ಉಡುಪಿ : ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ – ಸಂಜೀವಿನಿ, ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಹೆಬ್ರಿ, ಗ್ರಾಮ ಪಂಚಾಯತ್ ಹೆಬ್ರಿ ಹಾಗೂ ಹೆಬ್ಬೇರಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಹೆಬ್ಬೇರಿ ಉತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಸಂಜೀವಿನಿ ಮಾರಾಟ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಬ್ರಿ ರಾಮ ಮಂದಿರದ ಮುಂಭಾಗದಲ್ಲಿ ಫೆಬ್ರವರಿ 13 ರಿಂದ 15 ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಈ ಮಾರಾಟ ಮೇಳದಲ್ಲಿ ಮಹಿಳೆಯರು ತಯಾರಿಸಿದ ಗೃಹ ಉಪಯೋಗಿ ವಸ್ತುಗಳು, ಕರಕುಶಲ ವಸ್ತುಗಳು, ಟೆರೇಕೋಟಾ ವಸ್ತುಗಳು, ಕೃತಕ ಆಭರಣ, ಬಟ್ಟೆಬ್ಯಾಗ್, ಆಯುರ್ವೇದಿಕ್ ಉತ್ಪನ್ನಗಳು, ಹೆಬ್ರಿ ಹನಿ ಇತ್ಯಾದಿ ಉತ್ಪನ್ನಗಳು ಲಭ್ಯವಿರುತ್ತದೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೀವಿನಿ ಮಹಿಳೆಯರು, ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳನ್ನು ಹಮ್ಮಿಕೊಂಡಿದ್ದು, ಈ ಎಲ್ಲಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಜೀವಿನಿ ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹ ನೀಡುವಂತೆ ಹೆಬ್ರಿ ತಾಲೂಕು ಪಂಚಾಯತ್ ಕಚೇರಿ ಪ್ರಕಟಣೆ ತಿಳಿಸಿದೆ.
Hebri
ಹೆಬ್ರಿ : ಒಣಗಿದ ಅಡಿಕೆ ಮರ ತುಂಡಾಗಿ ತಲೆಯ ಮೇಲೆ ಬಿದ್ದ ಪರಿಣಾಮ ಕೃಷಿಕರೊಬ್ಬರು ಮೃತಪಟ್ಟ ಘಟನೆ ವರಂಗ ಗ್ರಾಮದ ಮೂಡುಕುಡೂರು ಕೆಳಗಿನ ಮನೆ ಎಂಬಲ್ಲಿ ಸಂಭವಿಸಿದೆ.
ಮೃತರನ್ನು ಸ್ಥಳೀಯ ನಿವಾಸಿ ರಾಮ(62) ಎಂದು ಗುರುತಿಸಲಾಗಿದೆ. ಇವರು ತೋಟದಲ್ಲಿ ಒಣಗಿದ ಅಡಿಕೆ ಮರವನ್ನು ಹಗ್ಗ ಹಾಕಿ ಎಳೆಯುತ್ತಿರುವಾಗ ಆಕಸ್ಮಿಕವಾಗಿ ಆಯತಪ್ಪಿ ಒಣಗಿದ ಅಡಿಕೆ ಮರವು ತುಂಡಾಗಿ ತಲೆಯ ಮೇಲೆ ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರಿಯ ಹೆದ್ದಾರಿ ಬೇಕಾಬಿಟ್ಟಿ ಕಾಮಗಾರಿಗೆ ಯುವಕ ಬಲಿ; ಸ್ಥಳೀಯರಿಂದ ಆಕ್ರೋಶ; ಗರಿಷ್ಠ ಪರಿಹಾರಕ್ಕೆ ಮನವಿ
ಹೆಬ್ರಿ : ರಾಷ್ಟ್ರೀಯ ಹೆದ್ದಾರಿ 169ಎಯ ಕಾಮಗಾರಿ ಶಿವಪುರದಲ್ಲಿ ನಡೆಯುತ್ತಿದೆ. ಡಿಸೆಂಬರ್ 4ರಂದು ರಸ್ತೆ ಅಪಘಾತದಲ್ಲಿ ಆರ್ಎಸ್ಎಸ್ನ ಸಕ್ರಿಯ ಕಾರ್ಯಕರ್ತ ರಾಹುಲ್ ಮೃತಪಟ್ಟಿದ್ದರು. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅವೈಜ್ಞಾನಿಕ ಕಾಮಗಾರಿ ಮತ್ತು ಸಮರ್ಪಕ ಸೂಚನಾ ಫಲಕ ಅಳವಡಿಸದೇ ಇರುವುದೇ ಅಪಘಾತಕ್ಕೆ ಕಾರಣ ಎಂದು ಶಿವಪುರದಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್ ಮತ್ತು ಗುತ್ತಿಗೆದಾರರು ಇದಕ್ಕೆ ನೇರ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಈ ರಸ್ತೆಯಲ್ಲಿ ವಾಹನಗಳು ಓಡಾಡಲು ಸೂಕ್ತ ಬ್ಯಾರಿ ಕೇಡುಗಳಿಲ್ಲ, ಸೂಚನಾ ಫಲಕಗಳು ಅಪಘಾತದ ಸ್ಥಳದಲ್ಲಿ ಇರಲಿಲ್ಲ, ಅಪಘಾತ ನಡೆಸಿದ ಕಾರು ವೇಗದಿಂದ ಬಂದು ಬೈಕಿಗೆ ಗುದ್ದಿದೆ. ಗುತ್ತಿಗೆದಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ನಮ್ಮ ಮನೆ ಮಗನನ್ನು ನಾವು ಕಳೆದುಕೊಂಡಿದ್ದೇವೆ. ಇದಕ್ಕೆ ಗರಿಷ್ಠ 50 ಲಕ್ಷ ರೂಪಾಯಿ ಪರಿಹಾರ ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಲಾಗುವುದು ಎಂದು ಮೃತ ರಾಹುಲ್ ಅವರ ಮಾವ ಶ್ರೀಧರ ಶೆಟ್ಟಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಅವರ ಶವವನ್ನು ಶಿವಪುರ ಪೇಟೆಯಲ್ಲಿ ಮೆರವಣಿಗೆ ಮಾಡಿಕೊಂಡು ಬರುತ್ತಿರುವಾಗ ಗಮನಿಸಿದ ಗುತ್ತಿಗೆದಾರರು, ಬ್ಯಾರಿಕೇಡ್ ಹಾಕುವ ವ್ಯವಸ್ಥೆ ಮಾಡಿದ್ದಾರೆ. ಮೊದಲೇ ಈ ರೀತಿಯ ಸೂಚನಾ ಫಲಕ ಅಥವಾ ಬ್ಯಾರಿಕೇಡ್ ಬಳಸಿದ್ದರೆ, ಊರಿನ ಒಬ್ಬ ಮಗನನ್ನು ನಾವು ಉಳಿಸಿಕೊಳ್ಳುತ್ತಿದ್ದೆವು ಎಂದು ಸಾರ್ವಜನಿಕರು ದುಃಖ ವ್ಯಕ್ತಪಡಿಸಿದರು.
ಸ್ಥಳೀಯರಾದ ಶ್ರೀನಿವಾಸ್, ಇಂದಿರಾ, ಬಾಬು ಶೆಟ್ಟಿ, ಗುರು ಬಡಿಕಿಲಾಯ, ಶ್ರೀಧರ ಶೆಟ್ಟಿ, ಶೀನ ಇನ್ನಿತರ ಊರಿನ ಮುಖಂಡರು ಜೊತೆಗಿದ್ದರು.
ಹೆಬ್ರಿ : ಶಿವಪುರ ಗ್ರಾಮದ ರಾಂಪುರ ಎಂಬಲ್ಲಿ ಬೈಕ್ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಶಿವಪುರ ಮೂರ್ಸಾಲು ನಿವಾಸಿ ರಾಹುಲ್ (25) ಮೃತಪಟ್ಟ ಘಟನೆ ಸಂಭವಿಸಿದೆ.
ಎದುರುಗಡೆಯಿಂದ ಸ್ವಿಪ್ಟ್ ಕಾರಿನ ಚಾಲಕ ಅರುಣ್ ಅತೀ ವೇಗವಾಗಿ ಮತ್ತು ಅಜಾರೂಕತೆಯಿಂದ ರಸ್ತೆಯ ತೀರ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಗೆ ಎದುರಿನಿಂದ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮೋಟಾರ್ ಸೈಕಲ್ ಸವಾರ ರಸ್ತೆಗೆ ಬಿದ್ದಿದ್ದು, ಅವರಿಗೆ ತೀವ್ರ ಸ್ವರೂಪದ ಗಾಯವಾಗಿತ್ತು.
ಅವರನ್ನು ಹೆಬ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಫಲಕಾರಿಯಾಗದೆ ಸಾವನ್ನಪ್ಪಿದರು. ರಾಹುಲ್ ಮುಳ್ಳುಗುಡ್ಡೆ ಶಾಲೆಯಲ್ಲಿ ನಡೆದ ನಾಟಕವನ್ನು ನೋಡಿ ಮನೆಗೆ ಹೋಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಹೆಬ್ರಿ ಟೌನ್ ಪೊಲೀಸ್ ಠಾಣೆಗೆ ತಮ್ಮ ತಾಂತ್ರಿಕ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಸಮುದಾಯ ಸುರಕ್ಷತೆಯನ್ನು ಸುಧಾರಿಸಲು ಐದು ಸುಧಾರಿತ ಕಂಪ್ಯೂಟರ್ ಸಿಸ್ಟಮ್ಗಳನ್ನು ಮತ್ತು 2 ಪ್ರಿಂಟರ್ಗಳನ್ನು ಕೊಡುಗೆಯಾಗಿ ನೀಡಿದೆ.
ಡಾ.ಎಚ್.ಎಸ್. ಬಲ್ಲಾಳ್, ಮಾಹೆಯ ಪ್ರೊ-ಚಾನ್ಸೆಲರ್ ಅವರು, “ಈ ಕೊಡುಗೆಯು ಆಧುನಿಕ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಹಾಗೂ ಸ್ಥಳೀಯ ಕಾನೂನು ಜಾರಿಯನ್ನು ಬೆಂಬಲಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಸಂಪನ್ಮೂಲಗಳು ಅಂಕಿ ಅಂಶಗಳ ನಿರ್ವಹಣೆ ಮತ್ತು ಸೈಬರ್-ಸಂಬಂಧಿತ ಕಾರ್ಯಗಳಲ್ಲಿ ಅವರ ಪ್ರಯತ್ನಗಳನ್ನು ಹೆಚ್ಚಿಸುತ್ತವೆ ಎಂದು ನಾವು ಭಾವಿಸುತ್ತೇವೆ.
ಡಾ. ರವಿರಾಜ ಎನ್.ಎಸ್., ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ – ಮಾಹೆ ಅವರು, “ನಮ್ಮ 28,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಕ್ಯಾಂಪಸ್ ಸಮುದಾಯದ ಸುರಕ್ಷತೆಯನ್ನು ಖಾತ್ರಿಪಡಿಸುವುದು, ಅತ್ಯಂತ ಮಹತ್ವದ್ದಾಗಿದೆ. ಈ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಪೊಲೀಸರ ಸಮರ್ಪಣೆಯನ್ನು ನಾವು ಆಳವಾಗಿ ಪ್ರಶಂಸಿಸುತ್ತೇವೆ ಮತ್ತು ಅವರ ಕೆಲಸವನ್ನು ಬೆಂಬಲಿಸಲು ಹೆಮ್ಮೆಪಡುತ್ತೇವೆ.
ಪೊಲೀಸ್ ಸಬ್ಇನ್ಸ್ ಪೆಕ್ಟರ್ ಶ್ರೀ ಮಹೇಶ್ ಟಿ.ಎಂ. ಕೃತಜ್ಞತೆಯನ್ನು ವ್ಯಕ್ತಪಡಿಸಿ, “ಈ ವ್ಯವಸ್ಥೆಗಳು, ತನಿಖೆಗಳು ಮತ್ತು ಪ್ರಕರಣ ನಿರ್ವಹಣೆಯಲ್ಲಿ ನಮ್ಮ ದಕ್ಷತೆಯನ್ನು ಹೆಚ್ಚು ಸುಧಾರಿಸುತ್ತದೆ. ಮಾಹೆ ಅವರ ಅಮೂಲ್ಯವಾದ ಬೆಂಬಲಕ್ಕಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಔಪಚಾರಿಕ ಹಸ್ತಾಂತರ ಸಮಾರಂಭದಲ್ಲಿ ಮಾಹೆಯ ಉನ್ನತ ಅಧಿಕಾರಿಗಳಾದ ಡಾ. ನಾರಾಯಣ ಸಭಾಹಿತ್ ಪ್ರೊ ವೈಸ್ ಚಾನ್ಸೆಲರ್ (ತಂತ್ರಜ್ಞಾನ ಮತ್ತು ವಿಜ್ಞಾನ), ಡಾ. ಶರತ್ ರಾವ್, ಪ್ರೊ ವೈಸ್ ಚಾನ್ಸೆಲರ್ (ಆರೋಗ್ಯ ವಿಜ್ಞಾನ), ಡಾ. ಪಿ. ಗಿರಿಧರ್ ಕಿಣಿ, ರಿಜಿಸ್ಟ್ರಾರ್, ಶ್ರೀ ಮುತ್ತಣ್ಣ, ಸಲಹೆಗಾರ ಯೋಜನೆಗಳು, ಶ್ರೀ ಸತೀಶ್ ಕಾಮತ್, ಉಪ ನಿರ್ದೇಶಕರು, ಮಾಹಿತಿ ಮತ್ತು ತಂತ್ರಜ್ಞಾನ ಹಾಗು ಹೆಬ್ರಿ ಟೌನ್ ಪೊಲೀಸ್ ಠಾಣೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವು ಸ್ಥಳೀಯ ಸಮುದಾಯದೊಂದಿಗೆ ತೊಡಗಿಸಿಕೊಳ್ಳಲು ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಿ ಎಲ್ಲರಿಗೂ ಸುರಕ್ಷಿತ ವಾತಾವರಣವನ್ನು ಖಾತ್ರಿಪಡಿಸಲು ತಾಂತ್ರಿಕ ಸಂಪನ್ಮೂಲಗಳನ್ನು ಒದಗಿಸಲು ಮಾಹೆಯು ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿದೆ.
ಹೆಬ್ರಿ : ಹೆಬ್ರಿ ಕೆಳಪೇಟೆ ಮೂರು ರಸ್ತೆ ಬಳಿ ಭೋಗಿ ಹಾಡಿಯಲ್ಲಿರುವ ಕಸದ ರಾಶಿಯಲ್ಲಿ ನವೆಂಬರ್ 30ರಂದು ಕೊಳೆತ ಸ್ಥಿತಿಯಲ್ಲಿ ಕಾಣಿಸಿಕೊಂಡ ಶವದ ಗುರುತು ಪತ್ತೆಯಾಗಿದ್ದು, ಶವವು ಹೆಬ್ರಿ ಸಂತೆಕಟ್ಟೆ ನಿವಾಸಿ ರಾಜೀವ ಪಾಣರ (54) ಅವರದ್ದು ಎಂದು ಗುರುತಿಸಲಾಗಿದೆ.
ಇವರು ಬೆಳಂಜೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು ವಿಪರೀತ ಮದ್ಯಪಾನ ಚಟ ಇತ್ತು ಎನ್ನಲಾಗುತ್ತಿದೆ. ನಿತ್ಯ ಮನೆ ಕಡೆ ಹೋಗದೆ ಬಸ್ ತಂಗುದಾಣ ಬಳಿ ಇರುತ್ತಿದ್ದರು ಎನ್ನಲಾಗುತ್ತಿದೆ. ಮೂರು ದಿನಗಳ ಹಿಂದೆ ಭೋಗಿ ಹಾಡಿಯ ಮರದ ಬಳಿ ಕೂತಿದ್ದ ವ್ಯಕ್ತಿಯನ್ನು ಈ ಭಾಗದಲ್ಲಿ ತಿರುಗುತ್ತಿದ್ದ ವಿದ್ಯಾರ್ಥಿಗಳು ನೋಡಿದ್ದಾರೆ. ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಇನ್ನಾವುದೇ ಕಾರಣದಿಂದ ಮೃತಪಟ್ಟಿದ್ದಾರೋ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ.
ಹೆಬ್ರಿ : ಹೆಬ್ರಿ ಕೆಳಪೇಟೆ ಲಯನ್ ಸರ್ಕಲ್ನ ಬಳಿ ಭೋಗಿ ಹಾಡಿಯಲ್ಲಿರುವ ಕಸದ ರಾಶಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪ್ರಕರಣ ದಾಖಲಾಗಿದೆ.
ಸುಮಾರು 40ರಿಂದ 50 ವರ್ಷ ಪ್ರಾಯದ ವ್ಯಕ್ತಿ ಬಿಳಿ ಗೆರೆಗಳಿರುವ ನೀಲಿ ಬಣ್ಣದ ಬರ್ಮುಡಾ ಧರಿಸಿದ್ದು, ಅಂಗಾತ ಮಲಗಿರುವ ಸ್ಥಿತಿಯಲ್ಲಿ ಕಂಡುಬಂದಿದೆ. ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಇನ್ಯಾವುದೊ ಕಾರಣದಿಂದ ಮೃತಪಟ್ಟಿದ್ದಾನೋ ಎನ್ನುವುದು ತನಿಖೆಯಿಂದ ತಿಳಿಯಬೇಕಾಗಿದೆ. ಹೆಬ್ರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ವಿಕ್ರಮ್ ಗೌಡ ಎನ್ಕೌಂಟರ್ ನಕಲಿ ಅಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟನೆ
ಉಡುಪಿ : ನಕ್ಸಲ್ ವಿಕ್ರಮ್ ಗೌಡ ಎನ್ಕೌಂಟರ್ ನಕಲಿ ಅಲ್ಲ. ಎನ್ಕೌಂಟರ್ ನಕಲಿ ಎಂದು ಅನುಮಾನ ಪಡುವುದು ಬೇಡ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.

ಉಡುಪಿಯ ಗೃಹ ಕಚೇರಿಯಲ್ಲಿ ಶನಿವಾರ ಮಾತನಾಡಿದ ಸಚಿವರು, ಎನ್ಕೌಂಟರ್ ಕುರಿತು ನ್ಯಾಯಾಂಗ ತನಿಖೆಯ ಅವಶ್ಯಕತೆ ಇಲ್ಲ. ಅಗತ್ಯವಿದ್ದರೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ಕಾನೂನು ಪ್ರಕಾರ ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವಿಕ್ರಮ್ ಗೌಡ ವಿರುದ್ಧ ಹಲವು ಪ್ರಕರಣಗಳು ಇದ್ದವು. ನಕ್ಸಲೈಟ್ಗಳನ್ನು ಕಟ್ಟಿ ಹಾಕಬೇಕು ಎಂಬುದು ಸರ್ಕಾರದ ನಿರ್ಧಾರ. ಕೂಂಬಿಂಗ್ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಕ್ರಮ್ ಗೌಡ ಬಳಿ ಕೂಡ ಶಸ್ತ್ರಾಸ್ತ್ರಗಳು ಇದ್ದವು. ವಿಕ್ರಮ್ ಗೌಡ ಒಂದು ಬಾರಿ ಫೈರಿಂಗ್ ಮಾಡಿದ್ದರಿಂದ ಪ್ರತಿ ದಾಳಿ ಮಾಡದಿದ್ದರೆ ಪೊಲೀಸರ ಜೀವಕ್ಕೆ ಹಾನಿ ಆಗುತ್ತಿತ್ತು ಎಂದರು.
ನಕ್ಸಲೈಟನ್ನು ಬೇರು ಸಮೇತ ಕಿತ್ತು ಹಾಕಬೇಕು. ಇದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಿಲುವು. ಪರ ವಿರೋಧ ಚರ್ಚೆ ಎಲ್ಲಾ ಸಂದರ್ಭದಲ್ಲಿ ಇರುತ್ತದೆ. ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದೆ. ಸಂಶಯ ಇದ್ದವರಿಗೆ ನಾವು ಮತ್ತೆ ಸ್ಪಷ್ಟನೆ ಕೊಡಲು ತಯಾರಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಇಲ್ಲ
ಕಾಂಗ್ರೆಸ್ನಲ್ಲಿ ಯಾವುದೇ ಭಿನ್ನಮತ ಇಲ್ಲ. ಭಿನ್ನಮತ ಇರೋದು ಬಿಜೆಪಿಯಲ್ಲಿ ಮಾತ್ರ. ಬಿಜೆಪಿ ಭಿನ್ನಮತದ ಬಗ್ಗೆ ಮಾಧ್ಯಮಗಳೇ ದಿನಾ ತೋರಿಸುತ್ತಿವೆ. ನಮ್ಮಲ್ಲಿ ಭಿನ್ನಮತ ಇಲ್ಲ ಅನ್ನೋದಕ್ಕೆ ಉಪಚುನಾವಣೆಯ ಫಲಿತಾಂಶವೇ ಉತ್ತರ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಹೆಬ್ರಿ : ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ನಡೆದ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಪೀತ್ಬೈಲು ಪ್ರದೇಶಕ್ಕೆ ಭೇಟಿ ನೀಡಿದ ಸಾಮಾಜಿಕ ಕಾರ್ಯಕರ್ತರ ನಿಯೋಗ, ಈ ಕುರಿತು ಪರಿಶೀಲನೆ ನಡೆಸಿ, ಇದೊಂದು ನಕಲಿ ಎನ್ಕೌಂಟರ್ ಎಂಬುದಾಗಿ ಅಭಿಪ್ರಾಯಪಟ್ಟಿದೆ. ಆದುದರಿಂದ ಈ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ನಿಯೋಗ ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಸಾಮಾಜಿಕ ಕಾರ್ಯಕರ್ತರಾದ ಮುನೀರ್ ಕಾಟಿಪಳ್ಳ, ನವೀನ್ ಸೂರಿಂಜೆ, ಕಾವ್ಯ ಅಚ್ಯುತ್, ನಿತಿನ್ ಬಂಗೇರ ಅವರನ್ನೊಳಗೊಂಡ ನಿಯೋಗ, ಎನ್ಕೌಂಟರ್ ನಡೆದಿದೆ ಎನ್ನಲಾದ ಜಯಂತ್ ಗೌಡರ ಮನೆಗೆ ಭೇಟಿ ನೀಡಿತು. ಅಲ್ಲದೆ ಸುತ್ತಮುತ್ತಲಿನ ಪ್ರದೇಶದ ಆದಿವಾಸಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿತು.
ಈ ಬಗ್ಗೆ ಮಾತನಾಡಿದ ಮುನೀರ್ ಕಾಟಿಪಳ್ಳ ಘಟನಾ ಸ್ಥಳವನ್ನು ನೋಡಿದಾಗ ಇದೊಂದು ಎನ್ಕೌಂಟರ್ ಅಲ್ಲ, ನಕಲಿ ಎನ್ಕೌಂಟರ್ ನಡೆಸಿ, ಉದ್ದೇಶಪೂರ್ವಕವಾಗಿ ವಿಕ್ರಂ ಗೌಡನನ್ನು ಹತ್ಯೆ ಮಾಡಲಾಗಿದೆ ಎಂಬ ಸಂಶಯಗಳು ಬಲವಾಗುತ್ತವೆ. ಆದುದರಿಂದ ಈ ಬಗ್ಗೆ ರಾಜ್ಯ ಸರಕಾರ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಆಗಬೇಕು. ಅದಕ್ಕಾಗಿ ಹಿರಿಯ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಸಮಿತಿ ರಚನೆ ಮಾಡಿ ಎನ್ಕೌಂಟರ್ ಕುರಿತು ತನಿಖೆ ನಡೆಸಬೇಕು. ಆ ಮೂಲಕ ಸತ್ಯಾಸತ್ಯತೆಯನ್ನು ಜನರ ಮುಂದೆ ಪಾರದರ್ಶಕವಾಗಿ ಇಡಬೇಕು ಎಂದು ಒತ್ತಾಯಿಸಿದರು.
ಹೆಬ್ರಿ: ಹೆಬ್ರಿಯ ಕಾಡಿನಲ್ಲಿ ನಕ್ಸಲ್ ನಿಗ್ರಹ ಪಡೆ ಪೊಲೀಸರ ಎನ್ಕೌಂಟರ್ನಲ್ಲಿ ಮೃತಪಟ್ಟ ನಕ್ಸಲ್ ನಾಯಕ ವಿಕ್ರಂ ಗೌಡನ ಅಂತ್ಯ ಸಂಸ್ಕಾರ ಇಂದು ಹುಟ್ಟೂರು ಕೂಡ್ಲುವಿನಲ್ಲಿ ನೆರವೇರಿತು.
ಇದಕ್ಕೂ ಮುನ್ನ ಮಣಿಪಾಲದಿಂದ ಅಂಬುಲೆನ್ಸ್ನಲ್ಲಿ ಕೂಡ್ಲುವಿಗೆ ಶವ ರವಾನೆ ಮಾಡಲಾಯಿತು. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕೂಡ್ಲು ಗ್ರಾಮದ ಮನೆ ಆವರಣದಲ್ಲಿ ಚಿತೆಗೆ ವಿಕ್ರಂ ಗೌಡ ಸಹೋದರ ಸುರೇಶ್ ಗೌಡ ಬೆಂಕಿಇಟ್ಟರು. ಕೂಡ್ಲು ಗ್ರಾಮದಲ್ಲಿ ವಿಕ್ರಂ ಗೌಡ ಕುಟುಂಬಕ್ಕೆ ಸೇರಿದ ಒಂದು ಎಕರೆ ಭೂಮಿ ಇದೆ. ಇದೇ ಜಮೀನಿನಲ್ಲಿ ಸಹೋದರ, ತಂಗಿ ಮತ್ತು ನಿಕಟ ಬಂಧುಗಳು ಮತ್ತು ಊರಿನ ಪ್ರಮುಖರ ಸಮಕ್ಷಮದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
ವಿಕ್ರಂ ಗೌಡ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು ತೀರ್ಥ ಪ್ರಾಶನ ಮಾಡಿದರು. ಬಳಿಕ ಅಂತಿಮವಾಗಿ ಕುಟುಂಬಸ್ಥರಿಗೆ ಮುಖದರ್ಶನ ಮಾಡಿಸಲಾಯಿತು. 21 ವರ್ಷಗಳ ಹಿಂದೆ ವಿಕ್ರಂ ಗೌಡನನ್ನು ಗ್ರಾಮಸ್ಥರು ನೋಡಿದ್ದರು. ಬಳಿಕ ನೋಡಿರಲಿಲ್ಲ. ವಿಕ್ರಂ ಗೌಡ ಬಗ್ಗೆ ಊರವರಿಗೆ ಪ್ರೀತಿಯಿದ್ದರೂ, ಆತನ ಸಶಸ್ತ್ರ ಹೋರಾಟದ ಬಗ್ಗೆ ಆಕ್ಷೇಪಗಳಿದ್ದವು.