ಮಂಗಳೂರು : ರಾಜ್ಯದಲ್ಲಿ ಅಗತ್ಯ ವಸ್ತುಗಳ ದರ ಏರಿಕೆಯ ಬಿಸಿಯಿಂದ ಜನಸಾಮಾನ್ಯರು ಕಂಗಾಲಾಗುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಮಾತ್ರ ತನ್ನ ಪಾಡಿಗೆ ತಾನು ಜನರನ್ನು ದೋಚುವುದರಲ್ಲಿ ನಿರತವಾಗಿದ್ದು ಅದರ ಮುಂದುವರಿದ ಭಾಗವಾಗಿ ಸರ್ಕಾರ ಈಗ ಹಾಲಿಗೆ ಏಕಾಏಕಿ 2 ರೂ ಏರಿಸಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಣ್ಣಿಗೆ ಕಂಡದ್ದೆಲ್ಲದರ ಬೆಲೆ ಏರಿಸುವುದರಲ್ಲಿ ಹಠಕ್ಕೆ ಬಿದ್ದಿರುವಂತೆ ವರ್ತಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅತ್ತ ರೈತರ ಬದುಕಿಗೂ ಉಪಕಾರಿಯಾಗಿಲ್ಲ, ಬಡವರ ಬದುಕಿಗೂ ನೆಮ್ಮದಿಯಿಲ್ಲ. ಒಂದೆಡೆ ಹಾಲು ಉತ್ಪಾದಕರಿಗೆ ಬಾಕಿ ಉಳಿಸಿರುವ ಸಬ್ಸಿಡಿ ಹಣ ನೀಡದೆ ಸತಾಯಿಸುವುದು, ಇನ್ನೊಂದೆಡೆ ಗ್ರಾಹಕರಿಗೆ ಹಾಲಿನ ಬೆಲೆಯೇರಿಕೆ ಬಿಸಿ ಮುಟ್ಟಿಸುವುದು. ಇದು ರೈತ ವಿರೋಧಿ ಸರ್ಕಾರವೂ ಹೌದು. ಬಡ ಜನರ ವಿರೋಧಿ ಸರ್ಕಾರವೂ ಹೌದು. ಮಾನ್ಯ ಮುಖ್ಯಮಂತ್ರಿಗಳಂತೂ ರಾಜ್ಯದ ಜನತೆಗೆ ಉತ್ತರಿಸಲಾಗದೇ, ಹಾಲಿನ ದರ ಏರಿಕೆಯ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಮಾಧ್ಯಮಗಳಲ್ಲಿ ನುಣುಚಿಕೊಳ್ಳಲು ಯತ್ನಿಸಿದ್ದಂತೂ ಅತ್ಯಂತ ಹಾಸ್ಯಾಸ್ಪದ. ಕೊನೆಪಕ್ಷ ಇನ್ನಾದರೂ ಈ ಕೃತಕ ಬೆಲೆ ಏರಿಕೆಗೆ ನಿಯಂತ್ರಣ ಹೇರಿ ಜನಸಾಮಾನ್ಯರು ನೆಮ್ಮದಿಯಿಂದ ಇರಲು ಬಿಡಿ ಎಂದು ಆಗ್ರಹಿಸಿದರು.
			        


			        
                        
                        
                        
                        
                        
                        




