ಉಡುಪಿ : ಜಿಲ್ಲೆಯಾದ್ಯಂತ ವ್ಯಾಪಕವಾಗಿ ಡೆಂಗ್ಯೂ ಹಾಗೂ ಇತರ ಕೆಲವು ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುತ್ತಿದ್ದು ರೋಗಿಗಳು ಸ್ವ-ಔಷಧೋಪಾಚಾರ ಮಾಡಿಕೊಳ್ಳುವುದರಿಂದ ರೋಗ ಪತ್ತೆ ಮಾಡಿ, ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯದೆ ಪ್ರಾಣಾಪಾಯಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಔಷಧ ವ್ಯಾಪಾರಿಗಳು ಕಡ್ಡಾಯವಾಗಿ ವೈದ್ಯರ ಸಲಹಾ ಚೀಟಿ ಇಲ್ಲದೆ ಪ್ಯಾರಾಸಿಟಿಮಲ್ ಮತ್ತು ಇತರೆ ಆಂಟಿಬಯೋಟಿಕ್ ಔಷಧಗಳ ಮಾರಾಟ ಮಾಡಬಾರದು. ಹಾಗೂ ಜಿಲ್ಲೆಯ ಎಲ್ಲಾ ರಕ್ತ ಕೋಶ ಕೇಂದ್ರದವರು ರಕ್ತ ಹಾಗೂ ರಕ್ತ ಉತ್ಪನ್ನಗಳ ಕೊರತೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ರಕ್ತದಾನಿಗಳ ಪಟ್ಟಿಯನ್ನು ಸಿದ್ಧ ಪಡಿಸಿಟ್ಟುಕೊಂಡು ಅವಶ್ಯಕತೆಗೆ ಅನುಗುಣವಾಗಿ ರಕ್ತವನ್ನು ಪಡೆದು ದಾಸ್ತಾನು ಇಟ್ಟುಕೊಳ್ಳಬೇಕೆಂದು ಉಡುಪಿ ಸಹಾಯಕ ಔಷಧಿ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Health
ಕೆಮ್ಮಣ್ಣು : ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಹೂಡೆ ಇವರ ಸಹಯೋಗದೊಂದಿಗೆ ಆರೋಗ್ಯ ಕೇಂದ್ರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಖಿಲಾ ಡಿ., ಹಾಗೂ ಡಾ. ಶ್ರೀಕಾ, ಡಾ. ನಂದನಾ, ಡಾ. ಶ್ವೇತಾ, ಡಾ.ಉತ್ಕರ್ಷ್ ಅಗರ್ವಾಲ್, ಡಾ. ಅನಂತ್ ಸಿಂಗಲ್, ಡಾ. ಸುಜಿತ್ ಬಿಕ್ಕುಮಾನ್ಲಾ ಮತ್ತು ಸೆಂಟ್ರಲ್ ಮಿಚಿಗನ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೂದಲು ಕಸಿ ಕ್ಲಿನಿಕ್ (ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್) ಪ್ರಾರಂಭ
ಮಣಿಪಾಲ : ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ತನ್ನ ಅತ್ಯಾಧುನಿಕ ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ ಅನ್ನು ಇಂದು ಹೆಮ್ಮೆಯಿಂದ ಉದ್ಘಾಟಿಸಿದೆ. ಈ ಹೊಸ ಕ್ಲಿನಿಕ್ ಸುಧಾರಿತ ಕೂದಲು ಕಸಿ ಸೇವೆಗಳನ್ನು ನೀಡುತ್ತದೆ, ಪರಿಣಾಮಕಾರಿ ಕೂದಲು ಪುನಃಸ್ಥಾಪನೆ ಪರಿಹಾರಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸುತ್ತದೆ.
ಕೂದಲು ಕಸಿ ಮಾಡುವಿಕೆಯು ಕನಿಷ್ಟ ಆಕ್ರಮಣಶೀಲ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ಕೂದಲು ಕಿರುಚೀಲಗಳನ್ನು ದಟ್ಟವಾದ ಬೆಳವಣಿಗೆಯನ್ನು ಹೊಂದಿರುವ ಪ್ರದೇಶಗಳಿಂದ ಅಂದರೆ , ಸಾಮಾನ್ಯವಾಗಿ ನೆತ್ತಿಯ ಹಿಂಭಾಗ ಅಥವಾ ಬದಿಗಳಿಂದ, ಕೂದಲು ಉದುರುವಿಕೆ ಅನುಭವಿಸುತ್ತಿರುವ ಪ್ರದೇಶಗಳಿಗೆ ಸ್ಥಳಾಂತರಿಸುತ್ತದೆ. ಈ ತಂತ್ರವು ಸಂಸ್ಕರಿಸಿದ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಕಾಣುವ ಕೂದಲು ಬೆಳವಣಿಗೆಗೆ ಕಾರಣವಾಗುತ್ತದೆ. ಈ ಕಾರ್ಯವಿಧಾನಕ್ಕೆ ಸೂಕ್ತವಾದ ಅಭ್ಯರ್ಥಿಗಳು ಆನುವಂಶಿಕ ಅಂಶಗಳು, ಆಘಾತ ಅಥವಾ ಕೆಲವು ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ಗಮನಾರ್ಹ ಕೂದಲು ಉದುರುವಿಕೆಯನ್ನು ಅನುಭವಿಸುವ ವ್ಯಕ್ತಿಗಳು ಮತ್ತು ಅಭ್ಯರ್ಥಿಯು ಪ್ರದೇಶದಲ್ಲಿ ಸಾಕಷ್ಟು ಆರೋಗ್ಯಕರ ಕೂದಲು ಕಿರುಚೀಲಗಳನ್ನು ಹೊಂದಿರಬೇಕು .
ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಡಾ. ಶರತ್ ಕುಮಾರ್ ರಾವ್ ಅವರು, ವಿಶೇಷವಾಗಿ ಯುವ ಜನರಲ್ಲಿ ಕೂದಲು ಉದುರುವಿಕೆಯ ಹೆಚ್ಚುತ್ತಿರುವ ಪ್ರಾಬಲ್ಯವನ್ನು ಒತ್ತಿ ಹೇಳಿದರು. ಅವರು ಕೂದಲು ಉದುರುವಿಕೆಗೆ ಕಾರಣವಾಗುವ ಆನುವಂಶಿಕ ಅಂಶಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳು ಸೇರಿದಂತೆ ವಿವಿಧ ಕಾರಣಗಳನ್ನು ಹೈಲೈಟ್ ಮಾಡಿದರು ಮತ್ತು ಆರಂಭಿಕ ಕೂದಲು ನಷ್ಟದ ಮಾನಸಿಕ ಪರಿಣಾಮವನ್ನು ಒಪ್ಪಿಕೊಂಡರು. “ಕೂದಲು ಕಸಿ ಮಾತ್ರ ಇದಕ್ಕೆ ಕಾರ್ಯಸಾಧ್ಯವಾದ ಪರಿಹಾರವಾಗಿದೆ” ಎಂದು ಡಾ. ರಾವ್ ಹೇಳಿದರು, ಕೂದಲು ಉದುರುವಿಕೆಯಿಂದ ಬಳಲುತ್ತಿರುವ ಯುವಕರು ಮತ್ತು ಇತರರು ಹೊಸ ಚಿಕಿತ್ಸಾಲಯದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಒತ್ತಾಯಿಸಿದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎಚ್.ಅಶೋಕ ಮಾತನಾಡಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ವಿನೂತನ ಸೇವೆಗಳನ್ನು ಪರಿಚಯಿಸುವ ಬದ್ಧತೆಯನ್ನು ಹೊಂದಿದೆ ಎಂದು ಶ್ಲಾಘಿಸಿದರು. ಉಡುಪಿ ಜಿಲ್ಲಾ ಆಸ್ಪತ್ರೆಯೊಂದಿಗೆ ಆಸ್ಪತ್ರೆಯ ಸಹಯೋಗವನ್ನು ಗಮನಿಸಿದ ಅವರು ಈ ಪ್ರದೇಶದಲ್ಲಿ ರೋಗಿಗಳ ಆರೈಕೆಯನ್ನು ಹೆಚ್ಚಿಸಲು 250 ಹಾಸಿಗೆಗಳ ಹೊಸ ಬ್ಲಾಕ್ನ ಯೋಜನೆಯನ್ನು ಘೋಷಿಸಿದರು. “ನಾವು ಈ ವಿಸ್ತರಣೆಗೆ ನಿಮ್ಮ ಸಹಕಾರವನ್ನು ಬಯಸುತ್ತೇವೆ ಮತ್ತು ಹೊಸ ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ಗೆ ಉತ್ತಮ ಯಶಸ್ಸನ್ನು ಬಯಸುತ್ತೇವೆ” ಎಂದು ಡಾ. ಅಶೋಕ ಹೇಳಿದರು.
ಕಾರ್ಯಕ್ರಮದಲ್ಲಿ ಕೆಎಂಸಿಯ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಒಒ ಡಾ.ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ಶಿರಾನ್ ಶೆಟ್ಟಿ ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಜೋಸೆಫ್ ಥಾಮಸ್ ಅವರು ಕ್ಲಿನಿಕ್ನ ಸೇವೆಗಳ ಅವಲೋಕನವನ್ನು ನೀಡಿದರು ಮತ್ತು ಸಭೆಗೆ ಆತ್ಮೀಯ ಸ್ವಾಗತವನ್ನು ನೀಡಿದರು.
ಕಸ್ತೂರ್ಬಾ ಆಸ್ಪತ್ರೆಯಲ್ಲಿರುವ ಹೇರ್ ಟ್ರಾನ್ಸ್ಪ್ಲಾಂಟ್ ಕ್ಲಿನಿಕ್ ಈಗ ಸಾರ್ವಜನಿಕರಿಗೆ ತೆರೆದಿದ್ದು, ಕೂದಲು ಉದುರುವಿಕೆಯೊಂದಿಗೆ ಹೋರಾಡುತ್ತಿರುವವರಿಗೆ ಭರವಸೆ ಮತ್ತು ಸುಧಾರಿತ ಆರೈಕೆಯನ್ನು ನೀಡುತ್ತದೆ.
ಅಂತರ್ ರಾಜ್ಯ ಯೋಗಾಸನ ಸ್ಪರ್ಧೆ : ಸುಷ್ಮಾ ಎರ್ಲಪಾಡಿ ಮತ್ತು ಅನನ್ಯ ಹೆರ್ಮುಂಡೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಕಾರ್ಕಳ : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜು. 14ರಂದು ಎಸ್.ಜಿ.ಎಸ್. ಅಂತರ್ ರಾಷ್ಟ್ರೀಯ ಯೋಗ ಸಂಸ್ಥೆಯ ಪ್ರಯೋಜಕತ್ವದಲ್ಲಿ ನಡೆದ ಅಂತರ್ ರಾಜ್ಯ ಯೋಗಾಸನ ಸ್ಪರ್ಧೆಯಲ್ಲಿ ಯರ್ಲಪಾಡಿ ಗ್ರಾಮದ ಸುಷ್ಮಾ ತೆಂಡುಲ್ಕರ್ ಹಾಗೂ ಹೆರ್ಮುಂಡೆ ಗ್ರಾಮದ ಅನನ್ಯ ಉತ್ತಮ 10 ಯೋಗಪಟುಗಳಲ್ಲಿ ಆಯ್ಕೆಯಾಗಿರುತ್ತಾರೆ. ಈ ಮೂಲಕ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರು ಯೋಗ ಗುರುಗಳಾದ ಕೆ. ನರೇಂದ್ರ ಕಾಮತ್ ಮತ್ತು ಅಶೋಕ್ ಅವರಿಂದ ಯೋಗ ತರಬೇತಿ ಪಡೆದಿರುತ್ತಾರೆ.
ಶಿರ್ವ : ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್ ವಿಭಾಗದ ಪ್ರಾಧ್ಯಾಪಕಿ ಪಿ. ವೈದೇಹಿ ನಯನ್ತಾರಾ ಅವರಿಗೆ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ವೈದೇಹಿ ಅವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಮಣಿಪಾಲ್ ಇನ್ಸಿಟಿಟ್ಯೂಟ್ ಆಫ್ ಇನ್ಸ್ಟ್ರೆಮೆಂಟೇಶನ್ ಆ್ಯಂಡ್ ಕಂಟ್ರೋಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ|ಸುರೇಖಾ ಕಾಮತ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಕಂಪ್ಯೂಟರ್ ಎಯಿಡೆಡ್ ಡಯಾಗ್ನಾಸಿಸ್ ಸಿಸ್ಟಮ್ ಫಾರ್ ಡಿಟೆಕ್ಸ್ನ್ ಆ್ಯಂಡ್ ಕ್ಲಾಸಿಫಿಕೇಶನ್ ಆಫ್ ಲಿವರ್ ಟ್ಯೂಮರ್ ಯೂಸಿಂಗ್ ಕಂಪ್ಯೂಟೆಡ್ ಟೊಮೋಗ್ರಫಿ ಇಮೇಜ್ ಎಂಬ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.
ಪ್ರಾಧ್ಯಾಪಕಿಯ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬಂದಿ ವರ್ಗದವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಕುಂದಾಪುರ : ಶ್ರೀಮಾತಾ ಆಸ್ಪತ್ರೆಯ ಮಾಲಿಕ, ಡಾ.ಸತೀಶ ಪೂಜಾರಿ (54) ಅವರು ಇಂದು ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅವರು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಮಾಲೀಕ ಹಾಗೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಹೆಂಡತಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನನ್ನ ಹಾಡು ನನ್ನದು ಎಂಬ ಕಾರ್ಯಕ್ರಮದ ಮೂಲಕ ಕುಂದಾಪುರದ ಜನಮನ ಗೆದ್ದವರು. ಹಾಡುಗಾರ, ಸಂಗೀತ ಪ್ರೇಮಿಯಾಗಿದ್ದರು. ಅನೇಕ ಕಿರು ಚಿತ್ರಗಳಲ್ಲೂ ಇವರು ನಟಿಸಿದ್ದಾರೆ.
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ಮತ್ತು ಟೀಚ್ಸ್ಪೂನ್ ಎಡ್ಟೆಕ್ ಪ್ರೈ. ಲಿ. ಇತ್ತೀಚೆಗೆ ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದು ಈ ಸಹಭಾಗಿತ್ವವು ಶೈಕ್ಷಣಿಕ-ಔದ್ಯಮಿಕ ಕ್ಷೇತ್ರಗಳ ಮಹತ್ತ್ವದ ಒಡಂಬಡಿಕೆಯಾಗಿದೆ. ಜಂಟಿ ಕಾರ್ಯತಂತ್ರ ನಿರ್ವಹಣೆಯ ಕುರಿತ ಈ ಸಹಯೋಗವು ಡಿಜಿಟಲ್ ಕಲಿಕೆಗೆ ಅವಕಾಶ ನೀಡುವ ಉಪಕ್ರಮಗಳು, ಶಿಕ್ಷಣ ವಿಷಯಕ ಕಾರ್ಯಾಗಾರ ಮತ್ತು ಅಂತರ್ಜಾಲಗೋಷ್ಠಿ [ವೆಬಿನಾರ್] ಗಳ ಆಯೋಜನೆ ಮತ್ತು ಜಂಟಿ ಸಂಶೋಧನಾತ್ಮಕ ಚಟುವಟಿಕೆಗಳ ಉತ್ತೇಜನೆ- ಮುಂತಾದವುಗಳತ್ತ ಗಮನ ಹರಿಸಲಿದೆ.
ಈ ಒಪ್ಪಂದ ಪತ್ರಕ್ಕೆ ಮಾಹೆಯ ಕುಲಸಚಿವ [ರಿಜಿಸ್ಟ್ರಾರ್] ರಾದ ಡಾ. ಗಿರಿಧರ್ ಪಿ. ಕಿಣಿ ಮತ್ತು ಟೀಚ್ಸ್ಪೂನ್ ಎಡ್ಟೆಕ್ ಪ್ರೈ. ಲಿ. ನ ಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪಲಕ್ ಭಂಡಾರಿ ಅವರು ಸಹಿಹಾಕಿದರು. ಟೀಚ್ಸ್ಪೂನ್ ಎಡ್ಟೆಕ್ ಪ್ರೈ. ಲಿ. ಸಂಸ್ಥೆಯು ಶಿಕ್ಷಣ ಮತ್ತು ಕಲಿಕೆಗೆ ಸಂಬಂಧಿಸಿದ ನವೋದ್ಯಮವಾಗಿದ್ದು ಇದರ ಸ್ಥಾಪಕರಾದ ಡಾ. ಪಲಕ್ ಭಂಡಾರಿ ಅವರು ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ [ಎಂಸಿಒಡಿಎಸ್] ನ ಹಳೆವಿದ್ಯಾರ್ಥಿಯಾಗಿದ್ದಾರೆ.
ಡಾ. ಗಿರಿಧರ ಕಿಣಿಯವರು, ‘ಮಾಹೆ ಮತ್ತು ಟೀಸ್ಪೂನ್ ಎಡ್ಟೆಕ್ ಪ್ರೈ ಲಿ. ನಡುವಿನ ಈ ಸಹಭಾಗಿತ್ವವು ಜ್ಞಾನ ಮತ್ತು ಅನುಭವವನ್ನು ವಿನಿಮಯ ಮಾಡಿಕೊಳ್ಳುವ ಮಹತ್ತ್ವದ ಪ್ರಯತ್ನವಾಗಿದೆ. ಈ ಒಪ್ಪಂದದ ಮುಖ್ಯ ಆಶಯವು ಡಿಜಿಟಲ್ ಕಲಿಕೆಯನ್ನು ವೃದ್ಧಿಪಡಿಸುವುದಾಗಿದೆ. ಈ ಮೂಲಕ ಮಾಹೆಯಲ್ಲಿರುವ ವಿವಿಧ ಕ್ಷೇತ್ರಗಳ ತಜ್ಞರು ತಮ್ಮ ಜ್ಞಾನವನ್ನು ಸಹಭಾಗಿಗಳೊಂದಿಗೆ ಹಂಚಿಕೊಳ್ಳಬಹುದಾಗಿದೆ ಮತ್ತು ಸಮಷ್ಟಿ ಪ್ರಗತಿಯ ಮನೋಭಾವವನ್ನು ಬೆಳೆಸಿಕೊಳ್ಳಬಹುದಾಗಿದೆ’ ಎಂದರು.
ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ [ಎಂಸಿಒಡಿಎಸ್] ನ ಡೀನ್ ಡಾ. ಅಶಿತಾ ಉಪ್ಪೂರ್ ಅವರು ದಂತವೆದ್ಯಕೀಯ ಶಿಕ್ಷಣದಲ್ಲಿ ಶೈಕ್ಷಣಿಕ ಮತ್ತು ಔದ್ಯಮಿಕ ಕ್ಷೇತ್ರಗಳು ಸಹಯಾನ ನಡೆಸುವುದರ ಪ್ರಾಮುಖ್ಯವನ್ನು ವಿವರಿಸಿದರು. ಪ್ರಸ್ತುತ ಒಡಂಬಡಿಕೆಯು ಭವಿಷ್ಯದ ಶಿಕ್ಷಣ ಕ್ಷೇತ್ರಕ್ಕೆ ಪ್ರಯೋಜನಕಾರಿಯಾಗಲಿದೆ ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದರು.
ಟೀಚ್ಸ್ಪೂನ್ ಎಡ್ಟೆಕ್ ಪ್ರೆ ಲಿ. ನ ಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಡಾ. ಪಲಕ್ ಭಂಡಾರಿ ಅವರು ಮಾಹೆಯೊಂದಿಗೆ ತಮ್ಮ ಸಂಸ್ಥೆ ಸಹಭಾಗಿತ್ವ ಹೊಂದಿರುವ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಡಿಜಿಟಲ್ ಕಲಿಕೆಯನ್ನು ಬೆಳೆಸುವುದು ಮತ್ತು ಉತ್ತೇಜಿಸುವ ಪ್ರಯತ್ನದಲ್ಲಿ ಎರಡೂ ಸಂಸ್ಥೆಗಳು ಕೈಜೋಡಿಸಲಿವೆ. ಅತ್ಯುತ್ತಮ ಗುಣಮಟ್ಟದ ಕಾರ್ಯಾಗಾರ ಮತ್ತು ವಿಜಾರಗೋಷ್ಠಿಗಳನ್ನು ಆಯೋಜಿಸಿ ಅಭಿವೃದ್ದಿ ಹೊಂದುತ್ತಿರುವ ಡಿಜಿಟಲ್ ಶಿಕ್ಷಣ ಕ್ಷೇತ್ರಕ್ಕೆ ಮಹತ್ತ್ವದ ಕೊಡುಗೆಗಳನ್ನು ನೀಡಲಿವೆ’ ಎಂದರು.
ಸಾಂಸ್ಥೀಯ ಸಂಬಂಧಗಳ ವಿಭಾಗ [ಕಾರ್ಪೊರೇಟ್ ರಿಲೇಶನ್ಸ್]ದ ನಿರ್ದೇಶಕ ಡಾ. ಹರೀಶ್ ಕುಮಾರ್ ಎಸ್. ಅತಿಥಿಗಳನ್ನು ಸ್ವಾಗತಿಸಿದರು. ಟೀಚ್ ಸ್ಪೂನ್ ಪ್ರೈ. ಲಿ. ನ ಸಾಮಗ್ರಿ ಸಿದ್ಧತಾ ವಿಭಾಗ [ಕಂಟೆಂಟ್ ಪ್ರೊಡಕ್ಷನ್] ವಿಭಾಗದ ಮುಖ್ಯಸ್ಥರಾದ ಡಾ. ಚಾಂದಿನಿ ಪಿಂಟೊ ಉಪಸ್ಥಿತರಿದ್ದರು.
ಕೋಟ : ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೋಟರಿ ಸಮುದಾಯದಳ ಮೂಡುಗಿಳಿಯಾರು ಮತ್ತು ಸಮುದಾಯ ಆರೋಗ್ಯ ಕೇಂದ್ರ ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಅಂಗನವಾಡಿ ಕೇಂದ್ರ ಹೊನ್ನಾರಿಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ತಾಯಿ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಸೋಮವಾರ ನಡೆಸಲಾಯಿತು.
ಕೋಟ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದೇವಪ್ಪ ಪಟಗಾರ್, ಪಿಎಚ್ಸಿ ಮಂದಾನಾಯಕ್ ಶಿಬಿರವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ವಹಿಸಿದ್ದರು.
ಕ್ಲಬ್ನ ಸದಸ್ಯ ಶರಣಯ್ಯ ಹಿರೇಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಗಂಗಾ ಸ್ವಾಗತಿಸಿದರು. ಕ್ಲಬ್ನ ಪೂರ್ವಾಧ್ಯಕ್ಷ ದೇವಪ್ಪ ಪಟಗಾರ ಕಾರ್ಯಕ್ರಮವನ್ನು ನಿರೂಪಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಹರಿಶ್ಚಂದ್ರ ನಾಯಕ್ ವಂದಿಸಿದರು.
ಉಡುಪಿ : ಆದರ್ಶ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮ ಭಾನುವಾರ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವೈದ್ಯರು ದೇವರಿಗೆ ಸಮಾನ ಎಂಬ ಭಾವನೆ ಸಮಾಜದಲ್ಲಿದೆ. ಜೀವ ಉಳಿಸುವ ವೈದ್ಯರು ಹಾಗೂ ಜೀವನ ರೂಪಿಸುವ ಶಿಕ್ಷಕರು ಹೆಚ್ಚಿನ ಗೌರವಕ್ಕೆ ಪಾತ್ರರಾಗಿದ್ದಾರೆ. ವ್ಯಕ್ತಿಯ ಸೇವೆಯನ್ನು ಸಮಾಜ ಗುರುತಿಸಿದಾಗ ಸಮಾಜಕ್ಕೆ ಪ್ರೇರಣೆಯಾಗುತ್ತದೆ. ವೈದ್ಯರನ್ನು ಸನ್ಮಾನಿಸುವ ಮೂಲಕ ಮುಂದಿನ ದಿನಗಳಲ್ಲಿ ಈ ವೃತ್ತಿಗೆ ಬರುವವರಿಗೆ ಮಾದರಿ ವ್ಯಕ್ತಿತ್ವ ಪರಿಚಯಿಸಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಪು ಪ್ರಶಾಂತ್ ಅಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಕುಮಾರ್ ಶೆಟ್ಟಿ, ಮಲ್ಪೆಯ ದೇವ್ ಕ್ಲಿನಿಕ್ನ ಡಾ. ರಾಮಚಂದ್ರ ದೇವಾಡಿಗ, ಬ್ರಹ್ಮಾವರದ ಡಾ. ಪ್ರವೀಣ್ ಕುಮಾರ್ ಶೆಟ್ಟಿ, ಕಾರ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯ ರೇಡಿಯಾಲಾಜಿಸ್ಟ್ ಡಾ. ಅನಿತಾ ಎಸ್. ಪ್ರಭು ಹಾಗೂ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞ ಡಾ. ಚಂದ್ರ ಮರಕಾಲ ಅವರನ್ನು ವೈದ್ಯಕೀಯ ಕ್ಷೇತ್ರದ ವಿಶೇಷ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ಡಿಎಚ್ಒ ಡಾ. ಐ.ಪಿ. ಗಡಾದ್, ಜಿಲ್ಲಾ ಸರ್ಜನ್ ಡಾ. ಅಶೋಕ್ ಎಚ್. ಮಾತನಾಡಿದರು. ಆದರ್ಶ ಆಸ್ಪತ್ರೆ ಸಿಇಒ ವಿಮಲಾ ಚಂದ್ರಶೇಖರ್, ಹಿರಿಯ ವೈದ್ಯ ಡಾ. ಮೋಹನದಾಸ್ ಶೆಟ್ಟಿ ಇದ್ದರು. ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಜಿ. ಎಸ್. ಚಂದ್ರಶೇಖರ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ಆಸ್ಪತ್ರೆ ಡಯಟೀಶಿಯನ್ ಅನುಶ್ರೀ ನಿರೂಪಿಸಿದರು. ಉಪಪ್ರಬಂಧಕ ಪ್ರಕಾಶ್ ಡಿ.ಕೆ. ವಂದಿಸಿದರು.
ಮಾಹೆಯಲ್ಲಿ ವೈಲ್ಡರ್ನೆಸ್ ಮೆಡಿಸಿನ್ ಆ್ಯಂಡ್ ಕನ್ಸರ್ವೇಶನ್ ರಿಸರ್ಚ್ ಸೆಂಟರ್ ಉದ್ಘಾಟನೆ
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ಮಾಹೆ-ವನ್ಯಸ್ಥ ವೈದ್ಯಕೀಯ ಮತ್ತು ಸುರಕ್ಷಾ ಸಂಶೋಧನ ಕೇಂದ್ರ [ಮಾಹೆ-ವೈಲ್ಡರ್ನೆಸ್ ಮೆಡಿಸಿನ್ ಆ್ಯಂಡ್ ಕನ್ಸರ್ವೇಶನ್ ರಿಸರ್ಚ್ ಸೆಂಟರ್]ನ್ನು ಇತ್ತೀಚೆಗೆ ಮಣಿಪಾಲದ ಕಂಚಿನಬೈಲುವಿನಲ್ಲಿ ಆರಂಭಿಸಿತು. ಮಾಹೆಯ ವನ್ಯಸ್ಥ ವೈದ್ಯಕೀಯ ಕೇಂದ್ರ [ಸೆಂಟರ್ ಫಾರ್ ವೈಲ್ಡರ್ನೆಸ್ ಮೆಡಿಸಿನ್], ತುರ್ತು ಚಿಕಿತ್ಸಾ ವಿಭಾಗ [ಡಿಪಾರ್ಟ್ಮೆಂಟ್ ಆಫ್ ಎಮರ್ಜನ್ಸಿ ಮೆಡಿಸಿನ್] ಮತ್ತು ತುರ್ತು ವೈದ್ಯಕೀಯ ತಂತ್ರಜ್ಞಾನ ವಿಭಾಗ [ಡಿಪಾರ್ಟ್ಮೆಂಟ್ ಆಫ್ ಎಮರ್ಜನ್ಸಿ ಮೆಡಿಕಲ್ ಟೆಕ್ನಾಲಜಿ] ಗಳ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸುವ ಕೇಂದ್ರವು ಸುಧಾರಿತ ವನ್ಯಸ್ಥ ವೈದ್ಯಕೀಯ ಮತ್ತು ಪರಿಸರ ಸಂರಕ್ಷಣೆಯ ಆಶಯಕ್ಕೆ ಬದ್ಧವಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್, ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್, ಆರೋಗ್ಯ ವಿಜ್ಞಾನ ವಿಭಾಗದ ಸಹ-ಉಪಕುಲಪತಿಗಳಾದ ಡಾ. ಶರತ್ ಕೆ. ರಾವ್, ಕೆಎಂಸಿಯ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಯೋಜನೆ ಮತ್ತು ಡಾ. ರವಿರಾಜ ಎನ್.ಎಸ್ (ಸಿ ಓ ಓ ) ಮಾಹೆ ಮಣಿಪಾಲ ಸೇರಿದಂತೆ ಮಾಹೆಯ ವಿವಿಧ ವಿಭಾಗಗಳ ನಿರ್ದೇಶಕರು, ಪ್ರಾಧ್ಯಾಪಕರು ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಅತಿಥಿಗಳು ಸ್ಥಳೀಯ ತಳಿಯ ಗಿಡಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಅವರು ಮಾತನಾಡುತ್ತ, ‘ಪ್ರಸ್ತುತ ವೈಲ್ಡರ್ನೆಸ್ ಮೆಡಿಸಿನ್ನ ಉಪಕ್ರಮವು ರಾಷ್ಟ್ರದಲ್ಲಿಯೇ ಗಮನಾರ್ಹ ಪ್ರಯತ್ನವಾಗಿದೆ. ಮಾಹೆಯ ವೈಲ್ಡರ್ನೆಸ್ ಆ್ಯಂಡ್ ಕನ್ಸರ್ವೇಶನ್ ರಿಸರ್ಚ್ ಸೆಂಟರ್ ಅನ್ಯ ಕೇಂದ್ರಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸಲಿದೆ’ ಎಂದರು.
ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್ ಅವರು ಮಾತನಾಡಿ, ‘ಲಭ್ಯವಿರುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಬಳಸಿ, ಉತ್ತಮ ಕೌಶಲ ಮತ್ತು ಜ್ಞಾನದ ಮೂಲಕ ಹೇಗೆ ವನ್ಯಸ್ಥ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿಸಲು ಸಾಧ್ಯವಿದೆ’ ಎಂದು ವಿವರಿಸಿದರು.
ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹ-ಉಪಕುಲಪತಿಗಳಾದ ಡಾ. ಶರತ್ ಕೆ. ರಾವ್ ಅವರು ಮಾತನಾಡುತ್ತ ‘ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಮುಖ್ಯವಾಗಿ ಸ್ಥಳೀಯವಾಗಿ ಲಭ್ಯವಿರುವ ಮತ್ತು ಮರುಬಳಕೆಯ ವಸ್ತುಗಳನ್ನು ಬಳಸಿ ಸಿದ್ಧಗೊಳಿಸಲಾಗಿದೆ. ಇದು ಪರಿಸರಕ್ಕೆ ಹಾನಿಯಾಗುವುದನ್ನು ತಪ್ಪಿಸುವ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿದೆ’ ಎಂದರು .
ಮಾಹೆಯ ಸೆಂಟರ್ ಫಾರ್ ವೆಲ್ಡರ್ನೆಸ್ ಮೆಡಿಸಿನ್ ವಿಭಾಗದ ಸಂಚಾಲಕ ಮತ್ತು ಸಹಪ್ರಾಧ್ಯಾಪಕರಾದ ಡಾ. ಫ್ರೆಸ್ಟನ್ ಮಾರ್ಕ್ ಸಿರೂರ್ ಅವರು ಸ್ವಾಗತ ಭಾಷಣ ಮಾಡಿದರೆ, ಡಾ. ವೃಂದಾ ಲಾತ್ ಧನ್ಯವಾದ ಸಮರ್ಪಿಸಿದರು. ಆರಂಭದಲ್ಲಿ ಅರುಂಧತಿ ಹೆಬ್ಬಾರ್ ಪ್ರಾರ್ಥನ ಗೀತೆ ಹಾಡಿದರು.