Religious
ಜನವರಿ 29ರಂದು ಪುರಂದರ ದಾಸರ ಆರಾಧನೆಯ ಪ್ರಯುಕ್ತ ರಾಜಾಂಗಣದಲ್ಲಿ ‘ಸಹಸ್ರ ಕಂಠ ಗಾಯನ’; ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಸಮಿತಿ ಸಭೆ
ಉಡುಪಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಸಮಿತಿ ಸಭೆಯು ಭಜನಾ ಪರಿಷತ್ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅಧ್ಯಕ್ಷತೆಯಲ್ಲಿ ಉಡುಪಿಯ ಶ್ರೀ ಪುತ್ತಿಗೆ ಮಠದಲ್ಲಿ ನಡೆಯಿತು.
ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಅವರು ಮಾತನಾಡಿ ಭಜನಾ ಪರಿಷತ್ ಕೇಂದ್ರ ಸಮಿತಿಯ ಮಾರ್ಗದರ್ಶನದಂತೆ ಪರಿಷತ್ ವತಿಯಿಂದ ನಡೆಸುವ ಕಾರ್ಯಕ್ರಮಗಳಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಭಜನಾ ತರಬೇತುದಾರೆ ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಅವರು ಮಾತನಾಡಿ ಜನವರಿ 29ರಂದು ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಮಧ್ಯಾಹ್ನ ಗಂಟೆ 3.30ರಿಂದ ‘ದಾಸ ಶ್ರೇಷ್ಠ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ’ದ ಅಂಗವಾಗಿ ಉಡುಪಿ ರಾಜಾಂಗಣದಲ್ಲಿ ನಡೆಯಲಿರುವ ‘ಸಹಸ್ರ ಕಂಠ ಗಾಯನ’ ಕಾರ್ಯಕ್ರಮದ ಕುರಿತು ವಿಸ್ತೃತ ಮಾಹಿತಿ ನೀಡಿದರು.
ಉಡುಪಿ ತಾಲೂಕು ಭಜನಾ ಪರಿಷತ್ತಿನ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ವಿಸ್ತೃತ ವಿಚಾರ ವಿನಿಮಯ ನಡೆಸಲಾಯಿತು.
ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಮಾತನಾಡಿ ಉಡುಪಿ ತಾಲೂಕು ಪರಿಷತ್ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದು, ವಲಯ ಮಟ್ಟದ ಕಾರ್ಯಕ್ರಮಗಳ ಸಹಿತ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಇನ್ನಷ್ಟು ಮಾದರಿ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ನಡೆಯಲಿವೆ ಎಂದರು.
ಭಜನಾ ಪರಿಷತ್ ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಭಜನಾ ಪರಿಷತ್ ವತಿಯಿಂದ ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ನಡೆದ ಪ್ರಮುಖ ಕಾರ್ಯಕ್ರಮಗಳು ಹಾಗೂ ಮುಂದೆ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ.) ಉಡುಪಿ ಜಿಲ್ಲಾ ಯೋಜನಾಧಿಕಾರಿ ಶ್ರೀಮತಿ ಸ್ವಪ್ನಾ ಪ್ರಕಾಶ್, ಭಜನಾ ಪರಿಷತ್ ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಮುದ್ರಾಡಿ, ಶ್ರೀ ಪುತ್ತಿಗೆ ಮಠದ ರಘುಪತಿ ರಾವ್ ಕಿದಿಯೂರು, ಭಜನಾ ಮಂಡಳಿಯ ಸುಮನ ಆಚಾರ್ಯ ಉಪಸ್ಥಿತರಿದ್ದರು.
ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷೆ ಸುಮಿತ್ರಾ ನಾಯ್ಕ್ ಪೆರಂಪಳ್ಳಿ ವಂದಿಸಿದರು.
ಉಡುಪಿ : ಪಂಚಾಯತ್ ಉಪಾಧ್ಯಕ್ಷ ಅಧಿಕಾರ ಸ್ವೀಕರಿಸುವ ವೇಳೆ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯಿಂದ ಪ್ರಾರ್ಥನೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್ – ಎಸ್ಡಿಪಿಐ ಅಧಿಕಾರ ಹಂಚಿಕೆ ವೇಳೆ ವಿವಾದಾತ್ಮಕ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತ್ನಲ್ಲಿ ನಡೆದಿದೆ. ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ದುವಾವನ್ನು ಎಸ್ಡಿಪಿಐ ಮುಖಂಡರು ಮಾಡಿಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ ಜಾರಿದೆ.
ಕಾಂಗ್ರೆಸ್ – ಎಸ್ಡಿಪಿಐ ಮೈತ್ರಿ ಆಧಾರದಲ್ಲಿ ಅಧಿಕಾರ ಹಂಚಿಕೆಯಾಗಿದ್ದು, ಕಾಂಗ್ರೆಸ್ ಸದಸ್ಯೆ ಜಯಂತಿ ಖಾರ್ವಿ ಎಂಬುವವರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಎಸ್ಡಿಪಿಐ ಬೆಂಬಲಿತ ಸದಸ್ಯ ತಬ್ರೇಜ್ ಎಂಬಾತನಿಗೆ ಉಪಾಧ್ಯಕ್ಷ ಸ್ಥಾನ, ಉಪಾಧ್ಯಕ್ಷನ ಅಧಿಕಾರ ಸ್ವೀಕಾರ ವೇಳೆ ಮೌಲ್ವಿ ಕರೆಸಿ ಪ್ರಾರ್ಥನೆ ನಡೆಸಲಾಗಿದೆ. ಉಪಾಧ್ಯಕ್ಷ ತಬ್ರೇಜ್ ಕಚೇರಿಯಲ್ಲೇ ಪ್ರಾರ್ಥನೆ ನಡೆದಿದ್ದು, ದುವಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಮ ಪಂಚಾಯತ್ ಕಚೇರಿಯಲ್ಲಿ ಧಾರ್ಮಿಕ ಚಟುವಟಿಕೆ ನಡೆಸಿದ ಹಿನ್ನಲೆ ಹಿಂದೂ ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಧರ್ಮಸ್ಥಳ ನೇತ್ರಾವತಿಯ ಉಪನದಿಗೆ ಗೋಮಾಂಸ ತ್ಯಾಜ್ಯ ಎಸೆದ ಕಿಡಿಗೇಡಿಗಳು : ಕೂಡಲೇ ತಪ್ಪಿತಸ್ಥರನ್ನು ಬಂಧಿಸದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ
ಬೆಳ್ತಂಗಡಿ : ಕರಾವಳಿಯ ಪುಣ್ಯಕ್ಷೇತ್ರ ಧರ್ಮಸ್ಥಳದ ಪವಿತ್ರ ನದಿ ನೇತ್ರಾವತಿಯನ್ನು ಸೇರುವ ಉಪನದಿ ಮೃತ್ಯುಂಜಯ ಹೊಳೆಗೆ ಕಿಡಿಗೇಡಿಗಳು ಗೋ ಮಾಂಸದ ತ್ಯಾಜ್ಯವನ್ನು ಎಸೆದಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನ್ನಾರ್ ಎಂಬಲ್ಲಿ ಪಶ್ಚಿಮ ಘಟ್ಟದಿಂದ ಹರಿದು ಧರ್ಮಸ್ಥಳ ಬಳಿ ನೇತ್ರಾವತಿಯನ್ನು ಸೇರುವ ಮೃತ್ಯುಂಜಯ ಹೊಳೆಯಲ್ಲಿ ಮೂಟೆಗಟ್ಟಲೆ ಗೋವಿನ ರುಂಡ, ಮುಂಡ, ಚರ್ಮ ಗೋ ಹಂತಕರು ಗೋಮಾಂಸ ತ್ಯಾಜ್ಯ ಎಸೆದಿದ್ದಾರೆ ಎನ್ನಲಾಗಿದೆ.
ಪ್ರತಿನಿತ್ಯ ಲಕ್ಷಾಂತರ ಭಕ್ತರು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಈ ಪೈಕಿ ಹೆಚ್ಚಿನವರು ನೇತ್ರಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಇಷ್ಟೇ ಅಲ್ಲದೆ, ಧರ್ಮಸ್ಥಳ ದೇಗುಲದ ಮಂಜುನಾಥ ಸ್ವಾಮಿಯ ನಿತ್ಯ ಅಭಿಷೇಕಕ್ಕೂ ನೇತ್ರಾವತಿಯ ನದಿಯ ನೀರನ್ನೇ ಬಳಸಲಾಗುತ್ತಿದೆ.
ಹೀಗಾಗಿ, ಕೋಟ್ಯಂತರ ಭಕ್ತರ ನಂಬಿಕೆಗೆ ಗೋ ಹಂತಕರು ಕೊಳ್ಳಿ ಇಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚಾರ್ಮಾಡಿ ಗ್ರಾಮದ ಅನ್ನಾರ್ ಬಳಿ ನದಿಯಲ್ಲಿ ಗೋವಿನ ರುಂಡ ಮುಂಡಗಳು ಪತ್ತೆಯಾಗಿರುವುದು ಈ ಪ್ರದೇಶದ ಹಲವು ಮನೆಗಳಲ್ಲಿ ಮತ್ತು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗೋ ಹತ್ಯೆ ನಡೆಯುತ್ತಿರುವ ಬಗ್ಗೆ ಅನುಮಾನಗಳನ್ನು ಸೃಷ್ಟಿಸಿದೆ. ಹೀಗೆ ಗೋ ಹತ್ಯೆ ಮಾಡಿದ ಬಳಿಕ ಅವುಗಳ ಅವಶೇಷವನ್ನು ಮೂಟೆ ಕಟ್ಟಿ ನದಿಗೆ ಎಸೆಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನೇತ್ರಾವತಿ ನದಿಯನ್ನು ಮಲಿನಗೊಳಿಸಿದವರನ್ನು ಒಂದು ವಾರದೊಳಗೆ ಬಂಧಿಸಬೇಕೆoದು ಬಜರಂಗದಳ ಆಗ್ರಹಿಸಿದ್ದು, ಒಂದು ವೇಳೆ ತಪ್ಪಿತಸ್ಥರ ಬಂಧನವಾಗದಿದ್ದಲ್ಲಿ ಜಿಲ್ಲೆಯ ಹಿಂದೂ ನಾಯಕರಲ್ಲ ಸೇರಿ ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ.
ಮೃತ್ಯುಂಜಯ ನದಿಯಲ್ಲಿ ಗೋವಿನ ಮೃತದೇಹ ಮತ್ತು ಅವಶೇಷಗಳು ಪತ್ತೆ ಆಗಿರುವ ಬಗ್ಗೆ ಈ ಹಿಂದೆ ಕೆಲವು ಬಾರಿ ದೂರು ನೀಡಿದ್ದರೂ ಧರ್ಮಸ್ಥಳ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇದೀಗ ಒಮ್ಮಿಂದೊಮ್ಮೆಲೆ 11 ಮೂಟೆಗೂ ಹೆಚ್ಚಿನ ಗೋಮಾಂಸ ತ್ಯಾಜ್ಯ ಪತ್ತೆಯಾಗಿರುವುದು ಭಕ್ತರು ಹಾಗೂ ಸ್ಥಳಿಯರಲ್ಲಿ ಆತಂಕ ಮೂಡಿಸಿದೆ.
ಹೊಸವರ್ಷಕ್ಕೆ ಪುಷ್ಪಾಲಂಕೃತಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ – ಮಂಜುನಾಥ ಸ್ವಾಮಿಯ ದರ್ಶನಕ್ಕೆ ಭಕ್ತರ ದಂಡು
ಬೆಳ್ತಂಗಡಿ : ಹೊಸವರ್ಷವನ್ನು ಸ್ವಾಗತಿಸುವ ಸುಸಂದರ್ಭ ಬುಧವಾರ ಬೆಳಗ್ಗೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಆಲಯವನ್ನು ಪ್ರತೀವರ್ಷದಂತೆ ಭಕ್ತರು ವಿಶೇಷವಾಗಿ ಹೂವಿನ ಅಲಂಕಾರ ಮಾಡಿದ್ದಾರೆ.
ಬೆಂಗಳೂರಿನ ಟಿವಿಎಸ್ ಕಂಪೆನಿಯ ಉದ್ಯಮಿ ಗೋಪಾಲ್ ರಾವ್ ಹಾಗೂ ಆನಂದ ಮೂರ್ತಿ ಅವರ ತಂಡ ಧರ್ಮಸ್ಥಳದ ದೇವಸ್ಥಾನ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಬೀಡು, ಅನ್ನಛತ್ರ ಸಹಿತ ಮುಂಭಾಗ, ಒಳಾಂಗಣ, ಹೊರಾಂಗಣ, ಗೋಪುರ, ಮುಖಮಂಟಪವನ್ನು ಸಂಪೂರ್ಣ ಹೂ-ಹಣ್ಣುಗಳಿಂದ ಸಿಂಗರಿಸಿದ್ದಾರೆ.
ಡಿ.25ರಿಂದ 80 ಮಂದಿಯ ತಂಡವು ಸತತವಾಗಿ ಅಲಂಕಾರ ಕಾರ್ಯದಲ್ಲಿ ತೊಡಗಿದೆ. ಈ ಬಾರಿ ದೇವಸ್ಥಾನದ ಮುಂಭಾಗ ಆದಿಯೋಗಿಯ ಪ್ರತಿಮೆಯೊಂದಿಗೆ ಸಿಂಗಾರಗೊಳಿಸಲಾಗಿದೆ. 16 ವರ್ಷಗಳಿಂದ ಈ ತಂಡ ಅಲಂಕಾರ ಮಾಡುತ್ತಿದ್ದು, ಪ್ರಸಕ್ತ ವರ್ಷ 20ಲಕ್ಷ ರೂ. ವೆಚ್ಚದಲ್ಲಿ ಅಲಂಕರಿಸಲಾಗಿದೆ. ಸ್ವದೇಶಿ, ವಿದೇಶಿ ಹೂವುಗಳು, ಅಡಿಕೆ, ಭತ್ತದ ತೆನೆ, ಹೊಂಬಾಳೆ, ದಾಳಿಂಬೆ, ತೆಂಗಿನಕಾಯಿ, ಬಾಳೆಹಣ್ಣು, ಮೂಸಂಬಿ, ಕಬ್ಬು ಸಹಿತ 1 ಟನ್ ಹಣ್ಣು ಬಳಸಲಾಗಿದೆ.
ದರ್ಶನ ಪಡೆಯುತ್ತಿರುವ ಭಕ್ತ ಸಾಗರ
ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳಿ ಸೇರಿ ಉತ್ತರ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಿಂದಲೂ ಭಕ್ತರ ದಂಡು ಆಗಮಿಸುತ್ತಿದೆ.
ಉಡುಪಿ : ಉಡುಪಿ ಶ್ರೀಕೃಷ್ಣ ಮಠಕ್ಕೆ ಡಿಸೆಂಬರ್ 29ರಂದು ರಾತ್ರಿ ದೇವರ ದರ್ಶನಕ್ಕೆ ಬಂದು ದಾಂಧಲೆ ನಡೆಸಿ, ಮಠದ ಸಿಬ್ಬಂದಿ, ದಿವಾನರಿಗೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿರುವ 8 ಮಂದಿ ಅಯ್ಯಪ್ಪ ಮಾಲಾಧಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೈದರಬಾದಿನ ಶಿವಕುಮಾರ, ವಿಶಾಲ್, ರಾಜು, ನವೀನ್ ರಾಜ್, ರವಿಕಿರಣ್, ಭಾನು, ಉಮೆಂದರ್, ರವಿಕಾಂತ್ ಬಂಧಿತ ಆರೋಪಿಗಳು.
ಶ್ರೀಕೃಷ್ಣಮಠದ ಒಳಗೆ ಹಾಗೂ ಹೊರಗೆ ತೀವ್ರ ಜನಸಂದಣಿಯಿಂದ ನೂಕು ನುಗ್ಗಲು ಉಂಟಾಗಿದ್ದು, ಈ ವೇಳೆ ದೇವರ ದರ್ಶನಕ್ಕೆ ಬಂದಿದ್ದ ಸುಮಾರು 7-8 ಜನ ಅಯ್ಯಪ್ಪ ಮಾಲಾಧಾರಿಗಳು ದಾಂಧಲೆ ನಡೆಸಿದ್ದಾರೆ. ಅಲ್ಲದೆ ರಥಬೀದಿಯಲ್ಲಿ ನಡೆಯುವ ರಥೋತ್ಸವದ ದೇವರ ಉತ್ಸವ ಮೂರ್ತಿ ಪಲ್ಲಕ್ಕಿಯೊಂದಿಗೆ ಕೃಷ್ಣಮಠದ ಮುಂಭಾಗದಿಂದ ಒಳಭಾಗಕ್ಕೆ ಬರುವ ವೇಳೆ ದಾಂಧಲೆ ನಡೆಸಿದ ಅಯ್ಯಪ್ಪ ಮಾಲಾಧಾರಿಗಳು ಕೃಷ್ಣಮಠದ ಸಿಬ್ಬಂದಿ ಜಗದೀಶ ಎಂಬವರಿಗೆ ಕೈಯಿಂದ ಹಲ್ಲೆ ಮಾಡಿದ್ದಾರೆ.
ಆತನನ್ನು ಅವರೆಲ್ಲರೂ ಸೇರಿ ಮೇಲೆತ್ತಿಕೊಂಡು ಶ್ರೀಕೃಷ್ಣ ಮಠದ ಗರ್ಭ ಗುಡಿಯ ಒಳಗಡೆ ಬಂದಿದ್ದು, ಆಗ ಮಠದ ದಿವಾನ ನಾಗರಾಜ ಆಚಾರ್ಯ, ಅಯ್ಯಪ್ಪಮಾಲಾಧಾರಿಗಳನ್ನು ತಡೆಯಲು ಪ್ರಯತ್ನಿಸಿದರು. ಆಗ ಅವರೆಲ್ಲ ನಾಗರಾಜ ಆಚಾರ್ಯರ ಮೇಲೂ ಹಲ್ಲೆಗೆ ಮುಂದಾದರೆನ್ನಲಾಗಿದೆ. ಈ ಸಂದರ್ಭದಲ್ಲಿ ಕೃಷ್ಣಮಠದಲ್ಲಿ ಭದ್ರತಾ ಕರ್ತವ್ಯ ಹಾಗೂ ಪಿಆರ್ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಡುಪಿ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್ಸ್ಟೇಬಲ್ ರವೀಂದ್ರ ಗಲಾಟೆ ಮಾಡದಂತೆ ಅಯ್ಯಪ್ಪ ಮಾಲಾಧಾರಿಗಳನ್ನು ಸಮಾಧಾನ ಮಾಡಿ ತಡೆಯಲು ಹೋದರು.
ಈ ವೇಳೆ ಅಯ್ಯಪ್ಪ ಮಾಲಾಧಾರಿಗಳು ಪೊಲೀಸ್ ಸಿಬ್ಬಂದಿಗೆ ಕೈಯಿಂದ ಮುಖಕ್ಕೆ, ಮೈ-ಕೈಗೆ ಕೆನ್ನೆಗೆ ಹಲ್ಲೆ ಮಾಡಿದರು. ಇದರಿಂದ ಅವರಿಗೆ ರಕ್ತ ಗಾಯ ಉಂಟಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾನ್ಸ್ಟೇಬಲ್ ರವೀಂದ್ರ ನೀಡಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನಟ ಉಪೇಂದ್ರ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ಪೂಜೆ, ಹುಟ್ಟೂರಲ್ಲಿ ಮೂಲ ನಾಗದರ್ಶನ
ಬ್ರಹ್ಮಾವರ : ಚಿತ್ರನಟ, ನಿರ್ದೇಶಕ ಉಪೇಂದ್ರ ತನ್ನ ಯು-ಐ ಚಿತ್ರದ ಯಶಸ್ಸಿನ ಬಳಿಕ ತನ್ನ ಹುಟ್ಟೂರು ಕುಂದಾಪುರದ ಪ್ರವಾಸ ಕೈಗೊಂಡಿದ್ದಾರೆ. ಕುಂದಾಪುರದಲ್ಲಿ ತನ್ನ ಮೂಲ ನಾಗನ ದರ್ಶನ ಕೈಗೊಂಡು ಬಳಿಕ ಆನೆಗುಡ್ಡೆಯ ಶ್ರೀ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾರೆ.
ಬಳಿಕ ಸಾಲಿಗ್ರಾಮ ದೇವಸ್ಥಾನಕ್ಕೆ ಭೇಟಿ ನೀಡಿ, ತಮ್ಮ ಕುಲದೇವರಾದ ಶ್ರೀ ಗುರು ನರಸಿಂಹ ದೇವರಿಗೆ ಪೂಜೆಯನ್ನು ಸಲ್ಲಿಸಿದರು.
ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ ಕೆ. ಎಸ್ ಕಾರಂತರು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು. ಜೊತೆಗೆ ದೇವಸ್ಥಾನದ ಇತಿಹಾಸವನ್ನು ಉಪೇಂದ್ರಗೆ ತಿಳಿಸಿದರು.
ಉಡುಪಿ : ಬೃಹತ್ ಗೀತೋತ್ಸವದ ಮಂಗಳೋತ್ಸವು ಕೃಷ್ಣಮಠದ ರಾಜಾಗಣದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು.

ಗೀತಾ ಜ್ಞಾನ ದೀಪೋತ್ಸವದ ಜತೆಗೆ ಶ್ರೀಪಾದರು ಶ್ರೀ ಕೃಷ್ಣನಿಗೆ ಸಮರ್ಪಿಸಿದ ಪಾರ್ಥಸಾರಥಿ ಸುವರ್ಣ ರಥದ ಮಾದರಿಯ ಗೀತಾ ರಥವನ್ನು ರಾಜಾಂಗಣದ ಪರಿಸರದಲ್ಲಿ ಎಳೆಯುವ ಮೂಲಕ ವಿಶಿಷ್ಟವಾಗಿ ಮಂಗಳೋತ್ಸವ ಆಚರಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ದಿನೇಶ್, ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್, ನಟ ಉಪೇಂದ್ರ, ಶಾಸಕರಾದ ಯಶ್ಪಾಲ್ ಎ. ಸುವರ್ಣ, ಉದ್ಯಮಿಗಳಾದ ಮನೋಹರ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಸೇರಿ ಗಣ್ಯರು ಪಾಲ್ಗೊಂಡಿದ್ದರು.
ಪುತ್ತಿಗೆ ಶ್ರೀಪಾದರು 2025ರ ವಿಶ್ವಾವಸು ನಾಮ ಸಂವತ್ಸರದ ಶ್ರೀ ಪುತ್ತಿಗೆ ಮಠ ಪರ್ಯಾಯ ಪಂಚಾಂಗ ಬಿಡುಗಡೆ ಮಾಡಿದರು. ಬಳಿಕ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


ಉಡುಪಿ : ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ಇಂದು ಭಗವದ್ಗೀತಾ ಯಜ್ಞವು ಸಂಪನ್ನಗೊಂಡಿತು.

ದೇಶ ವಿದೇಶಗಳಿಂದ ಆಗಮಿಸಿದ್ದ ಮಠದ ಭಕ್ತರು ಸಮಗ್ರ ಭಗವದ್ಗೀತಾ ಪಾರಾಯಣವನ್ನು ಮಾಡಿದರು. ಮಠದ ಯೋಗೇಂದ್ರ ಭಟ್ ಹೋಮವನ್ನು ನೆರವೇರಿಸಿದರು.
ಪರ್ಯಾಯ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ಭಗವದ್ಗೀತೆಯಲ್ಲಿ ಎಲ್ಲ ಕಾರ್ಯಗಳನ್ನು ಯಜ್ಞವಾಗಿ ಪರಿವರ್ತಿಸಿಕೊಂಡು ತನ್ಮೂಲಕ ಭಗವದನುಗ್ರಹವನ್ನು ಸಂಪಾದಿಸಿಕೊಳ್ಳುವ ಉಪಾಯವನ್ನು ಶ್ರೀ ಕೃಷ್ಣ ಪರಮಾತ್ಮ ಲೋಕಕ್ಕೆ ತಿಳಿಸಿದ್ದಾನೆ. ಅಂತಹ ಪವಿತ್ರ ಗ್ರಂಥದ ಶ್ಲೋಕಗಳ ಮೂಲಕವೇ ಯಜ್ಞವನ್ನು ಆಚರಿಸುವುದು ಬಹಳ ಔಚಿತ್ಯ ಪೂರ್ಣ. ಭಾಗವಹಿಸಿದವರೆಲ್ಲರಿಗೂ ಶ್ರೀಕೃಷ್ಣನ ಪರಮಾನುಗ್ರಹವಾಗಲಿ ಎಂದು ಹಾರೈಸಿದರು. ಪರ್ಯಾಯ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.


ಖ್ಯಾತ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್ ಕುಟುಂಬ ಸಮೇತ ಶ್ರೀ ಕೃಷ್ಣ ಮಠಕ್ಕೆ ಭೇಟಿ – ಶ್ರೀಗಳಿಂದ ಸನ್ಮಾನ
ಉಡುಪಿ : ಖ್ಯಾತ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು.

ಶ್ರೀ ಕೃಷ್ಣ ದರ್ಶನ ಕೈಗೊಂಡ ಅವರು, ಪರ್ಯಾಯ ಪುತ್ತಿಗೆ ಮಠದವರು ನಡೆಸುವ ಕೋಟಿಗೀತಾ ಲೇಖನ ಯಜ್ಞದ ಬಗ್ಗೆ ವಿಶೇಷ ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು. ತಮ್ಮ ಅಜ್ಜನವರು ತಮಗೆ ಕಲಿಸಿಕೊಟ್ಟ ಭಗವದ್ಗೀತೆಯ ವಿಚಾರಗಳನ್ನು ಶ್ಲೋಕಗಳನ್ನು ಸ್ವಾಮೀಜಿಯ ಮುಂದೆ ಹೇಳಿದರು.
ಪರ್ಯಾಯ ಮಠದ ವತಿಯಿಂದ ಈ ವೇಳೆ ವಿವಿಎಸ್ ಲಕ್ಷ್ಮಣ್ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು. ಉಡುಪಿ ಶ್ರೀ ಕೃಷ್ಣ ಮಠದಿಂದ ಕೊಲ್ಲೂರು ಕ್ಷೇತ್ರ ಹಾಗೂ ಗೋಕರ್ಣ ಕ್ಷೇತ್ರದ ಸಂದರ್ಶನಕ್ಕೆ ತೆರಳಿದರು.