ಬಂಟ್ವಾಳ : ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬಡಗಬೆಳ್ಳೂರಿನ ದೇವಸ್ಥಾನವೊಂದರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬುಧವಾರ ಬಂಟ್ವಾಳ ಪೊಲೀಸರು ಕಾಸರಗೋಡಿನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಾಣಾಜೆ ಗ್ರಾಮದ ಉಡ್ಡಂಗಳ ನಿವಾಸಿ ಮೊಹಮ್ಮದ್ ಶರೀಫ್ (44) ಎಂದು ಗುರುತಿಸಲಾಗಿದೆ. ಈತ 2004ರ ನವೆಂಬರ್ನಲ್ಲಿ ಬಡಗಬೆಳ್ಳೂರಿನ ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದ. ಕರ್ನಾಟಕ ಮತ್ತು ಕೇರಳ ರಾಜ್ಯದ ಹಲವಾರು ಕಡೆ ವಿಳಾಸ ಬದಲಾವಣೆ ಮಾಡಿಕೊಂಡು ಬಂಧನಕ್ಕೆ ಸಿಗದೆ ಕಾಸರಗೋಡಿನ ಪುತ್ತಿಗೆಯಲ್ಲಿ ವಾಸವಾಗಿದ್ದ. ಪೊಲೀಸರು ಆತನ ಕುರಿತು ಬೇರೆ ಬೇರೆ ಆಯಾಮಗಳಿಂದ ಮಾಹಿತಿ ಕಲೆ ಹಾಕಿ ಕಾಸರಗೋಡಿನಿಂದ ವಶಕ್ಕೆ ಪಡೆದಿದ್ದಾರೆ. ಈತನ ವಿರುದ್ಧ ಬಂಟ್ವಾಳ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಆರೋಪಿ ಮೊಹಮ್ಮದ್ ಶರೀಫ್ಇತ್ತೀಚಿಗೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Dakshina Kannada
ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳು, ಬಂದರು ಮತ್ತು ವಿಮಾನ ನಿಲ್ದಾಣಗಳಂತಹ ಬಹು ಸಂಪರ್ಕ ಸೌಲಭ್ಯಗಳನ್ನು ಹೊಂದಿರುವ ಮಂಗಳೂರಿನಲ್ಲಿ ಇದೀಗ ಕೇರಳದ ಕೊಚ್ಚಿ ಮಾದರಿಯಲ್ಲಿ ವಾಟರ್ ಮೆಟ್ರೋ ಯೋಜನೆಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಮಾರಿಟೈಮ್ ಬೋರ್ಡ್ (KMB) ಮಂಗಳೂರು ವಾಟರ್ ಮೆಟ್ರೋ ಯೋಜನೆಗೆ (MWMP) ಸಮಗ್ರವಾದ ಯೋಜನಾ ವರದಿಯನ್ನು(DPR) ರೂಪಿಸಲು ನಿರ್ಧರಿಸಿದೆ. ಈ ಯೋಜನೆ ನೇತ್ರಾವತಿ ಮತ್ತು ಗುರುಪುರ ನದಿಗಳ ಎರಡೂ ದಡಗಳಲ್ಲಿ ಬಜಾಲ್ ನಿಂದ ಮರವೂರುವರೆಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ.
ಈ ಯೋಜನೆ ಜಾರಿಗೆ ಬಂದರೆ ಕೊಚ್ಚಿಯ ನಂತರ ಭಾರತದ ಎರಡನೇ ಅತಿದೊಡ್ಡ ಜಲ ಸಾರಿಗೆ ವ್ಯವಸ್ಥೆಯಾಗಲಿದೆ. ಈ ಯೋಜನೆಯು ಪರಿಸರ ಸ್ನೇಹಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರಂಭದಲ್ಲಿ ನೇತ್ರಾವತಿ-ಗುರುಪುರ ನದಿ ಹಿನ್ನೀರಿನ ಉದ್ದಕ್ಕೂ ಸುಮಾರು 30 ಕಿಲೋಮೀಟರ್ ದೂರದವರೆಗೆ ಬೋಟ್ ಸಂಚರಿಸಲಿದೆ. ಬಳಿಕ ಬಜಾಲ್ನಿಂದ ಪ್ರಾರಂಭವಾಗಿ ಗುರುಪುರದ ಮರವೂರು ಸೇತುವೆಯವರೆಗೆ ವಿಸ್ತರಿಸಲಿದೆ. ಇದು ಸುಮಾರು 17 ಆಧುನಿಕ ಮೆಟ್ರೋ ನಿಲ್ದಾಣಗಳನ್ನು ಹೊಂದಿರಲಿದೆ. ಯೋಜನೆಯು ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಈ ಯೋಜನೆ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಲಿದೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲಿದೆ ಎಂದು ಕೆಎಂಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಯೋಜನೆಯು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಟ್ರಾಫಿಕ್ ಸಮಸ್ಯೆಗೆ ಪರಿಹಾರ ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಸೋಮೇಶ್ವರ ದೇವಸ್ಥಾನ, ಉಳ್ಳಾಲ ಮತ್ತು ನವಮಂಗಳೂರು ಬಂದರು ಮುಂತಾದ ಪ್ರಮುಖ ಸ್ಥಳಗಳನ್ನು ಉದ್ದೇಶಿತ ಮಾರ್ಗದಲ್ಲಿ ಸೇರಿಸಲಾಗಿದೆ. ಈ ಯೋಜನೆಯಡಿ ಅತ್ಯಾಧುನಿಕ ಎಲೆಕ್ಟ್ರಿಕ್ ಮತ್ತು ಡೀಸೆಲ್ ಬೋಟ್ ಗಳನ್ನು ಬಳಕೆ ಮಾಡಲಾಗುತ್ತದೆ. ಬೋಟ್ ಗಳಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದನ ಕಳ್ಳತನ ಪ್ರಕರಣ : ಇಬ್ಬರ ಬಂಧನ : ಕಾರು ಮತ್ತು ಸ್ಕೂಟರ್ ಪೊಲೀಸ್ ವಶಕ್ಕೆ..!
ಮಂಗಳೂರು: ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾವೂರು ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ.
ಬಂಧಿತ ಆರೋಪಿಗಳನ್ನು ಕೊಳಂಬೆ ಕೊಂಚಾರು ಬದ್ರಿಯಾನಗರದ ಪೈಜಲ್ ಕೊಂಚಾರ್ (40) ಮತ್ತು ಕೋಡಿಯ ಸುಹೈಬ್ ಅಕ್ತರ್ (24) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕಾರು ಹಾಗೂ ಸ್ಕೂಟರ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪೈಕಿ ಪೈಜಲ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ 1 ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಹಿಂದೆ ಪೈಜಲ್ ವಿರುದ್ಧ ಒಟ್ಟು 12 ದನ ಕಳ್ಳತನ ಪ್ರಕರಣ ದಾಖಲಾಗಿದ್ದು ಅದರಲ್ಲಿ ಬಜ್ಜೆ ಪೊಲೀಸ್ ಠಾಣೆಯಲ್ಲಿ 7 ಪ್ರಕರಣಗಳು, ಉಡುಪಿಯ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಮತ್ತು ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ. ಸುಹೈಬ್ ಅಕ್ತರ್ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದನ ಕಳ್ಳತನದ ಒಂದು ಪ್ರಕರಣ ದಾಖಲಾಗಿದೆ.
ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಕೆ ನಿರ್ದೇಶನದಲ್ಲಿ ಕಾವೂರು ಪೊಲೀಸ್ ಠಾಣೆಯ ನಿರೀಕ್ಷಕ ರಾಘವೇಂದ್ರ ಬೈಂದೂರು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದಾರ, ಸಿಬ್ಬಂದಿ ಭುವನೇಶ್ವರಿ, ರಿಯಾಜ್, ಚಂದ್ರ ನಾಯಕ್, ನಾಗರಾಜ ಭೈರಗೊಂಡ, ರಾಜಪ್ಪ ಪಾಲ್ಗೊಂಡಿದ್ದರು.
ಮಂಗಳೂರು : ಕಂಪೆನಿಯಲ್ಲಿ ಹೂಡಿಕೆ ಮಾಡುವಂತೆ ಪ್ರೇರೆಪಿಸಿ ಲಕ್ಷಾಂತರ ವಂಚಿಸಿದ ಆರೋಪದ ಮೇಲೆ ಆನ್ಲೈನ್ ಖದೀಮರ ವಿರುದ್ಧ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾರೋ ಅಪರಿಚತ ವ್ಯಕ್ತಿ ಮಂಜು ಪಚಿಸಿಯಾ ಎಂಬ ಹೆಸರಿನಿಂದ ವಾಟ್ಸ್ಆಪ್ ಮುಖಾಂತರ ಪರಿಚಯಿಸಿಕೊಂಡು ತಾನು ASSITANT IN IIFL SECURITIES LIMITEDನಲ್ಲಿ ಕರ್ತವ್ಯ ನಿರವಹಿಸುವುದಾಗಿ ತಿಳಿಸಿ ನಂತರ ಷೇರ್ ಮತ್ತು ಇಪೋ ಬಗ್ಗೆ ತಿಳಿಸಿ ಹೂಡಿಕೆ ಮಾಡಿ ಲಾಭ ಪಡೆಯಬಹುದಾಗಿ ನಂಬಿಸಿದ್ದಾನೆ.
iiflನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಗಳಿಸುವಂತೆ ಪ್ರೇರೇಪಿಸಿ ಹಂತ ಹಂತವಾಗಿ, ಬ್ಯಾಂಕ್ ಆಪ್ ಬರೋಡಾ ಖಾತೆಯಿಂದ 22,00,000/-ರೂ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 19,82,502/- ರೂ ಮತ್ತು ಆಕ್ಸಿಸ್ ಬ್ಯಾಂಕ್ ಖಾತೆಯಿಂದ 1,50,000/- ರೂಗಳು ಒಟ್ಟು 43,32,502/- ರೂಗಳನ್ನು ಅಪರಿಚಿತ ವ್ಯಕ್ತಿಯು ನೀಡಿದ ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ನಂತರ ತಾವು ಹೂಡಿದ ಹಣ ಹಿಂಪಡೆಯುವoತೆ ಮುಂದಾದಾಗ ಅಪರಿಚಿತ ವ್ಯಕ್ತಿಗಳು ಶೇ 25 ರಷ್ಟು ಕಮಿಷನ್ ಹಣ ಪಾವತಿಸುವಂತೆ ಒತ್ತಾಯಿಸಿದಾಗ ತಾವು ಆನ್ ಲೈನ್ ಮೋಸ ಹೋಗಿರುವ ವಿಚಾರ ತಿಳಿದು ದೂರು ನೀಡಿದ್ದಾರೆ.
ಬಂಟ್ವಾಳ : ರಸ್ತೆ ದಾಟುವ ವೇಳೆ ಬೈಕ್ ಢಿಕ್ಕಿಯಾಗಿ ಗಾಯಗೊಂಡಿದ್ದ ಹಿರಿಯ ಕಾರು ಚಾಲಕರೋರ್ವರು ಉಸಿರಾಟದ ತೊಂದರೆಯಿಂದ ಮೃತಪಟ್ಟ ಘಟನೆ ಮಂಗಳವಾರ ತುಂಬೆಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಕಳ್ಳಿಗೆ ಗ್ರಾಮದ ಕಂಜತ್ತೂರು ನಿವಾಸಿ ಅಂಬಾಸಿಡರ್ ಕಾರು ಚಾಲಕ ಭೋಜ ಮೂಲ್ಯ (62) ಎಂದು ಗುರುತಿಸಲಾಗಿದೆ.
ಅ.11 ರಂದು ರಾತ್ರಿ 7ರ ಸುಮಾರಿಗೆ ಭೋಜ ಮೂಲ್ಯ ಅವರು ಮನೆಗೆ ಕೋಳಿ ಮಾಂಸ ಖರೀದಿ ಮಾಡಲು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾರು ನಿಲ್ಲಿಸಿ ತಲಪಾಡಿಯ ಚಿಕನ್ ಸ್ಟಾಲ್ಗೆ ತೆರಳಲು ರಸ್ತೆ ದಾಟುವ ವೇಳೆ ಬೈಕ್ ಢಿಕ್ಕಿಯಾಗಿತ್ತು. ಘಟನೆಯಲ್ಲಿ ಅವರಿಗೆ ಕಾಲಿಗೆ ಗಾಯವಾಗಿದ್ದು, ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅ. 12 ರಂದು ಅಪಘಾತದ ಬಗ್ಗೆ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಅಪಘಾತವಾದ 7 ದಿನಗಳ ಬಳಿಕ ಬೋಜ ಮೂಲ್ಯ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ಗೊಂಡು ಮನೆಗೆ ತೆರಳಿದ್ದರು. ಇದೀಗ 19 ದಿನಗಳ ಬಳಿಕ ಮನೆಯಲ್ಲಿ ಇವರಿಗೆ ಉಸಿರಾಟದ ತೊಂದರೆ ಕಂಡುಬಂದಿದ್ದು ಇವರನ್ನು ಕೂಡಲೇ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿದೆ.
ಅಪಘಾತ ಪ್ರಕರಣದ ಬಗ್ಗೆ ಈಗಾಗಲೇ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಸ್.ಐ. ಸುತೇಶ್ ಅವರು ಮರಣೋತ್ತರ ಪರೀಕ್ಷೆ ವೇಳೆ ಹಾಜರಿದ್ದರು.
ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಬೋಜ ಮೂಲ್ಯ ಅವರು ಸುಮಾರು 42 ವರ್ಷಗಳ ಕಾಲ ಅಂಬಾಸಿಡರ್ ಕಾರು ಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಬಿಸಿರೋಡಿನ ಆಸುಪಾಸಿನಲ್ಲಿ ಭೋಜಣ್ಣ ಎಂದೇ ಖ್ಯಾತಿ ಪಡೆದಿದ್ದರು. ಭೋಜ ಮೂಲ್ಯ ಅವರು ಕಾರು ಚಾಲಕರ ಸಂಘದಲ್ಲಿ ಸಕ್ರಿಯರಾಗಿದ್ದುಕೊಂಡು ಚಾಲಕರ ಆಗು ಹೋಗುಗಳಿಗೆ ಸದಾ ಸ್ಪಂದನೆ ನೀಡುತ್ತಿದ್ದರು.
ಲವ್ ಜಿಹಾದ್ : ‘ಸಮೀರ್’ ಎಂಬಾತನಿಗೆ ಶಿಕ್ಷೆ ನೀಡಿ ಎಂದು ಬರೆದ ಪತ್ರ ಕಾಣಿಕೆ ಹುಂಡಿಯಲ್ಲಿ ಪತ್ತೆ…!!
ಪುತ್ತೂರು : ದೇಶಾದ್ಯಂತ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪುತ್ತೂರಿನಲ್ಲಿ ಹೊಸ ಘಟನೆಯೊಂದು ಬೆಳಕಿಗೆ ಬಂದಿದೆ. ಪುತ್ತೂರಿನ ಪ್ರಸಿದ್ಧ ಮಹಾಲಿಂಗೇಶ್ವರ ದೇವಾಲಯದ ಕಾಣಿಕೆ ಹುಂಡಿ ತೆರೆಯುವ ಸಂದರ್ಭ ಲವ್ ಜಿಹಾದ್ ಬಲೆಗೆ ಬಿದ್ದ ಯುವತಿಯೋರ್ವಳು ದೇವರಿಗೆ ಬರೆದ ಪತ್ರವೊಂದು ಸಿಕ್ಕಿದ್ದು ಹೊಸ ಸಂಚಲನ ಸೃಷ್ಟಿ ಮಾಡಿದೆ.
ಕಾಣಿಕೆ ಹುಂಡಿ ಲೆಕ್ಕಾಚಾರದ ವೇಳೆ ಸಿಕ್ಕಿದ ಚೀಟಿಯಲ್ಲಿ “ಸಮೀರ್ ಅನ್ನುವವನು ನನ್ನ ಜೀವನ ಹಾಳು ಮಾಡಿದ್ದಾನೆ. ಇವತ್ತು ನಾನು ನನ್ನ ಮಗಳು ಬೀದಿಯಲ್ಲಿ ಇದ್ದೇವೆ.. ಅವನ ಜೀವನ ಕೂಡ ಹಾಳಗಬೇಕು. ಅವನಿಗೆ ಮದುವೆಯಾಗಲು ಹುಡುಗಿ ಸಿಗಬಾರದು – ಓ ದೇವರೆ ಇದು ನನ್ನ ಪ್ರಾರ್ಥನೆ” ಎಂದು ಬರೆಯಲಾಗಿದೆ.
ಇತಿಹಾಸ ಪ್ರಸಿದ್ಧವಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಅನೇಕ ಕಾರಣಿಕದ ಸಂಗತಿಯನ್ನು ಒಳಗೊಂಡಿದ್ದು, ಹತ್ತೂರ ಒಡೆಯನಲ್ಲಿ ತಮ್ಮ ಮನದಾಳದ ಮಾತನ್ನು ಚೀಟಿ ಮೂಲಕ ತಿಳಿಸಿದ್ದಾರೆ. ಸದ್ಯ ಈ ಪ್ರಕರಣದ ಮೂಲಕ ಮತ್ತೊಂದು ಲವ್ ಜಿಹಾದ್ ಘಟನೆ ಬೆಳಕಿಗೆ ಬಂದಂತಾಗಿದೆ. ಈ ಪತ್ರದ ವಿಷಯ ತಿಳಿದು ಪುತ್ತೂರಿನ ಹಿಂದೂ ಸಮಾಜ, ದೇವರೇ ನ್ಯಾಯ ಒದಗಿಸಲಿ ಎಂದು ಮನವಿ ಮಾಡಿದೆ.
ಉಪ್ಪಿನಂಗಡಿ : ಕಾರು ಹಾಗೂ ಅಟೋ ರಿಕ್ಷಾ ಮಧ್ಯೆ ಅಪಘಾತ ಸಂಭವಿಸಿ ರಿಕ್ಷಾದಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ಇಲ್ಲಿನ ನೆಕ್ಕಿಲಾಡಿಯಲ್ಲಿ ಸಂಭವಿಸಿದೆ.
ಉಪ್ಪಿನಂಗಡಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಪೆರ್ನೆ ಕಡೆ ಸಾಗುತ್ತಿದ್ದ ನಝೀರ್ ಜೋಗಿಬೆಟ್ಟು ಎಂಬವರ ಆಟೋ ರಿಕ್ಷಾಕ್ಕೆ ಪುತ್ತೂರು ಕಡೆಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಕಾರು ಉಪ್ಪಿನಂಗಡಿ ಕಡೆ ಹೋಗಲು ತಿರುವು ಪಡೆದು ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ಪಡೆಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದಿಂದ ರಿಕ್ಷಾದ ಒಂದು ಭಾಗ ಜಖಂಗೊಂಡಿದೆ. ರಿಕ್ಷಾದಲ್ಲಿ ಇಬ್ಬರು ಪ್ರಯಾಣಿಕರಿದ್ದು, ಅವರು ಅಲ್ಪ ಪ್ರಮಾಣದ ಗಾಯಗೊಂಡು, ಉಪ್ಪಿನಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಗಾಯಾಳುಗಳನ್ನು ಅಲ್ಲಿಯೇ ಇದ್ದ ಅಟೋ ಚಾಲಕ ಕಲಂದರ್ ಶಾಫಿ ತಕ್ಷಣ ಆಸ್ಪತ್ರೆಗೆ ಕರೆತರುವಲ್ಲಿ ನೆರವಾದರು.
ಮಂಗಳೂರು : ಯುವವಾಹಿನಿ ಸಂಸ್ಥೆಯಿಂದ ಕೊಡಮಾಡುವ ‘ವಿಶುಕುಮಾರ್ ಪ್ರಶಸ್ತಿ’ಗೆ ಈ ಬಾರಿ ಪತ್ರಿಕಾ ಸಂಪಾದಕ, ಸಾಹಿತಿ, ಸಂಶೋಧಕ, ಬಾಬು ಶಿವ ಪೂಜಾರಿ ಆಯ್ಕೆಯಾಗಿದ್ದಾರೆ.
ಕಾದಂಬರಿಕಾರ, ಕತೆಗಾರ, ನಾಟಕಕಾರ, ರಂಗನಟ, ರಂಗ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಪತ್ರಕರ್ತ, ಅಂಕಣಕಾರ, ಸಂಘಟಕ ವಿಶು ಕುಮಾರ್ ಸ್ಮರಣಾರ್ಥ ಯುವವಾಹಿನಿ ಸಂಸ್ಥೆಯು ಕಳೆದ 20 ವರ್ಷಗಳಿಂದ “ವಿಶುಕುಮಾರ್ ಪ್ರಶಸ್ತಿ” ನೀಡುತ್ತಾ ಬಂದಿದೆ. ಈ ಸಾಲಿನ ಪ್ರಶಸ್ತಿಗೆ ಬಿ.ಎಂ. ರೋಹಿಣಿ, ಮುದ್ದು ಮೂಡುಬೆಳ್ಳೆ, ಡಾ| ಪ್ರಭಾಕರ ನೀರುಮಾರ್ಗ, ಡಾ| ಯೋಗೀಶ್ ಕೈರೋಡಿ, ಪ್ರೊ. ಶಶಿಲೇಖಾ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಆಯ್ಕೆಯನ್ನು ನಡೆಸಿದೆ.
ನವೆಂಬರ್ 10ರಂದು ಉರ್ವ ಸ್ಟೋರ್ನ ತುಳು ಭವನದ ‘ಅಮೃತ ಸೋಮೇಶ್ವರ ಸಭಾಂಗಣ’ದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಯುವವಾಹಿನಿ ಸಂಸ್ಥೆಯ ವಿಶುಕುಮಾರ್ ದತ್ತಿ ನಿಧಿ ಸಮಿತಿಯ ಸಂಚಾಲಕ ಸುರೇಶ್ ಪೂಜಾರಿ ಹಾಗೂ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ. ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಉಸ್ತುವಾರಿಗಳನ್ನಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಾದ ವಿನಯ್ ಕುಲಕರ್ಣಿ ಮತ್ತು ಮಂಜುನಾಥ ಭಂಡಾರಿ ಅವರನ್ನು ನೇಮಕ ಮಾಡಲಾಗಿದ್ದು ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ HUDA ಅಧ್ಯಕ್ಷರಾದ ಶಾಕಿರ್ ಸನದಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ರ್ಶಿ ವಿಜಯ್ ಮತ್ತಿಕಟ್ಟಿ ಅವರು ಹುಬ್ಬಳ್ಳಿಯಲ್ಲಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚನಾವಣೆಯ ಬಗ್ಗೆ ಚರ್ಚೆ ನಡೆಸಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಾಲರಾಜ್ ನಾಯ್ಕ್ ಮತ್ತು ಸ್ಥಳೀಯ ಕಾಂಗ್ರೆಸ್ ಪಕ್ಷದ ನಾಯಕರುಗಳು ಉಪಸ್ಥಿತರಿದ್ದರು.
ದೈವ ಕ್ಷೇತ್ರ ಉತ್ಸವದ ಸಂದರ್ಭ ಸಂಗ್ರಹಿಸಿಟ್ಟ ಪಟಾಕಿಯಲ್ಲಿ ಸ್ಫೋಟ; 154 ಜನರಿಗೆ ಗಾಯ
ಕಾಸರಗೋಡು : ನೀಲೇಶ್ವರ ಸಮೀಪದ ಅಂಜುತಂಬಲಂ ವೀರರ್ಕಾವ್ ದೈವ ಕ್ಷೇತ್ರ ಉತ್ಸವದ ಸಂದರ್ಭದಲ್ಲಿ ಪಟಾಕಿ ಸಂಗ್ರಹ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಟ್ಟು 154 ಜನರು ಗಾಯಗೊಂಡಿದ್ದಾರೆ.
ಅಪಘಾತದಲ್ಲಿ 97 ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ ಇಂಬಶೇಖರ್ ಹೇಳಿದರು. ಸೋಮವಾರ ತಡರಾತ್ರಿ 12 ಗಂಟೆಯ ವೇಳೆಗೆ ನಾಡನ್ನೆ ನಡುಗಿಸಿದ ಈ ದುರ್ಘಟನೆ ಸಂಭವಿಸಿದೆ.
ಜನ ಸಮೂಹ ಗುಂಪಾಗಿ ಸೇರಿದ್ದ ವೇಳೆ ಪಟಾಕಿ ಸಿಡಿಸಲಾಗಿದ್ದು ಈ ವೇಳೆ ಅಸುರಕ್ಷಿತವಾಗಿ ದಾಸ್ತಾನಿಸಿರಿದ್ದ ಪಟಾಕಿಗೆ ಒಮ್ಮಿಂದೊಮ್ಮೆಲೆ ಬೆಂಕಿ ಹತ್ತಿಕೊಂಡಿದ್ದು ಮಕ್ಕಳು ಮಹಿಳೆಯ ಸಹಿತ ಜನಗುಂಪಾಗಿ ಓಡತೊಡಗಿದ್ದರು.
ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಂಚುತಂಬಲಂ ವೀರರ್ಕವ್ ಸಮಿತಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಬಂಧಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ನೂರಾರು ಜನರು ಸೇರಿದ್ದರು.
ಸುಟ್ಟಗಾಯಗಳಲ್ಲದೆ, ಕಾಲ್ತುಳಿತದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಅನುಮತಿ ಇಲ್ಲದೆ ಪಟಾಕಿಗಳನ್ನು ಸಂಗ್ರಹಿಸಲಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಇಂಬಶೇಖರ್ ತಿಳಿಸಿದ್ದಾರೆ.
ಕನಿಷ್ಠ ಜನ ಅಂತರ ಕಾಯ್ದುಕೊಳ್ಳದೆ ಪಟಾಕಿ ಸಿಡಿಸಲಾಯಿತು. ಕಾನೂನಿನ ಪ್ರಕಾರ 100 ಮೀಟರ್ ಅಗತ್ಯವಿದೆ. ಎರಡ್ಮೂರು ಅಡಿ ಅಂತರದಲ್ಲಿ ಪಟಾಕಿ ಸಿಡಿಸಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪಟಾಕಿಗಳನ್ನು ಸಿಡಿಸುವ ಸಮೀಪದಲ್ಲಿಯೇ ಪಟಾಕಿ ಇಟ್ಟಿರುವುದು ಅಪಾಯಕ್ಕೆ ಕಾರಣವಾಗಿತ್ತು. ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಸಂದೀಪ್ ಸ್ಥಿತಿ ಚಿಂತಾಜನಕವಾಗಿದೆ. 80ರಷ್ಟು ಸುಟ್ಟ ಗಾಯಗಳೊಂದಿಗೆ ಸಂದೀಪ್ ಅವರನ್ನು ಬೆಳಗ್ಗೆ ಪರಿಯಾರಂ ವೈದ್ಯಕೀಯ ಕಾಲೇಜಿನಿಂದ ಕೋಝಿಕ್ಕೋಡ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಐವರು ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಞಂಗಾಡ್ ಆಸ್ಪತ್ರೆಯಲ್ಲಿ 16, ಸಂಜೀವನಿ ಆಸ್ಪತ್ರೆಯಲ್ಲಿ 10, ಐಶಾಲ್ ಆಸ್ಪತ್ರೆಯಲ್ಲಿ 17, ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ 5, ಕಣ್ಣೂರು ಮಿಮ್ಸ್ನಲ್ಲಿ 18, ಕೋಝಿಕ್ಕೋಡ್ ಮಿಮ್ಸ್ನಲ್ಲಿ 2 ಮತ್ತು ಅರಿಮಲ ಆಸ್ಪತ್ರೆಯಲ್ಲಿ 3, ಕೆಎಎಚ್ ಚೆರುವತ್ತೂರಿನಲ್ಲಿ 2, ಮನ್ಸೂರ್ ಆಸ್ಪತ್ರೆಯಲ್ಲಿ 5 ಮತ್ತು ದೀಪಾ ಆಸ್ಪತ್ರೆಯಲ್ಲಿ ಒಬ್ಬರು, 18 ಮಂದಿ ಮಂಗಳೂರು ಎಜೆ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.