ಉಡುಪಿ : ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಹತಾಶೆಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ನಡೆದುಕೊಳ್ಳುತ್ತಿರುವ ಮಾಜಿ ಶಾಸಕರು ಕೆಲ ಹಿಂದೂ ವಿರೋಧಿ ಶಕ್ತಿಗಳ ಆಟಕ್ಕೆ ಗೊಂಬೆಯಂತೆ ಕುಣಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಖಂಡ ಹಿಂದೂರಾಷ್ಟ್ರದ ಕಲ್ಪನೆಗೆ ಮಗ್ಗಲ ಮುಳ್ಳಾಗಿರುವ ಗೋ ಭಕ್ಷಕರನ್ನು ದೇವಸ್ಥಾನದ ಪ್ರಾಂಗಣದೊಳಕ್ಕೆ ಕರೆಸಿ ದೇವಸ್ಥಾನದ ಪಾವಿತ್ರ್ಯ ತೆಯನ್ನು ಅಶುದ್ದಿ ಗೊಳಿಸಿರುವಿರಿ. ಹಿಂದೂ ಸಮಾಜದ ಬೆಂಬಲದಿಂದಲೇ ಮೂರು ಬಾರಿ ವಿಧಾನಸಭೆ ಪ್ರವೇಶಿಸಿದ ತಾವು ಅಧಿಕಾರದಲಿದ್ದಾಗ ಹಿಂದೂ ಫೈರ್ ಬ್ರಾಂಡ್ ತರ ನಡೆದುಕೊಳ್ಳುತ್ತಿದ್ದ ತಾವು ಇತ್ತೀಚಿನ ದಿನಗಳ ನಿಮ್ಮ ಕಾರ್ಯವೈಖರಿ ಅನುಮಾನ ಹುಟ್ಟಿಸುವಂತಿದೆ. ಇನ್ನಾದರೂ ಬುದ್ಧಿಕಲಿತು ವೆಂಕಟರಮಣನ ಶಾಪಕ್ಕೆ ತುತ್ತಾಗದೆ ದೇವಸ್ಥಾನ ಶುದ್ಧೀಕರಿಸಿ ಹಿಂದೂ ಸಮಾಜದ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಿ ಎಂದು ಶ್ರೀರಾಮಸೇನೆ ಉಡುಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಪೂಜಾರಿ ಆಗ್ರಹಿಸಿದ್ದಾರೆ.
Politics
ಮಹಾಲಕ್ಷ್ಮಿ ಬ್ಯಾಂಕ್ ಅವ್ಯವಹಾರ ಆರೋಪ ಪ್ರಕರಣ; ಉಡುಪಿಯಲ್ಲಿ ಮಾಜಿ ಶಾಸಕ ರಘುಪತಿ ಭಟ್ ಹೇಳಿಕೆ
ಉಡುಪಿ : ಮಾಜಿ ಶಾಸಕ ರಘುಪತಿ ಭಟ್ ಮಹಾಲಕ್ಷ್ಮಿ ಬ್ಯಾಂಕ್ ಕುರಿತಾಗಿ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಮಹಾಲಕ್ಷ್ಮಿ ಬ್ಯಾಂಕ್ ಆಣೆ ಪ್ರಮಾಣಕ್ಕೆ ಬರಲು ಪತ್ರ ಬರೆದಿದ್ದುದಾಗಿ ಅವರು ತಿಳಿಸಿದ್ದಾರೆ. ಆದರೆ ಈ ಕುರಿತು ಪೇಜಾವರ ಶ್ರೀ ಮತ್ತು ಪಲಿಮಾರು ಶ್ರೀ ಅವರು ಅವರು ಹೇಳಿದಂತೆ ಆಣೆ ಪ್ರಮಾಣ ಬೇಡ ಎಂದು ಸೂಚನೆ ನೀಡಿದರೆಂದು ಭಟ್ ಹೇಳಿದರು.
ಮೋಗವೀರ ಸಮುದಾಯದ ಮುಖಂಡರಾದ ಜಿ. ಶಂಕರ್ ಮತ್ತು ಜಯಕೋಟ್ಯಾನ್ ಅವರ ಮಾರ್ಗದರ್ಶನದಲ್ಲಿ ಮಾತುಕತೆಗಳು ನಡೆಯುವ ಸಾಧ್ಯತೆಗಳು ಕಂಡುಬಂದಿವೆ. ಭಟ್ ಅವರ ಪ್ರಕಾರ, ದೇವಸ್ಥಾನದಲ್ಲಿ ಯಾವುದೇ ಆಣೆ ಪ್ರಮಾಣಗಳನ್ನು ಮಾಡಲಿಲ್ಲ, ಆದರೆ ಅವರು ತೆಗೆದುಕೊಂಡ ಹಣವನ್ನು ಪ್ರಾಮಾಣಿಕವಾಗಿ ಬಡ್ಡಿ ಸಮೇತ ಪಾವತಿಸುವ ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.
ಬ್ಯಾಂಕ್ ತನ್ನ ಸಾಮಾಜಿಕ ಜವಾಬ್ದಾರಿಯನ್ನು ವಹಿಸಿಕೊಂಡು ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಭಟ್ ವಾಗ್ದಾನ ಮಾಡಿದ್ದಾರೆ. ಅವರು ತಮ್ಮ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕವಾಗಿ ತೇಜೋವಧೆ ಮತ್ತು ಅಪಪ್ರಚಾರ ನಡೆಯುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
“ಹಣ ಸಿಕ್ಕಿದಷ್ಟು ಬಡ್ಡಿ ಸಮೇತ ಬ್ಯಾಂಕಿಗೆ ಪಾವತಿಸಬೇಕು ಎಂದು ಎಲ್ಲರೂ ತೀರ್ಮಾನಿಸಿದ್ದಾರೆ. ಗ್ರಾಹಕರನ್ನು ಬ್ಯಾಂಕ್ಗೆ ಕರೆಸಿಕೊಂಡು ಅವರ ಅಭಿಪ್ರಾಯ ಕೇಳಿ,” ಎಂದು ಅವರು ಹೇಳಿದರು.
“ಸಮಾಜದ ಬಡವರು ಮತ್ತು ಧ್ವನಿ ಇಲ್ಲದವರನ್ನು ಮಧ್ಯದಲ್ಲಿ ಬಿಡಬಾರದು. ಸ್ವಾಮೀಜಿಗಳು ಅಥವಾ ಮೊಗವೀರ ಸಮುದಾಯದ ಪ್ರಮುಖರು ಮಧ್ಯಸ್ಥಿಕೆ ವಹಿಸಬೇಕು,” ಎಂದ ಭಟ್ ಅವರ ಹೇಳಿಕೆಯಲ್ಲಿ, ಸಹಿ ಹಾಕದ 36 ಜನರಿಗೂ ಮರುಪಾವತಿ ಮಾಡಲು ಪೀಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅವರು ಯಾವುದೇ ಜಿದ್ದಾಜಿದ್ದಿಯಿಲ್ಲದೆ ಈ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು : ಮಹಾರಾಷ್ಟ್ರ ಚುನಾವಣೆ ನಿಮಿತ್ತ ಇದೇ ನವಂಬರ್ 12ರಂದು ಪುಣೆಯಲ್ಲಿ ನಡೆಯಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಕುರಿತು ನಡೆದ ನಗರ ಸೇವಕರ (ಪಾಲಿಕೆ ಸದಸ್ಯರು) ವಿಶೇಷ ಸಭೆಯಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ರವರು ಭಾಗವಹಿಸಿದರು.
ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವರು ಹಾಗೂ ಪುಣೆಯ ಸಂಸದರಾದ ಶ್ರೀ ಮುರಳೀಧರ್ ಮೊಹೋಲ್ ರವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಮುಂಬರುವ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಸೇರಿದಂತೆ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಹಲವು ಸುತ್ತಿನ ಚರ್ಚೆ ನಡೆಯಿತು. ಶಾಸಕ ಕಾಮತ್ರವರು ಪ್ರಸ್ತುತ ಪುಣೆಯಲ್ಲಿದ್ದು ಪಾರ್ವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಈ ಸಂದರ್ಭದಲ್ಲಿ ಪಾರ್ವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪ್ರಶಾಂತ್ ದಿವಾಕರ್, ಕ್ಷೇತ್ರದ ಹಾಲಿ ಶಾಸಕಿ ಹಾಗೂ ಬಿಜೆಪಿ ಅಭ್ಯರ್ಥಿ ಮಾಧುರಿ ಮಿಸಾಲ್, ಎಲ್ಲಾ ನಗರ ಸೇವಕರು ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಬಿಜೆಪಿಗೆ ಸರಕಾರಿ ತನಿಖಾ ಸಂಸ್ಥೆಗಳ ಮೇಲೆ, ಪ್ರಜಾಪ್ರಭುತ್ವ, ಲೋಕಾಯುಕ್ತದ ಮೇಲೆ ನಂಬಿಕೆಯಿಲ್ಲ – ಐವನ್ ಡಿಸೋಜ ಆರೋಪ
ಮಂಗಳೂರು : ಮೂಡಾ ನಿವೇಶನ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ತನಿಖೆಗೆ ಹಾಜರಾಗಬೇಕೆಂದು ಬೀದಿಗಿಳಿದು ಹೋರಾಟ ನಡೆಸಿದ್ದ ಬಿಜೆಪಿ ಸಿಎಂ ಲೋಕಾಯುಕ್ತದ ಮುಂದೆ ಹಾಜರಾಗಿ ತನಿಖೆ ಎದುರಿಸಿದ ಬಳಿಕ ತನ್ನ ವರಸೆ ಬದಲಿಸಿ ಅದೊಂದು ಐವಾಷ್, ನಾಟಕ, ಬಿ-ರಿಪೋರ್ಟ್ ಹಾಕುವ ತಂತ್ರ ಎಂದು ಹೇಳಲಾರಂಭಿಸಿದೆ. ಇದನ್ನೆಲ್ಲಾ ನೋಡುವಾಗ ಬಿಜೆಪಿಗೆ ಸರಕಾರಿ ತನಿಖಾ ಸಂಸ್ಥೆಗಳ ಮೇಲೆ, ಪ್ರಜಾಪ್ರಭುತ್ವ, ಲೋಕಾಯುಕ್ತದ ಮೇಲೆ ನಂಬಿಕೆಯಿಲ್ಲ ಎಂದೆನ್ನಿಸುತ್ತದೆ ಎಂದು ಎಂಎಲ್ಸಿ ಐವನ್ ಡಿಸೋಜ ಆರೋಪಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನ್ಯಾಯ ತೀರ್ಮಾನವನ್ನು ಸ್ವೀಕರಿಸಿದವರು ಯಾರು ಎಂದು ಬಿ.ವೈ.ವಿಜೇಂದ್ರ ಉತ್ತರಿಸಲಿ. ಆರೋಪ ಬಂದ ಮೇಲೆ ಬಿಟ್ಟು ಓಡುತ್ತಾರೆಂದು ನೀವು ಅಂದುಕೊಂಡಿರಿ. ಆದರೆ ತಪ್ಪು ಮಾಡಿದರೆ ಓಡುತ್ತಾರೆ. ಸಿಎಂ ಸಿದ್ದರಾಮಯ್ಯರಿಗೆ ತಮ್ಮ 40ವರ್ಷದ ರಾಜಕಾರಣದಲ್ಲಿ ಇಂದಿನವರೆಗೆ ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿರುವ ಆತ್ಮಸ್ಥೈರ್ಯವಿದೆ. 2014ರಲ್ಲಿ ಯಡಿಯೂರಪ್ಪರ ಮೇಲೆ ಇದೇ ರೀತಿ ಆರೋಪ ಕೇಳಿ ಬಂದಾಗ ಅವರು ರಾಜಿನಾಮೆ ನೀಡಿದ್ದರೆ, ಆ ಬಳಿಕ ಚಾರ್ಜ್ಶೀಟ್ ಫೈಲ್ ಮಾಡಿ ತನಿಖೆಗೆ ಹೋದಾಗ ತಾನೆ ಅವರು ರಾಜಿನಾಮೆ ಕೊಟ್ಟದ್ದು. ವಿಜೇಂದ್ರರ ಮೇಲೆ 14ಇಡಿ ಪ್ರಕರಣವಿದೆಯಲ್ಲ ಅದನ್ನೇಕೆ ತಾವು ಲೋಕಾಯುಕ್ತ, ಸಿಬಿಐ ತನಿಖೆ ನಡೆಸಲು ಹೇಳುತ್ತಿಲ್ಲ. ಇತ್ತೀಚೆಗೆ ಕುಮಾರಸ್ವಾಮಿಯವರು ಓರ್ವ ಕ್ಯಾಬಿನೆಟ್ ಮಿನಿಸ್ಟರ್ ಆಗಿ ಲೋಕಾಯುಕ್ತದ ಮುಂದೆ ಹಾಜರಾದರಲ್ಲ, ಅವರೇನು ರಾಜಿನಾಮೆ ಕೊಟ್ಟುಹೋದರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಎಲ್ಲದರಲ್ಲೂ ಮೂಗು ತೂರಿಸುವುದು, ಎಲ್ಲವೂ ಸರಿಯಿಲ್ಲ ಎಂದು ಹೇಳುವುದು ವಿರೋಧಪಕ್ಷದ ಘನತೆ ಗೌರವಕ್ಕೆ ಕುಂದು ತರುತ್ತದೆ. ಬಿಜೆಪಿಯ ಆರೋಪ ಮತ್ತು ಮಾತುಗಳು ವಿರೋಧಪಕ್ಷದ ಗೌರವದ ಸ್ಥಾನಕ್ಕೆ ಚ್ಯುತಿ ತರುತ್ತಿದೆ ಎಂದು ಐವನ್ ಡಿಸೋಜ ಹೇಳಿದರು.
ಮಹಾಲಕ್ಷ್ಮೀ ಬ್ಯಾಂಕ್ ವಿರುದ್ಧ ಆಧಾರ ರಹಿತ ಆರೋಪದ ಬಗ್ಗೆ ಯಾವುದೇ ತನಿಖೆಗೆ ಸ್ವಾಗತ : ಯಶ್ಪಾಲ್ ಸುವರ್ಣ
ಉಡುಪಿ : ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ಮಾಡಿರುವ ಎಲ್ಲಾ ಆರೋಪದ ಬಗ್ಗೆ ಯಾವುದೇ ರೀತಿಯ ತನಿಖೆಗೆ ಸ್ವಾಗತ ಎಂದು ಬ್ಯಾಂಕಿನ ಅಧ್ಯಕ್ಷ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಬ್ಯಾಂಕಿನ ಘನತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ನಿರಂತರವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾಧ್ಯಮಗಳ ಮುಂದೆ ಸುಳ್ಳು ಮಾಹಿತಿ ನೀಡುತ್ತಿದ್ದು, ಬ್ಯಾಂಕಿನ ಆಡಳಿತ ಮಂಡಳಿ ಈಗಾಗಲೇ ಕಾನೂನು ಕ್ರಮಕ್ಕೆ ಮುಂದಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಠಿಣ ಕ್ರಮಕ್ಕೆ ಆಗ್ರಹಿಸಿ ದೂರು ನೀಡಲಾಗಿದೆ.
ಬ್ಯಾಂಕಿನ ವಿರುದ್ಧ ಆರೋಪ ಮಾಡುತ್ತಿರುವ ವ್ಯಕ್ತಿಗಳು ಬ್ಯಾಂಕಿನಲ್ಲಿ ಸಾಲ ಪಡೆದು ಸುಸ್ತಿದಾರರಾಗಿರುವ ಬಗ್ಗೆ ಸಹಕಾರಿ ನ್ಯಾಯಾಲಯದಲ್ಲಿ ಸಾಲ ಮರುಪಾವತಿಗೆ ಆದೇಶ ನೀಡಿದ್ದು ತಪ್ಪಿದಲ್ಲಿ ಆಸ್ತಿ ಜಪ್ತಿಗೂ ಸೂಚನೆ ನೀಡಿದೆ.
ಮಹಾಲಕ್ಷ್ಮೀ ಬ್ಯಾಂಕಿನ ಏಳಿಗೆಯನ್ನು ಸಹಿಸದೆ, ವೈಯುಕ್ತಿಕ ತೇಜೋವಧೆಯ ದುರುದ್ದೇಶದಿಂದ ಬ್ಯಾಂಕಿನ ವಿರುದ್ಧ ಆಧಾರರಹಿತ ಆರೋಪದ ಮೂಲಕ ಅವರ ಹತಾಶ ಮನಸ್ಥಿತಿ ಬಯಲಾಗಿದೆ. ಈ ಬಗ್ಗೆ ಶನಿವಾರ ಬ್ಯಾಂಕಿನ ವತಿಯಿಂದ ಪತ್ರಿಕಾಗೋಷ್ಟಿ ನಡೆಸಿ ಎಲ್ಲಾ ದಾಖಲೆಗಳನ್ನು ಒದಗಿಸಿ ಮಾಹಿತಿ ನೀಡಲಾಗುವುದು.
ಮಹಾಲಕ್ಷ್ಮೀ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಆರ್ಬಿಐ ನಿಯಮಾವಳಿಯಂತೆ ಸಹಕಾರಿ ತತ್ವದಡಿ ಪಾರದರ್ಶಕ ರೀತಿಯಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದ್ದು, ಈ ಬಗ್ಗೆ ರಾಜ್ಯ ಸಹಕಾರ ಇಲಾಖೆ ಅಥವಾ ಇ.ಡಿ, ಸಿ.ಬಿ.ಐ. ಯಾವುದೇ ಉನ್ನತ ಮಟ್ಟದ ತನಿಖೆಗೂ ಸಿದ್ಧವಿದೆ ಹಾಗೂ ಬ್ಯಾಂಕಿನ ವಿರುದ್ಧ ಆಧಾರರಹಿತ ಆರೋಪ ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ರೀತಿಯಲ್ಲೇ ಉತ್ತರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮಹಾಲಕ್ಷ್ಮಿ ಬ್ಯಾಂಕ್ನಲ್ಲಿ ಕೋಟ್ಯಂತರ ರೂ. ಅವ್ಯವಹಾರ – ಮಾಜಿ ಶಾಸಕ ರಘುಪತಿ ಭಟ್ ಆರೋಪ
ಉಡುಪಿ : ಮಹಾಲಕ್ಷ್ಮಿ ಬ್ಯಾಂಕ್ನ ಮಲ್ಪೆ ಬ್ರಾಂಚ್ನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು ಅದನ್ನು ಎಸ್ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಘುಪತಿ ಭಟ್ ವಂಚನೆಗೊಳಗಾದ ನೂರು ಮಂದಿ ಜೊತೆಗೆ ಸುದ್ದಿಗೋಷ್ಠಿ ನಡೆಸಿದರು. ಬ್ಯಾಂಕ್ನಲ್ಲಿ ಮೂರು ರೀತಿಯ ಅಕ್ರಮ ನಡೆದಿದೆ. ಮೊದಲನೆಯದಾಗಿ ಹಲವು ಮಂದಿಗೆ ಬ್ಯಾಂಕ್ನವರೇ ಅವರ ಮನೆಗೆ ತೆರಳಿ 20, 30 ಸಾವಿರ ಸಾಲ ನೀಡಿದ್ದಾರೆ. ಈಗ ಬ್ಯಾಂಕ್ನಿಂದ ಎರಡು ಲಕ್ಷ ಕಟ್ಟಬೇಕು ಎಂಬ ನೋಟೀಸ್ ನೀಡಲಾಗಿದೆ. ಇನ್ನೂ ಕೆಲವರಿಗೆ ಮೀನುಗಾರಿಕೆಗಾಗಿ ಸಾಲದ ಹೆಸರಿನಲ್ಲಿ ಸಹಿ ಪಡೆಯಲಾಗಿದ್ದು ಅವರಿಗೆ ಯಾವುದೇ ಹಣ ನೀಡಿಲ್ಲ. ಇದೇ ರೀತಿ ಹಲವಾರು ರೀತಿಯಲ್ಲಿ ಬ್ಯಾಂಕ್ನವರು ಕೋಟ್ಯಂತರ ರೂ. ಅಕ್ರಮ ಎಸಗಿದ್ದಾರೆ. ಸಂತ್ರಸ್ತರು ಈಗ ತಮ್ಮನ್ನು ಸಂಪರ್ಕಿಸಿದ್ದು ನ್ಯಾಯಕ್ಕಾಗಿ ಒತ್ತಾಯ ಮಾಡಿದ್ದಾರೆ. ಅವರ ದನಿಯಾಗಿ ನಾನು ಅವರ ಜೊತೆ ನಿಂತಿದ್ದೇನೆ. ಸರಕಾರ ಮಹಾಲಕ್ಷ್ಮಿ ಬ್ಯಾಂಕ್ ವಿರುದ್ಧ ಎಸ್ಐಟಿ ತನಿಖೆ ನಡೆಸುವ ಮೂಲಕ ನೊಂದವರಿಗೆ ನ್ಯಾಯ ಒದಗಿಸಿಕೊಡಬೇಕು ಮತ್ತು ಬ್ಯಾಂಕ್ನವರು ಆಣೆ ಪ್ರಮಾಣಕ್ಕೆ ಆಹ್ವಾನ ನೀಡಿದ್ದು ತಾವದಕ್ಕೆ ಸಿದ್ಧ ಎಂದು ರಘುಪತಿ ಭಟ್ ಅವರು ಹೇಳಿದ್ದಾರೆ.
ರಘುಪತಿ ಭಟ್ ಜೊತೆಗೆ ಬ್ಯಾಂಕ್ನಿಂದ ನೊಂದ ಸುಮಾರು ನೂರು ಮಂದಿ ಜನರು ಉಪಸ್ಥಿತರಿದ್ದು ತಮ್ಮ ಸಮಸ್ಯೆಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡರು.
ಹರಿಪ್ರಸಾದ್ ಹೇಳಿಕೆಯಿಂದ ಇಡೀ ರಾಷ್ಟ್ರಕ್ಕೆ ನೋವಾಗಿದೆ, ಅವರು ಪೇಜಾವರರ ಕ್ಷಮೆ ಕೇಳಲಿ – ಸಂಸದ ಕೋಟ
ಉಡುಪಿ : ಪೇಜಾವರ ಶ್ರೀಗಳನ್ನು ಟೀಕಿಸಿದ ಬಿಕೆ ಹರಿಪ್ರಸಾದ್ ಅವರು ಶ್ರೀಗಳ ಕ್ಷಮೆ ಕೇಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಹರಿಪ್ರಸಾದ್ ಅವರು ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡಿದ್ದು ಹಿಂದೂ ಸಮಾಜಕ್ಕೆ ನೋವು ತಂದಿದೆ. ಯಾವುದೇ ಜಾತಿ ವರ್ಗ ಅಲ್ಲ, ಇಡೀ ಹಿಂದೂ ಸಮುದಾಯಕ್ಕೆ ನೋವಾಗಿದೆ.
ಪೇಜಾವರ ವಿಶ್ವೇಶ ತೀರ್ಥರು ಪ್ರಥಮ ಬಾರಿಗೆ ಪರಿಶಿಷ್ಟರ ಕೇರಿಗಳಿಗೆ ಭೇಟಿ ಕೊಟ್ಟವರು. ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದವರು, ಜನಾಂದೋಲನ ಮಾಡಿದವರು. ವಿಶ್ವ ಪ್ರಸನ್ನರಿಗೆ ರಾಷ್ಟ್ರಮಟ್ಟದಲ್ಲಿ ಗೌರವ ಇದೆ. ರಾಮಮಂದಿರ ಉದ್ಘಾಟನೆ ವೇಳೆ ಕೇಂದ್ರ ಸರ್ಕಾರ ಬಹಳ ಗೌರವದಿಂದ ನಡೆಸಿಕೊಂಡಿದೆ. ಅಂತಹ ಸರ್ವ ಶ್ರೇಷ್ಠ ಸಂತನ ಬಗ್ಗೆ ಲಘುವಾಗಿ ಮಾತನಾಡಿದ್ದೀರಿ. ಹರಿಪ್ರಸಾದ್ ಸ್ವಲ್ಪ ಗಡಿಬಿಡಿ ಮನುಷ್ಯ, ಗಡಿಬಿಡಿಯಲ್ಲಿ ಮಾತನಾಡಿದರೆ ತಕ್ಷಣ ಪೇಜಾವರ ಶ್ರೀಗಳ ಕ್ಷಮೆ ಕೇಳಿ. ಇಡೀ ರಾಷ್ಟ್ರ ಹರಿಪ್ರಸಾದ್ ಮಾತಿನಿಂದ ನೋವುಪಟ್ಟಿದೆ ಎಂದು ಹೇಳಿದ್ದಾರೆ.
ಮಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಉಸ್ತುವಾರಿಗಳನ್ನಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಾದ ವಿನಯ್ ಕುಲಕರ್ಣಿ ಮತ್ತು ಮಂಜುನಾಥ ಭಂಡಾರಿ ಅವರನ್ನು ನೇಮಕ ಮಾಡಲಾಗಿದ್ದು ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ HUDA ಅಧ್ಯಕ್ಷರಾದ ಶಾಕಿರ್ ಸನದಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ರ್ಶಿ ವಿಜಯ್ ಮತ್ತಿಕಟ್ಟಿ ಅವರು ಹುಬ್ಬಳ್ಳಿಯಲ್ಲಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚನಾವಣೆಯ ಬಗ್ಗೆ ಚರ್ಚೆ ನಡೆಸಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಾಲರಾಜ್ ನಾಯ್ಕ್ ಮತ್ತು ಸ್ಥಳೀಯ ಕಾಂಗ್ರೆಸ್ ಪಕ್ಷದ ನಾಯಕರುಗಳು ಉಪಸ್ಥಿತರಿದ್ದರು.
ಇಷ್ಟು ದಿನ ಓಲೈಕೆ ರಾಜಕಾರಣಕ್ಕಾಗಿ ಹಿಂದೂಗಳನ್ನು ಕಡೆಗಣಿಸುತ್ತಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಲ್ಯಾಂಡ್ ಜಿಹಾದ್ ಮೂಲಕ ಸಾವಿರಾರು ಅನ್ನದಾತರ ಸಾವಿರಾರು ಎಕರೆ ಭೂಮಿಯನ್ನು ಕಿತ್ತುಕೊಂಡು ವಕ್ಫ್ ಆಸ್ತಿ ಎಂದು ಘೋಷಿಸಲು ಹುನ್ನಾರ ನಡೆಸಿರುವುದು ಅತ್ಯಂತ ಖಂಡನೀಯವೆಂದು ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಲತಲಾಂತರಗಳಿಂದ ತಮ್ಮ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬಂದಿದ್ದ ರೈತರಿಗೆ, ವಕ್ಫ್ ಮಂಡಳಿ ರಾಜ್ಯ ಸರ್ಕಾರದ ಬೆಂಬಲದಿಂದ ಏಕಾಏಕಿ ನೋಟಿಸ್ ನೀಡಿ ಸುಮಾರು 15 ಸಾವಿರ ಎಕರೆ ಭೂಮಿ ಕಬಳಿಸುವ ಹುನ್ನಾರ ನಡೆಸಿರುವುದು ಅಕ್ಷಮ್ಯ. ತಮಿಳುನಾಡು, ಬಿಹಾರದಂತಹ ರಾಜ್ಯಗಳಲ್ಲಿ ಇಂತಹ ಅನ್ಯಾಯವನ್ನು ಕಾಣುತ್ತಿದ್ದೆವು. ಇದೀಗ ನಮ್ಮ ರಾಜ್ಯದಲ್ಲಿಯೂ ಇದು ವ್ಯಾಪಿಸಿದ್ದು, ನಮ್ಮ ಜಿಲ್ಲೆಗೂ ಬರುವ ದಿನಗಳು ದೂರವಿಲ್ಲ. ರೈತರ ಭೂಮಿಗೆ ಕನ್ನ ಹಾಕಿ, ಅವರ ಬದುಕನ್ನು ಕಸಿದುಕೊಳ್ಳುತ್ತಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ ಅವರ ಶಾಪ ತಟ್ಟದೇ ಇರದು. ರಾಜ್ಯ ಬಿಜೆಪಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಹೋರಾಟ ನಡೆಸಿಯಾದರೂ ಸರಿ, ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷವು ಕೇವಲ ತನ್ನ ಓಟ್ ಬ್ಯಾಂಕ್ಗಾಗಿ ವಕ್ಫ್ ಕಾಯ್ದೆ ಎಂಬ ನಿರಂಕುಶ ಕಾಯ್ದೆಯನ್ನು ತಂದು ದೇಶದಲ್ಲಿ ಗಂಡಾಂತರ ಸೃಷ್ಟಿಸಿತ್ತು. ಇದೀಗ ದೇಶದ ಹಿತಕ್ಕಾಗಿ ಆ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರದ ನರೇಂದ್ರ ಮೋದಿಯವರ ಸರಕಾರ ಪ್ರಸ್ತಾವಿಸಿದ್ದು ಆ ನಿಟ್ಟಿನಲ್ಲಿ ಅಗತ್ಯ ಎಲ್ಲ ಕಾರ್ಯಗಳು ಪ್ರಗತಿಯಲ್ಲಿವೆ. ಮುಂಬರುವ ದಿನಗಳಲ್ಲಿ ತಿದ್ದುಪಡಿ ಪ್ರಸ್ತಾವನೆ ಅಂಗೀಕಾರಗೊಳ್ಳುವ ಮೊದಲು ತುಘಲಕ್ ದರ್ಬಾರ್ ಮೂಲಕ ಸಾಧ್ಯವಾದಷ್ಟು ರೈತರ, ಹಿಂದುಳಿದವರ, ದಲಿತರ, ದೇವಸ್ಥಾನಗಳ ಭೂಮಿಯನ್ನು ಕಬಳಿಸಿ ವಕ್ಫ್ ವಶಕ್ಕೆ ನೀಡಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ ಎಂದು ಶಾಸಕರು ಆರೋಪಿಸಿದರು.