ವಿಟ್ಲ : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಮನೆಗಳಲ್ಲಿ ಮನೆ ಮಂದಿಯೆಲ್ಲಾ ಶಾರದೋತ್ಸವಕ್ಕೆ ಹೋಗಿದ್ದ ಸಂದರ್ಭ ಕಳ್ಳತನ ನಡೆದಿದೆ.
ಕೆಮನಾಜೆ ನಿವಾಸಿ ಪುಷ್ಪರಾಜ್ ಮತ್ತು ಅದೇ ಪರಿಸರ ನಿವಾಸಿ ಕೃಷ್ಣಪ್ಪ ಕುಲಾಲ್(ಕುಂಞಣ್ಣ) ಮನೆಯವರೆಲ್ಲ ಅಳಕೆಮಜಲು ಭಜನಾ ಮಂದಿರದಲ್ಲಿ ನಡೆಯುವ ಶಾರದಾ ಪ್ರತಿಷ್ಠೆಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ ಮನೆಗೆ ಬಂದಾಗ ಕಳ್ಳರು ದುಷ್ಕೃತ್ಯ ನಡೆಸಿರುವುದು ತಿಳಿದುಬಂದಿದೆ.
ಪುಷ್ಪರಾಜ್ ಅವರ ಮನೆಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ 15ಪವನ್ ಚಿನ್ನಾಭರಣ ಹೊತ್ತೊಯ್ದಿದ್ದಾರೆ. ಇದೇ ಸಂದರ್ಭ ಕೃಷ್ಣಪ್ಪ ಕುಲಾಲ್ ಅವರ ಮನೆಗೂ ನುಗ್ಗಿದ್ದ ಕಳ್ಳರು ಚಿನ್ನಾಭರಣಕ್ಕಾಗಿ ಸಾಕಷ್ಟು ಜಾಲಾಡಿದ್ದು ಅದ್ಯಾವುದೂ ಸಿಗದಿದ್ದಾಗ ನಗದು 12ಸಾವಿರ ರೂಪಾಯಿ ಹೊತ್ತೊಯ್ದಿದ್ದಾರೆ.
ಮನೆಯವರೆಲ್ಲ ಶಾರದೋತ್ಸವಕ್ಕೆ ತೆರಳಿದ್ದ ಸಂದರ್ಭವನ್ನೇ ದುರುಪಯೋಗ ಮಾಡಿಕೊಂಡ ಖದೀಮರು ದುಷ್ಕೃತ್ಯ ನಡೆಸಿರುವುದು ಸ್ಪಷ್ಟವಾಗಿದೆ.
ಎರಡೂ ಕುಟುಂಬಗಳು ತೀರಾ ಬಡವರಾಗಿದ್ದು ಚಿನ್ನಾಭರಣ ಕಳೆದುಕೊಂಡ ಪುಷ್ಪರಾಜ್ ಅವರ ಮನೆಯ ಮಹಿಳೆ ಘಟನೆಯಿಂದಾಗಿ ತೀವ್ರ ಆಘಾತಕ್ಕೀಡಾಗಿ ಕುಸಿದುಬಿದ್ದು ಪ್ರಜ್ಞಾಹೀನರಾಗಿದ್ದಾರೆ. ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಕೆಲಸಮಯಗಳಿಂದ ಹಾಡಹಗಲಲ್ಲೇ ಪದೇ ಪದೇ ಕಳ್ಳತನ ನಡೆಯುತ್ತಿದ್ದರೂ ಈವರೆಗೂ ಕಳ್ಳರು ಪತ್ತೆಯಾಗದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.