ಉಡುಪಿ : ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ, ಉಡುಪಿ ಜಿಲ್ಲೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, 4447 ಮಂದಿ ಈಗಾಗಲೇ ನೊಂದಾಯಿಸಿಕೊಂಡಿದ್ದಾರೆ. 827 ಫಲಾನುಭವಿಗಳನ್ನು ಸರಬರಾಜು ಕಂಪನಿ ಆಯ್ಕೆ ಮಾಡಿಕೊಂಡಿದ್ದು, 378 ಮಂದಿಗೆ ಅವರ ಮನೆಯ ತಾರಸಿ ಮೇಲೆ ಸೋಲಾರ್ ಫ್ಯಾನಲ್ ಅಳವಡಿಸಿ ಸಂಪರ್ಕ ನೀಡಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಕಚೇರಿಯ ಪ್ರಕಟಣೆ ಮಾಹಿತಿ ಒದಗಿಸಿದೆ.
ಒಟ್ಟು ಒಬ್ಬ ಫಲಾನುಭವಿಗೆ 300ಕ್ಕೂ ಮಿಕ್ಕಿ ಯೂನಿಟ್ ವಿದ್ಯುತ್ ಒದಗಿಸುವ ದೃಷ್ಟಿಯಿಂದ 2,06,000 ರೂ. ಸಾಲ ಸೌಲಭ್ಯವನ್ನು ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ಒದಗಿಸಲಾಗುತ್ತದೆ. ಆ ಪೈಕಿ 78,000 ಕೇಂದ್ರ ಸರ್ಕಾರ ಸಬ್ಸಿಡಿ ಒದಗಿಸುತ್ತಿದೆ. ಉಡುಪಿ ಜಿಲ್ಲೆಗೆ ಈಗಾಗಲೇ 299 ಫಲಾನುಭವಿಗಳ ಖಾತೆಗೆ ಸಬ್ಸಿಡಿ ಬಂದಿದೆ ಎಂದು ಸಂಸದರ ಹೇಳಿಕೆ ತಿಳಿಸಿದೆ. ಹಾಲಿವರ್ಷ ಸೂರ್ಯ ಘರ್ ಯೋಜನೆಯ ಮೂಲಕ 1 ಕೋಟಿ ಕುಟುಂಬಗಳಿಗೆ ಸೋಲಾರ್ ವಿದ್ಯುತ್ ಅಳವಡಿಸುವ ಯೋಜನೆಯ ಗುರಿ ಕೇಂದ್ರ ಸರಕಾರ ಹೊಂದಿದೆ. ಬ್ಯಾಂಕ್ ಸಾಲ ಪಡೆದು ಕೇವಲ ಒಂದು ತಿಂಗಳೊಳಗೆ ಕೇಂದ್ರ ಸರ್ಕಾರದ ಮೂಲಕ ಫಲಾನುಭವಿಗಳ ಖಾತೆಗೆ ಸಬ್ಸಿಡಿ ಒದಗಿಸಿದ್ದು ಈ ಯೋಜನೆಯ ವಿಶೇಷವಾಗಿದೆ.
 
			        


 
			         
                        
 
                        
 
                        



 
                        
 
                         
                         
                        
 
                        


 
                         
                        


