ಮಂಗಳೂರು : ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ತಾಲೂಕು ಸಮಿತಿ, ಮಹಿಳಾ ಘಟಕ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಹಾಗೂ ಎಲ್ಲಾ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಮಾದಕದ್ರವ್ಯ ವ್ಯಸನಮುಕ್ತ ಮಂಗಳೂರು ಜಾಥಾ ನವೆಂಬರ್ 14ರ ಗುರುವಾರ ಸಂಜೆ 3 ಗಂಟೆಗೆ ಎಸ್.ಡಿ.ಎಂ. ಕಾನೂನು ಕಾಲೇಜು ಸಭಾಂಗಣದಲ್ಲಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Social
ಕೋರ್ಟ್ ಆದೇಶ ಉದ್ದೇಶಪೂರ್ವಕ ಉಲ್ಲಂಘನೆ; ಚುನಾವಣಾಧಿಕಾರಿಗೆ ಜೈಲು ಶಿಕ್ಷೆ, ಆಸ್ತಿ ಜಪ್ತಿಯ ಆತಂಕ – ನ್ಯಾಯಾಂಗ ನಿಂದನಾ ಅರ್ಜಿ ದಾಖಲಿಸಿಕೊಂಡ ನ್ಯಾಯಾಲಯ!
ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಈ ಪ್ರತಿಷ್ಠಿತ ಸಂಸ್ಥೆಯ ಚುನಾವಣೆಯ ಜವಾಬ್ದಾರಿ ಹೊತ್ತ ಚುನಾವಣಾಧಿಕಾರಿಯ ನಿರ್ಧಾರ ಈಗ ಕುತೂಹಲದ ಕೇಂದ್ರ ಬಿಂದುವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಪ್ರಕಾಶ್ ನಾಯಕ್ ಅವರಿಗೆ ಮತದಾನದ ಹಕ್ಕು ಮತ್ತು ಸ್ಪರ್ಧಿಸುವ ಹಕ್ಕನ್ನು ನಿರಾಕರಿಸಲಾಗಿತ್ತು. ಈ ಷರಾ ಕಾನೂನುಬಾಹಿರವಾಗಿದ್ದು, ಈ ಷರಾವನ್ನು ತೆಗೆದುಹಾಕುವಂತೆ ಕೋರಿ ಪ್ರಕಾಶ್ ನಾಯಕ್, ಸಂಘದ ಜವಾಬ್ದಾರಿಯುತ ಪ್ರತಿನಿಧಿಗೆ ಮತ್ತು ಚುನಾವಣಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದರು.
ಆದರೆ, ಅವರಿಂದ ಯಾವುದೇ ಸ್ಪಂದನೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಮಂಗಳೂರಿನ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಸಿವಿಲ್ ದಾವೆಯನ್ನು ವಿಚಾರಣೆಗೆ ಎತ್ತಿಕೊಂಡ ಮಾನ್ಯ ನ್ಯಾಯಾಲಯ, ವಾದಿಯವರ ವಾದವನ್ನು ಆಲಿಸಿದ್ದಲ್ಲದೆ ಕೇವಿಯಟ್ ಅರ್ಜಿ ಸಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ವಾದವನ್ನು ಆಲಿಸಿತು.
ವಾದಿಯು ಸಲ್ಲಿಸಿರುವ ದಾವೆ ಮೇಲ್ನೋಟಕ್ಕೆ ಸಮ್ಮತವಾಗಿದ್ದು, ಅನುಕೂಲತೆಯ ಒಲವು ವಾದಿಯ ಪರ ಇದೆ. ಒಂದು ವೇಳೆ ಮಧ್ಯಂತರ ಆಜ್ಞೆ ಹೊರಡಿಸದೇ ಇದ್ದರೆ ವಾದಿಗೆ ತುಂಬಲಾರದ ನಷ್ಟ ಉಂಟಾಗುತ್ತದೆ. ವಾದಿಯವರ ಮತದಾನದ ಸಂವಿಧಾನಾತ್ಮಕ ಹಕ್ಕನ್ನು ನಿರಾಕರಿಸಿದಂತಾಗುತ್ತದೆ ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿತು.
ಮಾನ್ಯ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ರಾಮಲಿಂಗಪ್ಪ ಅವರು ದಿನಾಂಕ 16.11.2024ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನ ಮಾಡಲು ವಾದಿ ಪ್ರಕಾಶ್ ನಾಯಕ್ ಅವರಿಗೆ ಅವಕಾಶ ನೀಡುವಂತೆ 1ನೇ ಪ್ರತಿವಾದಿ ದ.ಕ. ಜಿಲ್ಲಾ ಸಂಘ ಹಾಗೂ 2ನೇ ಪ್ರತಿವಾದಿ ದ.ಕ. ಜಿಲ್ಲಾ ಚುನಾವಣಾಧಿಕಾರಿಯವರಿಗೆ ಆಜ್ಞಾಪಕ ನಿರ್ಬಂಧಕಾಜ್ಞೆಯ ಆದೇಶ ಹೊರಡಿಸಿದರು.
ಈ ಆದೇಶವನ್ನು ಸ್ವತಃ ವಾದಿಯವರು ನೀಡಿದಾಗ ಸ್ವೀಕರಿಸಲು ನಿರಾಕರಿಸಿದ ಚುನಾವಣಾಧಿಕಾರಿ, ಬಳಿಕ ಕೋರ್ಟ್ನ ಅಧಿಕೃತ ಪ್ರತಿನಿಧಿಯಿಂದ ಆದೇಶವನ್ನು ಸ್ವೀಕರಿಸಿದರು. ಆದರೆ, ಈ ಆದೇಶವನ್ನು ಉದ್ದೇಶಪೂರ್ವಕವಾಗಿ ಜಾರಿಗೊಳಿಸದೆ ಉಡಾಫೆಯಿಂದ ವರ್ತಿಸಿದ್ದಲ್ಲದೆ, ಪ್ರಕಾಶ್ ನಾಯಕ್ ಅವರು ಸಲ್ಲಿಸಿದ್ದ ನಾಮಪತ್ರವನ್ನು ಕ್ರಮಬದ್ಧ ಎಂದು ಷರಾ ಹಾಕಿದರೂ ತಿರಸ್ಕರಿಸಿದರು.
ಇದರಿಂದ ಬಾಧಿತರಾದ ಶ್ರೀ ಪ್ರಕಾಶ್ ನಾಯಕ್ ಅವರು ಮಂಗಳೂರು ಪೊಲೀಸ್ ಠಾಣೆಗೆ ದೂರು ನೀಡಿದರು. ಹಾಗೂ ಕೋರ್ಟ್ ಆದೇಶವನ್ನು ಉದ್ದೇಶಪೂರ್ವಕಾಗಿ ಉಲ್ಲಂಘನೆ ಮಾಡಿದ ಚುನಾವಣಾಧಿಕಾರಿ ಶಿವಾನಂದ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಯಮದ ಪ್ರಕಾರ, ಸ್ವಯಂ ನಿವೃತ್ತಿ, ವಯೋ ನಿವೃತ್ತಿ, ರಾಜೀನಾಮೆ, ಕಡ್ಡಾಯ ನಿವೃತ್ತಿ, ಮರಣ ಅಥವಾ ಇನ್ನಿತರ ಕಾರಣಗಳಿಂದ ಸರ್ಕಾರಿ ಸೇವೆ ಅಂತ್ಯಗೊಂಡಾಗ ಅಥವಾ ವಾರ್ಷಿಕ ಸದಸ್ಯತ್ವ ಶುಲ್ಕ ಸಕಾಲದಲ್ಲಿ ಸಂದಾಯ ಮಾಡದೇ ಇದ್ದಲ್ಲಿ ಅಂತಹ ಸದಸ್ಯನ ಸದಸ್ಯತ್ವ ತಾನಾಗಿಯೇ ಅಂತ್ಯಗೊಳ್ಳತಕ್ಕದ್ದು.
ಪರಂತು, ಸಂಘದ ಸದಸ್ಯನು ಸಂಘ ವಿರೋಧಿ ಚಟುವಟಿಕೆ ಹಾಗೂ ಇನ್ನಿತರ ಕಾರಣಗಳಿಂದ ರಾಜ್ಯ ಸಂಘವು ಕೈಗೊಳ್ಳಬಹುದಾದ ಶಿಸ್ತು ಕ್ರಮದ ಪರಿಣಾಮದಿಂದ ಸಹ ಸಂಘದ ಸದಸ್ಯತ್ವ ಅಂತ್ಯಗೊಳ್ಳತಕ್ಕದ್ದು ಎಂಬ ಉಲ್ಲೇಖ ಇರುತ್ತದೆ.
ಸದರಿ ನಿಯಮಗಳಿಗೆ ಸಂಬಂಧಪಟ್ಟ ಕಾರಣಗಳನ್ನು ಈಗಾಗಲೇ ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ಚರ್ಚಿಸಿ ಅರ್ಜಿದಾರರ ಸದಸ್ಯತ್ವವನ್ನು ಅಮಾನತುಗೊಳಿಸಿರುವ ಆದೇಶ ನಿರಂಕುಶವಾದ ಆದೇಶವಾಗಿರುತ್ತದೆ ಎಂದು ನ್ಯಾಯಾಲಯ ಈಗಾಗಲೇ ಅವಲೋಕವನ್ನು ಮಾಡಿದೆ.
ಪುನಃ ಅದೇ ನಿಯಮದಡಿ ಅರ್ಜಿದಾರರ ನಾಮಪತ್ರವನ್ನು ತಿರಸ್ಕರಿಸಲು ಆಗದು. ಆದರೆ, ಚುನಾವಣಾಧಿಕಾರಿಯು ಸಾರ್ವಜನಿಕ ಅಧಿಕಾರಿಯಾಗಿದ್ದು, ಒಂದು ಜವಾಬ್ದಾರಿಯುತ ವ್ಯಕ್ತಿಯಾಗಿದ್ದಾರೆ. ಅವರು ನ್ಯಾಯಾಲಯದ ಆದೇಶವನ್ನು ಪಾಲಿಸದೇ ಇದ್ದರೆ, ಇನ್ನು ಸಾರ್ವಜನಿಕ ಸೇವೆಯನ್ನು ಹೇಗೆ ಮಾಡುತ್ತಾರೆ ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿದೆ.
ನ್ಯಾಯಾಲಯದ ನಿರ್ದೇಶನವನ್ನು ಉದ್ದೇಶಪೂರ್ವಕವಾಗಿ ಗಾಳಿಗೆ ತೂರಿ ಅರ್ಜಿದಾರರ ನಾಮಪತ್ರವನ್ನು ತಿರಸ್ಕರಿಸಿರುವುದು ಸ್ಪಷ್ಟವಾಗಿ ವ್ಯವಸ್ಥೆಯ ವಿರುದ್ಧವಾದ ನಡವಳಿಕೆಯಾಗಿದೆ ಎಂದು ಚುನಾವಣಾಧಿಕಾರಿಯ ಕ್ರಮಕ್ಕೆ ನ್ಯಾಯಾಲಯ ತಪರಾಕಿ ಹಾಕಿದೆ.
ಅರ್ಜಿದಾರರ ನಾಮಪತ್ರವನ್ನು ಪರಿಗಣಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಆದೇಶ ಹೊರಡಿಸಿರುವ ನ್ಯಾಯಾಲಯ, ಈ ಆದೇಶಕ್ಕೆ ತಪ್ಪಿದ್ದಲ್ಲಿ ಚುನಾವಣಾಧಿಕಾರಿಯು ಗಂಭೀರವಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಕೊಟ್ಟಾರಿ ಪ್ರೀಮಿಯರ್ ಲೀಗ್ 2024 – ಚಾಂಪಿಯನ್ ಪಟ್ಟಕ್ಕೇರಿದ ಕೊಟ್ಟಾರಿ ಮೈಟಿ ಬುಲ್ಸ್ ತಂಡ
ಮಂಗಳೂರು : ಕೊಟ್ಟಾರಿ ಯುವ ವೇದಿಕೆಯ ಆಶ್ರಯದಲ್ಲಿ ಕೊಟ್ಟಾರಿ ಪ್ರೀಮಿಯರ್ ಲೀಗ್ 2024 ಸೀಸನ್ 5ರ ಕ್ರಿಕೆಟ್ ಪಂದ್ಯಾಟ ಎರಡು ದಿನಗಳ ಕಾಲ ನಗರದ ಉರ್ವ ಮೈದಾನದಲ್ಲಿ ನಡೆಯಿತು.
ಈ ಪಂದ್ಯಾಟದಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸಿದ್ದವು. ಲೀಗ್ ಹಂತದಲ್ಲಿ ನಡೆದ ಪ್ರತೀ ತಂಡಕ್ಕೆ ಆರು ಪಂದ್ಯಾಟವಿತ್ತು. ಕ್ವಾಟರ್ ಫೈನಲ್, ಸೆಮಿ ಫೈನಲ್, ಫೈನಲ್ ಹಂತದಲ್ಲಿ ಪಂದ್ಯಾಟ ನಡೆಯಿತು. ಸೆಮಿ ಫೈನಲ್ನಲ್ಲಿ ನಾಲ್ಕು ತಂಡಗಳು ಪ್ರವೇಶ ಪಡೆದು ಪಂದ್ಯಾವಳಿಯ ಫೈನಲ್ನಲ್ಲಿ ಕೊಟ್ಟಾರಿ ತತ್ವಮಸಿ ಹಾಗೂ ಕೊಟ್ಟಾರಿ ಮೈಟಿ ಬುಲ್ಸ್ ತಂಡಗಳು ಮುಖಾಮುಖಿಯಾಯಿತು.
ಟಾಸ್ ಜಯಿಸಿದ ಮೈಟಿ ಬುಲ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೈಟಿ ಬುಲ್ಸ್ ವಿರುದ್ಧ ತತ್ವಮಸಿ ತಂಡ ನಾಲ್ಕು ಓವರ್ಗಳಲ್ಲಿ 27ರನ್ ಗಳ ವಿಜಯದ ಗುರಿ ನೀಡಿತ್ತು. ಸರಳ ಗುರಿ ಬೆನ್ನಟ್ಟಿದ ಮೈಟಿ ಬುಲ್ಸ್ ತಂಡ ಕೊನೆಯ ಒವರ್ನಲ್ಲಿ ಒಂದು ಬಾಲ್ ಇರುವಂತೆಯೇ ರೋಚಕ ಗೆಲುವು ಸಾಧಿಸಿತ್ತು. ಕೊನೆಯ ಓವರ್ನಲ್ಲಿ ಬೌಂಡರಿ ಬಾರಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕಿಶೋರ್ ಕೊಟ್ಟಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯಾಟದುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸುಕೇಶ್ ಕೊಟ್ಟಾರಿಯವರಿಗೆ ಪಂದ್ಯಕೂಟದ ಶ್ರೇಷ್ಠ ಬ್ಯಾಟ್ಸ್ಬ್ಯಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿಶಾಂತ್ ಬೆಸ್ಟ್ ಬೌಲರ್, ನಿಕಿತ್ ಕಣ್ಣೂರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಹೊನಲು ಬೆಳಕಿನಲ್ಲಿ ರಣರೋಚಕವಾಗಿ ನಡೆದ ಫೈನಲ್ ಪಂದ್ಯಾಟದಲ್ಲಿ ಮೈಟಿ ಬುಲ್ಸ್ ತಂಡ, ಕೊಟ್ಟಾರಿ ಪ್ರೀಮಿಯರ್ ಲೀಗ್ 2024ರ ಚಾಂಪಿಯನ್ ಆಗಿ ಹೊರಹೊಮ್ಮಿತು.
“ಕಿಶೋರ್ ಶೆಟ್ಟಿ ಅವರದ್ದು ಕಲಾವಿದರಿಗೆ ಸ್ಫೂರ್ತಿ ತುಂಬುವ ವ್ಯಕ್ತಿತ್ವ” – ಡಾ.ಸಂಜೀವ ದಂಡೆಕೇರಿ; “ರಂಗಚಾವಡಿ” ವರ್ಷದ ಹಬ್ಬ, ಹಿರಿಯ ರಂಗಕರ್ಮಿ ಲಯನ್ ಕಿಶೋರ್ ಡಿ. ಶೆಟ್ಟಿ ಅವರಿಗೆ ರಂಗಚಾವಡಿ ಪ್ರಶಸ್ತಿ ಪ್ರದಾನ
ಸುರತ್ಕಲ್ : “ರಂಗಚಾವಡಿ” ಮಂಗಳೂರು ಇದರ ಆಶ್ರಯದಲ್ಲಿ ಸುಭಾಷಿತನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ಸುರತ್ಕಲ್ ಇದರ ಸಹಯೋಗದಲ್ಲಿ ರಂಗಚಾವಡಿ ವರ್ಷದ ಹಬ್ಬ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು.
ಚಲನಚಿತ್ರ ನಿರ್ಮಾಪಕ ಡಾ. ಸಂಜೀವ ದಂಡಕೇರಿ ದೀಪ ಪ್ರಜ್ವಲನೆಗೈದರು. ಬಳಿಕ ಮಾತಾಡಿದ ಅವರು, ರಂಗಚಾವಡಿ ಪ್ರಶಸ್ತಿ ಸ್ವೀಕರಿಸುತ್ತಿರುವ ಹಿರಿಯ ರಂಗಕರ್ಮಿ ಕಿಶೋರ್ ಡಿ. ಶೆಟ್ಟಿ ಅವರದು ಸಾವಿರಾರು ಕಲಾವಿದರಿಗೆ ಸ್ಫೂರ್ತಿ ತುಂಬುವ ವ್ಯಕ್ತಿತ್ವ. ಅವರನ್ನು ಪಡೆದಿರುವುದು ನಮ್ಮ ತುಳುನಾಡಿನ ಸಮಸ್ತ ಕಲಾವಿದರ ಪುಣ್ಯ. ಬಡಹೆಣ್ಣುಮಕ್ಕಳ ಮದುವೆ, ಬಡಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಕಿಶೋರ್ ಶೆಟ್ಟಿ ಅವರು ಸದಾ ನೆರವು ನೀಡಿದವರು. ಅವರಿಗೆ ಅರ್ಹವಾಗಿಯೇ ಈ ಪ್ರಶಸ್ತಿ ಸಂದಿದೆ. ಸಂಘಟನೆಯ ಈ ಕ್ರಮ ಶ್ಲಾಘನೀಯವಾದುದು“ ಎಂದರು.
ವೇದಿಕೆಯಲ್ಲಿ ಹಿರಿಯ ರಂಗಕರ್ಮಿ ಲಯನ್ ಕಿಶೋರ್ ಡಿ.ಶೆಟ್ಟಿ ಅವರಿಗೆ ರಂಗಚಾವಡಿ ಪ್ರಶಸ್ತಿ-2024 ಪ್ರದಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು, “ನನ್ನ ತಂಡದ ಕಲಾವಿದರಿಂದ ನಾನಿದ್ದೇನೆ, ಅವರಿಲ್ಲದೆ ನಾನೇನೂ ಇಲ್ಲ. ನಾನು ಮಾಡಿರುವ ದಾನ ಧರ್ಮ ಏನೂ ಇಲ್ಲ. ನೊಂದವರಿಗೆ ನೆರವಾಗುವುದು ದೇವರ ಸೇವೆ. ಇದು ನನಗೆ ಅಪ್ಪ ಅಮ್ಮ ಕಲಿಸಿದ್ದು. ಈ ಪ್ರಶಸ್ತಿಯನ್ನು ಬಹಳ ಖುಷಿಯಿಂದ ಸ್ವೀಕರಿಸುತ್ತಿದ್ದೇನೆ. ಇಂತಹ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ“ ಎಂದರು.
ಬಳಿಕ ಮಾತು ಮುಂದುವರಿಸಿದ ಉದ್ಯಮಿ, ಶ್ರೀ ಡೆವಲಪರ್ಸ್ ಸಂಸ್ಥೆಯ ಮಾಲಕ ಗಿರೀಶ್ ಎಂ ಶೆಟ್ಟಿ ಕಟೀಲು ಅವರು, ”ಬಾಳ ಜಗನ್ನಾಥ ಶೆಟ್ಟಿ ಅವರು ರಂಗಭೂಮಿ ಕಲಾವಿದರನ್ನು ಗುರುತಿಸಲು ಹುಟ್ಟುಹಾಕಿದ ರಂಗಚಾವಡಿ ಸಂಘಟನೆ ಇಂದು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಕಲಾವಿದರನ್ನು ಗುರುತಿಸಿ ಬೆನ್ನು ತಟ್ಟುತ್ತಿರುವ ಇಂತಹ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಉದ್ಯಮಿ, ಸಮಾಜಸೇವಕ ಅನಿಲ್ ಶೆಟ್ಟಿ ತೇವು-ಸೂರಿಂಜೆ, ಬಂಟರ ಸಂಘ ಸುರತ್ಕಲ್ ಇದರ ನಿರ್ದೇಶಕ ಜಗದೀಶ್ ಶೆಟ್ಟಿ ಪೆರ್ಮುದೆ, ಜಯಕಿರಣ ಪತ್ರಿಕೆ ಮಾಲಕ ಪ್ರಕಾಶ್ ಪಾಂಡೇಶ್ವರ್, ಸುಭಾಷಿತನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ಇದರ ಅಧ್ಯಕ್ಷ ರಮೇಶ್ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ ಎಸ್. ಪೂಂಜ, ಉದ್ಯಮಿ ಜಯರಾಮ ಶೇಖ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ರಂಗಚಾವಡಿ ಸಂಸ್ಥೆಯ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿ, ಚಿತ್ರಾ ಜೆ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಗಿರೀಶ್ ಸಾಗರ ದೇವರನ್ನು ಸ್ತುತಿಸಿದರು. ಪತ್ರಕರ್ತ ಶರತ್ ಶೆಟ್ಟಿ ಕಿನ್ನಿಗೋಳಿ ಅಭಿನಂದನಾ ಭಾಷಣಗೈದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಗಾನಲಹರಿ, ಲಯನ್ ಕಿಶೋರ್ ಶೆಟ್ಟಿಯವರ ಸಾರಥ್ಯದ ಶ್ರೀ ಲಲಿತೆ ಕಲಾವಿದರಿಂದ ನವನೀತ ಶೆಟ್ಟಿ ರಚಿಸಿರುವ “ಶನಿ ಮಹಾತ್ಮೆ” ತುಳು ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.
ಬಂಟ್ವಾಳ : ಸುರ್ಯ ಗುತ್ತು ಮನೆತನದ ಹಿರಿಯರಾದ ಜೈನ ಸಾಹಿತಿ ಬಂಟ್ವಾಳ ತಾಲೂಕಿನ ಇರುವತ್ತೂರು ಬೀಡಿನ ಶ್ರೀಮತಿ ವಿಜಯ ಜಿ. ಜೈನ್ ಅವರು ಇಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರು ಮಕ್ಕಳಾದ ಹಿರಿಯ ಪತ್ರಕರ್ತ ಐ.ಬಿ. ಸಂದೀಪ್ ಕುಮಾರ್ ಇರ್ವತ್ತೂರು ಮಾಗಣೆ ಗುರಿಕಾರ ಐ.ಬಿ. ಸಂಜೀತ್ ಕುಮಾರ್ ಮತ್ತು ಮಿಜಾರು ಅನಂತಮ್ ಮನೆಯ ಶಾಲಿನಿ ನವೀನ್ ಕುಮಾರ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಅವರು ಜೈನ ಭಕ್ತಿ ಸುಮನಾಂಜಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಡೆ ಅವರ ಯಶೋಗಾಥೆ ಗೋಮಟೇಶ ಚರಿತೆ ಸಾಂಗತ್ಯ, ತುಳು ಭಾಷಾಂತರಿತ ಬೃಹತ್ ಸ್ವಯಂಭು ಸ್ತೋತ್ರ, ಜೈನ ಧರ್ಮದ ಧರ್ಮ ಗ್ರಂಥ ಮೋಕ್ಷ ಶಾಸ್ತ್ರ ಅವರ ಪ್ರಕಟಿತ ಸಾಹಿತ್ಯಗಳು. ಜಿನ ಸಹಸ್ರ ನಾಮ, ಪದ್ಮ ಪುರಾಣ ಅವರ ಅಪ್ರಕಟಿತ ಸಾಹಿತ್ಯಗಳು. ಇದರ ಜೊತೆಗೆ ವಿವಿಧ ಸಂಘ ಸಂಸ್ಥೆಗಳಲ್ಲೂ ಸಕ್ರಿಯರಾಗಿದ್ದ ಅವರು ಕೆಲ ಕಾಲ ಶಿಕ್ಷಕಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
ರಘುಪತಿ ಭಟ್ ಅವರೇ ಕರಂಬಳ್ಳಿ ದೇವಸ್ಥಾನ ಶುದ್ಧಿಕರಣ ಮಾಡಿಸಿ ವೆಂಕಟರಮಣನ ಕ್ಷಮೆಗೆ ಪಾತ್ರರಾಗಿ – ಶ್ರೀರಾಮಸೇನೆ
ಉಡುಪಿ : ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಹತಾಶೆಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ನಡೆದುಕೊಳ್ಳುತ್ತಿರುವ ಮಾಜಿ ಶಾಸಕರು ಕೆಲ ಹಿಂದೂ ವಿರೋಧಿ ಶಕ್ತಿಗಳ ಆಟಕ್ಕೆ ಗೊಂಬೆಯಂತೆ ಕುಣಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಖಂಡ ಹಿಂದೂರಾಷ್ಟ್ರದ ಕಲ್ಪನೆಗೆ ಮಗ್ಗಲ ಮುಳ್ಳಾಗಿರುವ ಗೋ ಭಕ್ಷಕರನ್ನು ದೇವಸ್ಥಾನದ ಪ್ರಾಂಗಣದೊಳಕ್ಕೆ ಕರೆಸಿ ದೇವಸ್ಥಾನದ ಪಾವಿತ್ರ್ಯ ತೆಯನ್ನು ಅಶುದ್ದಿ ಗೊಳಿಸಿರುವಿರಿ. ಹಿಂದೂ ಸಮಾಜದ ಬೆಂಬಲದಿಂದಲೇ ಮೂರು ಬಾರಿ ವಿಧಾನಸಭೆ ಪ್ರವೇಶಿಸಿದ ತಾವು ಅಧಿಕಾರದಲಿದ್ದಾಗ ಹಿಂದೂ ಫೈರ್ ಬ್ರಾಂಡ್ ತರ ನಡೆದುಕೊಳ್ಳುತ್ತಿದ್ದ ತಾವು ಇತ್ತೀಚಿನ ದಿನಗಳ ನಿಮ್ಮ ಕಾರ್ಯವೈಖರಿ ಅನುಮಾನ ಹುಟ್ಟಿಸುವಂತಿದೆ. ಇನ್ನಾದರೂ ಬುದ್ಧಿಕಲಿತು ವೆಂಕಟರಮಣನ ಶಾಪಕ್ಕೆ ತುತ್ತಾಗದೆ ದೇವಸ್ಥಾನ ಶುದ್ಧೀಕರಿಸಿ ಹಿಂದೂ ಸಮಾಜದ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಿ ಎಂದು ಶ್ರೀರಾಮಸೇನೆ ಉಡುಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಪೂಜಾರಿ ಆಗ್ರಹಿಸಿದ್ದಾರೆ.
ಹಿರಿಯಡಕ : ರಾಷ್ಟ್ರಪ್ರಶಸ್ತಿ ವಿಜೇತ, ಹಿರಿಯಡಕ ಕುದಿ ಗ್ರಾಮದ ಶ್ರೀ ವಿಷ್ಣುಮೂರ್ತಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕುದಿ ವಸಂತ ಶೆಟ್ಟಿ ಅವರು ಸೋಮವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ತನ್ನ ಊರಿನ ಪ್ರೌಢಶಾಲೆಯಲ್ಲಿ 1980ರಿಂದ ಸ್ಥಾಪಕ ಮುಖ್ಯ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕುದಿ ವಸಂತ ಶೆಟ್ಟಿಯವರು ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ 4 ವರ್ಷ, ಅಧ್ಯಕ್ಷರಾಗಿ 5 ವರ್ಷ ಸೇವೆ ಸಲ್ಲಿಸಿದ್ದಾರೆ.
ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿದ್ದ ವಸಂತ ಶೆಟ್ಟಿಯವರು ಊರಿನ ದೇವಸ್ಥಾನ, ದೈವಸ್ಥಾನಗಳ ಸಮಿತಿಯಲ್ಲಿ ಸೇವೆ ಮಾಡಿದ್ದಾರೆ. ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಎಂ.ಆರ್.ಪಿ.ಎಲ್ ಸಂಸ್ಥೆಯಿಂದ 1500 ಫಲಾನುಭವಿ ಕುಟುಂಬಗಳಿಗೆ 20 ಲಕ್ಷ ಬೆಲೆಯ ಸಿರಿಧಾನ್ಯ ವಿತರಣೆ
ಸುರತ್ಕಲ್ : ಎಂ.ಆರ್.ಪಿ.ಎಲ್ ಸಂಸ್ಥೆ ತಮ್ಮ ಸಿ.ಎಸ್.ಆರ್. ಅನುದಾನದ ಮೂಲಕ ನಿರಂತರ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು ಮಾದರಿ ಸಂಸ್ಥೆಯಾಗಿ ಮೂಡಿ ಬಂದಿದೆ ಎಂದು ಎಂ.ಆರ್.ಪಿ.ಎಲ್ ಸಿ.ಎಸ್.ಆರ್. ವಿಭಾಗದ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಹೇಳಿದರು.
ಅವರು ತಮ್ಮ ಸಂಸ್ಥೆ ವತಿಯಿಂದ ಎಂಡೋಸಲ್ಪಾನ್, ಎಚ್.ಐ.ವಿ, ರಕ್ತಬಲಹೀನತೆ, ಕ್ಷಯದಿಂದ ಬಳಲುವವರಿಗೆ ವೃದ್ದಾಶ್ರಮ ಮತ್ತಿತರ ಕಡೆಗಳಿಗೆ ಸುಮಾರು 20 ಲಕ್ಷ ರೂಪಾಯಿ ಬೆಲೆಬಾಳುವ ಪೌಷ್ಠಿಕಾಂಶಯುಕ್ತ ಸಿರಿಧಾನ್ಯಗಳನ್ನು ವಿತರಿಸಿ ಮಾತನಾಡಿ ಎಂ.ಆರ್.ಪಿ.ಎಲ್ ಸಂಸ್ಥೆ ಈ ಹಿಂದೆಯೂ ಎಂಡೋಸಲ್ಪಾನ್ ಪೀಡಿತರಾಗಿದ್ದು ಮಲಗಿದಲ್ಲಿಯೇ ಇದ್ದ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳನ್ನು ನೀಡಿದ್ದು, ವೃದ್ದಾಶ್ರಮ ಮತ್ತು ಅಸ್ಪತ್ರೆಗಳಿಗೆ ಅಂಬುಲೆನ್ಸ್ ವಾಹನ ನೀಡಿ ಸಹಕಾರ ನೀಡಿದೆ. ಇದೀಗ ಅನಾರೋಗ್ಯದಿಂದ ಬಲಳುವ 1500 ಫಲಾನುಭವಿಗಳಿಗೆ ಸಿರಿಧಾನ್ಯ ನೀಡಿ ಸಹಕಾರ ನೀಡಲಾಗಿದೆ, ಫಲಾನುಭವಿಗಳು ಇದರಿಂದ ತಮ್ಮ ಆರೋಗ್ಯವನ್ನು ವೃದ್ದಿಸಬಹುದಾಗಿದೆ, ಒಟ್ಟು 20 ಲಕ್ಷ ರೂಪಾಯಿ ಬೆಲೆಬಾಳುವ 1800 ಕಿಲೋ ಸಿರಿಧಾನ್ಯ ವಿತರಿಸಲಾಗಿದ್ದು, ಹೆಚ್ಚಿನ ಕಡೆಗಳಿಗೆ ತೆರಳಿ ನೇರವಾಗಿ ಫಲಾನಿಭವಿಗಳಿಗೆ ನೀಡಲಾಗಿದೆ ಎಂದರು.
ಈ ಸಂದರ್ಭ ಎಂ.ಆರ್.ಪಿ.ಎಲ್ ಅಧಿಕಾರಿ ಸ್ಟೀವನ್ ಪಿಂಟೋ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪಣಂಬೂರು : ಮಂಗಳೂರು ದ್ವಾರಕ ನಗರ ಕೊಟ್ಟಾರ ನಿವಾಸಿಗಳಾದ ಪುಷ್ಪರಾಜ್ ಎಸ್. ಕುಂದರ್, ವೈಶಾಲಿ ಎಲ್. ಬೆಂಗ್ರೆ ಅವರ ಪುತ್ರಿ, ಲಿಮ್ಕಾ ಬುಕ್ ದಾಖಲೆಯ ಪೂರ್ವಿ (7) ಅನಾರೋಗ್ಯದಿಂದ ಮಂಗಳೂರಿನಲ್ಲಿ ನಿಧನ ಹೊಂದಿದಳು.
2019ರಲ್ಲಿ 1 ನಿಮಿಷದಲ್ಲಿ ದಾಖಲೆಯ ರೈಮ್ಸ್ ಆಟವಾಡಿ ಇಂಡಿಯನ್ ಬುಕ್ ಆಫ್ ರೆಕಾಡ್ಸ್ನಲ್ಲಿ ಹೆಸರು ಮಾಡಿದ್ದಳು. ಸಣ್ಣ ಪ್ರಾಯದಲ್ಲೇ ಚುರುಕಿನಿಂದ ಕೂಡಿದ್ದ ಪೂರ್ವಿ ಫುಟ್ಬಾಲ್, ಭರತನಾಟ್ಯದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿ ಜನರ ಪ್ರೀತಿಗೆ ಪಾತ್ರವಾಗಿದ್ದಳು. ವಿವಿಧ ಸಂಘ ಸಂಸ್ಥೆಯಿಂದ ಸಮ್ಮಾನ ಪಡೆದುಕೊಂಡಿದ್ದಳು.
ಗ್ರೀನ್ವುಡ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಲಿಯುತ್ತಿದ್ದ ಪೂರ್ವಿ ಅನಾರೋಗ್ಯಕ್ಕೀಡಾದಾಗ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಅವಳ ನಿಧನಕ್ಕೆ ಬೆಂಗ್ರೆ ವಿದ್ಯಾರ್ಥಿ ಸಂಘ, ಸ್ಥಳೀಯ ಸಂಘ-ಸಂಸ್ಥೆಗಳು ಶೋಕ ವ್ಯಕ್ತಪಡಿಸಿವೆ.
ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ವಿಜಯದಾಸರ ಆರಾಧನೆ ಉತ್ಸವದಲ್ಲಿ ಮೇಘಾಲಯದ ರಾಜ್ಯಪಾಲರಾದ ಎಚ್ ಸಿ ವಿಜಯಶಂಕರ್ ಪಾಲ್ಗೊಂಡರು.
ಶ್ರೀ ಕೃಷ್ಣ ಮುಖ್ಯ ಪ್ರಾಣರ ದರ್ಶನಗೈದ ರಾಜ್ಯಪಾಲರು ಗೀತಾಮಂದಿರದಲ್ಲಿ ಪರ್ಯಾಯ ಶ್ರೀಪಾದರ ಅನುಗ್ರಹ ಪ್ರಸಾದವನ್ನು ಪಡೆದರು. ಶ್ರೀಪಾದರ ಜಾಗತಿಕ ಮಟ್ಟದ ಧಾರ್ಮಿಕ ಆಂದೋಲನ ಕೋಟಿಗೀತಾ ಲೇಖನ ಯಜ್ಞದ ದೀಕ್ಷೆಯನ್ನೂ ಪಡೆದರು.
ಕರ್ನಾಟಕದ ಹರಿದಾಸರ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿರುವ ರಾಜ್ಯಪಾಲರು ಉಡುಪಿಯ ಪ್ರಸಿದ್ಧ ಕನಕನಕಿಂಡಿಯ ಮೂಲಕ ಶ್ರೀಕೃಷ್ಣ ದರ್ಶನವನ್ನು ಪಡೆದು ಭಕ್ತ ಕನಕದಾಸರ ವಿಗ್ರಹಕ್ಕೆ ನಮಿಸಿದರು.
ಶ್ರೀವಿಜಯದಾಸರ ಆರಾಧನೆ ಪ್ರಯುಕ್ತ ನಡೆಯುತ್ತಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲೂ ಪಾಲ್ಗೊಂಡರು. ಉಡುಪಿಯ ದೈವಿಕ ಸ್ಪಂದನದಿಂದ ವಿಶೇಷ ಸಂತೋಷಗೊಂಡು ಉಡುಪಿಯ ಶ್ರೀಕೃಷ್ಣನ ಮಹತ್ವವನ್ನು ಶ್ರೀಪಾದರ ಅನುಗ್ರಹಕ್ಕೆ ಪಾತ್ರರಾದರು.