ಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ಶೀತಲ್ ರಾವ್ ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆ ಯಾಗಿರುತ್ತಾರೆ.
ಈಕೆ ಉಡುಪಿಯ ಪ್ರದೀಪ್ ಹಾಗು ಗೀತಾಂಜಲಿ ದಂಪತಿಗಳ ಪುತ್ರಿ. ನೃತ್ಯನಿಕೇತನ (ರಿ.) ಕೊಡವೂರು ಸಂಸ್ಥೆಯ ಗುರುಗಳಾದ ಕೊಡವೂರು ಸುಧೀರ್ ರಾವ್ ಹಾಗೂ ಮಾನಸಿ ಸುಧೀರ್ರವರ ಶಿಷ್ಯೆಯಾಗಿರುತ್ತಾರೆ.

ಉಡುಪಿ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ‘ಕೃತಕ ನೆರೆ ಹಾವಳಿ-ಬೆಂಕಿ ದುರಂತ-ಭೂಕುಸಿತ : ಒಂದು ಚರ್ಚೆ’ ಕಾರ್ಯಕ್ರಮವನ್ನು ಉಡುಪಿ ಪತ್ರಿಕಾ ಭವನದಲ್ಲಿ ಇಂದು ಆಯೋಜಿಸಲಾಯಿತು.
ಹಿರಿಯ ಭೂಗರ್ಭ ಶಾಸ್ತ್ರಜ್ಞ ಡಾ.ಉದಯ ಶಂಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಪಶ್ಚಿಮಘಟ್ಟದ ಉದ್ದಕ್ಕೂ ಭೂಕುಸಿತ ಆಗಿದೆ. ಚಿಕ್ಕಮಗಳೂರು, ವಯನಾಡು, ಮಡಿಕೇರಿ, ಚಿಕ್ಕಮಗಳೂರು ಹಾಗೂ ಅಂಕೋಲಾ ಈ ಮೊದಲಾದ ಕಡೆ ಭೂಕುಸಿತ ಉಂಟಾಗಿದೆ. ರಾಕ್ಷಸ ರೀತಿಯಲ್ಲಿ ಕೆಲಸ ಮಾಡುವ ಬುಲ್ಡೊಜರ್, ಜೆಸಿಬಿಗಳ ಘರ್ಜನೆಯೇ ಇದಕ್ಕೆ ಮುಖ್ಯ ಕಾರಣ ಎಂದರು.
ಜನರು ಎತ್ತರದ ಪ್ರದೇಶಗಳಲ್ಲಿ ಅಭಿವೃದ್ದಿ ಚಟುವಟಿಕೆ ಮಾಡುತ್ತಿದ್ದಾರೆ. ಕೃಷಿ, ರಿಯಲ್ ಎಸ್ಟೇಟ್ ಹಾಗೂ ಇನ್ನಿತರ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಹಾಗೆ, ಇದಕ್ಕೆ ಬೇಕಾದ ರೀತಿಯಲ್ಲಿ ಮಣ್ಣನನ್ನು ಅಗೆಯುತ್ತಿದ್ದಾರೆ. ಅದೇ ರೀತಿ ಎತ್ತಿನಹೊಳೆ, ಆಗುಂಬೆ ಸುರಂಗ ಮಾರ್ಗ ಯೋಜನೆ ಹಾಗೂ ಕೊಲ್ಲೂರಿನ ಕೊಡಚಾದ್ರಿ ರೋಪ್ ವೇ ಈ ಮೊದಲಾದ ಸರಕಾರದ ಯೋಜನೆಗಳು ಕೂಡ ಅತ್ಯಂತ ಹೆಚ್ಚು ಮಳೆ ಬೀಳುವ ಪಶ್ಚಿಮಘಟ್ಟದಲ್ಲಿ ಆಗುತ್ತಿದೆ. ಇದರಿಂದಾಗಿ ಮಳೆ ಬಂದಾಗ ನೀರು ಭೂಮಿಯೊಳಗೆ ಪ್ರವೇಶಿಸಲು ಭಾರಿ ಸುಲಭ ಆಗುತ್ತದೆ. ದಟ್ಟ ಕಾಡಿನಿಂದಾಗಿ ಮಳೆ ನೀರು ನಿಧಾನವಾಗಿ ಇಂಗಿ ನಮ್ಮ ನದಿಗಳನ್ನು ಪೋಷಿಸಿ, ಇಡೀ ವರ್ಷಪೂರ್ತಿ ನೀರು ಹರಿಯುವಂತೆ ಮಾಡುತ್ತದೆ. ಅಲ್ಲಿ ಇವತ್ತು ಹೇರಳವಾಗಿ ನೀರು ಒಳಗೆ ಸೇರುತ್ತಿದೆ. ಇದರಿಂದಲೇ ಇಂತಹ ಭೂಕುಸಿತ ಉಂಟಾಗಲು ಕಾರಣ ಎಂದು ಅಭಿಪ್ರಾಯಪಟ್ಟರು.
ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ, ಉಡುಪಿ ಜಿಲ್ಲಾ ಅಗ್ನಿ ಶಾಮಕ ಇಲಾಖೆಯ ಅಧಿಕಾರಿ ವಿನಾಯಕ ಉ.ಕಲ್ಗುಟಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಸ್ವಾಗತಿಸಿದರು. ಪತ್ರಕರ್ತರಾದ ಅಜಿತ್ ಅರಾಡಿ ವಂದಿಸಿದರು. ದೀಪಕ್ ಜೈನ್ ನಿರೂಪಿಸಿದರು.
ಕಾರ್ಕಳ : ಪ್ರಸಕ್ತ ಹೆಜಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಕೇಂದ್ರವಿದೆ. ರಾಜ್ಯ ಹೆದ್ದಾರಿ ಎಂಬ ಸಬೂಬು ನೀಡಿ ಕೇವಲ 3 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತೊಂದು ಟೋಲ್ ಸಂಗ್ರಹ ಕೇಂದ್ರ ತೆರೆಯಲು ರಾಜ್ಯ ಸರಕಾರ ತಯಾರಿ ನಡೆಸುತ್ತಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಜಿ.ಪಂ. ಸದಸ್ಯೆ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ತಿಳಿಸಿದ್ದಾರೆ.
ಈಗಾಗಲೇ ಎಲ್ಲ ಮೂಲಭೂತ ಆದ್ಯತೆಗಳ ಹಾಗೂ ಅಗತ್ಯ ವಸ್ತುಗಳ ವಿಪರೀತ ಬೆಲೆ ಏರಿಕೆಯಿಂದ ಜನ ಕಂಗೆಟ್ಟಿದ್ದಾರೆ. ಈ ಬಾರಿ ಮಳೆಯ ರುದ್ರ ನರ್ತನದಿಂದ ರೈತಾಪಿ ವರ್ಗ ಕಂಗಾಲಾಗಿದ್ದಾರೆ. ಈ ಸಂದಿಗ್ದ ಸನ್ನಿವೇಶದಲ್ಲಿ ಎರಡೆರಡು ಕಡೆ ಟೋಲ್ ತೆತ್ತು ಸಂಚರಿಸುವುದು ಜನರಿಗೆ ಅತೀವ ಹೊರೆಯಾಗಲಿದೆ.
ಕಾರ್ಕಳ ರಸ್ತೆಯಲ್ಲಿ ಟೋಲ್ಗೇಟನ್ನು ವೈಜ್ಞಾನಿಕವಾಗಿ ಅಳವಡಿಸುವುದು ಸಾಧ್ಯವಾಗದ ಮಾತು. ರಾಜ್ಯ ಸರಕಾರ ಕೂಡಲೇ ಎಚ್ಚೆತ್ತು ಸದ್ರಿ ಟೋಲ್ ಸಂಗ್ರಹ ಪ್ರಸ್ತಾಪವನ್ನು ಕೈಬಿಡದೇ ಇದ್ದಲ್ಲಿ ಅನ್ಯಾಯದ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯವೆನಿಸಲಿದೆ ಎಂದು ರೇಷ್ಮಾ ಉದಯ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಅಮಾವಾಸ್ಯೆ ಹಾಗೂ ಹುಣ್ಣಿಮೆಯಲ್ಲಿ ನದಿಯ ನೀರಿನ ಹರಿವಿನ ಪ್ರಮಾಣ ಸಮುದ್ರದ ಉಬ್ಬರವನ್ನು ಅವಲಂಬಿಸಿ ಕೆಲವು ಸಲ ಇಳಿಮುಖಗೊಳ್ಳುವ ಸಾಧ್ಯತೆ ಇರುವುದರಿಂದ ಆಗಸ್ಟ್ 4ರ ಅಮಾವಾಸ್ಯೆಯಂದು ಈಶ್ವರ ಮಲ್ಪೆ ಅವರು ಅಂಕೋಲ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಹರಿಯುತ್ತಿರುವ ಗಂಗಾವಳಿ ನದಿಯಲ್ಲಿ ಮೃತದೇಹದ ಶೋಧ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.
ಈ ಮೊದಲು ಗಂಗಾವಳಿ ನದಿಯಲ್ಲಿ ಸಾಕಷ್ಟು ಬಾರಿ ಶೋಧ ನಡೆಸಿರುವ ಈಶ್ವರ ಮಲ್ಪೆ ತಂಡಕ್ಕೆ ಮೃತದೇಹದ ಸುಳಿವು ಸಿಕ್ಕಿರಲಿಲ್ಲ. ಕೆಂಪು ಮಿಶ್ರಿತ ನೀರಿನಿಂದಾಗಿ ಪತ್ತೆ ಕಾರ್ಯಕ್ಕೆ ತೊಡಕಾಗಿತ್ತು. ಇದೇ ಕಾರಣದಿಂದ ಜಿಲ್ಲಾಡಳಿತ ಕೂಡ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು.
ಆಗಸ್ಟ್ 4ರಂದು ಮುಂಜಾನೆ 3 ಗಂಟೆಗೆ ಮಲ್ಪೆಯಿಂದ ಇವರ ತಂಡ ತೆರಳಲಿದ್ದು, 7 ಗಂಟೆಗೆ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ಈಶ್ವರ್ ಮಲ್ಪೆ ತಿಳಿಸಿದ್ದಾರೆ.
ಉಡುಪಿ : ಕನ್ನಡ ಜಾನಪದ ಪರಿಷತ್, ಉಡುಪಿ ಜಿಲ್ಲಾ ಘಟಕದ ವತಿಯಿಂದ ಆಗಸ್ಟ್ 27ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿರುವ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಇದರ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೀoದ್ರ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು
ಈ ಸಂದರ್ಭದಲ್ಲಿ ಅವರು ಆಶೀರ್ವಚನ ನೀಡಿ, ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲಿ. ಜನಪದ ನಮ್ಮ ನಾಡಿನ ಅದ್ಭುತವಾದ ಆಸ್ತಿ ಎಂದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಕಾರ್ಯಾಧ್ಯಕ್ಷ ಉದಯಕುಮಾರ್ ಬಿ ಹೈಕಾಡಿ, ಕೋಶಾಧಿಕಾರಿ ಚಂದ್ರ ಹಂಗಾರಕಟೈ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪ್ರಕಾಶ್ ಸುವರ್ಣ ಕಟಪಾಡಿ, ಸಂ.ಕಾರ್ಯದರ್ಶಿ ರಾಘವೇಂದ್ರ ಪ್ರಭು, ಕರ್ವಾಲು, ತಾಲೂಕು ಅಧ್ಯಕ್ಷ ಮಾಯಾ ಕಾಮತ್, ತಾಲೂಕು ಪ್ರಧಾನ ಕಾರ್ಯದರ್ಶಿ ಕುಸುಮ ಕಾಮತ್, ಪ್ರಭಾ ರಾವ್ ಮಠದ ರಮೇಶ್ ಭಟ್ ಮುಂತಾದವರಿದ್ದರು.
ಮಂಗಳೂರು : ರಾಜ್ಯ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಆ.3ರಿಂದ 10ರವರೆಗೆ ನಡೆಯುವ ಬೆಂಗಳೂರು-ಮೈಸೂರು ಪಾದಯಾತ್ರೆಯಲ್ಲಿ ದ.ಕ.ಜಿಲ್ಲೆಯ ಸುಮಾರು 5ಸಾವಿರ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು.
ನಗರದ ಕೊಡಿಯಾಲಬೈಲ್ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ವಿವಿಧ ದಿನಗಳಲ್ಲಿ, ವಿವಿಧ ಮೋರ್ಚಾದ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ವ್ಯವಸ್ಥೆಗಾಗಿ ದ.ಕ.ಜಿಲ್ಲಾ ಯುವಮೋರ್ಚದ 200ರಷ್ಟು ಕಾರ್ಯಕರ್ತರು ಇಂದೇ ಬೆಂಗಳೂರಿಗೆ ತೆರಳಿದ್ದಾರೆ ಎಂದರು.
ನಾನು ಸೇರಿದಂತೆ ಎಂಎಲ್ಎ, ಮಾಜಿ ಶಾಸಕರುಗಳು, ಬಿಜೆಪಿಯ ಉನ್ನತಮಟ್ಟದ ನಾಯಕರುಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದ ನಾಯಕರ ಸೂಚನೆಯ ಮೇರೆಗೆ ಆ.8ರಂದು ದ.ಕ.ಜಿಲ್ಲೆಯ ಸುಮಾರು ಮೂರು ಸಾವಿರದಷ್ಟು ಕಾರ್ಯಕರ್ತರು ಒಂದೇ ದಿನ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಉಡುಪಿ : ದಾವಣಗೆರೆ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಉಷಾ ಇವರಿಗೆ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಮಂಡಿಸಿದ ಸಂಶೋಧನ ಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಸ್ರ್ಟೀಟ್, ಮಂಗಳೂರು, ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವಾಲ್ಟರ್ ಡಿಸೋಜ ಇವರ ಮಾರ್ಗದರ್ಶನದಲ್ಲಿ ಇಂಪ್ಯಾಕ್ಟ್ ಆಫ್ ಜಿಎಸ್ಟಿ(ಗೂಡ್ಸ್ ಆಂಡ್ ಸರ್ವೀಸಸ್ ಟ್ಯಾಕ್ಸ್) ಆನ್ ಎಂಎಸ್ಎಂಇ ಸೆಕ್ಟರ್ ಎಂಬ ವಿಷಯದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು.
ಶ್ರೀಮತಿ ಉಷಾ ಇವರು ಶ್ರೀ ರಾಮಪೂಜಾರಿ, ಶ್ರೀಮತಿ ಸುಮತಿ ಇವರ ಪುತ್ರಿ ಹಾಗೂ ಶ್ರೀ ಮಹೇಶ್ ಸುವರ್ಣ ಪುತ್ತೂರು ಇವರ ಪತ್ನಿ.
ಪುತ್ತೂರು : ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ತೆಂಕಿಲದಲ್ಲಿ ಶುಕ್ರವಾರ ನಸುಕಿನ ಜಾವದ ವೇಳೆ ಗುಡ್ಡ ಕುಸಿದಿದೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಬದಲಿ ರಸ್ತೆಯಾಗಿ ಪುತ್ತೂರು ಪೇಟೆ ಬಳಸಿ ವಾಹನ ಸಂಚರಿಸಬೇಕಾಗಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲದಲ್ಲಿ ಆಗಾಗ ಗುಡ್ಡಕುಸಿಯುತ್ತಲೇ ಇದ್ದು ಇದೀಗ ಭಾರಿ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದೆ. ಈಗಾಗಲೇ ನಗರಸಭೆ ಅಧಿಕಾರಿಗಳು, ಪೊಲೀಸರು ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಮಣಿಪಾಲ : ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳ ಇದರ ವತಿಯಿಂದ ಸಮುದಾಯದ ಯುವ ಜನರ 100% ಉದ್ಯೋಗ ಭರವಸೆ ಈಡೇರಿಕೆಗಾಗಿ ಹಾಗೂ ಕೃಷಿ ಭೂಮಿ ಹಕ್ಕು ಪತ್ರ ಮಂಜೂರಾತಿಗಾಗಿ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಕಳೆದ 7 ದಿನಗಳಿಂದ ಅಹೋ ರಾತ್ರಿ ನಿರಂತರ ಧರಣಿ ಸತ್ಯಾಗ್ರಹ ನಡೆಯುತ್ತಿದೆ.
ಇಂದು ಸತ್ಯಾಗ್ರಹದಲ್ಲಿ ಭಾಗವಹಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೊರಗ ಸಮುದಾಯದ ಜೊತೆಯಲ್ಲಿ ಇರುವುದಾಗಿ ತಿಳಿಸಿದರು. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಮನವಿ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.
ಮಂಗಳೂರು : ವಿಧಾನಸಭೆ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಬೇಕೇ ಹೊರತು, ವಿಮರ್ಶೆಗಳ ಮರ್ಜಿಗೆ ಅನುಗುಣವಾಗಿ ಅಲ್ಲ. ನಿಯಮ ಮೀರಿ ಕೆಟ್ಟ ಸಂಪ್ರದಾಯವನ್ನು ಹುಟ್ಟುಹಾಕಲು ನನಗೆ ಇಷ್ಟವಿಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ನಗರದಲ್ಲಿಂದು 16ನೇ ವಿಧಾನಸಭೆಯ 4ನೇ ಅಧಿವೇಶನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚಿಸಲು ಅವಕಾಶ ನೀಡಿಲ್ಲ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ಮುಡಾ ಹಗರಣದ ಸಂಬಂಧ ಶಾಸಕರು ಮಂಡಿಸಿರುವ ನಿಲುವಳಿ ಸೂಚನೆಗೆ, ನಿಯಮಗಳ ಪ್ರಕಾರ ಚರ್ಚೆಗೆ ಅವಕಾಶ ನೀಡಲು ಆಗುವುದಿಲ್ಲ. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ 62(7) ಹಾಗೂ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 63ರ ಪ್ರಕಾರ ಅದರದ್ದೇ ಆದ ನಿಯಮಗಳಿವೆ. ಸರ್ಕಾರ ಚರ್ಚೆಗೆ ಸಿದ್ಧವಿದ್ದರೂ, ಸಿದ್ಧವಿಲ್ಲದಿದ್ದರೂ ನಿಯಮಾವಳಿಗಳನ್ನು ಮುರಿಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮುಡಾ ಹಗರಣದ ತನಿಖೆಗೆ ಈಗಾಗಲೇ ನಿವೃತ್ತ ನ್ಯಾಯಾಧೀಶರ ಆಯೋಗವನ್ನು ರಚನೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರ ಸ್ಪೀಕರ್ ಪೀಠಕ್ಕೆ ನೀಡಿದೆ. ಸದನದಲ್ಲಿ ವಿಷಯ ಚರ್ಚೆಯಾದರೆ ನ್ಯಾಯಾಧಿಕರಣ, ಆಯೋಗದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸದನದ ಎಲ್ಲ ಸದಸ್ಯರಿಗೂ ಕಲಾಪದಲ್ಲಿ ಮಾತನಾಡುವ ಮುಕ್ತ ಅವಕಾಶ ಇದೆ. ಕಾನೂನು ರಚಿಸುವ ಹುದ್ದೆಯಲ್ಲಿರುವ ವಿಧಾನಸಭಾ ಸದಸ್ಯರು ನಿಯಮ ಮೀರಿ ಚರ್ಚಿಸುವ ಕೆಟ್ಟ ಪರಂಪರೆ ಹುಟ್ಟು ಹಾಕಬಾರದು. ಜನರು ಬಯಸುತ್ತಾರೆ, ಬಹುಮತ ಇದೆ ಎಂದು ನಿಯಮಾವಳಿ, ಕಾನೂನು ಮೀರಬಾರದು ಎಂಬ ಪ್ರಜ್ಞೆ ನಮಗಿರಬೇಕು. ಬಿಎಸಿ ಸಮಿತಿಯಲ್ಲಿ ಚರ್ಚಿಸಿ ನಿಯಮಾವಳಿಗಳಂತೆ ಬೇರೊಂದು ನಿಯಮ ಸಂಖ್ಯೆಯಡಿಯಲ್ಲಿ ಚರ್ಚಿಸುವ ಅವಕಾಶವನ್ನು ಸರ್ವಾನುಮತದ ನಿರ್ಧಾರಕ್ಕೆ ಬರುವ ‘ಮಾದರಿ’ ಅವಕಾಶ ಇದ್ದೇ ಇದೆ. ನಿಯಮ ಮೀರುವುದು ಮುಂದಿನ ಪೀಳಿಗೆಗೆ ಕೆಟ್ಟ ಪರಂಪರೆ ಹಾಕಿಕೊಟ್ಟಂತಾಗುತ್ತದೆ ಎಂದು ಯು.ಟಿ.ಖಾದರ್ ಹೇಳಿದರು.
Maax News covers major news and events of Udupi district. This channel provides detailed reports on the political, social, economic, and cultural life of Udupi district.
Maax News, equipped with the most sophisticated studio in Udupi, assures people comprehensive news coverage.