ಉಡುಪಿ : ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು.
ಉಡುಪಿ ಜಿಲ್ಲೆಯ ಸಂತೆಕಟ್ಟೆ ಕಲ್ಯಾಣಪುರದ ಸುರಂಗ ಮಾರ್ಗ, ಇಂದ್ರಾಳಿಯ ಮೇಲ್ಸೇತುವೆ, ಮಲ್ಪೆ ಭೂಸ್ವಾಧೀನದ ವಿಳಂಬ ಮತ್ತು ನೆನೆಗುದ್ದಿಗೆ ಬಿದ್ದಿರುವ ತನಿಕೋಡು ಗೇಟ್ನಿಂದ ಎಸ್.ಕೆ. ಬಾರ್ಡರ್ ವರೆಗಿನ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳನ್ನು ತುರ್ತು ಪರಿಹರಿಸಬೇಕೆಂದು ಮನವಿ ಸ್ವೀಕರಿಸಿದ ಸಚಿವ ಗಡ್ಕರಿ ಸಂಬಂಧಿಸಿದ ಅಧಿಕಾರಿಗಳಿಗೆ ತುರ್ತು ಆದೇಶ ನೀಡಿ ಕಾಮಗಾರಿಗಳನ್ನು ವಿಳಂಬವಿಲ್ಲದೆ ಅತಿ ಶೀಘ್ರದಲ್ಲಿ ಮುಗಿಸುವಂತೆ ಆದೇಶ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಜೊತೆಗೆ ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದ ಬಿ ವೈ ರಾಘವೇಂದ್ರ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Government
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಾಳೆ (ಗುರುವಾರ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜೂನ್ 27ರಂದು ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜೂನ್ 27ರಂದು ರಜೆಯನ್ನು ಘೋಷಿಸಲಾಗಿದೆ.
ಅದೇ ರೀತಿ ಸಂಭಾವ್ಯ ಪ್ರವಾಹ/ಭೂಕುಸಿತ ಪ್ರದೇಶಗಳನ್ನು ಗುರುತಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಸಾರ್ವಜನಿಕರು/ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸುವುದು. ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.
ರೈತಾಪಿ ವರ್ಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಬೃಹತ್ ಪ್ರತಿಭಟನೆ
ಉಡುಪಿ : ಬಿಜೆಪಿ ಉಡುಪಿ ಜಿಲ್ಲೆ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ನೇತೃತ್ವದಲ್ಲಿ ರೈತಾಪಿ ವರ್ಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಜೂ.26ರಂದು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯ ನೇತೃತ್ವ ವಹಿಸಿದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕನ್ನಾರು ಕಮಲಾಕ್ಷ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಹೈನುಗಾರಿಗೆ ಪ್ರೋತ್ಸಾಹ ಧನ ಬಿಡುಗಡೆಗೆ ಒತ್ತಾಯಿಸಿ, ಬಿತ್ತನೆ ಬೀಜದ ದರ ಏರಿಕೆ ಮತ್ತು ಕೊರತೆ ಹಾಗೂ ತೈಲಬೆಲೆ ಏರಿಕೆಯನ್ನು ಖಂಡಿಸಿ, ಜಿಲ್ಲೆಯಲ್ಲಿ ಕೃಷಿ ಕಾಲೇಜು ಪ್ರಾರಂಭಿಸುವ ಕುರಿತು ಹಾಗೂ ಕುಮ್ಕಿ ಹಕ್ಕು ಮತ್ತು ಆಕ್ರಮ ಸಕ್ರಮ ಹಂಚಿಕೆ ಮಾಡುವ ಬಗ್ಗೆ ಆಗ್ರಹಿಸಿ ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮತ್ತು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ| ನವೀನ್ ಕುಮಾರ್ ಸಭೆಯನ್ನುದ್ದೇಶಿಸಿ ಮಾತನಾಡಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ರೈತ ವಿರೋಧಿ ಮತ್ತು ಜನ ವಿರೋಧಿ ನೀತಿಯನ್ನು ಖಂಡಿಸಿದರು.
ರೈತಾಪಿ ವರ್ಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರಕಾರವನ್ನು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ಸಭೆಯ ಪೂರ್ವಭಾವಿಯಾಗಿ ಮಣಿಪಾಲದ ಕಾಯಿನ್ ಸರ್ಕಲ್ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಚೆಂಡೆ ವಾದನ, ದನ-ಕರು, ಕೋಣಗಳ ವಿಶೇಷ ಆಕರ್ಷಣೆಯೊಂದಿಗೆ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾಕಾರರಿಂದ ಪಾದಯಾತ್ರೆ ನಡೆಯಿತು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಜಿಲ್ಲಾಧ್ಯಕ್ಷರುಗಳಾದ ಮಟ್ಟಾರ್ ರತ್ನಾಕರ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಶೇಖರ್ ಕುಲಾಲ್, ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ರೈತ ಮೋರ್ಚಾ ಸಹಿತ ವಿವಿಧ ಮೋರ್ಚಾ, ಮಂಡಲ, ಪ್ರಕೋಷ್ಠಗಳ ಮತ್ತು ವಿವಿಧ ಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು, ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಮತ್ತು ಸದಸ್ಯರು, ಹೈನುಗಾರರು ಮತ್ತು ರೈತರು ಬೃಹತ್ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ : ಉಡುಪಿ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಬುಧವಾರ ಬೆಳಿಗ್ಗಿನಿಂದ ಭಾರೀ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಜೂನ್ 26 ಮತ್ತು 27 ರಂದು “ಆರೆಂಜ್ ಅಲರ್ಟ್” ನೀಡಲಾಗಿದೆ, ಜೂನ್ 28 ಮತ್ತು 29 ರಂದು “ಯಲ್ಲೋ ಅಲರ್ಟ್” ನೀಡಲಾಗಿದೆ. ಈ ಅವಧಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಕಾಪು ತಾಲೂಕಿನ ಮೂಳೂರು ಉದಯ್ ಪೂಜಾರಿ ಎಂಬವರ ಮನೆಗೆ ಇಂದು ಬೆಳಿಗ್ಗೆ ಮರಬಿದ್ದು ಅಪಾರ ಹಾನಿಯುಂಟಾಗಿದೆ. ಮಳೆಗೆ ಬೀಸಿದ ಭಾರಿ ಗಾಳಿಯಿಂದಾಗಿ ಮರ ಬಿದ್ದಿದ್ದು ಬಚ್ಚಲು ಕೋಣೆ, ಶೌಚಾಲಯಕ್ಕೆ ಹಾನಿಯುಂಟಾಗಿದೆ. ಮನೆಯವರು ಹಾಲ್ನಲ್ಲಿ ಕುಳಿತಿದ್ದಾಗ ಘಟನೆ ಸಂಭವಿಸಿದ್ದು, ಹಿಂಬದಿಯ ಮರ ಬಿದ್ದ ಪರಿಣಾಮ ಮನೆಯೊಳಗೆ ಇದ್ದವರಿಗೆ ಯಾವುದೇ ಅಪಾಯಗಳುಂಟಾಗಿಲ್ಲ.
ಸಾವಿರಾರು ರೂಪಾಯಿ ನಷ್ಟ ಅಂದಾಜಿಸಲಾಗಿದ್ದು ತಾಲೂಕು ಆಡಳಿತ, ಕಂದಾಯ ಇಲಾಖೆ, ಪುರಸಭೆಗೆ ಮಾಹಿತಿ ನೀಡಿದ್ದಾರೆ.
ಪೆಟ್ರೋಲ್ ದರ ಏರಿಕೆ, ರೈತರಿಗೆ ಹಾಲಿನ ಸಬ್ಸಿಡಿ ನೀಡದೇ ಇರುವ ಬಗ್ಗೆ ಪ್ರತಿಭಟನೆ; ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ
ಉಡುಪಿ : ಪೆಟ್ರೋಲ್ ದರ ಏರಿಕೆ, ರೈತರಿಗೆ ಹಾಲಿನ ಸಬ್ಸಿಡಿ ನೀಡದೇ ಇರುವುದು, ಈಗ ಹಾಲಿನ ದರ ಏರಿಕೆ ವಿರೋಧಿಸಿ ಬಿಜೆಪಿ ರೈತ ಮೋರ್ಚಾದಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ನಡೆಸಲಾಯಿತು. ಜಡಿ ಮಳೆಯ ನಡುವೆಯೂ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗುವ ಯತ್ನ ನಡೆಸಿದ ಪ್ರತಿಭಟನಕಾರರು ಪೊಲೀಸರ ಜೊತೆ ಜಟಾಪಟಿ ನಡೆಸಿದರು.
ವಾಲ್ಮೀಕಿ ನಿಗಮ ಹಗರಣದ ಕುರಿತು ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧವೂ ಈ ವೇಳೆ ಆಕ್ರೋಶ ವ್ಯಕ್ತವಾಯಿತು. ಪ್ರತಿಭಟನೆ ವೇಳೆ ಪೊಲೀಸರು ಜಿಲ್ಲಾಧಿಕಾರಿ ಕಚೇರಿಗೆ ಗೇಟು ಹಾಕಿ ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ನೂಕಾಟವೂ ನಡೆಯಿತು. ಬಿಜೆಪಿ ರಾಜ್ಯ ಮೋರ್ಛಾದ ಮುಖಂಡರು ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಸಾಥ್ ನೀಡಿದರು.
ರೈತಾಪಿ ವರ್ಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.
ಕಣ್ಣಿಗೆ ಕಂಡದ್ದೆಲ್ಲದರ ಬೆಲೆ ಏರಿಸುವುದರಲ್ಲಿ ಹಠಕ್ಕೆ ಬಿದ್ದಿರುವಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರ : ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು : ರಾಜ್ಯದಲ್ಲಿ ಅಗತ್ಯ ವಸ್ತುಗಳ ದರ ಏರಿಕೆಯ ಬಿಸಿಯಿಂದ ಜನಸಾಮಾನ್ಯರು ಕಂಗಾಲಾಗುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಮಾತ್ರ ತನ್ನ ಪಾಡಿಗೆ ತಾನು ಜನರನ್ನು ದೋಚುವುದರಲ್ಲಿ ನಿರತವಾಗಿದ್ದು ಅದರ ಮುಂದುವರಿದ ಭಾಗವಾಗಿ ಸರ್ಕಾರ ಈಗ ಹಾಲಿಗೆ ಏಕಾಏಕಿ 2 ರೂ ಏರಿಸಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಣ್ಣಿಗೆ ಕಂಡದ್ದೆಲ್ಲದರ ಬೆಲೆ ಏರಿಸುವುದರಲ್ಲಿ ಹಠಕ್ಕೆ ಬಿದ್ದಿರುವಂತೆ ವರ್ತಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅತ್ತ ರೈತರ ಬದುಕಿಗೂ ಉಪಕಾರಿಯಾಗಿಲ್ಲ, ಬಡವರ ಬದುಕಿಗೂ ನೆಮ್ಮದಿಯಿಲ್ಲ. ಒಂದೆಡೆ ಹಾಲು ಉತ್ಪಾದಕರಿಗೆ ಬಾಕಿ ಉಳಿಸಿರುವ ಸಬ್ಸಿಡಿ ಹಣ ನೀಡದೆ ಸತಾಯಿಸುವುದು, ಇನ್ನೊಂದೆಡೆ ಗ್ರಾಹಕರಿಗೆ ಹಾಲಿನ ಬೆಲೆಯೇರಿಕೆ ಬಿಸಿ ಮುಟ್ಟಿಸುವುದು. ಇದು ರೈತ ವಿರೋಧಿ ಸರ್ಕಾರವೂ ಹೌದು. ಬಡ ಜನರ ವಿರೋಧಿ ಸರ್ಕಾರವೂ ಹೌದು. ಮಾನ್ಯ ಮುಖ್ಯಮಂತ್ರಿಗಳಂತೂ ರಾಜ್ಯದ ಜನತೆಗೆ ಉತ್ತರಿಸಲಾಗದೇ, ಹಾಲಿನ ದರ ಏರಿಕೆಯ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಮಾಧ್ಯಮಗಳಲ್ಲಿ ನುಣುಚಿಕೊಳ್ಳಲು ಯತ್ನಿಸಿದ್ದಂತೂ ಅತ್ಯಂತ ಹಾಸ್ಯಾಸ್ಪದ. ಕೊನೆಪಕ್ಷ ಇನ್ನಾದರೂ ಈ ಕೃತಕ ಬೆಲೆ ಏರಿಕೆಗೆ ನಿಯಂತ್ರಣ ಹೇರಿ ಜನಸಾಮಾನ್ಯರು ನೆಮ್ಮದಿಯಿಂದ ಇರಲು ಬಿಡಿ ಎಂದು ಆಗ್ರಹಿಸಿದರು.
ಮಣಿಪುರ ಸರಕಾರಿ ಸಂಯುಕ್ತ ಪ್ರೌಢಶಾಲೆ ವಿವೇಕ ಕೊಠಡಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ
ಮಣಿಪುರ : ಸರಕಾರಿ ಸಂಯುಕ್ತ ಪ್ರೌಢ ಶಾಲೆ ಮಣಿಪುರದ ವಿವೇಕ ಕೊಠಡಿ ನಿರ್ಮಾಣಕ್ಕೆ ರೂ 32.80 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಉದ್ಘಾಟನೆಯನ್ನು ಇಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಮಣಿಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚೈತ್ರಾ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷರಾದ ರಮೇಶ್ ಪೂಜಾರಿ, ಸದಸ್ಯರಾದ ಮಹಮ್ಮದ್ ಷರೀಫ್, ಗೋವಿಂದ ಭಟ್, ಜಾನ್ ಸಿಕೈರಾ, ಹಾಜಿ ಹಸನ್ ಶೇಖ್ ಅಹಮ್ಮದ್, ಬಿಂದು ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯಲ್ಲಮ್ಮ, ಪೌಢಶಾಲಾ ಮುಖ್ಯೋಪಾಧ್ಯಾಯರಾದ ರೂಪರೇಖಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಜಯಂತಿ ಉಪಸ್ಥಿತರಿದ್ದರು.

ಕುಮಾರಸ್ವಾಮಿ ಚನ್ನಪಟ್ಟಣ ನೋಡೋದಕ್ಕೆ ಮೊದಲೇ ನಾನು ನೋಡಿದ್ದೇನೆ – ಡಿ.ಕೆ.ಶಿ. ಟಾಂಗ್
ಮಂಗಳೂರು : ಚೆನ್ನಪಟ್ಟಣಕ್ಕೆ ನಾನು ಏನೂ ಮಾಡಿಲ್ಲವೆಂದು ಕುಮಾರಸ್ವಾಮಿಯವರಿಗೇನು ಗೊತ್ತು. ಅವರು ಚನ್ನಪಟ್ಟಣ ನೋಡೋದಕ್ಕೆ ಮೊದಲೇ ನಾನು ನೋಡಿದ್ದೇನೆ. ಅವರು ಬಹಳ ತಡವಾಗಿ ರಾಜಕೀಯಕ್ಕೆ ಬಂದವರು. ನಾನು 1985ಕ್ಕೆ ಲೋಕಸಭಾ ಚುನಾವಣೆ ಎದುರಿಸಿವನು. ಅವರು 1995ರ ಬಳಿಕ ರಾಜಕೀಯ ಪ್ರವೇಶಿಸಿದವರು. ಅವರಿಗಿಂತ 10ವರ್ಷಕ್ಕಿಂತ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ನಾನು ಅದೇ ಜಿಲ್ಲೆಯವನು ಎಂದು ಕುಮಾರಸ್ವಾಮಿಯವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.
ಚನ್ನಪಟ್ಟಣ ಉಪಚುನಾವಣೆ ಬಗ್ಗೆ ನನ್ನ ತಮ್ಮ ಡಿ.ಕೆ.ಸುರೇಶ್ಗೆ ಆಸಕ್ತಿಯಿಲ್ಲ. ಜನರು ನಮಗೆ ರೆಸ್ಟ್ ತೆಗೆದುಕೊಳ್ಳುದಕ್ಕೆ ಹೇಳಿದ್ದಾರೆ. ಆದರೆ ಪಾರ್ಟಿ ಕೆಲಸ ಮಾಡಬೇಕೆಂಬ ಆಸೆಯಿದೆ. ನಮಗೆ 85ಸಾವಿರ ಮಂದಿ ಮತಕೊಟ್ಟಿದ್ದಾರೆ. ನಮ್ಮನ್ನು ನಂಬಿದವರ ಬಿಡುವುದಕ್ಕೆ ಆಗೋಲ್ಲ. ದೇವರು ನಮಗೆ ಅಧಿಕಾರ ಕೊಟ್ಟಿದ್ದಾರೆ. 136 ಸೀಟ್ ಕೊಟ್ಟಿದ್ದಾರೆ. ಅದನ್ನು ಉಳಿಸಬೇಕು. ಚನ್ನಪಟ್ಟಣ ಜನಕ್ಕೆ ಏನೂ ಆಗಿಲ್ಲ ಎಂಬ ಭಾವನೆಯಿದೆ. ಅವರಿಗೆ ಅಳಿಲು ಸೇವೆ ಮಾಡೋಣ ಎಂದು ಇದ್ದೇವೆ. ನಾವು ಅಧಿಕಾರದಲ್ಲಿದ್ದಾಗ ಮಾಡಿದ್ದೇವೆ. ಇದೀಗ ರೈಟ್ ಟೈಮ್ ಏನೋ ಸಹಾಯ ಮಾಡೋಣ ಎಂದಿದ್ದೇವೆ ಎಂದರು.
ಹೆಚ್ಚಿನ ಡಿಸಿಎಂ ಹುದ್ದೆ ಕೇಳುವ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೀವು ದಿನಾಲೂ ನ್ಯೂಸ್ ಮಾಡುತ್ತೀರಲ್ಲ. ಇದರಿಂದ ಖುಷಿ ಆಗುವವರಿಗೆ ಆಗಲಿ. ಖುಷಿ ಪಡುವವರನ್ನು ನಾನೇಕೆ ಬೇಡ ಅನ್ನಲ್ಲಿ. ಯಾರು ಏನು ಬೇಕಾದರೂ ಬೇಡಿಕೆ ಮಾಡಲಿ. ಪಾರ್ಟಿ ಯಾರಿಗೆ ಉತ್ತರ ಕೊಡಬೇಕೋ ಕೊಡುತ್ತದೆ ಎಂದರು.
ನನ್ನ ಮೇಲಿನ ದ್ವೇಷಕ್ಕೆ ಬಳ್ಳಾರಿಯಲ್ಲಿ ರಾಜ್ಯಸರಕಾರ ಪರ್ಮಿಷನ್ ನೀಡುತ್ತಿಲ್ಲ ಎಂದು ಕುಮಾರಸ್ವಾಮಿಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಮೈನಿಂಗ್ ಬಗ್ಗೆ ಹೆಚ್ಡಿಕೆಗೆ ಏನು ಮಾಹಿತಿ ಇದೆಯೋ ಗೊತ್ತಿಲ್ಲ. ನನಗಂತೂ ಏನೂ ಗೊತ್ತಿಲ್ಲ ಎಂದು ಹೇಳಿದರು.
ಕುಕ್ಕೆ ಸುಬ್ರಹ್ನಣ್ಯ ಕ್ಷೇತ್ರಕ್ಕೆ ಆಗಮಿಸಿರುವ ಬಗ್ಗೆ ಮಾತನಾಡಿದ ಡಿಕೆಶಿ, ನಾವು ಹಿಂದೂ ಧರ್ಮದವರು. ನಮ್ಮ ರಾಜ್ಯದಲ್ಲಿ ಎಲ್ಲಾ ಸಂಸ್ಕೃತಿಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಅವರವರ ನಂಬಿಕೆ ಪ್ರಕಾರ ಅವರು ಪ್ರಾರ್ಥಿಸುತ್ತಾರೆ. ಬಹಳ ದಿನದಿಂದ ಸುಬ್ರಹ್ಮಣ್ಯಕ್ಕೆ ಹೋಗಬೇಕೆಂಬ ಆಸೆಯಿತ್ತು. ಇಂದು ಕುಟುಂಬ ಸಹಿತ ಹೋಗುತ್ತಿದ್ದೇನೆ ಎಂದು ಹೇಳಿದರು.
ಕುಟುಂಬ ಸಹಿತರಾಗಿ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ ಅವರು ರಸ್ತೆ ಮಾರ್ಗವಾಗಿ ಕುಕ್ಕೆ ಶ್ರೀಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದರು. ಸಂಜೆ ವೇಳೆಗೆ ಶ್ರೀ ಕ್ಷೇತ್ರದಲ್ಲಿ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ಹಾಗೂ ಉಡುಪರತ್ನ ಪ್ರತಿಷ್ಠಾನ ಕೊಡವೂರು ವತಿಯಿಂದ ಸರಕಾರಿ ಶಾಲೆ ಉಳಿಸಿ, ಬೆಳೆಸಿ ಅಭಿಯಾನದಲ್ಲಿ ಹಟ್ಟಿಕದ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು ಇಪ್ಪತ್ತು ಸಾವಿರಕ್ಕೂ ಮಿಕ್ಕಿ ವೆಚ್ಚದ ಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರ ಉಡುಪ ಸಹಕಾರದಲ್ಲಿ ಎಸ್ಡಿಎಂಸಿ ಅಧ್ಯಕ್ಷ ನರೇಂದ್ರ ಉಡುಪ, ಪತ್ರಕರ್ತರು ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಸಹಕಾರ್ಯದರ್ಶಿ ಮೋಹನ ಉಡುಪ ಹಂದಾಡಿ, ಪತ್ರಕರ್ತರು, ಕಸಾಪ ಉಡುಪಿ ಘಟಕದ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಮುಖ್ಯ ಶಿಕ್ಷಕ ಸುಧಾಕರ್ ಎಮ್., ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್, ಪ್ರಕಾಶ ಬಿಲ್ಲವ, ಆಶಾ, ಊರಿನ ಹಿರಿಯರಾದ ಕೃಷ್ಣಯ್ಯ ಪೂಜಾರಿ ಹಾಗು ಪೋಷಕರು ಉಪಸ್ಥಿತರಿದ್ದರು.
ಸ್ಮಾರ್ಟ್ ನಗರದ ಕಳಪೆ ಕಾಮಗಾರಿ; ಸಾಮಾನ್ಯ ಮಳೆಗೇ ಮಂಗಳೂರಿನಲ್ಲಿ ಮುಳಿಹಿತ್ಲುವಿನ ರಿವರ್ಫ್ರಂಟ್ ತಡೆಗೋಡೆ ಕುಸಿತ
ಮಂಗಳೂರು : ಕಡಲ ನಗರಿ ಮಂಗಳೂರು ಈಗ ಸ್ಮಾರ್ಟ್ ನಗರಿಯಾಗಿ ರೂಪುಗೊಳ್ಳುತ್ತಿದೆ. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಆದರೆ ಇತ್ತೀಚೆಗೆ ಸುರಿದ ಸಾಮಾನ್ಯ ಮಳೆಗೆ ಸ್ಮಾರ್ಟ್ ಸಿಟಿ ಕಾಮಗಾರಿಯ ರಿವರ್ಫ್ರಂಟ್ ತಡೆಗೋಡೆಯೇ ಕುಸಿದು ನೀರುಪಾಲಾಗಿದೆ.
ನಗರದ ಮುಳಿಹಿತ್ಲುವಿನ ನದಿತೀರದಲ್ಲಿ ರಿವರ್ಫ್ರಂಟ್ ಯೋಜನೆಗಾಗಿ ತಡೆಗೋಡೆ ಕಾಮಗಾರಿ ನಡೆದಿತ್ತು. ಆದರೆ ಇತ್ತೀಚೆಗೆ ಸುರಿದ ಸಾಮಾನ್ಯ ಮಳೆಗೇ ಈ ತಡೆಗೋಡೆ ಕುಸಿದುಬಿದ್ದಿದ್ದು, ಇದು ಮಂಗಳೂರು ಸ್ಮಾರ್ಟ್ ಸಿಟಿಯ ಕಳಪೆ ಕಾಮಗಾರಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. 70 ಕೋಟಿ ರೂ. ವೆಚ್ಚದಲ್ಲಿ ಈ ರಿವರ್ ಫ್ರಂಟ್ ಯೋಜನೆ ಕಾಮಗಾರಿ ನಡೆಯುತ್ತಿದೆ. ಸಿಆರ್ಝಡ್ ವ್ಯಾಪ್ತಿಯಲ್ಲಿ ಈ ಕಾಮಗಾರಿಯನ್ನು ತಕ್ಷಣ ತಡೆನೀಡಬೇಕೆಂದು ಎನ್ಇಸಿಎಫ್ ಪರಿಸರವಾದಿ ತಂಡ ಎನ್ಜಿಟಿಗೆ ದೂರು ನೀಡಿತ್ತು. ಇದೀಗ 14.5ಕೋಟಿ ರೂ. ವೆಚ್ಚದಲ್ಲಿ ನಡೆದ ಕಾಮಗಾರಿ ಕುಸಿದಿದೆ.
ತಡೆಗೋಡೆಗೆ ಹಾಕಿರುವ ಸಿಮೆಂಟ್ ಕೈಯಲ್ಲಿಯೇ ಕಿತ್ತು ಬರುತ್ತಿದೆ. ಸಾಮಾನ್ಯ ಮಳೆಗೇ ಕಾಮಗಾರಿ ಕುಸಿದರೆ, ಮುಂದೆ ಸುರಿಯುವ ಧಾರಕಾರ ಮಳೆಗೆ ಸಂಪೂರ್ಣ ಕಾಮಗಾರಿಯೇ ನೀರು ಪಾಲಾಗುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಸ್ಮಾರ್ಟ್ ಸಿಟಿ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಮಾರ್ಟ್ ಸಿಟಿ ಹಣವನ್ನು ಗುಳುಂ ಸ್ವಾಹ ಮಾಡುವ ಪರಿಣಾಮ ಕಳಪೆ ಕಾಮಗಾರಿ ಆಗುತ್ತಿದೆ. ಇತ್ತ ಕಾಮಗಾರಿ ನಡೆಸಿರುವ ಗುತ್ತಿಗೆದಾರನ ಮೇಲೆ ಯಾವ ಕ್ರಮವೂ ಆಗಿಲ್ಲ ಎಂದು ಪರಿಸರವಾದಿಗಳು ದೂರು ನೀಡುತ್ತಿದ್ದಾರೆ.
ಈ ರಿವರ್ ಫ್ರಂಟ್ ಯೋಜನೆ ಆರಂಭವಾದಾಗಲೇ ಪರಿಸರವಾದಿಗಳು ಅದನ್ನು ವಿರೋಧಿಸಿದ್ದರು. ಆದರೆ ಈ ವಿರೋಧದ ನಡುವೆಯೂ ಕಾಮಗಾರಿ ಆರಂಭಗೊಂಡಿತ್ತು. ಆದರೆ ಇದೀಗ ಆಗಿರುವ ಒಂದಷ್ಟು ಕಾಮಗಾರಿಯೂ ಕುಸಿದಿದೆ. ಈ ಮೂಲಕ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾರ್ಯಕ್ಕೆ ಬಂದಿರುವ ಸಾವಿರಾರು ಕೋಟಿ ರೂಪಾಯಿ ವೃಥಾ ಪೋಲಾಗುತ್ತಿರುವುದಂಥೂ ಸತ್ಯ.