ಉಡುಪಿ : ಕಳೆದು ಐದು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನೆರೆಯ ಭೀತಿ ಉಂಟಾಗಿದೆ. ಹವಾಮಾನ ಇಲಾಖೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ನಾಳೆ (ಜುಲೈ 20) ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ನೀಡಿದ್ದಾರೆ. ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ. ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ ಗಳಿಗೆ ರಜೆ ಘೋಷಿಸಿರುವುದಿಲ್ಲ.
Udupi
ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪುರ ವತಿಯಿಂದ ‘ಆನೆಕಾಲು ರೋಗ’ದ ರಕ್ತ ಲೇಪನ ಶಿಬಿರ
ಮಣಿಪುರ : ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪುರ ಇದರ ವತಿಯಿಂದ ‘ಆನೆಕಾಲು ರೋಗ (ಫೈಲೇರಿಯಾ)ದ ರಕ್ತ ಲೇಪನ ಶಿಬಿರ’ ಜುಲೈ 18ರಂದು ಆರೋಗ್ಯ ಮತ್ತು ಕ್ಷೇಮ ಕೇಂದ್ರ ಮರ್ಣೆಯಲ್ಲಿ ಜರುಗಿತು.
ಪಿ.ಹೆಚ್.ಸಿ.ಒ. ಶ್ರೀಮತಿ ತಾರಾ, ಸಿ.ಹೆಚ್.ಒ. ಶನಲ್ ಸುಪ್ರಿಯಾ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ನವ್ಯಾ, ಶ್ರೀಮತಿ ಮೋಹಿನಿ, ಶ್ರೀಮತಿ ಪ್ರತಿಭಾ ಇವರು ಶಿಬಿರವನ್ನು ನೆರವೇರಿಸಿದರು.
ಗ್ರಾಮ ಪಂಚಾಯಿತ್ ಸದಸ್ಯರಾದ ಪ್ರಜ್ವಲ್ ಹೆಗ್ಡೆ, ಪದ್ಮನಾಭ ನಾಯಕ್, ವಾಣಿ ಇವರು ಹಾಜರಿದ್ದು, ಸಹಕರಿಸಿದರು.
ಸುಮಾರು ನೂರಕ್ಕೂ ಹೆಚ್ಚು ಗ್ರಾಮಸ್ಥರಿಂದ ರಕ್ತದ ಮಾದರಿ ಸಂಗ್ರಹಿಸಲಾಯಿತು.
ಕಾರ್ಕಳ : ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ 6 ಲಕ್ಷಕ್ಕೂ ಮಿಕ್ಕಿ ಬೀಡಿ ಕಾರ್ಮಿಕರು ಇವತ್ತು ಬೀಡಿ ಕಟ್ಟಿ ತಮ್ಮ ಜೀವನ ನಡೆಸುತ್ತಿದ್ದಾರೆ. ಇವತ್ತಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಧಾರದಲ್ಲಿ ಸರಕಾರವು ಪ್ರತಿವರ್ಷ ಬೀಡಿ ಕಾರ್ಮಿಕರ ತುಟ್ಟಿಭತ್ಯೆ ಹೆಚ್ಚಳ ಮಾಡಿ ಕಾರ್ಮಿಕರು ಬದುಕಲು ಸಹಾಯವಾಗಲು ಏರಿಳಿತ ತುಟ್ಟಿಭತ್ಯೆ ಎಂಬುವುದು ಕಾನೂನು ಬದ್ಧ ಸವಲತ್ತು. ಆ ಪ್ರಕಾರ 2024 ಎಪ್ರಿಲ್ ತಿಂಗಳಿಂದ ಔದ್ಯಮಿಕ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ 568 ಪಾಯಿಂಟ್ ಆಗಿರುತ್ತದೆ ಅದರಂತೆ 1000 ಬೀಡಿಗೆ ರೂ 22.72ರಂತೆ ಬೀಡಿ ಕಾರ್ಮಿಕರಿಗೆ ನೀಡಬೇಕು. ಅದರೆ ಬೀಡಿ ಕಂಪನಿಯ ಮಾಲಕರು ನೀಡದೆ ಕಾರ್ಮಿಕರಿಗೆ ವಂಚನೆ ಮಾಡಿದ್ದಾರೆ. ಈ ಕುರಿತು ಮಾತುಕತೆಗೆ ಮಂಗಳೂರು ಸಹಾಯಕ ಕಾರ್ಮಿಕ ಅಧಿಕಾರಿಯವರು ಎರಡು ಬಾರಿ ಕಂಪನಿಯ ಮಾಲೀಕರನ್ನು ಕರೆದರೂ ಕೂಡ ತಪ್ಪಿಸಿಕೊಳ್ಳುತ್ತಿದ್ದಾರೆ.
ಸರಕಾರಿ ಅಧಿಕಾರಿಯವರ ಮಾತಿಗೂ ಕಿಂಚಿತ್ತೂ ಬೆಲೆ ಕೊಡದೆ ಸತಾಯಿಸುತ್ತಿದ್ದಾರೆ. ಭಾರತ್ ಬೀಡಿ, ಗಣೇಶ್ ಬೀಡಿ, ಟೆಲಿಫೋನ್ ಬೀಡಿ, ಇನ್ನೂ ಅನೇಕ ದೊಡ್ಡ ಕಂಪನಿಯ ಮಾಲಕರ ಪರವಾಗಿ ಇವತ್ತು ನಮ್ಮ ಶಾಸಕರು, ಸಂಸದರು ನಿಂತಿರುವ ಹಾಗೆ ಕಾಣುತ್ತದೆ. ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ 13 ಜನ ಶಾಸಕರು, 2ಜನ ಸಂಸದರು 6ಲಕ್ಷಕ್ಕೂ ಮಿಕ್ಕಿ ಇರುವ ಬಡ ಬೀಡಿ ಕಾರ್ಮಿಕರ ಬಗ್ಗೆ ವಿಧಾನಸಭೆಯಲ್ಲಿ ಅಥವಾ ಲೋಕಸಭೆಯಲ್ಲಿ ಕಾರ್ಮಿಕರ ನೈಜ ಸಮಸ್ಯೆಗಳ ಬಗ್ಗೆ ಮಾತಾನಾಡುವುದಿಲ್ಲ.
ಚುನಾವಣೆ ಬರುವಾಗ ಲಕ್ಷಾಂತರ ಬೀಡಿ ಕಾರ್ಮಿಕರ ಕುಟುಂಬದ ಮತಗಳು ಬೇಕು ಎಂದು ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್. ಕಾಂಚನ್ ಅರೋಪಿಸಿದ್ದಾರೆ. ಮಾತ್ರವಲ್ಲದೆ ಚುನಾವಣಾ ಸಮಯದಲ್ಲಿ ಬೀಡಿ ಮಾಲಕರು ಬೇರೆ ಬೇರೆ ಪಕ್ಷಕ್ಕೆ ಹಣವನ್ನು ನೀಡುತ್ತಾರೆ ಆದರೆ ಕಾರ್ಮಿಕರು ಕಷ್ಟ ಪಟ್ಟು ದುಡಿದ ಹಣವನ್ನು ನೀಡಲು ಹಿಂದೇಟು ಹಾಕುವ ಮಾಲಕರ ವಿರುದ್ಧ ಸರಕಾರವು ಕೂಡಲೇ ಕ್ರಮ ತೆಗೆದು ಕೊಳ್ಳಬೇಕು ಎಂದು ಕಾರ್ಕಳ ತಾಲೂಕು ಕಛೇರಿ ಮುಂದೆ ನಡೆದ ಬೀಡಿ ಕಾರ್ಮಿಕರ ಪ್ರತಿಭಟನೆಯಲ್ಲಿ ಅಗ್ರಹಿಸಲಾಯಿತು.
ಇತ್ತೀಚೆಗೆ ಹಲವು ಬಾರಿ ಮಂಗಳೂರು ಕಂಪನಿಯ ಪ್ರಧಾನ ಕಛೇರಿ ಮುಂದೆ, ಹಾಗೂ ಮಂಗಳೂರು ಸಹಾಯಕ ಅಧಿಕಾರಿ ಕಛೇರಿ ಮಂದೆ ಪ್ರತಿಭಟನೆ ನಡೆಸಿದ ನಂತರ 11.40ಪೈಸೆಯಂತೆ ನೀಡಿರುತ್ತಾರೆ ಅದರೆ ಕಾರ್ಮಿಕರಿಗೆ ಕಾನೂನು ಬದ್ದವಾಗಿ ಸಿಗುವ 22.72ಪೈಸೆ ಕೊಡಬೇಕು. ಹಿಂದಿನ 3ವರ್ಷದ ಬಾಕಿ ಇರುವ ತುಟ್ಟಿಭತ್ಯೆ 12.75ಪೈಸೆ, ಕನಿಷ್ಟ ವೇತನ ಕೂಡಲೇ ಕಾರ್ಮಿಕರಿಗೆ ನೀಡಬೇಕು. ಎಂದು ಒತ್ತಾಯಿಸಿ ಇಂದು ಪ್ರತಿಭಟನೆ ನಡೆಸಿ ಕಾರ್ಕಳ ಕಾರ್ಮಿಕ ಅಧಿಕಾರಿ ಮುಖಾಂತರ ಮಂಗಳೂರು ಸಹಾಯಕ ಕಾರ್ಮಿಕ ಅಧಿಕಾರಿಯವರಿಗೆ ಮನವಿ ನೀಡಲಾಯಿತು. ಮುಂದಿನ ದಿನಗಳಲ್ಲಿ ಕಾರ್ಮಿಕ ಸಮಸ್ಯೆಗಳನ್ನು ಬಗೆಹರಿಸದೆ ಇದ್ದರೆ ಶಾಸಕರು ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆಯನ್ನು ನೀಡಲಾಯಿತು
ಪ್ರತಿಭಟನೆ ಸಭೆಯಲ್ಲಿ ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಸುನೀತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್, ಕೋಶಾಧಿಕಾರಿ ಸುಮತಿ, ಕುಂದಾಪುರ ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಲ್ಕೀಸ್, ಉಡುಪಿ ಬೀಡಿ & ಟೋಬ್ಯಾಕೊ ಲೇಬರ್ ಯುನಿಯನ್ ನ ನಳಿನಿ.ಎಸ್ , ಸಿಐಟಿಯು ಕಾರ್ಕಳ ತಾಲೂಕು ಮುಖಂಡರಾದ ನಾಗೇಶ್, ಸಿಐಟಿಯು ಉಡುಪಿ ಮುಖಂಡರಾದ ಮೋಹನ್, ರೀತೇಶ್ , ಕಾರ್ಕಳ ಬೀಡಿ ಕಂಟ್ರಾಕ್ಟರ್ ಮುಸ್ತಾಫ ಹಾಗೂ ಬೀಡಿ ಮುಖಂಡರಾದ ವಿಲಾಸಿನಿ, ಶಕುಂತಲಾ, ಸುಮಿತ್ರಾ, ಜಯಂತಿ, ಲಕ್ಷೀ, ಜಾನವಿ, ವಸಂತಿ ಶೆಟ್ಟಿ, ಲತಾ, ಮಾಲತಿ, ಜಯಂತಿ, ವನಿತ, ಕವಿತ, ಪ್ರಮೀಳಾ, ಉಷಾ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ಕೆಎಂಸಿಗೆ ನೇಶನಲ್ ಮೆಡಿಕಲ್ ಕೌನ್ಸಿಲ್ನಿಂದ ಎನ್ಎಪಿ-ಎಎಂಆರ್ ಪ್ರಾದೇಶಿಕ ಕೇಂದ್ರವಾಗಿ ಮಾನ್ಯತೆ
ಮಂಗಳೂರು : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ]ನ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜ್ [ಕೆಎಂಸಿ] ನ್ನು ಪ್ರತಿಸೂಕ್ಷ್ಮಜೀವಿಗಳ ನಿರೋಧದ ರಾಷ್ಟ್ರೀಯ ಕಾರ್ಯಾಚರಣೆಯ ಪ್ರಾದೇಶಿಕ ಕೇಂದ್ರ [ಸೆಂಟರ್ ಫಾರ್ ದ ನೇಶನಲ್ ಆ್ಯಕ್ಷನ್ ಪ್ಲ್ಯಾನ್ ಆ್ಯಂಟಿ ಮೈಕ್ರೋಬಿಯಲ್ ರೆಸಿಸ್ಟ್ಯಾನ್ಸ್] ವಾಗಿ ರಾಷ್ಟ್ರೀಯ ವೈದ್ಯಕೀಯ ಮಂಡಳಿ [ನೇಶನಲ್ ಮೆಡಿಕಲ್ ಕೌನ್ಸಿಲ್-ಎನ್ಎಂಸಿ] ಮಾನ್ಯ ಮಾಡಿದೆ. ಭಾರತದಲ್ಲಿ ಮಣಿಪಾಲ ಸಮೂಹದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಪ್ರತಿಸೂಕ್ಷ್ಮಾಣುಜೀವಿಗಳ ನಿರೋಧದ ಕುರಿತ ಹೋರಾಟ ಮತ್ತು ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನದ ಹಾದಿಯಲ್ಲಿ ಈ ಮಾನ್ಯತೆಯು ಪ್ರಮುಖ ಮೈಲಿಗಲ್ಲಾಗಿದೆ.
ರಾಷ್ಟ್ರೀಯ ವೈದ್ಯಕೀಯ ಮಂಡಳಿ [ನೇಶನಲ್ ಮೆಡಿಕಲ್ ಕೌನ್ಸಿಲ್-ಎನ್ಎಂಸಿ] ಯು ಭಾರತದ ವೈದ್ಯಕೀಯ ಕಾಲೇಜು ಮತ್ತು ಸಂಸ್ಥೆಗಳಲ್ಲಿ ವೈದ್ಯರನ್ನು ತರಬೇತಿಗೊಳಿಸಲು ಸಂಪನ್ಮೂಲ ಪ್ರಾಧ್ಯಾಪಕರನ್ನು ಸಿದ್ಧಪಡಿಸುತ್ತಿದೆ. ಈ ಉಪಕ್ರಮದ ಭಾಗವಾಗಿ ಮಂಗಳೂರಿನ ಕೆಎಂಸಿಯನ್ನು ಅಧಿಕೃತ ಪ್ರಾದೇಶಿಕ ಕೇಂದ್ರಗಳ ಯಾದಿಯಲ್ಲಿ ಸೇರಿಸಿಕೊಳ್ಳಲಾಗಿದೆ.
ಎಲ್ಲ ಪ್ರಾದೇಶಿಕ ಕೇಂದ್ರಗಳು ಕನಿಷ್ಠ ನಾಲ್ಕು ಮಂದಿ ಪ್ರಾಧ್ಯಾಪಕರಿರುವ ಎನ್ಎಪಿ-ಎಎಂಆರ್ ಕೇಂದ್ರವನ್ನು ಸ್ಥಾಪಿಸಬೇಕಾಗಿದ್ದು ಸೂಕ್ಷ್ಮಜೀವವಿಜ್ಞಾನ, ಔಷಧ ವಿಜ್ಞಾನ, ವೈದ್ಯಕೀಯ ಮತ್ತು ಸಮೂಹ ವಿಭಾಗಕ್ಕೆ ಸೇರಿದ ಪ್ರಾಧ್ಯಾಪಕ ನೋಡಲ್ ಅಧಿಕಾರಿಯಾಗಿರಬೇಕಾಗುತ್ತದೆ. ಎನ್ಎಂಸಿಯು ಒಬ್ಬ ಪ್ರಾದೇಶಿಕ ಸಂಚಾಲಕರನ್ನು ನೇಮಕ ಮಾಡುತ್ತಿದ್ದು, ಮಂಗಳೂರಿನ ಕೆಎಂಸಿಯ ಸೂಕ್ಷ್ಮಜೀವವಿಜ್ಞಾನ ವಿಭಾಗದ ಸಹ-ಪ್ರಾಧ್ಯಾಪಕರಾದ ಡಾ. ಪೂಜಾ ರಾವ್ ಈ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಮಾಹೆಯ ಉಪಕುಲಪತಿಗಳಾದ ಲೆ. ಜ. ಡಾ. ಎಂ. ಡಿ. ವೆಂಕಟೇಶ್ ಅವರು ಅವರು ಎನ್ಎಪಿ-ಎಎಂಆರ್ನಿಂದ ಪ್ರಾದೇಶಿಕ ಕೇಂದ್ರವಾಗಿ ಮಾಹೆಗೆ ದೊರೆತ ಮಾನ್ಯತೆ ಮಾಹೆಯ ವೈದ್ಯಕೀಯ ಶಿಕ್ಷಣ ಮತ್ತು ಸಾಮಾಜಿಕ ಸ್ವಾಸ್ಥ್ಯದ ಕುರಿತ ಕಾಳಜಿಗೆ ದೊರೆತ ಮನ್ನಣೆಯಾಗಿದೆ. ರೋಗಕಾರಕ ಸೂಕ್ಷ್ಮಾಣುಜೀವಿಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಆವಶ್ಯಕ ಕೌಶಲದ ಜೊತೆಗೆ ಜಾಗತಿಕ ಮಟ್ಟದಲ್ಲಿ ಎದುರಿಸಬೇಕಾದ ಸವಾಲುಗಳ ಬಗ್ಗೆ ಅರಿವು ಇರುವ ವೃತ್ತಿಪರ ಆರೋಗ್ಯಪಾಲಕರನ್ನು ಸಿದ್ಧಪಡಿಸುವಲ್ಲಿ ಮಾಹೆ ಬದ್ಧವಾಗಿದೆ. ಜಾಗತಿಕ ಸ್ವಾಸ್ಥ್ಯಕ್ಕೆ ಸವಾಲಾಗಿರುವ ಪ್ರತಿಸೂಕ್ಷ್ಮಾಣುಜೀವಿ ನಿರೋಧವನ್ನು ಸಾಧಿಸುವ ಎನ್ಎಂಸಿಯ ಧ್ಯೇಯವನ್ನು ಮಾಹೆಯು ಸದಾ ಬೆಂಬಲಿಸುತ್ತದೆ’ ಎಂದರು.
ಮಂಗಳೂರಿನ ಕೆಎಂಸಿಯ ಡೀನ್ ಡಾ. ಉನ್ನಿಕೃಷ್ಣನ್ ಅವರು, ‘ಸಮಾಜವನ್ನು ಆರೋಗ್ಯಪೂರ್ಣವಾಗಿಸುವ ಎನ್ಎಂಸಿಯ ಆಶಯವನ್ನು ಬೆಂಬಲಿಸುವ ಅವಕಾಶ ದೊರೆತಿರುವಂತೆಯೇ ಮಾಹೆಯ ಬೋಧಕರಿಗೆ ದೊರೆತ ಅತ್ಯುತ್ತಮ ಅವಕಾಶ ಇದಾಗಿದೆ. ನಮ್ಮ ಬೋಧಕರು ರಾಜ್ಯಮಟ್ಟದ ಮುಖ್ಯ ತರಬೇತಿದಾರರಾಗಿ ಆಯ್ಕೆಯಾಗಿದ್ದು ಜ್ಞಾನ ಮತ್ತು ಕೌಶಲವನ್ನು ಪ್ರಚುರಪಡಿಸುವಲ್ಲಿ ಮುನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ. ಎನ್ಎಂಸಿಯ ರಾಷ್ಟ್ರೀಯ ಕಾರ್ಯಾಚರಣೆಯ ಯೋಜನೆಯಲ್ಲಿ ಸಹಭಾಗಿಯಾಗಲು ಮಾಹೆ ಹೆಮ್ಮೆ ಪಡುತ್ತದೆ’ ಎಂದರು.
ಪ್ರಸ್ತುತ ಮಾನ್ಯತೆಯ ಮೂಲಕ ಪ್ರತಿಸೂಕ್ಷ್ಮಾಣುಜೀವಿ ನಿರೋಧ [ಆ್ಯಂಟಿಮೆಕ್ರೋಬಿಯಲ್ ರೆಸಿಸ್ಟೆನ್ಸ್]ದ ಕುರಿತ ರಾಷ್ಟ್ರೀಯ ಕಾರ್ಯಯೋಜನೆಯ ಗುರಿಗಳನ್ನು ಸಾಧಿಸುವಲ್ಲಿ ಎನ್ಎಸಿಯೊಂದಿಗೆ ಕೈ ಜೋಡಿಸುವ ಅವಕಾಶ ಮಾಹೆಗೆ ಲಭಿಸಿದೆ.
ಹೆಬ್ರಿ : ಅರ್ಥ್ ಮೂವರ್ಸ್ ಯೂನಿಯನ್ ಅಸೋಸಿಯೇಷನ್ ಹೆಬ್ರಿ ಇದರ ನೂತನ ಕಚೇರಿ ಉದ್ಘಾಟನಾ ಸಮಾರಂಭ ಕನ್ಯಾನದ ಸರಸ್ವತಿ ಹೋಟೆಲ್ ಬಳಿ ಶುಕ್ರವಾರದಂದು ಜರುಗಿತು.
ಹೆಬ್ರಿ ವಲಯ ಅರಣ್ಯಾಧಿಕಾರಿ ಸಿದ್ಧಿಶ್ವರ್ ಉದ್ಘಾಟಿಸಿ ಶುಭ ಹಾರೈಸಿದರು. ಅರ್ಥ್ ಮೂವರ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರತಾಪ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಹೆಬ್ರಿ ಪೊಲೀಸ್ ಠಾಣೆಯ ಎಎಸ್ಐ ಶ್ರೀಧರ್, ರೈತ ಸೇವಾ ಗ್ರಾಮೋದ್ಯೋಗದ ಲಕ್ಷ್ಮೀನಾರಾಯಣ ನಾಯಕ್, ಅಸೋಸಿಯೇಷನ್ ಕಾರ್ಯದರ್ಶಿ ಸನತ್ ಕುಮಾರ್ ಶೆಟ್ಟಿ, ಹಾಗೂ ಸಂಘದ ಸರ್ವ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಸಿಎಂ ಪ್ರಸನ್ನ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಉಡುಪಿ : ಕೂಲಿ ಕಾರ್ಮಿಕನೋರ್ವ ಹೊಳೆನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಚೀರೊಳ್ಳಿ ಎಂಬಲ್ಲಿ ನಡೆದಿದೆ.
ಕೂಲಿ ಕಾರ್ಮಿಕನ್ನು ತುಮಕೂರು ಮೂಲದ ಆನಂದ್ (45) ಎಂದು ಗುರುತಿಸಲಾಗಿದೆ. ಇವರು ಕೆಲಸ ಮಾಡುವ ಮನೆಗೆ ತೆರಳಲು ಸೀತಾನದಿಯ ಉಪನದಿಯನ್ನು ದಾಟಿ ಹೋಗಬೇಕಿತ್ತು. ಹಗ್ಗದ ಸಹಾಯದಿಂದ ಹೊಳೆ ದಾಟುತ್ತಿದ್ದಾಗ ಹಗ್ಗ ತುಂಡಾಗಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎನ್ನಲಾಗಿದೆ.
ಇವರು ನಾಡ್ಪಾಲಿನ ಮನೋರಮಾ ಹೆಗ್ಡೆ ಎಂಬವರಿಗೆ ಸೇರಿದ ತೋಟದಲ್ಲಿ ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿದ್ದರು. ತೋಟದ ಮನೆಯಿಂದ ಹೊಳೆ ದಾಟಿ ಬರಲು ಕಾಲುಸೇತುವೆ ಸಹಿತ ಯಾವುದೇ ಮೂಲ ಸೌಕರ್ಯವನ್ನು ಈ ತನಕ ಕಲ್ಪಿಸಲಾಗಿಲ್ಲ. ಹಾಗಾಗಿ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಹೆಬ್ರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಹೇಶ್ ಟಿಎಂ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
1 ಎಕ್ರೆಗಿಂತ ಕಡಿಮೆ ಪ್ರದೇಶದ ಏಕವಿನ್ಯಾಸ ಅನುಮೋದನೆ ನೂತನ ಆದೇಶ ರದ್ದುಮಾಡಿ : ಸಚಿವರಿಗೆ ಕರಾವಳಿ ಶಾಸಕರ ಮನವಿ
ಬೆಂಗಳೂರು : ಸ್ಥಳೀಯ ಯೋಜನೆ ಪ್ರದೇಶದ ಹೊರಭಾಗದಲ್ಲಿರುವ ಒಂದು ಎಕರೆಗಿಂತ ಕಡಿಮೆ ಪ್ರದೇಶ ಮತ್ತು ಏಕ ನಿವೇಶನ ವಸತಿ ಹಾಗೂ ವಸತಿಯೇತರರಿಗೆ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಯನ್ನು ಸಂಬಂಧಿಸಿದ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ನಲ್ಲಿಯೇ ಈ ಹಿಂದಿನಂತೆ ಪಡೆಯಲು ಆದೇಶ ನೀಡುವಂತೆ ನಗರಾಭಿವೃದ್ಧಿ ಸಚಿವರಾದ ಬಿ. ಎಸ್. ಸುರೇಶ್ ರವರಿಗೆ ಕರಾವಳಿ ಭಾಗದ ಶಾಸಕರು ಮನವಿ ಸಲ್ಲಿಸಿರುವುದಾಗಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣದ ಪೂರ್ವದಲ್ಲಿ ಏಕ ವಿನ್ಯಾಸ ಅನುಮೋದನೆಯು ನಗರ ಮತ್ತು ಗ್ರಾಮಾಂತರ ಇಲಾಖೆಯಿಂದ ಪಡೆದುಕೊಳ್ಳಬೇಕು ಎನ್ನುವ ಆದೇಶವಾಗಿದ್ದು ಇದರಿಂದ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ.
ನಗರ ಮತ್ತು ಗ್ರಾಮಾಂತರ ಇಲಾಖೆಯಲ್ಲಿ ಸಿಬ್ಬಂದಿಗಳ ತೀವ್ರ ಕೊರತೆ ಇದ್ದು ಗ್ರಾಮೀಣ ಭಾಗದ ಜನರು ಜಿಲ್ಲಾ ಕೇಂದ್ರಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದುದರಿಂದ ಗ್ರಾಮೀಣ ಭಾಗದ ಜನರು ಈ ಹಿಂದಿನಂತೆ ಗ್ರಾಮ ಪಂಚಾಯತ್ ಅಥವಾ ತಾಲೂಕು ಪಂಚಾಯಿತಿಯಿಂದ ಏಕ ವಿನ್ಯಾಸ ಅನುಮೋದನೆ ಪಡೆದುಕೊಳ್ಳಲು ಆದೇಶಿಸುವಂತೆ ಕರಾವಳಿ ಭಾಗದ ಎಲ್ಲ ಶಾಸಕರು ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರಾವಳಿ ಭಾಗದ ಶಾಸಕರಾದ ವಿ. ಸುನೀಲ್ ಕುಮಾರ್, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ರಾಜೇಶ್ ನಾಯ್ಕ್, ಡಾ. ಭರತ್ ಶೆಟ್ಟಿ ವೈ., ವೇದವ್ಯಾಸ ಕಾಮತ್, ಕು. ಭಾಗೀರಥಿ ಮುರುಳ್ಯ, ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಸುರೇಶ್ ಶೆಟ್ಟಿ ಗುರ್ಮೆ, ಪ್ರತಾಪ್ ಸಿಂಹ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ : ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ
ಉಡುಪಿ : ಮಹಿಳೆಯರ ಸುರಕ್ಷತೆ, ಭದ್ರತೆ ಹಾಗೂ ಸಬಲೀಕರಣಕ್ಕಾಗಿ ಸರಕಾರ ಜಾರಿಗೆ ತಂದಿರುವ ಮಿಷನ್ ಶಕ್ತಿ ಯೋಜನೆಯನ್ನು ಹೆಚ್ಚು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸುವುದರೊಂದಿಗೆ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.
ಅವರು ಗುರುವಾರ ನಗರದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಜಿಲ್ಲಾ ಮಟ್ಟದ ವಿವಿಧ ಸಮನ್ವಯ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸರಕಾರವು ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ಧಿಗೆ ಅನೇಕ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಿದೆ. ಇವುಗಳ ಬಗ್ಗೆ ಅವರುಗಳಿಗೆ ಅರಿವು ಮೂಡಿಸುವುದರ ಜೊತೆಗೆ ಅದನ್ನು ಪಲಫ್ರದವಾಗುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಇದನ್ನು ಜವಾಬ್ದಾರಿಯುತವಾಗಿ ಮಾಡಬೇಕೆಂದು ಸೂಚನೆ ನೀಡಿದರು.
ಸಮಾಜದಲ್ಲಿ ಲಿಂಗತಾರತಮ್ಯ ಹೋಗಲಾಡಿಸಿ, ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಶಿಕ್ಷಣಕ್ಕೆ ಉತ್ತೇಜನ ನೀಡಬೇಕು. ಹೆಣ್ಣು ಮಕ್ಕಳ ವೈಯಕ್ತಿಕ ನೈರ್ಮಲ್ಯ ಹಾಗೂ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಯುವಜನರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಪ್ರಸವಪೂರ್ವ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ಪ್ರಕರಣಗಳು ನಡೆಯದಂತೆ ಅಗತ್ಯವಿರುವ ಎಲ್ಲಾ ರೀತಿಯ ಎಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಸಾರ್ವಜನಿಕರಿಂದ ಈ ಬಗ್ಗೆ ಸಣ್ಣ ಮಾಹಿತಿಗಳೂ ಬಂದರೆ ಅವುಗಳ ಬಗ್ಗೆ ನಿರ್ಲಕ್ಷ್ಯ ವಹಿಸದೇ ಸೂಕ್ಷ್ಮವಾಗಿ ತನಿಖೆ ಕೈಗೊಳ್ಳಬೇಕು. ಒಂದೊಂಮ್ಮೆ ಉಲ್ಲಂಘನೆ ಆಗಿದ್ದಲ್ಲಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 5928 ವಾರ್ಷಿಕ ಗುರಿಯನ್ನು ಹೊಂದಿ, 4333 ಗರ್ಭಿಣಿ ಸ್ತ್ರೀಯರು ಹಾಗೂ ಬಾಣಂತಿಯನ್ನು ಫಲಾನುಭವಿಗಳನ್ನಾಗಿಸಿ, ಈಲ್ಲಿವರೆಗೆ ಮೊದಲನೇ ಕಂತಿನಲ್ಲಿ 4314 ಫಲಾನುಭವಿಗಳಿಗೆ 1,29,42,000 ಹಣವನ್ನು ಪಾವತಿ ಮಾಡಲಾಗಿದೆ. ಎರಡನೇ ಕಂತಿನಲ್ಲಿ 1,56,000 ರೂ. ಹಣ ಪಾವತಿಸಿದ್ದು, ಬಾಕಿ ಉಳಿದವರಿಗೆ ಶೀಘ್ರವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು. ಸಣ್ಣ-ಪುಟ್ಟ ಕಾರಣಗಳಿಗಾಗಿ ಯಾರೊಬ್ಬರೂ ಈ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.
ನೊಂದ ಮಹಿಳೆಯರಿಗೆ ಒಂದೇ ಸೂರಿನಡಿ ಸೌಲಭ್ಯ ಕಲ್ಪಿಸುವ ಸಖಿ ಒನ್ ಸ್ಟಾಪ್ ಸೆಂಟರ್ನಲ್ಲಿ 2024 ರ ಏಪ್ರಿಲ್ನಿಂದ ಜೂನ್ 2024 ರ ವರೆಗೆ ಒಟ್ಟು 64 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 30 ಪ್ರಕರಣಗಳು ಇತ್ಯರ್ಥವಾಗಿದ್ದು, ಬಾಕಿ ಉಳಿದ 34 ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಕ್ರಮವಹಿಸಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಕಾನೂನು ಸಲಹೆಗಾರರ ನೆರವಿನೊಂದಿಗೆ ಬಗೆಹರಿಸಲು ಮುಂದಾಗಬೇಕು ಎಂದರು.
ಸಾಮಾಜಿಕ, ಆರ್ಥಿಕ ಕಾರಣದಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿಕೊಳ್ಳಲು ವಿವಿಧ ಇಲಾಖೆಯ ಅಧಿಕಾರಿಗಳ ಸಮನ್ವಯದೊಂದಿಗೆ ಆಗಬೇಕು. ಯಾರೊಬ್ಬ ಮಕ್ಕಳೂ ಸಹ ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.
ಮಣಿಪಾಲದ ಉದ್ಯೋಗಸ್ಥ ಮಹಿಳೆಯರ ವಸತಿಗೃಹದ ನಿರ್ವಹಣೆಯನ್ನು ಉತ್ತಮವಾಗಿ ಮಾಡಬೇಕು. ಆಹಾರ ವಿತರಣೆಯಲ್ಲಿ ಸುಧಾರಣೆ ತರಬೇಕು. ಆಗಿಂದಾಗ್ಗೆ ವಸತಿಗೃಹದ ವ್ಯವಸ್ಥಾಪನಾ ಸಮಿತಿ ಸಭೆಯನ್ನು ನಡೆಸಿ, ಕುಂದುಕೊರತೆಗಳನ್ನು ಬಗೆಹರಿಸಬೇಕೆಂದರು.
ಜಿಲ್ಲೆಯಲ್ಲಿ ಏಪ್ರಿಲ್ನಿಂದ ಜೂನ್ವರೆಗೆ 26 ಸೇರಿದಂತೆ ಹಳೆಯ ಬಾಕಿ ಉಳಿದ 32 ಕೌಟುಂಬಿಕ ಹಿಂಸೆ ಪ್ರಕರಣಗಳಿದ್ದು, ಅವುಗಳಲ್ಲಿ 32 ಪ್ರಕರಣಗಳು ಇತ್ಯರ್ಥಗೊಂಡಿದ್ದು, 26 ಪ್ರಕರಣಗಳು ಬಾಕಿ ಉಳಿದಿವೆ. ಇವುಗಳಿಗೆ ಆದ್ಯತೆಯ ಮೇಲೆ ನಿಯಮಾನುಸಾರ ಆದಷ್ಟು ಜರೂರಾಗಿ ನ್ಯಾಯ ಒದಗಿಸಿಕೊಡಬೇಕು ಎಂದು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಬಾಲ್ಯ ವಿವಾಹ 1 ಪ್ರಕರಣ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಯಾವುದೇ ಒಂದು ಪ್ರಕರಣಗಳು ಆಗದಂತೆ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಗ್ರಾಮ ಪಂಚಾಯತಿಗಳಲ್ಲಿ ರಚಿಸಿರುವ ಕಾವಲು ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸುವುದರೊಂದಿಗೆ ಅಗತ್ಯ ಕ್ರಮವಹಿಸಬೇಕು ಎಂದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಕಡಿಮೆ ತೂಕ ಹಾಗೂ ತೀವ್ರ ಅಪೌಷ್ಠಿಕತೆ ಹೊಂದಿದ ಮಕ್ಕಳ ಪೌಷ್ಠಿಕ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತೀ ತಿಂಗಳು ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮನ್ವಯದೊಂದಿಗೆ ಪೋಷಕರು ಆಹಾರ ಉತ್ಪನ್ನಗಳನ್ನು ಮಕ್ಕಳಿಗೆ ನೀಡುವ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಪ್ರತೀ ಹದಿನೈದು ದಿನಗಳಿಗೊಮ್ಮೆ ಅಂತಹವರ ಮನೆಗಳನ್ನು ಭೇಟಿ ಮಾಡಿ, ಸುಧಾರಣೆ ಆಗಿರುವ ಬಗ್ಗೆ ಪರಿಶೀಲಿಸಬೇಕು ಹಾಗೂ ಜಿಲ್ಲಾಡಳಿತಕ್ಕೆ ಈ ಬಗ್ಗೆ ವರದಿ ಸಹ ನೀಡಬೇಕು ಎಂದರು.
ಕಟಪಾಡಿಯಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ ನೂತನವಾಗಿ ನಿರ್ಮಿಸುತ್ತಿರುವ ವಸತಿ ಗೃಹದ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಸರಕಾರದಿಂದ ಅಥವಾ ಇತರೆ ಸಿ.ಆರ್.ಎಸ್ ನಿಧಿಯ ಅನುದಾನ ಬಳಕೆ ಮಾಡಿಕೊಳ್ಳುವುದರೊಂದಿಗೆ ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದರು.
ಸಭೆಯಲ್ಲಿ ಎಎಸ್ಪಿ ಸಿದ್ದಲಿಂಗಪ್ಪ ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಪೌರಾಯುಕ್ತ ರಾಯಪ್ಪ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬೈಂದೂರು ಭಾಗದಲ್ಲಿ ತುಂಬಿ ಹರಿಯುತ್ತಿರುವ ನದಿಗಳಿಂದ ತೀರದ ಮನೆಗಳಲ್ಲಿ ವಾಸಿಸುವ ಜನರಿಗೆ ಸಂಪರ್ಕ ಕಡಿತ
ಬೈಂದೂರು : ಉಡುಪಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಜಾರಿಯಾಗಿದೆ, ಧಾರಾಕಾರ ಮಳೆ ಹನಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಬೈಂದೂರು ಭಾಗದಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು, ನದಿ ತೀರದ ಮನೆಗಳಲ್ಲಿ ವಾಸಿಸುವ ಜನರಿಗೆ ಸಂಪರ್ಕ ಕಡಿತವಾಗಿದೆ. ನದಿಯ ಪ್ರವಾಹದಿಂದಾಗಿ ಜನರು ತೊಂದರೆಯನ್ನು ಎದುರಿಸುತ್ತಿದ್ದಾರೆ.
ಉದ್ದಾಬೆಟ್ಟು, ಹಾಲಂಬೇರು, ಚಂದಣ ಭಾಗದಲ್ಲಿ ಕೃಷಿ ಭೂಮಿ ನಾಶ :
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗ್ರಾಮಗಳು ಮಳೆಯಿಂದ ತೀವ್ರವಾಗಿ ತತ್ತರಿಸಿವೆ. ಧಾರಾಕಾರ ಮಳೆಯಿಂದಾಗಿ ಉದ್ದಾಬೆಟ್ಟು, ಹಾಲಂಬೇರು, ಚಂದಣ ಭಾಗಗಳಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ನಾಶವಾಗಿದೆ. ಬಿತ್ತನೆ ಮಾಡಿದ ಬೆಳೆಗಳು ಹಾಳಾಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಉಡುಪಿ : ಉಡುಪಿ ಜಿಲ್ಲೆಯಾದ್ಯಂತ ಕಳೆದ ಐದು ದಿನಗಳಿಂದ ಭಾರೀ ವರ್ಷಾಧಾರೆಯಾಗುತ್ತಿದ್ದು, ಇದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಮನೆಮಾಡಿದೆ.
ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಪಾಪನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳಲ್ಲಿ ನೆರೆ ಭೀತಿ ಎದುರಾಗಿದೆ. ಪಾಪನಾಶಿನಿ ನದಿಗೆ ಹೊಂದಿಕೊಂಡಿರುವ ಉದ್ಯಾವರ, ಮಟ್ಟು ಪ್ರದೇಶದಲ್ಲಿ ನೆರೆ ಬಂದಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ಉದ್ಯಾವರದ ಮಠದ ಕುದ್ರು ,ಕೆಮ್ತೂರು ಮತ್ತಿತರೆಡೆಗಳಲ್ಲಿ ನದಿ ಅಪಾಯದ ಮಟ್ಟ ತಲುಪಿದೆ.
ಇಂದು ಮುಂಜಾನೆ ಅಗ್ನಿಶಾಮಕ ಸಿಬ್ಬಂದಿ ಈ ಭಾಗದ ಜನರ ನೆರವಿಗೆ ಧಾವಿಸಿದ್ದಾರೆ. ತಗ್ಗುಪ್ರದೇಶದಲ್ಲಿ ಸಿಲುಕಿಕೊಂಡ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದರು. ಈ ಭಾಗದಲ್ಲಿ ಹಲವು ಮನೆಗಳಿದ್ದು ಅಗತ್ಯ ಬಿದ್ದರೆ ಇನ್ನಷ್ಟು ಜನರ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗಿದೆ. ಶಾಲೆ ಮತ್ತು ಕಾಲೇಜಿಗೆ ಇಂದು ರಜೆ ಘೋಷಿಸಲಾಗಿದ್ದು ಮಳೆ ಬಿಟ್ಟೂ ಬಿಟ್ಟೂ ಬರುತ್ತಿದೆ. ನದಿ ಪಾತ್ರದ ಜನರು ಮುಂಜಾಗರೂಕತೆ ವಹಿಸುವಂತೆ ಸಂದೇಶ ನೀಡಲಾಗಿದೆ.