ಉಡುಪಿ : ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ ಜಾರಿಯಲ್ಲಿದ್ದು ಅದರ ಪ್ರಕಾರ ಕುರ್ಬಾನಿಗೆ (ಯಾವುದೇ ರೀತಿಯ ಹತ್ಯೆ) ನಿಷೇಧವಿದೆ. ಹಾಗೂ ಕುರ್ಬಾನಿಗೆ ಜಾನುವಾರು ಸಾಗಾಟವೂ ಶಿಕ್ಷಾರ್ಹ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಬಕ್ರೀದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ, ಗೋ ಕಳ್ಳತನ ಮತ್ತು ಹತ್ಯೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟದ ಕೆಲವು ಪ್ರಕರಣಗಳು ಕಂಡು ಬರುತ್ತಿದ್ದು ಇದನ್ನು ಗಮನಿಸಿ ವಿಶ್ವ ಹಿಂದು ಪರಿಷದ್ ಬಜರಂಗದಳ ಈಗಾಗಲೇ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದು ಜಿಲ್ಲೆಯ ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ಅಕ್ರಮ ಗೋ ಸಾಗಾಟ ಕಳ್ಳತನ ಮತ್ತು ಗೋ ಹತ್ಯೆ ನಡೆಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದು ಪರಿಷದ್ ಆಗ್ರಹಿಸುತ್ತದೆ ಎಂದು ವಿಶ್ವ ಹಿಂದು ಪರಿಷದ್ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Crime
ಕಾಪು : ತಂದೆಯ ನಿಧನದಿಂದ ಮನನೊಂದ ಮಹಿಳೆಯೊಬ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ತಾಲೂಕಿನ ಮಲ್ಲಾರು ಎಂಬಲ್ಲಿ ಸಂಭವಿಸಿದೆ. ಮಲ್ಲಾರು ಚುಕ್ಕು ತೋಟ ನಿವಾಸಿ ಮೋಸಿನಾ (34) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ತಂದೆಯ ನಿಧನ ನಂತರ ಮೋಸಿನಾ ಖಿನ್ನತೆಗೊಳಗಾಗಿದ್ದರು. ಮೃತ ಮೋಸಿನಾಗೆ 7 ವರ್ಷ ಮತ್ತು ಒಂದೂವರೆ ವರ್ಷದ ಇಬ್ಬರು ಮಕ್ಕಳಿದ್ದಾರೆ. ಉಡುಪಿಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಮಹಿಳೆಯ ಮೃತದೇಹವನ್ನು ಬಾವಿಯಿಂದ ಮೇಲೆತ್ತಿದ್ದಾರೆ.
ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೂರಿ ಇರಿತಕ್ಕೊಳಗಾದ ಬಿಜೆಪಿ ಕಾರ್ಯಕರ್ತರ ಆರೋಗ್ಯ ವಿಚಾರಿಸಿದ ಶಾಸಕ ಯಶ್ಪಾಲ್ ಸುವರ್ಣ
ಉಡುಪಿ : ಉಳ್ಳಾಲ ಬೋಳಿಯಾರಿನಲ್ಲಿ ಭಾರತ ಮಾತೆಗೆ ಜಯಕಾರ ಕೂಗಿದ ಕಾರಣಕ್ಕಾಗಿ ಮತಾಂಧರಿಂದ ತೀವ್ರ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರಾದ ಹರೀಶ್ ಅಂಚನ್ ಹಾಗೂ ವಿನೋದ್ರವರನ್ನು ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀ ನಂದನ್ ಮಲ್ಯ, ಬಿಜೆಪಿ ಮಂಗಳೂರು ದಕ್ಷಿಣ ಉಪಾಧ್ಯಕ್ಷರಾದ ಶ್ರೀ ಸಂದೀಪ್ ಶೆಟ್ಟಿ ಎಕ್ಕೂರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಉಡುಪಿ : ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2023ರ ಜುಲೈ ತಿಂಗಳಲ್ಲಿ ನಡೆದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೋ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯವು 20ವರ್ಷಗಳ ಕಠಿನ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ
ಬೈಂದೂರು ನಿವಾಸಿ ಮಧುಕರ ಮರಾಠಿ (24) ಶಿಕ್ಷೆಗೆ ಗುರಿಯಾದ ಆರೋಪಿ. ನೊಂದ ಬಾಲಕಿಯು ಆರೋಪಿಯ ಸಂಬಂಧಿಕಳಾಗಿದ್ದು, ತನ್ನ ಮನೆಗೆ ಬಂದ ನೊಂದ ಬಾಲಕಿಯನ್ನು ಮಧುಕರ ಮರಾಠಿ ಬೆದರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ವಿಚಾರ ಬೇರೆಯವರಲ್ಲಿ ಹೇಳಿದರೆ ನಿನ್ನ ಬಗ್ಗೆ ಅಪ್ರಚಾರ ಮಾಡುವುದಾಗಿ ಆತ ಬಾಲಕಿಗೆ ಬೆದರಿಕೆಯೊಡ್ಡಿದ್ದ.
ಅನಂತರ ಮಧುಕರ, ಯಾರು ಇಲ್ಲದ ಸಮಯ ಆಕೆಯ ಮನೆಗೆ ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ವಿಚಾರ ಯಾರಲ್ಲಿಯೂ ಹೇಳದಂತೆ ಬೆದರಿಕೆಯೊಡ್ಡಿದ್ದನು ಎಂದು ದೂರಲಾಗಿದೆ. ಅನಂತರ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಮನೆಯವರು ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಆಕೆ ಗರ್ಭವತಿಯಾಗಿರುವ ಬಗ್ಗೆ ತಿಳಿದುಬಂತು.
ಈ ಬಗ್ಗೆ ವೈದ್ಯರು ಪೊಲೀಸ್ ಠಾಣೆಗೆ ಸೂಕ್ತ ಕ್ರಮಕ್ಕಾಗಿ ಮಾಹಿತಿ ನೀಡಿದ್ದರು. ಅದರಂತೆ ವಿಚಾರ ತಿಳಿದುಕೊಂಡ ಬಾಲಕಿಯ ತಾಯಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತೃ ತೇಜ್ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಉಡುಪಿ : ಹದಿನೈದು ವರ್ಷಗಳ ಹಿಂದೆ ನಡೆದ ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣದ ಆರೋಪಿಯಾಗಿದ್ದ ಅತುಲ್ ರಾವ್ ಖುಲಾಸೆಗೊಂಡಿದ್ದಾರೆ.
ಜಿಲ್ಲಾ ಎರಡನೇ ಹೆಚ್ಚವರಿ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಅತುಲ್ ರಾವ್ ವಿರುದ್ಧ ಪ್ರಕರಣ ದಾಖಲಾಗಿತ್ತು.
2008ರ ಜೂನ್ 10ರಂದು ಪದ್ಮಪ್ರಿಯ ಕರಂಬಳ್ಳಿಯ ಮನೆಯಿಂದ ನಾಪತ್ತೆಯಾಗಿದ್ದರು. ಈ ವಿಚಾರದಲ್ಲಿ ಭಟ್ ಬಾಲ್ಯ ಸ್ನೇಹಿತ, ಅತುಲ್ ರಾವ್ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ತನಿಖೆ ನಡೆಸಿದ ಸಿಓಡಿ ಅಧಿಕಾರಿಗಳು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಉಡುಪಿ ಸಿಜೆಎಂ ನ್ಯಾಯಾಲಯವು 2023ರ ನ.10ರಂದು ಆರೋಪಿ ಅತುಲ್ಗೆ ಒಂದು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಇದರ ವಿರುದ್ಧ ಅತುಲ್ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು.
ಈ ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಹೆಗ್ಡೆ, ಆರೋಪಿ ಅತುಲ್ನನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದರು. ಆರೋಪಿ ಪರ ನ್ಯಾಯವಾದಿಗಳಾದ ಅರುಣ್ ಬಂಗೇರ ಹಾಗೂ ಸ್ಟೀವನ್ ಲೂಯಿಸ್ ವಾದ ಮಂಡಿಸಿದ್ದರು.
ಸುಳ್ಯ : ಮಹಿಳೆಯೋರ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಜೋಗಿಯಡ್ಕ ನಿವಾಸಿ ಜಯರಾಮ ನಾಯ್ಕ ಎಂದು ಗುರುತಿಸಲಾಗಿದೆ.
ಬೆಳ್ಳಾರೆಯ ಪಾಟಾಜೆಯ ನಳಿನಿ(55) ಎಂಬವರ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ರವಿವಾರ ರಾತ್ರಿ ನಡೆದಿದ್ದು, ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಳ್ಳಾರೆ ಗ್ರಾಮದ ಪಾಟಾಜೆ ನಿವಾಸಿ ಸುಂದರ ಎಂಬವರ ಪತ್ನಿ ನಳಿನಿ ಅವರು ಎರಡು ವರ್ಷಗಳ ಹಿಂದೆ ಮನೆ ಬಿಟ್ಟಿದ್ದರು. ವಾರಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದರು. ಅವರು ಬಸ್ ನಿಲ್ದಾಣ, ಮತ್ತಿತರ ಕಡೆಗಳಲ್ಲಿ ಮಲಗುತ್ತಿದ್ದರು. ಅದೇ ರೀತಿ ಮದ್ಯ ವ್ಯಸನಿಯಾಗಿದ್ದ ಆರೋಪಿ ಜಯರಾಮ ನಾಯ್ಕ ಕೂಡ ಮನೆ ಬಿಟ್ಟಿದ್ದ. ಈತನು ಕೂಡ ಬಸ್ ನಿಲ್ದಾಣ, ಮಾರುಕಟ್ಟೆಯಲ್ಲಿ ರಾತ್ರಿ ತಂಗುತ್ತಿದ್ದ. ಕೊಲೆ ನಡೆದ ದಿನ ನಳಿನಿ ಮತ್ತು ಜಯರಾಮ ಬೆಳ್ಳಾರೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ರಾತ್ರಿ ತಂಗಿದ್ದರು. ಮಧ್ಯರಾತ್ರಿ ಎದ್ದು ಹೊರಗಡೆ ಹೋಗುವಾಗ ನಳಿಸಿ ಅವರ ಕಾಲಿಗೆ ಜಯರಾಮ ತುಳಿದು ಹೋಗಿದ್ದ ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕುಡಿತದ ಅಮಲಿನಲ್ಲಿದ್ದ ಜಯರಾಮ ಕಲ್ಲನ್ನು ತಂದು ನಳಿನಿ ಅವರ ತಲೆಗೆ ಎತ್ತಿ ಹಾಕಿದ್ದು, ಗಂಭೀರವಾಗಿ ಗಾಯಗೊಂಡ ನಳಿನಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ : ಹಾಸನ ಮೂಲದ ವ್ಯಕ್ಯಿಯೋರ್ವ ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಹಾಸನ ಮೂಲದ ಬೇಲೂರು ನಿವಾಸಿ ರಿಕ್ಷಾ ಚಾಲಕ ಪ್ರಮೋದ್ ಎಂಬಾತನನ್ನು ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸಂತ್ರಸ್ತ ಮಹಿಳೆ ಕಲ್ಲಡ್ಕ ಸಮೀಪದ ಬೊಂಡಾಲ ಮೂಲದವರಾಗಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆಯ ಸ್ವಂತ ಊರು ಹಾಸನ ತಾಲೂಕಿನ ಬೇಲೂರು ಆಗಿದ್ದು, ಕಲ್ಲಡ್ಕದ ಅಮ್ಟೂರು ಎಂಬಲ್ಲಿಗೆ ಮದುವೆ ಮಾಡಿ ಕೊಡಲಾಗಿದೆ. ಮಹಿಳೆಯ ಊರು ಹಾಸನದಲ್ಲಿ ಪ್ರಮೋದ್ ರಿಕ್ಷಾ ಚಾಲಕನಾಗಿದ್ದ. ಒಂದೆರೆಡು ಬಾರಿ ತಾಯಿ ಮನೆಗೆ ಈತನ ರಿಕ್ಷಾದಲ್ಲಿ ಬಾಡಿಗೆ ಮಾಡಿಕೊಂಡು ಹೋಗಿರುವಾಗ ಸಂತ್ರಸ್ತ ಮಹಿಳೆಗೆ ಈತ ಪರಿಚಯಸ್ಥನಾಗಿದ್ದು, ಮೊಬೈಲ್ ನಂಬರ್ನ್ನು ಆತ ಪಡೆದುಕೊಂಡಿದ್ದ ಎನ್ನಲಾಗಿದೆ.
ಮೊಬೈಲ್ ಮೂಲಕ ಈತನ ಸಂಪರ್ಕ ಅತಿಯಾಗಿ ಕಳೆದ ಕೆಲ ಸಮಯದ ಹಿಂದೆ ಗಂಡನ ಮನೆ ಕಲ್ಲಡ್ಕಕ್ಕೆ ಬಂದಿದ್ದ. ಮನೆಗೆ ಬಂದ ಈತ ಮಹಿಳೆಗೆ ಕೀಟಲೆ ನೀಡಿದ್ದಲ್ಲದೇ, ಮನೆಯೊಳಗೆ ಇದ್ದ ಅನೇಕ ಬೆಲೆ ಬಾಳುವ ವಸ್ತುಗಳನ್ನು ಹಾಳು ಮಾಡಿ ಹೋಗಿದ್ದ. ಈ ಸಂದರ್ಭದಲ್ಲಿ ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು ಎಂದು ಹೇಳಲಾಗಿದೆ.
ಇದೀಗ ಮತ್ತೆ ಹಾಸನದಿಂದ ಬಂಟ್ವಾಳಕ್ಕೆ ಬಂದಿಳಿದ ಆರೋಪಿ ಪ್ರಮೋದ್ ಮತ್ತೆ ಗಂಡನಿಲ್ಲದ ಸಮಯ ನೋಡಿಕೊಂಡು ಮಹಿಳೆಯ ಮನೆಗೆ ನುಗ್ಗಿದ್ದಾನೆ. ಮಹಿಳೆಯನ್ನು ತಬ್ಬಿಹಿಡಿದು ಲೈಂಗಿಕವಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಮಹಿಳೆ ಜೋರಾಗಿ ಬೊಬ್ಬೆ ಹೊಡೆದಾಗ ಮನೆಯ ಸಮೀಪದಲ್ಲಿ ಇದ್ದ ಗಂಡ ಬಂದು ರಕ್ಷಣೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಮಹಿಳೆಗೆ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ, ಗಂಡ ಮಗುವಿನ ಜೊತೆ ಸೇರಿಸಿ ಕೊಲ್ಲುವ ಬೆದರಿಕೆ ಒಡ್ಡಿದ್ದಾನೆ ಎಂದು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ
ಇದೀಗ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಬಂಟ್ವಾಳ ನಗರ ಠಾಣಾ ಪೋಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಂಗಳೂರು: ಬೋಳಿಯಾರುವಿನಲ್ಲಿ ವಿಜಯೋತ್ಸವ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಬೈಕ್ನಲ್ಲಿ ಫಾಲೋ ಮಾಡಿ ಹಲ್ಲೆ ಮಾಡಲಾಗಿದೆ. ಮಸೀದಿಗೆ ಬಂದವರು ಡ್ಯಾಗರ್ನಿಂದ ಬಹಳ ಆಳವಾಗಿ ಚುಚ್ಚಿದ್ದಾರೆ. ಪ್ರೀ ಪ್ಲ್ಯಾನ್ ಇಲ್ಲದೆ ಮಸೀದಿಗೆ ಬಂದವರ ಕೈಯಲ್ಲಿ ಡ್ಯಾಗರ್ ಹೇಗೆ ಬಂತು. ಡ್ಯಾಗರ್ ಸ್ಪೆಷಲಿಸ್ಟ್ಗಳು ಬಳಕೆ ಮಾಡುವಂತದ್ದು. ಆದ್ದರಿಂದ ಇದೊಂದು ಪೂರ್ವನಿಯೋಜಿತ ಕೊಲೆ ಪ್ರಯತ್ನವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದ ಕೋಮಸೌಹಾರ್ದತೆ ಹಾಳು ಮಾಡ್ತಿದೆ. ಕರ್ನಾಟಕದಲ್ಲಿ ಇರುವುದು ಮುಸಲ್ಮಾನ್ ಸರ್ಕಾರ ಎಂದು ಡಿಕೆಶಿ ಹಿಂದೆ ಹೇಳಿದ್ದು ಈಗ ನಿಜ ಆಗ್ತಿದೆ. ಬೋಳಿಯಾರು ಘಟನೆಯ ಪೂರ್ತಿ ವೀಡಿಯೋ ನಾನು ನೋಡಿದ್ದೇನೆ. ಅಲ್ಲಿ ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿದ್ದು ಬಿಟ್ಟರೆ ಬೇರೆ ಏನು ಘೋಷಣೆ ಕೂಗಿಲ್ಲ. ಪಾಕಿಸ್ತಾನದ ಕುನ್ನಿಗಳು ಎಂದು ಘೋಷಣೆ ಕೂಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ. ಅವರನ್ನು ಕರೆಸಿದ್ದೇನೆ. ಅವರ ಬಳಿ ದಾಖಲೆಗಳಿದ್ದಲ್ಲಿ ಕೇಳುತ್ತೇನೆ. ಭಾರತ್ ಮಾತಾಕಿ ಜೇ ಅಂದ್ರೆ ಅವರಿಗ್ಯಾಕೆ ಸಿಟ್ಟು. ರಾಜ್ಯದಲ್ಲಿ ಭಾರತ್ ಮಾತಾಕಿ ಜೈ ಅಂದ್ರೆ ಡ್ಯಾಗರ್ ಅಲ್ಲಿ ಚುಚ್ಚಿಸಿಕೊಳ್ಳಬೇಕಾ..?. ಕಾಂಗ್ರೆಸ್ ಮನಸ್ಥಿತಿ ಈ ರೀತಿಯಿದೆ. ಇಡೀ ಕರ್ನಾಟಕವನ್ನು ಕಾಂಗ್ರೆಸ್ ತಾಲಿಬಾನ್ ಮಾಡೋಕೆ ಹೊರಟಿದೆ. ಈ ತಾಲಿಬಾನ್ ಸರ್ಕಾರವನ್ನು ನಾವು ಬಗ್ಗು ಬಡಿತೇವೆ. ಇನ್ನು ಮುಗಿತು ಅವರ ಕತೆ. ಕರ್ನಾಟಕ ಬಿಜೆಪಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.
ಇದನ್ನು ವಿಧಾನಸಭೆಯಲ್ಲಿಯೂ ಪ್ರಶ್ನಿಸುತ್ತೇವೆ. ಸ್ಪೀಕರ್ ಕ್ಷೇತ್ರದಲ್ಲೇ ಈ ಘಟನೆ ನಡೆದಿದೆ. ಆಸ್ಪತ್ರೆಗೆ ಬಂದಿದ್ದರೂ ಸಹ ಸ್ಪೀಕರ್ ಹಾಗೂ ಆರೋಗ್ಯ ಸಚಿವರು ಗಾಯಾಳುಗಳನ್ನು ನೋಡುವ ಸೌಜನ್ಯ ತೋರಿಲ್ಲ. ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ಕಾಂಗ್ರೆಸ್ ಬಂದ್ರೆ ಗೂಂಡಾಗಳಿಗೆ ಹಬ್ಬ ಎಂಬತಾಗಿದೆ. ಕರ್ನಾಟಕದಲ್ಲಿ ಜೈ ಶ್ರೀರಾಮ್, ಭಾರತ್ ಮಾತಾಕೀ ಅನ್ನೋದು ತಪ್ಪು. ಕಾನೂನಿಗೆ ಇಲ್ಲಿ ಮೂರು ಪೈಸೆ ಬೆಲೆಯಿಲ್ಲ. ಹೋಮ್ ಮಿನಿಸ್ಟರ್ ಯಾರೆಂದು ಹುಡುಕಬೇಕು. ಜಿಲ್ಲೆಗೊಬ್ಬ ಹೋಮ್ ಮಿನಿಸ್ಟರ್ ಇದ್ದಾರೆ. ಒಂದೇ ವರ್ಷದಲ್ಲಿ 40% ಕ್ರೈಂ ರೇಟ್ ಜಾಸ್ತಿಯಾಗಿದೆಎಂದು ಆರ್ ಅಶೋಕ್ ಹೇಳಿದರು.
ನಿಮ್ಮ ಮಕ್ಕಳನ್ನು ಬಂಧಿಸಿಸಲಾಗಿದೆ, ಬಿಡುಗಡೆ ಮಾಡಲು ಹಣ ಕೊಡಿ : ಪೊಲೀಸರ ಹೆಸರಿನಲ್ಲಿ ವಾಟ್ಸಪ್ ಕರೆ
ಮಂಗಳೂರು : ನಾವು ಪೊಲೀಸ್ ಅಧಿಕಾರಿಗಳು. ನಿಮ್ಮ ಮಕ್ಕಳನ್ನು ಬಂಧಿಸಲಾಗಿದೆ. ನಿಮ್ಮ ಮಕ್ಕಳನ್ನು ಬಿಡುಗಡೆ ಮಾಡಲು ಹಣ ಕೊಡಿ ಎಂದು ಪೊಲೀಸರ ಹೆಸರಿನಲ್ಲಿ ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಹೆತ್ತವರಿಗೆ ಕಳೆದೆರಡು ದಿನಗಳಿಂದ ಕರೆಗಳು ಬರುತ್ತಿದೆ.
ಹಲವು ದೂರುಗಳ ಹಿನ್ನೆಲೆಯಲ್ಲಿ ಮಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 11 ಮತ್ತು 12ರಂದು ಮಂಗಳೂರು ನಗರದ ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ಹಲವಾರು ವಿದ್ಯಾರ್ಥಿಗಳ ಪೋಷಕರಿಗೆ ಬೆದರಿಕೆ ಕರೆಗಳು ಬಂದಿವೆ. ಈ ಕರೆಗಳನ್ನು whatspps ಮೂಲಕ ಮಾಡಲಾಗಿದೆ. ಈ ಕರೆಗಳು ಹೆಚ್ಚಾಗಿ ಪೋಲೆಂಡ್ ಮತ್ತು ಪಾಕಿಸ್ತಾನದಂತಹ ವಿದೇಶಿ ಸಂಖ್ಯೆಗಳನ್ನು ಹೊಂದಿದ್ದವು.
ಕರೆ ಮಾಡಿದ ವ್ಯಕ್ತಿ ತನ್ನನ್ನು ತಾನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿದ್ದಾನೆ ಮತ್ತು ಹಿಂದಿಯಲ್ಲಿ ಮಾತನಾಡಿದ್ದಾನೆ. ಆಯಾ ಪೋಷಕರಿಗೆ ಅವರು ತಮ್ಮ ಮಗ/ಮಗಳನ್ನು ಬಂಧಿಸಿದ್ದಾರೆ ಮತ್ತು ಅವರನ್ನು ಬಿಡುಗಡೆ ಮಾಡಲು ಹಣಕ್ಕೆ ಒತ್ತಾಯಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ತಕ್ಷಣದ ಪರಿಶೀಲನೆಯಲ್ಲಿ, ಕರೆಗಳು ಎಲ್ಲಾ ನಕಲಿಯಾಗಿದೆ ಮತ್ತು ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಕಂಡುಬಂದಿದೆ. ಈ ಕರೆಗಳನ್ನು ಶಾಲಾ ಅವಧಿಯಲ್ಲಿ ಮಾಡಲಾಗಿದ್ದು, ಪೋಷಕರಿಂದ ಬೆದರಿಸಿ ಹಣ ವಸೂಲಿ ಮಾಡಲಾಗಿತ್ತು. ಈ ಬಗ್ಗೆ ಮಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ
ರಾಜ್ಯ ಸರಕಾರ ಯಾರ ಒತ್ತಡಕ್ಕೂ ಮಣಿಯುವುದಿಲ್ಲ; ರೇಣುಕಾ ಸ್ವಾಮಿ ಕುಟುಂಬದ ಜೊತೆ ಸರಕಾರ ಇದೆ; ಉಡುಪಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ
ಉಡುಪಿ : ಕಾನೂನಿನ ಚೌಕಟ್ಟಿನಲ್ಲಿ ಎಷ್ಟೇ ದೊಡ್ಡವರಿದ್ದರೂ ಕೂಡ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕಿಯೇ ಸಿಗುತ್ತದೆ. ನಮ್ಮ ಸರಕಾರಕ್ಕೆ ಯಾವ ಭಾಗದಿಂದಲೂ ಒತ್ತಡವಿಲ್ಲ. ಯಾರ ಒತ್ತಡಕ್ಕೂ ಸರಕಾರ ಮಣಿಯುವುದಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ಕಾನೂನು ಎಲ್ಲರಿಗೂ ಒಂದೇ. ಅದು ಸೆಲೆಬ್ರಿಟಿ ಆಗಿರಲಿ, ರಾಷ್ಟ್ರಪತಿ ಆಗಿರಲಿ ಅಥವಾ ಮಾರುಕಟ್ಟೆಯಲ್ಲಿ ಪಂಕ್ಚರ್ ಹಾಕುವವನಾಗಿರಲಿ, ಎಲ್ಲರಿಗೂ ಕಾನೂನು ಒಂದೇ. ಕಾನೂನಿನ ಚೌಕಟ್ಟಿನಲ್ಲಿ ಎಷ್ಟೇ ಪ್ರಸಿದ್ಧಿಯಾಗಿರಲಿ, ಎಷ್ಟೇ ದೊಡ್ಡವರು ಇದ್ದರೂ ಕೂಡ ಯಾರನ್ನೂ ಬಿಡುವ ಪ್ರಮೇಯವೇ ಇಲ್ಲ ಇದು ಸ್ಪಷ್ಟ ಎಂದರು.
ಏನೇ ಅನ್ಯಾಯ ಆಗಿದ್ದರೂ ಕೂಡ ಕಾನೂನಿನ ಪರಿಮಿತಿಯಲ್ಲಿ ಯಾವ ಶಿಕ್ಷೆಯಾಗಬೇಕೊ ಅದು ಖಂಡಿತಾ ಆಗುತ್ತೆ. ರೇಣುಕಾ ಸ್ವಾಮಿಯ ಪತ್ನಿ ಹಾಗೂ ಕುಟುಂಬದ ಜೊತೆ ಸರಕಾರ ನಿಲ್ಲುತ್ತದೆ, ಆರ್ಥಿಕವಾಗಿಯೂ ನಿಲ್ಲಲಿದೆ ಎಂದು ಹೇಳಿದರು.