Social
ಉಡುಪಿ : ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯು ಇಂದು ಪ್ರಾಧಿಕಾರದ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಚರ್ಚೆ ನಡೆಯಿತು. ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಜನರಿಂದ ಬಂದ ದೂರು ಅಹವಾಲುಗಳ ಕುರಿತು ಶಾಸಕರುಗಳ ನೇತೃತ್ವದಲ್ಲಿ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಶಾಂತಲಾ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಮೋದ್ ಮಧ್ವರಾಜ್ರನ್ನು ಬಂಧಿಸುವಂತೆ ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘ ಆಗ್ರಹ
ಉಡುಪಿ : ಮಲ್ಪೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆಯಲ್ಲಿ ಬಂಧಿತರನ್ನು ಬಿಡುಗಡೆ ಮಾಡಲು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದ ಆರೋಪದಡಿಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ಚರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ಅವರನ್ನು ಕೂಡಲೇ ಬಂಧಿಸಬೇಕೆಂದು ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘ ಆಗ್ರಹಿಸಿದೆ.

ಉಡುಪಿ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ.ಆರ್, “ಕೃತ್ಯವನ್ನು ಸಮರ್ಥಿಸು ಮಹಿಳೆಯನ್ನು ನಿಂದಿಸುವ ಪ್ರಚೋದನಕಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ, ಅವರನ್ನು ಕೂಡಲೇ ಸರಕಾರ ಬಂಧಿಸಬೇಕೆಂದು ಆಗ್ರಹಿಸಿದರು.
ಪ್ರಕರಣದ ಸತ್ಯಾಸತ್ಯತೆಯ ವಿಡಿಯೋ ರಾಜ್ಯದಲ್ಲೆಡೆ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಉಡುಪಿಯ ಮಾಜಿ ಶಾಸಕರಾದ ರಘುಪತಿ ಭಟ್ ಅವರು ಕೃತ್ಯಕ್ಕೆ ಸಂಬಂಧಿಸಿದಂತೆ ಮಾತನಾಡಿ ‘ಈ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ನಿಂದನೆ ಕೇಸ್ ಅನ್ವಯವಾಗುವುದಿಲ್ಲ ಎಂದು ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದು, ಅವರ ಹೇಳಿಕೆ ಕಾನೂನು ವಿರೋಧಿಯಾಗಿದ್ದು, ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕು ಎಂದು ಹೇಳಿದರು.
ಸಾರ್ವಜನಿಕವಾಗಿ ಥಳಿತ, ನಿಂದನೆ ಹಾಗು ಅಪಮಾನಕ್ಕೆ ಒಳಗಾದ ಸಂತ್ರಸ್ತ ಮಹಿಳೆಗೆ ‘ಪರಿಶಿಷ್ಟ ಜಾತಿ ಹಾಗೂ ಪಂಗಡ ದೌರ್ಜನ್ಯ ತಡೆ ಕಾಯ್ದೆ 1989′ ಅಡಿ ನೀಡಲಾಗುವ ಪರಿಹಾರವನ್ನು ಕೂಡಲೇ ಒದಗಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯ ವಿರುದ್ಧವಾಗಿ ರಾಜಕೀಯ ಪ್ರೇರಿತವಾಗಿ ಮನಸೋ ಇಚ್ಛೆ ಹೇಳಿಕೆ ನೀಡುವರ ವಿರುದ್ಧ ಪೋಲಿಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಬೇಕು.
ಪ್ರಕರಣದ ತೀವ್ರತೆಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಕೃತ್ಯ ನಡೆದ ಸ್ಥಳದಲ್ಲಿ ಕೂಡಲೇ “ಶಾಂತಿ ಸಭೆ” ಆಯೋಜಿಸಿ ಎಲ್ಲರ ಮಧ್ಯೆ ಸೌಹಾರ್ದತೆಯನ್ನು ತರುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ನಾಗರೀಕ ಸಮುದಾಯ ತಲೆತಗ್ಗಿಸುವನಂತಹ ಅಮಾನವೀಯ ಕೃತ್ಯಗಳು ಜರುಗದಂತೆ ಪೊಲೀಸ್ ಇಲಾಖೆ ಕ್ರಮ ವಹಿಸಬೇಕು ಹಾಗೂ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವ ಹೊರ ಊರಿನ ಪರಿಶಿಷ್ಟರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸುತ್ತೇವೆ ಎಂದು ಹೇಳಿದರು.
ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಅವರ ಜೀವನ ಸಾಧನೆಯ ಸಮಗ್ರ ದಾಖಲೀಕರಣ : ಡಾ.ತಲ್ಲೂರು
ಉಡುಪಿ : ಉಡುಪಿಯ ಖ್ಯಾತ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ಯಕ್ಷಗಾನ ಜೀವನ ಸಾಧನೆ ಬಗ್ಗೆ ಸಮಗ್ರ ದಾಖಲೀಕರಣಕ್ಕೆ ರಾಜ್ಯ ಯಕ್ಷಗಾನ ಅಕಾಡೆಮಿ ಮುಂದಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಶನಿವಾರ ಉಡುಪಿಯ ಯಕ್ಷಗಾನ ಕಲಾರಂಗದ ವತಿಯಿಂದ ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಂಡ ಭೀಮ ಗೋಲ್ಡ್ ಬೆಂಗಳೂರು ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಒಂದು ವಾರದ ಯಕ್ಷಶಿಕ್ಷಣ ಸನಿವಾಸ ಶಿಬಿರ – 2025ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ ಅವರು ಯಕ್ಷಗಾನ ಕಲೆಯ ಬೆಳವಣಿಗೆಗೆ ಹಗಲಿರುಳು ಶ್ರಮಿಸಿದವರು. ಕಾರಂತರೊoದಿಗೆ ದೇಶ ವಿದೇಶದಲ್ಲಿ ಯಕ್ಷಗಾನವನ್ನು ಪ್ರದರ್ಶಿಸಿ ಯಕ್ಷಗಾನದ ಕಂಪನ್ನು ಬೀರಿದವರು. ಅವರ ಬಳಿ ದೇಶವಿದೇಶದಿಂದ ನೂರಾರು ಯಕ್ಷಗಾನ ಆಸಕ್ತರು ಬಂದು ಹೆಜ್ಜೆಗಾರಿಕೆಯನ್ನು ಕಲಿತಿದ್ದಾರೆ. ಕಲಿಯುತ್ತಿದ್ದಾರೆ. ಅವರ ಈ ಮಹಾನ್ ಸಾಧನೆ ಯುವಪೀಳಿಗೆಗೆ ತಿಳಿಯಬೇಕು. ಈ ನಿಟ್ಟಿನಲ್ಲಿ ಬನ್ನಂಜೆ ಸಂಜೀವ ಸುವರ್ಣ ಅವರ ಬಗ್ಗೆ ಸಮಗ್ರ ದಾಖಲೀಕರಣವನ್ನು ಅಕಾಡೆಮಿ ನಡೆಸಲಿದೆ ಎಂದು ಅವರು ತಿಳಿಸಿದರು.
ಯಕ್ಷಗಾನ ಪರಿಪೂರ್ಣ ಕಲಾಪ್ರಕಾರವಾಗಿದ್ದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಯಕ್ಷಗಾನವನ್ನು ಕಲಿತ ಮಕ್ಕಳು ಗುರುಹಿರಿಯರಿಗೆ ವಿಧೇಯರಾಗಿ, ನೈತಿಕ ಮೌಲ್ಯಗಳನ್ನು ತುಂಬಿಕೊoಡು ಬೆಳೆಯುತ್ತಾರೆ. ಇದರಿಂದ ಸುಸಂಸ್ಕೃತ ಸಮಾಜದ ನಿರ್ಮಾಣವಾಗುತ್ತದೆ. ಅಲ್ಲದೆ ಯಕ್ಷಗಾನ ಕಲಿಕೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಕಾರಣವಾಗುತ್ತಿರುವುದನ್ನು ಕಂಡಿದ್ದೇವೆ. ಆದ್ದರಿಂದ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಬೇಕು. ನಮ್ಮ ಪುರಾಣಗಳ ಬಗ್ಗೆ ಜ್ಞಾನದೊಂದಿಗೆ ಸಂಸ್ಕಾರವನ್ನು ಬೆಳೆಸುವ ಕಾರ್ಯ ನಡೆಯಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಅವರು ಉದ್ಘಾಟಿಸಿ ಮಾತನಾಡಿ, ಜಾತಿ,ಮತ ಬೇದವಿಲ್ಲದೆ ಮಕ್ಕಳು ಯಕ್ಷಗಾನವನ್ನು ಕಲಿಯಲು ಮುಂದಾಗುತ್ತಿರುವುದು ಯಕ್ಷಗಾನ ಕಲೆಯ ಬೆಳವಣಿಗೆಗೆ ದೃಷ್ಟಿಯಿಂದ ಸ್ವಾಗತಾರ್ಹ, ಅಲ್ಲದೆ ಯಕ್ಷಗಾನ ಕಲಿಕೆಯಿಂದ ಅಕಾಡೆಮಿಕ್ ಶಿಸ್ತು ಕೂಡಾ ಬೆಳೆಯುತ್ತದೆ. ಸ್ಮರಣ ಶಕ್ತಿ, ಮಾತಿನ ಶಕ್ತಿ ಜೊತೆಗೆ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆ ಕೂಡಾ ಆಗುತ್ತದೆ. ಸಾತ್ವಿಕ ಗುಣವನ್ನು ಯಕ್ಷಗಾನ ಕಲಿಸಿಕೊಡುತ್ತದೆ. ಮಕ್ಕಳು ಉತ್ಸಾಹದಿಂದ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಭೀಮ ಗೋಲ್ಡ್ನ ರಾಘವೇಂದ್ರ ಭಟ್ ಹಾಗೂ ಗುರುಪ್ರಸಾದ್, ಡಾ. ಕಾವ್ಯಾ ನರೇಂದ್ರ ಬಲ್ಲಾಳ್, ಶಿಬಿರದ ನಿರ್ದೇಶಕ ಗುರು ಬನ್ನಂಜೆ ಸಂಜೀವ ಸುವರ್ಣ, ನರಸಿಂಹ ತುಂಗ, ಆದ್ಯತಾ ಭಟ್, ಕಲಾರಂಗದ ಪದಾಧಿಕಾರಿಗಳಾದ ಎಸ್.ವಿ.ಭಟ್, ಯು. ವಿಶ್ವನಾಥ ಶಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಎಚ್. ಎನ್. ಶೃಂಗೇಶ್ವರ, ಭುವನಪ್ರಸಾದ ಹೆಗ್ಡೆ, ವಿದ್ಯಾ ಪ್ರಸಾದ್, ಅಜಿತ್ ಕುಮಾರ್, ಮಹೇಶ್ ಕುಮಾರ್, ರತ್ನಾಕರ ಶೆಣೈ, ನಿತ್ಯಾನಂದ ಶೆಟ್ಟಿಗಾರ್, ನಾಗೇಂದ್ರ ಗಾಣಿಗ ಉಪಸ್ಥಿತರಿದ್ದರು.
ನಾರಾಯಣ ಎಂ. ಹೆಗಡೆ ಸ್ವಾಗತಿಸಿ, ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ವಂದಿಸಿದರು, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಬಿರದ ಸಂಯೋಜಕ ನಿರಂಜನ ಭಟ್ ನಿರೂಪಿಸಿದರು.
ಒಂದು ವಾರದ ಈ ಸನಿವಾಸ ಶಿಬಿರದಲ್ಲಿ ಯಕ್ಷಶಿಕ್ಷಣದ ಶಾಲೆಗಳ 60 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.
ಉಡುಪಿ : ಯತಿಶ್ರೇಷ್ಠರಾದ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಹೆಸರಿನಲ್ಲಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಕೊಡ ಮಾಡುವ “ಯಕ್ಷವಿದ್ಯಾ ಮಾನ್ಯ” ಪ್ರಶಸ್ತಿಗೆ ತೆಂಕುತಿಟ್ಟಿನ ಶ್ರೇಷ್ಠ ಕಲಾವಿದ ಕೆ. ಗೋವಿಂದ ಭಟ್ ಆಯ್ಕೆಯಾಗಿದ್ದಾರೆ.
ಕೂಡ್ಲು, ಇರಾ, ಸುರತ್ಕಲ್ ಮತ್ತು ದೀರ್ಘಕಾಲ ಧರ್ಮಸ್ಥಳ ಮೇಳದಲ್ಲಿ ಪ್ರದಾನ ವೇಷಧಾರಿಯಾಗಿ ಒಟ್ಟು ಸುಮಾರು ಆರೂವರೆ ದಶಕಗಳಿಗೂ ಅಧಿಕ ಕಾಲ ಯಕ್ಷತಿರುಗಾಟ ಮಾಡಿದ್ದಾರೆ. ಎಲ್ಲಾ ರೀತಿಯ ವೇಷಗಳನ್ನು ಮಾಡಿರುವ ಇವರು ಹಲವು ಪೌರಾಣಿಕ ಪಾತ್ರಗಳನ್ನು ಅಪೂರ್ವವಾಗಿ ಚಿತ್ರಿಸಿದ್ದಾರೆ.
ಯಕ್ಷಗುರುಗಳಾಗಿ ನೂರಾರು ವಿದ್ಯಾರ್ಥಿಗಳನ್ನು ಈ ಕ್ಷೇತ್ರಕ್ಕೆ ನೀಡಿದ ಇವರಿಗೆ ಎಪ್ರಿಲ್ 10, 2025 ಗುರುವಾರ ಪೂರ್ವಾಹ್ನ 10.30 ಗಂಟೆಗೆ ಪಲಿಮಾರಿನಲ್ಲಿ ನಡೆಯಲಿರುವ ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ “ಯಕ್ಷವಿದ್ಯಾ ಮಾನ್ಯ” ಪುರಸ್ಕಾರವನ್ನು ಪ್ರಶಸ್ತಿ ಫಲಕ ಮತ್ತು ರೂ. 50,000/- ನಿಧಿಯೊಂದಿಗೆ ಪ್ರದಾನ ಮಾಡಲಾಗುವುದು ಎಂದು ಪಲಿಮಾರು ಮಠದ ದಿವಾನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ : ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ನೆಹರು ಯುವ ಕೇಂದ್ರದ ಸಹಯೋಗದಲ್ಲಿ ನಡೆದ “ವಿಕಸಿತ ಭಾರತ ಯುವ ಪಾರ್ಲಿಮೆಂಟ್ ಸ್ಪರ್ಧೆ”ಯಲ್ಲಿ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮನು ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಂಗಳೂರು, ಕೊಡಗು ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮೂರು ಜಿಲ್ಲೆಗಳ ಸುಮಾರು 150 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಂತಿಮವಾಗಿ 10 ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗಿದೆ.
ಮಾರ್ಚ್ 27ರಂದು ರಾಜ್ಯ ಮಟ್ಟದ ‘ವಿಕಸಿತ ಭಾರತ ಯುತ್ ಪಾರ್ಲಿಮೆಂಟ್ – 2025’ ಕಾರ್ಯಕ್ರಮವು ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಯಲಿದೆ.
ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಡಾ. ಎಂ ವೆನಿಸ್ಸಾ ಎ.ಸಿ ವಿಜೇತರಿಗೆ ಪದಕ ಮತ್ತು ಪ್ರಮಾಣ ಪತ್ರವನ್ನು ವಿತರಿಸಿದರು ನೆಹರು ಯುವ ಕೇಂದ್ರದ ನೋಡಲ್ ಅಧಿಕಾರಿ ಲೋಕೇಶ್ ಕುಮಾರ್, ಮಂಗಳೂರು ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಸಂಯೋಜಕ ಡಾ. ಶೇಷಪ್ಪ ಅಮೀನ್ ಮತ್ತು ಸೈಂಟ್ ಆಗ್ನೆಸ್ ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಉದಯ್ ಕುಮಾರ್ ಉಪಸ್ಥಿತರಿದ್ದರು.

ಕೋಟ : ಭಾರತೀಯ ಅಂಚೆ ವಿಭಾಗ ಉಡುಪಿ ಮತ್ತು ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಇವರ ಸಹಭಾಗಿತ್ವದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಮಾ.22ರಂದು ನಡೆಯಿತು. ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಇದರ ಗೌರವಾಧ್ಯಕ್ಷ ರಾಜೇಶ್ ಉಪಾಧ್ಯಾಯ ಶಿಬಿರ ಉದ್ಘಾಟಿಸಿದರು.
ಮುಖ್ಯ ಅಭ್ಯಾಗತರಾಗಿ ಕುಂದಾಪುರ ದಕ್ಷಿಣ ಉಪವಿಭಾಗ ಅಂಚೆ ನಿರೀಕ್ಷಕ ನಾಗಾಂಜಿನೇಯಲು ವಿವಿಧ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಉಡುಪಿ ವಿಭಾಗ ಅಂಚೆ ಅಧೀಕ್ಷಕ ರಮೇಶ್ ಪ್ರಭು, ಕುಂದಾಪುರ ದಕ್ಷಿಣ ಉಪವಿಭಾಗ ಅಂಚೆ ಸಹಾಯಕ ಸಂದೇಶ್, ಅಂಚೆ ಮೇಲ್ವಿಚಾರಕ ಮಹೇಂದ್ರ ಯು.ಎಸ್., ವಿನ್ಲೈಟ್ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ರಮೇಶ್ ಪೂಜಾರಿ, ಕಾರ್ಯದರ್ಶಿ ಸುಧಾಕರ್ ಪೂಜಾರಿ, ಖಜಾಂಚಿ ರವಿ ಹಾಗೂ ಮಾಜಿ ಅಧ್ಯಕ್ಷ ಗಿರೀಶ್ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನರು ಆಧಾರ್ ತಿದ್ದುಪಡಿಯ ಪ್ರಯೋಜನವನ್ನು ಪಡೆದರು. ದೇವೇಂದ್ರ ಶ್ರೀಯನ್ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.
ವಿಟ್ಲ : ವಿಟ್ಲದ ಖಾಸಗಿ ಬಸ್ಸ್ಟ್ಯಾಂಡ್ ಹಿಂಬದಿಯ ಪಾಳುಬಿದ್ದ ಕೆರೆಯಲ್ಲಿ ಪುರುಷನ ಮೃತದೇಹದ ಅವಶೇಷಗಳು ಪತ್ತೆಯಾಗಿರುವ ಘಟನೆ ನಿನ್ನೆ ನಡೆದಿದೆ.

ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ವಿಧಿ ವಿಜ್ಞಾನ ತಂಡದ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಅವಶೇಷಗಳನ್ನು ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾದ ವ್ಯಕ್ತಿಗಳ ಕುಟುಂಬಸ್ಥರನ್ನು ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಯ ನಂತರ ಇದೀಗ ವ್ಯಕ್ತಿಯ ಅವಷೇಶದ ಗುರುತು ಪತ್ತೆಹಚ್ಚಲಾಗಿದೆ.
ಪತ್ತೆಯಾದ ಮೃತದೇಹದ ಅವಶೇಷವನ್ನು ಆರು ತಿಂಗಳ ಹಿಂದೆ ನವರಾತ್ರಿ ಹಬ್ಬದ ಸಂದರ್ಭ ವೇಷ ಹಾಕಲು ಪರವಾನಿಗೆ ಪಡೆಯಲೆಂದು ಮನೆಯವರಲ್ಲಿ ಹೇಳಿ ಹೋಗಿದ್ದ ವಿಟ್ಲ ಪಳಿಕೆ ನಿವಾಸಿ ಸುಂದರ ನಾಯ್ಕ ಎಂದು ಗುರುತಿಸಲಾಗಿದೆ.
ಮೃತದೇಹದ ಭಾಗಗಳನ್ನು ಕಾನೂನು ಪ್ರಕ್ರಿಯೆಯಂತೆ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕುಟುಂಬಸ್ಥರಿಗೆ ವೈದ್ಯಾಧಿಕಾರಿಗಳು ಒಪ್ಪಿಸಿದ್ದಾರೆ.
ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ತಾಲೂಕಿನ ಭುವನಕೋಟೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಅಪಘಾತದಲ್ಲಿ 17 ಹಲ್ಲುಗಳನ್ನು ಕಳೆದುಕೊಂಡ ನೋವಿನಲ್ಲಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.

18 ವರ್ಷದ ವಿಘ್ನೇಶ್ ಎಂಬಾತನೇ ಜೀವ ಕಳೆದುಕೊಂಡ ಯುವಕ. ನಾಲ್ಕು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ 17 ಹಲ್ಲುಗಳನ್ನು ಕಳೆದುಕೊಂಡು ತೀವ್ರ ಶಾರೀರಿಕ ಹಾಗೂ ಮಾನಸಿಕ ನೋವು ಅನುಭವಿಸುತ್ತಿದ್ದ.
ಈ ನೋವಿನಿಂದ ಮನನೊಂದು, ಅವನು ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಘ್ನೇಶ್ ಕೊಪ್ಪದಲ್ಲಿರುವ ಐಟಿಐ ಸಂಸ್ಥೆಯಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ. ದೈಹಿಕ ಹಾಗೂ ಮಾನಸಿಕ ಪೀಡನೆ ಎದುರಿಸುತ್ತಿದ್ದ ಈ ಯುವಕ, ಯಾವಾಗಲೂ ಆಸ್ಪತ್ರೆಗೆ ಹೋಗಿ ಬರಬೇಕಾಗುತ್ತಿತ್ತು. ನಿರಂತರ ಚಿಕಿತ್ಸೆ ಮತ್ತು ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳ ನಡುವೆ ಆತ ಮಾನಸಿಕ ನೊಂದಿದ್ದ.
ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ : ಪ್ರತಿಭೆ, ಸ್ಛೂರ್ತಿ ಎರಡೂ ಕವಿಗೆ ಅಗತ್ಯವಿದ್ದು ಕಾವ್ಯ ಸಂವೇದನೆ ಬೆಳೆಸಿಕೊಳ್ಳದಿದ್ದರೆ ಉತ್ತಮ ಕವಿತೆ ರಚನೆಯಾಗದು ಎಂದು ಕವಿ ಎಚ್. ಡುಂಡಿರಾಜ್ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಆಶ್ರಯದಲ್ಲಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ರಚಿತ ಕವನ ಸಂಕಲನ ತಂಬೂರಿ ಹಾಗೂ ಕಾಯ ತಂಬೂರಿ ನಾಟಕ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಸಹಜವಾಗಿ ಬರೆದರೆ ಅದು ಕಾವ್ಯ ಮಯ, ಯಾರದೋ ಒತ್ತಾಯಕ್ಕೆ ಬರೆದರೆ ಕಾವ್ಯ ಮಾಯ, ದೊಡ್ಡ ದೊಡ್ಡ ಶಬ್ದ, ಪ್ರಾಸ, ಛಂದಸ್ಸು, ಲಯಬದ್ಧವಾಗಿ ಬರೆದದ್ದೂ ಕೆಲವೊಮ್ಮೆ ಕವಿತೆಗಳಾಗೋದಿಲ್ಲ. ಕವಿತೆ ಸರಳವಾಗಿದ್ದು ಕೇಳುಗರ, ಓದುಗರ ಗಮನ ಸೆಳೆಯುವಂತಿರಬೇಕು. ಹಾಡು, ನಾಟಕ ಬರೆಯುವವರಿಗೆ ಇಂದು ಪ್ರೋತ್ಸಾಹ ವಿರಳವಾಗಿದೆ. ನಳ್ಳಿ ತಿರುಗಿಸಿದರೆ ನೀರು ಬರೋದಿಲ್ಲ. ಆದರೆ ವಾಟ್ಸ್ಯಾಪ್ ಆನ್ ಮಾಡಿದರೆ ನೂರಾರು ಕವಿತೆಗಳು ಬರುತ್ತವೆ. ಕವಿತೆ ತಪಸ್ಸು, ಋಷಿಯಾಗದವ, ಖುಷಿ ಇಲ್ಲದವ ಕವಿಯಾಗಲಾರ ಎಂದು ಹೇಳಿದರು.
ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊಫಸರ್ ಶಂಕರ್, ಉದ್ಯಮಿ ವಿಶ್ವನಾಥ ಶೆಣೈ, ಲೇಖಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಉಪಸ್ಥಿತರಿದ್ದರು.