ಕಾರ್ಕಳ : ಶ್ರೀ ಕ್ಷೇತ್ರ ಹಿರಿಯoಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮರಾಠ ಸಮುದಾಯದ ವಟುಗಳಿಗೆ ಬ್ರಹ್ಮೋಪದೇಶ ಕ್ಷೇತ್ರದ ತಂತ್ರಿಗಳವರಾದ ಶ್ರೀ ಬಿ. ಸುಬ್ರಹ್ಮಣ್ಯ ತಂತ್ರಿ ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರಗಿತು.
40 ವಟುಗಳಿಗೆ ಮರಾಠ ಸಂಸ್ಕೃತಿಯ ವಿಧಿ ವಿಧಾನಗಳ ಪ್ರಕಾರ ಬ್ರಹ್ಮೋಪದೇಶವು ಸಾಮೂಹಿಕವಾಗಿ ನೆರವೇರಿತು. ದೇವಳದ ಆಡಳಿತ ಮಂಡಳಿ ಮತ್ತು ಬ್ರಹ್ಮೋಪದೇಶ ಸಮಿತಿಯ ನೇತೃತ್ವದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ 1200 ಜನ ಭಾಗವಹಿಸಿದ್ದರು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಸಂಘ ಕಾರ್ಕಳ ಹೆಬ್ರಿ ಇದರ ಸಂಚಾಲಕರಾದ ವಿಜಯ ಶೆಟ್ಟಿ, ಅತ್ತೂರು ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ, ರಮೇಶ್ ರಾವ್ ಬೆಂಗಳೂರು ಭಾಗವಹಿಸಿದ್ದರು. ಅತಿಥಿ ಗಣ್ಯರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಶುಭನುಡಿಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಮೊಕ್ತೇಸರ ಗಿರೀಶ್ ರಾವ್ ಮಾತನಾಡಿ ಮರಾಠ ಸಮಾಜದ ಸಂಸ್ಕಾರದ ಸಂಸ್ಕೃತಿಯೇ ಬ್ರಹ್ಮೋಪದೇಶ. ಈ ಸಂಸ್ಕಾರವನ್ನು ಯುವ ಪೀಳಿಗೆಗೆ ದೇವಸ್ಥಾನದ ವತಿಯಿಂದ ಹಮ್ಮಿಕೊಂಡು ನಾವೆಲ್ಲ ಪುನೀತರಾಗಿದ್ದೇವೆ ಎಂದರು. ಈ ಪುಣ್ಯ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದರು. ಬ್ರಹ್ಮೋಪದೇಶ ಸಮಿತಿಯ ಅಧ್ಯಕ್ಷರಾದ ರಾಜಾಜಿರಾವ್ ಸ್ವಾಗತಿಸಿ ಕಾರ್ಯದರ್ಶಿ ಪ್ರಕಾಶ್ ರಾವ್ ಸೆಪ್ಟೆಕರ್ ಧನ್ಯವಾದ ಸಮರ್ಪಿಸಿದರು.
			        


			        
                        
                        
                        
                        
                        
                        
                        
                        
                        
                        