ಕಾರ್ಕಳ : ಮೆಣಸಿನ ಹುಡಿ ಎರಚಿ ಹಣ ಸುಲಿಗೆ ಮಾಡಿರುವುದಾಗಿ ನಾಟಕವಾಡಿ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ ವ್ಯಕ್ತಿಯ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡಬಿದ್ರೆ ತಾಲೂಕಿನ ಕಡಂದಲೆ ನಿವಾಸಿ ವಿಶ್ವನಾಥ ಎಂಬಾತ ತಾನು ಮಾಡಿದ್ದ ಸಾಲವನ್ನು ಮರು ಪಾವತಿಸಲು ಸಾಧ್ಯವಾಗದೆ ತನ್ನ ಬಗ್ಗೆ ಅನುಕಂಪ ಉಂಟು ಮಾಡಿಕೊಳ್ಳಲು ಈ ನಾಟಕ ಆಡಿರುವುದಾಗಿ ದೂರಲಾಗಿದೆ.
ಈತ ರಾತ್ರಿ ಬೈಕಿನಲ್ಲಿ ಮಂಜರಪಲ್ಕೆಯಿಂದ ತನ್ನ ಮನೆಗೆ ಹೋಗುತ್ತಿರುವಾಗ ಬೋಳ ಗ್ರಾಮದ ಅಂಬರಾಡಿ ಎಂಬಲ್ಲಿ ತನ್ನ ಬೈಕ್‌ನ್ನು ಅಡ್ಡ ಬೀಳಿಸಿಕೊಂಡು ತನ್ನ ಮುಖಕ್ಕೆ ಮೆಣಸಿನ ಪುಡಿ ಎರಚಿಕೊಂಡಿದ್ದನು.
ಆ ವೇಳೆ ಸ್ಥಳಕ್ಕೆ ಬಂದ ಸಾರ್ವಜನಿಕರಲ್ಲಿ, ಬೈಕಿನಲ್ಲಿ ಬಂದ ಯಾರೋ ವ್ಯಕ್ತಿಗಳು ನನ್ನ ಕಣ್ಣಿಗೆ ಮೆಣಸಿನ ಪುಡಿ ಎರಚಿ ಪ್ಯಾಂಟ್ ಕಿಸೆಯಲ್ಲಿದ್ದ 70,000 ರೂ. ಹಣವನ್ನು ಸುಲಿಗೆ ಮಾಡಿರುವುದಾಗಿ ಸುಳ್ಳು ಹೇಳಿದ್ದನು.
ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಹೋದ ಪೊಲೀಸ್ ಅಧಿಕಾರಿಯವರಲ್ಲಿ ಕೂಡ ಆತ ಸುಳ್ಳು ಮಾಹಿತಿ ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ.