State
ಕೊಲ್ಲೂರು : ಕೃಷ್ಣನಗರಿ ಉಡುಪಿ ಜಿಲ್ಲೆಯ ಪ್ರವಾಸದಲ್ಲಿರುವ ಗೃಹ ಸಚಿವ ಜಿ.ಪರಮೇಶ್ವರ್ ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಳದ ಪ್ರಧಾನ ಅರ್ಚಕ ನರಸಿಂಹ ಅಡಿಗ ಮತ್ತು ಸುಬ್ರಹ್ಮಣ್ಯ ಅಡಿಗ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಸಹಾಯಕ ಕಾರ್ಯನಿರ್ವಣಾಧಿಕಾರಿ ಪುಷ್ಪಲತಾ ಅವರು ಗೃಹಸಚಿವರಿಗೆ ದೇವಿಯ ಪ್ರಸಾದ ನೀಡಿ ಗೌರವಿಸಿದರು.
ಈ ವೇಳೆ ಬೈಂದೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರವಿಂದ ಪೂಜಾರಿ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಕಾಂಗ್ರೆಸ್ ಮುಖಂಡ ರಮೇಶ್ ಗಾಣಿಗ, ಮುನಿಯಾಲು ಉದಯಕುಮಾರ್ ಶೆಟ್ಟಿ ಮತ್ತಿತರರು ಸಚಿವರ ಜತೆಗಿದ್ದರು.
ಲೋಕಸಭೆ ಫಲಿತಾಂಶ ಬೆನ್ನಲ್ಲೇ ಉಡುಪಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಗೋ ಬ್ಯಾಕ್ ಅಭಿಯಾನದ ಬಿಸಿ!
ಉಡುಪಿ : ಕರಾವಳಿಯಲ್ಲಿ ಕಾಂಗ್ರೆಸ್ ಸೋಲಿನ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿಗಳ ವಿರುದ್ಧ ಗರಂ ಆಗಿರುವ ಕಾಂಗ್ರೆಸ್ ಕಾರ್ಯಕರ್ತರು, ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ʼಗೋ ಬ್ಯಾಕ್ʼ ಅಭಿಯಾನ ಕೈಗೊಂಡಿದ್ದಾರೆ. ಈ ಸಂಬಂಧ
ಸಾಮಾಜಿಕ ಜಾಲತಾಣದಲ್ಲಿ ‘ಗೋ ಬ್ಯಾಕ್ʼ ಅಭಿಯಾನದ ಸದ್ದು ಜೋರಾಗಿದೆ. ಮುಖ್ಯವಾಗಿ ಉಡುಪಿಯ ಕೈ ಕಾರ್ಯಕರ್ತರು
ಉಡುಪಿ ಜಿಲ್ಲಾ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗರಂ ಆಗಲು ಇನ್ನೊಂದು ಕಾರಣ ಅವರು ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದ್ದು. ಚುನಾವಣೆ ಘೋಷಣೆ ಆದಾಗಿನಿಂದ ಹೆಬ್ಬಾಳ್ಕರ್ ಜಿಲ್ಲೆಗೇ ಕಾಲಿಟ್ಟಿರಲಿಲ್ಲ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಎರಡೂವರೆ ಲಕ್ಷ ಮತಗಳ ಅಂತರದಿಂದ ಸೋತಿದ್ದಾರೆ. ಈ ಎಲ್ಲ ಸಿಟ್ಟನ್ನು ಕೈ ಕಾರ್ಯಕರ್ತರು ಗೋ ಬ್ಯಾಕ್ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಹೊರ ಹಾಕಿದ್ದಾರೆ. ಮಾತ್ರವಲ್ಲ, ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸುವಂತೆಯೂ ಒತ್ತಾಯ ಮಾಡಿದ್ದಾರೆ.
ಮಂಗಳೂರು : ನಗರದ ರಸ್ತೆಯಲ್ಲಿ ನಮಾಝ್ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಹಾಕಿರುವುದಕ್ಕೆ ವಿಶ್ವ ಹಿಂದೂ ಪರಿಷತ್ ವಿಭಾಗ ಸಹಸಂಚಾಲಕ ಶರಣ್ ಪಂಪ್ವೆಲ್ ವಿರುದ್ಧ ದಾಖಲಾದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಶರಣ್ ಪಂಪ್ವೆಲ್ ವಿರುದ್ಧ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡಸಂಹಿತೆಯ ಕಲಂ 153(ಎ), 506 ರಂತೆ ಪ್ರಕರಣ ದಾಖಲಾಗಿತ್ತು. ಶರಣ್ ಪಂಪ್ವೆಲ್ ಪರ ನ್ಯಾಯವಾದಿ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.

ದ.ಕ.ಜಿಲ್ಲಾ ಎಸ್ಪಿಯಿಂದ ಕಾಂಗ್ರೆಸ್ ವಕ್ತಾರನಂತೆ ಹೇಳಿಕೆ – ಶಾಸಕ ಹರೀಶ್ ಪೂಂಜಾ ಆರೋಪ
ಮಂಗಳೂರು : ದ.ಕ.ಜಿಲ್ಲಾ ಎಸ್ಪಿ ರಿಷ್ಯಂತ್ ಅವರು ಓರ್ವ ಐಎಎಸ್ ಅಧಿಕಾರಿಯಂತೆ ಹೇಳಿಕೆ ನೀಡುವ ಬದಲು ಧರ್ಮಸ್ಥಳದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರನಂತೆ ಹೇಳಿಕೆ ನೀಡಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ನಗರದ ಖಾಸಗಿ ಹೊಟೇಲ್ನಲ್ಲಿ ಮಾತನಾಡಿದ ಅವರು, ನನ್ನ ಮನೆಗೆ ಅಂದು ಮೂವರು ಪೋಲಿಸರು ನೋಟಿಸ್ ನೀಡಲು ಬಂದಿದ್ದರು ಅವರು ಹೇಳಿದ್ದಾರೆ. ಆದರೆ ಎಷ್ಟು ಮಂದಿ ಬಂದಿದ್ದಾರೆಂದು ನಮ್ಮ ಮನೆಯ ಸಿಸಿ ಟಿವಿ ಪರಿಶೀಲನೆ ನಡೆಸಿದರೆ ಗೊತ್ತಾಗುತ್ತದೆ. ಮೂರು ವಾಹನದಲ್ಲಿ 15ಕ್ಕೂ ಅಧಿಕ ಪೊಲೀಸರು ಬಂದಿದ್ದರು. ನನ್ನನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದರು. ಆದರೆ ಕಾನೂನು ಪ್ರಕಾರ ಅವರು ನನಗೆ ನೋಟಿಸ್ ನೀಡಲಿಲ್ಲ. ಆದರೆ ಪೊಲೀಸ್ ಠಾಣೆಗೆ ಬರಬೇಕೆಂದು ಬೆಳಗ್ಗೆಯಿಂದ ಸಂಜೆ ಏಳರವರೆಗೆ ದೌರ್ಜನ್ಯ ಮಾಡಿದ್ದಾರೆ ಎಂದರು.
ಶಶಿರಾಜ್ ಶೆಟ್ಟಿ ಅಮಾಯಕ. ಅವನನ್ನು ಹೇಗೆ ಜೈಲಿಗೆ ಹಾಕಿದ್ದಾರೆ. ಎಸ್ಪಿಯವರು ಆಮೇಲೆ ಕಾಗಕ್ಕ ಗೂಬಕ್ಕನ ಕಥೆ ಹೇಳುತ್ತಾರೆ. ದೇಶದಲ್ಲಿ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆದೇ ಇಲ್ಲವೇ. ಕಲ್ಲು ಗಣಿಗಾರಿಕೆ ನಡೆದದ್ದು ಯಾವ ಸ್ಥಳದಲ್ಲಿ ಇದೆ ಅನ್ನೋದನ್ನು ತನಿಖೆ ಮಾಡಬೇಕೆಂದು ಎಸ್ಪಿ ಹೇಳಿದ್ದಾರೆ. ಆ್ಯಪ್ನಲ್ಲಿ ನೋಡಿದ್ದಲ್ಲಿ ಗೊತ್ತಾಗುದಿಲ್ವಾ. ಅಂತಹ ಸಾಮಾನ್ಯ ಜ್ಞಾನ ಎಸ್ಪಿ ಅವರಿಗೆ ಇಲ್ವಾ. ಅಲ್ಲದೆ ನನ್ನ ಮೇಲೆ ಮೂರು ದಿನಗಳಲ್ಲೇ ಜಾರ್ಜ್ ಶೀಟ್ ಮಾಡಿ ಇತಿಹಾಸ ನಿರ್ಮಿಸಿದ್ದಾರೆ ಎಂದು ಹರೀಶ್ ಪೂಂಜಾ ಆಕ್ರೋಶ ವ್ಯಕ್ತಪಡಿಸಿದರು.
ಮಕ್ಕಳ ಪ್ರತಿಭೆ ಪೋಷಿಸುವ ಹೊಣೆ ಪೋಷಕರದ್ದು : ಮೋಹನ ಆಳ್ವ; ರಿಷಿಕಾ ಕುಂದೇಶ್ವರಗೆ ಪತ್ರಕರ್ತ ಸಂಘದ ಗೌರವ ಸನ್ಮಾನ
ಮಂಗಳೂರು : ಮಕ್ಕಳಲ್ಲಿ ಪ್ರತಿಭೆ ಗುರುತಿಸಿ ಸಂಸ್ಕೃತಿ, ಕಲೆ ಪೋಷಿಸುವ ಹೊಣೆ ಪೋಷಕರದ್ದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಪತ್ರಿಕಾಭವನದಲ್ಲಿ ಜೀ ಕನ್ನಡ ಡ್ರಾಮಾ ಜೂನಿಯರ್ಸ್ ಚಾಂಪಿಯನ್ ರಿಷಿಕಾ ಕುಂದೇಶ್ವರ ಅವರನ್ನು ಸನ್ಮಾನಿಸಿ ಮಾತನಾಡಿದರು.
ನಮ್ಮ ನಾಡಿನ ಶಾಸ್ತ್ರೀಯ, ಜನಪದೀಯ ಕಲೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಮುಂದುವರಿಸಲು ಪೋಷಕರು ಪ್ರಯತ್ನಿಸಬೇಕು. ಎಳವೆಯಲ್ಲಿ ಹೆತ್ತವರ ಕಲಾ ಪೋಷಣೆ ಬಳಿಕ ಮಕ್ಕಳು ಪ್ರೌಢಾವಸ್ಥೆಯಲ್ಲಿ ಕಲೆಯನ್ನು ತ್ಯಜಿಸದೆ ಮುಂದುವರಿಸಬೇಕು. ಶಿಕ್ಷಣ ಸಂಸ್ಥೆಗಳೂ ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂದರು. ಪೌರಾಣಿಕ, ವ್ಯಕ್ತಿಚಿತ್ರ, ಐತಿಹಾಸಿಕ, ಜನಪದೀಯ ಮತ್ತು ಕಾಮಿಡಿ ವಿಭಾಗದಲ್ಲಿ ಭಾವಾಭಿನಯದ ಮೂಲಕ ರಿಷಿಕಾ ಕನ್ನಡನಾಡಿನ ಜನರ ಮನಗೆದ್ದಿದ್ದಾಳೆ. ಶಿಕ್ಷಣದ ಜತೆ ಕಲಾ ವ್ಯವಸಾಯ ಮುಂದುವರಿಸಿ ಸಾಧನೆ ಮಾಡಬೇಕು ಎಂದು ಸಲಹೆ ಮಾಡಿದರು.
ಚಲನಚಿತ್ರ ನಟ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಮಾತನಾಡಿ, ಎಳವೆಯಿಂದಲೂ ರಿಷಿಕಾ ಪ್ರತಿಭೆಯನ್ನು ಗಮನಿಸಿದ್ದೇನೆ. ಯಕ್ಷಗಾನ ಕುಣಿತ, ಭಾಗವತಿಕೆ, ಶಾಸ್ತ್ರೀಯ ಸಂಗೀತ, ಪಾಶ್ಚಿಮಾತ್ಯ ಸಂಗೀತ ಎಲ್ಲದರಲ್ಲಿಯೂ ಪರಿಪೂರ್ಣತೆ ಇದೆ. ಎಲ್ಲ ರೀತಿಯ ಪಾತ್ರಗಳನ್ನು ಪರಕಾಯ ಪ್ರವೇಶಮಾಡಿ ಲೀಲಾಜಾಲವಾಗಿ ನಿರ್ವಹಿಸುತ್ತಾಳೆ. ಈಕೆ ಮುಂದೆ ರಾಷ್ಟ್ರ ಮಟ್ಟದಲ್ಲಿ ಮಿಂಚಿ ನಮ್ಮ ಊರಿಗೆ ಹೆಮ್ಮೆ ತರುತ್ತಾಳೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಲೋಕಸಭಾ ಸದಸ್ಯನಾಗಿ ಕೊನೆಯ ದಿನ ನಾನು ಅದ್ಭುತ ಪ್ರತಿಭೆಯನ್ನು ಗೌರವಿಸುತ್ತಿರುವುದು ಅತ್ಯುತ್ತಮ ಕ್ಷಣ ಎಂದು ಬಣ್ಣಿಸಿದರು.
ಸನ್ಮಾನ ಸ್ವೀಕರಿಸಿದ ರಿಷಿಕಾ ಕುಂದೇಶ್ವರ ಮಾತನಾಡಿ, ನಮ್ಮದು ಪತ್ರಕರ್ತರ ಕುಟುಂಬ, ಎಲ್ಲ ಪತ್ರಕರ್ತರು ಮನೆ ಮಗಳಂತೆ ನನಗೆ ಪ್ರೋತ್ಸಾಹ ನೀಡಿದರು. ಮನೆ ಮಂದಿಯ ಪ್ರೀತಿ ಈ ಸನ್ಮಾನದಲ್ಲಿ ಕಂಡೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಮಾತನಾಡಿ, ಪತ್ರಕರ್ತರಿಗೆ ಜಾತಿ ಇಲ್ಲ. ಪತ್ರಕರ್ತರೇ ಒಂದು ಜಾತಿ, ಇಂದು ಪತ್ರಕರ್ತನ ಮಗಳಿಗೆ ಸನ್ಮಾನಿಸುವ ಮೂಲಕ ನಮ್ಮ ಸಮುದಾಯದ ಸನ್ಮಾನ ಎಂಬ ಭಾವ ಮೂಡುತ್ತಿದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಅಶೋಕನಗರ ಎಸ್. ಡಿ. ಎಮ್. ಸ್ಕೂಲ್ ಸಂಚಾಲಕರಾದ ಶೃತಾ ಜಿತೇಶ್, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ನಿಕಟಪೂರ್ವ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ. ಆರ್., ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಅಂತಾರಾಷ್ಟ್ರೀಯ ಜಾದೂಗಾರ ಗಣೇಶ್ ಕುದ್ರೋಳಿ ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಮೆಮ್ಮಾರ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ವಂದಿಸಿದರು.

ಉಡುಪಿ : ಕಳೆದ ಆರು ವರ್ಷಗಳಿಂದ ಉಡುಪಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿ ಇದೀಗ ಚಾಮರಾಜನಗಕ್ಕೆ ವರ್ಗಾವಣೆ ಗೊಂಡಿರುವ ಬಾಲಚಂದ್ರ ಎಚ್. ಅವರಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಇಂದು ಉಡುಪಿ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉಡುಪಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಬಾಲಚಂದ್ರ ಎಚ್. ಅವರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಲಚಂದ್ರ ಎಚ್. ನಮ್ಮ ಯಾವುದೇ ಸಿದ್ಧಾಂತಗಳಿದ್ದರೂ ಪೆನ್ ಹಿಡಿದು ಕೆಲಸ ಮಾಡುವಾಗ ಕೇವಲ ಪತ್ರಕರ್ತರಾಗಿ ಇರಬೇಕು. ಆಗ ಮಾತ್ರ ನಾವು ನಿಜವಾದ ಪತ್ರಕರ್ತರಾಗಲು ಸಾಧ್ಯ ಎಂದರು. ಕಳೆದ ಆರು ವರ್ಷಗಳ ಕಾಲ ಉಡುಪಿಯಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ, ಕರಾವಳಿ ಸಂಸ್ಕೃತಿ, ಆಚಾರ ವಿಚಾರಗಳ ಸವಿ ನೆನಪುಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಮೋದ್ ಸುವರ್ಣ ವಂದಿಸಿದರು. ಪತ್ರಕರ್ತ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

ನಡುರಸ್ತೆಯಲ್ಲಿ ನಮಾಜ್ ಪ್ರಕರಣ : ಬಿ ರಿಪೋರ್ಟ್ ರದ್ದು ಪಡಿಸಲು ವಿಶ್ವ ಹಿಂದೂ ಪರಿಷದ್ ಮನವಿ
ಮಂಗಳೂರು : ನಡು ರಸ್ತೆಯಲ್ಲಿ ನಮಾಜ್ ಮಾಡಿದ ಪ್ರಕರಣಕ್ಕೆ ಹಾಕಿದ ”B” ರಿಪೋರ್ಟ್ ರದ್ದು ಪಡಿಸಿ ಶರಣ್ ಪಂಪ್ವೆಲ್ ವಿರುದ್ದ ದಾಖಲಿಸಿದ ಪ್ರಕರಣ ರದ್ದುಗೊಳಿಸಲು ವಿಶ್ವ ಹಿಂದೂ ಪರಿಷದ್ ಮಂಗಳೂರು ವತಿಯಿಂದ ಮನವಿ ಸಲ್ಲಿಸಲಾಯಿತು.
ಮಂಗಳೂರಿನ ಕಂಕನಾಡಿ ಬಳಿ ಅನುಮತಿ ರಹಿತ ನಮಾಜ್ ಮಾಡಿದ ಪ್ರಕರಣಕ್ಕೆ ಹಾಕಿದ ಬಿ ರಿಪೋರ್ಟ್ ರದ್ದು ಪಡಿಸಲು ಮತ್ತು ಕರ್ನಾಟಕ ಸರಕಾರ ದ್ವೇಷ ರಾಜಕಾರಣ ಮಾಡಿ ಹಿಂದೂ ನಾಯಕ ಶರಣ್ ಪಂಪ್ವೆಲ್ರವರನ್ನು ಗುರಿಯಾಗಿಸಿ ದಾಖಲಿಸಿದ ಪ್ರಕರಣ ವಾಪಾಸ್ ಪಡೆಯಲು ಹಾಗೂ ಸದ್ರಿ ಪ್ರಕರಣದಲ್ಲಿ ಕಡ್ಡಾಯ ರಜೆಯಲ್ಲಿ ಕಳುಹಿಸಿದ ಪೊಲೀಸ್ ಅಧಿಕಾರಿಯ ಕಡ್ಡಾಯ ರಜೆ ರದ್ದುಪಡಿಸಲು ಆಗ್ರಹಿಸಿ ಮಾನ್ಯ ಜೆಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ವಿಶ್ವ ಹಿಂದೂ ಪರಿಷದ್ ಮಂಗಳೂರು ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಚ್ ಕೆ ಪುರುಷೋತ್ತಮ, ಪ್ರಾಂತ ಸಹಸೇವಾ ಪ್ರಮುಖ್ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಜಿಲ್ಲಾ ಸಹಕಾರ್ಯದರ್ಶಿ ಗುರುಪ್ರಸಾದ್ ಹಾಗು ಜಿಲ್ಲಾ ಸಂಯೋಜಕ್ ನವೀನ್ ಮೂಡುಶೆಡ್ಡೆ ಉಪಸ್ಥಿತರಿದ್ದರು.
ಡಾ| ಧನಂಜಯ ಸರ್ಜಿ ಮತ್ತು ಎಸ್. ಎಲ್. ಭೋಜೇಗೌಡ ಗೆಲುವು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಲಿ : ಯಶ್ಪಾಲ್ ಎ. ಸುವರ್ಣ
ಉಡುಪಿ : ಚುನಾವಣಾವಣೋತ್ತರ ಸಮೀಕ್ಷೆಗಳ ಫಲಿತಾಂಶದಂತೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಸತತ 3ನೇ ಬಾರಿಗೆ ಅಧಿಕಾರಕ್ಕೆರಲಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ| ಧನಂಜಯ ಸರ್ಜಿ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರ ದೊಡ್ಡ ಅಂತರದ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊಡುಗೆ ನೀಡೋಣ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು.
ಅವರು ಬಿಜೆಪಿ ಉಡುಪಿ ನಗರ ಅಧ್ಯಕ್ಷ ದಿನೇಶ್ ಅಮೀನ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಉಡುಪಿ ನಗರ ಮತ್ತು ಗ್ರಾಮಾಂತರ ಮಂಡಲದ ವಿಧಾನ ಪರಿಷತ್ ಚುನಾವಣಾ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಭಿವೃದ್ಧಿಯ ಹರಿಕಾರ, ನವ ಉಡುಪಿಯ ನಿರ್ಮಾತೃ ಕೀರ್ತಿಶೇಷ ಡಾ| ವಿ.ಎಸ್. ಆಚಾರ್ಯರವರ ಬಳಿಕ ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷ ಮಗದೊಮ್ಮೆ ಓರ್ವ ಸುಸಂಸ್ಕೃತ ಮತ್ತು ಸಚ್ಚಾರಿತ್ರ್ಯವಂತ ವ್ಯಕ್ತಿತ್ವದ ಹೆಸರಾಂತ ವೈದ್ಯ ಹಾಗೂ ಸಮಾಜ ಸೇವಕ ಡಾ. ಧನಂಜಯ ಸರ್ಜಿ ಅವರಿಗೆ ಅವಕಾಶ ನೀಡಿದೆ. ಡಾ. ಸರ್ಜಿ ಅವರು ತನ್ನ ಎಮ್.ಡಿ. ಪದವಿಯನ್ನು ಮಣಿಪಾಲದ ಕೆಎಂಸಿಯಲ್ಲಿ ಪೂರೈಸಿದ್ದು ಕರಾವಳಿ ಭಾಗದ ಜನರ ನಾಡಿಮಿಡಿತವನ್ನು ಚೆನ್ನಾಗಿಯೇ ಅರಿತಿದ್ದಾರೆ. ಉಡುಪಿ ಸಹಿತ ಕರಾವಳಿಯ ಬಿಜೆಪಿ ಕಾರ್ಯಕರ್ತರು ಪಕ್ಷ ನಿಷ್ಠರಾಗಿದ್ದು ಪಕ್ಷದ ಬದ್ಧತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಲಾರರು. ಪ್ರಜ್ಞಾವಂತ, ಪ್ರಬುದ್ಧ ಪದವೀಧರ ಮತ್ತು ಶಿಕ್ಷಕ ಮತದಾರರು ಡಾ. ಧನಂಜಯ ಸರ್ಜಿ ಅವರನ್ನು ದೊಡ್ಡ ಅಂತರದ ಮತಗಳಿಂದ ಗೆಲ್ಲಿಸುವ ಮೂಲಕ ಮಗದೊಮ್ಮೆ ಮೇಲ್ಮನೆಯಲ್ಲಿ ವೈದ್ಯರೊಬ್ಬರು ಕ್ಷೇತ್ರವನ್ನು ಪ್ರತಿನಿಧಿಸಿ ಡಾ.ವಿ.ಎಸ್. ಆಚಾರ್ಯರವರ ದಾಖಲೆಯ ಅಭಿವೃದ್ಧಿಯ ಶಕೆಯನ್ನು ಮುಂದುವರಿಸಲು ಸದವಕಾಶ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಹಾಲಿ ವಿಧಾನ ಪರಿಷತ್ ಸದಸ್ಯರು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅತ್ಯಮೂಲ್ಯ ಸೇವೆ ಸಲ್ಲಿಸುತ್ತಿರುವ ಸಜ್ಜನ ಹಾಗೂ ಕ್ರಿಯಾಶೀಲ ವ್ಯಕ್ತಿತ್ವದ ನೈರುತ್ಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರನ್ನು ಪ್ರಜ್ಞಾವಂತ ಶಿಕ್ಷಕ ಮತದಾರರು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಮಗದೊಮ್ಮೆ ಮೇಲ್ಮನೆಯಲ್ಲಿ ಶಿಕ್ಷಕರ ಧ್ವನಿಯಾಗಿ ಕ್ಷೇತ್ರವನ್ನು ಪ್ರತಿನಿಧಿಸಲು ಅವಕಾಶವನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿ ಕಾರ್ಯಕರ್ತ ಆಧಾರಿತ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ. ಕಾರ್ಯಕರ್ತರೇ ಪಕ್ಷದ ಜೀವಾಳ. ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರುವ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡಿ ಬೆಳೆಸುವ ಪಕ್ಷ ಬಿಜೆಪಿ. ಈ ನಿಟ್ಟಿನಲ್ಲಿ
ಕರ್ನಾಟಕ ವಿಧಾನ ಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆಯಾಗಿರುವ ಸಿ.ಟಿ. ರವಿ, ಎನ್. ರವಿ ಕುಮಾರ್ ಹಾಗೂ ಎಂ.ಜಿ. ಮುಳೆ ಅವರನ್ನು ಅಭಿನಂದಿಸುವುದಾಗಿ ಯಶ್ಪಾಲ್ ಸುವರ್ಣ ತಿಳಿಸಿದರು.
ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಸುಳ್ಳು ಸುದ್ದಿ – ಚುನಾವಣಾಧಿಕಾರಿಯವರಿಗೆ ರಘುಪತಿ ಭಟ್ ದೂರು
ಉಡುಪಿ : ಚಾನೆಲ್ ಒಂದರ ಸುದ್ದಿ ವಿಡಿಯೋ ಬಳಸಿ ರಘುಪತಿ ಭಟ್ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ಬ್ರೇಕಿಂಗ್ ನ್ಯೂಸ್ ಸುಳ್ಳು ಸುದ್ಧಿಯ ವಿಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವುದರ ಬಗ್ಗೆ ನೈಋತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಕೆ. ರಘುಪತಿ ಭಟ್ ಅವರು ಚುನಾವಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ನನಗೆ ನೈಋತ್ಯ ಪದವೀಧರರ ಕ್ಷೇತ್ರದಾದ್ಯಂತ ಅಪಾರ ಬೆಂಬಲ ವ್ಯಕ್ತವಾಗಿರುವುದರಿಂದ ಕಳೆದ ನಾಲ್ಕೈದು ದಿನಗಳಿಂದ ಎದುರಾಳಿಗಳು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ತೇಜೋವಧೆ ಹಾಗೂ ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿದ್ದರು. ಆದರೆ ಚುನಾವಣೆಯ ಮುಂಚಿನ ದಿನ ರಾತ್ರಿ ಸುವರ್ಣ ಚಾನೆಲ್ನ ಬ್ರೇಕಿಂಗ್ ನ್ಯೂಸ್ ಎಂಬಂತೆ ಬಿಂಬಿಸಿ ನಾನು ಚುನಾವಣೆಯಿಂದ ಹಿಂದೆ ಸರಿದಿರುವುದಾಗಿ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆದ್ದರಿಂದ ಚುನಾವಣಾ ಕಣದಲ್ಲಿರುವ ನನಗೆ ಈ ರೀತಿ ಸುಳ್ಳು ಸುದ್ಧಿ ಹಬ್ಬಿಸಿರುವುದರಿಂದ ಮತದಾರರು ಗೊಂದಲಕ್ಕೀಡಾಗಿದ್ದಾರೆ. ಈ ನಿಟ್ಟಿನಲ್ಲಿ ಸುಳ್ಳು ಸುದ್ಧಿ ಬಿತ್ತರಿಸಿದವರನ್ನು ಪತ್ತೆ ಮಾಡಿ ತಕ್ಷಣದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ.