ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ, ಉಡುಪಿ ಶ್ರೀ ಪುತ್ತಿಗೆ ವಿಶ್ವ ಗೀತಾ ಪರ್ಯಾಯ 2024-2026ರ ಶ್ರೀ ಕೃಷ್ಣ ಮಠದ ಮದ್ವ ಮಂಟಪದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರ ಭಕ್ತರಾದ ಡಲ್ಲಾಸ್ ಶ್ರೀ ಕೃಷ್ಣ ವೃಂದಾವನದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸವಿತಾ ಹಾಗೂ ಶೀ ಪ್ರಮೋದ್ ದಂಪತಿಗಳ ಸುಪುತ್ರಿಯಾದ ಕು. ಅಮೃತ ಇವರಿಂದ ಇವರಿಂದ ವೀಣಾ ವಾದನ ಕಾರ್ಯಕ್ರಮ ನೆರವೇರಿತು.
Music, Art, Culture
ಸ್ವಾತಂತ್ರ್ಯ ಹೋರಾಟಗಾರರಾಗಿ, ಹರಿದಾಸರಾಗಿ, ಯಕ್ಷಗಾನದ ನವಯುಗದ ಪ್ರವರ್ತಕರಾದ ಕೀರ್ತಿಶೇಷ ಮಲ್ಪೆ ಶಂಕರನಾರಾಯಣ ಸಾಮಗರ ಜೀವನ ದರ್ಶನವನ್ನು ಚಿತ್ರಿಸುವ, ದಿನೇಶ ಉಪ್ಪೂರ ವಿರಚಿತ, “ದೊಡ್ಡ ಸಾಮಗರ ನಾಲ್ಮೊಗ” ಗ್ರಂಥ ಉಡುಪಿಯ ಯಕ್ಷಗಾನ ಕಲಾರಂಗದ ನೂತನ ಐವೈಸಿ ಸಭಾಗ್ರಹದಲ್ಲಿ ಜೂನ್ 29ನೇ ಶನಿವಾರ ಮಧ್ಯಾಹ್ನ 3 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.
ಕಾಸರಗೋಡಿನ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಪುಸ್ತಕವನ್ನು ಅನಾವರಣಗೊಳಿಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲದ ಮಾಹೆಯ ಸಹಕುಲಾಧಿಪತಿಗಳಾದ ಡಾ. ಹೆಚ್ ಎಸ್ ಬಲ್ಲಾಳರು ವಹಿಸಿಕೊಳ್ಳಲಿದ್ದು ಶುಭಾಶಂಸನೆಯನ್ನು ಸಾಮಗರ ಸಹಕಲಾವಿದರಾದ ಡಾ. ಪ್ರಭಾಕರ ಜೋಶಿಯವರು ಮತ್ತು ಪುಸ್ತಕ ಪರಿಚಯವನ್ನು ಪ್ರೊ ಮುರಳೀಧರ ಉಪಾಧ್ಯ ಹಿರಿಯಡ್ಕ ಮಾಡಲಿರುವರು. ಮುಖ್ಯ ಅಭ್ಯಾಗತರಾಗಿ ಶ್ರೀ ಪ್ರಮೋದ್ ಮಧ್ವರಾಜ್ (ಮಾಜಿಸಚಿವರು), ಡಾ. ನಾರಾಯಣ ಸಭಾಹಿತ (ಸಹಕುಲಾಧಿಪತಿಗಳು ಮಾಹೆ), ಪ್ರೊ ನೀತಾ ಇನಾಂದಾರ್ (ಪ್ರಧಾನ ಸಂಪಾದಕರು, ಮಣಿಪಾಲ ಯುನಿವರ್ಸಲ್ ಪ್ರೆಸ್), ಹಾಗೂ ಶ್ರೀ ಪ್ರದೀಪ ಕುಮಾರ್ ಕಲ್ಕೂರ್ ( ೦ಅಧ್ಯಕ್ಷರು ಕಸಾಪ ದ.ಕ.) ಮತ್ತು ಡಾ. ಕೋಳ್ಯೂರು ರಾಮಚಂದ್ರ ರಾವ್ ಭಾಗವಹಿಸಲಿರುವರು.
ಕಾರ್ಯಕ್ರಮದ ಬಳಿಕ ಯಕ್ಷಗಾನ ತಾಳಮದ್ದಳೆ – “ಶಲ್ಯ ಸಾರಥ್ಯ”ವನ್ನು ಪ್ರಸಿದ್ಧ ಕಲಾವಿದರಾದ ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯಕೃಷ್ಣ ಪದ್ಯಾಣ, ಪುತ್ತಿಗೆ ಕೌಶಿಕ್ ರಾವ್, ಡಾ. ಪ್ರಭಾಕರ ಜೋಶಿ, ಸರ್ಪಂಗಳ ಈಶ್ವರ ಭಟ್, ಮತ್ತು ವಿ|| ಹಿರಣ್ಯ ವೆಂಕಟೇಶ ಭಟ್ ಇವರು ನಡೆಸಿಕೊಡಲಿರುವರು.
ಕಲಾಭಿಮಾನಿಗಳೆಲ್ಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ, ಸಂಯೋಜಕರಾದ ಎಂ. ಎಲ್. ಸಾಮಗರು ವಿನಂತಿಸಿಕೊಂಡಿದ್ದಾರೆ.

ತೆಕ್ಕಟ್ಟೆ : ತೆಕ್ಕಟ್ಟೆಯ ಹಯಗ್ರೀವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಶಸ್ವೀ ಕಲಾವೃಂದದ ಸಹಕಾರದೊಂದಿಗೆ ಯಕ್ಷಾಂತರಂಗ-ವ್ಯವಸಾಯೀ ಯಕ್ಷ ತಂಡದ ಯಕ್ಷ ದುಂದುಭಿ-2024ರಲ್ಲಿ ‘ಕಾರಂತ ಯಕ್ಷಾಂತರoಗ ಪ್ರಶಸ್ತಿ ಪ್ರದಾನ’ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ “ಹಿರಿಯರಾಗಿ ಸಾಕಷ್ಟು ಅನುಭವವುಳ್ಳ ಕೃಷ್ಣಮೂರ್ತಿ ಉರಾಳರು ಅನುಭವೀ ಕಲಾವಿದರ ತಂಡವನ್ನು ಕಟ್ಟಿಕೊಂಡು ‘ಯಕ್ಷಾಂತರಂಗ’ ಸಂಘಟನೆಯ ಮೂಲಕ ಸಾಂಪ್ರದಾಯಿಕ ಯಕ್ಷ ನಡೆಯನ್ನೇ ಸಾರ್ವತ್ರಿಕವಾಗಿ ಮತ್ತೆ ಮತ್ತೆ ನೆನಪಿಸುತ್ತಾ ಸಮಾಜದಲ್ಲಿ ಪ್ರಶಂಸೆಗೆ ಪಾತ್ರವಾಗುವಂತೆ ಮಾಡಿದ್ದಾರೆ. ಸಂಸ್ಥೆಯು ಮತ್ತೆ ಮತ್ತೆ ಸಾಂಸ್ಕೃತಿಕವಾಗಿ ಬೆಳಗುತ್ತಾ ಇನ್ನಷ್ಟು ಕಾಲ ಕಾಂತಿಯನ್ನು ನೀಡಲಿ.” ಎಂದು ಹಾರೈಸಿದರು.
ವೇದಿಕೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರನ್ನು ಗೌರವಿಸಿ ಅಭಿನಂದಿಸಲಾಯಿತು. ಅಭಿನಂದನೆಯನ್ನು ಸ್ವೀಕರಿಸಿದ ಡಾ. ತಲ್ಲೂರು ಸಂಸ್ಥೆಗೆ ಶುಭ ಹಾರೈಸಿದರು.
ಅಭಿನಂದನಾ ನುಡಿಗಳನ್ನಾಡಿದ ಖ್ಯಾತ ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು “ಯಕ್ಷಗಾನದ ಸರ್ವಾಂಗವನ್ನು ಬಲ್ಲ ಅನೇಕರ ಪರಂಪರೆಯ ಕೊಂಡಿ ಬಡಗು ತಿಟ್ಟಿನ ಹಿರಿಯ ಭಾಗವತ ಸಾಧಕ ಶ್ರೇಷ್ಠರು ಹೆರೆಂಜಾಲು ಗೋಪಾಲ ಗಾಣಿಗರು. ಯಕ್ಷರಂಗದಲ್ಲಿ ಹಂತ ಹಂತವಾಗಿ ಮೇಲೆ ಬಂದ ಗಾಣಿಗರು ಭಾಗವತಿಗೆ ಕಲಿತು ಮೇಳ ಸೇರಿಕೊಂಡವರು. ಮರವಂತೆಯ ಭೋರ್ಗೆರೆಯುವ ಕಡಲಿನ ಭಾಗವತರಾದ ನರಸಿಂಹ ದಾಸರ ಒಡನಾಟಿಕೆಯನ್ನು ಹೊಂದಿ ಸಾರ್ಥಕ್ಯವನ್ನು ಕಂಡುಕೊಂಡವರು. ಸಾಮಾಜಿಕ, ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಂಗಗಳ ಮೂರು ಘಟಕದಲ್ಲಿಯೂ ತನ್ನ ಛಾಪನ್ನು ಮೂಡಿಸಿದ ಹೆಗ್ಗಳಿಕೆ ಹೆರೆಂಜಾಲರದ್ದು. ‘ನಾಚುತ ನುಡಿದನು ಆ ಕ್ಷಣಪೂರ್ವನು | ಓ ಚೆಲುವೆ ನೀನ್ಯಾರೆನುತಾ’ ಎನ್ನುವ ಪದ್ಯ ಹೆರೆಂಜಾಲರ ಕಂಠದಲ್ಲಿ ಸುಶ್ರಾವ್ಯವಾಗಿ ಬರುತ್ತಿದ್ದಾಗ ಹಿರಿಯ ಪ್ರಸಂಗಕರ್ತ ಡಾ. ವೈ. ಚಂದ್ರಶೇಖರ ಶೆಟ್ಟಿಯವರು ಯಾವಾಗಲೂ ಮನದುಂಬಿ ಪ್ರಶಂಸಿಸುತ್ತಿದ್ದರು. ಕವಿಗೆ ಹಾಡುಗಾರಿಕೆಯಿಂದ ಸಂತೃಪ್ತಿಯನ್ನು ತಂದೊದಗಿಸಿದ ಕಲಾವಿದ ಹೆರೆಂಜಾಲರು. ಮುಮ್ಮೇಳ ಕಲಾವಿದರು ಹಾಗೂ ಹಿಮ್ಮೇಳ ಕಲಾವಿದರೂ ಗೋಪಾಲ ಗಾಣಿಗರೊಂದಿಗಿನ ರಂಗ ಸುಖವನ್ನು ಮತ್ತೆ ಮತ್ತೆ ನೆನಪಿಸಿ ಅನುಭವಿಸುವ ಪ್ರಶಂನೆಯ ನುಡಿಗೆ ಪಾತ್ರರಾದವರು ಹೆರೆಂಜಾಲರು.” ಎಂದರು.
ಈ ಸಂದರ್ಭದಲ್ಲಿ ವಿಜಯಾ ಬ್ಯಾಂಕಿನ ನಿವೃತ್ತ ಪ್ರಭಂದಕರಾದ ಭುವನಪ್ರಸಾದ್ ಹೆಗ್ಡೆ, ಪ್ರೊ. ಸಿ. ಉಪೇಂದ್ರ ಸೋಮಯಾಜಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ಸ್ಥಾಪಕ ವಿಶ್ವನಾಥ ಶೆಣೈ ಉಡುಪಿ, ಮಣೂರು ಸುಬ್ರಾಯ ಆಚಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೃಷ್ಣಮೂರ್ತಿ ಉರಾಳರು ಸ್ವಾಗತಿಸಿ, ಕೃಷ್ಣಮೂರ್ತಿ ಬ್ರಹ್ಮಾವರ ಕೃತಜ್ಞತಾ ನುಡಿಗಳನ್ನಾಡಿದರು. ಸಭಾಕಾರ್ಯಕ್ರಮದ ಬಳಿಕ ಯಕ್ಷಾಂತರಂಗದ ಕಲಾವಿದರಿಂದ ಯಕ್ಷಗಾನ ಪ್ರಸಂಗ ‘ಶರಸೇತುಬಂಧ ಮತ್ತು ಸುಭದ್ರಾ ಕಲ್ಯಾಣ’ ರಂಗದಲ್ಲಿ ಪ್ರದರ್ಶನಗೊಂಡಿತು.
ಶ್ರೀ ಅದಮಾರು ಮಠದ ಆಶ್ರಯದಲ್ಲಿ ಎನ್.ಎಸ್. ಡಿ. ವಾರಣಾಸಿ ವಿದ್ಯಾರ್ಥಿಗಳಿಂದ ಪರಮ ಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಗುರು ದಕ್ಷಿಣೆ ಹಿಂದಿ ಯಕ್ಷಗಾನ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ ಭಾಗವಹಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗಣ್ಯರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ತಲ್ಲೂರು ಶಿವರಾಮ ಶೆಟ್ಟಿ, ಡಾ. ಭಾಸ್ಕರಾನಂದ ಕುಮಾರ್, ಶ್ರೀ ಪ್ರವೀಣ್ ಕುಂಜನ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಶ್ರೀ ಪೂರ್ಣಪ್ರಜ್ಞ ಯಕ್ಷಗಾನ ಗುರುಕುಲ ಮತ್ತು ಯಕ್ಷಸಂಜೀವ ಯಕ್ಷಗಾನ ಕೇಂದ್ರ ಅರ್ಪಿಸುವ
N.S.D. ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ
|ಏಕಲವ್ಯ|
ಯಕ್ಷಗಾನ ಪ್ರಯೋಗ
ನಿರ್ದೇಶನ : ಗುರು ಸಂಜೀವ ಸುವರ್ಣ
ಪ್ರಸಂಗ ರಚನೆ : ಹೊಸ್ತೋಟ ಮಂಜುನಾಥ ಭಗವತ್
ಹಿಂದಿ ಅನುವಾದ : ಪ್ರಭಾತ ಪಾಟಿಲ್ | ಶೋಭಾ ಆರ್ ತಂತ್ರಿ
26-5-2024, 6:00ಗೆ
ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪೈಂಟ್, ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್, ಉಡುಪಿ.

ಕಾಟಿಪಳ್ಳದ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯಲ್ಲಿ ‘ಸಾಹಿತ್ಯ ಸಿರಿ’ ಕಾರ್ಯಕ್ರಮ
ಸುರತ್ಕಲ್ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ, ಸುರತ್ಕಲ್ ಹೋಬಳಿ ಘಟಕದ ಆಶ್ರಯದಲ್ಲಿ ‘ಸಾಹಿತ್ಯ ಸಿರಿ’ ಕಾರ್ಯಕ್ರಮವು ದಿನಾಂಕ 22-06-2024 ರಂದು ಕಾಟಿಪಳ್ಳದ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ‘ಅಮೃತ ಪ್ರಕಾಶ’ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಪಿ. ದಯಾಕರ್ ಮಾತನಾಡಿ “ಇಂತಹ ಸಾಹಿತ್ಯದ ಸಂಪತ್ತನ್ನು ಹೆಚ್ಚಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಾ ಇರಲಿ” ಎಂದು ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಸಾಹಿತಿ ಹಾಗೂ ವಾಗ್ಮಿಯಾದ ರೇಮಂಡ್ ಡಿ. ಕುನ್ಹಾ ಭಾಗವಹಿಸಿ ಮಕ್ಕಳಿಗೆ ಕಥೆ ಕಟ್ಟುವ ವಿಧಾನ ಹಾಗೂ ಅವುಗಳು ತೆರೆದುಕೊಳ್ಳುವಂತಹ ಕುತೂಹಲದ ಬಾಗಿಲು ಹೇಗಿರಬೇಕು ಎಂದು ತಿಳಿಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾಹಿತಿ, ಚಿಂತಕ, ವಾಗ್ಮಿ ಹಾಗೂ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ಗಣೇಶ್ ಅಮೀನ್ ಸಂಕಮಾರ್, ಎಂ.ಆರ್.ಪಿ.ಎಲ್. ವಿಶ್ರಾಂತ ಪ್ರಬಂಧಕರಾದ ವೀಣಾ ಶೆಟ್ಟಿ, ತಾಲೂಕು ಕ.ಸಾ.ಪ. ಅಧ್ಯಕ್ಷರಾದ ಮಂಜುನಾಥ ಎಸ್. ರೇವಣ್ಕರ್ ಕಾರ್ಯಕ್ರಮಕ್ಕೆ ಶುಭ ಹಾರೈಸುತ್ತಾ, ಸಾಹಿತ್ಯ ಸತ್ವವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಕ.ಸಾ.ಪ. ಸುರತ್ಕಲ್ ಹೋಬಳಿ ಘಟಕದ ಅಧ್ಯಕ್ಷೆ ಹಾಗೂ ಸಂಸ್ಥೆಯ ಮುಖ್ಯಸ್ಥೆಯಾದ ಶ್ರೀಮತಿ ಗುಣವತಿ ರಮೇಶ್ ಇವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕವಯತ್ರಿ ಅನುರಾಧ ರಾಜೀವ್ ಹಾಗೂ ಲಲಿತ ಪದ್ಮಿನಿಯವರಿಂದ ಸ್ವರಚಿತ ಕವನ ವಾಚನ ಈ ಸಂದರ್ಭದಲ್ಲಿ ನಡೆಯಿತು. ಶ್ರೀ ನಾರಾಯಣ ಗುರು ಸಮೂಹ ಸಂಸ್ಥೆಗಳ ಮುಖ್ಯಸ್ಥರುಗಳು, ಶಿಕ್ಷಕರು ಹಾಗೂ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕ.ಸಾ.ಪ. ಸುರತ್ಕಲ್ ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಹಾಗೂ ಶಿಕ್ಷಕಿ ಅಕ್ಷತಾ ಕೇಶವ್ ನಿರೂಪಿಸಿ, ಶಿಕ್ಷಕಿ ಶ್ರೀಮತಿ ರೇಣುಕಾ ವಂದಿಸಿದರು.
ರಾಷ್ಟ್ರಮಟ್ಟದ ಸುಭಾಷಿತ ಕಂಠಪಾಠ ಸ್ಪರ್ಧೆಯಲ್ಲಿ ವಾಸುದೇವ ತಂತ್ರಿಗೆ ತೃತೀಯ ಸ್ಥಾನ
ಉಡುಪಿ : ಅಯೋಧ್ಯೆಯಲ್ಲಿ ನಡೆದ ರಾಷ್ಟ್ರಮಟ್ಟದ ಸುಭಾಷಿತ ಕಂಠಪಾಠ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದ ಉಡುಪಿ ಎಸ್.ಎಮ್ಎಸ್.ಪಿ.ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ದೇರೆಬೈಲು ವಾಸುದೇವ ತಂತ್ರಿ ಇವರಿಗೆ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಛಂದ್ ಗೆಹ್ಲೋಟ್ ಅವರು ಬೆಂಗಳೂರಿನ ರಾಜಭವನದಲ್ಲಿ ಸನ್ಮಾನಿಸಿದರು.
ಮಾರ್ಚ್ ತಿಂಗಳಿನಲ್ಲಿ ಅಯೋಧ್ಯೆಯಲ್ಲಿ ನಡೆದ ರಾಷ್ಟ್ರಮಟ್ಟದ ಶಾಸ್ತ್ರೀಯ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವು ವಿಜಯವೈಜಯಂತಿ ಪುರಸ್ಕಾರವನ್ನು ಪಡೆದಿತ್ತು. ಕರ್ನಾಟಕದ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಆಗಿರುವ ಅಹಲ್ಯಾ ಶರ್ಮಾ ಇವರು ಈ ಸಂದರ್ಭ ಉಪಸ್ಥಿತರಿದ್ದರು.
ಉಡುಪಿ : ನಮ ತುಳುವೆರ್ ಕಲಾ ಸಂಘಟನೆ (ರಿ) ಮತ್ತು ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ ‘ಸಿಜಿಕೆ ರಂಗಪುರಸ್ಕಾರ’ -2024ಕ್ಕೆ ಮಂಗಳೂರು ಜಿಲ್ಲೆಯಿಂದ ನಾಟಕಕಾರ ನಿರ್ದೇಶಕ ಸಂಘಟಕ ಶಶಿರಾಜ್ ಕಾವೂರು ಆಯ್ಕೆಯಾಗಿರುತ್ತಾರೆ.
ಇವರು ವೃತ್ತಿಯಲ್ಲಿ ನ್ಯಾಯವಾದಿ. ಪ್ರವೃತ್ತಿಯಲ್ಲಿ ನಾಟಕಕಾರ, ನಟ, ಸಂಘಟಕ ಮತ್ತು ಗೀತ ರಚನೆಕಾರ. ಏಕಾದಶಾನನ, ಬರ್ಬರೀಕ, ನೆಮ್ಮದಿ ಅಪಾರ್ಟ್ಮೆಂಟ್ ಫ್ಲಾಟ್ ನಂಬರ್ 252, ಐಸಿಯು, ಸರದಾರನ ಸ್ವಗತ, ಸಂಪಿಗೆನಗರ ಪೋಲೀಸ್ ಸ್ಟೇಶನ್, ದಾಟ್ಸ್ ಆಲ್ ಯುವರ್ ಆನರ್, ಮಿನುಗೆಲೆ ಮಿನುಗೆಲೆ ನಕ್ಷತ್ರ, ವ್ಯೂಹ, ಮರಗಿಡಬಳ್ಳಿ, ಪರಶುರಾಮ, ಛತ್ರಪತಿ ಶಿವಾಜಿ, ನೆಮ್ಮದಿ ಅಪಾರ್ಟ್ಮೆಂಟ್ ಬ್ಲಾಕ್ ಬಿ ಇತ್ಯಾದಿ ನಾಟಕಗಳನ್ನು ಬರೆದಿದ್ದಾರೆ.
ಪೊಸ ಒಸರ್, ಪರ್ಂದ್ ಪೆಲಕಾಯಿ, ಬರ್ಬರೀಕ, ಪಿಲಿತ ಪಂಜ, ಬಿಂಬದುಲಾಯಿದ ಬಿಂಬ, ಮಾಲೆ ಪಟಾಕಿ, ಪುದ್ದು ಕೊಡ್ತರ್ ಇತ್ಯಾದಿ ತುಳು ಪುಸ್ತಕಗಳನ್ನು ರಚಿಸಿದ್ದಾರೆ.
ಧಾರವಾಡದ ದ.ರಾ.ಬೇಂದ್ರೆ ಪ್ರಶಸ್ತಿ, ಫ.ಶಿ.ಭಾಂಡಗೆ ಪ್ರಶಸ್ತಿ, ರಂಗಭೂಮಿ ನಾಟಕ ರಚನಾ ಪ್ರಶಸ್ತಿ, ಎರಡು ಬಾರಿ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎರಡು ಸಲ ರತ್ನವರ್ಮ ಹೆಗ್ಗಡೆ ನಾಟಕ ರಚನಾ ಪ್ರಶಸ್ತಿಗಳನ್ನು ಪಡೆದಿರುತ್ತಾರೆ ಎಂದು ನಮ ತುಳುವೆರ್ ಕಲಾ ಸಂಘಟನೆ (ರಿ) ಇದರ ಅಧ್ಯಕ್ಷರಾದ ಸುಕುಮಾರ್ ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು : ಗೋವಾ ರಾಜ್ಯದ ಉತ್ತರ ಗೋವಾದ ಸತ್ತಾರಿ ತಾಲೂಕಿನ ಸತ್ತಾರಿ ಸಮೀಪ ಇರುವ ಪರ್ಯೆಯ ಪಾಳು ಬಿದ್ದಿರುವ ಭೂಮಿಕಾದೇವಿ ದೇವಾಲಯದ ಎದರು ಒಂದು ಕಲ್ಲಿನ ಸ್ಥಂಭವೊಂದನ್ನು ನಿಲ್ಲಿಸಲಾಗಿದ್ದು ಆ ಸ್ಥಂಭದ ಮೇಲೆ ಬ್ರಾಹ್ಮಿಲಿಪಿಯ ಶಾಸನವೊಂದು ಇತ್ತೀಚಿಗೆ ಪುರಾತತ್ವ ಅನ್ವೇಷಣೆಯನ್ನು ಕೈಗೊಂಡ ಸಂದರ್ಭದಲ್ಲಿ ಕಂಡುಬಂದಿತು. ಈ ಶಾಸನವನ್ನು ಬ್ರಾಹ್ಮಿಲಿಪಿ ಮತ್ತು ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿದೆ. ಕೇವಲ ಎರಡು ಸಾಲಿನ ಈ ಶಾಸನ ಗೋವಾದ ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನದಲ್ಲಿ ಬಹಳ ಮಹತ್ವದ್ದಾಗಿದೆ ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಇತಿಹಾಸ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಈ ಶಾಸನವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ, ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪ್ಸಿಂಗ್ ರಾವ್ ರಾಣೆಯವರು 1993ರಲ್ಲಿ ಈ ಶಾಸನವನ್ನು ಗುರುತಿಸಿ, ಗೋವಾ ರಾಜ್ಯದ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಡಾ. ಪಿ.ಪಿ. ಶಿರೋಡ್ಕರ್ರವರ ಗಮನಕ್ಕೆ ತಂದಿದ್ದರು. ಆ ಶಾಸನವನ್ನು ಅಧ್ಯಯನ ಮಾಡಿದ ಶಿರೋಡ್ಕರ್ರವರು ಅವೈಜ್ಞಾನಿಕ ಶಾಸನ ಪಡಿಯಚ್ಚಿನಿಂದಾಗಿ ಆ ಸ್ಥಂಭದ ಮೇಲೆ ಕೊರೆಯಲಾಗಿದ್ದ ಎಲ್ಲಾ ಅಕ್ಷರಗಳನ್ನು ಗುರುತಿಸಲು ಸಾದ್ಯವಾಗದೆ ಅಪೂರ್ಣ ಪಠ್ಯವೊಂದನ್ನು ಗೋವಾದ ಸ್ಥಳೀಯ ನವೆ ಪರ್ವ ಎಂಬ ಪತ್ರಿಕೆಯಲ್ಲಿ ಒಂದು ಕಿರು ಬರಹವನ್ನು ಪ್ರಕಟಿಸಿದ್ದರು. ಅವರ ಓದಿನ ಪಠ್ಯವನ್ನು ಶಾಸನದೊಂದಿಗೆ ಮರು ಪರಿಶೀಲಿಸಿದಾಗ ಅದು ಸಂಪೂರ್ಣ ದೋಷಪೂರಿತವಾಗಿದೆ ಎಂದು ಕಂಡುಬಂದಿತು ಎಂದು ಅವರು ಹೇಳಿದ್ದಾರೆ.
ಶಾಸನದ ಮಹತ್ವ :
ಶಾಸನದ ಮರುಪರಿಶೀಲನೆಯಿಂದ, ಪ್ರಾಚೀನ ಕಾಲದಲ್ಲಿ ಗೋವಾವನ್ನು ಆಳ್ವಿಕೆ ಮಾಡಿದ ಹೈಹಯ ಎಂಬ ಒಂದು ಹೊಸ ರಾಜಮನೆತನ ಬೆಳಕಿಗೆ ಬಂದಿತು. ಶಾಸನದ ಪ್ರಕಾರ ಧರ್ಮಯಜ್ಞೋ ಎಂಬ ಹೆಸರಿನ ಹೈಹಯ ದೊರೆ ತನ್ನ ಸೈನ್ಯದೊಂದಿಗೆ ಒಂದು ಯಜ್ಞವನ್ನು ನಡೆಸಿದ ಅಪೂರ್ವ ಮಾಹಿತಿಯನ್ನು ಶಾಸನ ಒಳಗೊಂಡಿದೆ ಹಾಗೂ ಶಾಸನೋಕ್ತ ಈ ಸ್ಥಂಭವೇ ಯೂಪಸ್ಥಂಭವಾಗಿದೆ. ಲಿಪಿ ಲಕ್ಷಣದ ಆಧಾರದ ಮೇಲೆ ಶಾಸನದ ಕಾಲವನ್ನು 4 ಅಥವಾ 5 ನೇ ಶತಮಾನದ ಶಾಸನವೆಂದು ಗುರುತಿಸಲಾಗಿದೆ. ಪರ್ಯೆ ಭೂಮಿಕಾ ದೇವಾಲಯದ ಪ್ರಾಚೀನತೆಯ ಅಧ್ಯಯನ ದೃಷ್ಠಿಯಿಂದ ಈ ಶಾಸನ ಬಹಳ ಮುಖ್ಯ ದಾಖಲೆಯಾಗಿದೆ ಎಂದು ಪ್ರೊ.ಟಿ.ಮುರುಗೇಶಿಯವರು ತಿಳಿಸಿರುತ್ತಾರೆ.
ಹೈಹಯರು ಯಾರು?
ಹೈಹಯರು, ಭಾರತದ ಪುರಾಣಗಳು ಹಾಗೂ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳಲ್ಲಿ ಉಲ್ಲೇಖಿತವಾಗಿರುವ ಐದು ಕುಲಗಳನ್ನು ಒಳಗೊಂಡಿರುವ ಪ್ರಾಚೀನವಾದ ಒಂದು ಒಕ್ಕೂಟ. ವಿತಿಹೋತ್ರ, ಶರ್ಯತ, ಭೋಜ, ಆವಂತಿ ತುಂಡಿಕೇರ ಎಂಬ ಐದು ಹೈಹಯ ಕುಲಗಳನ್ನು ಪುರಾಣಗಳಲ್ಲಿ ಹೆಸರಿಸಲಾಗಿದೆ. ಭೋಜರು ಗೋವಾದಲ್ಲಿ ಆಳ್ವಿಕೆ ನಡೆಸುತ್ತಿದ್ದರು ಎಂಬುದಕ್ಕೆ ಇತರೆ ಐತಿಹಾಸಿಕ ದಾಖಲೆಗಳಿವೆ.
ಈ ಶಾಸನಾಧ್ಯಯನದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಶಾಸನಶಾಸ್ತ್ರ ವಿಭಾಗದ ನಿರ್ದೇಶಕರಾದ ಡಾ. ಮುನಿರತ್ನಂ ರೆಡ್ಡಿ ಅವರಿಗೂ, ಗೋವಾದಲ್ಲಿನ ಪುರಾತತ್ವ ಸರ್ವೇಕ್ಷಣೆಯಲ್ಲಿ ಸಹಕರಿಸಿದ ಡಾ. ರಾಜೇಂದ್ರ ಕೇರ್ಕರ್, ವಿಠೋಭ ಗಾವಡೆ, ಚಂದ್ರಕಾಂತ್ ಔಖಲೆ, ಅಮೈ ಕಿಂಜ್ವಾಡೇಕರ್ ನೆರವು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.