ಸುಳ್ಯ : ಬಿಲ್ಲವ ಸಮಾಜದಲ್ಲಿ 1ಲಕ್ಷ ಹೆಣ್ಣು ಮಕ್ಕಳು ವೇಶ್ಯೆಯರಿದ್ದಾರೆ ಎಂಬ ಆಡಿಯೋ ಹೇಳಿಕೆ ನೀಡಿರುವ ಆರೋಪದ ಮೇಲೆ ಪಂಜ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಕೊನೆಗೂ ಎಫ್ಐಆರ್ ದಾಖಲಾಗಿದೆ.
ಹಿಂದೂ ಜಾಗರಣಾ ವೇದಿಕೆ ಮುಖಂಡ ಸಚಿನ್ ವಲಳಂಬೆಯವರು ಅರಣ್ಯಾಧಿಕಾರಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳ್ಳಾರೆ ಪೊಲೀಸರು ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಬಿಎನ್ಎಸ್ 79 ಸೆಕ್ಷನ್ನಡಿ ಪ್ರಕರಣ ದಾಖಲಿಸಿದ್ದಾರೆ. ಸಂಜೀವ ಪೂಜಾರಿ ಕಾಣಿಯೂರು ವಿರುದ್ದ ದೂರು ನೀಡಿದ್ದರೂ ಪೊಲೀಸರು ಪ್ರಕರಣ ದಾಖಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಿಂಜಾವೇ ಶುಕ್ರವಾರ ಪ್ರತಿಭಟನೆಗೆ ಕರೆ ನೀಡಿತ್ತು. ಹಿಂಜಾವೇ ಪ್ರತಿಭಟನೆ ಎಚ್ಚರಿಕೆ ಬೆನ್ನಲ್ಲೇ ಎಫ್ಐಆರ್ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ: ಎರಡು ದಿನಗಳ ಹಿಂದೆ ಸಂಜೀವ ಪೂಜಾರಿ ಕಾಣಿಯೂರು ತಮ್ಮ ಎಫ್ಬಿಯಲ್ಲಿ “ನಾನು ಕಂಡಂತೆ ತಕ್ಷಣಕ್ಕೆ ಸಹಾಯ ಮಾಡುವುದರಲ್ಲಿ ಮುಸಲ್ಮಾನರದ್ದು ಎತ್ತಿದ ಕೈ” ಪೋಸ್ಟ್ ಹಾಕಿದ್ದರು. ಸುರೇಶ್ ಕಾಸರಗೋಡು ಎಂಬ ಹಿಂದೂ ಕಾರ್ಯಕರ್ತ ಸಂಜೀವ ಪೂಜಾರಿಯರಿಗೆ ದೂರವಾಣಿ ಕರೆ ಮಾಡಿ ಈ ಪೋಸ್ಟ್ ಬಗ್ಗೆ ಆಕ್ಷೇಪ ಎತ್ತಿದ್ದರು. ಈ ಸಂಭಾಷಣೆ ವೇಳೆ ಸಂಜೀವ ಪೂಜಾರಿಯವರು ಬಿಲ್ಲವ ಸಮಾಜದ ಹೆಣ್ಮಕ್ಕಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. “ದ.ಕ.ಜಿಲ್ಲೆಯಲ್ಲಿ 1ಲಕ್ಷ ಬಿಲ್ಲವ ಹುಡುಗಿಯರು ಸೂಳೆಯಾಗಿದ್ದಾರೆ. ಇದಕ್ಕೆ ನನ್ನ ಬಳಿ 10,000 ದಾಖಲೆಗಳಿದೆ. ಹಿಂದುತ್ವದ ಹುಡುಗರು ಭಜನೆ ಮಾಡಿ ರಾತ್ರೆ ಮರದಡಿ ಹುಡುಗಿಯರನ್ನು ಮಲಗಿಸುತ್ತಾರೆ.” ಎಂದು ತುಳುವಿನಲ್ಲಿ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು.

























