ಉಡುಪಿ : ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು. ದಿನಾಂಕ : 01-08-2024ರ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕ : 02.08.2024ರಂದು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿರುತ್ತದೆ.
Education
ಮಂಗಳೂರು : ಪಬ್ಜಿ ಆನ್ಲೈನ್ ಆಟವಾಡುವ ಹವ್ಯಾಸವಿದ್ದ ನಗರದ ಬಿಜೈ ನಿವಾಸಿ ಯುವತಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆಲಿಸ್ತಾ ಫೆರಾವೊ(18) ನಾಪತ್ತೆಯಾದ ಯುವತಿ.
ಎಸ್ಎಸ್ಎಲ್ಸಿ ಮುಗಿಸಿದ ಬಳಿಕ ಕೆಲಿಸ್ತಾ ಫೆರಾವೊ ಆಟೊಮೊಬೈಲ್ ಕೋರ್ಸ್ಗೆ ಸೇರ್ಪಡೆಗೊಂಡಿದ್ದಳು. ಈಕೆಗೆ ಮೊಬೈಲ್ನಲ್ಲಿ ಪಬ್ಜಿ ಆಟವಾಡುವ ಹುಚ್ಚು ಅಂಟಿಕೊಂಡಿತ್ತು. ಮಂಗಳವಾರ ಮಧ್ಯಾಹ್ನ 12.15ರ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದಳು. ಈ ವಿಚಾರ ಮನೆಯವರ ಗಮನಕ್ಕೆ ಬಂದ ತಕ್ಷಣ ಹುಡುಕಾಟ ಆರಂಭಿಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸಿದಾಗ ಆಕೆ ಆಟೋರಿಕ್ಷಾದಲ್ಲಿ ಹೋಗುತ್ತಿರುವ ದೃಶ್ಯ ದಾಖಲಾಗಿತ್ತು.
ಈಕೆಗೆ 9ನೇ ತರಗತಿಯಿಂದಲೇ ಪಬ್ಜಿ ಆಡುತ್ತಿದ್ದಳು. ಶಾಲೆಯಿಂದ ಮನೆಗೆ ಬಂದ ತಕ್ಷಣ ವೈಫೈ ಬಳಸಿ ಮೊಬೈಲ್ನಲ್ಲಿ ಪಬ್ಜಿ ಆಡುತ್ತಿದ್ದಳು. ಈ ಬಗ್ಗೆ ಹೆತ್ತವರು ಹಲವಾರು ಬಾರಿ ಎಚ್ಚರಿಕೆ ನೀಡಿದ್ದರು. ಇದೇ ವಿಚಾರವಾಗಿ ಹಿಂದೊಮ್ಮೆ ಗಲಾಟೆ ಕೂಡ ನಡೆದಿತ್ತು. ಇತ್ತೀಚೆಗೆ ಮನೆಯವರು ಈಕೆಗೆ ಮೊಬೈಲ್ ಕೊಡಲು ನಿರ್ಧರಿಸಿ ಸಿಮ್ ಖರೀದಿಸಿದ್ದರು ಎಂದು ತಿಳಿದುಬಂದಿದೆ.
ಕೆಲಿಸ್ತಾ ಕನ್ನಡ, ತುಳು, ಇಂಗ್ಲಿಷ್, ಕೊಂಕಣಿ ಭಾಷೆಗಳನ್ನು ಮಾತನಾಡುತ್ತಾಳೆ. ಬಿಳಿ ಟಾಪ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಳು. ಈಕೆಯ ಬಗ್ಗೆ ಮಾಹಿತಿ ದೊರೆತವರು ಬರ್ಕೆ ಪೊಲೀಸ್ ಠಾಣೆ (0824-2220522) ಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆ, ಅತ್ತಾವರ, ಮಂಗಳೂರಿನ ವೈದ್ಯಕೀಯ ಅಧೀಕ್ಷಕರಾಗಿ ಡಾ. ಚಕ್ರಪಾಣಿ ಎಂ ನೇಮಕ
ಮಂಗಳೂರು : ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆ, ಅತ್ತಾವರ, ಮಂಗಳೂರಿನ ನೂತನ ವೈದ್ಯಕೀಯ ಅಧೀಕ್ಷಕರನ್ನಾಗಿ ಡಾ. ಚಕ್ರಪಾಣಿ ಎಂ. ಅವರನ್ನು ಮಾಹೆ ಮಣಿಪಾಲವು ನೇಮಕ ಮಾಡಿದೆ. ದಕ್ಷಿಣ ಕನ್ನಡದ ಅತ್ಯಂತ ಗೌರವಾನ್ವಿತ ಹಿರಿಯ ವೈದ್ಯರಾಗಿರುವ ಇವರು, ಆಸ್ಪತ್ರೆಯ ಕ್ಲಿನಿಕಲ್ ಮತ್ತು ಆಡಳಿತಾತ್ಮಕ ಉತ್ಕೃಷ್ಟತೆಯನ್ನು ಹೆಚ್ಚಿಸುವ ಭರವಸೆ ನೀಡುವ ಪರಿಣತಿ ಮತ್ತು ನಾಯಕತ್ವದ ಅನುಭವ ಹೊಂದಿದ್ದಾರೆ. ಅವರ ಅಸಾಧಾರಣ ಕ್ಲಿನಿಕಲ್ ಕೌಶಲ್ಯಗಳಿಗಾಗಿ ಅವರು ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ ಮತ್ತು ಈ ಪ್ರದೇಶದಲ್ಲಿ ವೈದ್ಯಕೀಯ ಚಿಕಿತ್ಸಾ ಮೂಲಾಧಾರವಾಗಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ಅವರ ಕೊಡುಗೆಗಳು ಅವರಿಗೆ ವ್ಯಾಪಕವಾದ ಮನ್ನಣೆ ಮತ್ತು ಗೌರವವನ್ನು ತಂದುಕೊಟ್ಟಿವೆ.
ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಬಿ.ಉನ್ನಿಕೃಷ್ಣನ್ ಅವರು ಡಾ.ಚಕ್ರಪಾಣಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, “ಇವರು ಹಲವಾರು ನಾಯಕತ್ವದ ಸ್ಥಾನಗಳಿಂದ ಗುರುತಿಸಲ್ಪತ್ತಿದ್ದಾರೆ, ಈ ಹಿಂದೆ ವೈದ್ಯಕೀಯ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುತ್ತಾರೆ. ಅವರ ನಾಯಕತ್ವವು ವಿಭಾಗದ ಮತ್ತು ಅದರಾಚೆಗಿನ ವೈದ್ಯಕೀಯ ಅಭ್ಯಾಸದ ಗುಣಮಟ್ಟವನ್ನು ರೂಪಿಸುವಲ್ಲಿ ಮತ್ತು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೆಎಂಸಿ ಅತ್ತಾವರ ಆಸ್ಪತ್ರೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಮಾರ್ಗದರ್ಶನವನ್ನು ನಾವು ಕುತೂಹಲದಿಂದ ನಿರೀಕ್ಷಿಸುತ್ತೇವೆ ಮತ್ತು ಅವರ ಪ್ರಯತ್ನಗಳಲ್ಲಿ ಪ್ರತಿ ಯಶಸ್ಸನ್ನು ಬಯಸುತ್ತೇವೆ” ಎಂದಿದ್ದಾರೆ.
ಅಸೋಸಿಯೇಶನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಡಾ.ಚಕ್ರಪಾಣಿಯವರು, ವೈದ್ಯಕೀಯ ಕ್ಷೆತ್ರದಲ್ಲಿ ಸಮುದಾಯಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ, ಸಹಯೋಗ ಮತ್ತು ನಿರಂತರ ಸುಧಾರಣೆಯ ಮನೋಭಾವವನ್ನು ಬೆಳೆಸಿದ್ದಾರೆ. ಕ್ರಿಟಿಕಲ್ ಕೇರ್ ಮೆಡಿಸಿನ್ನ ಪ್ರವರ್ತಕರಾಗಿ, ಅವರು ಇಂಡಿಯನ್ ಸೊಸೈಟಿ ಆಫ್ ಕ್ರಿಟಿಕಲ್ ಕೇರ್ ಮೆಡಿಸಿನ್ನ ಮಂಗಳೂರು ಅಧ್ಯಾಯದ ಅಧ್ಯಕ್ಷರಾಗಿ, ಕ್ರಿಟಿಕಲ್ ಕೇರ್ ಸೇವೆಗಳಲ್ಲಿ ಪ್ರಗತಿ ಮತ್ತು ಹೊಸ ಮಾನದಂಡಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಕ್ಲಿನಿಕಲ್ ಮತ್ತು ನಾಯಕತ್ವದ ಜೊತೆಗೆ, ಅವರು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಡೀನ್ ಆಗಿ ಸೇವೆ ಸಲ್ಲಿಸಿರುತ್ತಾರೆ. ಅವರ ಶೈಕ್ಷಣಿಕ ಕೊಡುಗೆಗಳು, ಮುಂದಿನ ತಲೆಮಾರುಗಳ ವೈದ್ಯಕೀಯ ವೃತ್ತಿಪರರಿಗೆ ಮಾರ್ಗದರ್ಶಕರಾಗಿ, ಮೂರು ಪಿಎಚ್ಡಿ ವಿದ್ವಾಂಸರಿಗೆ ಮಾರ್ಗದರ್ಶಕರಾಗಿ ಮತ್ತು 82 ಪ್ರಕಟಣೆಗಳನ್ನು ಪ್ರಕಟಿಸುವುದರ ಮೂಲಕ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಶ್ರೀಮಂತಗೊಳಿಸಿದ್ದಾರೆ.
ವೈದ್ಯಕೀಯ ಅಧೀಕ್ಷಕರಾಗಿ ಅವರ ನೇಮಕವು ಅತ್ತಾವರದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಹೊಸ ಅಧ್ಯಾಯವನ್ನು ಬರೆಯಲಿದೆ. ವೈದ್ಯಕೀಯ ಉತ್ಕೃಷ್ಟತೆಗೆ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಸಮರ್ಪಣೆ ನಿಸ್ಸಂದೇಹವಾಗಿ ಆರೋಗ್ಯ ಸೇವೆಗಳಲ್ಲಿ ಆಸ್ಪತ್ರೆಯ ಖ್ಯಾತಿಯನ್ನು ಹೆಚ್ಚಿಸಲಿದೆ.
ಉಡುಪಿ : ಕಳೆದ ಮೂರು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಆಗಸ್ಟ್ 1 (ಗುರುವಾರ)ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ ಗಳಿಗೆ ರಜೆ ಘೋಷಿಸಿರುವುದಿಲ್ಲ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ನಾಳೆ (ಆ.1) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ರಜೆಯನ್ನು ಘೋಷಿಸಿ ದ.ಕ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಆದೇಶಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು ಆಗಸ್ಟ್ 1ರಂದು ಆರೆಂಜ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ತುರ್ತು ಕ್ರಮಗಳನ್ನು ಕೈಗೊಂಡಿದೆ.
ಕುಕ್ಕುಂದೂರು ಎಸಿ ಭೇಟಿ : ಹೊಸ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಗ್ರಾಮ ಪಂಚಾಯತ್ ನಿರ್ಧಾರ
ಕಾರ್ಕಳ : ಕುಕ್ಕುಂದೂರಿನ ಅಯ್ಯಪ್ಪನಗರದಲ್ಲಿರುವ ಅಂಗನವಾಡಿ ಕಟ್ಟಡಕ್ಕೆ ಜು. 3ರಂದು ಮರ ಬಿದ್ದು ಹಾನಿಯಾಗಿದ್ದು, ಇದೀಗ ಹೊಸ ಕಟ್ಟಡ ನಿರ್ಮಾಣಕ್ಕೆ ಕುಕ್ಕುಂದೂರು ಗ್ರಾಮ ಪಂಚಾಯತ್ ನಿರ್ಧರಿಸಿದೆ.
ಜು. 31ರಂದು ಕುಂದಾಪುರ ಉಪವಿಭಾಗ ಸಹಾಯಕ ಆಯುಕ್ತ ಮಹೇಶ್ಚಂದ್ರ ಕೆ. ಅಯ್ಯಪ್ಪನಗರ ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಿದರು. ಕಟ್ಟಡ ದುರಸ್ತಿಗೆ 2 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸುವಂತೆ ಡಿಸಿಗೆ ಮನವಿ ಮಾಡುವುದಾಗಿ ಈ ವೇಳೆ ಎಸಿಯವರು ತಿಳಿಸಿದರು.
ಅಂಗನವಾಡಿ ಕೇಂದ್ರಕ್ಕೆ ಮರ ಬಿದ್ದ ಪರಿಣಾಮ ಕಟ್ಟಡದ ಹೆಂಚುಗಳು ಬಹುತೇಕ ಪುಡಿಪುಡಿಯಾಗಿತ್ತು. ಆದರೆ ಕುಕ್ಕುಂದೂರು ಗ್ರಾಮ ಪಂಚಾಯತ್ ಅಂಗನವಾಡಿ ದುರಸ್ತಿ ಬದಲು ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ತಹಶೀಲ್ದಾರ್ ನರಸಪ್ಪ, ಕಂದಾಯ ನಿರೀಕ್ಷಕ ಶಿವಪ್ರಸಾದ್, ಗ್ರಾಮ ಆಡಳಿತ ಅಧಿಕಾರಿಯವರು ಉಪಸ್ಥಿತರಿದ್ದರು.
ಹೊಸ ಕಟ್ಟಡ ನಿರ್ಮಾಣ ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ದೊರೆಯುವ ಹಣದಿಂದ ಸುಸಜ್ಜಿತವಾಗಿ ದುರಸ್ತಿ ಮಾಡುವುದು ಕಷ್ಟಸಾಧ್ಯ. ಆದ್ದರಿಂದ ಕುಕ್ಕುಂದೂರು ಗ್ರಾಮ ಪಂಚಾಯತ್ ವತಿಯಿಂದ ನರೇಗಾ ಯೋಜನೆಯಡಿಯಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಅನುದಾನ ಮೂಲಕ ಹೊಸ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಕುಕ್ಕುಂದೂರು ಗ್ರಾಮ ಪಂಚಾಯತ್ ಅಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ಜು 31 ರಂದು ರಜೆಯನ್ನು ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ನಾಳೆ ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ತುರ್ತು ಕ್ರಮಗಳನ್ನು ಕೈಗೊಂಡಿದೆ.
ಮಣಿಪಾಲ : ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳ ಇದರ ವತಿಯಿಂದ ಸಮುದಾಯದ ಯುವ ಜನರ 100% ಉದ್ಯೋಗ ಭರವಸೆ ಈಡೇರಿಕೆಗಾಗಿ ಹಾಗೂ ಕೃಷಿ ಭೂಮಿ ಹಕ್ಕು ಪತ್ರ ಮಂಜೂರಾತಿಗಾಗಿ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಕಳೆದ 7 ದಿನಗಳಿಂದ ಅಹೋ ರಾತ್ರಿ ನಿರಂತರ ಧರಣಿ ಸತ್ಯಾಗ್ರಹ ನಡೆಯುತ್ತಿದೆ.
ಇಂದು ಸತ್ಯಾಗ್ರಹದಲ್ಲಿ ಭಾಗವಹಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೊರಗ ಸಮುದಾಯದ ಜೊತೆಯಲ್ಲಿ ಇರುವುದಾಗಿ ತಿಳಿಸಿದರು. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಮನವಿ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.
ರಾಷ್ಟೀಯ ಮಟ್ಟದ 60 ಮೀಟರ್ ಓಟದ ಸ್ಪರ್ಧೆಯಲ್ಲಿ ಉಡುಪಿಯ ಚಿನ್ಮಯ್ಗೆ ಸ್ವರ್ಣ ಪದಕ
ಚೆನ್ನೈನ ಅಡ್ಯಾರ್ನಲ್ಲಿ ನಡೆದ ರಾಷ್ಟೀಯ ಮಟ್ಟದ 60 ಮೀಟರ್ ಓಟದ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆ ಸಾಸ್ತಾನ, ಗುಂಡ್ಮಿ ಗ್ರಾಮದ ಚಿಗುರು ಪ್ರತಿಭೆ ಚಿನ್ಮಯ್ಗೆ ಸ್ವರ್ಣ ಪದಕ ಲಭಿಸಿದೆ.
ಚಂದ್ರ ಪೂಜಾರಿ ಮತ್ತು ಪ್ರೇಮ ಪೂಜಾರಿ ಅವರ ಪುತ್ರನಾದ ಚಿನ್ಮಯ್ ಗುಂಡ್ಮಿ ಸರ್ಕಾರಿ ಪ್ರೌಢ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ.
13 ವರ್ಷದ ಚಿನ್ಮಯ್, ಈ ಮೂಲಕ ತಮ್ಮ ಶಾಲೆ, ಉಡುಪಿ ಜಿಲ್ಲೆ, ಕರ್ನಾಟಕಕ್ಕೆ ಕೀರ್ತಿ ತಂದಿದ್ದು ಇವರ ಮುಂದಿನ ಕ್ರೀಡಾ ಜೀವನ ಅತ್ಯುತ್ತಮವಾಗಿರಲಿ. ಶೈಕ್ಷಣಿಕ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡುವಂತಾಗಲಿ.