ಉಡುಪಿ : ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಉಡುಪಿಯ ಅಂಚೆ ವಿಭಾಗದ ಅಧೀಕ್ಷಕ ರಮೇಶ್ ಪ್ರಭು, ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠ್ಠಲ ಭಟ್, ವಸಂತ ಹಾಗೂ ಉಪ ಅಂಚೆ ಪಾಲಕಿ ಪೂರ್ಣಿಮಾ ಜನಾರ್ದನ್, ಅಂಚೆ ಸಿಬ್ಬಂದಿ ಪ್ರಜ್ವಲ್ರವರು ಉಡುಪಿ ವಿಧಾನಸಭಾ ಶಾಸಕ ಯಶ್ಪಾಲ್ ಸುವರ್ಣರನ್ನು ಭೇಟಿಯಾಗಿ ಮುಖ್ಯಮಂತ್ರಿ, ಸಂಸ್ಕ್ರತಿ ಮತ್ತು ಪ್ರವಾಸೋದ್ಯಮ ಇಲಾಖೆ, ಭಾರತ ಸರಕಾರ ಇವರ ಪತ್ರವನ್ನು ಭಾರತೀಯ ಅಂಚೆ ಇಲಾಖೆಯಲ್ಲಿ ಲಭ್ಯವಿರುವ ತಿರಂಗಾ ರಾಷ್ಟ್ರಧ್ವಜದೊಂದಿಗೆ ಹಸ್ತಾಂತರಿಸಿದರು.
Special
ಹೆಡ್ ಕಾನ್ಸ್ಟೇಬಲ್ ಬಿ. ವಿಜಯ್ ಕುಮಾರ್ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ
ಉಡುಪಿ : ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಆರ್ಬಿ ವಿಭಾಗದಲ್ಲಿ ಸಿವಿಲ್ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ಬಿ. ವಿಜಯ್ ಕುಮಾರ್ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಲಭಿಸಿದೆ. ಇವರು 1993ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು.

ಈತನಕ ಪಣಂಬೂರು, ಪುತ್ತೂರು ನಗರ, ಉರ್ವ, ಉಡುಪಿ ನಗರ, ಕುಂದಾಪುರ, ಉಡುಪಿ ಟ್ರಾಫಿಕ್, ಉಡುಪಿ ಮಹಿಳಾ ಠಾಣೆ ಮತ್ತು ಹಿರಿಯಡ್ಕ ಠಾಣೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. 2022ರಲ್ಲಿ ಇವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದರು.
ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಿದ ಮಾಹೆ ಮಣಿಪಾಲದ “ಆಟಿದ ತುಳು ಪರ್ಬ” ಆಚರಣೆಯ ಉದ್ಘಾಟನೆ
ಮಣಿಪಾಲ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಮಣಿಪಾಲವು ತುಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ರೋಮಾಂಚಕ ಆಚರಣೆಯಾದ “ಆಟಿದ ತುಳು ಪರ್ಬ”ವನ್ನು ಹೆಮ್ಮೆಯಿಂದ ಉದ್ಘಾಟಿಸಿತು. ಕೆಎಂಸಿ ಮಣಿಪಾಲದ ಡಾ.ಟಿ.ಎಂ.ಎ ಪೈ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಮುದಾಯದ ಬಾಂಧವರು ತುಳುನಾಡಿನ ಸಂಪ್ರದಾಯಗಳು ಮತ್ತು ಆಚಾರ-ವಿಚಾರಗಳಲ್ಲಿ ದಿನವಿಡೀ ತಲ್ಲೀನರಾಗಿದ್ದರು.
ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅವರು ಉದ್ಘಾಟನೆಯನ್ನು ನೆರವೇರಿಸಿ, ತುಳುನಾಡಿನ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸುವ ಮತ್ತು ಪ್ರಚಾರ ಮಾಡುವಲ್ಲಿ ತುಳು ಪರ್ಬದ ಮಹತ್ವವನ್ನು ಒತ್ತಿ ಹೇಳಿದರು. ಡಾ. ಬಲ್ಲಾಳ್ ತಮ್ಮ ಭಾಷಣದಲ್ಲಿ, “ತುಳುನಾಡು ಅದರ ಭೌಗೋಳಿಕ ಮತ್ತು ಭಾಷಾ ಗುರುತುಗಳಿಗಿಂತ ಮಿಗಿಲಾದದ್ದು. ಇದು ಒಂದು ಜೀವಂತ, ಉಸಿರಾಟದ ಸಾಂಸ್ಕೃತಿಕ ರಚನೆಯಾಗಿದ್ದು ಅದು ತನ್ನ ಜನರನ್ನು ತನ್ನದೇ ಆದ ಸಂಪ್ರದಾಯಗಳು, ಆಚರಣೆಗಳು ಮತ್ತು ಸಂಸ್ಕೃತಿಯ ಮೂಲಕ ಬಂಧಿಸುತ್ತದೆ. ಈ ಆಚರಣೆಯು ತುಳುನಾಡಿನ ಅಸ್ಮಿತೆಯನ್ನು ವ್ಯಾಖ್ಯಾನಿಸುವ ಆಳವಾದ ಬೇರೂರಿರುವ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ” ಎಂದರು.

ಉದ್ಘಾಟನೆಯ ನಂತರ ಮಣಿಪಾಲದ ಮಾಧವ ಕೃಪಾ ಶಾಲೆಯ ವಿದ್ಯಾರ್ಥಿನಿ ಕುಮಾರಿ ದೃತಿ ಶೆಟ್ಟಿ ತುಳು ಭಾಷೆಯಲ್ಲಿ ಮನಮುಟ್ಟುವ ಭಾಷಣ ಮಾಡಿ, ತುಳುನಾಡಿನ ರೋಮಾಂಚಕ ಸಾಂಸ್ಕೃತಿಕ ಆಚರಣೆಗಳನ್ನು ಎತ್ತಿ ತೋರಿಸಿದರು. ಅವರ ಭಾಷಣವು ತುಳುನಾಡನ್ನು ಅನನ್ಯವಾಗಿಸುವ ಸಂಪ್ರದಾಯಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡಿತು, ಈ ಪ್ರದೇಶದ ಅಸ್ಮಿತೆಗೆ ಅವಿಭಾಜ್ಯವಾಗಿರುವ ಪ್ರಕೃತಿ ಮತ್ತು ಕೃಷಿಯೊಂದಿಗಿನ ಸಮುದಾಯದ ಸಂಬಂಧದ ಬಗ್ಗೆ ಉತ್ಕಟಭಾವದಿಂದ ಮಾತನಾಡಿದರು.
ಡಾ. ರವಿರಾಜ ಎನ್.ಎಸ್., ಸಿಒಒ ಮಾಹೆ, ಮಣಿಪಾಲ ಇವರು ಗೌರವ ಅಥಿತಿಯಾಗಿದ್ದರು . ಅವರು ಮಾತನಾಡುತ್ತಾ , ಪ್ರಾದೇಶಿಕ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಮಾಹೆಯ ಪಾತ್ರವನ್ನು ಎತ್ತಿ ತೋರಿಸುತ್ತಾ, “ನಮ್ಮ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಮತ್ತು ಪ್ರಚಾರ ಮಾಡುವಲ್ಲಿ ಮಾಹೆ ಯಾವಾಗಲೂ ಮುಂಚೂಣಿಯಲ್ಲಿದೆ. ಯಕ್ಷಗಾನ ಕೇಂದ್ರ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಂತಹ ಪ್ರಾದೇಶಿಕ ಸಂಪನ್ಮೂಲ ಕೇಂದ್ರಗಳ ಉಪಕ್ರಮಗಳ ಮೂಲಕವು ತುಳುನಾಡಿನ ಸಂಪ್ರದಾಯಗಳ ಶ್ರೀಮಂತಿಕೆಯನ್ನು ದಾಖಲಿಸಲು ಮತ್ತು ಪ್ರಸಾರ ಮಾಡಲು ನಾವು ಬದ್ಧರಾಗಿದ್ದೇವೆ” ಎಂದರು.
ಗೌರವ ಅಥಿತಿಯಾಗಿದ್ದ ಮಾಹೆ ಮಣಿಪಾಲದ ಅಂತರಾಷ್ಟ್ರೀಯ ಸಹಯೋಗದ ನಿರ್ದೇಶಕ ಡಾ.ಕರುಣಾಕರ ಕೋಟೆಗಾರ್ ಎ ಅವರು, “ತುಳು ಪರ್ಬ ಕೇವಲ ಒಂದು ಕಾರ್ಯಕ್ರಮವಲ್ಲ, ಇದು ತುಳುನಾಡನ್ನು ವ್ಯಾಖ್ಯಾನಿಸುವ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಏಕತೆಯ ಆಚರಣೆಯಾಗಿದೆ. ವಿದ್ಯಾರ್ಥಿಗಳು ಮತ್ತು ವಿಶಾಲ ಸಮುದಾಯವು ನಮ್ಮ ಪ್ರದೇಶವನ್ನು ಅನನ್ಯವಾಗಿಸುವ ರೋಮಾಂಚಕ ಸಂಪ್ರದಾಯಗಳಲ್ಲಿ ಮುಳುಗಲು ಒಂದು ಅಪರೂಪದ ಸಮಯವಾಗಿದೆ ಎಂದರು”.
ಆಟಿದ ತುಳು ಪರ್ಬವು ತುಳುನಾಡಿನ ಶ್ರೀಮಂತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನ್ಯಾಸಗೊಳಿಸಿ ಇಡೀ ದಿನದ ರೋಮಾಂಚಕಾರಿ ಚಟುವಟಿಕೆಗಳನ್ನು ನೀಡಿತು. “ತುಳು ರಂಗ್” ಎಂಬ ಚಿತ್ರಕಲೆ ಸ್ಪರ್ಧೆಯೊಂದಿಗೆ ಚಟುವಟಿಕೆ ಪ್ರಾರಂಭವಾಯಿತು, ಇದರಲ್ಲಿ ಸ್ಪರ್ದಿಗಳು ತುಳುನಾಡಿನ ಸಾಂಸ್ಕೃತಿಕ ಲಕ್ಷಣಗಳನ್ನು ಪ್ರತಿಬಿಂಬಿಸುವ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಇದಾದ ನಂತರ ತುಳು ಜಾನಪದ ಸಮೂಹ ನೃತ್ಯ ಸ್ಪರ್ಧೆ “ತುಳು ನಲಿಕೆ” ತುಳು ಸಂಸ್ಕೃತಿಯ ರೋಮಾಂಚಕ ಲಯ ಮತ್ತು ಚಲನೆಗಳಿಗೆ ಜೀವ ತುಂಬಿತು.
ಮಧ್ಯಾಹ್ನದ ನಂತರ ತುಳುನಾಡಿನ ಸಂಸ್ಕೃತಿ ಕುರಿತು ನಡೆದ – “ತುಳು ಬದ್ಕ್ ” ಪ್ರಸ್ತುತಿಯನ್ನು ಆನಂದಿಸಿದರು, ಇದು ತುಳು ನಾಡನ್ನು ವ್ಯಾಖ್ಯಾನಿಸುವ ಇತಿಹಾಸ, ಪದ್ಧತಿಗಳು ಮತ್ತು ಸಂಪ್ರದಾಯಗಳ ಬಗ್ಗೆ ವಿವರವಾದ ಒಳನೋಟಗಳನ್ನು ಒದಗಿಸಿತು. “ಭೂತ” ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರ ಪ್ರದರ್ಶನವು ದಿನದ ವಿಶೇಷವಾಗಿತ್ತು, ನಂತರ ಭೂತಾರಾಧನೆ, ಕಂಬಳ, ಯಕ್ಷಗಾನ ಮತ್ತು ಕರಕುಶಲತೆ ಸೇರಿದಂತೆ ತುಳು ಸಾಂಸ್ಕೃತಿಕ ಆಚರಣೆಗಳಲ್ಲಿ ಪರಿಣಿತರನ್ನು ಒಳಗೊಂಡ ಸಂವಾದವು ನಡೆಯಿತು.
ಪಾಲ್ಗೊಂಡವರು ದಿನವಿಡೀ, ಸ್ಥಳೀಯ ಕುಶಲಕರ್ಮಿಗಳನ್ನು ಒಳಗೊಂಡ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲ ಪ್ರದರ್ಶನ ನಡೆಯಿತು, ತುಳುನಾಡು ಪಾಕಪದ್ಧತಿಯೊಂದಿಗೆ ಪಾಕಶಾಲೆಯ ಆನಂದವನ್ನು ಆನಂದಿಸಿದರು ಮತ್ತು ಪ್ರದೇಶದ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಹೆಗ್ಗುರುತುಗಳನ್ನು ಅನ್ವೇಷಿಸುವ ಮಾರ್ಗದರ್ಶಿ ಪರಂಪರೆಯ ನಡಿಗೆಗಳಲ್ಲಿ ಭಾಗವಹಿಸಿದರು.
ಡಾ. ಪ್ರವೀಣ್ ಶೆಟ್ಟಿ, ಸಂಯೋಜಕರು, ಎಂಯು ಕೇಂದ್ರ – ಮಾನವಿಕ ಮತ್ತು ನಿರ್ವಹಣೆ ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಶ್ರೀಮತಿ ಶೃತಿ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಬಂಟ್ವಾಳ : ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ವಿಶ್ವ ಹಿಂದೂ ಪರಿಷದ್, ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಬೃಹತ್ ವಾಹನ ಜಾಥಾ ನಡೆಯಿತು.
ಪುತ್ತೂರು ಜಿಲ್ಲಾ ಸಂಚಾಲಕ ಭರತ್ ಕುಮ್ದೇಲ್, ಬಂಟ್ವಾಳ ಪ್ರಖಂಡ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಚಾಲನೆ ನೀಡಿದವರು.
ಪುತ್ತೂರು ಜಿಲ್ಲಾ ಉಪಾಧ್ಯಕ್ಷ ಗುರುರಾಜ್ ಬಂಟ್ವಾಳ, ಸಂತೋಷ್ ಸರಪಾಡಿ, ಸುರೇಶ್ ಬೆಂಜನಪದವು, ಶಿವಪ್ರಸಾದ್ ತುಂಬೆ ಹಾಗೂ ಭಜರಂಗದಳ ಬಂಟ್ವಾಳ ಪ್ರಖಂಡದ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.
ಬಂಟ್ವಾಳ ಬೈಪಾಸ್ನಿಂದ ಪ್ರಾರಂಭಗೊಂಡು ಬಿ.ಸಿ.ರೋಡ್ ನಾರಾಯಣ ಗುರು ವೃತ್ತವಾಗಿ ಸಾಗಿ ಕೈಕಂಬ, ಬ್ರಹ್ಮರಕೂಟ್ಲು ತುಂಬೆ ಜಂಕ್ಷನ್ನಿಂದ ಕಡೆಗೋಳಿ ತಲುಪಿ ಅಲ್ಲಿಂದ ಪುನಃ ಅದೇ ಮಾರ್ಗವಾಗಿ ಬಿ.ಸಿ.ರೋಡ್ ರಕ್ತೇಶ್ವರಿ ದೇವಾಸ್ಥಾನದಲ್ಲಿ ಸಂಪನ್ನಗೊಂಡಿತು. ಸಾವಿರಾರು ಭಜರಂಗದಳ ಕಾರ್ಯಕರ್ತರು ಈ ವಾಹನ ಜಾಥಾದಲ್ಲಿ ಪಾಲ್ಗೊಂಡು ದೇಶಭಕ್ತಿಯ ಘೋಷಣೆಗಳನ್ನು ಕೂಗಿದರು.
ಬೆಳ್ತಂಗಡಿ : ಮದುವೆಯಾಗದೆ ಅಕಾಲಿಕವಾಗಿ ಮೃತಪಟ್ಟವರ ಪ್ರೇತಾತ್ಮಕ್ಕೆ ನಡೆಯುವ ಕುಲೆ ಮದಿಮೆಯ ಬಗ್ಗೆ ಸಾಕಷ್ಟು ಮಂದಿ ಕೇಳಿರುತ್ತೇವೆ. ಆದರೆ ನೋಡಿದವರು ಕಡಿಮೆ. ಆಟಿ ತಿಂಗಳಲ್ಲಿ ನಡೆಸಲಾಗುವ ಈ ಸಂಪ್ರದಾಯದ ಮದುವೆಯೊಂದು ಬೆಳ್ತಂಗಡಿಯಲ್ಲಿ ಅದ್ದೂರಿಯಾಗಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ ಧರ್ಮದರ್ಶಿ ರಮೇಶ್ ಅವರ ಪೌರೋಹಿತ್ಯದಲ್ಲಿ ಕುಲೆ ಮದಿಮೆ ನಡೆಯಿತು. ನೂರಕ್ಕೂ ಹೆಚ್ಚು ಮಂದಿ ಮದುವೆಯಲ್ಲಿ ಪಾಲ್ಗೊಂಡರು.
35 ವರ್ಷಗಳ ಹಿಂದೆ ಅಕಾಲಿಕವಾಗಿ ಮೃತಪಟ್ಟಿದ್ದ ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳ ಪ್ರೇತಾತ್ಮಕ್ಕೆ ಮದುವೆ ನೆರವೇರಿಸಲಾಯಿತು.
ಬೆಳ್ತಂಗಡಿ ತಾಲೂಕಿನ ಶಾರದಾ ಎಂಬ ವಧು ಮತ್ತು ಬಂಟ್ವಾಳ ತಾಲೂಕಿನ ಕಲ್ಲಡ್ಕದ ಸದಾಶಿವ ಎಂಬ ವರನ ಕುಟುಂಬ ಮತ್ತು ಜಾರಗುಡ್ಡೆಯ ಯಾದವ ಹಾಗೂ ಬಂಟ್ವಾಳ ತಾಳೂಕಿನ ನಯನಾಡ್ನ ಯಶೋಧಾ ಎಂಬ ವಧುವಿನ ಕುಟುಂಬದ ನಡುವೆ ಪ್ರೇತಾತ್ಮ ಮದುವೆ ನಡೆಯಿತು. ಬೆಳ್ಳಿಯ ತಗಡಿನ ಮೂಲಕ ವರ ಹಾಗೂ ವಧುವಿನ ಮೂರ್ತಿ ತಯಾರಿಸಿ ಆ ರೂಪಕ್ಕೆ ಧಾರೆ ಎರೆಯಲಾಯಿತು.
ಕುಲೆ ಮದಿಮೆ ಎಂದರೆ ಇದು ಕಾಟಾಚಾರದ ಮದುವೆಯಲ್ಲ. ಮಾಮೂಲಿ ಮದುವೆ ಹೇಗೆ ನಡೆಯುತ್ತದೋ ಹಾಗೆಯೇ ಕುಲೆ ಮದಿಮೆಯೂ ಅದ್ದೂರಿಯಾಗಿ ನಡೆದಿದೆ. ಗಂಡು ನೋಡುವ ಶಾಸ್ತ್ರ, ನಿಶ್ಚಿತಾರ್ಥ, ವರನ ಮನೆಗೆ ದಿಬ್ಬಣ ಬರುವುದು, ಹೆಣ್ಣಿಗೆ ಸೀರೆ, ರವಿಕೆ, ಕರಿಮಣಿ, ಕಾಲುಂಗುರ, ಬಳೆ, ಗಂಡಿಗೆ ಪಂಚೆ, ಶರ್ಟ್ ಸಿದ್ಧಪಡಿಸಿ ಶಾಸ್ತ್ರಬದ್ಧವಾಗಿಯೇ ಮದುವೆಯಾಗಿದೆ. ಬಳಿಕ ಮದುವೆ ಊಟವನ್ನೂ ಆಯೋಜಿಸಲಾಗಿತ್ತು.
ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ಆನ್ಲೈನ್ ತರಬೇತಿ ಮತ್ತು ಕೌನ್ಸಿಲಿಂಗ್
ಉಡುಪಿ : ಐಐಟಿ ಮದ್ರಾಸ್ ಪ್ರವರ್ತಕ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ 20 ಶಾಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ತರಗತಿಗಳನ್ನ ನಡೆಸಿಕೊಡುವ ಯೋಜನೆ ಹೆಗ್ಗುಂಜೆ ರಾಜೀವ ಶೆಟ್ಟಿ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದೆ.
ಈ ತರಗತಿಗಳು ಆನ್ಲೈನ್ ಲೈವ್ ಮೂಲಕ ನಡೆಯಲಿದ್ದು ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಐಐಟಿಯಂತಹ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಈ ಯೋಜನೆ ಪ್ರಾರಂಭಿಸಿದ್ದೇನೆ ಎಂದು ಉದ್ಯಮಿ ಡಾ. ಎಚ್.ಎಸ್. ಶೆಟ್ಟಿ ಹೇಳಿದರು.
ಅವರು ಇದೆ ಆಗಸ್ಟ್ 15ರಂದು ಉಚ್ಚಿಲ ಮೊಗವೀರ ಭವನದಲ್ಲಿ 20 ವಿದ್ಯಾ ಸಂಸ್ಥೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಸರಕಾರಿ ಹೈಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭವಾಗಲಿರುವ ಐ.ಐ.ಟಿ. ಮದ್ರಾಸ್ ಅವರ ಸಹಯೋಗದೊಂದಿಗೆ ಆನ್ಲೈನ್ ತರಬೇತಿ ಮತ್ತು ಕೌನ್ಸಿಲಿಂಗ್ ಉದ್ಘಾಟನಾ ಕಾರ್ಯಕ್ರಮದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರಸಕ್ತ 2024-25ನೇ ಸಾಲಿನಲ್ಲಿ ಕರಾವಳಿಯ ಹಲವು ಜಿಲ್ಲೆಗಳಲ್ಲಿ ಐ.ಐ.ಟಿ. ಮದ್ರಾಸ್ ಅವರ ಸಹಯೋಗದೊಂದಿಗೆ ಆನ್ಲೈನ್ ತರಬೇತಿ ಮತ್ತು ಕೌನ್ಸಿಲಿಂಗ್ ಆಯೋಜಿಸಲಾಗಿದೆ.
ಉಡುಪಿ ಜಿಲ್ಲೆಯ ವಿವಿಧ ಸರಕಾರಿ ಹೈಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿ, ಇದನ್ನು ಕರಾವಳಿಯ ಎಲ್ಲಾ 150 ಹೈಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ವಿಸ್ತರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಿ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ನಾಗರಾಜ್ ಶೆಟ್ಟಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ ಉಪಸ್ಥಿತರಿದ್ದರು.

ಪಡುಬಿದ್ರಿ : ರಾಜಕೀಯ ಒಲೈಕೆಗಾಗಿ ನಮ್ಮ ರಾಷ್ಟ್ರವನ್ನು ತ್ರಿಖಂಡ ಮಾಡಲಾಗಿದ್ದು, ಅದನ್ನು ಮತ್ತೆ ಅಖಂಡ ಮಾಡಲು ನಮ್ಮ ಹಿಂದೂ ಸಮಾಜ ಒಂದಾಗುವ ಅನಿವರ್ಯತೆ ಇದೆ ಎಂದು ಹಿಂದೂ ಸಂಘಟನಾ ಮುಖಂಡ ದಿನೇಶ್ ಮೆಂಡನ್ ಹೇಳಿದ್ದಾರೆ.
ಅವರು ವಿಶ್ವಹಿಂದೂ ಪರಿಷದ್ ಭಜರಂಗದಳ, ಕಾಪು ಪ್ರಖಂಡ ಪಡುಬಿದ್ರಿ ವಲಯ ಆಯೋಜಿಸಿದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಡೆದ ಪಂಜಿನ ಮೆರವಣಿಗೆ ಬಳಿಕ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕನ್ನಾಂಗಾರು ಬ್ರಹ್ಮ ಬೈದರ್ಕಳ ಗರೋಡಿಯಿಂದ ಆರಂಭಗೊಂಡ ಪಂಜಿನ ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು ಅದರಲ್ಲೂ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಯುವತಿಯರು ಭಾಗವಹಿಸಿದ್ದರು.
ವಿವಿಧ ರೀತಿಯ ಹಿಂದೂಪರ ಘೋಷಣೆಯನ್ನು ಕೂಗುತ್ತಾ ಮೈಲುದ್ಧ ಸಾಲಿನಲ್ಲಿ ಪಂಜಿನ ಮೆರವಣಿಗೆ ಸಾಗಿ ಬಂದಿದ್ದು, ಈ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಡುಬಿದ್ರಿ ಎಸ್ಸೈ ಎಂ.ಎಸ್. ಪ್ರಸನ್ನ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಈ ಸಂದರ್ಭ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಹಿಂದೂ ಮುಖಂಡರಾದ ದೇವಿಪ್ರಸಾದ್ ಶೆಟ್ಟಿ, ಸುಜೀತ್ ಶೆಟ್ಟಿ, ಗಣೇಶ್ ಗುಜರನ್, ಆನಂದ್, ಮಾಜಿ ಪಂ. ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ರೇಷ್ಮಾ ಉದಯ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಿಥುನ್ ಆರ್ ಹೆಗ್ಡೆ, ಉದಯ ಶೆಟ್ಟಿ ಇನ್ನಾ, ಮೋಹನ್ ದಾಸ್ ಫಣಿಯೂರು, ಸಂದೇಶ್ ಶೆಟ್ಟಿ, ಅಜಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಪತ್ರಿಕಾ ಭವನ ಸಮಿತಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮನೆಯೇ ಗ್ರಂಥಾಲಯ ಕಾರ್ಯಕ್ರಮದ ಅಮೃತ ಸಂಭ್ರಮ ‘ಗ್ರಂಥಾಲಯ-75’ ಆ.16ರಂದು ಬೆಳಗ್ಗೆ 11ಗಂಟೆಗೆ ಉಡುಪಿ ಪತ್ರಿಕಾ ಭವನದಲ್ಲಿ ನಡೆಯಲಿದೆ.

ಗ್ರಂಥಾಲಯವನ್ನು ಉಡುಪಿ ಇಂಚರ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ವೈ.ಸುದರ್ಶನ್ ರಾವ್ ಉದ್ಘಾಟಿಸಿದರು. ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪುಸ್ತಕ ಹಸ್ತಾಂತರಿಸಲಿರುವರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಕಾರ್ಯದರ್ಶಿ ಡಾ.ಗಣನಾಥ್ ಎಕ್ಕಾರ್, ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
ತಿರುಪತಿಗೆ ಹೊರಟಿದ್ದ ಯುವಕರ ತಂಡವೊಂದು ಮೃತ ಕೋತಿಯೊಂದರ ಅಂತ್ಯ ಸಂಸ್ಕಾರ ನಡೆಸಿದೆ.
ಸಾಸ್ತಾನದಿಂದ ತಿರುಪತಿಗೆ ನಡೆಸಿಕೊಂಡು ಹೋಗುತ್ತಿದ್ದ ಲಕ್ಷ್ಮೀನಾರಾಯಣ ರಾವ್ ನೇತೃತ್ವದ ಯುವಕರ ಭಜನಾ ತಂಡಕ್ಕೆ ದಾರಿಯಲ್ಲಿ ವಾಹನವೊಂದು ಡಿಕ್ಕಿ ಹೊಡೆದು ಮೃತಪಟ್ಟ ಕೋತಿಯ ಕಳೆಬರಹ ಕಂಡಿದೆ. ಕೂಡಲೇ ಕೋತಿಯ ಮೃತದೇಹವನ್ನ ಅಲ್ಲೇ ಸಮೀಪದಲ್ಲೇ ಮಣ್ಣು ಮಾಡುವ ಮೂಲಕ ಅಂತ್ಯ ಸಂಸ್ಕಾರ ನಡೆಸಿರುವ ಯುವಕರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತ ವಾಗಿದ್ದು ಅಂತ್ಯ ಸಂಸ್ಕಾರದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಜರಂಗದಳ ವತಿಯಿಂದ ಆಗಸ್ಟ್ 11 ರಿಂದ 15ರವರೆಗೆ ಕಾರ್ಕಳ ತಾಲೂಕಿನಾದ್ಯಂತ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಪಂಜಿನ ಮೆರವಣಿಗೆ
ಕಾರ್ಕಳ : ಸ್ವಾತಂತ್ರ್ಯ ಭಾರತದ ಕರಾಳ ಇತಿಹಾಸ ಮತ್ತು ಆಗಸ್ಟ್ 14ರಂದು ನಡೆದ ದುರಂತ ಘಟನೆಗಳನ್ನು ಜನರಿಗೆ ತಿಳಿಸುವ ಮೂಲಕ ಅಖಂಡವಾಗಿದ್ದ ಭಾರತವನ್ನು ಮೂರು ಭಾಗಗಳಾಗಿ ವಿಂಗಡಿಸಿದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ ಮತ್ತೊಮ್ಮೆ ಅಖಂಡ ಭಾರತದ ಸಂಕಲ್ಪ ಮಾಡುವ ಸಲುವಾಗಿ ಬಜರಂಗದಳ ಕಾರ್ಕಳ ಪ್ರಖಂಡ ತಾಲೂಕಿನಾದ್ಯಂತ ವಿವಿಧ ಕಡೆಗಳಲ್ಲಿ ಪಂಜಿನ ಮೆರವಣಿಗೆ ಆಯೋಜನೆ ಮಾಡಿದೆ.
ಆಗಸ್ಟ್ 11ರಂದು ಸಾಣೂರು, ಹೊಸ್ಮಾರು ಆಗಸ್ಟ್ 12 ಕಾರ್ಕಳ ನಗರ ಆಗಸ್ಟ್ 14 ನಿಟ್ಟೆ, ಬೈಲೂರು ಆಗಸ್ಟ್ 15 ಕಲ್ಯಾ ಭಾಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಬಜರಂಗದಳ ಕಾರ್ಕಳ ತಾಲೂಕು ಸಂಯೋಜಕರಾದ ಮನೀಶ್ ನಿಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
