ಮಂಗಳೂರು : ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಂಗಳೂರು ವತಿಯಿಂದ ನಡೆದ ಬಂಟ ಕ್ರೀಡೋತ್ಸವ- 2024 ದಲ್ಲಿ, ತ್ರೋಬಾಲ್ ಪಂದ್ಯಾಟದಲ್ಲಿ ಕಾರ್ಕಳ ಬಂಟರ ಸಂಘ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
Sports
ಕಾರ್ಕಳ : ಶಾಲಾ ಶಿಕ್ಷಣ ಇಲಾಖೆ (ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗವು ದ್ವಿತೀಯ ಪಡೆದು ಮೂವರು ವಿದ್ಯಾರ್ಥಿನಿಯರಾದ ದ್ವಿತೀಯ ವಿಜ್ಞಾನ ವಿಭಾಗದ ಕು.ಗುಣಶ್ರೀ ಆರ್, ಮನಸ್ವಿ.ಎಚ್.ಟಿ, ಪ್ರಥಮ ವಿಜ್ಞಾನ ವಿಭಾಗದ ಕು.ಪೂರ್ಣಶ್ರೀ ವಿ.ಎಸ್. ಹಾಗೂ ಬಾಲಕರ ವಿಭಾಗದಲ್ಲಿ ದಿಗಂತ್ ಎಚ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿಯವರು, ಸಿ.ಇ.ಒ ಮತ್ತು ಪ್ರಾಂಶುಪಾಲ ದಿನೇಶ್ ಎಂ. ಕೊಡವೂರುರವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಉಡುಪಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಅಜ್ಜರಕಾಡುವಿನ ಜಿಲ್ಲಾ ಕ್ರೀಡಾಂಗದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೋಲು-ಗೆಲುವನ್ನು ಸಮಾನವಾಗಿ ಪರಿಗಣಿಸಿ ಮುನ್ನಡೆಯುವ ಸಾಮರ್ಥ್ಯವನ್ನು ಕ್ರೀಡೆಗಳು ಕಲಿಸುವುದರ ಜೊತೆಗೆ ಮತ್ತೊಬ್ಬರ ಗೆಲುವನ್ನು ಸಹ ಸಂಭ್ರಮಿಸುವ ಮನೋಭಾವವನ್ನು ನಾವು ಬೆಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪೌರಯುಕ್ತ ರಾಯಪ್ಪ, ವಾಲಿಬಾಲ್ ತರಬೇತುದಾರ ರಾಜೇಶ್ ಪತ್ತರ್, ಉಡುಪಿ ತಾಲೂಕು ಕ್ರೀಡಾಧಿಕಾರಿ ವಸಂತ್ ಜೋಗಿ, ಕಾಪು ತಾಲೂಕು ಕ್ರೀಡಾಧಿಕಾರಿ ರಿತೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಅಜ್ಜರಕಾಡುವಿನ ಜಿಲ್ಲಾ ಕ್ರೀಡಾಂಗಣದಲ್ಲಿ ಪುರುಷರ ಹಾಗೂ ಮಹಿಳೆಯರ ವಾಲಿಬಾಲ್ ಹಾಗೂ ಕಬಡ್ಡಿ ಪಂದ್ಯಾಟಗಳು ಜರಗಿದವು.
ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 28 ಮತ್ತು 29ರಂದು ದಸರಾ ಕ್ರೀಡಾಕೂಟ
ಉಡುಪಿ : ಜಿಲ್ಲಾಡಳಿತ, ಜಿ.ಪಂ. ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಸೆಪ್ಟೆಂಬರ್ 28 ಮತ್ತು 29ರಂದು ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೆಪ್ಟೆಂಬರ್ 28ರಂದು ಬೆಳಗ್ಗೆ 9ಕ್ಕೆ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಉದ್ಘಾಟಿಸಲಿದ್ದಾರೆ.
ಸೆ. 28ರಂದು ಬೆಳಗ್ಗೆ 9ಕ್ಕೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಆತ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ವೇಟ್ಲಿಫ್ಟಿಂಗ್, ಕುಸ್ತಿ, ತ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಹಾಗೂ ಟೇಕ್ವಾಂಡೋ ಕ್ರೀಡಾಕೂಟ, ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಖೋ-ಖೋ ಹಾಗೂ ನೆಟ್ಬಾಲ್ ಕ್ರೀಡಾಕೂಟ, ಚಾಮರಾಜನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಫುಟ್ಬಾಲ್ ಹಾಗೂ ಹ್ಯಾಂಡ್ಬಾಲ್ ಕ್ರೀಡಾಕೂಟ, ಕೂಡಿಗೆ ಕ್ರೀಡಾಶಾಲೆಯಲ್ಲಿ ಹಾಕಿ, ಯೋಗ ಹಾಗೂ ಜಿಮ್ನಾಸ್ಟಿಕ್ಸ್ ಕ್ರೀಡಾಕೂಟ, ಚಿಕ್ಕಮಗಳೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜೂಡೋ ಹಾಗೂ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 8ಕ್ಕೆ ವಾಲಿಬಾಲ್, ಕಬಡ್ಡಿ, ಟಿ.ಟಿ., ಟೆನ್ನಿಸ್ ಹಾಗೂ ಈಜು ಕ್ರೀಡಾಕೂಟ ಮತ್ತು ಸೆ. 29ರಂದು ಬೆಳಗ್ಗೆ 9ಕ್ಕೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಬಾಸ್ಕೆಟ್ಬಾಲ್ ಕ್ರೀಡಾಕೂಟ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಡೆನ್ಮಾರ್ಕ್ನಲ್ಲಿ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ – ಉಡುಪಿಯ ಇಬ್ಬರು ಸಿಬ್ಬಂದಿಗೆ ಚಿನ್ನದ ಪದಕ
ಉಡುಪಿ : ಡೆನ್ಮಾರ್ಕ್ನಲ್ಲಿ ನಡೆದ 15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಅಶ್ವಿನ್ ಸನಿಲ್ ಮತ್ತು ಕುಮಟಾ ಅಗ್ನಿಶಾಮಕ ದಳದ ಸಿಬ್ಬಂದಿ ರಾಜೇಶ್ ಮಡಿವಾಳ ಚಿನ್ನದ ಪದಕದೊಂದಿಗೆ ಭಾರತಕ್ಕೆ ಹಿಂತಿರುಗಿದ್ದಾರೆ.
ಅಶ್ವಿನ್ ಸನಿಲ್ 83 ಕೆಜಿ ವಿಭಾಗದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ, 80 ಕೆಜಿ ಪ್ಲಸ್ ದೇಹದಾಢ್ಯ ಸ್ಪರ್ಧೆಯಲ್ಲಿ ಚಿನ್ನ,
100 ಮೀಟರ್ ಓಟ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ರಾಜೇಶ್ ಮಡಿವಾಳ 93 ಕೆಜಿ ವಿಭಾಗದ ಪವರ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ, 90 ಪ್ಲಸ್ ವಿಭಾಗದ ದೇಹದಾಢ್ಯ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದರು.
ಸುಮಾರು 50 ದೇಶಗಳ ಕ್ರೀಡಾ ಪ್ರತಿನಿಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಾಯ್ನಾಡು ಉಡುಪಿಗೆ ಕ್ರೀಡಾಪಟುಗಳು ಆಗಮಿಸಿದಾಗ ಹೆಜಮಾಡಿ ಟೋಲ್ಗೇಟ್ ಬಳಿ ಪಡುಬಿದ್ರಿ ಠಾಣೆ ಪೊಲೀಸರು ಆತ್ಮೀಯವಾಗಿ ಸ್ವಾಗತಿಸಿದರು.
ನಂತರ ಕಾಪು ಹೊಸ ಮಾರಿಗುಡಿಗೆ ಆಗಮಿಸಿದ ಅವರನ್ನು ಮಾರಿಗುಡಿ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿ ತಾಯಿ ಮಾರಿಯಮ್ಮನ ಪ್ರಸಾದವನ್ನು ನೀಡಿದರು.
ಆಸರೆ, ಮಾಹೆ ಮತ್ತು ಅರ್ಚನಾ ಟ್ರಸ್ಟ್ನ ಕುಮಾರಿ ಕವಿತಾ ಅವರು ವಿಶೇಷ ಒಲಿಂಪಿಕ್ಸ್ನಲ್ಲಿ ಕರ್ನಾಟಕ ಬಾಚೀ ಚಿನ್ನದ ವಿಜಯೋತ್ಸವ ಆಚರಿಸಿದರು
ಮಣಿಪಾಲ : 2024ರ ಸೆಪ್ಟೆಂಬರ್ 1 ರಿಂದ 5 ರವರೆಗೆ ಗ್ವಾಲಿಯರ್ನಲ್ಲಿ ನಡೆದ ಇತ್ತೀಚೆಗೆ ಮುಕ್ತಾಯಗೊಂಡ ರಾಷ್ಟ್ರೀಯ ಬಾಚೀ ಚಾಂಪಿಯನ್ಶಿಪ್ನಲ್ಲಿ ವಿಶೇಷ ಒಲಿಂಪಿಕ್ಸ್ ಕರ್ನಾಟಕ ರಾಜ್ಯ ಬಾಚೀ ತಂಡವು ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಗಮನಾರ್ಹ ಯಶಸ್ಸನ್ನು ಸಾಧಿಸಿದೆ. ಈ ಅತ್ಯುತ್ತಮ ಸಾಧನೆಯು ಕರ್ನಾಟಕ ರಾಜ್ಯಕ್ಕೆ ಅಪಾರ ಹೆಮ್ಮೆ ತಂದಿದೆ.
ಕ್ರೀಡಾಪಟುಗಳ ಪೈಕಿ ಕಳೆದ 15 ವರ್ಷಗಳಿಂದ ಆಸರೆ ನಿವಾಸಿಯಾಗಿರುವ ಮೈಸೂರು ಜಿಲ್ಲೆ ಹುಣಸೂರು ಮೂಲದ ಕುಮಾರಿ ಕವಿತಾ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಜುಲೈ 29, 2024 ರಂದು ದಾವಣಗೆರೆಯಲ್ಲಿ ವಿಶೇಷ ಒಲಿಂಪಿಕ್ಸ್ ಭಾರತ್ ಕರ್ನಾಟಕ ನಡೆಸಿದ ರಾಜ್ಯ ಮಟ್ಟದ ಬಾಚೀ ಸ್ಪರ್ಧೆಯಲ್ಲಿ ಭಾಗವಹಿಸಿದ ನಂತರ, ಕುಮಾರಿ ಕವಿತಾ ಅವರು ರಾಷ್ಟ್ರೀಯ ಕಾರ್ಯಕ್ರಮಕ್ಕೆ ಕರ್ನಾಟಕ ತಂಡದ ಭಾಗವಾಗಿ ಆಯ್ಕೆಯಾದರು. ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದ ರಾಷ್ಟ್ರೀಯ ಬಾಚೀ ಚಾಂಪಿಯನ್ಶಿಪ್ನಲ್ಲಿ, ಕವಿತಾ ಸೇರಿದಂತೆ ತಂಡವು ತಮ್ಮ ಸಮರ್ಪಣೆ ಮತ್ತು ಟೀಮ್ವರ್ಕ್ ಅನ್ನು ಪ್ರದರ್ಶಿಸಿದರು, ಎರಡು ಚಿನ್ನದ ಪದಕಗಳನ್ನು ಗೆದ್ದರು.
ಕುಮಾರಿ ಕವಿತಾ ವಾಸಿಸುವ ಆಸರೆ, ಮಾನಸಿಕ ಅಸ್ವಸ್ಥ ನಾಗರಿಕರಿಗೆ ಸಹಾಯ ಮಾಡಲು ಮೀಸಲಾಗಿರುವ ವಿಶ್ವಾಸಾರ್ಹ ಸಂಸ್ಥೆಯಾಗಿದೆ. ವಿವಿಧ ಕಾರಣಗಳಿಂದಾಗಿ ಮಾನಸಿಕ ಬೆಳವಣಿಗೆಯಲ್ಲಿ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಅಗತ್ಯ ಬೆಂಬಲವನ್ನು ನೀಡುವ ಉದಾತ್ತ ಉದ್ದೇಶದಿಂದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಅರ್ಚನಾ ಟ್ರಸ್ಟ್ ಜಂಟಿಯಾಗಿ ಇದನ್ನು ಸ್ಥಾಪಿಸಿದೆ. ಈ ಗೆಲುವು ಕವಿತಾ ಅವರ ವೈಯಕ್ತಿಕ ಸಾಧನೆ ಮಾತ್ರವಲ್ಲ, ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಗಳನ್ನು ಬೆಂಬಲಿಸುವಲ್ಲಿ ಆಸರೆ ಮಾಡಿದ ಸಬಲೀಕರಣದ ಕಾರ್ಯಕ್ಕೆ ಸಾಕ್ಷಿಯಾಗಿದೆ.
ಕರ್ನಾಟಕ ಬಾಚೀ ತಂಡದ ಯಶಸ್ಸು ಅಥ್ಲೀಟ್ಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯ ಸಾಮೂಹಿಕ ಪ್ರಯತ್ನಗಳ ಪ್ರತಿಬಿಂಬವಾಗಿದೆ, ಜೊತೆಗೆ ವಿಶೇಷ ಒಲಿಂಪಿಕ್ಸ್ ಭಾರತ್ ಕರ್ನಾಟಕದ ಬದ್ಧತೆಯ ಜೊತೆಗೆ ಕ್ರೀಡಾಪಟುಗಳು ಅಭಿವೃದ್ಧಿ ಹೊಂದುವ ಅಂತರ್ಗತ ವಾತಾವರಣವನ್ನು ಪೋಷಿಸುತ್ತದೆ.
ತಂಡದ ಅತ್ಯುತ್ತಮ ಪ್ರದರ್ಶನದಿಂದ ನಾವು ರೋಮಾಂಚನಗೊಂಡಿದ್ದೇವೆ. ಈ ಸಾಧನೆ, ವಿಶೇಷವಾಗಿ ಕುಮಾರಿ ಕವಿತಾ ಅವರ ಯಶಸ್ಸು, ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಕ್ರೀಡೆಯ ಮೇಲಿನ ಉತ್ಸಾಹದ ಫಲಿತಾಂಶವಾಗಿದೆ. ಇದು ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ಕ್ರೀಡಾಪಟುಗಳನ್ನು ಬೆಂಬಲಿಸುವ ಮತ್ತು ಅವರ ಗಮನಾರ್ಹ ಸಾಮರ್ಥ್ಯಗಳನ್ನು ಆಚರಿಸುವ ಮಹತ್ವವನ್ನು ಒತ್ತಿಹೇಳುತ್ತದೆ ಎಂದು ವಿಶೇಷ ಒಲಿಂಪಿಕ್ಸ್ ಭಾರತ್ ಕರ್ನಾಟಕ ಸಮಿತಿಯ ಸದಸ್ಯರು ಹೇಳಿದರು.
ಈ ಐತಿಹಾಸಿಕ ವಿಜಯವು ಸೇರ್ಪಡೆಯ ಶಕ್ತಿ ಮತ್ತು ಸ್ಪರ್ಧಿಸಲು ಮತ್ತು ಯಶಸ್ವಿಯಾಗಲು ಅವಕಾಶವನ್ನು ನೀಡಿದಾಗ ಕ್ರೀಡಾಪಟುಗಳ ನಂಬಲಾಗದ ಸಾಮರ್ಥ್ಯವನ್ನು ಉದಾಹರಿಸುತ್ತದೆ.
ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ : ಆಳ್ವಾಸ್ಗೆ ಅವಳಿ ಪ್ರಶಸ್ತಿ
ಮೂಡುಬಿದಿರೆ : ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಹಾಗೂ ರೋಟರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಮೂಡುಬಿದಿರೆಯಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ – ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ಅವಳಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು, ರೋಟರಿ ಪದವಿ ಪೂರ್ವ ಕಾಲೇಜು ತಂಡವನ್ನು 2-0 ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು.
ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿಯೂ ಕೂಡ ಆಳ್ವಾಸ್ ಪದವಿಪೂರ್ವ ಕಾಲೇಜು, ರೋಟರಿ ಪದವಿ ಪೂರ್ವ ಕಾಲೇಜಿನ ತಂಡವನ್ನು 2-1 ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು.
ದಕ್ಷಿಣ ಕನ್ನಡ : ಖೇಲೋ ಇಂಡಿಯಾ ತಂಡದ ಸಾಕ್ಷಿ ಕ್ರಿಸ್ಟಿನಾ ಕರ್ಕಡ, 2024ರ ದ.ಕ. ಜಿಲ್ಲಾ ಕಿರಿಯ ಅಥ್ಲೆಟಿಕ್ ಕೂಟದ 80 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಈಗ ಸೆಪ್ಟೆಂಬರ್ 14 ರಿಂದ 17 ರವರೆಗೆ ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕೂಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್, ಮೇರಿಹಿಲ್, ಮಂಗಳೂರಿನ ವಿದ್ಯಾರ್ಥಿನಿ ಹಾಗೂ ಭಕ್ಷಿತ್ ಸಾಲಿಯಾನ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ.
ಉಡುಪಿ : ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಅಥ್ಲೆಟಿಕ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ವಯೋಮಾನ 18ರ ಬಾಲಕರ ವಿಭಾಗದ 100 ಮೀಟರ್ ಮತ್ತು 200 ಮೀಟರ್ ಓಟದ ಸ್ಪರ್ಧೆಗಳಲ್ಲಿ ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚಿರಾಗ್ ಸಿ ಪೂಜಾರಿ ರಾಜ್ಯಮಟ್ಟದ ಅಮೆಚೂರ್ ಜೂನಿಯರ್ ಅಥ್ಲೆಟಿಕ್ಸ್ ಕೂಟಕ್ಕೆ ಆಯ್ಕೆಯಾಗಿದ್ದಾರೆ.
ಚಿರಾಗ್ ಸಿ ಪೂಜಾರಿ ಹೆಬ್ರಿ ಸಂತೆಕಟ್ಟೆಯ ಚಂದ್ರ ಪೂಜಾರಿ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರು, ಹಾಗೂ ಬೋಧಕ ಬೋಧಕೇತರ ವರ್ಗ ಅಭಿನಂದಿಸಿರುತ್ತಾರೆ.
ಮಂಗಳೂರು: ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್ ನಲ್ಲಿ ಪಾಲ್ಗೊಳ್ಳಲಿರುವ ಮಾಜಿ ಶಾಸಕ ಬಿ.ಎ.ಮೊಯಿದೀನ್ ಬಾವಾ ಮಾಲಕತ್ವದ “ಟೀಮ್ ಬಾವಾ” ತಂಡದ ಲೋಗೋ, ಟಿ ಶರ್ಟ್ ಅನಾವರಣ ಕಾರ್ಯಕ್ರಮ ಶನಿವಾರ ಮಧ್ಯಾಹ್ನ ಫೋರಮ್ ಫಿಜಾ ಮಾಲ್ ನಲ್ಲಿ ಜರುಗಿತು.
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತಾಡಿ, “ಕಬಡ್ಡಿ ನಮ್ಮ ದೇಶದ ಪ್ರಸಿದ್ಧ ಕ್ರೀಡೆ. ಈ ಕ್ರೀಡೆಯಲ್ಲಿ ಆಡುವವರಷ್ಟೇ ನೋಡುವವರು ಕೂಡಾ ಆಸಕ್ತಿ ಹೊಂದಿರುತ್ತಾರೆ. ಬಹಳಷ್ಟು ಥ್ರಿಲ್ ಹೊಂದಿರುವ ಈ ಕ್ರೀಡೆಯ ಆಯೋಜಕರು ಮತ್ತು ಟೀಮ್ ಬಾವಾ ತಂಡದ ಎಲ್ಲ ಆಟಗಾರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಜನರನ್ನು ಬೆಸೆಯಲು ಇಂತಹ ಕ್ರೀಡಾಕೂಟಗಳು ಸಹಕಾರಿ“ ಎಂದರು.
ಬಳಿಕ ಮಾತಾಡಿದ ಮೊಯಿದೀನ್ ಬಾವಾ ಅವರು, “ಮಂಗಳೂರಿನ ಜನರು ಎಲ್ಲರೂ ಒಂದೇ ತಾಯಿಯ ಮಕ್ಕಳು ಯಾವುದೇ ಜಾತಿ ಧರ್ಮದ ಬೇಧಭಾವ ನಮ್ಮಲ್ಲಿಲ್ಲ ಅನ್ನೋದನ್ನು ತೋರಿಸಲು ವೀ ಆರ್ ಯುನೈಟೆಡ್ ತಂಡವನ್ನು ಅಝ್ಫರ್ ರಝಕ್ ನೇತೃತ್ವದ ಯುವಕರು ಕಟ್ಟಿದ್ದಾರೆ. ಅವರಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ನನ್ನ ಟೀಮ್ ಬಾವಾ ತಂಡವು ಕೂಡಾ ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್ ನಲ್ಲಿ ಪಾಲ್ಗೊಳ್ಳುತ್ತಿದೆ. ಇದು ನನಗೆ ಅತ್ಯಂತ ಖುಷಿಯ ವಿಚಾರ. ಕ್ರೀಡೆಗಳು ನಮ್ಮೆಲ್ಲರನ್ನೂ ಒಗ್ಗೂಡಿಸಲಿ. ಸಮಾಜದಲ್ಲಿ ಸೌಹಾರ್ದತೆ ಕಾಪಾಡುವ ಇಂತಹ ಕ್ರೀಡಾಕೂಟಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳೋಣ“ ಎಂದರು.
ಫಿಜಾ ಗ್ರೂಪ್ ಎಂ.ಡಿ. ಬಿ.ಎಂ.ಫಾರೂಕ್ ಮಾತನಾಡಿ, ”ಮಂಗಳೂರಿನಲ್ಲಿ ಕಬಡ್ಡಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವಿದೆ. ಇಲ್ಲಿ ಕ್ರೀಡೆಗೆ ಸಾಕಷ್ಟು ಅವಕಾಶಗಳಿವೆ. ಇಂತಹ ಕ್ರೀಡಾಕೂಟಗಳು ಹೆಚ್ಚು ಹೆಚ್ಚು ಆಯೋಜನೆಗೊಳ್ಳಲಿ“ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ವೀ ಆರ್ ಯುನೈಟೆಡ್ ಅಧ್ಯಕ್ಷ ಅಝ್ಫರ್ ರಝಕ್, ಕೋಶಾಧಿಕಾರಿ ಸುದೇಶ್ ಭಂಡಾರಿ, ಅನಂತ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.