ಉಡುಪಿ : ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ – ಸಂಜೀವಿನಿ, ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಹೆಬ್ರಿ, ಗ್ರಾಮ ಪಂಚಾಯತ್ ಹೆಬ್ರಿ ಹಾಗೂ ಹೆಬ್ಬೇರಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಹೆಬ್ಬೇರಿ ಉತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಸಂಜೀವಿನಿ ಮಾರಾಟ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಬ್ರಿ ರಾಮ ಮಂದಿರದ ಮುಂಭಾಗದಲ್ಲಿ ಫೆಬ್ರವರಿ 13 ರಿಂದ 15 ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಈ ಮಾರಾಟ ಮೇಳದಲ್ಲಿ ಮಹಿಳೆಯರು ತಯಾರಿಸಿದ ಗೃಹ ಉಪಯೋಗಿ ವಸ್ತುಗಳು, ಕರಕುಶಲ ವಸ್ತುಗಳು, ಟೆರೇಕೋಟಾ ವಸ್ತುಗಳು, ಕೃತಕ ಆಭರಣ, ಬಟ್ಟೆಬ್ಯಾಗ್, ಆಯುರ್ವೇದಿಕ್ ಉತ್ಪನ್ನಗಳು, ಹೆಬ್ರಿ ಹನಿ ಇತ್ಯಾದಿ ಉತ್ಪನ್ನಗಳು ಲಭ್ಯವಿರುತ್ತದೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೀವಿನಿ ಮಹಿಳೆಯರು, ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳನ್ನು ಹಮ್ಮಿಕೊಂಡಿದ್ದು, ಈ ಎಲ್ಲಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಜೀವಿನಿ ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹ ನೀಡುವಂತೆ ಹೆಬ್ರಿ ತಾಲೂಕು ಪಂಚಾಯತ್ ಕಚೇರಿ ಪ್ರಕಟಣೆ ತಿಳಿಸಿದೆ.
Development
ದಕ್ಷಿಣ ಕನ್ನಡಕ್ಕೆ ಹೆಚ್ಚಿನ ಹೂಡಿಕೆಗೆ ಆಗ್ರಹ: ಸಿಎಂಗೆ ಸಂಸದ ಕ್ಯಾ. ಚೌಟ ಪತ್ರ…!
ಮಂಗಳೂರು : ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಕ್ರಮ ಕೈಗೊಳ್ಳುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಭೌಗೋಳಿಕ ಆಕರ್ಷಣೆ, ಅತ್ಯುತ್ತಮ ಬಂದರು ಸಂಪರ್ಕ, ಬಲಿಷ್ಠ ಮೂಲ ಸೌಕರ್ಯ ಹೊಂದಿರುವ ಕಾರಣ ಈ ಭಾಗದಲ್ಲಿ ಸಂಶೋಧನೆ, ಅಭಿವೃದ್ಧಿ (ಆರ್ ಡಿ), ಮಾಹಿತಿ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ಸಾಗರ ಜೈವಿಕ ತಂತ್ರಜ್ಞಾನ, ಪ್ರವಾಸೋದ್ಯಮ, ಆಹಾರ ಸಂಸ್ಕರಣೆ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳಿವೆ. ಕರಾವಳಿ ಭಾಗದಲ್ಲಿ ಎನ್ಐಟಿಕೆ, ಮಣಿಪಾಲ್ನಂತಹ ಸಂಸ್ಥೆಗಳು ಮಾನವ ಸಂಪತ್ತನ್ನು ರೂಪಿಸುತ್ತಿದ್ದು, ಆರ್ ಡಿ ವಲಯಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸಬಹುದು. ತಂತ್ರಜ್ಞಾನ ನಾವೀನ್ಯತೆಯ ಪಾರ್ಕ್ ಸ್ಥಾಪಿಸಬೇಕು. ಜತೆಗೆ ನವ ಮಂಗಳೂರು ಬಂದರಿನ ಅಭಿವೃದ್ಧಿ ಹಾಗೂ ಜಾಗತಿಕ ವ್ಯಾಪಾರ ಮತ್ತು ಉತ್ಪಾದನ ಕೈಗಾರಿಕೆಗಳನ್ನು ಆಕರ್ಷಿಸಲು ಸಮಗ್ರ ಕರಾವಳಿ ಆರ್ಥಿಕ ವಲಯವನ್ನು ಅಭಿವೃದ್ಧಿಪಡಿಸಬೇಕು ಎಂದರು.
ಕಡಲತೀರದಲ್ಲಿ ನೀಲಿ ಆರ್ಥಿಕತೆ ಮತ್ತು ಸಾಗರ ಜೈವಿಕ ತಂತ್ರಜ್ಞಾನಗಳ ಉತ್ತೇಜನಕ್ಕೆ ಕರಾವಳಿಯ ಸಮು ದಾಯಗಳಿಗೆ ದೀರ್ಘಾವಧಿಯ ಉದ್ಯೋಗ ಒದಗಿಸುವುದು, ಸಮುದ್ರ ಸಂಶೋಧನೆ-ಸಾಗರ ಆಧಾರಿತ ಕೈಗಾರಿಕೆಗಳಲ್ಲಿ ಹೂಡಿಕೆ ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಉಡುಪಿ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಟ್ಟಡದ ಮಾಲೀಕರಿಗೆ ನೋಟೀಸ್ : ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ
ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ವಾಹನ ದಟ್ಟಣೆಯು ದಿನೇ ದಿನೇ ಹೆಚ್ಚಿ, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಸುಗಮ ಸಂಚಾರಕ್ಕೆ ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳು ಪಾಕಿರ್ಂಗ್ ವ್ಯವಸ್ಥೆ ಇಲ್ಲದೆ ಇರುವುದು, ಅನಧಿಕೃತವಾಗಿ ರಚನೆಗೊಂಡಿರುವ ಗೂಡಂಗಡಿಗಳು, ತಳ್ಳುವ ಗಾಡಿಗಳು ರಸ್ತೆಯಲ್ಲಿಯೇ ವ್ಯಾಪಾರ ಕೈಗೊಳ್ಳುವುದು ಸೇರಿದಂತೆ ಮತ್ತಿತರರ ಕಾರಣಗಳಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಉಡುಪಿ ನಗರದ ವ್ಯಾಪ್ತಿಯಲ್ಲಿ 58 ಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳ ಮುಂಭಾಗ ರಸ್ತೆಯ ಮೇಲೆ ಅಂಗಡಿ ಮಾಲೀಕರು ಹಾಗೂ ಗ್ರಾಹಕರು ಪಾರ್ಕಿಂಗ್ ಮಾಡುವ ಹಿನ್ನೆಲೆ, ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ನಗರಸಭೆ ವತಿಯಿಂದ ಕಟ್ಟಡಗಳು ನಿರ್ಮಾಣಕ್ಕೆ ಅನುಮತಿ ಪಡೆದ ಸಂದರ್ಭದಲ್ಲಿ ನಿಯಮಾನುಸರ ಪಾಲಿಸಬೇಕಾದ ಪಾರ್ಕಿಂಗ್ ನಿಯಮಗಳನ್ನು ಪಾಲಿಸದೇ ನಿರ್ಮಾಣ ಮಾಡುವುದು ಕಂಡು ಬಂದಿದೆ. ಕಟ್ಟಡದ ಮಾಲೀಕರಿಗೆ ನೋಟೀಸ್ ನೀಡಿ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಅನುವು ಮಾಡಿಕೊಡಬೇಕು ಎಂದರು.
ನಗರದ ಸರ್ವಿಸ್ ಬಸ್ ನಿಲ್ದಾಣದ ಸುತ್ತಮುತ್ತ, ಬೋರ್ಡ್ ಹೈಸ್ಕೂಲ್ಗಳ ಮುಂಭಾಗ ಗೂಡಂಗಡಿ ನಿರ್ಮಾಣದಿಂದ ಹಾಗೂ ತಳ್ಳುವ ಗಾಡಿಗಳಲ್ಲಿ ಹಣ್ಣು ಹಂಪಲು ಮಾರಾಟ, ಫಾಸ್ಟ್ ಫುಡ್ ವಾಹನಗಳಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಇವುಗಳನ್ನು ತೆರವುಗೊಳಿಸಲು ಕ್ರಮ ವಹಿಸುವಂತೆ ನಗರಸಭಾ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೊಲೀಸ್ ಇಲಾಖೆಯಿಂದ ವಿವಿಧ ಮಾರಾಣಾಂತಿಕ ರಸ್ತೆ ಅಪಘಾತ ಮಾಡಿದ 82 ಆರೋಪಿಗಳ ಡ್ರೈವಿಂಗ್ ಲೈಸನ್ಸ್ ಅನ್ನು ಅಮಾನತು ಮಾಡಲು ಶಿಫಾರಸ್ಸು ಮಾಡಲಾಗಿದ್ದು, ಈಗಾಗಲೇ 59 ಜನರ ಲೈಸನ್ಸ್ ಅನ್ನು ರದ್ದು ಮಾಡಲಾಗಿದೆ. ಉಳಿದ 23 ಜನರ ಡ್ರೈವಿಂಗ್ ಲೈಸನ್ಸ್ ಅನ್ನು ಒಂದು ವಾರದ ಒಳಗಾಗಿ ರದ್ದು ಪಡಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು. ಜಿಲ್ಲೆಯ ರಾಷ್ಟೀಯ ಹೆದ್ದಾರಿಗಳಲ್ಲಿ ಗುರುತಿಸಿರುವ ಕಪ್ಪು ಚುಕ್ಕೆ ಪ್ರದೇಶಗಳಲ್ಲಿ ತಾತ್ಕಾಲಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪ್ರದೇಶಗಳಲ್ಲಿ ಶಾಶ್ವತ ಸುರಕ್ಷತಾ ನಿರ್ವಹಣಾ ಕಾಮಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂದ ಅವರು ರಸ್ತೆಯ ಸಮೀಪವಿರುವ ಶಾಲೆಗಳ ಮುಂಭಾಗ ಸೂಚನಾ ಫಲಕಗಳನ್ನು ಹಾಗೂ ಝೀಬ್ರಾ ಪಟ್ಟಿ ಸಮೇತ ಹಂಪ್ಗಳನ್ನು ವೈಜ್ಞಾನಿಕ ರೀತಿಯಲ್ಲಿ ಅಳವಡಿಸಬೇಕು ಎಂದು ಸೂಚನೆ ನೀಡಿದರು. 2023 ಹಾಗೂ 2024 ನೇ ಸಾಲಿನಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಅಂತಿಮ ವರದಿ ಸಲ್ಲಿಸಲಾದ 20 ಪ್ರಕರಣಗಳ ಗಾಯಗೊಂಡವರಿಗೆ ಹಾಗೂ ಮೃತಪಟ್ಟ ಕುಟುಂಬಗಳ ಅವಲಂಬಿತ ಸದಸ್ಯರುಗಳಿಗೆ ಸೊಲೋಟಿಯಂ ಯೋಜನೆಯಡಿ ಪರಿಹಾರ ನೀಡಲು ಜನರಲ್ ಇನ್ಸೂರೆನ್ಸ್ ಕಂಪನಿಗೆ ಸೂಚಿಸಲಾಗಿತ್ತು. ಈವರೆಗೆ 13 ಪ್ರಕರಣಗಳಲ್ಲಿ ಪರಿಹಾರವನ್ನು ಮಂಜೂರು ಮಾಡಿರುವುದಿಲ್ಲ. ಕೂಡಲೇ ನಿಯಮಾನುಸಾರ ಮಂಜೂರು ಮಾಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಎನ್.ಹೆಚ್ ನ ಎ.ಐ ಅನಿರುದ್ದ್ ಕಾಮತ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಗುತ್ತಿಗೆದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಬಜೆಟ್ನಲ್ಲಿ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಎಸ್ಡಿಪಿಐ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ
ಉಡುಪಿ : ರಾಜ್ಯ ಬಜೆಟ್ ಅನ್ನು ಮಾರ್ಚ್ ತಿಂಗಳಲ್ಲಿ ಸಿದ್ಧರಾಮಯ್ಯನವರು ಮಂಡಿಸಲಿದ್ದು ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಕೆಲವು ಪ್ರಮುಖ ಬೇಡಿಕೆಗಳನ್ನು ಪೂರೈಸಲು ಬಜೆಟ್ನಲ್ಲಿ ಅನುದಾನವನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ನಝೀರ್ ಅಹಮದ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿಯಾದ ನಿಯೋಗ ಜಿಲ್ಲೆಯ ಕೆಲವು ಪ್ರಮುಖ ಬೇಡಿಕೆಗಳಾದ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳನ್ನು ನಿರ್ಮಿಸಬೇಕು, ಜಿಲ್ಲೆಯಲ್ಲಿ ಸುಮಾರು ಎಂಟು ಶೇ.ರಷ್ಟು ಜನಸಂಖ್ಯೆ ಇರುವ ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ಪ್ರತಿ ತಾಲೂಕುಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಬೇಕು, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ವಸತಿ ಶಾಲೆಗಳನ್ನು ನಿರ್ಮಿಸಬೇಕು, ಸರಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಬೇಕು. ವಾರಾಹಿ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು, ದೇಶದಲ್ಲೇ ಖ್ಯಾತಿಯನ್ನು ಗಳಿಸಿರುವ ಜಿಲ್ಲೆಯ ವಿಶೇಷ ಕೃಷಿಗಳಾದ ಮಟ್ಟು ಗುಳ್ಳ ಹಾಗೂ ಉಡುಪಿ ಮಲ್ಲಿಗೆ ಬೆಳೆಗಳಿಗೆ ಪ್ರೋತ್ಸಾಹ ನೀಡಬೇಕು, ಉಡುಪಿ ಜಿಲ್ಲಾ ಪ್ರವಾಸೋದ್ಯಮದ ಅಭಿವೃದ್ಧಿಗೆ ಅನುದಾನವನ್ನು ಮೀಸಲಿಡಬೇಕು ಹೀಗೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಎಸ್ಡಿಪಿಐ ಉಡುಪಿ ಜಿಲ್ಲಾ ಮುಖಂಡರಾದ ಹಸೈನಾರ್ ಕಟಪಾಡಿ, ಎಸ್ಡಿಪಿಐ ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಅಶ್ರಫ್ ಬಾವ, ಉಪಾಧ್ಯಕ್ಷರಾದ ರಹೀಮ್ ಆದಿಉಡುಪಿ ಉಪಸ್ಥಿತರಿದ್ದರು.
ರಂಗನಪಲ್ಕೆಯ ಡಾ. ಬಿ. ಆರ್. ಅಂಬೇಡ್ಕರ್ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಕಾರ್ಕಳ : ಕೌಡೂರು ಗ್ರಾಮದ ರಂಗನಪಲ್ಕೆಯ ಶೇಡಿಗುಡ್ಡೆ ಕರಿಕುಮೆರಿ ಪಾತಾವುಗೆ ಸಂಪರ್ಕಿಸುವ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭೊಧ್ ರಾವ್ ಮಾತನಾಡಿ, ಕಾರ್ಕಳ ತಾಲೂಕಿನಲ್ಲಿ ಈ ರೀತಿಯ ರಸ್ತೆ ಎಲ್ಲಿಯೂ ಇಲ್ಲ. ರಸ್ತೆ ತೀವ್ರವಾಗಿ ಹದೆಗೆಟ್ಟಿದೆ. ಸ್ಥಳೀಯ ಪಂಚಾಯತ್ ಆದ ಬೈಲೂರು ಗ್ರಾಮ ಪಂಚಾಯತ್ ಸದಸ್ಯರು ಈ ಬಗ್ಗೆ ಗಮನಹರಿಸದಿರುವುದು ಬೇಸರದ ಸಂಗತಿ ಎಂದರು. ಪ್ರತಿಭಟನಾ ಸ್ಥಳದಲ್ಲಿಯೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಕರೆ ಮಾಡಿ ಮಾತನಾಡಿ ರಸ್ತೆ ದುರಸ್ತಿಗೆ ಶಾಸಕರ ಅನುದಾನದಡಿ ಅನುದಾನಕ್ಕೆ ಮನವಿಪತ್ರ ತಯಾರಿಸುವಂತೆ ಸೂಚಿಸಿದರು.
ಪ್ರತಿಭಟನೆಯಲ್ಲಿ ಬೈಲೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಉದಯ ಶೆಟ್ಟಿ, ಬೈಲೂರು ಹಾಗೂ ಬೈಲೂರು, ಕಣಜಾರು, ಕೌಡೂರು ಬ್ಲಾಕ್ ಅಧ್ಯಕ್ಷರು, ಗ್ರಾಮಸ್ಥರು ಹಾಜರಾಗಿದ್ದರು.
1 ಕೋಟಿ ಅನುದಾನದಲ್ಲಿ ಹಿರಿಯಡಕ ಕರ್ನಾಟಕ ಪಬ್ಲಿಕ್ ಸ್ಕೂಲ್ ನೂತನ ಕಟ್ಟಡ ನಿರ್ಮಾಣ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶಿಲಾನ್ಯಾಸ
ಕಾಪು : ಕಾಪು ವಿಧಾನಸಭಾ ಕ್ಷೇತ್ರದ ಹಿರಿಯಡಕ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕೆ ರೂ 1 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಇದರ ಶಿಲಾನ್ಯಾಸವನ್ನು ಇಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಾಲೇಜಿಗೆ ಕೊಡಮಾಡಿದ ಪೀಠೋಪಕರಣಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ, ಉಪಾಧ್ಯಕ್ಷರಾದ ಹರೀಶ್ ಸಾಲಿಯಾನ್, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಿ.ಎಲ್. ವಿಶ್ವಾಸ ಭಟ್, ಸದಸ್ಯರಾದ ಅಶೋಕ್ ಜೋಗಿ, ದೇವರಾಜ ಶಾಸ್ತ್ರಿ, ವಿಜೇತ್ ಬೆಳ್ಳರ್ಪಾಡಿ, ಸುಬ್ರಹ್ಮಣ್ಯ ರಾವ್, ವಿಜಯ ಶೆಟ್ಟಿ, ನಿತ್ಯಾನಂದ ನಾಯಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ನಾಗರಾಜ ಶೆಟ್ಟಿ, ಉಡುಪಿ ಯೋಜನಾಧಿಕಾರಿಗಳಾದ ರಾಮು ಎಂ, ಹಿರಿಯಡಕ ವಲಯ ಮೇಲ್ವಿಚಾರಕರಾದ ಸಂತೋಷ್, ಹಿರಿಯ ವಲಯ ಅಧ್ಯಕ್ಷರಾದ ಗಣೇಶ್ ನಾಯ್ಕ, ಬೊಮ್ಮರಬೆಟ್ಟು ಒಕ್ಕೂಟದ ಅಧ್ಯಕ್ಷರಾದ ಜಯಲಕ್ಷ್ಮಿ ಹೆಗ್ಡೆ, ಉಡುಪಿ ತಾಲೂಕು ಜನ ಜಾಗೃತಿ ಸಮಿತಿ ಅಧ್ಯಕ್ಷರಾದ ಸತ್ಯಾನಂದ ನಾಯಕ್, ಸದಸ್ಯರಾದ ನಳಿನಾ ಎಂ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಮಂಜುನಾಥ್ ಭಟ್ ಉಪಸ್ಥಿತರಿದ್ದರು.

ಪಡುಬಿದ್ರಿ : ಬಸ್ಸುಗಳಿಗೆ ಅವೈಜ್ಞನಿಕವಾಗಿ ಟೋಲ್ ಕಡಿತವಾಗುತ್ತಿದೆ. ಇದನ್ನು ಎರಡು ದಿನಗಳೊಳಗಾಗಿ ಸರಿಪಡಿಸದಿದ್ದರೆ ತೀವ್ರವಾಗಿ ಪ್ರತಿಭಟಿಸಿ ಶಕ್ತಿ ಪ್ರದರ್ಶನ ಮಾಡುವುದಾಗಿ ಬಸ್ಸು ಮಾಲಕರು ಎಚ್ಚರಿಸಿದ್ದಾರೆ.
ಕೆನರಾ ಬಸ್ಸು ಮಾಲಕರ ಸಂಘ ಹಾಗೂ ಕರಾವಳಿ ಬಸ್ಸು ಮಾಲಕರ ಸಂಘದ ಸದಸ್ಯರು ಬುಧವಾರ ಹೆಜಮಾಡಿ ಟೋಲ್ ಗೇಟ್ನಲ್ಲಿ ಹಗಲು ದರೋಡೆ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟಿಸಿ ಟೋಲ್ ಅಧಿಕಾರಿಗಳನ್ನು ಎಚ್ಚರಿಸಿದರು.
ತಮ್ಮ ಮಿನಿ ಬಸ್ಗಳಿಗೆ ಘನ ವಾಹನಗಳ ಟೋಲ್ನ್ನು ಕಡಿತಗೊಳಿಸಲಾಗುತ್ತಿದ್ದು ಅವೈಜ್ಞಾನಿಕವಾಗಿರುವ ಈ ವ್ಯವಸ್ಥೆಯನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಎರಡು ದಿನಗಳ ಬಳಿಕ ಬಸ್ಸುಗಳನ್ನೆಲ್ಲಾ ಟೋಲ್ಗೆ ಅಡ್ಡವಾಗಿರಿಸಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮಿನಿ ಬಸ್ಸುಗಳಿಗೆ ಹೆವಿ ವೆಹಿಕಲ್ಗಳ ಟೋಲ್ ವಸೂಲಿ ಮಾಡುತ್ತಿದ್ದಾರೆ. ಇಂದಿನದು ಸಾಂಕೇತಿಕ ಪ್ರತಿಭಟನೆ. ಫಾಸ್ಟ್ಟ್ಯಾಗ್ ಮೊತ್ತದ ಹೊರತಾಗಿಯೂ ಮತ್ತೆ ತಮಗೆ ಬರೆ ಬೀಳುತ್ತಿದೆ. ದೇಶದ ಎಲ್ಲೂ ಇಲ್ಲದ ಪರಿಸ್ಥಿತಿ ಇಲ್ಲಿದೆ. ನಮ್ಮಲ್ಲಿ ಒಟ್ಟು 2000 ಬಸ್ಸುಗಳಿವೆ. ನಮ್ಮ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಟೋಲ್ ಗೇಟ್ ಬಂದ್ ಮಾಡುವಂತಹ ಪ್ರತಿಭಟನೆಯನ್ನು ಮಾಡಲಿರುವುದಾಗಿ ದಿಲ್ರಾಜ್ ಆಳ್ವ ಹೇಳಿದರು.
ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಬಸ್ ಮಾಲಕರಾದ ಜೀವಂದರ್ ಬಲ್ಲಾಳ್, ರಝಾಕ್ ಇದ್ದರು.
ಫೆಬ್ರವರಿ 8ರಂದು ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ವತಿಯಿಂದ ₹ 25ಲಕ್ಷ ಮೊತ್ತದ ಪ್ರತಿಭಾ ಪುರಸ್ಕಾರ ವಿತರಣೆ : ಯಶ್ಪಾಲ್ ಸುವರ್ಣ
ಉಡುಪಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಎಸ್.ಎಸ್.ಎಲ್.ಸಿ., ದ್ವಿತೀಯ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ವಿಭಾಗದ 1050 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುಮಾರು ₹25 ಲಕ್ಷ ಮೌಲ್ಯದ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮವನ್ನು ಫೆಬ್ರವರಿ 8 ಶನಿವಾರ ಮಧ್ಯಾಹ್ನ 3 ಗಂಟೆಗೆ ಮಲ್ಪೆ ಏಳೂರು ಮೊಗವೀರ ಭವನ ಸಭಾಂಗಣದಲ್ಲಿ ಆಯೋಜಿಸಿರುವುದಾಗಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಉಡುಪಿ ಶಾಸಕ ಶ್ರೀ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.

ಸಮಾರಂಭದ ಉದ್ಘಾಟನೆಯನ್ನು ಕರಾವಳಿ ಕಾವಲು ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಮಿಥುನ್ ಎಚ್. ನೆರವೇರಿಸಲಿದ್ದು, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ನಗರ ಸಭಾ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ಕೆ. ಸುವರ್ಣ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ದಿನಕರ ಹೇರೂರು, ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಗೋಪಾಲ ಸಿ. ಬಂಗೇರ, ಹಾಗೂ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಸಂಪನ್ಮೂಲ ವ್ಯಕ್ತಿ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರೊ. ಶ್ರೀಮತಿ ನಿಕೇತನರವರು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಫೆಬ್ರವರಿ 15ರಂದು ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ವಿತರಣೆ ಮಾಡುವುದಾಗಿ ಪ್ರಕಟಣೆಯಲ್ಲಿ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಉಡುಪಿ : ನಮ್ಮ ದೇಶದ ಬಹು ಸಂಸ್ಕೃತಿ ನಾಶವಾಗಿ ನಾವು ಏಕ ಸಂಸ್ಕೃತಿಯತ್ತ ಸಾಗುತ್ತಿರುವುದು ವಿಶಾದನೀಯ. ಹೀಗಾಗಿ ನಾಡಿನ ಜಾನಪದ ಸಂಸ್ಕೃತಿ, ಆಚರಣೆಗಳ ಬಗ್ಗೆ ದಾಖಲೀಕರಣ ಮಾಡುವ ಅಗತ್ಯವಿದೆ ಎಂದು ಪ್ರಸಿದ್ಧ ಜಾನಪದ ವಿದ್ವಾಂಸ ಡಾ. ವೈ. ಎನ್. ಶೆಟ್ಟಿ ಹೇಳಿದರು.
ಅವರು ಸೋಮವಾರ ಎಂಜಿಎo ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ನಡೆಯುತ್ತಿರುವ ಮೂರು ದಿನಗಳ ರಂಗಭೂಮಿ ರಂಗೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನೀಡುವ 2025ನೇ ಸಾಲಿನ ‘ತಲ್ಲೂರ್ಸ್ ಜಾನಪದ ಸಿರಿ’ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ನಮ್ಮ ಜನಪದರ ಆರೋಗ್ಯ ಪೂರ್ಣ ಆಚರಣೆಗಳು ನಮ್ಮ ಯುವ ಪೀಳಿಗೆಗೆ ಬೇಡವಾಗಿದೆ. ಈಶಾನ್ಯ ಭಾರತದಲ್ಲಿ ಶೇ.90ರಷ್ಟು ಬುಡಕಟ್ಟು ಜನಾಂಗಗಳು ತಮ್ಮ ಮೂಲ ಸಂಸ್ಕೃತಿಯನ್ನು ಮರೆತು ಏಕರೂಪದ ಸಂಸ್ಕೃತಿಯನ್ನು ಅಪ್ಪಿಕೊಂಡಿವೆ. ಈ ದುರಂತ ಇಲ್ಲಿಯೂ ನಡೆಯುವ ಅಪಾಯವಿದೆ. ಆದ್ದರಿಂದ ನಮ್ಮ ನಾಡಿನ ಜನಪದ ಕಲೆಗಳು, ಆಚರಣೆಗಳ ಬಗ್ಗೆ ದಾಖಲೀಕರಣ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಮಾತನಾಡಿ, ನಮ್ಮ ಗ್ರಾಮೀಣ ಕೃಷಿ ಬದುಕು ನಮ್ಮ ಸಂಸ್ಕೃತಿಯ ನರ ನಾಡಿ ಇದ್ದಂತೆ. ಹೀಗಾಗಿ ನಮ್ಮ ಯುವ ಜನಾಂಗಕ್ಕೆ ಜಾನಪದದ ಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಜಾನಪದ ಪರಿಷತ್ತು ಮುಂದಿನ ದಿನಗಳಲ್ಲಿ ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡುವ ಇನ್ನಷ್ಟು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಿದೆ. ಪ್ರಸ್ತುತ ಕೇರಳದ ಅಪೂರ್ವ ಜಾನಪದ ಕಲೆಗಳನ್ನು ನಮ್ಮ ಜನತೆ ಕೂಡಾ ಆಸ್ವಾದಿಸಬೇಕು ಎನ್ನುವ ಉದ್ದೇಶದಿಂದ ಕೇರಳ ಜಾನಪದ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ. ವೈ.ಎನ್.ಶೆಟ್ಟಿ ಅವರು ಜಾನಪದ ಲೋಕಕ್ಕೆ ನೀಡಿದ ಅನುಪಮ ಕೊಡುಗೆಗಾಗಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನೀಡುವ 2025ನೇ ಸಾಲಿನ “ತಲ್ಲೂರ್ಸ್ ಜಾನಪದ ಸಿರಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೇರಳ ಕಲ್ಚರಲ್ ಆಂಡ್ ಸೋಷಿಯಲ್ ಸೆಂಟರ್ ಉಡುಪಿ ಅಧ್ಯಕ್ಷ ಸುಗುಣ ಕುಮಾರ್, ಕಾರ್ಯದರ್ಶಿ ಬಿನೇಶ್ ವಿ.ಸಿ., ಎಂಜಿಎo ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಗಿರಿಜಾ ಶಿವರಾಮ ಶೆಟ್ಟಿ, ಜಾನಪದ ಪರಿಷತ್ತಿನ ಪದಾಧಿಕಾರಿಗಳಾದ ಗೋಪಾಲ್ ಸಿ.ಬಂಗೇರ, ಅರುಣ್ ಕುಮಾರ್ ಹೆಗ್ಡೆ, ಪ್ರಶಾಂತ್ ಕುಮಾರ್, ಎನ್.ಎಂ.ಹೆಗ್ಡೆ, ರಂಗಭೂಮಿಯ ಪ್ರದಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ, ಉಪಾಧ್ಯಕ್ಷರುಗಳಾದ ಎನ್.ಆರ್.ಬಲ್ಲಾಳ್ ಹಾಗೂ ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.
ಕರ್ನಾಟಕ ಜಾನಪದ ಉಡುಪಿ ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನುಷಾ ಆಚಾರ್ಯ ಸ್ವಾಗತಿಸಿದರು. ಕೋಶಾಧಿಕಾರಿ ಪ್ರಶಾಂತ್ ಭಂಡಾರಿ ವಂದಿಸಿದರು.
ಈ ಸಂದರ್ಭದಲ್ಲಿ ರಸಿಕರ್ ಕೇರಳ ಎಂಟರ್ಟೈನ್ಮೆಂಟ್ ತಂಡದಿoದ ಕೇರಳದ ವೈವಿಧ್ಯಮಯ ಜಾನಪದ ಕಲಾ ಪ್ರಕಾರಗಳ ಪ್ರದರ್ಶನ ಸಭಿಕರ ಮನ ಸೂರೆಗೊಂಡಿತು.
ಮಣಿಪಾಲ : ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗ ಸೆಂಟರ್ ಫಾರ್ ಕಮ್ಯುನಿಟಿ ಅಂಕೋಲಜಿಯ ಸಹಯೋಗದೊಂದಿಗೆ ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಯಿತು. ಇದರ ಅಂಗವಾಗಿ ಕ್ಯಾನ್ಸರ್ ಜಾಗೃತಿ 3ಡಿ ಕಲಾಕೃತಿಯನ್ನು ಮಣಿಪಾಲ ಕೆಎಂಸಿಯ ಡೀನ್ ಡಾ. ಪದ್ಮರಾಜ್ ಹೆಗ್ಡೆ ಮತ್ತು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಜಂಟಿಯಾಗಿ ಕೆಎಂಸಿಯ ಇಂಟರಾಕ್ಟ್ ಆವರಣದಲ್ಲಿ ಅನಾವರಣಗೊಳಿಸಿದರು.

ಸೆಂಟರ್ ಫಾರ್ ಕಮ್ಯುನಿಟಿ ಅಂಕೋಲಜಿಯ ಕೋ-ಆರ್ಡಿನೇಟರ್ ಡಾ.ರಂಜಿತಾ ಶೆಟ್ಟಿ ಕ್ಯಾನ್ಸರ್ ಪತ್ತೆ ಹಚ್ಚುವ ಮತ್ತು ನಿವಾರಿಸುವ ಕುರಿತ ಮಾಹಿತಿ ನೀಡಿದರು. ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ಉಪಸ್ಥಿತರಿದ್ದರು. ಕ್ಯಾನ್ಸರ್ ಜಾಗೃತಿ 3ಡಿ ಕಲಾಕೃತಿಯನ್ನು ಶ್ರೀನಾಥ್ ಮಣಿಪಾಲ್ ಮತ್ತು ರವಿ ಹಿರೆಬೆಟ್ಟು ರಚಿಸಿದ್ದಾರೆ.