ಉಡುಪಿ : ಶಿವಾನಂದ ಶೆಟ್ಟಿ ಮತ್ತು ಸುಜಾತ ಶೆಟ್ಟಿ ಹೆಬ್ರಿ ಇವರ ಪುತ್ರಿ, ವಿದ್ಯೋದಯ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಉಡುಪಿ ಇದರ ಏಳನೇ ತರಗತಿ ವಿಧ್ಯಾರ್ಥಿನಿ ಹಾಗೂ ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ, ಬಹುಮುಖ ಪ್ರತಿಭೆಯ ಕುಮಾರಿ ಶಿವಾನಿ ಶೆಟ್ಟಿ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಎಸ್ಜಿಎಸ್ ಅಂತರ್ ರಾಷ್ಟ್ರೀಯ ಯೋಗ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಜರುಗಿದ ಅಂತರ್ ರಾಜ್ಯ ಯೋಗಾಸನ ಸ್ಪರ್ಧೆಯಲ್ಲಿ ಉತ್ಕೃಷ್ಟ ಪ್ರದರ್ಶನ ನೀಡಿ ಅಂತರ್ ರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆ ಆಗಿದ್ದಾಳೆ. ಇವಳಿಗೆ ಯೋಗ ತರಬೇತಿಯನ್ನು ಕೆ. ನರೇಂದ್ರ ಕಾಮತ್ ಕಾರ್ಕಳ ಇವರು ನೀಡಿದ್ದಾರೆ.
International
ಅಂತರ್ ರಾಜ್ಯ ಯೋಗಾಸನ ಸ್ಪರ್ಧೆ : ಸುಷ್ಮಾ ಎರ್ಲಪಾಡಿ ಮತ್ತು ಅನನ್ಯ ಹೆರ್ಮುಂಡೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಕಾರ್ಕಳ : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜು. 14ರಂದು ಎಸ್.ಜಿ.ಎಸ್. ಅಂತರ್ ರಾಷ್ಟ್ರೀಯ ಯೋಗ ಸಂಸ್ಥೆಯ ಪ್ರಯೋಜಕತ್ವದಲ್ಲಿ ನಡೆದ ಅಂತರ್ ರಾಜ್ಯ ಯೋಗಾಸನ ಸ್ಪರ್ಧೆಯಲ್ಲಿ ಯರ್ಲಪಾಡಿ ಗ್ರಾಮದ ಸುಷ್ಮಾ ತೆಂಡುಲ್ಕರ್ ಹಾಗೂ ಹೆರ್ಮುಂಡೆ ಗ್ರಾಮದ ಅನನ್ಯ ಉತ್ತಮ 10 ಯೋಗಪಟುಗಳಲ್ಲಿ ಆಯ್ಕೆಯಾಗಿರುತ್ತಾರೆ. ಈ ಮೂಲಕ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರು ಯೋಗ ಗುರುಗಳಾದ ಕೆ. ನರೇಂದ್ರ ಕಾಮತ್ ಮತ್ತು ಅಶೋಕ್ ಅವರಿಂದ ಯೋಗ ತರಬೇತಿ ಪಡೆದಿರುತ್ತಾರೆ.

ಕೋಟ : ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೋಟರಿ ಸಮುದಾಯದಳ ಮೂಡುಗಿಳಿಯಾರು ಮತ್ತು ಸಮುದಾಯ ಆರೋಗ್ಯ ಕೇಂದ್ರ ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಅಂಗನವಾಡಿ ಕೇಂದ್ರ ಹೊನ್ನಾರಿಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ತಾಯಿ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಸೋಮವಾರ ನಡೆಸಲಾಯಿತು.
ಕೋಟ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದೇವಪ್ಪ ಪಟಗಾರ್, ಪಿಎಚ್ಸಿ ಮಂದಾನಾಯಕ್ ಶಿಬಿರವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ವಹಿಸಿದ್ದರು.
ಕ್ಲಬ್ನ ಸದಸ್ಯ ಶರಣಯ್ಯ ಹಿರೇಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಗಂಗಾ ಸ್ವಾಗತಿಸಿದರು. ಕ್ಲಬ್ನ ಪೂರ್ವಾಧ್ಯಕ್ಷ ದೇವಪ್ಪ ಪಟಗಾರ ಕಾರ್ಯಕ್ರಮವನ್ನು ನಿರೂಪಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಹರಿಶ್ಚಂದ್ರ ನಾಯಕ್ ವಂದಿಸಿದರು.
ಮಾಹೆಯ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನ ನಿರ್ದೇಶಕರಾಗಿ ಡಾ. ಚೆರಿಯನ್ ವರ್ಗೀಸ್
ಮಣಿಪಾಲ : ಮಣಿಪಾಲದ ಪ್ರಸನ್ನ ಸ್ಕೂಲ್ ಪಬ್ಲಿಕ್ ಹೆಲ್ತ್ನ ನೂತನ ನಿರ್ದೇಶಕ ಮತ್ತು ಪ್ರಾಧ್ಯಾಪಕರಾಗಿ ಡಾ. ಚೆರಿಯನ್ ವರ್ಗೀಸ್ ಅವರನ್ನು ಮಣಿಪಾಲ್ ಅಕಾಡೆಮಿ ಆಫ್ ಹೆಯರ್ ಎಜುಕೇಶನ್ [ಮಾಹೆ] ನೇಮಕಗೊಳಿಸಿದೆ. ಡಾ. ವರ್ಗೀಸ್ ಅವರು ವಿಶ್ವ ಆರೋಗ್ಯ ಸಂಸ್ಥೆ [ಡಬ್ಲ್ಯುಎಚ್ಒ]ನಲ್ಲಿ ಎರಡು ದಶಕಗಳಿಂದ ಸೇವೆ ಸಲ್ಲಿಸಿದ್ದು, ಅಲ್ಲಿ ಅಸಾಂಕ್ರಾಮಿಕ ರೋಗಗಳು [ನಾನ್ ಕಮ್ಯುನಿಕೇಬಲ್ ಡಿಸೀಸಸ್-ಎಸ್ಸಿಡಿ] ಮತ್ತು ನಿರ್ಧಾರಕಗಳ ವಿಭಾಗದ ಸಂಚಾಲಕರಾಗಿ ಮತ್ತು ನವದೆಹಲಿಯಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿಯಲ್ಲಿ ಆರೋಗ್ಯವಂತ ಜನಸಮುದಾಯ ಮತ್ತು ಅಸಾಂಕ್ರಾಮಿಕ ರೋಗಗಳು [ಹೆಲ್ತಿಯರ್ಪಾಪ್ಯುಲೇಶನ್ಸ್ ಮತ್ತು ನಾನ್ಕಮ್ಯುನಿಕೇಬಲ್ ಡಿಸೀಸಸ್-ಎಚ್ಪಿಎನ್] ವಿಭಾಗದ ಪ್ರಭಾರಿ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು. ಅವರ ಅಧಿಕಾರವಧಿಯಲ್ಲಿ ಹೃದಯ ರಕ್ತನಾಳದ ರೋಗಗಳ ನಿಯಂತ್ರಣ ಕಾರ್ಯಕ್ರಮವಾದ ಸೀಹಾರ್ಟ್ಸ್ [SEAHEARTS] ನ್ನು ಮತ್ತು ಅರ್ಬುದ [ಕ್ಯಾನ್ಸರ್] ರೋಗ ನಿಯಂತ್ರಣವನ್ನು ವೃದ್ಧಿ ಪಡಿಸುವುದಕ್ಕಾಗಿ ಸೀಕ್ಯಾನ್ಗ್ರಿಡ್ [SEACANGRID] ಕಾರ್ಯಕ್ರಮವನ್ನು ಉಪಕ್ರಮಿಸಿದ್ದರು.

ಕೇರಳ ವಿಶ್ವವಿದ್ಯಾನಿಲಯದಲ್ಲಿ 1985 ರಲ್ಲಿ ವೈದ್ಯಕೀಯ ಪದವಿಮುಗಿಸಿರುವ ಡಾ. ವರ್ಗೀಸ್ ವೈದ್ಯಕೀಯ ವಿಕಿರಣ ಚಿಕಿತ್ಸೆ [ಮೆಡಿಕಲ್ ರೇಡಿಯೋಥೆರಪಿ-ಡಿಎಂಆರ್ಟಿ]ಯಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ವಿಕಿರಣಾತ್ಮಕ ಗ್ರಂಥಿ ವಿಜ್ಞಾನ [ರೇಡಿಯೇಶನ್ ಆಂಕಾಲಜಿ]ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಎಂಫಿಲ್ ಪತ್ತು ಫಿನ್ಲೆಂಡ್ನ ಟ್ಯಾಂಪೀರ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್ಡಿ ಪದವಿ ಪಡೆದಿರುವ ಡಾ. ವರ್ಗೀಸ್ 2001 ರಲ್ಲಿ ನೇಶನಲ್ ಅಕಾಡೆಮಿ ಆಫ್ ಮೆಡಿಕಲ್ ಸಾಯನ್ಸಸ್ ಇನ್ ಕ್ಲಿನಿಕಲ್ ಎಪಿಡಿಮಿಯೋಲಜಿ [ಎಂಎನ್ಎಎಂಎಸ್]ಯ ಸದಸ್ಯತನದ ಗೌರವ ಪಡೆದಿದ್ದಾರೆ. 1990 ರಲ್ಲಿ ತಿರುವನಂತಪುರದ ರೀಜನಲ್ ಕ್ಯಾನ್ಸರ್ ಸೆಂಟರ್ನಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿ, 2001 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯನ್ನು ಸೇರಿದರು. ಶೈಕ್ಷಣಿಕ ನಿಯತಕಾಲಿಕೆಗಳಲ್ಲಿ ಸುಮಾರು 90 ಕ್ಕಿಂತಲೂ ಅಧಿಕ ಪ್ರಕಟಣೆಗಳನ್ನು ಹೊಂದಿರುವ ಡಾ. ವರ್ಗೀಸ್ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಮತ್ತು ಫೆಲೋಶಿಪ್ಗಳಿಗೆ ಭಾಜನರಾಗಿದ್ದಾರೆ.
ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ. ಎಂ. ಡಿ. ವೆಂಕಟೇಶ್ ಅವರು ಮಾಹೆ ಬಳಗಕ್ಕೆ ಡಾ. ಚೆರಿಯರ್ ವರ್ಗೀಸ್ ಅವರನ್ನು ಹಾರ್ದಿಕವಾಗಿ ಸ್ವಾಗತಿಸುತ್ತ, ‘ಡಾ. ವರ್ಗೀಸ್ ಅವರ ಅಗಾಧ ಅನುಭವ ಮತ್ತು ಸಾಮುದಾಯಿಕ ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಮಹತ್ತ್ವದ ಕೊಡುಗೆಯು ಪ್ರಸನ್ನ ಸ್ಕೂಲ್ ಪಬ್ಲಿಕ್ ಹೆಲ್ತ್ನ ಶೆಕ್ಷಣಿಕ ಮತ್ತು ಸಂಶೋಧನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲಿದೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಮಾಹೆಯ ಬದ್ಧತೆಯನ್ನು ನಿರಂತರವಾಗಿಸುವಲ್ಲಿ ಡಾ. ವರ್ಗೀಸ್ ಕೈಜೋಡಿಸಲಿದ್ದಾರೆ. ಅಸಾಂಕ್ರಾಮಿಕ ರೋಗಗಳ ನಿಯಂತ್ರಣವೂ ಸೇರಿದಂತೆ ವಿವಿಧ ವಿಭಾಗಳಲ್ಲಿ ಡಾ. ವರ್ಗೀಸ್ ಮಾಡಿರುವ ಮಹತ್ತ್ವದ ಕೆಲಸಗಳು ಮಾಹೆಯ ಅವರ ವೃತ್ತಿಜೀವನಕ್ಕೆ ಪೂರಕವಾಗಲಿದೆ’ ಎಂದರು.
ಆನ್ಲೈನ್ ವಂಚನೆಗೆ ಒಳಗಾಗಿ ಸೌದಿ ಸೆರೆಮನೆಯಲ್ಲಿದ್ದ ಹಳೆಯಂಗಡಿ ಯುವಕ ಮರಳಿ ತಾಯ್ನಾಡಿಗೆ….!
ಮುಲ್ಕಿ : ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಹಳೆಯಂಗಡಿ ನಿವಾಸಿ ರಹೀಂ ಎಂಬವರು ಆನ್ಲೈನ್ ವಂಚಕರ ಬಲೆಗೆ ಸಿಲುಕಿ ಸೌದಿ ಅರೇಬಿಯಾದಲ್ಲಿ ಜೈಲು ಸೇರಿ, ಸಾಮಾಜಿಕ ಕಾರ್ಯಕರ್ತರ ಶ್ರಮದಿಂದ ಅನಿವಾಸಿ ಭಾರತೀಯರೊಬ್ಬರು ಆರೋಪ ಮುಕ್ತರಾಗಿ ವಾಪಸ್ ತಾಯ್ನಾಡಿಗೆ ಮರಳಿದ್ದಾರೆ.
ಸುಮಾರು ಮೂರು ವರ್ಷಗಳಿಂದ ಸೌದಿ ಅರೇಬಿಯಾದ ತಬೂಕ್ ಎಂಬಲ್ಲಿನ ಗ್ರೀಕ್ ಮೂಲದ ಕಂಪೆನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ರಹೀಂ 2022ರ ನವೆಂಬರ್ 15ರಂದು ಅಪರಿಚಿತ ವ್ಯಕ್ತಿಯೋರ್ವನ ಕರೆ ಸ್ವೀಕರಿಸಿದ್ದರು. ಆತ ಇಖಾಮ(ವಾಸ್ತವ್ಯ ಪರವಾನಿಗೆ) ನವೀಕರಿಸಲಿದ್ದು ಮಾಹಿತಿ ನೀಡುವಂತೆ ಸೂಚಿಸಿದ್ದ. ಅದರಂತೆ ಆತ ಇವರ ಮೊಬೈಲ್ ಫೋನ್ಗೆ ಒಟಿಪಿ ಕಳುಹಿಸಿ ಅದನ್ನೂ ಪಡೆದುಕೊಂಡಿದ್ದ ಎನ್ನಲಾಗಿದೆ.
ರಹೀಂ 2023ರ ಸೆಪ್ಟೆಂಬರ್ 30ರಂದು ಊರಿಗೆ ಬರುವ ವೇಳೆ ವಿಮಾನ ನಿಲ್ದಾಣದಲ್ಲಿ ಅವರನ್ನು ಸೌದಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಸುಮಾರು 17 ಸಾವಿರ ಸೌದಿ ರಿಯಾಲ್ ಅಕ್ರಮವಾಗಿ ವರ್ಗಾಯಿಸಿದ ಆರೋಪದಲ್ಲಿ ಕಳೆದ ಒಂಬತ್ತು ತಿಂಗಳಿನಿಂದ ಪೊಲೀಸರ ಕಣ್ಣಾವಲಿನಲಿದ್ದರು. ಈ ವಿಚಾರ ಇತ್ತೀಚೆಗೆ ಹಳೆಯಂಗಡಿಯಲ್ಲಿರುವ ತಮ್ಮ ಮನೆಯವರಿಗೆ ತಿಳಿದಿದ್ದು, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರುರವರನ್ನು ಸಂಪರ್ಕಿಸಿ ಅಳಲು ತೋಡಿಕೊಂಡಿದ್ದರು.
ತಕ್ಷಣ ಕಾರ್ಯ ಪ್ರವೃತ್ತರಾದ ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಸೌದಿ ಅರೇಬಿಯಾದ ಸಾಮಾಜಿಕ ಕಾರ್ಯಕರ್ತ ಮುಲ್ಕಿ ನಿವಾಸಿ ನೌಫಲ್ ಸಮಾಜ ಸೇವಕ ಹಾಗೂ ವಕೀಲ ಪಿ.ಎ.ಹಮೀದ್ ಪಡುಬಿದ್ರೆ ಸಹಾಯದ ಮೂಲಕ ಕಾನೂನು ಹೋರಾಟ ಮಾಡಿ, ಒಂಭತ್ತು ತಿಂಗಳಿಗೂ ಹೆಚ್ಚು ಅವಧಿಯ ತನಿಖೆಯ ನಂತರ ರಹೀಮ್ ನಿರ್ದೋಷಿ ಎಂದು ಬಿಡುಗಡೆಗೊಳಿಸಿದೆ.
ಜೂ.27ರಂದು ರಹೀಂ ತಾಯ್ನಾಡಿಗೆ ಮರಳಿದ್ದಾರೆ. ಘಟನೆಯ ಬಗ್ಗೆ ಮಾತನಾಡಿರುವ ರಹೀಂ, ಅಪರಿಚಿತ ಕರೆಗಳು ಬಂದಾಗ ಯಾವುದೇ ರೀತಿಯ ಖಾಸಗಿ ಮಾಹಿತಿಯನ್ನು ನೀಡದೆ ಜಾಗರೂಕರಾಗಬೇಕು. ವಿದೇಶದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ವಲಸಿಗರಿಗೂ ಈ ಘಟನೆ ಸಂಪೂರ್ಣ ಎಚ್ಚರಿಕೆಯಾಗಲಿ ಎಂದು ಹೇಳಿದ್ದಾರೆ. ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಮಾತನಾಡಿ ಕಷ್ಟಪಟ್ಟು ಲಕ್ಷಾಂತರ ರೂ. ಖರ್ಚು ಮಾಡಿ ವಿದೇಶಗಳಿಗೆ ಹೋಗುತ್ತಾರೆ. ಹಾಗಿರುವಾಗ ವಿಶ್ವದಲ್ಲೇ ವಿವಿಧ ರೀತಿಯ ಆನ್ಲೈನ್ ವಂಚನೆಗಳು ನಡೆಯುತ್ತಿವೆ. ಹಾಗಾಗಿ ಅನಿವಾಸಿ ಭಾರತೀಯರು ಮತ್ತು ಎಲ್ಲರೂ ಜಾಗರೂಕತೆಯಿಂದ ಇರಬೇಕು ಎಂದು ಹೇಳಿದ್ದಾರೆ. ಪ್ರಕರಣದಲ್ಲಿ ಕಷ್ಟಪಟ್ಟು ಶ್ರಮಿಸಿ ತಾನು ಕುಟುಂಬವನ್ನು ಸೇರಲು ಅವಕಾಶ ಮಾಡಿಕೊಟ್ಟ ಸಮಾಜ ಸೇವಕರಾದ ವಕೀಲ ಪಿ.ಎ.ಹಮೀದ್ ಪಡುಬಿದ್ರೆ, ನೌಫಲ್ ಮುಲ್ಕಿ ಮತ್ತು ಅದ್ದಿ ಬೊಳ್ಳೂರು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಉಡುಪಿ : ರೋಟರಿ ಉಡುಪಿ ವತಿಯಿಂದ ವಿದ್ಯಾರ್ಥಿಗಳ ದತ್ತು ಸ್ವೀಕಾರ, ವೈದ್ಯರ ದಿನಾಚರಣೆ, ಪತ್ರಿಕಾ ದಿನಾಚರಣೆ ಮತ್ತು ಲೆಕ್ಕಪರಿಶೋಧಕರ ದಿನಾಚರಣೆ ಕಾರ್ಯಕ್ರಮವು ಮಹಿಷಮರ್ಧಿನಿ ರೋಟರಿ ಸ್ಕೌಟ್ ಸಭಾಂಗಣದಲ್ಲಿ ಜರುಗಿತು.
ರೋಟರಿ ಜಿಲ್ಲಾ ಗವರ್ನರ್ ರೋಟೇರಿಯನ್ ಸಿ.ಎ ದೇವಾನಂದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೋಟರಿ ಉಡುಪಿ ಮಾದರಿ ಕಾರ್ಯ ಮಾಡುತಿದ್ದು, ಈ ಸಾಲಿನ ಪ್ರಥಮ ದಿನದಂದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿ ದಾಖಲೆ ನಿರ್ಮಿಸಿದ್ದಾರೆ ಎಂದರು.
ರೋಟರಿ ಉಡುಪಿ ಅಧ್ಯಕ್ಷ ರೋ। ಗುರುರಾಜ್ ಭಟ್ ಟಿ ಅಧ್ಯಕ್ಷತೆ ವಹಿಸಿದ್ದರು. ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ 21 ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಲಾಯಿತು. ವೈದ್ಯರ ದಿನಾಚರಣೆ, ಲೆಕ್ಕಪರಿಶೋಧಕರ ದಿನಾಚರಣೆ ಮತ್ತು ಪತ್ರಿಕಾ ದಿನಾಚರಣೆ ಅಂಗವಾಗಿ ಡಾ. ಪ್ರಭಾಕರ್ ಮಲ್ಯ, ಸಿಎ ಪ್ರಶಾಂತ್ ಹೊಳ್ಳ, ಪತ್ರಕರ್ತ ಮೋಹನ ಉಡುಪ ಹಂದಾಡಿ ಅವರುಗಳನ್ನು ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ರೋ। ಜಗನ್ನಾಥ ಕೋಟೆ, ರೋ| ಹೇಮಂತ್ ಯು.ಕಾಂತ್, ರೋಟರಿ ಉಡುಪಿಯ ನಿಕಟಪೂರ್ವ ಅಧ್ಯಕ್ಷೆ ರೋ.ದೀಪಾ ಭಂಡಾರಿ ಮತ್ತು ವಿವಿಧ ರೋಟರಿ ಸಂಸ್ಥೆಗಳ ಸದಸ್ಯರುಗಳು, ರೋಟರಿ ಉಡುಪಿಯ ಸದಸ್ಯರುಗಳು ಉಪಸ್ಥಿತರಿದ್ದರು.
ರೊ.ಜಗದೀಶ್ ಕಾಮತ್ ನಿರೂಪಿಸಿ, ವನಿತಾ ಉಪಾಧ್ಯಾಯ ಪ್ರಾರ್ಥಿಸಿದರು. ರೊ.ಶುಭಲಕ್ಷ್ಮೀ, ರೋ.ಸುಬ್ರಹ್ಮಣ್ಯ ಕಾರಂತ್, ರೊ.ಅನಂತರಾಮ್ ಬಲ್ಲಾಳ್ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ವೈಷ್ಣವಿ ಆಚಾರ್ಯ ವಂದಿಸಿದರು.
ಅಂತಾರಾಷ್ಟ್ರೀಯ ಮಾದಕದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನ ಪ್ರಯುಕ್ತ ಕಾರ್ಯಾಗಾರ
ಉಡುಪಿ : ಅಂತಾರಾಷ್ಟ್ರೀಯ ಮಾದಕದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನದ ಪ್ರಯುಕ್ತ ಮಾಹಿತಿ ಕಾರ್ಯಗಾರವು ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗ ಸಭಾಂಗಣದಲ್ಲಿ ನಡೆಯಿತು.

ಈ ವರ್ಷದ ಧ್ಯೇಯ ವಾಕ್ಯ The evidence is clear :invest in prevention ಈ ಮಾಹಿತಿ ಕಾರ್ಯಗಾರವನ್ನು ರೋಟರಿಯನ್ PHF ದೀಪ ಭಂಡಾರಿ ಅಧ್ಯಕ್ಷರು ರೋಟರಿ ಉಡುಪಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರೋಟರಿಯನ್ PHF ಶುಭ ಬಾಶ್ರೀ ಕಾರ್ಯದರ್ಶಿ ರೋಟರಿ ಉಡುಪಿ ಮತ್ತು ಶ್ರೀಮತಿ ಶ್ರೀಲತಾ ಉಪನ್ಯಾಸಕರು ವಿದ್ಯಾರತ್ನ ನರ್ಸಿಂಗ್ ಕಾಲೇಜು ಇವರು ಆಗಮಿಸಿದ್ದರು. ಡಾ ಎ ವಿ ಬಾಳಿಗ ಸಮೂಹ ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಡಾ ಪಿ ವಿ ಭಂಡಾರಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ದೀಪಕ್ ಮಲ್ಯ, ಡಾ. ಮಾನಸ್ ಆರ್ ಮತ್ತು ಆಸ್ಪತ್ರೆಯ ಆಡಳಿತ ಅಧಿಕಾರಿಯಾದ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಉಪಸ್ಥಿತರಿದ್ದರು. ಶ್ರೀ ಸ್ರವಣ್ ವಿದ್ಯಾರ್ಥಿ ಎಂ ವಿ ಶೆಟ್ಟಿ ಕಾಲೇಜ್ ಮಂಗಳೂರು ಇವರು ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು. ಕುಮಾರಿ ಫ್ಲಾವಿಯ ವಿದ್ಯಾರ್ಥಿನಿ ಕ್ರಿಸ್ತು ಜಯಂತಿ ಬೆಂಗಳೂರು ಇವರು ಸ್ವಾಗತಿಸಿದರು. ಸೈಂಟ್ ಆಗ್ನೆಸ್ ಪಿ ಜಿ ಕಾಲೇಜ್ ಮಂಗಳೂರು ಇಲ್ಲಿನ ವಿದ್ಯಾರ್ಥಿನಿಯಾರಾದ ಕುಮಾರಿ ನಿಸರ್ಗ ಇವರು ವಂದಿಸಿದರು. ಹಾಗೂ ಕುಮಾರಿ ರಚನ ರೂತ್ ಡಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಾದಕ ವ್ಯಸನ ಹಾಗೂ ಅದರ ಅಪಾಯದ ಕುರಿತಾಗಿ ಮೂಕಾಭಿನಯ ಮತ್ತು ಪ್ರಹಸನ ಪ್ರದರ್ಶಿಸಿದರು.
ನಂತರ ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ಪಿ.ವಿ. ಭಂಡಾರಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಮಾತನಾಡಿದರು. ಡಾ. ದೀಪಕ್ ಮಲ್ಯ ಮಾದಕ ವ್ಯಸನವನ್ನು ತಡೆಗಟ್ಟುವಲ್ಲಿ ಗೆಳೆಯರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದರು.
120ಕ್ಕೂ ಹೆಚ್ಚಿನ ನರ್ಸಿಂಗ್ ವಿದ್ಯಾರ್ಥಿಗಳು, ಮನಶಾಸ್ತ್ರಜ್ಞ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಮಾಹೆ ಮತ್ತು ಫಿಟ್ವಿಬ್ ಸಹಭಾಗಿತ್ವದಲ್ಲಿ ಮಲ್ಪೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ನ ವಿದ್ಯಾರ್ಥಿ ವ್ಯವಹಾರಗಳ ವಿಭಾಗ [ಡಿಪಾರ್ಟ್ಮೆಂಟ್ ಆಫ್ ಸ್ಟೂಡೆಂಟ್ ಅಫೇರ್ಸ್] ಮತ್ತು ಕೆಎಂಸಿಯ ಫಿಟ್ನೆಸ್ ಕ್ಲಬ್ [ಫಿಟ್ವಿಬ್] ಜಂಟಿಯಾಗಿ ಮಲ್ಪೆಯ ಕದಿಕೆ ಬಳಿಯ ಸಮುದ್ರಕಿನಾರೆಯಲ್ಲಿ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಿತು. ಮಾದಕವ್ಯಸನದ ವಿರುದ್ಧ ಮಾನಸಿಕ ಜಾಗೃತಿಯನ್ನು ಮೂಡಿಸುವ ಕುರಿತು ಆಶಯವನ್ನು ಕೂಡ ಈ ಕಾರ್ಯಕ್ರಮವು ಹೊಂದಿತ್ತು.
ಮಾಹೆಯ ಯೋಜನೆ ಮತ್ತು ನಿಯಂತ್ರಣ ವಿಭಾಗದ ನಿರ್ದೇಶಕ [ಡೈರೆಕ್ಟರ್ ಆಫ್ ಪ್ಲ್ಯಾನಿಂಗ್ ಆ್ಯಂಡ್ ಮಾನಿಟರಿಂಗ್] ಡಾ. ರವಿರಾಜ್ ಎನ್. ಎಸ್. ಅವರು ಮುಖ್ಯ ಅತಿಥಿಗಳಾಗಿದ್ದು, ‘ಪ್ರತಿಯೊಬ್ಬನ ದಿನನಿತ್ಯದ ಜೀವನದಲ್ಲಿ ಯೋಗಾಭ್ಯಾಸಕ್ಕೆ ವಿಶೇಷ ಮಹತ್ತ್ವವಿದೆ. ಬೋಧಕರು ಮತ್ತು ವಿದ್ಯಾರ್ಥಿಗಳು ಏಕಾಗ್ರತೆಯನ್ನು ಸಾಧಿಸುವಲ್ಲಿಯೂ ಇದು ಪ್ರಯೋಜನಕಾರಿ. ಯೋಗ ಕೇವಲ ಶಾರೀರಿಕ ಚಕುವಟಿಕೆಯಾಗದೆ, ದೇಹ, ಮನಸ್ಸು ಮತ್ತು ಆತ್ಮದ ನಡುವಿನ ಸಮತೋಲಕ್ಕೆ ಕಾರಣವಾಗುತ್ತದೆ. ಶೈಕ್ಷಣಿಕ ವಾತಾವರಣವು ಸ್ಪರ್ಧಾತ್ಮಕವಾಗಿ ಬೆಳೆಯತ್ತಿರುವ ಈ ಸಂದರ್ಭದಲ್ಲಿ ಯೋಚನಾ ಸ್ಪಷ್ಟತೆ, ಭಾವನಾತ್ಮಕ ದೃಢತೆ, ಶಾರೀರಕ ಉಲ್ಲಾಸಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಯೋಗಾಭ್ಯಾಸವು ಸಹಕಾರಿಯಾಗಲಿದೆ’ ಎಂದರು.
ಮಾಹೆಯ ವಿದ್ಯಾರ್ಥಿ ವ್ಯವಹಾರ ವಿಭಾಗದ ನಿರ್ದೇಶಕ [ಡೈರೆಕ್ಟರ್ ಆಫ್ ಸ್ಟೂಡೆಂಟ್ ಅಫೇರ್ಸ್] ರಾದ ಡಾ. ಗೀತಾ ಮಯ್ಯ ಅವರು ಮಾತನಾಡಿ, ‘ಯೋಗವು ದೇಶದ ಭವ್ಯ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಬೆಳೆದು ಬಂದಿದೆ. ವ್ಯಕ್ತಿಯೊಬ್ಬನ ಸಮಗ್ರ ಬೆಳವಣಿಗೆಗೆ ಯೋಗಾಭ್ಯಾಸವು ತುಂಬ ಉಪಯಕ್ತವೆನಿಸುತ್ತದೆ. ಸಮುದ್ರಕಿನಾರೆಯಂಥ ನಿಸರ್ಗ ಸುಂದರ ವಾತಾವರಣದಲ್ಲಿ ಯೋಗಾಭ್ಯಾಸ ಮಾಡುವುದೇ ಒಂದು ವಿಶಿಷ್ಟ ಅನುಭವವಾಗಿದೆ’ ಎಂದರು.
ಮಾಹೆಯ ಯೋಗ ವಿಭಾಗದ ಮುಖ್ಯಸ್ಥರಾದ ಡಾ. ಅನ್ನಪೂರ್ಣಾ ಅವರು ಮಾತನಾಡಿ, ‘ಯೋಗಕ್ಕೆ ವಿಶೇಷ ಅರ್ಥವಿದೆ. ಅದು ಆತ್ಮದ ಯಾನ, ಅಂದರೆ ಆತ್ಮವು ಆತ್ಮದ ಮೂಲಕ ಆತ್ಮದತ್ತ ಪಯಣಿಸುವುದು! ಯೋಗಾಭ್ಯಾಸವು ನಮ್ಮ ಪರಂಪರೆಯಿಂದ ಬಂದ ಬಳುವಳಿಯಾಗಿದ್ದು ಇದು ನಮ್ಮ ಹಿರಿಯರ ಸಮರಸವಾದ ಮತ್ತು ಸ್ವಾಸ್ಥ್ಯಪೂರ್ಣವಾದ ಬದುಕಿನ ದ್ಯೋತಕವಾಗಿದೆ. ಪ್ರಸ್ತುತ ಯೋಗದಿನಾಚರಣೆಯು ಪ್ರತಿಯೊಬ್ಬರು ಯೋಗಾಭ್ಯಾಸ ಮಾಡಲು ಪ್ರೇರೇಪಿಸುವ ಸಂದರ್ಭವಾಗಿದೆ’ ಎಂದರು.
ಫಿಟ್ವಿಬ್ನ ಅಧ್ಯಕ್ಷರಾದ ಅರ್ಜುನ್ ಆಹುಜಾ ಅವರು ಕಾರ್ಯಕ್ರಮ ಸಂಯೋಜಿಸಿದರು. ಮುಖ್ಯ ಯೋಗ ಕಲಾಪದ ಪೂರ್ವದಲ್ಲಿ ಫಿಟ್ವಿಬ್ನ ಸದಸ್ಯರು ಹದಿನೆದು ನಿಮಿಷಗಳ ಕಾಲ ಝುಂಬಾ ಮತ್ತು ಏರೋಬಿಕ್ ಕಲಾಪಗಳನ್ನು ನಡೆಸಿಕೊಟ್ಟರು. ಡಾ. ಅನ್ನಪೂರ್ಣಾ ಯೋಗಾಸನಗಳ ಮಹತ್ತ್ವವನ್ನು ವಿವರಿಸಿದರು. ಆರಂಭದಲ್ಲಿ ಚತ್ರಿಕ್ ಮಿತ್ತಲ್ ಪ್ರಾರ್ಥನಾಗೀತೆಯನ್ನು ಹಾಡಿದರು. ವಿದ್ಯಾರ್ಥಿ ವ್ಯವಹಾರ [ಸ್ಟೂಡೆಂಟ್ ಅಫೇರ್ಸ್] ವಿಭಾಗದ ಉಪನಿರ್ದೇಶಕರಾದ ಅರವಿಂದ ಪಾಂಡೆ ಧನ್ಯವಾದ ಸಮರ್ಪಿಸಿದರು.
ಮಾಹೆಯ ಯಕ್ಷಗಾನದ ಕುರಿತ ಸಾಕ್ಷ್ಯಚಿತ್ರಕ್ಕೆ ಲಾಸ್ಏಂಜಲೀಸ್ನ ಪ್ರತಿಷ್ಠಿತ ವರ್ಲ್ಡ್ ಕಲ್ಚರ್ ಫಿಲ್ಮ್ ಫೆಸ್ಟಿವಲ್-2024ರಲ್ಲಿ ಸೆಮಿಫೈನಲ್ ಸ್ಥಾನ
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ]ಯ ಅಂತರ್ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರ [ಸೆಂಟರ್ ಫಾರ್ ಇಂಟರ್ಕಲ್ಚರಲ್ ಸ್ಟಡೀಸ್ ಆಯಂಡ್ ಡಯಲಾಗ್-ಸಿಐಎಸ್ಡಿ]ವು ಸಿದ್ಧಪಡಿಸಿದ ಕರಾವಳಿ ಕರ್ನಾಟಕದ ಪಾರಂಪರಿಕ ಕಲೆಯಾದ ಯಕ್ಷಗಾನದ ಕುರಿತ ಸಾಕ್ಷ್ಯಚಿತ್ರವು ಯುಎಸ್ಎಯ ಲಾಸ್ಏಂಜಲೀಸ್ನ ಪ್ರತಿಷ್ಠಿತ ವರ್ಲ್ಡ್ ಕಲ್ಚರ್ ಪಿಲ್ಮ್ ಫೆಸ್ಟಿವಲ್-2024 ರಲ್ಲಿ ಅಂತಿಮಪೂರ್ವ ಸ್ಪರ್ಧಾ ವಿಜೇತ ಸ್ಥಾನ [ಸೆಮಿ ಫೈನಲ್ ಸ್ಟೇಟಸ್] ಕ್ಕೆ ಆಯ್ಕೆಯಾಗಿದೆ. ಈ ಚಿತ್ರೋತ್ಸವವು ಜುಲೈ 27 ಮತ್ತು 28, 2024 ರಂದು ನಡೆಯಲಿದೆ.
ಈ ಸಾಕ್ಷ್ಯಚಿತ್ರವನ್ನು ಸಿಐಎಸ್ಡಿಯ ‘ತುಳುನಾಡಿನ ಸಜೀವ ಸಂಸ್ಕೃತಿಗಳು : ಭಾರತದ ಅರಿವು’ [ಡಿಸರ್ನಿಂಗ್ ಇಂಡಿಯ: ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು] ಯೋಜನೆಯ ಭಾಗವಾಗಿ ತಯಾರಿಸಲಾಗಿದೆ. ಈ ಚಿತ್ರೋತ್ಸವಕ್ಕೆ ಸುಮಾರು 40 ದೇಶಗಳಿಂದ ಸಾಂಸ್ಕೃತಿಕ ಮಹತ್ವ ಮತ್ತು ಅಮೂಲ್ಯ ದಾಖಲೆಗಳಾಗಿರುವ ಪ್ರವೇಶಗಳು ಬಂದಿದ್ದು, ಪ್ರಸ್ತುತ ಈ ಸಾಕ್ಷ್ಯಚಿತ್ರವು ಕರ್ನಾಟಕದ ಕರಾವಳಿ ಜಿಲ್ಲೆಗಳ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಪ್ರಾದೇಶಿಕ ಕಲೆಯಾದ ಯಕ್ಷಗಾನದ ಭವ್ಯ ಪರಂಪರೆಯನ್ನು ಎತ್ತಿಹಿಡಿಯುತ್ತದೆ.
ಮಾಹೆಯ ಐರೋಪ್ಯ ಅಧ್ಯಯನ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಐಎಸ್ಡಿಯ ಉಪಕ್ರಮ [ಇನಿಶಿಯೇಟಿವ್] ವಾಗಿ ‘ಡಿಸರ್ನಿಂಗ್ ಇಂಡಿಯ : ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು’ ಯೋಜನೆ ಕ್ರಿಯಾಶೀಲವಾಗಿದ್ದು, ಇದು ಅಂತರ್ಸಾಂಸ್ಕೃತಿಕ ಸಂವಾದ ಮತ್ತು ಅರಿವನ್ನು ವಿಸ್ತರಿಸುವಲ್ಲಿ ಆಶಯದತ್ತ ಕೇಂದ್ರೀಕೃತವಾಗಿದೆ. ಈ ಪ್ರಶಸ್ತಿ ಪುರಸ್ಕೃತ ಸಾಕ್ಷ್ಯಚಿತ್ರವು ಸ್ಥಳೀಯ ಸಾಂಸ್ಕೃತಿಕ ಜ್ಞಾನ ಮತ್ತು ಅನನ್ಯ ಪರಂಪರೆಯನ್ನು ದಾಖಲಿಸುವ ಪ್ರಮುಖ ಪ್ರಯತ್ನವಾಗಿದೆ. ಈವರೆಗೆ ವಿವಿಧ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸುಮಾರು 11 ಬಾರಿ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.
ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಈ ಸಾಧನೆಯ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತ, ‘ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ದೊರೆತ ಮನ್ನಣೆಯು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ಬೆಳೆಸುವ ಮಾಹೆಯ ಬದ್ಧತೆಗೆ ದೊರೆತ ಮಾನ್ಯತೆಯೆಂದು ಭಾವಿಸುತ್ತೇವೆ. ಈ ಸಾಕ್ಷ್ಯಚಿತ್ರವು ಪಾರಂಪರಿಕ ಕಲೆಯೊಂದರ ಅಮೂಲ್ಯ ದಾಖಲಾತಿಯಷ್ಟೇ ಅಲ್ಲ, ಮಾಹೆಯಲ್ಲಿರುವ ಸಂಶೋಧನ ತಂಡದ ಸಮೂಹ ಪ್ರಯತ್ನಕ್ಕೆ ಸಾಕ್ಷಿಯಾಗಿದೆ’ ಎಂದರು.
ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ; ವೆಂಕಟೇಶ್ ಅವರು, ‘ಈ ಅಂತಾರಾಷ್ಟ್ರೀಯ ಮನ್ನಣೆ ದೊರೆತ ಬಗ್ಗೆ ಅಭಿಮಾನವೆನ್ನಿಸುತ್ತದೆ. ಇದು ಅಂತರ್ಸಾಂಸ್ಕೃತಿಕ ಸಂವಾದ ಮತ್ತು ಅರಿವನ್ನು ಹೆಚ್ಚಿಸುವ ನಮ್ಮ ಕ್ರಿಯಾಶೀಲತೆಯ ದ್ಯೋತಕವಾಗಿದೆ. ಈ ಸಾಕ್ಷ್ಯಚಿತ್ರದ ಮೂಲ ನಮ್ಮ ಭವ್ಯ ಪರಂಪರೆಯ ಕಥನಗಳು ಇಡೀ ಜಗತ್ತಿಗೆ ತಲುಪುವಂತಾಗಿವೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ತೌಳವ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸುವಲ್ಲಿ ಮಾಹೆಯು ಪ್ರಮುಖ ಪಾತ್ರವನ್ನು ವಹಿಸುತ್ತಿದೆ’ ಎಂದರು.
ಪ್ರಸ್ತುತ ಸಾಕ್ಷ್ಯಚಿತ್ರವನ್ನು ಡಾ. ಪ್ರವೀಣ್ ಶೆಟ್ಟಿ ಮತ್ತು ನಿತೇಶ್ ಅಂಚನ್ ನಿರ್ದೇಶಿಸಿದ್ದಾರೆ ಈ ಸಾಕ್ಷ್ಯಚಿತ್ರವು ಪಾರಂಪರಿಕ ಕಲಾ ಮಾಧ್ಯಮದ ಬಹುಮುಖ ಪ್ರಸ್ತುತತೆಯನ್ನು ಮತ್ತು ಸ್ಥಳೀಯ ಸಂಸ್ಕೃತಿಯಲ್ಲಿ ಅದರ ಪ್ರಾಮುಖ್ಯವನ್ನು ಎತ್ತಿಹಿಡಿಯುತ್ತದೆ. ಈ ಹಿಂದೆ ವಾರಾಣಸಿಯ ಸಾಂಸ್ಕೃತಿಕ ಪ್ರವಾಸೋದ್ಯಮದ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಈ ಚಿತ್ರವು ತೀರ್ಪುಗಾರರ ಪ್ರಶಸ್ತಿ [ಜೂರಿ ಅವಾರ್ಡ್] ಪಡೆದಿರುವುದು ಮತ್ತು ಹೊಸದಿಲ್ಲಿಯ ಯುಜಿಸಿಯ ಕನ್ಸೋರ್ಟಿಯಂ ಫಾರ್ ಎಜುಕೇಶನಲ್ ಕಮ್ಯುನಿಕೇಶನ್ [ಸಿಇಸಿ]ಯಲ್ಲಿ ಅತ್ಯುತ್ತಮ ಚಿತ್ರಕಥೆ [ಸ್ಕ್ರಿಪ್ಟ್ ರೈಟಿಂಗ್] ಬಹುಮಾನ ಗಳಿಸಿರುವುದು ಗಮನಾರ್ಹ.
ಕುಂದಾಪುರ : ತಲ್ಲೂರು ಫ್ಯಾಮಿಲಿ ಟ್ರಸ್ಟ್ ನಡೆಸುತ್ತಿರುವ ನಾರಾಯಣ ವಿಶೇಷ ಮಕ್ಕಳ ಶಾಲೆ ತಲ್ಲೂರು ಇಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಶಿಕ್ಷಕರಾದ ಶ್ರೀಯುತ ಮುಡೂರ್ ಮಾಸ್ಟರ್ ಅವರು ವಿದ್ಯಾರ್ಥಿಗಳಿಗೆ ಯೋಗವನ್ನು ಕಲಿಸುವುದರ ಜೊತೆಗೆ ದಿನನಿತ್ಯದ ಜೀವನದಲ್ಲಿ ಯೋಗದಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ವಿಶೇಷ ಮಕ್ಕಳಿಗೆ ಅನ್ವಯವಾಗುವ ಆಸನಗಳ ಬಗ್ಗೆ ತಿಳಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ “ಯೋಗ ಮ್ಯಾಟ್ ವಿತರಣೆ” ನಡೆಯಿತು. ಪಸ್ಟ್ ಸ್ಟೆಪ್ ಡ್ಯಾನ್ಸ್ ಸ್ಟುಡಿಯೋದ ಮಾಲಕರಾದ ಶ್ರೀಮತಿ ಅಕ್ಷತಾ ರಾವ್ ಯೋಗ ಮ್ಯಾಟ್ ವಿತರಿಸಿದರು. ನಂತರ ಅವರು ಮಾತನಾಡಿ, ಪ್ರತಿನಿತ್ಯ ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಎಲ್ಲರೂ ಯೋಗ ಮಾಡಿ ಆರೋಗ್ಯವಂತರಾಗಿರಬೇಕು ಎಂದು ತಿಳಿಸಿದರು.
ಫಸ್ಟ್ ಸ್ಟೆಪ್ ಡ್ಯಾನ್ಸ್ ಸ್ಟುಡಿಯೋದ ಮಿಷೇಲ್, ಶಾರದ, ನಿಲೇಶ್ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಮ್ಯಾನೇಜಿಂಗ್ ಶ್ರೀ ಸುರೇಶ್. ಟಿ ಉಪಸ್ಥಿತರಿದ್ದರು.
ಸಹಶಿಕ್ಷಕಿ ಶ್ರೀಮತಿ ಶ್ರುತಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಪ್ರತಿಮಾ ವಂದಿಸಿದರು. ಸಹ ಶಿಕ್ಷಕಿ ಶ್ರೀಮತಿ ದೀಪಾ ಕಾರ್ಯಕ್ರಮ ನಿರೂಪಿಸಿದರು.