ಮಂಗಳೂರು: ವಯನಾಡ್ ಲೋಕಸಭಾ ಉಪಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ ಭಂಡಾರಿಯವರು ಅಮೇಥಿ ಸಂಸದರಾದ ಕೆ.ಎಲ್ ಶರ್ಮಾ ಅವರೊಂದಿಗೆ ಕೋಟತ್ತಾರ ಗ್ರಾಮ ಪಂಚಾಯತ್ ನಲ್ಲಿ ನೆಡೆದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Dakshina Kannada
ಬಿಜೆಪಿಗೆ ಸರಕಾರಿ ತನಿಖಾ ಸಂಸ್ಥೆಗಳ ಮೇಲೆ, ಪ್ರಜಾಪ್ರಭುತ್ವ, ಲೋಕಾಯುಕ್ತದ ಮೇಲೆ ನಂಬಿಕೆಯಿಲ್ಲ – ಐವನ್ ಡಿಸೋಜ ಆರೋಪ
ಮಂಗಳೂರು : ಮೂಡಾ ನಿವೇಶನ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ತನಿಖೆಗೆ ಹಾಜರಾಗಬೇಕೆಂದು ಬೀದಿಗಿಳಿದು ಹೋರಾಟ ನಡೆಸಿದ್ದ ಬಿಜೆಪಿ ಸಿಎಂ ಲೋಕಾಯುಕ್ತದ ಮುಂದೆ ಹಾಜರಾಗಿ ತನಿಖೆ ಎದುರಿಸಿದ ಬಳಿಕ ತನ್ನ ವರಸೆ ಬದಲಿಸಿ ಅದೊಂದು ಐವಾಷ್, ನಾಟಕ, ಬಿ-ರಿಪೋರ್ಟ್ ಹಾಕುವ ತಂತ್ರ ಎಂದು ಹೇಳಲಾರಂಭಿಸಿದೆ. ಇದನ್ನೆಲ್ಲಾ ನೋಡುವಾಗ ಬಿಜೆಪಿಗೆ ಸರಕಾರಿ ತನಿಖಾ ಸಂಸ್ಥೆಗಳ ಮೇಲೆ, ಪ್ರಜಾಪ್ರಭುತ್ವ, ಲೋಕಾಯುಕ್ತದ ಮೇಲೆ ನಂಬಿಕೆಯಿಲ್ಲ ಎಂದೆನ್ನಿಸುತ್ತದೆ ಎಂದು ಎಂಎಲ್ಸಿ ಐವನ್ ಡಿಸೋಜ ಆರೋಪಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನ್ಯಾಯ ತೀರ್ಮಾನವನ್ನು ಸ್ವೀಕರಿಸಿದವರು ಯಾರು ಎಂದು ಬಿ.ವೈ.ವಿಜೇಂದ್ರ ಉತ್ತರಿಸಲಿ. ಆರೋಪ ಬಂದ ಮೇಲೆ ಬಿಟ್ಟು ಓಡುತ್ತಾರೆಂದು ನೀವು ಅಂದುಕೊಂಡಿರಿ. ಆದರೆ ತಪ್ಪು ಮಾಡಿದರೆ ಓಡುತ್ತಾರೆ. ಸಿಎಂ ಸಿದ್ದರಾಮಯ್ಯರಿಗೆ ತಮ್ಮ 40ವರ್ಷದ ರಾಜಕಾರಣದಲ್ಲಿ ಇಂದಿನವರೆಗೆ ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿರುವ ಆತ್ಮಸ್ಥೈರ್ಯವಿದೆ. 2014ರಲ್ಲಿ ಯಡಿಯೂರಪ್ಪರ ಮೇಲೆ ಇದೇ ರೀತಿ ಆರೋಪ ಕೇಳಿ ಬಂದಾಗ ಅವರು ರಾಜಿನಾಮೆ ನೀಡಿದ್ದರೆ, ಆ ಬಳಿಕ ಚಾರ್ಜ್ಶೀಟ್ ಫೈಲ್ ಮಾಡಿ ತನಿಖೆಗೆ ಹೋದಾಗ ತಾನೆ ಅವರು ರಾಜಿನಾಮೆ ಕೊಟ್ಟದ್ದು. ವಿಜೇಂದ್ರರ ಮೇಲೆ 14ಇಡಿ ಪ್ರಕರಣವಿದೆಯಲ್ಲ ಅದನ್ನೇಕೆ ತಾವು ಲೋಕಾಯುಕ್ತ, ಸಿಬಿಐ ತನಿಖೆ ನಡೆಸಲು ಹೇಳುತ್ತಿಲ್ಲ. ಇತ್ತೀಚೆಗೆ ಕುಮಾರಸ್ವಾಮಿಯವರು ಓರ್ವ ಕ್ಯಾಬಿನೆಟ್ ಮಿನಿಸ್ಟರ್ ಆಗಿ ಲೋಕಾಯುಕ್ತದ ಮುಂದೆ ಹಾಜರಾದರಲ್ಲ, ಅವರೇನು ರಾಜಿನಾಮೆ ಕೊಟ್ಟುಹೋದರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಎಲ್ಲದರಲ್ಲೂ ಮೂಗು ತೂರಿಸುವುದು, ಎಲ್ಲವೂ ಸರಿಯಿಲ್ಲ ಎಂದು ಹೇಳುವುದು ವಿರೋಧಪಕ್ಷದ ಘನತೆ ಗೌರವಕ್ಕೆ ಕುಂದು ತರುತ್ತದೆ. ಬಿಜೆಪಿಯ ಆರೋಪ ಮತ್ತು ಮಾತುಗಳು ವಿರೋಧಪಕ್ಷದ ಗೌರವದ ಸ್ಥಾನಕ್ಕೆ ಚ್ಯುತಿ ತರುತ್ತಿದೆ ಎಂದು ಐವನ್ ಡಿಸೋಜ ಹೇಳಿದರು.
ಪುತ್ತೂರು : ಲಕ್ಕಿ ಡ್ರಾದಲ್ಲಿ ಮೊಬೈಲ್ ಬಹುಮಾನವಿದೆ ಎಂಬ ಅಪರಿಚಿತನ ಮಾತನ್ನು ನಂಬಿ ಪುಣಚದ ಕೂಲಿ ಕಾರ್ಮಿಕರೊಬ್ಬರು ಹಣವನ್ನು ಕಳೆದುಕೊಂಡ ಘಟನೆ ನಡೆದಿದೆ.

ಸಂತ್ರಸ್ತ ಕೂಲಿ ಕಾರ್ಮಿಕರ ಮೊಬೈಲ್ಗೆ ಅಪರಿಚಿತನೊಬ್ಬ ಕರೆ ಮಾಡಿ ತಮ್ಮ ಮೊಬೈಲ್ ನಂಬರ್ ಲಕ್ಕಿ ಡ್ರಾದಲ್ಲಿ ಆಯ್ಕೆಯಾಗಿದ್ದು, ಅದರಲ್ಲಿ ತಮಗೆ ಮೊಬೈಲ್ ಬಹುಮಾನ ಬಂದಿದೆ. ವಿಳಾಸ ಕಳುಹಿಸಿದ್ದಲ್ಲಿ ಮೊಬೈಲ್ ತಲುಪಿಸುತ್ತೇವೆ ಎಂದು ತಿಳಿಸಿದ್ದಾನೆ. ಆದರೆ ಅವರು ತನಗೆ ಮೊಬೈಲ್ ಬೇಡ ಎಂದು ಹೇಳಿ ಕರೆ ಕಡಿತ ಮಾಡಿದ್ದರು. ಆದರೆ ಮತ್ತೆ ಕರೆ ಮಾಡಿದ ಅಪರಿಚಿತ ಕೂಲಿ ಕಾರ್ಮಿಕರನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದ.
ಮರುದಿನ ಕರೆ ಮಾಡಿದ ಆತ ನೀವು ಹೇಳಿದ ವಿಳಾಸಕ್ಕೆ ಮೊಬೈಲ್ ಕಳುಹಿಸಿದ್ದು, ಅಂಚೆಯಿಂದ ನೀವು ಪಡೆದುಕೊಳ್ಳಬೇಕಾದರೆ 1,600 ರೂ. ಪಾವತಿಸುವಂತೆ ಆತ ಹೇಳಿದ್ದ. ಅದರಂತೆ ಹಣ ಪಾವತಿಸಿ ಪಾರ್ಸೆಲ್ ಪಡೆದುಕೊಂಡಾಗ ಅದರಲ್ಲಿ ಹಾಳಾದ ಮೊಬೈಲ್ವೊಂದರ ಬಿಡಿಭಾಗ ಮಾತ್ರ ಇತ್ತು. ಅನಂತರ ಅವರಿಗೆ ತಾನು ಮೋಸ ಹೋಗಿರುವುದು ತಿಳಿದು ಬಂದಿದೆ.
ನವೆಂಬರ್ 10 ರಂದು ಯುವವಾಹಿನಿ ಸಂಸ್ಥೆಯಿಂದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ
ಕರಾವಳಿಯ ಕಡಲತಡಿಯ ಪುಣ್ಯ ಭೂಮಿಯಲ್ಲಿ ಜನಿಸಿ, ಕನ್ನಡ ಸಾರಸ್ವತ ಲೋಕದ ಬೆಳ್ಳಿತಾರೆಯಾಗಿ ಬೆಳಗಿ, ಕನ್ನಡದ ಶ್ರೇಷ್ಠ ಕತೆಗಾರರಾಗಿ, ನಟರಾಗಿ, ನಾಟಕಕಾರರಾಗಿ, ಪತ್ರಕರ್ತರಾಗಿ, ಬರಹಗಾರರಾಗಿ, ಕನ್ನಡ ತುಳು ಚಿತ್ರಗಳ ನಿರ್ದೇಶಕರಾಗಿ ಸಾರಸ್ವತ ಲೋಕದಲ್ಲಿ ಮಿಂಚಿ ಮರೆಯಾದ ಹೆಮ್ಮೆಯ ಧೀಮಂತ ಸಾಹಿತಿ ವಿಶುಕುಮಾರ್ರವರ ಸ್ಮರಣಾರ್ಥ ಯುವವಾಹಿನಿಯು ಕಳೆದ 20 ವರ್ಷಗಳಿಂದ ವಿಶುಕುಮಾರ್ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ವಿಶುಕುಮಾರ್ ಕೈಯಾಡಿಸಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಈ ನಾಡಿನ ಸಾಧಕರಿಗೆ ಯಾ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
2002ನೇ ನವೆಂಬರ್ 3 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕವಿಗೋಷ್ಟಿ, ವಿಚಾರ ಗೋಷ್ಠಿ, ಸಂವಾದದೊಂದಿಗೆ ವಿಶುಕುಮಾರ್ ಸಂಸ್ಮರಣಾ ಕಾರ್ಯಕ್ರಮ ನಡೆಸಿತು. ಇದಕ್ಕೆ ಲಭಿಸಿದ ಅಭೂತ ಪೂರ್ವ ಯಶಸ್ಸಿನಿಂದಾಗಿ ಯುವವಾಹಿನಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿತು.
ವಿಶುಕುಮಾರ್ ದತ್ತಿನಿಧಿಯನ್ನು ಸ್ಥಾಪಿಸಿ 2003ನೇ ಸಾಲಿನಿಂದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಮಾಡಲು ಮುಂದಡಿ ಇಟ್ಟಿತು.
ಇದಲ್ಲದೆ ವಿಶುಕುಮಾರ್ ಬದುಕು ಸಾಹಿತ್ಯ ಸಂವಾದ ಕಾರ್ಯಕ್ರಮ, ವಿಶುಕುಮಾರ್ ಕನ್ನಡ ರಾಜ್ಯೋತ್ಸವ, ವಿಶುಕುಮಾರ್ ಕುರಿತು ಶಾಲಾ ಕಾಲೇಜು ಮಕ್ಕಳಿಗೆ ಭಾಷಣ ಸ್ಪರ್ಧೆ, ವಿಶುಕುಮಾರ್ ಅವರ ನಾಟಕ ಅಭಿನಯ ನಡೆಸುತ್ತಾ, ಮುದ್ರಣವಾಗಿದ್ದರೂ ಇಂದು ಲಭ್ಯವಿಲ್ಲದ ಅವರ ಕೃತಿಗಳಿಗೆ ಮರುಜೀವ ನೀಡುವ ಕಾರ್ಯವನ್ನು ಯುವವಾಹಿನಿ ನಡೆಸುತ್ತಾ ಬರುತ್ತಿದೆ.
2003 ನೇ ಸಾಲಿನ ಪ್ರಶಸ್ತಿಯನ್ನು
ಕಾದಂಬರಿಕಾರ ಡಾ. ನಾ. ಮೊಗಸಾಲೆಯವರಿಗೆ ನೀಡಲಾಯಿತು. 2004ನೇ ಸಾಲಿನಲ್ಲಿ ಸಣ್ಣ ಕವಿತೆಗಳಿಗಾಗಿ ಅನುಸೂಯದೇವಿ, 2005ನೇ ಸಾಲಿನಲ್ಲಿ ಕವನ ಸಂಕಲಕ್ಕಾಗಿ ಶ್ರೀನಿವಾಸ ಕಾರ್ಕಳ, 2006ನೇ ಸಾಲಿನಲ್ಲಿ ರಂಗಕರ್ಮಿ ಸದಾನಂದ ಸುವರ್ಣ, 2007ನೇ ಸಾಲಿನಲ್ಲಿ ಅಂಕಣ ಬರಹಕಾರ ಕೆ. ಆನಂದ ಗಾಣಿಗ, 2008ನೇ ಸಾಲಿನಲ್ಲಿ ಕಾದಂಬರಿ ಕ್ಷೇತ್ರದಲ್ಲಿ ಡಾ. ಪ್ರಭಾಕರ್ ನೀರುಮಾರ್ಗ, 2009ನೇ ಸಾಲಿನಲ್ಲಿ ಕಥಾಸಂಕಲನಕ್ಕಾಗಿ ಡಾ. ರಾಮಕೃಷ್ಣ ಗುಂದಿ, 2010ನೇ ಸಾಲಿನಲ್ಲಿ ಜಾನಪದ ವಿದ್ವಾಂಸ ಡಾ. ಅಮೃತ ಸೋಮೇಶ್ವರ, 2011ನೇ ಸಾಲಿನಲ್ಲಿ ಯಕ್ಷಗಾನ ವಿದ್ವಾಂಸ ಡಾ. ಕೆ.ಎಂ.ರಾಘವ ನಂಬಿಯಾರ್, 2012ನೇ ಸಾಲಿನಲ್ಲಿ ಸಾಹಿತಿ, ಪತ್ರಕರ್ತ ಪಾ.ಸಂಜೀವ ಬೋಳಾರ್, 2013ನೇ ಸಾಲಿನಲ್ಲಿ ಪತ್ರಕರ್ತ ನವೀನ್ ಚಂದ್ರ ಪಾಲ್, 2014ನೇ ಸಾಲಿನಲ್ಲಿ ಬಹುಭಾಷಾ ಸಾಹಿತಿ ಮುದ್ದುಮೂಡು ಬೆಳ್ಳೆ, 2015ನೇ ಸಾಲಿನಲ್ಲಿ ಹಿರಿಯ ಸಾಹಿತಿ ಬೊಳುವಾರ್ ಮಹಮ್ಮದ್ ಕುಂಞ, 2016ನೇ ಸಾಲಿನಲ್ಲಿ ಸಾಹಿತಿ, ಸಂಘಟಕಿ ಜಾನಕಿ ಬ್ರಹ್ಮಾವರ್, 2017ನೇ ಸಾಲಿನಲ್ಲಿ ಸಮಗ್ರ ಸಾಹಿತ್ಯದ ಸಾಧಕಿ ಬಿ.ಎಮ್ ರೋಹಿಣಿ, 2018ನೇ ಸಾಲಿನಲ್ಲಿ ರಂಗಭೂಮಿ ಸಾಧಕ ವಸಂತ್ ವಿ. ಅಮೀನ್, 2021ನೇ ಸಾಲಿನಲ್ಲಿ ಜಾನಪದ ಸಂಶೋಧಕ ಡಾ.ತುಕರಾಮ ಪೂಜಾರಿ, 2022ನೇ ಸಾಲಿನಲ್ಲಿ ಸಾಹಿತಿ ಡಾ.ಬಿ.ಜನಾರ್ದನ ಭಟ್ ಇವರುಗಳಿಗೆ ವಿಶುಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
2023ನೇ ಸಾಲಿನಲ್ಲಿ ಚಲನಚಿತ್ರ ಕ್ಷೇತ್ರದ ಸಾಧಕ ಡಾ. ಪುನೀತ್ ರಾಜ್ಕುಮಾರ್ ಇವರಿಗೆ ಮರಣೋತ್ತರವಾಗಿ ವಿಶುಕುಮಾರ್ ಪ್ರಶಸ್ತಿ ನೀಡಲಾಗಿದೆ.
2024ನೇ ಸಾಲಿನ ವಿಶುಕುಮಾರ್ ಪ್ರಶಸ್ತಿಗೆ ಸಾಹಿತಿ ಸಂಶೋಧಕ, ಪತ್ರಿಕೋದ್ಯಮಿ ಬಾಬು ಶಿವಪೂಜಾರಿ ಆಯ್ಕೆಯಾಗಿದ್ದಾರೆ.
2009ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪುರಸ್ಕೃತ ಡಾ.ಪ್ರಭಾಕರ ನೀರುಮಾರ್ಗ ಇವರ ಆಶಯದಂತೆ, ಉದಯೋನ್ಮುಖ, ಯುವ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2009ನೇ ಸಾಲಿನಿಂದ ಯುವವಾಹಿನಿ ಯುವಸಾಹಿತಿ ಪ್ರಶಸ್ತಿ ಆರಂಭಿಸಲಾಯಿತು.
2024ನೇ ಸಾಲಿನ ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವಸಾಹಿತಿ ಪ್ರಶಸ್ತಿಗೆ ಉದಯೋನ್ಮುಖ ಬರಹಗಾರ್ತಿ ರಾಜಶ್ರೀ ಜೆ. ಪೂಜಾರಿ ಆಯ್ಕೆಯಾಗಿದ್ದಾರೆ.
ಇದೇ ಬರುವ ನವೆಂಬರ್ 10ನೇ ಆದಿತ್ಯವಾರದಂದು ಮಂಗಳೂರಿನ ಉರ್ವಸ್ಟೋರ್ನಲ್ಲಿರುವ ತುಳುಭವನದ “ಅಮೃತ ಸೋಮೇಶ್ವರ ಸಭಾಂಗಣ”ದಲ್ಲಿ ಬೆಳಗ್ಗೆ ಗಂಟೆ 9.30ರಿಂದ ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಮಿತಿಯ ಸಹಯೋಗದೊಂದಿಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಹಿರಿಯ ಸಾಹಿತಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಡಾ. ಎಂ. ವೀರಪ್ಪ ಮೊಯಿಲಿಯವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಪಿ.ಎಲ್. ಧರ್ಮ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಮೂಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ ಎ. ಕೋಟ್ಯಾನ್, ಗುರುಬೆಳದಿಂಗಳು ಫೌಂಡೇಶನ್ (ರಿ), ಕುದ್ರೋಳಿ ಇದರ ಅಧ್ಯಕ್ಷರಾದ ಪದ್ಮರಾಜ್ ಆರ್. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ., ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಡಿ.ಕೆ.. ವಿಶುಕುಮಾರ್ ದತ್ತಿನಿಧಿ ಸಂಚಾಲಕರಾದ ಸುರೇಶ್ ಪೂಜಾರಿ, ಜೊತೆ ಕಾರ್ಯದರ್ಶಿ ರಾಜೇಂದ್ರ ಚಿಲಿಂಬಿ, ಸಲಹೆಗಾರರಾದ ಟಿ.ಶಂಕರ್ ಸುವರ್ಣ, ಸಾಧು ಪೂಜಾರಿ, ಪ್ರಚಾರ ನಿರ್ದೇಶಕರಾದ ಪ್ರಥ್ವಿರಾಜ್, ಪಣಂಬೂರು ಘಟಕದ ಮಾಜಿ ಅಧ್ಯಕ್ಷರಾದ ಸಂಜೀವ ಸುವರ್ಣ, ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು : 2021ರಲ್ಲಿ ನಗರವನ್ನೇ ಬೆಚ್ಚಿ ಬೀಳಿಸಿದ್ದು ಮಾತ್ರವಲ್ಲದೆ ಜನರು ತಲೆತಗ್ಗಿಸುವಂತೆ ಮಾಡಿದ್ದ ಉಳಾಯಿಬೆಟ್ಟು ಪರಾರಿಯ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ 8 ವರ್ಷ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣದ 3 ಮಂದಿ ಆರೋಪಿಗಳಿಗೆ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

ಆರೋಪಿಗಳನ್ನು ಜಯಸಿಂಗ್, ಮುಕೇಶ್ ಸಿಂಗ್, ಮನೀಶ್ ತಿರ್ಕಿ ಎಂದು ಗುರುತಿಸಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜಾರವರು ಕೈಗೊಂಡು ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದಾರೆ. ಮೃತ ಬಾಲಕಿಯ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವಂತೆ ಹಾಗೂ ಜೀವಾವಧಿ ಶಿಕ್ಷೆ ನೀಡಿ ನ್ಯಾಯಾಧೀಶ ಮಾನು ಅವರು ಆದೇಶಿಸಿದ್ದಾರೆ.
2021 ನ.21ರಂದು ಮಧ್ಯಾಹ್ನ ಊಟ ಮುಗಿಸಿ ಆಟವಾಡಲು ಒಡಹುಟ್ಟಿದವರ ಜತೆ ಹೊರಗೆ ಹೋದ ಬಾಲಕಿ ಉಳಿದ ಮೂವರು ವಾಪಸ್ ಬಂದರೂ ಬಾಲಕಿ ವಾಪಸ್ ಬಂದಿರಲಿಲ್ಲ. ಪೋಷಕರು ಹುಡುಕಾಡಿದಾಗ ಬಾಲಕಿ ಸಂಜೆ 6 ಗಂಟೆ ಸುಮಾರಿಗೆ ಕಾರ್ಖಾನೆಯೊಳಗಿನ ಚರಂಡಿಗೆ ಬಿದ್ದಿರುವುದು ಕಂಡು ಬಂದಿದೆ. ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಪರಾಧದ ಗಂಭೀರತೆಯ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ನಾಲ್ಕು ತಂಡಗಳನ್ನು ರಚಿಸಿ. ತಂಡಗಳು ಸಿಸಿಟಿವಿ ದೃಶ್ಯಾವಳಿಗಳು, ಸಾಕ್ಷ್ಯಗಳು, ಪ್ರತ್ಯಕ್ಷದರ್ಶಿಗಳು, ಇತ್ಯಾದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಪನ್ನಾ ಜಿಲ್ಲೆಯ 21 ವರ್ಷದ ಯುವಕ, ಅದೇ ಸ್ಥಳದ 20 ವರ್ಷದ ಮತ್ತೊಬ್ಬ ಯುವಕ, ಜಾರ್ಖಂಡ್ನ ರಾಂಚಿ ಜಿಲ್ಲೆಯ 33 ವರ್ಷದ ವ್ಯಕ್ತಿ ಮತ್ತು ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ನಿವಾಸಿ 20 ವರ್ಷದ ಯುವಕ. ಇವರಲ್ಲಿ ಮೂವರು ಕಾರ್ಖಾನೆಯಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬರು ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದು, ಮೇಲಿನ ನಾಲ್ವರಲ್ಲಿ ಒಬ್ಬರನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದರು.
ಇಬ್ಬರು ಆರೋಪಿಗಳು ಹಲವು ಬಾರಿ ಬಾಲಕಿಯನ್ನು ತಮ್ಮ ಕೋಣೆಗೆ ಕರೆಸಿಕೊಂಡು ಆಕೆಗೆ ಚಾಕೊಲೇಟ್ ಇತ್ಯಾದಿಗಳನ್ನು ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದರು. 2021 ನವೆಂಬರ್ 21 ರಂದು ಮಧ್ಯಾಹ್ನ ಬಾಲಕಿ ಆಟವಾಡಲು ಹೋದಾಗ, ಆರೋಪಿಗಳು ಬಾಲಕಿಯ ಬಾಯಿಯನ್ನು ಬಿಗಿಯಾಗಿ ಹಿಡಿದುಕೊಂಡು ಬಲವಂತವಾಗಿ ಕೋಣೆಗೆ ಕರೆದೊಯ್ದ ನಂತರ ಸರದಿಯಲ್ಲಿ ಅತ್ಯಾಚಾರ ಎಸಗಿದ್ದಾರೆ. ರಕ್ತಸ್ರಾವ ಮತ್ತು ನೋವಿನಿಂದ ಬಾಲಕಿ ಜೋರಾಗಿ ಅಳುತ್ತಿದ್ದಾಗ, ಒಬ್ಬ ವ್ಯಕ್ತಿ ಅವಳನ್ನು ಕೊಚ್ಚಿ ಸಾಯಿಸಿಬಿಟ್ಟಿದ್ದನು. ನಂತರ ದೇಹವನ್ನು ಚರಂಡಿಗೆ ಎಸೆದು ದುಷ್ಕೃತ್ಯ ಎಸಗಿದ್ದರು.
ಫಳ್ನೀರ್ ವಾಸ್ ಲೇನ್ ರೋಗ ಉತ್ಪತ್ತಿ ತಾಣ, ಸ್ಥಳೀಯರಿಂದ ಪಾಲಿಕೆಯೆದುರು ಪ್ರತಿಭಟನೆಯ ಎಚ್ಚರಿಕೆ
ಮಂಗಳೂರು : ಫಳ್ನೀರ್ ವಾಸ್ ಲೇನ್ ಪರಿಸರ ನಿವಾಸಿಗಳು ಮನಪಾಗೆ ಅತ್ಯಧಿಕ ತೆರಿಗೆ ಪಾವತಿಸಿದರೂ ಮನಪಾ ನಿರ್ಲಕ್ಷ್ಯದಿಂದಾಗಿ ಸೊಳ್ಳೆ ಮತ್ತು ರೋಗ ಉತ್ಪತ್ತಿ ಕೇಂದ್ರ ಆಗಿದ್ದು ಇಲ್ಲಿನ ಜನರ ವಾಸಿಸಲೂ ಕಷ್ಟಪಡುತ್ತಿದ್ದಾರೆ. ತಕ್ಷಣ ಸಮಸ್ಯೆ ಬಗೆಹರಿಸದಿದ್ದಲ್ಲಿ ಮನಪಾ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಇಲ್ಲಿನ ಸಮಸ್ಯೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಮ್ಮದ್ ಅಫ್ತಾರ್ ಹುಸೈನ್, ಈ ಭಾಗದಲ್ಲಿ ಕಳೆದ ಐದು ವರ್ಷಗಳ ಹಿಂದೆ ಒಳಚರಂಡಿಯ ಹೂಳು ತೆಗೆದು ರಸ್ತೆ ಬದಿ ಹಾಕಲಾಗಿದ್ದು ಇನ್ನೂ ತೆರವುಗೊಳಿಸಿಲ್ಲ. ಒಂದೆಡೆ ಕಂಕನಾಡಿ ಮಾರ್ಕೆಟ್ನ ತ್ಯಾಜ್ಯ ನೀರು, ಇನ್ನೊಂದೆಡೆ ಸ್ಥಳೀಯ ಪ್ಲಾಟ್ಗಳ ತ್ಯಾಜ್ಯ ನೀರು ಇಲ್ಲಿನ ಚರಂಡಿಯಲ್ಲಿ ಹರಿದು ಬರುವ ಕಾರಣ ದುರ್ನಾತ ಮತ್ತು ಸೊಳ್ಳೆ ಕಾಟದಿಂದಾಗಿ ಪರಿಸರದ ನಿವಾಸಿಗಳ ನಿದ್ದೆಗೆಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಬ್ದುಲ್ ಖಾದರ್ ಖೈಝರ್ ಮಾತನಾಡಿ, ನಾವು ಅತ್ಯಧಿಕ ತೆರಿಗೆ ಪಾವತಿಸಿದರೂ ಹೆಚ್ಚಿನ ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿನ ಆಸ್ಪತ್ರೆ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಳೆ ನೀರು ಹರಿಯಬೇಕಾದ ಚರಂಡಿಯಲ್ಲಿ ಅಪಾರ್ಟ್ಮೆಂಟ್ಗಳ ಕೊಳಚೆ ನೀರು ಹರಿದು ಬರುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ವಾಸಿಸುವುದೇ ಕಷ್ಟ ಎನಿಸಿದೆ. ಸ್ಥಳೀಯ ಜನಪ್ರತಿನಿಧಿಗೆ ಹೇಳಿದರೂ ಯಾವುದೇ ಪ್ರಯೋಜನ ಆಗಿಲ್ಲ. ಐದು ವರ್ಷಗಳಿಂದ ಸಮಸ್ಯೆ ಇದ್ದು ರಸ್ತೆ ಕಾಮಗಾರಿ ಅರ್ಧದಲ್ಲಿ ನಿಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ. ವಸಂತ ಶೆಟ್ಟಿ ಮಾತನಾಡಿ, ಈ ಭಾಗದಲ್ಲಿ ಸ್ಮಾರ್ಟ್ ಸಿಟಿ ರಸ್ತೆ ಯೋಜನೆಯಡಿ ಮಾಡಿರುವ ರಸ್ತೆ ಅಭಿವೃದ್ಧಿ ವಾಹನಗಳ ನಿಲುಗಡೆಗಾಗಿಯೇ ಮಾಡಿದಂತಿದೆ. ತುರ್ತು ಪರಿಸ್ಥಿತಿಯಲ್ಲಿ ಆ್ಯಂಬುಲೆನ್ಸ್ ಸಂಚರಿಸಲೂ ಪರದಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಸೊಳ್ಳೆ ಕಾಟ, ದುರ್ವಾಸನೆಗೆ ನಾವು ಕಂಗೆಟ್ಡಿದ್ದು ಸ್ಥಳೀಯ ಜನಪ್ರತಿನಿಧಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಆರೋಪಿಸಿದರು.
ಅರಣ್ಯ ಇಲಾಖೆಯ ಅಧಿಕಾರಿ ಶಾಹನವಾಝ್, ಮಹಮ್ಮದ್ ಕುಂಞಿ, ಡೈಡನ್ ಡಿಸೋಜ ಇನ್ನಿತರರು ಉಪಸ್ಥಿತರಿದ್ದರು.
ಮಂಗಳೂರು : ಲಕ್ಷ್ಮಿ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಇದರ ಅಂಗಸಂಸ್ಥೆಯಾದ ಎಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್ ಇದರ ಸಹಯೋಗದೊಂದಿಗೆ ನ.7ರಿಂದ 9ರವರೆಗೆ ನಡೆಯಲಿರುವ ಭಾರತೀಯ ಜೈವಿಕ ವೈದ್ಯಕೀಯ ವಿಜ್ಞಾನಿಗಳ ಸಂಘದ 45ನೇ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭ ಎಜೆ ಮೆಡಿಕಲ್ ಕಾಲೇಜಿನ ಆಡಿಟೋರಿಯಂನಲ್ಲಿ ಗುರುವಾರ ಜರುಗಿತು.

ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮಾಜಿ ಹಿರಿಯ ಸಲಹೆಗಾರ ಡಾ.ಟಿ.ಎಸ್. ರಾವ್ ಅವರು, “ಜೈವಿಕ ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಬಹಳಷ್ಟು ಸವಾಲುಗಳಿವೆ. ಈ ಸವಾಲುಗಳ್ನ್ನು ಮೆಟ್ಟಿನಿಂತು ನಾವು ಕೋವಿಡ್ 19 ಸಂದರ್ಭದಲ್ಲಿ ಸಕಾಲದಲ್ಲಿ ವ್ಯಾಕ್ಸಿನ್ ತಯಾರಿ ಮಾಡುವ ಮೂಲಕ ಗೆಲುವನ್ನು ಸಾಧಿಸಿದ್ದೇವೆ. ನಾವು ಪ್ರತೀಯೊಬ್ಬರು ಇಂತಹ ಅವಕಾಶವನ್ನು ಬಳಸಿಕೊಂಡು ದೇಶ ಹೆಮ್ಮೆ ಪಡುವಂತೆ ಮಾಡಬೇಕು. ಇಂತಹ ಸಮ್ಮೇಳನ ಯಶಸ್ವಿಯಾಗಿ ನಡೆಯಲಿ“ ಎಂದು ಶುಭ ಹಾರೈಸಿದರು.
ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಇದರ ರಿಜಿಸ್ಟ್ರಾರ್ ಡಾ.ರಿಯಾಜ್ ಭಾಷಾ ಎಸ್. ಮಾತನಾಡಿ, “ಜೈವಿಕ ವೈದ್ಯಕೀಯ ಸಂಘಟನೆ ಸಮಾಜದಲ್ಲಿ ಬಹಳಷ್ಟು ಉತ್ತಮ ಕಾರ್ಯಗಳನ್ನು ಮಾಡುತ್ತ ಬಂದಿದೆ. 2020ರ ಮಾರ್ಚ್ ತಿಂಗಳಲ್ಲಿ ಕೋವಿಡ್ ಆರಂಭವಾದಾಗ ನಮಗೆ ಕೇವಲ 2 ಲ್ಯಾಬ್ಗಳು ಮಾತ್ರ ಲಭ್ಯವಿತ್ತು. ನಂತರ ಜುಲೈ 2020ರಲ್ಲಿ 100ಕ್ಕೂ ಹೆಚ್ಚು ಲ್ಯಾಬ್ಗಳನ್ನು ವ್ಯವಸ್ಥೆ ಮಾಡಲಾಯಿತು. 2000ಕ್ಕೂ ಹೆಚ್ಚು ಐಸಿಯು ಬೆಡ್ ಸಕಾಲಕ್ಕೆ ಸಿಕ್ಕಿದ್ದು ಈಗ 32000ಕ್ಕೂ ಹೆಚ್ಚು ಐಸಿಯು ಬೆಡ್ಗಳ ವ್ಯವಸ್ಥೆಯಿದೆ. ಇದು ನಮ್ಮ ವೈದ್ಯಕೀಯ ಕ್ಷೇತ್ರದ ಸಾಧನೆಯಾಗಿದೆ. ನಾವು ಮಾತಾಡುವ ವಿಷಯವನ್ನು ರೋಗಿಗಳಿಗೆ ಅರ್ಥವಾಗುವಂತೆ ಹೇಳಬೇಕು. ಇದರಿಂದ ಅವರ ಮತ್ತು ನಮ್ಮ ಮಧ್ಯೆ ಸಂವಹನ ಸಾಧ್ಯವಾಗುತ್ತದೆ. ರೋಗಿಗಳಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಅವರು ಸೂಕ್ತ ಸಮಯದಲ್ಲಿ ಸರಿಯಾದ ಔಷಧಿ ತೆಗೆದುಕೊಳ್ಳಲು ಆರೋಗ್ಯ ಕಾಪಾಡಲು ವೈದ್ಯರುಗಳು ಸಹಕರಿಸಬೇಕು” ಎಂದರು.
ಭಾರತೀಯ ಜೈವಿಕ ವೈದ್ಯಕೀಯ ಸಂಘಟನೆ ಅಧ್ಯಕ್ಷೆ ಡಾ.ಪದ್ಮಿನಿ ಇ. ಮಾತನಾಡಿ, “ಕ್ಯಾನ್ಸರ್ ಸೋಂಕಿತರು ಇಂದು ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಅವರಿಗೆ ದೀರ್ಘ ಕಾಲದ ಚಿಕಿತ್ಸೆ ಅಗತ್ಯವಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಅವರನ್ನು ಮಾನಸಿಕವಾಗಿ ತಯಾರು ಮಾಡುವ ಕೆಲಸವನ್ನು ವೈದ್ಯರು ಮಾಡಬೇಕು. ಭಾರತೀಯ ವೈದ್ಯಕೀಯ ಕ್ಷೇತದಲ್ಲಿ ಬಹಳಷ್ಟು ಸವಾಲುಗಳಿವೆ. ರೀಸರ್ಚ್ ಎಜುಕೇಷನ್ ಮತ್ತು ಸಮೂಹ ಸಂವಹನದಿಂದ ನಾವು ಪ್ರಗತಿಯನ್ನು ಪಡೆಯಲು ಸಾಧ್ಯ“ ಎಂದು ಅಭಿಪ್ರಾಯಪಟ್ಟರು.
ಎಜೆ ಆಸ್ಪತ್ರೆ ಡೀನ್ ಡಾ.ಅಶೋಕ್ ಹೆಗ್ಡೆ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಸಂಘಟನೆಯ ಕೋಶಾಧಿಕಾರಿ ಡಾ. ಜಿ. ಕುಲಂದೈವೆಲ್, ಸಂಘಟನೆ ಪ್ರಧಾನ ಕಾರ್ಯದರ್ಶಿ ಡಾ. ಹೇಮಮಾಲಿನಿ, ಡಾ. ಸುಶೀಲ್, ಡಾ. ಮಂಜುಳಾ ಶಾಂತಾರಾಮ್, ಡಾ. ಸುಭ್ರತಾ ಘೋಷ್, ಡಾ. ಗೌತಮ್ ಮತ್ತಿತರರು ಉಪಸ್ಥಿತರಿದ್ದರು.
ಶ್ರಾವಣಿ ಸ್ನೇಹ ದೇವರನ್ನು ಸ್ತುತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಮಂಜುಳಾ ಶಾಂತಾರಾಮ್ ಧನ್ಯವಾದ ಸಮರ್ಪಿಸಿದರು.
ಮಂಗಳೂರು : “ಸುಮಾರು 5 ವರ್ಷಗಳ ಹಿಂದೆ ಸ್ಥಾಪಿಸಿರುವ ಅಸ್ತ್ರ ಅನ್ನುವ ಸಂಸ್ಥೆಯು ಇಂದು ಉದ್ಯಮದ ಜೊತೆಗೆ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಅನೇಕ ಕ್ರಿಕೆಟ್, ಕಬಡ್ಡಿ ಇನ್ನಿತರ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದು ತಮ್ಮ ಸಂಸ್ಥೆಯ ಲಾಭದ ಒಂದಂಶವನ್ನು ಸಮಾಜ ಸೇವೆಗಾಗಿ ಬಳಸುತ್ತಾ ಬಂದಿದ್ದೇವೆ. ನಮ್ಮ ಸಂಸ್ಥೆಯು 5ನೇ ವರ್ಷ ಪೂರೈಸಿರುವ ಈ ದಿನಗಳಲ್ಲಿ ಸಮಾಜಕ್ಕಾಗಿ ವಿಶೇಷ ಕೆಲಸವನ್ನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕಡುಬಡವರಿಗಾಗಿ ಪ್ರಾಣಾಸ್ತ್ರ ಎಂಬ ಟ್ರಸ್ಟ್ ಮೂಲಕ ಈ ಸಂಸ್ಥೆ ಸಹಕರಿಸಲಿದೆ, ಇದರ ಜೊತೆಗೆ ಟ್ರಸ್ಟ್ ಹೆಸರಿನಲ್ಲಿ ನ.14ರಂದು ಉಚಿತ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದೇವೆ“ ಎಂದು ಸಂಸ್ಥೆಯ ಸಿಇಒ ಲಂಚುಲಾಲ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
“ಇದೇ ಸಂದರ್ಭದಲ್ಲಿ ಸೌಹಾರ್ದಯುತವಾಗಿ ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮದ ಮೂರು ಬಡ ಕುಟುಂಬದ ಜೋಡಿಗೆ ಸಾಮೂಹಿಕ ಮದುವೆಯನ್ನು ಮಾಡಲು ನಿರ್ಧರಿಸಲಾಗಿದೆ. ಕಡುಬಡವರ ಮದುವೆಯ ಸಂಪೂರ್ಣ ಖರ್ಚು ಜೊತೆಗೆ ಜೀವನ ನಿರ್ವಹಣೆಗೆ 50000 ರೂ. ಕೊಡಲಾಗುವುದು, ಹಿಂದೂ ಜೋಡಿ ಮುಂದೆ ಬಂದಿದ್ದು ಮುಸ್ಲಿಂ, ಕ್ರೈಸ್ತ ಜೋಡಿ ಅವರಾಗಿಯೇ ಮುಂದೆ ಬಂದಲ್ಲಿ ಖುಷಿಯ ವಿಚಾರ. ಬಡವರ ಹಿತಕ್ಕಾಗಿ ಸಮಾಜ ಸೇವೆಗಾಗಿ ಮಹತ್ತರ ಕಾರ್ಯದಲ್ಲಿ ನಮ್ಮ ಸಂಸ್ಥೆಯು ತೊಡಗಿಕೊಂಡಿದ್ದು ಇದಕ್ಕೆ ಜನರು ಸಹಕಾರ ನೀಡಬೇಕು“ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಕಾಶ್ ಶೆಟ್ಟಿ ಧರ್ಮನಗರ, ಯತೀಶ್ ಪೂಜಾರಿ, ಚರಣ್ ರಾಜ್ ಬಂದ್ಯೋಡು ಮತ್ತಿತರರು ಉಪಸ್ಥಿತರಿದ್ದರು
ಕಾರ್ಕಳ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅತಿಥಿ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಈದು ಗ್ರಾಮದಲ್ಲಿ ಸಂಭವಿಸಿದೆ.
ಮೃತ ಮಹಿಳೆ ಮೂಡಬಿದ್ರೆ ಮೂಲದ ಈದು ಗ್ರಾಮದ ನಿವಾಸಿ ರಾಜೇಶ್ ಅವರ ಪತ್ನಿ ಪ್ರಸನ್ನಾ(29) ಎಂದು ಗುರುತಿಸಲಾಗಿದೆ.
ಇವರು ಹೊಸ್ಮಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಇವರಿಗೆ 10 ತಿಂಗಳ ಹೆಣ್ಣು ಮಗುವಿದ್ದು, ರಾಜೇಶ್ ಅವರು ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು.
ಕಷ್ಟಪಟ್ಟು ಓದಿದ್ದರೂ ಬೇಗನೇ ಮಗು ಆಗಿರುವ ಕಾರಣದಿಂದ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂದು ಪ್ರಸನ್ನಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮನೆಯ ಡೈನಿಂಗ್ ಹಾಲ್ನಿಂದ ಮಹಡಿಗೆ ಹೋಗುವ ಮೆಟ್ಟಿಲಿನ ಸ್ಟೀಲ್ ರಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ಸರ್ವಿಸ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ಒಂದರಲ್ಲಿ ಕಳ್ಳನೊಬ್ಬ ಕಂಡಕ್ಟರ್ ಪರ್ಸ್ನಿಂದ ಕಲೆಕ್ಷನ್ ಹಣವನ್ನ ಕದ್ದು ಪರಾರಿಯಾದ ಘಟನೆ ನಡೆದಿದೆ.
ಬಸ್ನಲ್ಲಿ ಪ್ರಯಾಣಿಕರು ಯಾರು ಇಲ್ಲದ ಸಂದರ್ಭದಲ್ಲಿ ಬಸ್ ಡ್ರೈವರ್ ಕಂಡಕ್ಟರ್ ಶೌಚಾಲಯಕ್ಕೆ ಹೋದ ಸಂದರ್ಭ ಕಳ್ಳತನ ನಡೆದಿದೆ. ಕಳ್ಳ ಬಸ್ಸಿನ ಒಳಗೆ ಬಂದು ಹಣ ಕದಿಯುವ ದೃಶ್ಯ ಬಸ್ ಒಳಗೆ ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು , ಹಣ ಎಗರಿಸುವ ತರಾತುರಿಯಲ್ಲಿ ಸಿಸಿಟಿವಿ ಇರುವದನ್ನೇ ಗಮನಿಸಿಲ್ಲ ಎಂದು ತಿಳಿದು ಬಂದಿದೆ.