ಬೊಳಿಯಾರ್ ಹಿಂದು ಕಾರ್ಯಕರ್ತರಿಗೆ ಚೂರಿ ಇರಿದ ಪ್ರಕರಣವನ್ನು ಖಂಡಿಸಿ ಜೂನ್ 18ರ ಮಂಗಳವಾರದಂದು ಮಧ್ಯಾಹ್ನ 3.30 ಕ್ಕೆ ಸರಿಯಾಗಿ ಅಸೈಗೋಳಿ ಮೈದಾನದಲ್ಲಿ ಹಿಂದು ಜನಜಾಗೃತಿ ಸಮಿತಿ ಉಳ್ಳಾಲ ತಾಲೂಕು ಇದರ ನೇತೃತ್ವದಲ್ಲಿ ಬೃಹತ್ ಜನಾಂದೋಲನ ಜನಜಾಗೃತಿ ಸಭೆ ನಡೆಯಲಿದೆ. ಹಿಂದು ಸಮಾಜ ಬೃಹತ್ ಸಂಖ್ಯೆಯಲ್ಲಿ ಅಸೈಗೊಳಿಯಲ್ಲಿ ಜಾಗೃತಿಯಾಗುವಂತೆ ಹಿಂ.ಜಾ.ವೇ.ಕರೆ ನೀಡಿದೆ.
Crime
ಸುಳ್ಯ : ಯುವಕನೋರ್ವನ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಸುಳ್ಯ ಸಮೀಪದ ಶಾಲಾ ಜಗಲಿಯಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.
ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಶಾಲಾ ಜಗಲಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವುದು ಕಂಡುಬಂದಿದೆ. ಸುಮಾರು 25 – 30 ವರ್ಷದ ಅಪರಿಚಿತ ಯುವಕನ ಶವ ಎಂದು ಅಂದಾಜಿಸಲಾಗಿದೆ. ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ, ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ರವಿವಾರ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಕೊಲೆ ನಡೆದಿತ್ತು. ಇದು ಕೂಡ ತಲೆಗೆ ಕಲ್ಲು ಎತ್ತಿ ಹಾಕಿ ಕೃತ್ಯ ಎಸಗಲಾಗಿತ್ತು. ಆರೋಪಿಯ ಬಂಧನ ನಡೆದಿತ್ತು.
ಬಂಟ್ವಾಳ : ಮನೆಗೆ ನುಗ್ಗಿ ನಗ- ನಗದು ಕಳವು ಮಾಡಿರುವ ಘಟನೆ ಮಾಣಿ ಗ್ರಾಮದ ಮಾಣಿಪಳಿಕೆ ಜಯರಾಜ್ ಅವರ ಮನೆಯಲ್ಲಿ ನಡೆದಿದೆ.
ಮನೆಯನ್ನು ಬೆಳಿಗ್ಗೆ ಜಯರಾಜ್ ಅವರ ತಮ್ಮ ಸುಜಯ್ ಭದ್ರಪಡಿಸಿ ಹೋಗಿದ್ದರು. ಜಯರಾಜ್ ಮಧ್ಯಾಹ್ನ ಮನೆಗೆ ಬಂದಾಗ, ಮನೆಯ ಹಿಂಬಾಗಿಲನ್ನು ಕಳ್ಳರು ಮುರಿದು ಒಳಪ್ರವೇಶಿಸಿ ಮನೆಯ ಕಪಾಟನ್ನು ತೆರೆದು ಲಾಕರನ್ನು ಮುರಿದು, 12 ಗ್ರಾಂ ತೂಕದ (ಅಂದಾಜು ಮೌಲ್ಯ 78000/-) ಚಿನ್ನದ ಚೈನ್ ಮತ್ತು ಜಯರಾಜ್ ಅವರ ತಾಯಿಯ ಒಟ್ಟು 4 ಗ್ರಾಂ ತೂಕದ ಕಿವಿಯ ಆಭರಣ (ಅಂದಾಜು ಅಂದಾಜು ಮೌಲ್ಯ ಸುಮಾರು 26,000/- ರೂ.) ಹಾಗೂ ಪಾಸ್ ಪೋರ್ಟ್ ಹಾಗೂ 15000/- ನಗದನ್ನು ಕಳವು ಮಾಡಿದ್ದಾರೆ.
ಜಯರಾಜ್ ಅವರ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ನರಹರಿ ಪರ್ವತದ ಬಳಿ ಚರಂಡಿಯಲ್ಲಿ ಮಾಂಸಕ್ಕಾಗಿ ಉಪಯೋಗಿಸಿದ ಪ್ರಾಣಿಯ ಅವಶೇಷಗಳು ಪತ್ತೆ
ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರ್ ಕಲ್ಲಡ್ಕ ರಸ್ತೆಯ ಮಧ್ಯೆ ನರಹರಿ ಪರ್ವತದ ಬಳಿ ಚರಂಡಿಯಲ್ಲಿ ಮಾಂಸಕ್ಕಾಗಿ ಉಪಯೋಗಿಸಿದ ಪ್ರಾಣಿಯ ಅವಶೇಷಗಳು ಪತ್ತೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಹಲವಾರು ಅನುಮಾನಗಳು ಸೃಷ್ಟಿಯಾಗಿದ್ದು, ಪೋಲೀಸ್ ಇಲಾಖೆ ತನಿಖೆಗೆ ಮುಂದಾಗಿದೆ.
ಈಗಾಗಲೇ ಬಂಟ್ವಾಳ ನಗರ ಪೋಲೀಸ್ ಇನ್ಸ್ಪೆಕ್ಟರ್ ಆನಂತಪದ್ಮನಾಭ ಮತ್ತು ಎಸ್.ಐ. ರಾಮಕೃಷ್ಣ ಅವರು ಸ್ಥಳಕ್ಕೆ ಧಾವಿಸಿದ್ದು, ಮೇಲ್ನೋಟಕ್ಕೆ ಇದು ಕೋಳಿ ಹಾಗೂ ಕುರಿ, ಆಡುಗಳ ಅವಶೇಷಗಳಂತೆ ಕಾಣುತ್ತಿದ್ದು, ಪ್ರಸ್ತುತ ಗೋಹತ್ಯೆಯ ಆರೋಪಗಳು ಕೂಡ ಇರುವುದರಿಂದ ಪಶುಸಂಗೋಪನೆ ಇಲಾಖೆಯ ವೈದ್ಯರ ಮೂಲಕ ಅವಶೇಷಗಳ ಪರೀಕ್ಷೆ ನಡೆಸಿ, ಯಾವ ಪ್ರಾಣಿ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಪೋಲೀಸರು ಸಿದ್ದತೆ ನಡೆಸಿದ್ದಾರೆ.
ಈ ಕುರಿತು ಬಂಟ್ವಾಳ ಶಾಸಕರಿಗೆ ಸ್ಥಳೀಯ ಬಿಜೆಪಿ ಪ್ರಮುಖರೋರ್ವರು ಮಾಹಿತಿ ನೀಡಿದ್ದು ಶಾಸಕರು ಪೋಲೀಸ್ ಇಲಾಖೆಯನ್ನು ಸಂಪರ್ಕಿಸಿ, ಯಾವ ಪ್ರಾಣಿ ಎಂಬುದನ್ನು ಖಚಿತ ಪಡಿಸಿಕೊಂಡು ಗೊಂದಲ ಸೃಷ್ಟಿಯಾಗದಂತೆ ಇತ್ಯರ್ಥಪಡಿಸಲು ಸೂಚಿಸಿದ್ಧಾರೆ ಎನ್ನಲಾಗಿದೆ.
ಕಮಲಶಿಲೆ ದೇವಸ್ಥಾನದಲ್ಲಿ ಗೋ ಕಳ್ಳತನಕ್ಕೆ ಯತ್ನ; ಸಿಸಿಟಿವಿ ಮಾನಿಟರಿಂಗ್ ತಂಡದ ಸಮಯ ಪ್ರಜ್ಞೆಯಿಂದ ಕಳ್ಳತನ ವಿಫಲ
ಕುಂದಾಪುರ : ಕಮಲಶಿಲೆ ದೇವಸ್ಥಾನದಲ್ಲಿ ಶನಿವಾರ ತಡರಾತ್ರಿ ಗೋ ಕಳ್ಳತನಕ್ಕೆ ಯತ್ನಿಸಿದ್ದನ್ನು ಇಲ್ಲಿನ ಸಿಸಿಟಿವಿ ತಂಡ ಸಕಾಲದಲ್ಲಿ ಎಚ್ಚರಿಸಿ ಸಂಭಾವ್ಯ ಕಳ್ಳತನವನ್ನು ವಿಫಲಗೊಳಿಸಿದೆ.
ಕಮಲಶಿಲೆ ದೇವಸ್ಥಾನದ ಗೋಶಾಲೆಯಲ್ಲಿ ರಾತ್ರಿ ಎರಡು ಗಂಟೆ ಸುಮಾರಿಗೆ ಇಬ್ಬರು ವ್ಯಕ್ತಿಗಳು ಎದುರಿನ ಬಾಗಿಲಿನ ಬೀಗ ಮುರಿದು ಬದಿಯ ಬಾಗಿಲ ಮೂಲಕ ನುಗ್ಗಿ ಮೂರು ಹಸುಗಳ ಹಗ್ಗವನ್ನು ಕತ್ತಿಯಿಂದ ಕಡಿದು ಸಾಗಾಟಕ್ಕೆ ಯತ್ನಿಸಿದ್ದರು. ದೇವಸ್ಥಾನದ ವತಿಯಿಂದ ಸೈನ್ ಇನ್ ಸೆಕ್ಯುರಿಟೀಸ್ ಸಂಸ್ಥೆಯ ಲೈವ್ ಮಾನಿಟರಿಂಗ್ ಸಿಸಿಟಿವಿ ಹಾಕಿಸಲಾಗಿದ್ದು ಈ ಸಂಸ್ಥೆ 24 ತಾಸು ಸಿಸಿಟಿವಿ ಮೇಲೆ ನೇರ ನಿಗಾ ಇಟ್ಟು ಪೊಲೀಸ್ ಇಲಾಖೆಗೆ ಇಂತಹ ಕಳ್ಳತನ, ಅನುಮಾನಾಸ್ಪದ ವ್ಯಕ್ತಿಗಳ ಓಡಾಟ, ಸಂಶಯಾಸ್ಪದ ಚಟುವಟಿಕೆಗಳ ಮಾಹಿತಿಯನ್ನು ತತ್ಕ್ಷಣ ನೀಡುತ್ತದೆ.
ಕುಂದಾಪುರದ ಅಂಕದಕಟ್ಟೆಯಲ್ಲಿರುವ ಮಾನಿಟರಿಂಗ್ ಸೆಂಟರ್ನ ಸಿಬಂದಿ ದೇವಸ್ಥಾನದ ಗೋಶಾಲೆಯಲ್ಲಿ ಜಾನುವಾರುಗಳ ಹಗ್ಗ ಕಡಿಯುತ್ತಿರುವುದನ್ನು ಕಂಡು ಬೀಟ್ ಪೊಲೀಸ್, ಎಸ್ಐ, ದೇವಾಲಯದ ಭದ್ರತಾ ವಿಭಾಗದವರಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ವಿಭಾಗದವರು ಕೂಡಲೇ ಗೋಶಾಲೆಗೆ ಹೋದಾಗ ಶಂಕಿತರು ಸ್ಥಳದಿಂದ ಪರಾರಿಯಾಗಿದ್ದಾರೆ.
ನಾಪತ್ತೆಯಾಗಿದ್ದ ಒಂದು ದನ ಸಮೀಪದಲ್ಲಿ ಹೊರಗಿದ್ದು ಉಳಿದ ಎಲ್ಲ ದನಗಳೂ ಅಲ್ಲಿಯೇ ಸುರಕ್ಷಿತವಾಗಿದ್ದವು. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಮಣಿಪಾಲ : ಗಾಂಜಾ ಸೇವನೆಗೆ ಸಂಬಂಧಿಸಿ ಹಯಗ್ರೀವ ನಗರ 5ನೇ ಕ್ರಾಸ್ ಬಳಿ ಐವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪಾಲದ ವಿದ್ಯಾರ್ಥಿಗಳಾದ ಅಶೀಲ (20), ರೆನಜೋ ಎಸ್. ಚಂದ್ರಗಿರಿ(20), ಅಭಿನವ ಸುರೇಶ್(20), ಶ್ರೀಹರಿ(19), ಅಭಿಜಿತ್(20) ಎಂಬವರನ್ನು ವಶಕ್ಕೆ ಪಡೆದ ಪೊಲೀಸರು, ಮಣಿಪಾಲ ಕೆಎಂಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು, ಆ ವರದಿಯಲ್ಲಿ ಇವರೆಲ್ಲ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಕ್ರೀದ್ ಸಂದರ್ಭ ಅನಧಿಕೃತ ಜಾನುವಾರುಗಳ ವಧೆ, ಸಾಗಾಣಿಕೆ ಮಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ – ಜಿಲ್ಲಾಧಿಕಾರಿ
ಉಡುಪಿ : ಬಕ್ರೀದ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆ ಮಾಡುವುದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಕ್ರೀದ್ ಹಬ್ಬದ ಸಂದರ್ಭ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟುವ ಕುರಿತು ಜಿಲ್ಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಟ ಕಂಡುಬಂದಲ್ಲಿ ಹತ್ತಿರದ ಪೋಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಧಿಕೃತ ಜಾನುವಾರು ಸಾಗಾಣಿಕೆ ಮಾಡಬೇಕಾದ ಸಂದರ್ಭದಲ್ಲಿ ಪಶುಸಂಗೋಪನ ಇಲಾಖೆ ನಿಗದಿಪಡಿಸಿದ ನಮೂನೆಯಲ್ಲಿ ಅನುಮತಿ ಹಾಗೂ ಪೋಲಿಸ್ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.
ಅನಧಿಕೃತ ಸಾಗಾಣಿಕೆಯಲ್ಲಿ ವಶಪಡಿಸಿಕೊಂಡ ಜಾನುವಾರುಗಳನ್ನು ಸಂರಕ್ಷಿಸಿ, ಹತ್ತಿರದ ಗೋಶಾಲೆಗೆ ಬಿಡಲು ಸಮೀಪದ ಗೋಶಾಲೆಗಳನ್ನು ಗುರುತಿಸುವಂತೆ ಹಾಗೂ ವಶಪಡಿಸಿಕೊಂಡ ಜಾನುವಾರುಗಳಿಗೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡಲು ಪಶುವೈದ್ಯಾಧಿಕಾರಿಗಳು ಸನ್ನದ್ಧರಾಗಿರಬೇಕು. ಜಾನುವಾರುಗಳಿಗೆ ಅಗತ್ಯವಿರುವ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳೂರು ಪೊಲೀಸ್ ಕಮಿಷನರ್ ಪಾಕ್ ಕಮಿಷನರ್ ರೀತಿ ಏಕೆ ವರ್ತಿಸುತ್ತಿದ್ದಾರೆ – ಸಿ.ಟಿ.ರವಿ ಪ್ರಶ್ನೆ
ಮಂಗಳೂರು : ಪಾಕಿಸ್ತಾನದ ಕುನ್ನಿಗಳೆಂದರೆ ಪಾಕ್ ಕುನ್ನಿಗಳು ಪ್ರಚೋದನೆಗೆ ಒಳಗಾಗಬೇಕು. ಹಾಗಾದರೆ ಸ್ಪೀಕರ್ ಖಾದರ್ ಸಾಮ್ರಾಜ್ಯ ಉಳ್ಳಾಲದಲ್ಲಿ ಪಾಕ್ ಕುನ್ನಿಗಳು ಇನ್ನೂ ಇದ್ದಾರೆ ಅಂದಾಯ್ತು. ಆದ್ದರಿಂದ ಮಂಗಳೂರು ಪೊಲೀಸ್ ಕಮಿಷನರ್ ಪಾಕಿಸ್ತಾನದ ಕುನ್ನಿಗಳನ್ನ ಗುರುತಿಸಿ, ಅವರ ಮೇಲೆ ಕೇಸು ಹಾಕಿ ಅವರನ್ನ ಗಡೀಪಾರು ಮಾಡಲಿ. ಖಾದರ್ ಅವರೇ ಗುರುತಿಸಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಲಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.
ಮಂಗಳೂರು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಹುಟ್ಟಿದವರಿಗೆ ಮಾತ್ರ ಭಾರತ್ ಮಾತಕೀ ಜೈ ಅಂದರೆ ಪ್ರಚೋದನೆಯಾಗುತ್ತದೆ. ಪಾಕಿಸ್ತಾನಕ್ಕೆ ಬೈದಾಗ ನಮಕ್ ಹರಾಂಗಳಿಗೆ ಮಾತ್ರ ಪ್ರಚೋದನೆ ಆಗುತ್ತದೆ. ಆದರೆ ಮಂಗಳೂರಿನ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಪಾಕಿಸ್ತಾನದ ಕುನ್ನಿಗಳೇ ಎಂದಿದ್ದಕ್ಕೆ ಮಸೀದಿಯ ಎರಡೂ ಬದಿ ನಿಂತಿದ್ದವರು ಪ್ರಚೋದನೆಗೊಳಗಾಗಿ ಚೂರಿಯಿಂದ ಇರಿದಿದ್ದಾರೆ ಎಂದಿದ್ದಾರೆ. ಅನುಪಮ್ ಅಗರ್ವಾಲ್ ಏಕೆ ಪಾಕಿಸ್ತಾನದ ಕಮಿಷನರ್ ಥರ ವರ್ತಿಸುತ್ತಾರೆ. ತಾವು ಪಾಕಿಸ್ತಾನದ ಅಧಿಕಾರಿಯಲ್ಲ, ಭಾರತದ ಪೊಲೀಸ್ ಅಧಿಕಾರಿ. ಕಮಿಷನರ್ ಹೇಳಿಕೆ ಸಮರ್ಥನೀಯವಲ್ಲ, ಅದನ್ನ ವಾಪಸ್ ಪಡೆಯಲಿ ಅವರು ಕೊಟ್ಟ ದೂರಿಗೆ ತಕ್ಷಣ ಬಿ-ರಿಪೋರ್ಟ್ ಹಾಕಬೇಕು ಎಂದು ಹೇಳಿದರು.
ಇರಿತಕ್ಕೆ ಒಳಗಾದ ಹರೀಶ್, ನಂದನ್ ಕುಟುಂಬಕ್ಕೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ರಾಜಧರ್ಮದ ಬಗ್ಗೆ ಮಾತನಾಡುವ ಸ್ಪೀಕರ್ ಹಾಗೂ ಉಸ್ತುವಾರಿ ಸಚಿವರು ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ಬಂದರೂ ಗಾಯಾಳುಗಳನ್ನು ಭೇಟಿಯಾಗಿಲ್ಲ. ಗಾಯಾಳುಗಳು ಪಾಕಿಸ್ತಾನದ ಕುನ್ನಿಗಳಾಗಿದ್ದರೆ ಅವರು ಆಸ್ಪತ್ರೆಯಲ್ಲೇ ಇರುತ್ತಿದ್ದರು. ಆದರೆ ಗಾಯಾಳುಗಳು ಭಾರತಮಾತೆಯ ಸುಪುತ್ರರಾದ ಕಾರಣ ಇವರು ಆಸ್ಪತ್ರೆಗೆ ಬಂದಿಲ್ಲ ಎಂದು ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅಖಿಲ್ ಹೆಗ್ಡೆ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆದೇಶ
ಉಡುಪಿ : ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ನ್ಯಾಯವಾದಿ ಅಖಿಲ್ ಬಿ.ಹೆಗ್ಡೆ ಮಕ್ಕಳ ವಿರುದ್ಧ ಪ್ರಕರಣಗಳನ್ನು ತೆಗೆದುಕೊಳ್ಳುತ್ತಿರುವ ಕುರಿತು ಕಾನೂನು ರೀತಿಯ ಕ್ರಮಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ಸೂಚನೆ ನೀಡಿದೆ.
ಉಡುಪಿ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಅಖಿಲ್ ಬಿ.ಹೆಗ್ಡೆ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟ ಬಾಲಕಿಯ ಪ್ರಕರಣದಲ್ಲಿ ಆರೋಪಿ ವಿರುದ್ಧ ವಕಾಲತ್ತು ಸಲ್ಲಿಸಿದ್ದು, ಒಂದನೇ ಆರೋಪಿ ಪರವಾಗಿ ನ್ಯಾಯಾಲಯದಲ್ಲಿ ಜಾಮೀನು ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಮೇಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಾಲಕಿಯ ತಂದೆ ಆಯೋಗಕ್ಕೆ ಮನವಿಯನ್ನು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯು ಸಂತ್ರಸ್ತ ಮಕ್ಕಳಿಗೆ ನ್ಯಾಯ ಒದಗಿಸುವ ಪ್ರಮುಖ ಸಂಸ್ಥೆಯಾಗಿದ್ದು, ಇಂತಹ ಜವಾಬ್ದಾರಿ ಸ್ಥಾನದಲ್ಲಿದ್ದು ಕೊಂಡು ಆರೋಪಿ ಪರವಾಗಿ ವಕಾಲತ್ತು ಸಲ್ಲಿಸಿ, ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಪ್ರಕರಣಕ್ಕೆ ಹಿನ್ನಡೆ ಉಂಟಾಗುತ್ತದೆ ಎಂದು ಆಯೋಗವು ಅಭಿಪ್ರಾಯ ಪಟ್ಟಿದೆ.
ಆದುದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು ಉಡುಪಿ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಅಖಿಲ್ ಬಿ.ಹೆಗ್ಡೆ ವಿರುದ್ಧ ನಿಯಮಾನುಸಾರ ಕಾನೂನು ರೀತಿಯ ಕ್ರಮ ಕೈಗೊಂಡು ಮೂರು ದಿನಗಳ ಒಳಗಾಗಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ.
ಮಂಗಳೂರು : ಮಂಗಳೂರು ವಿಧಾನಸಭಾ ಕ್ಷೇತ್ರದ ಬೋಳಿಯಾರ್ ಗ್ರಾಮ ಸೌಹಾರ್ದಕ್ಕೆ ಮಾದರಿಯಾಗಿದ್ದು, ಅಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿಸಿ ಅಲ್ಲಿನ ಸ್ಥಳೀಯರು ಹಾಗೂ ಪೊಲೀಸರು ಪ್ರಕರಣವನ್ನು ಬಗೆಹರಿಸಲಿದ್ದಾರೆ. ಹೊರಗಿನವರು ಬಾಯಿ ಮುಚ್ಚಿ ಕೂರುವುದೇ ದೇಶ ಪ್ರೇಮ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲಿ ಕೆಲವೇ ಕೆಲವು ಯುವಕರಿಂದ ಕೆಟ್ಟ ಹೆಸರು ಬಂದಿದೆ. ಅದಕ್ಕಾಗಿ ಹೊರಗಿನವರು ಅಲ್ಲಿ ರಾಜಕೀಯ ಮಾಡಿ ಅಲ್ಲಿನ ವಾತಾವರಣವನ್ನು ಮತ್ತಷ್ಟು ಕೆಡಿಸುವ ಪ್ರಯತ್ನ ಬೇಡ ಎಂಬುದು ನನ್ನ ಮನವಿ ಎಂದರು.
ಬೋಳಿಯಾರು ವಿಚಾರದಲ್ಲಿ ರಾಜಕೀಯ ಮಾಡಿದರೆ ಯಾರಿಗೂ ಒಂದು ಮತವೂ ಹೆಚ್ಚಾಗದು. ವಿಧಾನಸಭಾ ಚುನಾವಣೆಯಲ್ಲಿ ಎರಡು ಪಕ್ಷದವರು ಸೇರಿ ನನ್ನನ್ನು ಸೋಲಿಸಲು ಪ್ರಯತ್ನಿಸಿದರೂ ಆಗಿಲ್ಲ. ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡಿ ಸಮಸ್ಯೆ ಸೃಷ್ಟಿಸುವವರು ನಿಜವಾದ ದೇಶದ್ರೋಹಿಗಳು ಎಂದು ಖಾದರ್ ಹೇಳಿದರು.
ಭಾರತ್ ಮಾತಾಕಿ ಜೈ ಎಂದು ಯಾರೂ ಹೇಳಬಹುದು. ಅದಕ್ಕೆ ಯಾರೂ ಆಕ್ಷೇಪ ಮಾಡುವುದಿಲ್ಲ. ಆದರೆ ಅಲ್ಲಿ ಏನೋ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಬಗ್ಗೆ ಯಾರಿಗೂ ಗೊತ್ತಿಲ್ಲ. ಇದನ್ನು ಪೊಲೀಸರು ಸಿಸಿಟಿವಿ ಕ್ಯಾಮರಾದ ಮೂಲಕ ತನಿಖೆ ನಡೆಸುತ್ತಿದ್ದಾರೆ. ಮೆರವಣಿಗೆ ಮುಗಿದ ಬಳಿಕ ಮೂವರು ಬೈಕಿನಲ್ಲಿ ಬಂದು ಪ್ರಚೋದನಕಾರಿ ಘೋಷಣೆ ಕೂಗುವ ಉದ್ದೇಶವೇನು, ಇದು ತಪ್ಪು ಎಂದು ಹೇಳಿದ ಯು.ಟಿ.ಖಾದರ್, ಅದಕ್ಕೆ ಪ್ರತಿಯಾಗಿ ಅವರನ್ನು ಹಿಂಬಾಲಿಸಿಕೊಂಡು ಹಲ್ಲೆ ಮಾಡಿರುವ ಕೃತ್ಯವೂ ತಪ್ಪೇ. ಈ ಎರಡೂ ಘಟನೆಗಳ ಬಗ್ಗೆ ಪೊಲೀಸರು ಕಾನೂನು ಪ್ರಕಾರ ಕ್ರಮ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಅಲ್ಲಿ ಪ್ರಚೋದನಕಾರಿ ಮಾತುಗಳ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ. ಈ ಬಗ್ಗೆ ಹೊರಗಿನವರು ಬಂದು ಮಾತನಾಡುವ ಅಗತ್ಯ ಇಲ್ಲ. ಪೊಲೀಸ್ ಇಲಾಖೆಯಿಂದ ನ್ಯಾಯ ದೊರಕಿಲ್ಲ ಎಂದು ನನ್ನ ಬಳಿ ಬಂದರೆ ಈ ಬಗ್ಗೆ ಖಂಡಿತಾ ನಾನು ಪರಿಶೀಲಿಸುತ್ತೇನೆ. ನನಗೆ ಅಂತಹ ಯಾವುದೇ ದೂರು ಬಂದಿಲ್ಲ. ವಾಟ್ಸ್ ಆ್ಯಪ್ ವಾಯ್ಸ್ ಮೆಸೇಜ್ ಮೂಲಕ ಯಾರೋ ಹೇಳಿಕೊಂಡು ತಿರುಗಾಡುತ್ತಿದ್ದರೆ ಅದಕ್ಕೆ ನಾನು ಪ್ರತಿಕ್ರಿಯಿಸಲಾರೆ. ನಿರಪರಾಧಿಗಳಿಗೆ ಪೊಲೀಸರು ತೊಂದರೆ ನೀಡಬಾರದು. ಆದರೆ ಪ್ರಕರಣದಲ್ಲಿ ಭಾಗಿಯಾಗಿದ್ದವರು ತಲೆಮರೆಸಿಕೊಂಡಾಗ ವಿಚಾರಣೆಗಾಗಿ ಪೊಲೀಸರು ಕರೆದರೆ ಅದನ್ನು ದೊಡ್ಡ ವಿಚಾರ ಮಾಡಬೇಕಾಗಿಲ್ಲ ಎಂದು ಖಾದರ್ ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಧ್ವನಿ ಸಂದೇಶ ಹಾಕಿ ಜನರನ್ನು ದಾರಿತಪ್ಪಿಸುವವರ ಮೇಲೂ ಪೊಲೀಸರು ಕ್ರಮ ವಹಿಸಬೇಕು. ಇಂತಹ ಘಟನೆಗಳ ಸಂದರ್ಭ ರಾಜಕಾರಣಿಗಳು ಅಲ್ಲಿ ಭೇಟಿ ನೀಡಿದಾಗ ಮತ್ತಷ್ಟು ಗೊಂದಲಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ಭೇಟಿ ನೀಡಿಲ್ಲ. ಸಮಸ್ಯೆ ಸೃಷ್ಟಿಸಿ ಗಲಾಟೆ ಮಾಡಿಸಿದವರನ್ನು ನಾವು ನೋಡಬೇಕೇ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸ್ಪೀಕರ್ ಖಾದರ್ ಪ್ರಶ್ನಿಸಿದರು.
ಅಲ್ಲಿನ ಜನರನ್ನು ಅವರಷ್ಟಕ್ಕೆ ಬಿಡಿ. ಪೊಲೀಸರು ಹಾಗೂ ಜನರು ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ. ರಾಜಕಾರಣಿಗಳು ಇಂತಹ ವಿಚಾರಗಳಿಗೆ ತಲೆಹಾಕಬಾರದು. ನನಗೆ ನನ್ನ ಕ್ಷೇತ್ರದ ಎಲ್ಲರೂ ಆತ್ಮೀಯರೇ, ಆದರೆ ತಪ್ಪು ಮಾಡಿದವರಿಗೆ ಬೆಂಬಲ ನೀಡುವುದಿಲ್ಲ. ಈ ವಿಷಯದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ನಾನು ಆಸ್ಪತ್ರೆಗೆ ಭೇಟಿ ನೀಡುವುದು ಎಲ್ಲಾ ಮಾಡಿದರೆ, ಮತ್ತೆ ಗೊಂದಲ ಆಗುತ್ತದೆ. ನಾನೂ ಸೇರಿ ರಾಜಕೀಯದವರು ಅಲ್ಲಿಗೆ ಹೋಗಲೇಬಾರದು ಎಂದು ಯು.ಟಿ.ಖಾದರ್ ತಾಕೀತು ಮಾಡಿದರು.
ಒಳ್ಳೆಯವರಿಗೆ, ಅಗತ್ಯವುಳ್ಳವರಿಗೆ ಖಾದರ್ ಯಾವತ್ತೂ ಸಿಗುತ್ತಾರೆ
ನನ್ನನ್ನು ಕ್ಷೇತ್ರದಲ್ಲಿ ಸೋಲಿಸಲು ಪ್ರಯತ್ನಿಸಿದವರು ಬೋಳಿಯಾರ್ ಘಟನೆಗೆ ಸಂಬಂಧಿಸಿ ‘ಶಾಸಕರು ಕಾಣೆಯಾಗಿದ್ದಾರೆ’ ಎಂಬ ಸಂದೇಶ ಹರಿಬಿಟ್ಟು ಸಂತೋಷ ಪಡುತ್ತಿದ್ದಾರೆ. ನಾನು ಅವರಿಗೆ ಶುಭಾಶಯ ಹೇಳುತ್ತೇನೆ. ಅವರು ನನ್ನ ಬಳಿ ಬಂದು ನಾನೇ ಆ ಸಂದೇಶ ಹಾಕಿರುವುದಾಗಿ ಹೇಳಿದರೆ ಅವರಿಗೆ ನಗದು ಬಹುಮಾನವನ್ನೂ ನೀಡಲಿದ್ದೇನೆ. ಒಳ್ಳೆಯವರಿಗೆ, ಅಗತ್ಯವುಳ್ಳವರಿಗೆ ಖಾದರ್ ಯಾವತ್ತೂ ಸಿಗುತ್ತಾರೆ ಎಂದು ಖಾದರ್ ಹೇಳಿದರು.