ಉಡುಪಿ : ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾ| ಎಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣ ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಸೇರಿಸಲು ಕೋರಿ ಮಾಡಿದ ಹಿನ್ನೆಲೆಯಲ್ಲಿ ಸರಕಾರದ ಆದೇಶದಿಂದ ಮೇ 5ರಿಂದ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರು ಹಂತದಲ್ಲಿ ಸಮೀಕ್ಷೆ ಕಾರ್ಯ ನಡೆಯಲಿದೆ. ಪರಿಶಿಷ್ಟ ಜಾತಿಯವರ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುವುದು. ಮೇ 5 ರಿಂದ 17ರವರೆಗೆ ಮನೆ ಮನೆ ಸಮೀಕ್ಷೆ, ಮೇ 19ರಿಂದ 21ರ ವರೆಗೆ ಅಲ್ಲಲ್ಲಿ ಕ್ಯಾಂಪ್ ಮಾಡಲಿದ್ದೇವೆ. ಮುಂದಿನ ಹಂತದಲ್ಲಿ ಆನ್ಲೈನ್ ಮೂಲಕ ನಮೂದು ಕಾರ್ಯ ನಡೆಯಲಿದೆ ಎಂದರು.
ಜಿಲ್ಲೆಯ ಮಾಸ್ಟರ್ ಟ್ರೈನರ್ಗಳಿಂದ 35 ತಾಲೂಕು ಮಟ್ಟದ ಟ್ರೈನರ್ಗಳಿಗೆ ಸಮೀಕ್ಷೆ ತರಬೇತಿ ಮಾಹಿತಿ ನೀಡಲಾಗಿದೆ. 1112 ಶಿಕ್ಷಕರು ಹಾಗೂ 112 ಮೇಲ್ವಿಚಾರಕರು ಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ಸರಕಾರ ವಿಶೇಷ ಗೌರವಧನವನ್ನು ನೀಡಲಿದೆ. ಇದಕ್ಕಾಗಿ 9480843046 ಹಾಗೂ 9480843209 ಸಹಾಯವಾಣಿಗೂ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.
ಮೊಬೈಲ್ ಆ್ಯಪ್ ಮೂಲಕ ಸರ್ವೆ
ರಾಷ್ಟ್ರಪತಿಗಳಿಂದ ಅನುಮೋದನೆ ಪಡೆದಿರುವ 101 ಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಿ ಸರಕಾರವೇ ನೀಡಿದೆ. ಮೊಬೈಲ್ ಆ್ಯಪ್ ಮೂಲಕ ಸರ್ವೆ ನಡೆಯಲಿದೆ. ಮೊಬೈಲ್ ಆ್ಯಪ್ನಲ್ಲಿ ಸಮೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿ ಅಪ್ಲೋಡ್ ಮಾಡಲಾಗಿದ್ದು, ಗಣತಿ ಸಂದರ್ಭದಲ್ಲಿ ಆ ಮಾಹಿತಿಗಳ ಆಧಾರದಲ್ಲಿ ಸಮೀಕ್ಷೆ ನಡೆಯಲಿದೆ ಎಂದರು.
ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಸಹಿತ ಯಾವುದಾದರೂ ಒಂದು ದಾಖಲೆ ನೀಡಬೇಕು. ಆಧಾರ್ ಕಾರ್ಡ್ ಇಲ್ಲದವರು ತತ್ಕ್ಷಣವೇ ನೋಂದಾಯಿಸಿಕೊಂಡು ಅದರ ಸಂಖ್ಯೆಯಾದರೂ ನೀಡಬೇಕು. ಯಾವುದಾದರೂ ಒಂದು ದಾಖಲೆ ಒದಗಿಸುವುದು ಕಡ್ಡಾಯವಾಗಿದೆ ಎಂದರು.
			        


			        
                        
                        
                        
                        
                        
                        
                        
                        
                        