ಶಂಕರನಾರಾಯಣ : ವರನ ಮನೆಗೆ ಹೋಗಿ ವಾಪಾಸ್ಸು ಬರುತ್ತಿದ್ದ ಮಿನಿಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಲವು ಮಂದಿ ಗಾಯಗೊಂಡ ಘಟನೆ ಮೇ 13ರಂದು ಬೆಳಗಿನ ಜಾವ 3:30ರ ಸುಮಾರಿಗೆ ಅಲ್ಬಾಡಿಯ ಬರಿಗದ್ದೆ ನೀರ್ ಟ್ಯಾಂಕ್ ಬಳಿ ಸಂಭವಿಸಿದೆ.
ಚಿಕ್ಕಬಳ್ಳಾಪುರದ ಗಂಡಿನ ಮನೆಯಿಂದ ಮದುಮಗಳನ್ನು ಕರೆದುಕೊಂಡು ಬರಲು ತ್ರಾಸಿಯ ಹೆಣ್ಣಿನ ಮನೆಯವರು ಹೋಗಿದ್ದು, ಅಲ್ಲಿ ಕಾರ್ಯಕ್ರಮ ಮುಗಿಸಿ ಆಗುಂಬೆ ಮಾರ್ಗವಾಗಿ ತ್ರಾಸಿಗೆ ಮಿನಿ ಬಸ್‌ನಲ್ಲಿ ವಾಪಾಸ್ಸು ಹೊರಟಿದ್ದರು. ದಾರಿ ಮಧ್ಯೆ ಚಾಲಕ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಮಿನಿ ಬಸ್ ನಿಯಂತ್ರಣ ತಪ್ಪಿ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.
ಇದರ ಪರಿಣಾಮ ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಇದರಲ್ಲಿ ತೀವ್ರವಾಗಿ ಗಾಯಗೊಂಡ ಶಿವಾನಂದ, ಪುಷ್ಪಾ, ಕಾವೇರಿ, ಮಂಜು, ಶಾಂತ ಹಾಗೂ ನಿಶಾಂತ್ ಮಣಿಪಾಲದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳಿದವರು ಹೆಬ್ರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಹೊರ ರೋಗಿಯಾಗಿ ಬಿಡುಗಡೆಗೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.