ಬೈಂದೂರು : ಕರಾವಳಿ ಭಾಗದಲ್ಲಿ ಬೇಸಿಗೆಯ ತೀವ್ರತೆಯು ಜಾಸ್ತಿಯಾಗುತ್ತಿದ್ದು, ವಿವಿಧ ಜಲ ಮೂಲಗಳಲ್ಲಿ ಕುಡಿಯುವ ನೀರಿನಮಟ್ಟ ಸಂಪೂರ್ಣ ಕುಸಿದಿದೆ. ಹಲವು ಗ್ರಾಮ ಪಂಚಾಯತ್ಗಳಲ್ಲಿ ಟ್ಯಾಂಕರ್ ನೀರು ಪೂರೈಸುವ ಅನಿವಾರ್ಯತೆ ಕಂಡು ಬಂದಿದೆ. ಹಲವು ಕಡೆ ನೀರಿನ ಮೂಲಗಳ ಲಭ್ಯತೆ ಇದ್ದರೂ ಹಣಕಾಸಿನ ಕೊರತೆಯಿಂದ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀರಿನ ತುರ್ತು ಪರಿಸ್ಥಿತಿ ನಿಭಾಯಿಸಲು ಪ್ರತಿ ಕ್ಷೇತ್ರಕ್ಕೆ ಟಾಸ್ಕ್ ಫೋರ್ಸ್ ನಡಿ ನೀರು ಪೂರೈಕೆಗೆ ಅನುದಾನ ಒದಗಿಸುವಂತೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅನಿವಾರ್ಯ ಸಂದರ್ಭದಲ್ಲಿ ಟ್ಯಾಂಕರ್ ನೀರು ಪೂರೈಸಬೇಕಾದರೂ ಅನುದಾನ ನೀಡಲು ಬರ ಪೀಡಿತ ತಾಲೂಕು ಘೋಷಣೆ ಆಗಬೇಕೆಂಬ ನಿಯಮ ಹಾಕಲಾಗಿದೆ. ಬರ ಪೀಡಿತವಲ್ಲದ ತಾಲೂಕುಗಳ ಹಲವು ಗ್ರಾಮಗಳಲ್ಲೂ ಕುಡಿಯುವ ನೀರು ಪೂರೈಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಕೃತಿಕ ವಿಕೋಪದಿಂದ ಕುಸಿದು ಹೋಗಿರುವ ಕುಡಿಯುವ ನೀರಿನ ಬಾವಿಯನ್ನು ಪುನರ್ ನಿರ್ಮಾಣ ಮಾಡಲು ಸರಕಾರದ ಬಳಿ ಅನುದಾನ ಇಲ್ಲವಾಗಿದೆ. ಜಿಲ್ಲಾಡಳಿತ ಕೈ ಚೆಲ್ಲಿ ಕುಳಿತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರ ಕುಡಿಯುವ ನೀರಿನ ಸಮಸ್ಯೆ ಅರ್ಥಮಾಡಿಕೊಂಡು ಬೇಸಿಗೆಯ ತುರ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಟಾಸ್ಕ್ ಫೋರ್ಸ್ ನಡಿ ತುರ್ತು ಅನುದಾನ ಒದಗಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿ ಪ್ರಿಯಾಂಕ್ ಖರ್ಗೆಯವರಿಗೆ ಮನವಿ ಮಾಡಿದ್ದಾರೆ.
15ನೇ ಹಣಕಾಸು ಯೋಜನೆಯಡಿ ನಿರ್ವಹಣಾ ಅನುದಾನವನ್ನು ಟ್ಯಾಂಕರ್ ನೀರು ಪೂರೈಸಲು ಪಂಚಾಯತ್ಗಳಿಗೆ ಸರಕಾರ ಅವಕಾಶ ಮಾಡಿಕೊಟ್ಟಿದ್ದರೂ, ಸಮರ್ಪಕ ಸುತ್ತೋಲೆ ಹೊರಡಿಸದ ಕಾರಣ ಟ್ಯಾಂಕರ್ ನೀರು ಪೂರೈಕೆಗೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಸರಕಾರ ಅಗತ್ಯ ಸುತ್ತೋಲೆ ಹೊರಡಿಸಬೇಕೆಂದು ಸರ್ಕಾರವನ್ನು ಶಾಸಕರು ಆಗ್ರಹಿಸಿದ್ದಾರೆ.