ಕಾರ್ಕಳ : ಹೆಬ್ರಿಯ ಅಮೃತ ಭಾರತಿ ಶಾಲೆಯಲ್ಲಿ ಇಸ್ರೋದವರು ಆಯೋಜಿಸಿದ್ದ ‘ವರ್ಲ್ಡ್ ಸ್ಪೇಸ್ ವೀಕ್-2024’ ಕ್ವಿಜ್ನಲ್ಲಿ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಅರುಷಿ ಮತ್ತು ರೋಹನ್ ಕೆ. ಶಿವರುದ್ರಪ್ಪ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಆಡಳಿತ ಮಂಡಳಿ ಶಿಕ್ಷಕ ಶಿಕ್ಷಕೇತರ ವರ್ಗದವರು ಅಭಿನಂದಿಸಿದ್ದಾರೆ.
Hebri
ಅಸ್ವಸ್ಥಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೇ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಸರಕಾರಿ ಬಸ್ ಚಾಲಕ ನಿರ್ವಾಹಕರಿಗೆ ಮೆಚ್ಚುಗೆ
ಹೆಬ್ರಿ : ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಅಸ್ವಗೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಸಿಬ್ಬಂದಿಗಳು ನೇರವಾಗಿ ಹೆಬ್ರಿಯ ಸರ್ಕಾರಿ ಸಮುದಾಯ ಕೇಂದ್ರ ಆಸ್ಪತ್ರೆಗೆ ದಾಖಲು ಮಾಡಿ ಜೀವ ಉಳಿಸಿದ ಘಟನೆ ಸಂಭವಿಸಿದೆ.
ಸರ್ಕಾರಿ ಬಸ್ ಶಿವಮೊಗ್ಗದಿಂದ ಉಡುಪಿಯತ್ತ ಬರುತ್ತಿತ್ತು. 19ರ ಹರೆಯದ ಸುರಕ್ಷಾ ಎಂಬವರು ಮೇಗರವಳ್ಳಿಯಲ್ಲಿ ಬಸ್ ಹತ್ತಿದ್ದರು. ಆಗುಂಬೆ ಘಾಟಿಯಲ್ಲಿ ತೀವ್ರ ಅಸ್ವಸ್ಥಗೊಂಡಾಗ ನಿರ್ವಾಹಕ ವಾಸಿಮ್ ದೇಸಾಯಿ ಆಕೆಯ ಸಹಾಯಕ್ಕೆ ಬಂದಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಸೋಮೇಶ್ವರದ ಉಪ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದುಕೊಂಡು ಹೋದಾಗ, ಸುರಕ್ಷಾ ಯಾವುದೇ ರೀತಿಯ ಚೇತರಿಕೆ ಕಂಡು ಬಂದಿಲ್ಲ. ಅಲ್ಲಿಂದ ನೇರವಾಗಿ ಪ್ರಯಾಣಿಕರ ಸಹಕಾರದೊಂದಿಗೆ ಹೆಬ್ರಿಯ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಬಂದು ಅವರನ್ನು ದಾಖಲು ಮಾಡಲಾಗಿದೆ. ಸದ್ಯಕ್ಕೆ ಸ್ವಲ್ಪ ಮಟ್ಟದಲ್ಲಿ ಸುಧಾರಿಸಿಕೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ಕಳುಹಿಸಲಾಗಿದೆ.
ಚಾಲಕ ತಾರೇಶ್ ಹಾಗೂ ನಿರ್ವಾಹಕ ವಾಸಿಮ್ ದೇಸಾಯಿ ಸುರಕ್ಷಾ ಚೇತರಿಕೆಗೆ ಬಹಳಷ್ಟು ಶ್ರಮವಹಿಸಿದರು. ಬಸ್ಸಿನಲ್ಲಿ ಮಹಿಳೆಯರಿಂದ ಜೀವ ಉಳಿಸಲು ಸಹಾಯ ಕೇಳಿದಾಗ ಯಾರ ಸಹಾಯವೂ ಸಿಗದಿದ್ದರೂ, ಯುವತಿಯೊಬ್ಬರು ಒಬ್ಬಳು ಬಾಯಿಗೆ ಶ್ವಾಸ ನೀಡಿ ಮಾನವೀಯತೆ ಮೆರೆದಿದ್ದಾಳೆ. ಇವರೊಂದಿಗೆ ಸಿಬ್ಬಂದಿಗಳು ತೋರಿದ ಸಕಾಲಿಕ ಶ್ರಮದಿಂದ ಜೀವ ಉಳಿದಿದೆ. ಹೆಬ್ರಿಯ ಪೊಲೀಸರು, ಸಾರ್ವಜನಿಕರು ಈ ಸೇವಾಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಹೊಳೆಯಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ಸಮಸ್ಯೆ ಬಗೆಹರಿಸಿದ ಮೆಸ್ಕಾಂ ಸಿಬ್ಬಂದಿ; ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ
ಹೆಬ್ರಿ : ಹೊಳೆಯಲ್ಲಿ ಈಜಿಕೊಂಡು ಹೋಗಿ ಗ್ರಾಮಸ್ಥರ ವಿದ್ಯುತ್ ಸಮಸ್ಯೆ ಸರಿಪಡಿಸಿದ ಮೆಸ್ಕಾಂ ಸಿಬ್ಬಂದಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೆಬ್ರಿ ಶಾಖೆಯ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಅವರಿಗೆ, ಹೆಬ್ರಿ ತಾಲೂಕಿನ ಶಿವಪುರ ಮೂಡ್ಸಾಲಿನಿಂದ ಕರೆ ಬಂದಿತ್ತು. ತಮ್ಮ ಏರಿಯಾದಲ್ಲಿ ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಸ್ಥಳೀಯರು ದೂರು ನೀಡಿದ್ದರು. ಆದರೆ ಅಲ್ಲಿಗೆ ಹೋಗಬೇಕಿದ್ದರೆ ಹೊಳೆ ದಾಟಲೇಬೇಕುತ್ತು. ಊರವರ ಸಮಸ್ಯೆ ಅರಿತ ಸಿಬ್ಬಂದಿ ಪ್ರಮೋದ್ ಈಜಿಕೊಂಡೇ ಹೊಳೆ ದಾಟಿ ಹೋಗಿ ದುರಸ್ತಿ ಕಾರ್ಯ ಮಾಡಿದ್ದಾರೆ. ಕೆಲವೇ ಹೊತ್ತಿನಲ್ಲಿ ಸಮಸ್ಯೆ ಬಗೆಹರಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಪ್ರಮೋದ್ ನಡೆಗೆ ಸ್ಥಳೀಯರು ಭಾರೀ ಮೆಚ್ಚುಗೆ ಸೂಚಿಸಿದ್ದಾರೆ.
ಹೊಳೆ ದಾಟಿ ಬಂದ ಸಿಬ್ಬಂದಿಯ ವೀಡಿಯೋ ಸೆರೆ ಹಿಡಿದ ಸ್ಥಳೀಯರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೆಬ್ರಿ : ವಿಪ್ರ ಬಾಂಧವರಿಂದ ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದಿಂದ ಉಡುಪಿ ಶ್ರೀ ಕೃಷ್ಣಮಠಕ್ಕೆ 14ನೇ ಪಾದಯಾತ್ರೆ ಸೆಪ್ಟೆಂಬರ್ 22ರಂದು ಭಾನುವಾರ ನಡೆಯಿತು.

ಧರ್ಮ ಜಾಗೃತಿ, ದೇವರ ಅನುಗ್ರಹ, ಧರ್ಮ ಜಾಗೃತಿ ಮತ್ತು ಲೋಕಕ್ಕೆ ಸುಭಿಕ್ಷೆಯಾಗಲಿ ಎನ್ನುವ ಸದುದ್ದೇಶದಿಂದ
ಪಾದಯಾತ್ರೆಯ ಹಾದಿಯಲ್ಲಿ ದೇವರ ನಾಮಾವಳಿ, ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡುತ್ತ ಭಕ್ತರು ತೆರಳಿದರು. ಪಾಡಿಗಾರ ವಡ್ಡಮೇಶ್ವರ ಮಠದ ಬೆಣ್ಣೆ ಕೃಷ್ಣ ದೇವರ ಮತ್ತು ಪೆರ್ಡೂರು ಅನಂತ ಪದ್ಮನಾಭ ದೇವರ ದರ್ಶನ ಮಾಡಿ ಹಿರಿಯಡ್ಕ ಪುತ್ತಿಗೆ ಮಠಕ್ಕೆ ತೆರಳಿ ಸುವರ್ಣಾ ನದಿಯಲ್ಲಿ ತೀರ್ಥಸ್ನಾನ ಮಾಡಿ ಶ್ರೀ ವಿಠಲ ದೇವರ ದರ್ಶನ ಮಾಡಿ ಮಹಾಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಅಲ್ಲಿಂದ ಉಡುಪಿಗೆ ತೆರಳಿ ಕನಕನ ಕಿಂಡಿ ಮೂಲಕ ಶ್ರೀ ಕೃಷ್ಣ ದೇವರ ದರ್ಶನ ಮಾಡಿ ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದೇವರ ದರ್ಶನ ಮಾಡಿ ಮಧ್ವ ಸರೋವರಕ್ಕೆ ತೆರಳಿ ತೀರ್ಥ ಸ್ನಾನ ಮಾಡಿ ಪಾದಯಾತ್ರೆ ಸಮಾಪ್ತಿಗೊಳಿಸಿದರು. ಅನಂತರ ಶ್ರೀ ಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ ಮಾಡಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ಮಹಾಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಪರ್ಯಾಯ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.
ಗಿಲ್ಲಾಳಿ ವಿಷ್ಣುಮೂರ್ತಿ ಆಚಾರ್ಯ, ಬಲ್ಲಾಡಿ ಚಂದ್ರಶೇಖರ ಭಟ್ ಮತ್ತು ಸುದರ್ಶನ್ ಜೋಯಿಸ್ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆಯಲ್ಲಿ ವೇದವ್ಯಾಸ ತಂತ್ರಿ ಮಡಾಮಕ್ಕಿ, ಸುಬ್ರಮಣ್ಯ ಆಚಾರ್ಯ ಹೆಬ್ರಿ, ನಿತ್ಯಾನಂದ ಭಟ್ ಹೆಬ್ರಿ, ವೆಂಕಟರಮಣ ಕಲ್ಕೂರ್ ಉಪ್ಪಳ, ಗಿರೀಶ್ ಶಿವಪುರ, ರಾಘವೇಂದ್ರ ಭಟ್ ಉಪ್ಪಳ, ರಾಮಚಂದ್ರ ಭಟ್ ವರಂಗ, ವಿದ್ಯಾಲಕ್ಷ್ಮಿ ಆಚಾರ್ಯ ಗಿಲ್ಲಾಳಿ, ಶ್ರೀಕಾಂತ್ ಭಟ್ ಮುದ್ರಾಡಿ, ಶಂಕರ್ ಭಟ್ ಹೆರ್ಮುಂಡೆ, ಶ್ರೀಕಾಂತ್ ಓಕುಡ ಕನ್ಯಾನ, ಗಣೇಶ್ ಉಳಿತಾಯ ಉಪ್ಪಳ, ಕೃಷ್ಣ ಉಳಿತಾಯ ಉಪ್ಪಳ, ವೀಣಾ ಭಟ್ ವರಂಗ, ರಮ್ಯಾ ಭಟ್ ಬಲ್ಲಾಡಿ, ಪ್ರಶಾಂತ್ ಭಟ್ ದೊಡ್ಡಬಳ್ಳಾಪುರ, ಶ್ವೇತಾ ಭಟ್ ದೊಡ್ಡಬಳ್ಳಾಪುರ, ಪ್ರಕಾಶ್ ಭಟ್ ಹೆಬ್ರಿ, ಶ್ರೀನಿವಾಸ ಭಟ್ ಎಣ್ಣೆಹೊಳೆ, ಶಿಶಿರ ಜೋಯಿಸ್ ಹೆಬ್ರಿ, ಜಾನಕಿ ಭಟ್ ಗಿಲ್ಲಾಳಿ, ರಾಘವೇಂದ್ರ ಕಲ್ಕೂರ್ ಉಪ್ಪಳ , ವಸುಪ್ರದಾ ಆಚಾರ್ಯ, ಬೆಂಗಳೂರು, ಶ್ರೀಶ ಭಟ್ ಬಲ್ಲಾಡಿ ಪಾಲ್ಗೊಂಡರು.
ಕಾರ್ಕಳ : ಹೊಂದಾಣಿಕೆ ರಾಜಕಾರಣವನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ. ಪಕ್ಷವನ್ನು ಮತ್ತೊಮ್ಮೆ ತಳ ಮಟ್ಟದಿಂದ ಕಟ್ಟ ಬೇಕಾಗಿದೆ, ಪ್ರತಿಯೊಬ್ಬ ನಾಯಕರೂ ಕೂಡ ಪಕ್ಷದ ನೆಲೆಯಲ್ಲಿ ಕೆಲಸ ಮಾಡಬೇಕಿದೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾಗಿ ನೇಮಕಗೊಂಡಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದರು.
ಅವರು ಉಸ್ತುವಾರಿಯಾಗಿ ಪ್ರಥಮ ಬಾರಿ ಕಾರ್ಕಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪಕ್ಷದ ಪದಾಧಿಕಾರಿಗಳು ಮತ್ತು ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಪಕ್ಷ ಸಂಘಟನೆಯ ದೃಷ್ಟಿಯಿಂದ ಹಲವು ಮಾಹಿತಿಯನ್ನು ಪಡೆದುಕೊಂಡರು. ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ಅಹವಾಲು ಸ್ವೀಕರಿಸಿ ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಹಲವು ಮಹತ್ವದ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಸಮಿತಿ ಉಪಾಧ್ಯಕ್ಷ ಡಿ ಆರ್ ರಾಜು ಸಾಂದರ್ಭಿಕವಾಗಿ ಪಕ್ಷದ ಅಭಿವೃದ್ದಿ ಹಾಗೂ ಬಲವರ್ಧನೆ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಂದಾಳು ಮುನಿಯಾಲು ಉದಯ ಕುಮಾರ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.

ಮೂರೂವರೆ ವರ್ಷದ ಮಗುವಿನ ಮೇಲೆ ತೀವ್ರ ತರಹದ ಹಲ್ಲೆ!? ಚಿಕಿತ್ಸೆ ಪಡೆಯುತ್ತಿರುವ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗು
ಉಡುಪಿ : ಮೂರೂವರೆ ವರ್ಷದ ಮಗುವಿನ ಮೇಲೆ ತೀವ್ರ ತರಹದ ಹಲ್ಲೆ ನಡೆದಿದ್ದು ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
3 ವರ್ಷ 9 ತಿಂಗಳ ಮಗುವನ್ನು ಪೋಷಕರು ಗುರುವಾರ ಬೆಳಿಗ್ಗೆ ಉಡುಪಿಯ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಮಗುವಿಗೆ ಹುಷಾರಿಲ್ಲ ಎಂದು ಚಿಕಿತ್ಸೆ ಕೊಡಿಸಲು ಕರೆ ತಂದಿದ್ದ ತಾಯಿ ಮಗುವಿನ ಮೈ ಮೇಲೆ ತೀವ್ರ ತರಹದ ಗಾಯ ಆಗಿರುವುದನ್ನು ಗಮನಿಸಿದ್ದಾರೆ. ಬಳಿಕ ಡಿಹೆಚ್ಓ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಆಸ್ಪತ್ರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಭೇಟಿ ನೀಡಿದ್ದು ಇವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಮಗುವಿನ ಮೇಲಾದ ಗಾಯದ ಬಗ್ಗೆ ಪೋಷಕರು ಸ್ಪಷ್ಟ ಮಾಹಿತಿ ನೀಡಿಲ್ಲ ಅಥವಾ ಮಾಹಿತಿ ಅವರಿಗೆ ತಿಳಿದಿಲ್ಲ. ಪ್ರಜ್ಞಾಹೀನ ಸ್ಥಿತಿಯಲ್ಲಿರುವುದರಿಂದ ಮಗುವಿನಿಂದಲೂ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ.
ಸದ್ಯ ಘಟನೆ ಬಗ್ಗೆ ಪೊಲೀಸ್ ಇಲಾಖೆ ತನಿಖೆಗೆ ಮುಂದಾಗಿದೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಚಕ್ಕರಮಕ್ಕಿ ಶೇಡಿಮನೆ ಎಂಬಲ್ಲಿ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಹಿರಿಯ ಸಾಹಿತಿ ಶಿಕ್ಷಕ ಕೀರ್ತಿಶೇಷ ಅಂಬಾತನಯ ಮುದ್ರಾಡಿ ಸ್ಮರಣಾರ್ಥ, ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ..!!
ಹೆಬ್ರಿ : ಯಾವುದೇ ಪ್ರಶಸ್ತಿಯ ಹಿಂದೆ ಹೋಗಬಾರದು. ನಮ್ಮಷ್ಟಕ್ಕೆ ನಾವೇ ಪ್ರಾಮಾಣಿಕವಾಗಿ ಉತ್ತಮ ಕೆಲಸಗಳನ್ನು ಮಾಡಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಈ ನಿಟ್ಟಿನಲ್ಲಿ ಹೆಬ್ರಿಯ ಪ್ರತಿಷ್ಠಿತ ಚಾಣಕ್ಯ ಸಂಸ್ಥೆ ತೆರೆಮರೆಯ ಸಾಧಕರನ್ನು ನಾಡಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಅಂಕ ಗಳಿಕೆಯ ತರಬೇತಿಯೊಂದೇ ಶಿಕ್ಷಣವಾಗದೆ ಬದುಕು ಶಿಕ್ಷಣ ನೀಡುವ ಮತ್ತು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವ ಪ್ರಯತ್ನವನ್ನು ಶಿಕ್ಷಣದ ಜೊತೆ ಮಾಡಿದಾಗ ನಮ್ಮ ಬದುಕು ಸುಂದರವಾಗುತ್ತದೆ ಎಂದು ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಮಾಜ ವಿಜ್ಞಾನ ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಚಾಣಕ್ಯ ಏಜ್ಯುಕೇಶನ್ ಮತ್ತು ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಾಡಿನ ಹೆಸರಾಂತ ಸಾಹಿತಿ ಶಿಕ್ಷಕ ಕೀರ್ತಿಶೇಷ ಅಂಬಾತನಯ ಮುದ್ರಾಡಿ ಸ್ಮರಣಾರ್ಥ ಕೊಡಮಾಡುವ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವುದರ ಜತೆಗೆ ವಿದ್ಯಾರ್ಥಿಗಳ ಭವಿಷ್ಯದ ಆಶಾಕಿರಣವಾಗಿದ್ದಾರೆ ಎಂದು ಚಾರ ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ಸುನೀಲ್ ಕುಮಾರ್ ಹೇಳಿದರು.
ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸುವ ಚಾಣಕ್ಯ ಸಂಸ್ಥೆಯ ಸಮಾಜ ಮುಖಿ ಚಿಂತನೆ ಶ್ಲಾಘನೀಯ ಎಂದು ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಹೇಳಿದರು.
ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಕೀರ್ತಿಶೇಷ ಅಂಬಾತನಯ ಮುದ್ರಾಡಿ ಅವರ ಪುತ್ರ ಸನತ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೇ ವೀಣಾ ಯು.ಶೆಟ್ಟಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ನೇತಾಜಿ ಫ್ರೆಂಡ್ಸ್ ಕ್ಲಬ್ ಮುದ್ರಾಡಿ ಹಾಗು ಜೇಸಿಐ ಸಹಯೋಗದೊಂದಿಗೆ ನಡೆದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಚಾರ ಜವಾಹರ ನವೋದಯ ವಿದ್ಯಾಲಯದ ಉಪ ಪ್ರಾಂಶುಪಾಲ ವಿ.ಕೆ. ಮನೋಹರ್, ನೇತಾಜಿ ಫ್ರೆಂಡ್ಸ್ ಕ್ಲಬ್ಮುದ್ರಾಡಿ ಇದರ ಅಧ್ಯಕ್ಷ ಸಂತೋಷ್ ಪೂಜಾರಿ ಬಲ್ಲಾಡಿ, ಜೇಸಿಐ ಅಧ್ಯಕ್ಷೆ ರಕ್ಷಿತಾ ಪುಟ್ಟಣ್ಣ ಭಟ್, ಪೂರ್ವಾಧ್ಯಕ್ಷ ಪ್ರಶಾಂತ್ ಪೈ, ಜೇಸಿರೆಟ್ ಪೂರ್ವಾದ್ಯಕ್ಷೆ ಅನಿತಾ ಪಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಚಂದ್ರಶೇಖರ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಹೆಬ್ರಿ : ಶತಾಯುಷಿ ಮುದ್ರಾಡಿಯ ನಿವಾಸಿ ಕಜ್ಕೆ ಮಂಜುನಾಥ್ ಕಾಮತ್ (102) ನಿಧನ ಹೊಂದಿದರು.
ವರಂಗ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಮುದ್ರಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ, ನಾಡ್ಪಾಲು ಗ್ರಾಮದ ಸೋಮೇಶ್ವರ ವೆಂಕಟರಮಣ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ, ಮುದ್ರಾಡಿ ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷರಾಗಿ, ಮುದ್ರಾಡಿಯ ಸಾರ್ವಜನಿಕ ಶ್ರೀಗಣೇಶೋತ್ಸವ ಅಧ್ಯಕ್ಷರಾಗಿ ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು.
ಮೃತರು 4 ಪುತ್ರರು, 5 ಪುತ್ರಿಯರನ್ನು ಅಗಲಿದ್ದಾರೆ.
ಉಡುಪಿ : ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಅಥ್ಲೆಟಿಕ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ವಯೋಮಾನ 18ರ ಬಾಲಕರ ವಿಭಾಗದ 100 ಮೀಟರ್ ಮತ್ತು 200 ಮೀಟರ್ ಓಟದ ಸ್ಪರ್ಧೆಗಳಲ್ಲಿ ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚಿರಾಗ್ ಸಿ ಪೂಜಾರಿ ರಾಜ್ಯಮಟ್ಟದ ಅಮೆಚೂರ್ ಜೂನಿಯರ್ ಅಥ್ಲೆಟಿಕ್ಸ್ ಕೂಟಕ್ಕೆ ಆಯ್ಕೆಯಾಗಿದ್ದಾರೆ.
ಚಿರಾಗ್ ಸಿ ಪೂಜಾರಿ ಹೆಬ್ರಿ ಸಂತೆಕಟ್ಟೆಯ ಚಂದ್ರ ಪೂಜಾರಿ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರು, ಹಾಗೂ ಬೋಧಕ ಬೋಧಕೇತರ ವರ್ಗ ಅಭಿನಂದಿಸಿರುತ್ತಾರೆ.
ಉಡುಪಿ ಜಿಲ್ಲಾ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಪಿ. ವಿ. ಆನಂದ ಸಾಲಿಗ್ರಾಮ ಆಯ್ಕೆ
ಉಡುಪಿ : ಉಡುಪಿ ಜಿಲ್ಲಾ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಹೆಬ್ರಿ ತಾಲೂಕಿನ ಮುದ್ರಾಡಿಯ ಎಂ ಎನ್ ಡಿ ಎಸ್ ಎಂ ಖಾಸಗಿ ಪ್ರೌಢಶಾಲೆ ಶಾಲೆಯ ಶಿಕ್ಷಕ, ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಖ್ಯಾತ ಯಕ್ಷಗಾನ ಪ್ರಸಂಗಕರ್ತ ಪಿ. ವಿ. ಆನಂದ ಸಾಲಿಗ್ರಾಮ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಕೊಂಡಳ್ಳಿ ಪ್ರಭಾಕರ ಶೆಟ್ಟಿ ವಿದ್ಯಾವರ್ಧಕ ಪ್ರೌಢಶಾಲೆ ಮುಂಡ್ಕೂರು ಕಾರ್ಕಳ, ಕಾರ್ಯದರ್ಶಿಯಾಗಿ ರಾಜೀವ್ ಪೂಜಾರಿ, ಸರಕಾರಿ ಪದವಿಪೂರ್ವ ಕಾಲೇಜು ತೆಕ್ಕಟ್ಟೆ ಕುಂದಾಪುರ, ಕೋಶಾಧಿಕಾರಿಯಾಗಿ ಸುಭಿಕ್ಷಾ, ಸರಕಾರಿ ಪ್ರೌಢಶಾಲೆ ಕಾವಡಿ, ಬ್ರಹ್ಮಾವರ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಪರ್ಣ ಬಾಯಿ ಕೆ. ಸರಕಾರಿ ಪ್ರೌಢಶಾಲೆ ಬೀಜಾಡಿ ಕುಂದಾಪುರ, ಮಂಜುನಾಥ್ ಕುಲಾಲ, ಸರಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿ, ಸವಿತಾ ಜಿ. ಸರಕಾರಿ ಪ್ರೌಢಶಾಲೆ ಉಪ್ಪಿನಕುದ್ರು, ಬೈಂದೂರು, ಕಾರ್ಕಳ ತಾಲೂಕು ಸಂಚಾಲಕರಾಗಿ ಜಾಲ್ಸೂರು ಗಣೇಶ್ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆ ಕಾರ್ಕಳ, ಉಡುಪಿ ತಾಲೂಕು ಸಂಚಾಲಕರಾಗಿ ಗಣಪತಿ ಭಟ್, ಸರಕಾರಿ ಸಂಯುಕ್ತ ಪ್ರೌಢಶಾಲೆ, ಒಳಕಾಡು, ಬ್ರಹ್ಮಾವರ ತಾಲೂಕು ಸಂಚಾಲಕರಾಗಿ ಜ್ಯೋತಿ ಕೃಷ್ಣ ಪೂಜಾರಿ, ಸರಕಾರಿ ಪ್ರೌಢಶಾಲೆ ಕೋಡಿಕನ್ಯಾನ, ಕುಂದಾಪುರ ತಾಲೂಕು ಸಂಚಾಲಕರಾಗಿ ರಮೇಶ್ ಕುಲಾಲ ಎನ್. ಸರಕಾರಿ ಪ್ರೌಢಶಾಲೆ ಕೆದೂರು, ಹೆಬ್ರಿ ತಾಲೂಕು ಸಂಚಾಲಕರಾಗಿ ಮಹೇಶ್ ಹೈಕಾಡಿ, ಅಮೃತಭಾರತಿ ವಿದ್ಯಾಲಯ ಹೆಬ್ರಿ, ಬೈಂದೂರು ತಾಲೂಕು ಸಂಚಾಲಕರಾಗಿ ಗಣೇಶ್ ದೇವಾಡಿಗ, ಸರಕಾರಿ ಪ್ರೌಢಶಾಲೆ ಆಲೂರು, ಕಾಪು ತಾಲೂಕು ಸಂಚಾಲಕರಾಗಿ ಶಕುಂತಲಾ, ಪೂರ್ಣಪ್ರಜ್ಞಾ ಪ್ರೌಢ ಶಾಲೆ, ಅದಮಾರು ಆಯ್ಕೆಯಾದರು.