Government
ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಹಿರಿಯ ಸದಸ್ಯೆ ಕಾಮತ್ರವರು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯಿಂದ ಕೊಡ ಮಾಡಲ್ಪಡುವ 2024ರ ಡಾ. ಬಿ.ಸಿ. ರಾಯ್ ಪ್ರಶಸ್ತಿಗೆ ಭಾಜನರಾಗಿದ್ದಾರೆ

ಬೆಂಗಳೂರಿನಲ್ಲಿ ನಡೆದ ವೈದ್ಯರ ದಿನಾಚರಣೆಯ ಸಂದರ್ಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಡಾ. ಎಚ್ ಕೆ ಪಾಟೀಲ್, ಭಾ ವೈ ಸಂಘದ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ ಹಾಗೂ ಗೌರವ ಕಾರ್ಯದರ್ಶಿ ಡಾ ಕರುಣಾಕರ್ ಉಪಸ್ಥಿತರಿದ್ದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿಯಾದ ಕೋಟ – Thalassemia ಮತ್ತು Aplastic ಎಂಬ ಗಂಭೀರ ರಕ್ತದ ಖಾಯಿಲೆಯ ಚಿಕಿತ್ಸೆ ಬಗ್ಗೆ ಚರ್ಚೆ
ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಇಂದು ದೆಹಲಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ಅಪೂರ್ವ ಚಂದ್ರ ರವರನ್ನು ಭೇಟಿಯಾಗಿ ಉಡುಪಿಯ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ (KMC) ಮಕ್ಕಳ ವಿಭಿನ್ನ ಕಾಯಿಲೆಗಳ ಚಿಕಿತ್ಸೆಗೆ ಕೇಂದ್ರ ಸರಕಾರದ ಸಹಕಾರದ ಕುರಿತು ಚರ್ಚಿಸಿದರು.
Thalassemia ಮತ್ತು Aplastic anaemia ಎಂಬ ರಕ್ತಕ್ಕೆ ಸಂಬಂಧಿಸಿದ ಖಾಯಿಲೆಗಳು ಮಕ್ಕಳ ಅರೋಗ್ಯದ ಮೇಲೆ ಮಾತ್ರವಲ್ಲದೆ ಕುಟುಂಬದ ಆರ್ಥಿಕ ಪರಿಸ್ಥಿತಿಯ ಮೇಲೆಯೂ ಭೀಕರ ಹೊಡೆತ ನೀಡಿದೆ. ಈ ಖಾಯಿಲೆ ಬಂದರೆ ಸುಮಾರು ಹದಿನೈದು ಲಕ್ಷಕ್ಕೂ ಅಧಿಕ ಖರ್ಚು ತಗಲುವ ಸಂಭವವಿದೆ. ಕಸ್ತೂರ್ಬಾ ಮೆಡಿಕಲ್ ಕಾಲೇಜು ಮುಖಾಂತರ ಈಗಾಗಲೇ ಬಹಳಷ್ಟು ಮಕ್ಕಳಿಗೆ ಈ ಚಿಕಿತ್ಸೆ ನೀಡಲಾಗಿದೆ.
ಈ ಖಾಯಿಲೆ ತಗಲುವ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಪ್ರತಿಷ್ಠಿತ “ಕೋಲ್ ಇಂಡಿಯಾ” ಸಂಸ್ಥೆಯು ಸುಮಾರು 10 ಲಕ್ಷದಿಂದ 15 ಲಕ್ಷ ರೂಪಾಯಿಯವರೆಗೆ ಪರಿಹಾರವನ್ನು ನೀಡುತ್ತದೆ. ಹೀಗಾಗಿ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಧ್ಯ ಪ್ರವೇಶಿಸಿ ಪ್ರಸ್ತುತ ಇರುವ ತಾಂತ್ರಿಕ ದೋಷವನ್ನು ಸರಿಪಡಿಸಿ ರೋಗಿಗಳಿಗೆ ನೆರವಾಗುವಂತೆ ಕೋರಲಾಯಿತು. ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಜೆಪಿ ನಡ್ಡಾರವರಿಗೆ ಇಲಾಖೆಯ ಕಾರ್ಯದರ್ಶಿಗಳ ಮೂಲಕ ಮನವಿ ಮಾಡಲಾಯಿತು.
ಮನವಿಗೆ ಪೂರಕವಾಗಿ ಸ್ಪಂದಿಸಿದ ಅಧಿಕಾರಿಗಳು ಅತಿ ಶೀಘ್ರದಲ್ಲಿ ಈ ಸಮಸ್ಯೆಯನ್ನು ಪರಿಹರಿಸಿಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಹರ್ಶ ಮಂಗಳ ಇದರ ನಿರ್ದೇಶಕರಾದ ಶ್ರೀಮತಿ ಎಲ್.ಎಸ್.ಚಾಂಗ್ಸನ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಕಲ್ಪಿಸಲು ಹಾಗೂ ವಿದ್ಯಾರ್ಥಿ ವೇತನಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ವಿದ್ಯಾರ್ಥಿ ವೇತನವನ್ನು ನೀಡದ ರಾಜ್ಯ ಸರ್ಕಾರದ ವಿರುದ್ಧ ಅಜ್ಜರಕಾಡು ಯುದ್ಧ ಸ್ಮಾರಕದ ಬಳಿ ಪ್ರತಿಭಟಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ನಗರ ಕಾರ್ಯದರ್ಶಿ ಶ್ರೀವತ್ಸ, ರಾಜ್ಯಾದ್ಯಂತ ಗ್ರಾಮೀಣ ಭಾಗಗಳಿಂದ ನಗರಕ್ಕೆ ಬಂದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಲಕ್ಷದಲ್ಲಿದೆ. ಅಂತೆಯೇ ಮುಖ್ಯವಾಗಿ ಉಡುಪಿಯಂತಹ ನಗರಕ್ಕೆ ಶಿಕ್ಷಣಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹೊರ ಜಿಲ್ಲೆಯಿಂದ ಬರುತ್ತಾರೆ. ಈಗಾಗಲೇ ಹೈಸ್ಕೂಲ್ ಮತ್ತು ಪಿಯುಸಿ ತರಗತಿಗಳು ಪ್ರಾರಂಭವಾಗಿ 40 ದಿನಗಳಾಗುತ್ತಾ ಬಂದರೂ ಇನ್ನು ಸಹ ಹಾಸ್ಟೆಲ್ ಸೀಟು ಹಂಚಿಕೆ ಪ್ರಕ್ರಿಯೆ ಪ್ರಾರಂಭವಾಗದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ, ಶಿಕ್ಷಣ ವಂಚಿತರಾಗುತ್ತಿದ್ದಾರೆ. ಮತ್ತೊಂದೆಡೆ ವಿದ್ಯಾಸಿರಿ, ಕಾರ್ಮಿಕರ ನಿಧಿ ವಿದ್ಯಾರ್ಥಿ ವೇತನವೂ ಸಹ ಬಿಡುಗಡೆಯಾಗುತ್ತಿಲ್ಲ, ರೈತನಿಧಿ ವಿದ್ಯಾರ್ಥಿ ವೇತನ ಕಡಿತಗೊಳಿಸಿರುವುದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ವಿಭಾಗ ಸಂಚಾಲಕರಾದ ಗಣೇಶ್ ಪೂಜಾರಿ, ಜಿಲ್ಲಾ ಸಂಚಾಲಕರಾದ ಕಾರ್ತಿಕ್ ಎಮ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸಂಹಿತಾ, ನಗರ ಸಹ-ಕಾರ್ಯದರ್ಶಿಗಳಾದ ಭಾವನಾ ಸೇರಿದಂತೆ ಪ್ರಮುಖರಾದ ಭೂಷಣ್, ಮನು, ಮಾಣಿಕ್ಯ, ಸ್ವಸ್ತಿಕ್, ನವೀನ್, ಅನಂತಕೃಷ್ಣ ಮತ್ತಿತರರಿದ್ದರು.

ಉಡುಪಿ : ಗಾಳಿ ಮಳೆಗೆ ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹತ್ರಬೈಲು ಗಣಪತಿ ಗೌರಿ ಅವರ ದನದ ಕೊಟ್ಟಿಗೆ ಹಾಗೂ ಬಾಡಾಲಜೆಡ್ಡು ಪವಿತ್ರ ಪೂಜಾರಿ ಅವರ ಮನೆಗೆ ಹಾನಿ ಉಂಟಾಗಿದ್ದು, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕರು ಶೀಘ್ರವೇ ಗರಿಷ್ಠ ಪರಿಹಾರ ಮಂಜೂರು ಮಾಡುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪೆರ್ಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚೇತನಾ ಶೆಟ್ಟಿ, ಉಪಾಧ್ಯಕ್ಷರಾದ ದೇವು ಪೂಜಾರಿ, ಪೆರ್ಡೂರು ಗ್ರಾಮ ಪಂಚಾಯತ್ ಸದಸ್ಯರಾದ ತುಕಾರಾಮ್ ನಾಯಕ್, ಸಚಿನ್ ಪೂಜಾರಿ, ಜಗದೀಶ್ ಶೆಟ್ಟಿ, ಶಂಕುತಲಾ ಶೆಟ್ಟಿ, ಉಷಾ ನಾಯಕ್, ಉಷಾಲತಾ ಪೂಜಾರಿ, ಪೆರ್ಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಶ್ ಸೆರ್ವೇಗಾರ್ ಉಪಸ್ಥಿತರಿದ್ದರು.


ಮಂಗಳೂರು : ಅಡಿಕೆ ಮಾರುಕಟ್ಟೆಯ ಚೇತರಿಕೆಗೆ ಉತ್ತೇಜನ ನೀಡಲು ಮತ್ತು ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕ್ಯಾಂಪ್ಕೊ ಮನವಿ ಮಾಡಿದೆ.
ಮುಖ್ಯವಾಗಿ ಅಡಿಕೆಯ ಮೇಲಿನ ಜಿಎಸ್ಟಿಯನ್ನು ಶೇ. 5ರಿಂದ ಶೇ. 2ಕ್ಕೆ ಇಳಿಸಬೇಕು. ಇದರಿಂದ ರೈತರು ಸಹಕಾರಿ ಸಂಸ್ಥೆಗಳಲ್ಲಿ ವ್ಯವಹರಿಸಲು ಉತ್ತೇಜನ ಸಿಗಲಿದೆ. ತೆರಿಗೆ ಕಳ್ಳತನಕ್ಕೆ ಕಡಿವಾಣ ಬೀಳಲಿದ್ದು ಸರಕಾರಕ್ಕೆ ತೆರಿಗೆಯ ಆದಾಯ ಹೆಚ್ಚಾಗಲಿದೆ. ಸಿಜಿಎಸ್ಟಿ, ಎಸ್ಜಿಎಸ್ಟಿ ಮತ್ತು ಐಜಿಎಸ್ಟಿ ಮುಂತಾದ ಬಹುಸ್ಥರದ ತೆರಿಗೆಯ ಬದಲು ಸರಳ ಮತ್ತು ಏಕೀಕೃತ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಿ ಸರಳಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಅಲೆಮಾರಿ ಸಮುದಾಯಗಳಿಗೆ ಮನೆ ನಿವೇಶನ ಸಹಿತ ಮೂಲಭೂತ ಸೌಕರ್ಯಗಳಿಗೆ ಒತ್ತಾಯಿಸಿ ಧರಣಿ
ಉಡುಪಿ : ಅಲೆಮಾರಿ ಸಮುದಾಯಗಳಿಗೆ ಮನೆ ನಿವೇಶನ ಸಹಿತ ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಕರಾವಳಿ ವೃತ್ತಿ ನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಧರಣಿ ನಡೆಯಿತು.

ಡಿವೈಎಫ್ಐ ರಾಜ್ಯ ಮುಖಂಡ, ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಗೌರವ ಸಲಹೆಗಾರ ಸಂತೋಷ್ ಬಜಾಲ್ ಮಾತನಾಡಿ, ಹಲವು ವರ್ಷಗಳಿಂದ ಬ್ರಹ್ಮಾವರ, ಪಾಂಗಳ, ಮಲ್ಪೆ, ಕಟ್ಬೆಳ್ತೂರು, ಗುಲ್ವಾಡಿ ನದಿ ತಟದಲ್ಲಿ ಬದುಕುತ್ತಿರುವ ಬುಡಕಟ್ಟು ಅಲೆಮಾರಿ ಶಿಳ್ಳೆಕ್ಯಾತ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು, ಅವರ ಮಹಿಳೆಯರ ಮೇಲಿನ ದೈಹಿಕ ಹಲ್ಲೆಗಳಿಗೆ ಕನಿಷ್ಟ ಸ್ಪಂದಿಸದೇ ಇರುವ ಶಾಸಕ ಸಂಸದರು, ಇಲ್ಲಿನ ಮತೀಯ ರಾಜಕಾರಣಕ್ಕೆ ಅಬ್ಬರಿಸುತ್ತಿರುತ್ತಾರೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿಗೆ ಸೇರಿದ ಶಿಳ್ಳೆಕ್ಯಾತ ಸಮುದಾಯಗಳು ಅಲೆಮಾರಿಯಾಗಿ ಬದುಕುತ್ತಿರುವ ಕಾರಣಕ್ಕೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಈ ಸಮುದಾಯಗಳ ಮೇಲಕ್ಕೆತ್ತಲು ಸಮಾಜ ಕಲ್ಯಾಣ ಇಲಾಖೆ, ಅಲೆಮಾರಿ ಅಭಿವೃದ್ಧಿ ನಿಗಮಗಳು ಹೆಸರಿಗಷ್ಟೇ ಇದೆ. ಆದರೆ ಆದ್ಯತೆಯಲ್ಲಿ ಇವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಿಲ್ಲ. ಇವರು ಬದುಕುತ್ತಿರುವ ಗುಡಿಸಲಿಗೆ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಅಧಿಕಾರಿಗಳು ಭೇಟಿ ನೀಡಿ ಅಧ್ಯಯನ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಕೇಂದ್ರ ಸಚಿವ ಗಡ್ಕರಿ ಭೇಟಿಯಾದ ಸಂಸದ ಬಿ.ವೈ ರಾಘವೇಂದ್ರ; ರಸ್ತೆ ಯೋಜನೆಗಳ ಅನುಷ್ಠಾನಕ್ಕೆ ಮನವಿ
ಬೈಂದೂರು : ಶಿವಮೊಗ್ಗ ಸದಸ್ಯರಾದ ಬಿ. ವೈ. ರಾಘವೇಂದ್ರ ಅವರು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಇಂದು ಗೃಹ ಕಛೇರಿಯಲ್ಲಿ ಭೇಟಿ ಮಾಡಿ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗಬೇಕಾದ ಹೆದ್ದಾರಿ ಕಾಮಗಾರಿಗಳ ಅಗತ್ಯತೆಗಳ ಬಗ್ಗೆ ಚರ್ಚಿಸಿ ಈ ಕೆಳಕಂಡ ಯೋಜನೆಗಳಿಗೆ ಅನುಮೋದನೆ ದೊರಕಿಸಿಕೊಡಲು ಮನವಿ ಮಾಡಿದ್ದಾರೆ.
ಆಗುಂಬೆಘಾಟಿ ರಸ್ತೆಗೆ ಪರ್ಯಾಯವಾಗಿ ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 4 ಪಥದ ಸುರಂಗ ಮಾರ್ಗದ ರಸ್ತೆ ನಿರ್ಮಾಣ,
ಕುಂದಾಪುರದಿಂದ ಗಂಗೊಳ್ಳಿ ಬಂದರಿನವರೆಗೆ 5.60 ಕಿ.ಮೀ ಉದ್ದದ ರಸ್ತೆ ಹಾಗು ಭಾರೀ ಸೇತುವೆ ನಿರ್ಮಾಣ, ರಾ. ಹೆದ್ದಾರಿ 766 ಸಿ ಬೈಂದೂರಿನಿಂದ ವಿವಿಧೋದ್ದೇಶ ಬಂದರಿನವರೆಗೆ ತಾರಾಪತಿ ಅಳವೆಕೋಡಿ ಮೂಲಕ ವಿಸ್ತರಣೆ ಮಾಡಿ 3.80 ಕಿ.ಮೀ ಉದ್ದದ ರಸ್ತೆ ಹಾಗು ಸೇತುವೆಗಳ ನಿರ್ಮಾಣ, ರಾ. ಹೆದ್ದಾರಿ 766 ಸಿ ಬೈಂದೂರಿನಿಂದ ರಾಣಿಬೆನ್ನೂರಿನವರೆಗೆ ಬಾಕಿ ಉಳಿದ ಬಾಗಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣ, ರಾ. ಹೆದ್ದಾರಿ 369 ಇ ಸಾಗರದಿಂದ ಮರಕುಟಕವರೆಗೆ ದ್ವಿಪಥ ರಸ್ತೆ (ಸಾಗರ ಪಟ್ಟಣದ ಬೈಪಾಸ್ ರಸ್ತೆ ಸೇರಿ) ನಿರ್ಮಾಣಕ್ಕೆ ಮನವಿ ಮಾಡಿದ್ದಾರೆ.
ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಸಂಬಂದಿಸಿದ ಕೇಂದ್ರ ಭೂಸಾರಿಗೆ ಮಂತ್ರಾಲಯದ ಅಧಿಕಾರಿಗಳಿಗೆ ಕಾಮಗಾರಿಗಳ ಯೋಜನಾವರದಿ ತಯಾರಿಸಲು ಸಮಾಲೋಚಕರನ್ನು ತಕ್ಷಣ ನಿಯೋಜಿಸಲು ಸೂಚಿಸಿದ್ದು ಯೋಜನಾ ವರದಿ ಪಡೆದು ಮಂಜೂರಾತಿ ನೀಡಲು ಸೂಚಿಸಿದ್ದಾರೆ.

ಬಂಕೇರಕಟ್ಟ ಸೇತುವೆ ಮುಳುಗಡೆ : ಜಿಲ್ಲಾಧಿಕಾರಿಗಳೊಂದಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ
ಉಡುಪಿ : ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಕೇರಕಟ್ಟ ಸೇತುವೆ ಮಳೆಗಾಲದಲ್ಲಿ ಮುಳುಗಡೆಯಾಗಿ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ. ಯವರೊಂದಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸ್ಥಳಕ್ಕೆ ಭೇಟಿ ನೀಡಿ ಮಳೆ ನೀರು ಸರಾಗವಾಗಿ ಹರಿಯಲು ತಾತ್ಕಾಲಿಕವಾಗಿ ಸೇತುವೆಯ ಕೆಳಭಾಗದ ಹೂಳು ಹಾಗೂ ಕಸಕಡ್ಡಿಗಳನ್ನು ತಕ್ಷಣ ತೆರವು ಮಾಡಲು ಕ್ರಮ ಕೈಗೊಂಡು ಹೊಸ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗ ಡಾ. ಅರುಣ್ ಕೆ., ಕುಂದಾಪುರ ಉಪ ವಿಭಾಗಾಧಿಕಾರಿ ಶ್ರೀಮತಿ ರಶ್ಮಿ, ನಗರಸಭಾ ಸದಸ್ಯರಾದ ಶ್ರೀ ಸುಂದರ ಕಲ್ಮಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜಾತ ಶೆಟ್ಟಿ, ಪಂಚಾಯತ್ ಸದಸ್ಯರಾದ ರಾಜೇಶ್ ಪೂಜಾರಿ, ಶಶಿಧರ ಪೂಜಾರಿ, ಶ್ರೀ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

ಕಲ್ಸಂಕ ತೋಡಿಗೆ ಸುರಕ್ಷತಾ ತಡೆಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಯಶ್ಪಾಲ್ ಸುವರ್ಣ ಸೂಚನೆ
ಉಡುಪಿ : ಕಲ್ಸಂಕದಿಂದ ಕೃಷ್ಣ ಮಠ ಪಾರ್ಕಿಂಗ್ ಸಂಪರ್ಕಿಸುವ ರಸ್ತೆಯ ಇಕ್ಕೆಲಗಳ ತೋಡಿಗೆ ತಕ್ಷಣ ಸುರಕ್ಷತಾ ತಡೆಗೋಡೆ ನಿರ್ಮಿಸಲು ಕ್ರಮ ವಹಿಸುವಂತೆ ನಗರಸಭೆ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.

ಕೆಲವು ದಿನಗಳ ಹಿಂದೆ ರಿಕ್ಷಾ ತೋಡಿಗೆ ಬಿದ್ದ ಘಟನೆ ಹಿನ್ನೆಲೆಯಲ್ಲಿ ದಿನಂಪ್ರತಿ ಸಾವಿರಾರು ಮಂದಿ ಸಂಚರಿಸುವ ರಸ್ತೆ ಸಂಚಾರದ ಸುರಕ್ಷತೆ ದೃಷ್ಟಿಯಿಂದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಿಥಿಲಗೊಂಡಿರುವ ತೋಡಿನ ಬದಿಗಳ ಮರು ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಗಿರೀಶ್ ಅಂಚನ್, ಬಾಲಕೃಷ್ಣ ಶೆಟ್ಟಿ, ನಗರಸಭೆ ಎಇಇ ದುರ್ಗಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
