Hebri
ನಕ್ಸಲ್ ವಿಕ್ರಮ್ ಗೌಡ ಎನ್ಕೌಂಟರ್ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ – ಮಹಜರು ಪ್ರಕ್ರಿಯೆ ನಡೆಸುತ್ತಿರುವ ಪೊಲೀಸರು
ಹೆಬ್ರಿ : ಉಡುಪಿ ಹೆಬ್ರಿಯ ಪೀತ್ಬೈಲ್ ಎಂಬಲ್ಲಿ ಸೋಮವಾರ ತಡರಾತ್ರಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ನಕ್ಸಲ್ ನಿಗ್ರಹ ದಳ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ದಂಡೇ ಆಗಮಿಸಿದೆ.
ಆಂತರಿಕ ಭದ್ರತಾ ಡಿಜಿಪಿ ರೂಪಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳದ ಮಹಜರು ಪ್ರಕ್ರಿಯೆ ನಡೆಸುತ್ತಿದ್ದಾರೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಉಡುಪಿ ಎಸ್ಪಿ ಡಾ. ಅರುಣ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಎಫ್ಎಸ್ಎಲ್ ತಂಡವನ್ನು ಕರೆಸಿಕೊಳ್ಳಲಾಗಿದೆ. ಬೆರಳಚ್ಚು ತಜ್ಞರು ಕೂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದರು. ಈ ಭಾಗದ ಪ್ರಭಾವಿ ನಕ್ಸಲ್ ನಾಯಕ ವಿಕ್ರಂ ಗೌಡನ ಎನ್ಕೌಂಟರ್ನಿಂದಾಗಿ ನಕ್ಸಲ್ ನಿಗ್ರಹ ಪಡೆ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಬಹುದೊಡ್ಡ ಗೆಲುವು ಸಿಕ್ಕಿದಂತಾಗಿದೆ.
ಹೆಬ್ರಿ : ಕೋಳಿ ಅಂಕದ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದು ದಾಳಿಯ ವೇಳೆ ಸ್ಥಳದಲ್ಲಿದ್ದ 6 ಮಂದಿ ಆರೋಪಿಗಳು ಪರಾರಿಯಾಗಿರುವ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೇಳಂಜೆ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಸೋಮವಾರ ನಡೆದಿದೆ.
ಹೆಬ್ರಿ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಮಹೇಶ್ ಟಿ.ಎಂ ಸಿಬ್ಬಂದಿಗಳೊಂದಿಗೆ ರೌಂಡ್ಸ್ ನಲ್ಲಿದ್ದ ಬೇಳಂಜೆ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ಜುಗಾರಿ ನಡೆಸುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ ದಾಳಿ ನಡೆಸಿದ್ದು ಆರೋಪಿಗಳಾದ ಕಿಶನ್, ಸುನೀಲ, ರಾಘವೇಂದ್ರ, ರಾಜೇಶ, ಕಿರ್ತನ್ ಮತ್ತು ರಂಜಿತ್ ಪರಾರಿಯಾಗಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಲಾಲ ಸಂಘ(ರಿ) ಹೆಬ್ರಿ ತಾಲೂಕು ಇದರ ವಾರ್ಷಿಕ ಮಹಾಸಭೆ ಹಾಗೂ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ
ಹೆಬ್ರಿ : ಕುಲಾಲ ಸಂಘ(ರಿ) ಹೆಬ್ರಿ ತಾಲೂಕು ಇದರ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ ಮತ್ತು ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭ ನವೆಂಬರ್ 17 ಭಾನುವಾರದಂದು ಹೆಬ್ರಿ ಚೈತನ್ಯ ಸಭಾಭವನದಲ್ಲಿ ಜರುಗಿತು.
ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ ಕೆ ಎ ಲಕ್ಷ್ಮಣ್ ಕುಲಾಲ್ ವಿಜಯ ವಿಠ್ಠಲ್ ಕೆಮಿಕಲ್ಸ್ ಎಂ ಡಿ ಇವರು ಯುವಕ ಯುವತಿಯರು ಸ್ವಂತ ಉದ್ಯೋಗದಿಂದ ಸ್ವಾವಲಂಬಿಯಾಗಿ ಸಮಾಜದ ಅಭಿವೃದ್ದಿಗೆ ಕೈ ಜೋಡಿಸಬೇಕು ಎಂದು ಹೇಳಿದರು.
ನಂತರ ಕುಂಬಾರಿಕೆ ಕುಲಕಸುಬು ಮಾಡುವವರಿಗೆ ಹಾಗೂ ವಿಭಿನ್ನ ಶೈಲಿಯ ಕೃಷಿಕರಿಗೆ ಮತ್ತು ಸಾಧಕರಿಗೆ ಸನ್ಮಾನಿಸಲಾಯಿತು. ಸಂಘದ ಮಹಾಪೋಷಕರು ಮತ್ತು ಪೋಷಕರಿಗೆ ಗೌರವದಿಂದ ಸನ್ಮಾನಿಸಲಾಯಿತು.
ರಾಜೀವ ಕುಲಾಲ್ ಪಿ ಡಬ್ಲ್ಯೂ ಡಿ ಗುತ್ತಿಗೆದಾರರು ಮಾತನಾಡಿ ಸಂಘದಲ್ಲಿ ಒಗ್ಗೂಡಿ ಮುಂದೆ ಹೋಗಬೇಕೆಂದು ಸಲಹೆ ಇತ್ತರು.
ನಂತರ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಿಸಲಾಯಿತು. ಭೋಜ ಕುಲಾಲ್ ಬೆಳಂಜೆ ಗೌರವಾದ್ಯಕ್ಷರು ಮಾತಾಡಿ ಸಂಘಕ್ಕೆ ಸ್ವಂತ ನಿವೇಶನದ ಅಗತ್ಯ ಇದೆ ಎಂದರು. ಕಾಳು ಕುಲಾಲ್ ಅಧ್ಯಕ್ಷರು ಕುಲಾಲ ಸಂಘ ಪೆರ್ಡೂರು ಮಾತನಾಡಿ ಪ್ರಥಮ ವರ್ಷದಲ್ಲಿ ಕುಲಾಲ ಸಂಘ ಹೆಬ್ರಿ ತಾಲೂಕು ಇಷ್ಟೊಂದು ಅದ್ದೂರಿಯಾಗಿ ನಡೆಯುತ್ತಿದು ಇದರ ಸಂಘಟನಾ ಶಕ್ತಿ ಅಭಿನಂದನೀಯ ಎಂದರು.
ಪ್ರಭಾಕರ್ ಕುಲಾಲ್ ವಲಯ ಅರಣ್ಯಾಧಿಕಾರಿಗಳು ಕಾರ್ಕಳ ಮಾತನಾಡಿ ತುಳು ಮತ್ತು ಕನ್ನಡದಲ್ಲಿ ಮಾತಾಡುವವರನ್ನು ಒಗ್ಗೂಡಿಸಿಕೊಂಡು ಸಂಘಟನೆ ಮಾಡುತ್ತಿರುವುದು ಹೆಬ್ರಿ ಕುಲಾಲ ಸಂಘದಲ್ಲಿ ಮಾತ್ರ ಎಂದು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಸುರೇಂದ್ರ ಕುಲಾಲ್ ವರಂಗ ಮಾತನಾಡಿ ನಾವು ತಾಲೂಕಿನಾದ್ಯಂತ ಸಂಘಟನೆಯನ್ನು ವಿಸ್ತರಿಸಬೇಕು. ನಮ್ಮ ಕುಲಾಲ ಸಮಾಜದ ಎಲ್ಲ ಜನರು ತಾಲೂಕು ಸಂಘದ ಒಟ್ಟಿಗೆ ಬರುವ ಹಾಗೆ ಎಲ್ಲರೂ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ಸಭೆಯಲ್ಲಿ ಕೆ ನಾರಾಯಣ್ ಕುಲಾಲ್ ಶ್ರೀರಾಮ್ ಜುವೆಲ್ಲರ್ಸ್, ವಿಠಲ್ ಕುಲಾಲ್ ಪಿ ಡಬ್ಲ್ಯೂ ಡಿ ಗುತ್ತಿಗೆದಾರರು, ಸುಮಿತ್ರಾ ಕುಲಾಲ್ ಬೆಪ್ದೆ ಮಹಿಳಾ ಘಟಕದ ಅಧ್ಯಕ್ಷರು ಮತ್ತು ಪ್ರದಾನ ಕಾರ್ಯದರ್ಶಿ ಸುದರ್ಶನ್ ಕುಲಾಲ್ ದರ್ಬುಜೆ ಉಪಸ್ಥಿತರಿದ್ದರು.
ಸಭೆಯನ್ನು ಅಣ್ಣಪ್ಪ ಕುಲಾಲ್ ಚಾರ ಸ್ವಾಗತಿಸಿದರು, ವಂದನಾ ಕುಲಾಲ್ ಚಾರ ನಿರೂಪಿಸಿದರು ಮತ್ತು ಸುನಂದ ಕುಲಾಲ್ ಮುಳ್ಳುಗುಡ್ಡೆ ಧನ್ಯವಾದ ಸಮರ್ಪಿಸಿದರು.
ಹೆಬ್ರಿ : ಪಶ್ಚಿಮ ಘಟ್ಟ ತಪ್ಪಲು ಪ್ರದೇಶವಾದ ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆಯಲ್ಲಿ ನಕ್ಸಲ್ ಎನ್ಕೌಂಟರ್ ನಡೆದಿದೆ. ನಕ್ಸಲ್ ನಾಯಕ ವಿಕ್ರಂ ಗೌಡ ಎಂಬಾತನನ್ನು ನಕ್ಸಲ್ ನಿಗ್ರಹ ಪಡೆ ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿತ್ತು. ಇದೇ ಹೊತ್ತಿಗೆ ಉಡುಪಿ ಜಿಲ್ಲೆಯಲ್ಲಿ ಗುಂಡಿನ ಸದ್ದು ಕೇಳಿದೆ. ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಎನ್ಕೌಂಟರ್ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗಿದ್ದಾನೆ ಎಂದು ತಿಳಿದುಬಂದಿದೆ.
ನಕ್ಸಲ್ ನಾಯಕ ವಿಕ್ರಂ ಗೌಡ ಕಬ್ಬಿನಾಲೆ ಮೂಲದವನಾಗಿದ್ದಾನೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಬಿರುಸುಗೊಂಡಿತ್ತು. ಹೀಗಾಗಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಆರಂಭಿಸಿತ್ತು.
ಹೆಬ್ರಿಯ ಹೆಬ್ಬೇರಿ ಯಕ್ಷಲೋಕದ 5ನೇ ವಾರ್ಷಿಕೋತ್ಸವ; ಕಲಾ ಸೇವೆಯೇ ಬದುಕಿನ ಸಾರ್ಥಕ್ಯಕ್ಕೆ ದಾರಿ : ಡಾ. ತಲ್ಲೂರು
ಉಡುಪಿ : ಸಮಾಜದ ಋಣ ತೀರಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು. ಅದು ಶಿಕ್ಷಣ, ಸಮಾಜ ಸೇವೆ, ಸಾಂಸ್ಕೃತಿಕ ರಂಗವೇ ಇರಬಹುದು. ಆದರೆ ಯಕ್ಷಗಾನ, ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡಿ, ಸಾಧಕರನ್ನು ಗುರುತಿಸಿ ಅಭಿನಂದಿಸುವುದರಲ್ಲಿ ಸಿಗುವ ಆತ್ಮ ತೃಪ್ತಿಇನ್ನಾವುದೇ ಸೇವೆಯಿಂದ ಸಿಗುವುದು ದುರ್ಲಭ. ಹೀಗಾಗಿ ಕಲಾ ಸೇವೆಯಲ್ಲಿಯೇ ಬದುಕಿನ ಸಾರ್ಥಕ್ಯವನ್ನು ಕಂಡುಕೊoಡಿದ್ದೇನೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಶನಿವಾರ ಹೆಬ್ರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಯಕ್ಷಲೋಕ ಹೆಬ್ಬೇರಿ ಸಂಸ್ಥೆಯ 5ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ನಾವು ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು. ಅದೇ ಉದ್ದೇಶದಿಂದ ಹಲವಾರು ಸಂಘಸoಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಯಕ್ಷಗಾನ ಆಸಕ್ತಿ ನನಗೆ ವರವಾಗಿ ಪರಿಣಮಿಸಿದೆ. 60ರ ವರ್ಷದಲ್ಲಿ ಯಕ್ಷಗಾನವನ್ನು ಗುರು ಸಂಜೀವ ಸುವರ್ಣರ ಬಳಿ ಕಲಿತು 400ಕ್ಕೂ ಅಧಿಕ ಪ್ರದರ್ಶನ ಮಾಡಿದ್ದೇನೆ. ಯಕ್ಷಲೋಕದ ಗುರು ಸುಬ್ರಹ್ಮಣ್ಯ ಪ್ರಸಾದ್ ಅವರೊಡನೆಯೂ ಪಾತ್ರವನ್ನು ಮಾಡಿದ ಸಂತೃಪ್ತಿಯಿದೆ. ಈ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸುವ, ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡುವ ಸುವರ್ಣವಕಾಶ ಲಭಿಸಿತು. ಈ ಕೊಡುಗೆಗಾಗಿಯೇ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಗೌರವ ಒಲಿದು ಬಂತು. ಇದು ಯಕ್ಷಗಾನಕ್ಕೆ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲು ಆ ದೇವರ ಕೃಪೆ ಎಂದೇ ನಂಬಿದ್ದೇನೆ. ನನ್ನ ಟ್ರಸ್ಟ್ ಮೂಲಕ ಸಾಧಕ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ಮಾಡುತ್ತಿದ್ದೇನೆ. ಇದೇ ಸೇವೆ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷನಾಗಿಯೂ ಮುಂದುವರಿಸಿದ್ದೇನೆ. ಸೇವೆಯಲ್ಲಿಯೇ ಬದುಕಿನ ಸಾರ್ಥಕವನ್ನು ಕಂಡುಕೊಂಡಿದ್ದೇನೆ ಎಂದು ಅವರು ತಿಳಿಸಿದರು.
ಕಲಾ ಪೋಷಕ ವಿಜಯ ಕುಮಾರ್ ಕಳ್ತೂರು, ಆವರ್ಸೆ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಶಶಿಧರ ಶೆಟ್ಟಿ, ಪ್ರಥಮ ದರ್ಜೆ ಗುತ್ತಿಗೆದಾರ ವಾದಿರಾಜ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ, ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ, ಕಲಾ ಪೋಷಕರೂ ಆಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಯಕ್ಷಲೋಕ ಹೆಬ್ಬೇರಿಯ ಅಧ್ಯಕ್ಷ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ, ಗೌರವಾಧ್ಯಕ್ಷ ಲಕ್ಷ್ಮಿಶ ಭಾರದ್ವಾಜ್, ವಿಜಯೇಂದ್ರ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಯಕ್ಷಲೋಕ ಹೆಬ್ಬೇರಿ ತಂಡದಿoದ ಗುರು ಸುಬ್ರಹ್ಮಣ್ಯ ಪ್ರಸಾದ್ ಅವರ ನಿರ್ದೇಶನದಲ್ಲಿ ‘ಶ್ರೀರಾಮ ದರ್ಶನ’ ಯಕ್ಷಗಾನ ಪ್ರದರ್ಶನ ನಡೆಯಿತು.
ಹೆಬ್ರಿ : ಹೆಬ್ರಿ ತಾಲೂಕಿನ ಬಲ್ಲಾಡಿ ಪ್ರದೇಶದಲ್ಲಿ, ನೀರಿನಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆ ಚಂದ್ರ ಗೌಡ್ತಿ(85 ವರ್ಷ) ಅವರ ಮೃತದೇಹ ಪತ್ತೆಯಾಗಿದೆ.
ಬಲ್ಲಾಡಿ ಪರಿಸರದ ಗದ್ದೆ ಬದಿಯಲ್ಲಿ ವೃದ್ಧೆಯ ದೇಹ ಪತ್ತೆಯಾಗಿದ್ದು, ನೆರೆಯ ನೀರಿನಲ್ಲಿ ಕೊಚ್ಚಿ ಹೋಗಿ ಅವರು ಸಾವಿಗೀಡಾಗಿದ್ದು ಭಾನುವಾರ ಮಧ್ಯಾಹ್ನದ ಧಾರಾಕಾರ ಮಳೆಯಿಂದಾಗಿ ಸೃಷ್ಟಿಯಾದ ಪ್ರವಾಹದಿಂದಾಗಿ ಸಂಭವಿಸಿದೆ.
ಆಗುಂಬೆ ಘಾಟಿ ಪ್ರದೇಶದಲ್ಲಿ ಮೇಘಸ್ಪೋಟದ ಮಾದರಿಯಲ್ಲಿ 3:00 ರಿಂದ 5:00 ರವರೆಗೆ ಸುರಿದ ಭಾರಿ ಮಳೆಯಿಂದಾಗಿ, ಕಬ್ಬಿನಾಲೆ ಗುಡ್ಡದಿಂದ ನೀರು ಹರಿದು, ಜನಜೀವನಕ್ಕೆ ತೀವ್ರ ತೊಂದರೆ ಉಂಟುಮಾಡಿತು.
ಇಲ್ಲಿನ ಭಾರಿ ಮಳೆಯಿಂದಾಗಿ 2 ಕಾರು ಮತ್ತು 2 ಬೈಕುಗಳಿಗೆ ಹಾನಿಯಾಗಿದೆ. ಸಂಜೆ ಬಳಿಕ ಮಳೆ ಇಳಿಮುಖಗೊಂಡಿದ್ದು, ಸದ್ಯದ ವಾತಾವರಣ ಮೋಡ ಕವಿದ ಸ್ಥಿತಿಯಲ್ಲಿದೆ.
ಉಡುಪಿ : ಉಡುಪಿ ಜಿಲ್ಲೆಯ ಹೆಬ್ರಿಯ ಸಮೀಪ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಹಲವಾರು ಸಮಸ್ಯೆಗಳು ಉಂಟಾಗಿವೆ. ಆಗುಂಬೆ ಘಾಟ್ ಸಮೀಪದಲ್ಲಿ ತೀವ್ರ ಮಳೆ ಬೀರುವ ಮೂಲಕ, ಹೆಬ್ರಿಯ ಸಮೀಪದ ನದಿ ತೊರೆಗಳು ತುಂಬಿ ಹರಿಯುತ್ತಿವೆ.
ಮಳೆ ನೀರು ತೋಟ ಮತ್ತು ಗದ್ದೆಗಳಿಗೆ ಏಕಾಯೇಕಿ ನುಗ್ಗಿದ್ದು, ಈ ಹಿನ್ನೆಲೆಯಲ್ಲಿ, ತೋಟದಲ್ಲಿ ನಿಲ್ಲಿಸಿದ್ದ ಕಾರು ನೀರಿನಲ್ಲಿ ತೇಲಿಹೋದ ಘಟನೆ ಸಂಭವಿಸಿದೆ. ಮುದ್ರಾಡಿಯ ತಗ್ಗು ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರುಗಳು, ರಬ್ಬರ್ ಅಡಿಕೆ ತೋಟದ ಮಧ್ಯೆ ಸಿಲುಕಿಕೊಂಡಿವೆ.
ಕಬ್ಬಿನಾಲೆ ಬೆಟ್ಟದ ಪರಿಸರದಲ್ಲಿ ವಿಪರೀತ ಮಳೆ ಸುರಿದ ಘಟನೆ, ಮಧ್ಯಾಹ್ನ 2:30 ರಿಂದ 4 ಗಂಟೆಯವರೆಗೆ ಸಂಭವಿಸಿದೆ. ಈ ಮಳೆಯ ಕಾರಣದಿಂದಾಗಿ, ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಕೆಲವೆಡೆ ಜಲಾಮಯಗೊಂಡವು.
ಕಾಂತಾರಬೈಲು 4, ಹೊಸಕಂಬಳ 1, ಮತ್ತು ಕೆಳಕಿಲದಲ್ಲಿ 3 ಮನೆಗಳಿಗೆ ನೀರು ನುಗ್ಗಿದ್ದು, ಗುಡುಗು ಮತ್ತು ಮಿಂಚು ಸಹಿತ ಮಳೆಗೆ, ಎರಡು ಕಾರುಗಳು ಮತ್ತು ಬೈಕುಗಳಿಗೆ ಹಾನಿಯಾಗಿದೆ.
ಸಂಜೆ ನಂತರ ಮಳೆ ಇಳಿಮುಖವಾಗಿದ್ದು, ನದಿ ತೊರೆಯಲ್ಲಿ ಹೆಚ್ಚಿದ್ದ ನೀರಿನ ಮಟ್ಟವು ಇಳಿಮುಖವಾಗುತ್ತಿದೆ. ನೀರಿನ ಪ್ರಮಾಣ ಇನ್ನೂ ಕಡಿಮೆ ಆಗುವ ನಿರೀಕ್ಷೆಯಿದೆ.
‘ವರ್ಲ್ಡ್ ಸ್ಪೇಸ್ ವೀಕ್-2024’ ಕ್ವಿಜ್ನಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ
ಕಾರ್ಕಳ : ಹೆಬ್ರಿಯ ಅಮೃತ ಭಾರತಿ ಶಾಲೆಯಲ್ಲಿ ಇಸ್ರೋದವರು ಆಯೋಜಿಸಿದ್ದ ‘ವರ್ಲ್ಡ್ ಸ್ಪೇಸ್ ವೀಕ್-2024’ ಕ್ವಿಜ್ನಲ್ಲಿ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಅರುಷಿ ಮತ್ತು ರೋಹನ್ ಕೆ. ಶಿವರುದ್ರಪ್ಪ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಆಡಳಿತ ಮಂಡಳಿ ಶಿಕ್ಷಕ ಶಿಕ್ಷಕೇತರ ವರ್ಗದವರು ಅಭಿನಂದಿಸಿದ್ದಾರೆ.
ಅಸ್ವಸ್ಥಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೇ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಸರಕಾರಿ ಬಸ್ ಚಾಲಕ ನಿರ್ವಾಹಕರಿಗೆ ಮೆಚ್ಚುಗೆ
ಹೆಬ್ರಿ : ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಅಸ್ವಗೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಸಿಬ್ಬಂದಿಗಳು ನೇರವಾಗಿ ಹೆಬ್ರಿಯ ಸರ್ಕಾರಿ ಸಮುದಾಯ ಕೇಂದ್ರ ಆಸ್ಪತ್ರೆಗೆ ದಾಖಲು ಮಾಡಿ ಜೀವ ಉಳಿಸಿದ ಘಟನೆ ಸಂಭವಿಸಿದೆ.
ಸರ್ಕಾರಿ ಬಸ್ ಶಿವಮೊಗ್ಗದಿಂದ ಉಡುಪಿಯತ್ತ ಬರುತ್ತಿತ್ತು. 19ರ ಹರೆಯದ ಸುರಕ್ಷಾ ಎಂಬವರು ಮೇಗರವಳ್ಳಿಯಲ್ಲಿ ಬಸ್ ಹತ್ತಿದ್ದರು. ಆಗುಂಬೆ ಘಾಟಿಯಲ್ಲಿ ತೀವ್ರ ಅಸ್ವಸ್ಥಗೊಂಡಾಗ ನಿರ್ವಾಹಕ ವಾಸಿಮ್ ದೇಸಾಯಿ ಆಕೆಯ ಸಹಾಯಕ್ಕೆ ಬಂದಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಸೋಮೇಶ್ವರದ ಉಪ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದುಕೊಂಡು ಹೋದಾಗ, ಸುರಕ್ಷಾ ಯಾವುದೇ ರೀತಿಯ ಚೇತರಿಕೆ ಕಂಡು ಬಂದಿಲ್ಲ. ಅಲ್ಲಿಂದ ನೇರವಾಗಿ ಪ್ರಯಾಣಿಕರ ಸಹಕಾರದೊಂದಿಗೆ ಹೆಬ್ರಿಯ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಬಂದು ಅವರನ್ನು ದಾಖಲು ಮಾಡಲಾಗಿದೆ. ಸದ್ಯಕ್ಕೆ ಸ್ವಲ್ಪ ಮಟ್ಟದಲ್ಲಿ ಸುಧಾರಿಸಿಕೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ಕಳುಹಿಸಲಾಗಿದೆ.
ಚಾಲಕ ತಾರೇಶ್ ಹಾಗೂ ನಿರ್ವಾಹಕ ವಾಸಿಮ್ ದೇಸಾಯಿ ಸುರಕ್ಷಾ ಚೇತರಿಕೆಗೆ ಬಹಳಷ್ಟು ಶ್ರಮವಹಿಸಿದರು. ಬಸ್ಸಿನಲ್ಲಿ ಮಹಿಳೆಯರಿಂದ ಜೀವ ಉಳಿಸಲು ಸಹಾಯ ಕೇಳಿದಾಗ ಯಾರ ಸಹಾಯವೂ ಸಿಗದಿದ್ದರೂ, ಯುವತಿಯೊಬ್ಬರು ಒಬ್ಬಳು ಬಾಯಿಗೆ ಶ್ವಾಸ ನೀಡಿ ಮಾನವೀಯತೆ ಮೆರೆದಿದ್ದಾಳೆ. ಇವರೊಂದಿಗೆ ಸಿಬ್ಬಂದಿಗಳು ತೋರಿದ ಸಕಾಲಿಕ ಶ್ರಮದಿಂದ ಜೀವ ಉಳಿದಿದೆ. ಹೆಬ್ರಿಯ ಪೊಲೀಸರು, ಸಾರ್ವಜನಿಕರು ಈ ಸೇವಾಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.