ಪುತ್ತೂರು : ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ತೆಂಕಿಲದಲ್ಲಿ ಶುಕ್ರವಾರ ನಸುಕಿನ ಜಾವದ ವೇಳೆ ಗುಡ್ಡ ಕುಸಿದಿದೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಬದಲಿ ರಸ್ತೆಯಾಗಿ ಪುತ್ತೂರು ಪೇಟೆ ಬಳಸಿ ವಾಹನ ಸಂಚರಿಸಬೇಕಾಗಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲದಲ್ಲಿ ಆಗಾಗ ಗುಡ್ಡಕುಸಿಯುತ್ತಲೇ ಇದ್ದು ಇದೀಗ ಭಾರಿ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದೆ. ಈಗಾಗಲೇ ನಗರಸಭೆ ಅಧಿಕಾರಿಗಳು, ಪೊಲೀಸರು ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
Putturu
ದಕ್ಷಿಣ ಕನ್ನಡ : ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬುಧವಾರ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಅಧಿಕಾರಿಗಳೊಂದಿಗೆ ಜಿಲ್ಲೆಯ ವಿವಿಧ ನೆರೆ ಪೀಡಿತ ಹಾಗೂ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾಧಿಕಾರಿಗಳು ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದರು. ಸ್ಥಳೀಯ ಸಾರ್ವಜನಿಕರೊಂದಿಗೆ ಅಹವಾಲು ಆಲಿಸಿದ ಅವರು, ನೆರೆ ಪೀಡಿತ ಪ್ರದೇಶಗಳಲ್ಲಿ ಹಾಗೂ ಸಂಭಾವ್ಯ ನೆರೆ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೆರೆ ಪ್ರದೇಶಗಳ ನಿವಾಸಿಗಳ ಸ್ಥಳಾಂತರ ಮತ್ತು ಕಾಳಜಿ ಕೇಂದ್ರಗಳ ಸ್ಥಾಪನೆಯ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಕಾಳಜಿ ಕೇಂದ್ರಗಳಲ್ಲಿ ತಂಗಿರುವ ನಾಗರಿಕರೊಂದಿಗೆ ಸಮಾಲೋಚಿಸಿ, ಧೈಯ೯ ತುಂಬಿದ ಜಿಲ್ಲಾಧಿಕಾರಿಗಳು, ಸಹಜ ಪರಿಸ್ಥಿತಿ ಬರುವವರೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು. ಹರೇಕಳ, ಬಂಟ್ವಾಳ, ಆಲಡ್ಕ, ಉಪ್ಪಿನಂಗಡಿ ಮತ್ತಿತರ ಕಡೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ನೆರೆ ಪರಿಸ್ಥಿತಿ ವೀಕ್ಷಿಸಿದರು.
ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಂಗಳೂರು : ನಾಲ್ಕು ವರ್ಷಗಳ ಬಳಿಕ ಕರಾವಳಿಯ ಜೀವನದಿ ನೇತ್ರಾವತಿ ಹಾಗೂ ಕುಮಾರಧಾರ ನದಿಯು ಮಂಗಳವಾರ ರಾತ್ರಿ ಸಂಗಮವಾಗಿದೆ.
ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಎರಡೂ ಪವಿತ್ರ ನದಿಗಳು ಸಂಗಮವಾಯಿತು. ನದಿಗಳೆರಡರ ಸಂಗಮವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತ ಸಂದೋಹ ಕಾದು ಕುಳಿತಿತ್ತು. ರಾತ್ರಿಯಾಗುತ್ತಿದ್ದಂತೆ ಎರಡೂ ನದಿಗಳು ಅಪಾಯದ ಮಟ್ಟ ಮೀರಿ ಸಹಸ್ರಲಿಂಗೇಶ್ವರ ದೇವಸ್ಥಾನ ಪ್ರವೇಶಿಸಿತು. ಎರಡೂ ನದಿಗಳು ಸಂಗಮವಾಗುತ್ತಿದ್ದಂತೆ ಜನರಲ್ಲಿ ಭಕ್ತಿಯ ಹರ್ಷೋದ್ಘಾರ ಮುಗಿಲು ಮುಟ್ಟಿತು.
ನಾಲ್ಕು ವರ್ಷದ ಬಳಿಕ ನೇತ್ರಾವತಿ-ಕುಮಾರಾಧಾರ ನದಿಗಳು ಸಂಗಮವಾಗುತ್ತಿದ್ದಂತೆ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂಭಾಗದ ಧ್ವಜಸ್ತಂಭದ ಬಳಿ ವಿಶೇಷ ಪೂಜೆ ನಡೆಯಿತು. ಈ ವೇಳೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಬಾಗಿನ ಅರ್ಪಿಸಿದರು. ಈ ವೇಳೆ ಪೂಜೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಎಸಿ ಜುಬಿನ್ ಮೊಹಪತ್ರ, ತಹಶೀಲ್ದಾರ್ ಪುರಂದರ ಹೆಗ್ಡೆ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಭಾಗಿಯಾದರು.
ಭೂಗತ ಪಾತಕಿ ಕಲಿ ಯೋಗೀಶನ ಸಹಚರರಿಬ್ಬರ ಸೆರೆ : ಪಿಸ್ತೂಲ್, ರಿವಾಲ್ವರ್, ಸಜೀವ ಮದ್ದುಗಳು, ಮಾದಕ ವಸ್ತುಗಳ ವಶ
ಮಂಗಳೂರು : ನಗರದಲ್ಲಿ ಅಪರಾಧ ಕೃತ್ಯವನ್ನು ನಡೆಸುವ ಉದ್ದೇಶದಿಂದ ಅಕ್ರಮವಾಗಿ ಶಸ್ತ್ರಾಸ್ತ್ರವಾದ ಪಿಸ್ತೂಲ್, ರಿವಾಲ್ವರ್, ಸಜೀವ ಮದ್ದುಗುಂಡುಗಳು, ಮಾದಕ ವಸ್ತುಗಳನ್ನು ಹೊಂದಿಕೊಂಡಿದ್ದ ಕುಖ್ಯಾತ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯ ಕಾಸರಗೋಡು ಜಿಲ್ಲೆಯ ಮುಹಮ್ಮದ್ ಹನೀಫ್ ಯಾನೆ ಅಲಿ ಮುನ್ನಾ(40), ಸದ್ಯ ಬೆಂಗಳೂರಿನ ಹೊಸಕೋಟೆಯಲ್ಲಿ ವಾಸವಾಗಿರುವ ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಮೊಹಮ್ಮದ್ ರಫೀಕ್ ಯಾನೆ ಮುಡಿಪು ರಫೀಕ್ ಯಾನೆ ರಫೀಕ್(36) ಬಂಧಿತರು.
ಇವರು ಇತ್ತೀಚೆಗೆ ಮಾಲ್ವೊಂದರ ಬಳಿ ಇದ್ದ ಸೌರಾಷ್ಟ್ರ ಸಂಸ್ಥೆ ಮಾಲೀಕರಿಗೆ ಪೋನ್ ಮಾತನಾಡಲು ನೀಡಿದ್ದರು. ಆಗ ಭೂಗತ ಪಾತಕಿ ಕಲಿ ಯೋಗೀಶ್ ಪೋನ್ನಲ್ಲಿ ಮಾತನಾಡಿ 50 ಲಕ್ಷ ರೂ ಹಪ್ತಾ ನೀಡುವಂತೆ ಬೆದರಿಸಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರರಿಬ್ಬರು ಅಕ್ರಮ ಶಸ್ತ್ರಾಸ್ತ್ರವಾದ ಪಿಸ್ತೂಲ್, ರಿವಾಲ್ವರ್, ಸಜೀವ ಮದ್ದುಗುಂಡುಗಳನ್ನು, ಮಾದಕ ವಸ್ತುಗಳಾದ ಎಂಡಿಎಂಎನ್ನು ಹೊಂದಿಕೊಂಡು ಇನ್ನೋವಾ ಕಾರಿನಲ್ಲಿ ಮಂಗಳೂರು ನಗರದಲ್ಲಿ ಅಪರಾಧ ಕೃತ್ಯವನ್ನು ನಡೆಸಲು ಸಂಚು ರೂಪಿಸಿ ತಿರುಗಾಡಿಕೊಂಡಿರುವ ಕುರಿತು ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು ನಗರದ ಫಳ್ನೀರ್ ಬಳಿ ಇವರನ್ನು ಬಂಧಿಸಿದ್ದಾರೆ.
ಇವರ ವಶದಿಂದ 1 ಪಿಸ್ತೂಲ್, 1 ರಿವಾಲ್ವರ್, 12 ಸಜೀವ ಮದ್ದುಗುಂಡುಗಳು, 42 ಗ್ರಾಂ ಮಾದಕ ವಸ್ತುವಾದ ಎಂಡಿಎಂಎ, ಇನ್ನೋವಾ ಕಾರು ಹಾಗೂ 3 ಮೊಬೈಲ್ ಫೋನುಗಳು, ಡಿಜಿಟಲ್ ತೂಕ ಮಾಪಕಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಆಂದಾಜು ಮೌಲ್ಯ ರೂ. 10 ಲಕ್ಷ ಆಗಬಹುದು.
ಆರೋಪಿಗಳಿಬ್ಬರು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರರಾಗಿದ್ದು, ಆರೋಪಿಗಳ ಪೈಕಿ ಮೊಹಮ್ಮದ್ ಹನೀಫ್ ಯಾನೆ ಅಲಿ ಮುನ್ನಾ ಎಂಬಾತನು ಈ ಹಿಂದೆ ಮಂಗಳೂರು ನಗರದ ಸಂಜೀವ ಶೆಟ್ಟಿ ಬಟ್ಟೆ ಅಂಗಡಿಯಲ್ಲಿ ಶೂಟೌಟ್ ನಡೆಸಿದ ಪ್ರಕರಣ, ಪುತ್ತೂರು ರಾಜಧಾನಿ ಜ್ಯುವೆಲ್ಲರಿ ಶೂಟೌಟ್ ಪ್ರಕರಣ, ಕೇರಳದ ಕಾಸರಗೋಡು ಜಿಲ್ಲೆಯ ಬೇವಿಂಜೆಯ ಪಿಡಬ್ಲೂಡಿ ಕಂಟ್ರಾಕ್ಟರ್ ಮನೆಗೆ ಶೂಟೌಟ್ ನಡೆಸಿದ ಪ್ರಕರಣ ಸಹಿತ ಒಟ್ಟು 14 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಈತನ ವಿರುದ್ಧ ಮಂಗಳೂರು ಉತ್ತರ, ಬರ್ಕೆ, ಉಳ್ಳಾಲ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಾರಂಟ್ ಜಾರಿಯಲ್ಲಿರುತ್ತದೆ.
ಇನ್ನೋರ್ವ ಆರೋಪಿ ಮೊಹಮ್ಮದ್ ರಫೀಕ್ ಯಾನೆ ಮುಡಿಪು ರಫೀಕ್ ಎಂಬಾತನ ವಿರುದ್ಧ ಮಂಗಳೂರು ನಗರದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ, ಮಂಗಳೂರು ಪೂರ್ವ ಠಾಣೆಯಲ್ಲಿ ದರೋಡೆಗೆ ಸಂಚು ರೂಫಿಸಿದ ಪ್ರಕರಣ, ಕೊಣಾಜೆ ಠಾಣೆಯಲ್ಲಿ ಅಪಹರಣ ಪ್ರಕರಣ, ದೇವಸ್ಥಾನ ಕಳವು ಪ್ರಕರಣ ಹಾಗೂ ಹಲ್ಲೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ಹಾಗೂ ಕೇರಳದ ಮಂಜೇಶ್ವರ, ಕಣ್ಣೂರು ನಗರ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣ ಹೀಗೆ ಒಟ್ಟು 9 ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಗೀತಾ ಡಿ ಕುಲಕರ್ಣಿ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಸಿಸಿಬಿ ಪಿಎಸ್ಐ ಯವರಾದ ನರೇಂದ್ರ, ಶರಣಪ್ಪ ಭಂಡಾರಿ, ಹರೀಶ್ ಪದವಿನಂಗಡಿ, ಎಎಸ್ಐ ಮೋಹನ್ ಕೆ ವಿ, ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿಯವರು ಭಾಗವಹಿಸಿರುತ್ತಾರೆ.



ಪುತ್ತೂರು : ಆಕಸ್ಮಿಕವಾಗಿ ಆವರಣ ಗೋಡೆಯಿಲ್ಲದ ಬಾವಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಪ್ಪಿನಂಗಡಿಯ ನೂಜಿ ಎಂಬಲ್ಲಿ ನಡೆದಿದೆ.
ಹೊನ್ನಮ್ಮ (65) ಮೃತಪಟ್ಟ ಮಹಿಳೆ.

ಹೊನ್ನಮ್ಮ ಜು.26ರಂದು ಸಂಜೆಯ ಬಳಿಕ ನಾಪತ್ತೆಯಾಗಿದ್ದರು. ಮನೆಯವರು ಅವರನ್ನು ಹುಡುಕಾಡಿದಾಗ ಮನೆಯ ಆವರಣ ಗೋಡೆಯಿಲ್ಲದ ಬಾವಿಯ ಬಳಿ ಕೊಡೆ ಪತ್ತೆಯಾಗಿತ್ತು. ಇವರ ಮೃತದೇಹ ಬಾವಿಯಲ್ಲಿ ತೇಲುತ್ತಿತ್ತು ಎಂದು ತಿಳಿದು ಬಂದಿದೆ.
ಬಾವಿಯಲ್ಲಿ ನೀರು ಎಷ್ಟಾಗಿದೆ ಎಂಬ ಕುತೂಹಲ ಹೊನ್ನಮ್ಮರಿಗಿತ್ತು. ಅದೇ ಕುತೂಹಲದಿಂದ ನಿನ್ನೆಯೂ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬಾವಿಗೆ ಇಣುಕಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತದೇಹವನ್ನು ಸ್ಥಳೀಯ ಯುವಕರು ಮೇಲೆತ್ತಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು-ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಬ್ರಿಜೇಶ್ ಚೌಟ ಒತ್ತಾಯ
ಮಂಗಳೂರು-ಸುಬ್ರಹ್ಮಣ್ಯ ನಡುವೆ ಪ್ಯಾಸೆಂಜರ್ ರೈಲು ಆರಂಭಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಒತ್ತಾಯ ಮಾಡಿದ್ದಾರೆ.
ಈ ಹಿಂದೆ ಮಂಗಳೂರು-ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ-ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದ ವರೆಗೆ ವಿಸ್ತರಣೆ ಮಾಡಬೇಕು. ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದ ವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ.
ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದ್ದಾರೆ.
ಪುತ್ತೂರು : ಅಟಲ್ ಬಿಹಾರಿ ವಾಜಪೇಯಿ ಇನ್ಸ್ಟಿಟ್ಯೂಟ್ ಆಫ್ ಮೌಂಟೇನಿಯರಿoಗ್ ಮತ್ತು ಅಲೈಡ್ ಸ್ಪೋರ್ಟ್ಸ್ನ ಆಶ್ರಯದಲ್ಲಿ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದ ಎನ್ಸಿಸಿ ಅಖಿಲ ಭಾರತ ವಿಶೇಷ ಮೂಲ ಪರ್ವತಾರೋಹಣ ತರಬೇತಿಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಆರ್ಮಿ ಎನ್ಸಿಸಿ ಕೆಡೆಟ್ ಸಮೃದ್ಧಿ ಚೌಟ ಭಾಗವಹಿಸಿ ಮುಂದಿನ ರಾಷ್ಟ್ರ ಮಟ್ಟದ ಪರ್ವತಾರೋಹಣಕ್ಕೆ ಆಯ್ಕೆಗೊಂಡಿದ್ದಾರೆ.
2024ನೇ ಮೂಲ ಪರ್ವತಾರೋಹಣ ತರಬೇತಿಯಲ್ಲಿ ಕರ್ನಾಟಕದಿಂದ ಆಯ್ಕೆಯಾದ ಎನ್ಸಿಸಿ ಹುಡುಗಿಯರ ವಿಭಾಗದಲ್ಲಿ ಸಮೃದ್ಧಿ ಚೌಟ ಏಕೈಕ ಕೆಡೆಟ್ ಆಗಿದ್ದಾರೆ. ಹಿಮಾಚಲ ಪ್ರದೇಶದ ಮನಾಲಿಯ 15,700 ಅಡಿ ಎತ್ತರದ ‘ಶಿಥಿಧರ್’ ಶಿಖರವನ್ನು ಏರಲು ಎನ್.ಸಿ.ಸಿ ಮಹಾನಿರ್ದೇಶಕರು ನವದೆಹಲಿ ವತಿಯಿಂದ ಮೂಲ ಪರ್ವತಾರೋಹಣ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ದೇಶದ 48 ಮಂದಿ ಎನ್.ಸಿ.ಸಿ. ಕೆಡೆಟ್ ಗಳು ಭಾಗವಹಿಸಿದ್ದರು. ಸಮೃದ್ಧಿ ಚೌಟ ಈ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ತರಬೇತಿಯ ‘ಬೆಸ್ಟ್ ರೋಪ್ ಟೀಮ್’ ಪ್ರಶಸ್ತಿಗೆ ಭಾಜನರಿದ್ದಾರೆ.
ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಕ್ಯಾ.ಜೋನ್ಸನ್ ಡೇವಿಡ್ ಸಿಕ್ವೇರಾ ಅವರ ತರಬೇತಿ ಪಳಗಿದ ಸಮೃದ್ಧಿ ಚೌಟ ಅವರ ಸಾಧನೆಗೆ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರೆ. ಫಾ ಲಾರೆನ್ಸ್ ಮಸ್ಕರೇನಸ್ ಹಾಗೂ ಕಾಲೇಜಿನ ಪ್ರಾಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಅವರು ಅಭಿನಂದಿಸಿದ್ದಾರೆ.
ಪುತ್ತೂರು : ಪೆರುವಾಜೆ ಗ್ರಾಮದ ನಿವಾಸಿ ಎಎಸ್ಐ ಸುಂದರ ಕಾನಾವು ಅವರು ಪುತ್ತೂರು ನಗರ ಠಾಣೆಯಲ್ಲಿ ASI ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕಳೆದ ಮೂರು ದಿನಗಳ ಹಿಂದೆ ಬ್ರೈನ್ ಸ್ಟ್ರೋಕ್ಗೆ ಒಳಗಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತರಾದರು.
ಬ್ರೈನ್ ಸ್ಟ್ರೋಕ್ಗೆ ಒಳಗಾದ ಅವರು ಮಂಗಳೂರಿನ ಪಡೀಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಸದ್ಯ ಮೃತರ ಪಾರ್ಥಿವ ಶರೀರ ಮಂಗಳೂರಿನಲ್ಲಿ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೂಲ್ಕಿ ಪೊಲೀಸ್ ಠಾಣೆಯಿಂದ ಅವರ ವೃತ್ತಿ ಜೀವನ ಆರಂಭಗೊಂಡಿತ್ತು. ಸುಬ್ರಹ್ಮಣ್ಯ ಠಾಣೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಹೆಡ್ ಕಾನ್ಸ್ಟೇಬಲ್ ಆಗಿ ಬಂಟ್ವಾಳ ಠಾಣೆಗೆ ವರ್ಗಾವಣೆಗೊಂಡಿದ್ದರು. ಅಲ್ಲಿಂದ ಸಂಪ್ಯ ಠಾಣೆಗೆ ಪೊಲೀಸ್ ಉಪ ನಿರೀಕ್ಷಕರಾಗಿ ವರ್ಗಾವಣೆಗೊಂಡಿದ್ದರು. ಕೆಲವು ದಿನಗಳ ಹಿಂದೆ ಪುತ್ತೂರು ನಗರ ಠಾಣೆಗೆ ವರ್ಗಾವಣೆಗೊಂಡಿದ್ದರು.
ಐರಾವತ ಬಸ್ ನಲ್ಲಿ ಆಕಸ್ಮಿಕ ಬೆಂಕಿ : ಸ್ಥಳೀಯ ಯುವಕರ ಕಾರ್ಯಾಚರಣೆಯಿಂದ ತಪ್ಪಿದ ಭಾರೀ ಅನಾಹುತ…!
ಉಪ್ಪಿನಂಗಡಿ : ಕೆಎಸ್ಆರ್ಟಿಸಿ ಐರಾವತ ಬಸ್ಸಿನಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು ತಕ್ಷಣ ಸ್ಥಳೀಯ ಯುವಕರ ಕಾರ್ಯಾಚರಣೆಯಿಂದ ಬೆಂಕಿ ಆರಿಸಲಾಗಿದ್ದು ಹೆಚ್ಚಿನ ಅನಾಹುತ ತಪ್ಪಿಸಿದ ಘಟನೆ ಉಪ್ಪಿನಂಗಡಿ ಹಳೆಗೇಟು ಬಳಿ ಇಂದು ಬೆಳಗ್ಗೆ ನಡೆದಿದೆ.
ಬೆಂಗಳೂರಿನಿಂದ – ಮಂಗಳೂರಿಗೆ ಹೋಗುತ್ತಿದ್ದ ಐರಾವತ ಬಸ್ಸಿನ ಹಿಂಬದಿ ಎಸಿಗೆ ಬೆಂಕಿ ಹತ್ತಿಕೊಂಡಿದ್ದು, ಇದನ್ನು ಗಮನಿಸಿದ ಚಾಲಕ ಹಳೆಗೇಟು ಬಳಿ ಬಸ್ಸನ್ನು ನಿಲ್ಲಿಸಿದ್ದರು.
ಕೂಡಲೇ ಪ್ರಯಾಣಿಕರೆಲ್ಲರೂ ಬಸ್ಸಿನಿಂದ ಇಳಿದಿದ್ದಾರೆ. ತಕ್ಷಣ ಅಲ್ಲಿದ್ದ ಅಟೋ ಚಾಲಕರು ರಸ್ತೆಯಲ್ಲಿದ್ದ ಕೆಸರು, ಮಣ್ಣು, ನೀರನ್ನು ಬಸ್ಸಿಗೆ ಎರಚಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಬಸ್ಸಿನ ಹಿಂಬದಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರು : ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಲು ಯತ್ನಿಸಿದ ಕಳ್ಳರಿಬ್ಬರನ್ನು ಸಾರ್ವಜನಿಕರ ಸಹಾಯದೊಂದಿಗೆ ಹಿಡಿದು ವೃದ್ದೆಯೊಬ್ಬರು ಪೊಲೀಸರಿಗೊಪ್ಪಿಸಿದ ಘಟನೆ ನೆಲ್ಯಾಡಿ ಸಮೀಪದ ಗುಂಡ್ಯ ಅಡ್ಡಹೊಳೆ ಎಂಬಲ್ಲಿ ಸೋಮವಾರ ನಡೆದಿದೆ.
ಬೆಂಗಳೂರು ಯಶವಂತಪುರ ಮೂಲದ ರೋಹಿತ್ (25) ಮತ್ತು ಅಶೋಕ್ (25) ಬಂಧಿತರು.
ಅಡ್ಡಹೊಳೆಯಲ್ಲಿ ಡ್ರೈಫ್ರೂಟ್ಸ್ ಸೇರಿದಂತೆ ಇತರ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಯ ಒಡತಿ ತ್ರೇಸ್ಯಾಮಾ(60) ಆರೋಪಿಗಳನ್ನು ಹಿಡಿದುಕೊಟ್ಟ ದಿಟ್ಟ ಮಹಿಳೆ. ಈಕೆ ಅಂಗಡಿಯಲ್ಲಿ ಒಬ್ಬಂಟಿಯಾಗಿದ್ದ ವೇಳೆ ಸ್ಕೂಟಿಯೊಂದರಲ್ಲಿ ಆಗಮಿಸಿದ ಕಳ್ಳರಿಬ್ಬರು ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಲು ಯತ್ನಿಸಿದ್ದಾರೆ.
ತಕ್ಷಣ ಎಚ್ಚೆತ್ತ ಮಹಿಳೆ ಇಬ್ಬರನ್ನು ಸಾರ್ವಜನಿಕರ ಸಹಾಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ
ಇನ್ನು ಈ ಇಬ್ಬರು ಖದೀಮರು ತಾವು ಆಗಮಿಸಿದ ಸ್ಕೂಟಿಯನ್ನು ಸಹ ಕದ್ದುಕೊಂಡು ಬಂದಿದ್ದರು. ಮಂಗಳೂರಿನ ವಾಹನ ಮಾರಾಟಗಾರರೊಬ್ಬರ ಬಳಿ ಟೆಸ್ಟ್ ಡ್ರೈವ್ ಮಾಡುತ್ತೇವೆ ಎಂದು ಸ್ಕೂಟಿ ಪಡೆದುಕೊಂಡು ಬೆಂಗಳೂರಿನತ್ತ ಪರಾರಿಯಾಗಿದ್ದರು . ದಾರಿ ಮಧ್ಯೆ ಅಡ್ಡಹೊಳೆಯಲ್ಲಿ ವೃದ್ದೆಯ ಕುತ್ತಿಗೆ ಸರ ಎಗರಿಸಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.