಕುಂದಾಪುರದ ಅಪೂರ್ವ ಚಿನ್ನದ ಅಂಗಡಿಗೆ ಮಹಿಳೆಯರಿಬ್ಬರು ಗ್ರಾಹಕರಂತೆ ಬಂದು ಹಳೆಯ ಚಿನ್ನ ಇದೆ ಎಂದು ಅದನ್ನು ಕೊಟ್ಟು ಹೊಸ ಚಿನ್ನ ಖರೀದಿ ಮಾಡಲು ಇದೆ ಎಂದು ಹೇಳಿ ಸುಮಾರು 2,50,000 ಲಕ್ಷ ರೂ. ವಂಚಿಸಿ ಪರಾರಿಯಾದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದ ಮಹಿಳೆ ನಕಲಿ ಚಿನ್ನವನ್ನು ತೋರಿಸಿ ಅಂಗಡಿ ಮಾಲೀಕರು ಆ ಚಿನ್ನದಲ್ಲಿ ಹಾಲ್ ಮಾರ್ಕ್ ಇದೆಯೇ ಎಂದು ಪರಿಶೀಲಿಸಿ ಅದನ್ನು ತೆಗೆದುಕೊಂಡು ಅವರಿಗೆ ಹೊಸ ಚಿನ್ನ ಕೊಟ್ಟು ಕಳುಹಿಸಿದಾಗ ಅವರಿಗೆ ಆದ ಮೋಸ ತಡವಾಗಿ ಬೆಳಕಿಗೆ ಬಂದಿದೆ. ಚಿನ್ನ ಪಡೆದ ಅಂಗಡಿ ಮಾಲೀಕ ನಂತರ ಪರಿಶೀಲಿಸಿದಾಗ ಅದು ಬರಿ ತಾಮ್ರ ಎಂದು ರಿಪೋರ್ಟ್ನಲ್ಲಿ ಬಂದಿದೆ.