ಉಡುಪಿ : ಶಿವಾನಂದ ಶೆಟ್ಟಿ ಮತ್ತು ಸುಜಾತ ಶೆಟ್ಟಿ ಹೆಬ್ರಿ ಇವರ ಪುತ್ರಿ, ವಿದ್ಯೋದಯ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಉಡುಪಿ ಇದರ ಏಳನೇ ತರಗತಿ ವಿಧ್ಯಾರ್ಥಿನಿ ಹಾಗೂ ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ, ಬಹುಮುಖ ಪ್ರತಿಭೆಯ ಕುಮಾರಿ ಶಿವಾನಿ ಶೆಟ್ಟಿ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಎಸ್ಜಿಎಸ್ ಅಂತರ್ ರಾಷ್ಟ್ರೀಯ ಯೋಗ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಜರುಗಿದ ಅಂತರ್ ರಾಜ್ಯ ಯೋಗಾಸನ ಸ್ಪರ್ಧೆಯಲ್ಲಿ ಉತ್ಕೃಷ್ಟ ಪ್ರದರ್ಶನ ನೀಡಿ ಅಂತರ್ ರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆ ಆಗಿದ್ದಾಳೆ. ಇವಳಿಗೆ ಯೋಗ ತರಬೇತಿಯನ್ನು ಕೆ. ನರೇಂದ್ರ ಕಾಮತ್ ಕಾರ್ಕಳ ಇವರು ನೀಡಿದ್ದಾರೆ.
Karkala
ಅಂತರ್ ರಾಜ್ಯ ಯೋಗಾಸನ ಸ್ಪರ್ಧೆ : ಸುಷ್ಮಾ ಎರ್ಲಪಾಡಿ ಮತ್ತು ಅನನ್ಯ ಹೆರ್ಮುಂಡೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಕಾರ್ಕಳ : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜು. 14ರಂದು ಎಸ್.ಜಿ.ಎಸ್. ಅಂತರ್ ರಾಷ್ಟ್ರೀಯ ಯೋಗ ಸಂಸ್ಥೆಯ ಪ್ರಯೋಜಕತ್ವದಲ್ಲಿ ನಡೆದ ಅಂತರ್ ರಾಜ್ಯ ಯೋಗಾಸನ ಸ್ಪರ್ಧೆಯಲ್ಲಿ ಯರ್ಲಪಾಡಿ ಗ್ರಾಮದ ಸುಷ್ಮಾ ತೆಂಡುಲ್ಕರ್ ಹಾಗೂ ಹೆರ್ಮುಂಡೆ ಗ್ರಾಮದ ಅನನ್ಯ ಉತ್ತಮ 10 ಯೋಗಪಟುಗಳಲ್ಲಿ ಆಯ್ಕೆಯಾಗಿರುತ್ತಾರೆ. ಈ ಮೂಲಕ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರು ಯೋಗ ಗುರುಗಳಾದ ಕೆ. ನರೇಂದ್ರ ಕಾಮತ್ ಮತ್ತು ಅಶೋಕ್ ಅವರಿಂದ ಯೋಗ ತರಬೇತಿ ಪಡೆದಿರುತ್ತಾರೆ.

“ಗುಲಾಬಿ ಹೂ” ಪ್ರತಿಭಟನೆ; “ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯೋಣ”
ಕಾರ್ಕಳ : ಜಿಲ್ಲಾಡಳಿತದ ವತಿಯಿಂದ ನಡೆದ ಜನಸ್ಪಂದನ ಸಭೆಯಲ್ಲಿ ಪುರಸಭೆ ಸದಸ್ಯ ಶುಭದ ರಾವ್ ಅವರ ಜತೆ ಅನುಚಿತವಾಗಿ ವರ್ತಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ವತಿಯಿಂದ ಡಿವೈಎಸ್ಪಿ ಅರವಿಂದ ಕಲಗುಜ್ಜಿ ವಿರುದ್ಧ ವಿನೂತನ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿಯಿಂದ ಡಿವೈಎಸ್ಪಿ ಕಚೇರಿಯವರೆಗೆ ನಡಿಗೆಯ ಮೂಲಕ ಬಂದು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯೋಣ ಎನ್ನುವ ಬರಹದ ಮೂಲಕ ಡಿವೈಎಸ್ಪಿ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು.
ಬಳಿಕ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಗುಲಾಬಿ ಹೂವು ನೀಡಿ ದ್ವೇಷ ಮರೆತು ಪರಸ್ಪರ ಹಸ್ತಲಾಘವ ನೀಡಿದರು. ರಾಷ್ಟ್ರೀಯ ಪಕ್ಷವೊಂದು ನಡೆಸಿದ ಈ ವಿಶಿಷ್ಟ ಪ್ರತಿಭಟನೆ ಕಾರ್ಕಳ ನಗರದ ಜನರ ಗಮನ ಸೆಳೆಯಿತು.
ಕಾರ್ಕಳ : ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಮಹಮ್ಮದ್ ಹ್ಯಾರಿಸ್ ನಲಪಾಡ್, ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ಯುವ ಕಾಂಗ್ರೆಸ್ ಅಧ್ಯಕ್ಷರಾದ ದೀಪಕ್ ಕೋಟ್ಯಾನ್ ಇನ್ನಾ ಇವರ ಶಿಫಾರಸ್ಸಿನ ಮೇರೆಗೆ ಶಶಿಧರ ಹವಲ್ದಾರಬೆಟ್ಟು ಅವರನ್ನು ಕಾರ್ಕಳ ನಗರ ಯುವ ಕಾಂಗ್ರೆಸ್ನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಯೋಗೀಶ್ ಇನ್ನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತ್ತೂರು ಚರ್ಚಿನ ಅಕ್ರಮ ಸ್ವಾಗತ ಗೋಪುರ ತೆರವಿಗೆ ಆಗ್ರಹ; ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ : ಹಿಂದೂ ಹಿತರಕ್ಷಣಾ ವೇದಿಕೆ ಎಚ್ಚರಿಕೆ
ಕಾರ್ಕಳ : ಕಾರ್ಕಳ ತಾಲೂಕಿನ ಅತ್ತೂರು ಗ್ರಾಮದಲ್ಲಿರುವ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ಅತ್ತೂರು ಸಂತ ಲಾರೆನ್ಸರ ಚರ್ಚ್ ಮಂಡಳಿಯವರು ಅಕ್ರಮವಾಗಿ ಭಾರಿ ಗಾತ್ರದ ಸ್ವಾಗತ ಗೋಪುರವನ್ನು ಕಟ್ಟಿದ್ದು, ಇದು ಸರ್ವೋಚ್ಚ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದ್ದು ಇದರಲ್ಲಿ ಸರಕಾರಿ ಇಂಜಿನಿಯರ್ಗಳು ಕೂಡ ಶಾಮೀಲಾಗಿದ್ದಾರೆ ಎಂದು ಹಿಂದೂ ಹಿತರಕ್ಷಣಾ ಸಮಿತಿ ಆರೋಪಿಸಿದೆ.
ಈ ಅಕ್ರಮ ದ್ವಾರವನ್ನು ತೆರವುಗೊಳಿಸಲು ಸಮಿತಿಯು ಜಿಲ್ಲಾಡಳಿತಕ್ಕೆ ಹತ್ತು ದಿನಗಳ ಗಡುವನ್ನು ನೀಡುತ್ತಿದೆ. ತಪ್ಪಿದ್ದಲ್ಲಿ ಜಿಲ್ಲೆಯಾದ್ಯಂತ ಹಿಂದೂ ಸಮಾಜವನ್ನು ಸಂಘಟಿಸಿ ಇದರ ವಿರುದ್ಧ ಹೋರಾಟ ಕೈಗೊತ್ತಿಕೊಳ್ಳಲಾಗುವುದು ಎಂದು ಕಾರ್ಕಳ ಹಿಂದೂ ಹಿತರಕ್ಷಣಾ ವೇದಿಕೆ ಎಚ್ಚರಿಸಿದೆ.
ಕಳೆದ ಒಂದು ವಾರದ ಹಿಂದೆ ರಾತ್ರೋರಾತ್ರಿ ಚರ್ಚ್ ಮಂಡಳಿ ಈ ಕಬ್ಬಿಣದ ದ್ವಾರವನ್ನು ರಸ್ತೆಗೆ ಅಡ್ಡಲಾಗಿ ಕಟ್ಟಿದ್ದು ಇದು ವಾಹನ ಸವಾರರ ಸುರಕ್ಷತೆಗೆ ಮುಂದೊoದು ದಿನ ಸವಾಲಾಗುವ ಸಾಧ್ಯತೆಯಿದೆ. ಸಾರ್ವಜನಿಕರಿಂದ ಎರಡು ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾದ ಬಳಿಕವೂ ಲೋಕೋಪಯೋಗಿ ಅಧಿಕಾರಿಗಳು ಈ ಅಕ್ರಮ ದ್ವಾರ ನಿರ್ಮಾಣಕ್ಕೆ ಗುಪ್ತ ಸಹಕಾರ ನೀಡಿರುವುದನ್ನು ಗಮನಿಸಿದಾಗ ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಕಂಡು ಬರುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಇರುವ ಎಲ್ಲಾ ಧಾರ್ಮಿಕ ನಿರ್ಮಾಣಗಳನ್ನು ತೆರವುಗೊಳಿಸಬೇಕು ಎಂದು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಇದ್ದು, ಈ ಆದೇಶಕ್ಕೆ ಗೌರವ ನೀಡಿ ರಾಜ್ಯಾದ್ಯಂತ ಇರುವ ಹಿಂದೂ ಧಾರ್ಮಿಕ ಕೇಂದ್ರಗಳು ತಮ್ಮ ತಮ್ಮ ಸ್ವಾಗತ ಗೋಪುರ ದೈವದ ಗುಡಿ, ನಾಗನಕಟ್ಟೆಗಳನ್ನು ತೆರವು ಮಾಡಿವೆ.
2009ರಲ್ಲಿ ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಕಾರ್ಕಳದಲ್ಲಿ ಸುಮಾರು 13 ಹಿಂದೂ ಧಾರ್ಮಿಕ ನಿರ್ಮಾಣಗಳನ್ನು ತೆರವುಗೊಳಿಸಲಾಗಿತ್ತು. ಬೈಲೂರು ಸಮೀಪ ಇದ್ದ ಒಂದು ದರ್ಗಾವನ್ನು ಕೂಡ ತೆರವು ಮಾಡಲಾಗಿತ್ತು. ಆ ಬಳಿಕ ಸರಕಾರಿ ಜಾಗದಲ್ಲಿ ದ್ವಾರ, ಸ್ವಾಗತ ಗೋಪುರ ಇನ್ನಿತರ ಧಾರ್ಮಿಕ ಕಟ್ಟೆಗಳನ್ನು ಕಟ್ಟಿಕೊಳ್ಳಲು ಅವಕಾಶ ನೀಡಲಾಗುತ್ತಿಲ್ಲ. ಆದರೆ ಈ ಚರ್ಚ್ ಆಡಳಿತ ಮಂಡಳಿಗೆ ಮಾತ್ರ ವಿಶೇಷವಾಗಿ ಅನುಮತಿ ದೊರೆತಿದೆ. ಇದರ ಹಿಂದೆ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿರುವ ಬಗ್ಗೆ ಶಂಕೆ ಇದ್ದು ಈ ಬಗ್ಗೆ ಲೋಕಾಯುಕ್ತ ಇಲಾಖೆಗೆ ನಾವು ದೂರು ಸಲ್ಲಿಸಲಿದ್ದೇವೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಸ್ಥಳದಲ್ಲಿ ಕಟ್ಟಲಾಗಿರುವ ಈ ದ್ವಾರವನ್ನು ತೆರವುಗೊಳಿಸುವ ಹೊಣೆಗಾರಿಕೆ ಜಿಲ್ಲಾಧಿಕಾರಿ ಅವರದ್ದಾಗಿದ್ದು ಅವರು ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಮತ್ತು ಚರ್ಚ್ ಜೊತೆ ಈ ಅಕ್ರಮದಲ್ಲಿ ಭಾಗಿಯಾಗಿರುವ ಲೋಕೋಪಯೋಗಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ತಪ್ಪಿದ್ದಲ್ಲಿ ಜಿಲ್ಲಾಧಿಕಾರಿ ಅವರ ವಿರುದ್ಧ ಬೃಹತ್ ಜನಾಂದೋಲನ ಮತ್ತು ಪ್ರತಿಭಟನಾ ಸಭೆಯನ್ನು ನಡೆಸಲಾಗುವುದು ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿಯೂ ಈ ಬಗ್ಗೆ ನಾವು ದಾವೆ ಹೂಡಲಿದ್ದೇವೆ ಎಂದು ಹೇಳಿದ್ದಾರೆ.
ಹಿಂದೂ ಹಿತರಕ್ಷಣಾ ವೇದಿಕೆಯು ಕಳೆದ ಹಲವು ವರ್ಷಗಳಿಂದ ಅತ್ತೂರು ಸಂತಲಾರೆನ್ಸ್ ಚರ್ಚ್ ನಡೆಸಿರುವ ಭೂ ಅತಿಕ್ರಮಣದ ಬಗ್ಗೆ ಹೋರಾಟ ನಡೆಸುತ್ತಿದೆ. ಚರ್ಚ್ ಸುಮಾರು 22 ಎಕರೆ ಸರಕಾರಿ ಕಂದಾಯ ಮತ್ತು ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು,ಇದರ ವಿರುದ್ಧ ಹೈಕೋರ್ಟ್ನಲ್ಲಿ ನಮ್ಮ ಕಾನೂನು ಹೋರಾಟ ನಡೆಯುತ್ತಿದೆ. ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಾಣ, ಸರಕಾರಿ ಭೂಮಿಯ ದುರುಪಯೋಗ, ಅರಣ್ಯ ನಾಶ, ಬೋಗಸ್ ದಾಖಲೆ ಸೃಷ್ಟಿಸಿ ಭೂಕಬಳಿಕೆ ಸೇರಿದಂತೆ ಹಲವಾರು ಕಾನೂನು ಬಾಹಿರ ಕೃತ್ಯಗಳನ್ನು ಈ ಚರ್ಚ್ ಆಡಳಿತ ಮಂಡಳಿ ಈಗಾಗಲೇ ನಡೆಸಿದೆ. ಹಿಂದೂ ಹಿತರಕ್ಷಣಾ ವೇದಿಕೆಯು ಈ ಅಕ್ರಮ ದ್ವಾರವನ್ನು ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಹತ್ತು ದಿನಗಳ ಗಡುವನ್ನು ನೀಡುತ್ತಿದೆ. ತಪ್ಪಿದ್ದಲ್ಲಿ ಜಿಲ್ಲೆಯಾದ್ಯಂತ ಹಿಂದೂ ಸಮಾಜವನ್ನು ಸಂಘಟಿಸಿ ಇದರ ವಿರುದ್ಧ ಹೋರಾಟ ಕೈಗೊತ್ತಿಕೊಳ್ಳಲಾಗುವುದು ಎಂದು ಕಾರ್ಕಳ ಹಿಂದೂ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಎಚ್ಚರಿಸಿದ್ದಾರೆ.
ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿ, ತೇರ್ಗಡೆಯಾದ ಅನುಶ್ರೀ ನಿಟ್ಟೆ
ಕಾರ್ಕಳ : ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅನುಶ್ರೀ ಅವರು ಅಖಿಲ ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸುವ ಮೂಲಕ ತೇರ್ಗಡೆ ಹೊಂದಿದ್ದಾರೆ.

ಇವರು ನಿಟ್ಟೆ ಗಣೇಶ್ ಆಚಾರ್ಯ ಮತ್ತು ವೀಣಾ ಆಚಾರ್ಯ ದಂಪತಿಗಳ ಸುಪುತ್ರಿಯಾಗಿದ್ದು, ಮಂಗಳೂರಿನ ಪಿ.ಪಿ.ಕೆ ಅಂಡ್ ಅಸೋಸಿಯೇಟ್ ಸಂಸ್ಥೆಯಲ್ಲಿ ಸಿ.ಎ ಪ್ರಶಾಂತ್ ಪೈ ಕೆ. ಯವರ ಅಧೀನದಲ್ಲಿ ಆರ್ಟಿಕಲ್ಶಿಪ್ ನಡೆಸಿರುತ್ತಾರೆ.
ಮಂಜುನಾಥ್ ಬೈಲೂರು ಸಾರಥ್ಯದ, ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚನೆಯ ಐಸಿರ ಕಲಾವಿದೆರ್ ಇವರ “ಡೆನ್ನಾನ”ನಾಟಕ ಶುಭಮುಹೂರ್ತ
ಕಾರ್ಕಳ : ಮಂಜುನಾಥ್ ಬೈಲೂರು ಸಾರಥ್ಯದ ‘ಐಸಿರ ಕಲಾವಿದೆರ್, ಬೈಲೂರು’ ಇವರ ಈ ವರ್ಷದ ಕಲಾಕೃತಿ ಬಲೆ ತೆಲಿಪಾಲೆ, ಬಲೆ ಬುಲಿಪಾಲೆ ಕಲಾವಿದ ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚಿಸಿ ಚೇತನ್ ನೀರೆ ಸಂಭಾಷಣೆ ಹಾಗೂ ನಿರ್ದೇಶನದ ಸಂಗೀತ ಮಾಣಿಕ್ಯ ನಿತಿನ್ ಶೀರ್ಲಾಲು ಸಂಗೀತ ನೀಡಲಿರುವ ಹೊಸ ಭರವಸೆಯನ್ನೋಳಗೊಂಡ “ಡೆನ್ನಾನ” ನಾಟಕದ ಶುಭಮುಹೂರ್ತ ದಿನಾಂಕ 11.07.2024ರ ಸಂಜೆ ಎರ್ಲಪಾಡಿ ಗುರು ಮಂದಿರದಲ್ಲಿ ಪ್ರಧಾನ ಅರ್ಚಕರಾದ ಸುಕೇಶ್ ಭಟ್ ಇವರ ನೇತೃತ್ವದಲ್ಲಿ ನಡೆಯಿತು.
ಈ ಶುಭ ಸಂದರ್ಭದಲ್ಲಿ ಎರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುನೀಲ್ ಹೆಗ್ಡೆ ಗೋವಿಂದೂರು, ಬೈಲೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ಧರ್ಮರಾಜ್ ಕುಮಾರ್, ಕರಾವಳಿ ಭಜನಾ ಸಂಸ್ಕಾರ ವೇದಿಕೆ ಮಂಗಳೂರು ಇದರ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಎರ್ಲಪಾಡಿ ಹಾಗು ಇತರ ಗಣ್ಯರು ತಂಡದ ಮುಖ್ಯಸ್ಥರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾರ್ಕಳ : ತಾಲೂಕಿನ ನಿಟ್ಟೆ ಗ್ರಾಮದ ಕಲ್ಲಂಬಾಡಿ ಪ್ರದೇಶದಲ್ಲಿನ ಕುಸುಮ ಶೆಟ್ಟಿಯವರ ಗದ್ದೆಯ ಬದುವಿನಲ್ಲಿರುವ ಈ ಶಾಸನವನ್ನು ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿದ್ದು, 3 ಅಡಿ ಎತ್ತರ ಮತ್ತು 2 ಅಡಿ ಅಗಲವನ್ನು ಹೊಂದಿರುವ ಈ ಶಾಸನವು 16ನೆಯ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯ 18 ಸಾಲುಗಳನ್ನು ಒಳಗೊಂಡಿದೆ. ಶಾಸನದ ಮೇಲ್ಭಾಗದಲ್ಲಿ ಮುಕ್ಕೊಡೆಯಿದ್ದು ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ.
ಶಾಸನದ ಅಧ್ಯಯನವನ್ನು ಈ ಮೊದಲು ಮಾಡಿದ್ದರೂ ಸಹ ಕಾಲಮಾನದಲ್ಲಿ ವ್ಯತ್ಯಾಸ ಕಂಡು ಬಂದಿರುವುದರಿಂದ ಈ ಶಾಸನದ ಮರು ಅಧ್ಯಯನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕ ಎಸ್.ಎ. ಕೃಷ್ಣಯ್ಯರವರ ಸಹಯೋಗದಲ್ಲಿ ಹಾಗೂ ಆದರ್ಶ್ ಶೆಟ್ಟಿ ಮತ್ತು ಅಕ್ಷಯ್ ಶೆಟ್ಟಿಯವರ ಮಾಹಿತಿಯ ಮೇರೆಗೆ ಮಾಡಿರುತ್ತಾರೆ.
ಜಿನ ಸ್ತುತಿಯೊಂದಿಗೆ ಪ್ರಾರಂಭವಾಗುವ ಈ ಶಾಸನವು 1452 (ಸಾಮಾನ್ಯ ವರ್ಷ 1530) ರ ವಿಕೃತಿ ಸಂವತ್ಸರದ ಮಕರ ಮಾಸ ಶುದ್ಧ 15ನೆಯ ಆದಿವಾರಕ್ಕೆ ಸೇರುತ್ತದೆ (ಮೊದಲ ಅಧ್ಯಯನದಲ್ಲಿ ಶಕವರ್ಷ 1442 ವಿಕ್ರಮ ಸಂವತ್ಸರ ಎಂದು ಓದಿರುತ್ತಾರೆ). ಈ ಸಂದರ್ಭದಲ್ಲಿ ಕಳಸ-ಕಾರ್ಕಳ ಭೈರರಸ ರಾಣಿ ಬೊಮ್ಮಲದೇವಿಯ ಪುತ್ರ ಇಮ್ಮಡಿ ಭೈರರಸನು ರಾಜ್ಯಭಾರ ಮಾಡುತ್ತಿದ್ದಾಗ ಮುಡಾಳಿಯವರು ಕಾರ್ಕಳದಲ್ಲಿನ ಅಜಿತನಾಥ (ಜೈನ ತೀರ್ಥಂಕರ) ದೇವರ ಅಮೃತಪಡಿಗೆ ಬಿಟ್ಟ ಭೂಮಿಯಲ್ಲಿ ಉತ್ಪತ್ತಿಯು ಕಡಿಮೆಯಾದಾಗ ಅದಕ್ಕೆ ಪ್ರತಿಯಾಗಿ ಇಮ್ಮಡಿ ಭೈರರಸನು ಕೊಟ್ಟ ಭೂ ದಾನದ ವಿವರವನ್ನು ಶಾಸನವು ಉಲ್ಲೇಖಿಸುತ್ತದೆ.
ಕ್ಷೇತ್ರಕಾರ್ಯ ಶೋಧನೆಯಲ್ಲಿ ಪುರಾತತ್ವ ವಿದ್ಯಾರ್ಥಿಗಳಾದ ವಿಶಾಲ್ ರೈ ಕೆ, ಶಶಾಂತ್, ಮಂಜುನಾಥ ನಂದಳಿಕೆ ಹಾಗೂ ಸ್ಥಳೀಯರಾದ ರತ್ನಾಕರ್ ಶೆಟ್ಟಿ, ವಸಂತ್ ಶೆಟ್ಟಿ ಮತ್ತು ರಾಜೀವಿ ಶೆಟ್ಟಿಯವರು ಸಹಕಾರ ನೀಡಿರುತ್ತಾರೆ.
ಜುಲೈ 9ರಂದು ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯಲ್ಲಿ ಉಚಿತ ಮೂಳೆಯ ಖನಿಜಾಂಶಗಳ ಸಾಂದ್ರತೆ ಪರೀಕ್ಷಾ ಶಿಬಿರ
ಕಾರ್ಕಳ : ಮೂಳೆಗಳನ್ನು ದುರ್ಬಲಗೊಳಿಸುವ ಮತ್ತು ಮುರಿತದ ಅಪಾಯವನ್ನು ಹೆಚ್ಚಿಸುವ ಸ್ಥಿತಿಯಾದ ಆಸ್ಟಿಯೊಪೊರೋಸಿಸ್, ಅದರ ಬಗ್ಗೆ ಅರಿವಿನ ಕೊರತೆಯಿಂದಾಗಿ ಪತ್ತೆಯಾಗುವುದೇ ಇಲ್ಲ. ಇದು ಪ್ರಧಾನವಾಗಿ ಋತುಬಂಧಕ್ಕೊಳಗಾದ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದನ್ನು ತಡೆಗಟ್ಟಲು ಆರಂಭಿಕ ರೋಗನಿರ್ಣಯವು ನಿರ್ಣಾಯಕವಾಗಿದೆ.
ಈ ಹಿನ್ನೆಲೆಯಲ್ಲಿ ಆರ್ಥೋಪೆಡಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಸುನಿಲ್ ಬಾಳಿಗ, ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ, ಅವರು ಆಸ್ಟಿಯೊಪೊರೋಸಿಸ್ ತೊಂದರೆಯನ್ನು ಪತ್ತೆಹಚ್ಚುವಲ್ಲಿ ಬೋನ್ ಮಿನರಲ್ ಡೆನ್ಸಿಟಿ (BMD) ಪರೀಕ್ಷೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಯಾವುದೇ ನೋವು – ಗಾಯ ಇಲ್ಲದೇ ಮಾಡುವ ಬಿಎಂಡಿ ಪರೀಕ್ಷೆಗೆ ಒಳಗಾಗುವ ಮೂಲಕ, ವ್ಯಕ್ತಿಗಳು ತಮ್ಮ ಮೂಳೆಗಳ ಸಾಂದ್ರತೆಯನ್ನು ಕಂಡು ಹಿಡಿಯಬಹುದು. ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳವು ಮಂಗಳವಾರ, 9 ಜುಲೈ 2024 ರಂದು ಮೂಳೆ ಮತ್ತು ಕೀಲು ವಿಭಾಗದಲ್ಲಿ ಉಚಿತ ಬೋನ್ ಮಿನರಲ್ ಡೆನ್ಸಿಟಿ ಶಿಬಿರವನ್ನು ಬೆಳಗ್ಗೆ ಗಂಟೆ 9:00 ರಿಂದ ಮಧ್ಯಾಹ್ನ ಗಂಟೆ 3:00 ರ ವರೆಗೆ ಆಯೋಜಿಸುತ್ತಿದೆ. ಶಿಬಿರದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು , ವಿಶೇಷವಾಗಿ ಮಹಿಳೆಯರು ಇದರ ಪ್ರಯೋಜನ ಪಡೆಯಬಹುದು. ಇದು ಮೊದಲು ನೋಂದಾಯಿಸುವ 100 ವ್ಯಕ್ತಿಗಳಿಗೆ ಸೀಮಿತವಾಗಿದೆ, ಕರೆಯ ಮೂಲಕ ಹೆಸರು ನೋಂದಾಯಿಸಿಕೊಂಡು ಬರುವುದು ಕಡ್ಡಾಯ. ನೋಂದಣಿಗಾಗಿ 9731601150/08258-230583 ಅನ್ನು ಸಂಪರ್ಕಿಸಬಹುದು ಎಂದು ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳದ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ ತಿಳಿಸಿದ್ದಾರೆ.
ಶಿಬಿರದ ವಿವರಗಳು: ದಿನಾಂಕ: 9ನೇ ಜುಲೈ 2024 ಸಮಯ: ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಸ್ಥಳ: ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳದ ಮೂಳೆ ಮತ್ತು ಕೀಲು ವಿಭಾಗ ಅರ್ಹತೆ: 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ: 08258-230583/9731601150 ನ್ನು ಸಂಪರ್ಕಿಸಬಹುದು.
ಕಾರ್ಕಳ : ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಎಂಟು ಮಂದಿಯನ್ನು ವಶಕ್ಕೆ ಪಡೆದ ಘಟನೆ ಜು. 5ರಂದು ಕಾರ್ಕಳ ತಾಲೂಕಿನ ಬೋಳದಲ್ಲಿ ಸಂಭವಿಸಿದೆ.
ಬೋಳ ಗ್ರಾಮದ ಪೊಸರ್ಮೆ ಎಂಬಲ್ಲಿ ಶ್ರೀನಿವಾಸ ಎಂಬುವವರಿಗೆ ಸಂಬಂಧಪಟ್ಟ ಹಳೆ ರೈಸ್ ಮಿಲ್ಲಿನ ಶೆಡ್ನಲ್ಲಿ ಶ್ರೀನಿವಾಸ, ಸಂತೋಷ್, ಶ್ರೀನಿವಾಸ, ಅಶೋಕ್, ರಾಜೇಶ್, ಕೃಷ್ಣ, ರವೀಂದ್ರ ಹಾಗೂ ಶಿವಾನಂದ ಎಂಬವರು ಇಸ್ಪೀಟು ಎಲೆಗಳನ್ನು ಹರಡಿಕೊಂಡು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಎಂಬ ಜುಗಾರಿ ಆಟವನ್ನು ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ ದಿಲೀಪ್ ಜಿ. ಆರ್. ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿತರನ್ನು ವಶಕ್ಕೆ ಪಡೆದು, ಇಸ್ಪೀಟು ಆಟಕ್ಕೆ ಬಳಸಿದ 25,720/- ನಗದು ಹಾಗೂ 159 ಇಸ್ಪೀಟ್ ಎಲೆಗಳು ಮತ್ತು ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.