ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಈ ದೊಡ್ಡ ಮಟ್ಟದ ಯಶಸ್ಸಿನ ಹಿಂದೆ ಇರುವ ಉಡುಪಿಯ ಬೈಲೂರು ಭಾಗದ ನೀಲಕಂಠ ಬಬ್ಬುಸ್ವಾಮಿ ದೈವಸ್ಥಾನದ ಸನ್ನಿಧಾನದಲ್ಲಿರುವ ಕೊರಗಜ್ಜನಿಗೆ ಮಧ್ಯ, ಚಕ್ಕುಲಿ, ಬೀಡ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ ನಟ, ನಿರ್ದೇಶಕ ರಿಶಬ್ ಶೆಟ್ಟಿ. ಹೌದು, ಈ ಸನ್ನಿಧಾನದಲ್ಲಿರುವ ಬಬ್ಬುಸ್ವಾಮಿ, ಕೊರಗಜ್ಜ, ಬಳಿ ಪ್ರಾರ್ಥನೆ ಮಾಡಿದ ವೇಳೆ ಪಂಜುರ್ಲಿ ದೈವದ ಮೇಲೆ ಕಥೆ ನಿರ್ಮಿಸಿ ಎನ್ನುವ ನುಡಿ ಕೇಳಿ ಬಂದಿತ್ತಂತೆ. ಈ ಹಿನ್ನಲೆ ಕಾಂತಾರ ದೊಡ್ಡ ಸಕ್ಸಸ್ ಕಂಡಿತ್ತು. ಈ ಯಶಸ್ಸಿನ ಬಳಿಕ ಮತ್ತೆ ರಿಶಬ್ ಶೆಟ್ಟಿ ಪತ್ನಿ, ಮಕ್ಕಳ ಜೊತೆ ಆಗಮಿಸಿ ಕೊರಗಜ್ಜ, ಬಬ್ಬುಸ್ವಾಮಿಗೆ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದ್ರು. ಈಗಾಗಲೇ ನಡೆಯುತ್ತಿರುವ ಕಾಂತಾರ ಭಾಗ ೧ ಸಿನಿಮಾಗೂ ದೊಡ್ಡ ಮಟ್ಟದ ಯಶಸ್ಸು ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ದೈವಸ್ಥಾನದ ಆಡಳಿತ ಮಂಡಳಿ ರಿಶಬ್ ಶೆಟ್ಟಿ ಕುಟುಂಬವನ್ನ ಗೌರವಿಸಿತು. ರಿಶಬ್ ಬರೋದನ್ನೇ ಕಾಯುತ್ತಿದ್ದ ಅಭಿಮಾನಿಗಳು ಸೆಲ್ಪಿ ತೆಗೆದು ಖುಷಿಪಟ್ರು.
NewsDesk
ಜೂ.17ಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ : ಕಿಶೋರ್ ಕುಮಾರ್ ಕುಂದಾಪುರ
ಉಡುಪಿ : ಯಾವುದೇ ಸಂಪನ್ಮೂಲದ ವ್ಯವಸ್ಥೆ ಇಲ್ಲದೆ ಬೇಕಾಬಿಟ್ಟಿಯಾಗಿ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ವಾಮ ಮಾರ್ಗದಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಿಸಿದಂತೆ ಯಥಾವತ್ತಾಗಿ ಅನುಷ್ಠಾನಗೊಳಿಸದೆ ರಾಜ್ಯದ ಅಭಿವೃದ್ಧಿಯನ್ನು ಬಲಿಕೊಟ್ಟು ಅಗತ್ಯ ವಸ್ತುಗಳ ದರದ ಜೊತೆಗೆ ಪೆಟ್ರೋಲ್ ಡೀಸೆಲ್ ದರವನ್ನು ದಿಡೀರ್ ಏರಿಕೆ ಮಾಡಿರುವುದು ಖಂಡನೀಯ. ರಾಜ್ಯ ಸರಕಾರದ ಈ ಜನ ವಿರೋಧಿ ನೀತಿಯನ್ನು ಖಂಡಿಸಿ ಜೂ.17 ರಂದು ಬೆಳಿಗ್ಗೆ 11.30ಕ್ಕೆ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ ಬಳಿಕ ಮೂಲಭೂತ ಆದ್ಯತೆಗಳೂ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸಚಿವರಿಗೆ ಹೊಸ ಕಾರು ಖರೀದಿ ಸಹಿತ ಅನಗತ್ಯ ದುಂದುವೆಚ್ಚಗಳಿಗೆ ರಾಜ್ಯದ ಜನತೆಯ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇಂಧನ ದರ ಏರಿಕೆ ಮೂಲಕ ಗಾಯದ ಮೇಲೆ ಬರೆ ಹಾಕಿದೆ.
ಹಳಿ ತಪ್ಪಿದ ಕಾನೂನು ಸುವ್ಯವಸ್ಥೆ, ವಾಲ್ಮೀಕಿ ನಿಗಮದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ, ಆಡಳಿತ ವೈಫಲ್ಯ ಮತ್ತು ಲೋಕಸಭಾ ಚುನಾವಣೆಯಲ್ಲಿ ಎದುರಾದ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಸರಕಾರ ದ್ವೇಷದ ರಾಜಕಾರಣವನ್ನು ನಡೆಸುತ್ತಾ ರಾಜ್ಯವನ್ನು ದಿವಾಳಿಯ ಅಂಚಿಗೆ ದೂಡಿರುವುದು ವಾಸ್ತವ. ಆದರೂ ಗ್ಯಾರಂಟಿಗಳು ನಿಲ್ಲುವುದಿಲ್ಲ ಎನ್ನುವ ಪೊಳ್ಳು ಮಾತುಗಳಿಂದ ಮಂಕು ಬೂದಿ ಎರಚುತ್ತಾ ಸದ್ದಿಲ್ಲದೇ ಜನತೆಯ ಜೇಬಿಗೆ ಕತ್ತರಿ ಹಾಕುತ್ತಿರುವುದು ವಿಷಾದನೀಯ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ, ಇಂಧನ ದರ ಏರಿಕೆಯು ಎಲ್ಲ ಕ್ಷೇತ್ರಗಳಿಗೂ ಪರಿಣಾಮ ಬೀರಿ ಜನತೆಯ ಜೀವನ ದುಸ್ತರವಾಗುತ್ತದೆ ಎಂದು ಪುಂಖಾನುಪುಂಖ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ಪೆಟ್ರೋಲ್ ದರವನ್ನು ಪ್ರತೀ ಲೀಟರ್ ಗೆ 3 ರೂ. ಹಾಗೂ ಡೀಸೆಲ್ ದರವನ್ನು ಪ್ರತೀ ಲೀಟರ್ ಗೆ 3 ರೂ. 50 ಪೈಸೆಗೆ ಏರಿಸಿರುವ ರಾಜ್ಯ ಸರಕಾರದ ಘನoಧಾರಿ ಕಾರ್ಯವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ರಾಜ್ಯದ ಖಜಾನೆಯನ್ನು ಬರಿದಾಗಿಸಿ ವಿಪರೀತ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಪೆಟ್ರೋಲ್, ಡೀಸೆಲ್ ದರವನ್ನು ಏರಿಸುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವುದು ಜಗಜ್ಜಾಹೀರಾಗಿದೆ. ಜನರಿಂದಲೇ ಸುಲಿಗೆ ಮಾಡಿ ಜನತೆಗೆ ಉಚಿತ ಖಚಿತ ನಿಶ್ಚಿತ ಖಂಡಿತಗಳ ಗ್ಯಾರಂಟಿ ನೀಡುವ ಔಚಿತ್ಯವೇನಿದೆ ಎಂಬುದನ್ನು ಅರಿಯುವಷ್ಟು ಜನತೆ ಪ್ರಬುದ್ಧರಾಗಿದ್ದಾರೆ.
ರಾಜ್ಯ ಸರಕಾರ ತಕ್ಷಣ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಅದೇಶವನ್ನು ಹಿಂಪಡೆಯಬೇಕು. ತಪ್ಪಿದಲ್ಲಿ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ಜನಪರ ಹೋರಾಟ ನಡೆಸಲಿದೆ. ಕಾಂಗ್ರೆಸ್ಸಿನ ಈ ಜನ ವಿರೋಧಿ ನೀತಿಗೆ ಜನತೆ ಮುoದಿನ ಎಲ್ಲ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಟೆಲ್, ವಸತಿ ಸಂಕೀರ್ಣಗಳ ತ್ಯಾಜ್ಯ ನೀರು ವಿಲೇವಾರಿಗೆ ಶಾಶ್ವತ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಒತ್ತಾಯ
ಮುಲ್ಕಿ : ಕಿನ್ನಿಗೋಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬಹು ಮಹಡಿ ಕಟ್ಟಡ, ಮನೆ, ವಾಣಿಜ್ಯ ವಸತಿ ಸಮುಚ್ಚಯದ ತ್ಯಾಜ್ಯ ನೀರನ್ನು ದ್ರವ ತ್ಯಾಜ್ಯ ಘಟಕಕ್ಕೆ ಅನಧಿಕೃತವಾಗಿ ಬಿಡುತ್ತಿರುವುದರಿದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಿತ್ತುಲ್ ಪರಿಸರದಲ್ಲಿ ತ್ಯಾಜ್ಯ ನೀರು ಸರಿಯಾಗಿ ಹರಿದು ಹೋಗದೆ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು ಶಾಶ್ವತ ವ್ಯವಸ್ಥೆ ಕಲ್ಪಿಸಲು ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ವಾಣಿಜ್ಯ ವಸತಿ ಸಮುಚ್ಚಯ, ಹೋಟೆಲ್ ಮಾಲೀಕರ, ಸಾರ್ವಜನಿಕರ ಸಭೆ ನಡೆಯಿತು. ಸಭೆಯಲ್ಲಿ ಉದ್ಯಮಿ ಪ್ರಮೋದ್ ಕುಮಾರ್ ಮಾತನಾಡಿ ಹೋಟೆಲ್, ವಸತಿ ಸಂಕೀರ್ಣಗಳ ತ್ಯಾಜ್ಯ ನೀರು ಸರಿಯಾದ ರೀತಿಯಲ್ಲಿ ಹರಿದು ಹೋಗಲು ಶಾಶ್ವತ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿದರು.
ಸಾಮಾಜಿಕ ಕಾರ್ಯಕರ್ತ ಸ್ಟ್ಯಾನಿ ಪಿಂಟೋ ಮಾತನಾಡಿ ಹಿಂದಿನ ಕಿನ್ನಿಗೋಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷದಿಂದ ತ್ಯಾಜ್ಯ ಬಿಡುವ ಅವೈಜ್ಞಾನಿಕ ಕಾಮಗಾರಿ ನಡೆದಿದ್ದು ಈಗಲೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಇದೇ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಇಲ್ಲಿನ ಅಧಿಕಾರಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಇದರಿಂದ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ, ಅಭಿವೃದ್ಧಿ ಬಗ್ಗೆ ಮಾತನಾಡಿದರೆ ನಮ್ಮ ಮೇಲೆ ಕೇಸ್ ಹಾಕುವ ಬೆದರಿಕೆ ಒಡ್ಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತ್ಯಾಜ್ಯ ನಿರ್ವಹಣೆ ಅವ್ಯವಸ್ಥೆಯಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಿತುಲ್ ಪರಿಸರದ ಜನ ಹೈರಾಣಾಗಿದ್ದಾರೆ ಇದಕ್ಕೆ ಪೂರ್ಣ ಪ್ರಮಾಣದ ಪರಿಹಾರ ಬೇಕು ಎಂದು ಒತ್ತಾಯಿಸಿದರು.
ಸ್ಥಳೀಯರಾದ ಐವನ್ ಮಾತನಾಡಿ ತ್ಯಾಜ್ಯ ನೀರು ಬಿಡುವ ಪ್ಲಾಂಟ್ ಶುರುವಾಗುವ ಮೊದಲೇ ನಾವು ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಆದರೂ ಹಿಂದಿನ ಪಂಚಾಯತ್ ಆಡಳಿತ ಕ್ಯಾರೇ ಎನ್ನದೆ ಅರ್ಧಂಬರ್ಧ ಕಾಮಗಾರಿ ನಡೆಸಿ ಈಗ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಮಾಜೀ ಜಿ.ಪಂ. ಉಪಾಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಲ್ಲಿ ಚುನಾಯಿತ ಸದಸ್ಯರು ಇಲ್ಲದೆ ಆಡಳಿತಾಧಿಕಾರಿಗಳು ತಮ್ಮದೇ ಆಟ ಆಡುತ್ತಿದ್ದು ಅವ್ಯವಸ್ಥೆಗಳ ಬಗ್ಗೆ ಶಾಸಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಮಾತನಾಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ವಾಹನ ಪ್ರತೀ ಮನೆಗೆ ಹೋಗದಿದ್ದರೂ ಮನೆಯವರಿಂದ ತ್ಯಾಜ್ಯ ವಿಲೇವಾರಿ ಹಣ ವಸೂಲು ಮಾಡಲಾಗುತ್ತಿದೆ ಇದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ನಾಗರಿಕರನ್ನು ಸಮಾಧಾನಪಡಿಸಿ ಮಾತನಾಡಿ ತ್ಯಾಜ್ಯ ನೀರಿನ ಘಟಕದಲ್ಲಿರುವ ಅನಧಿಕೃತ ಕನೆಕ್ಷನ್ ಕೂಡಲೇ ತೆಗೆಯಬೇಕು, ದ್ರವ ತ್ಯಾಜ್ಯ ಮಾತ್ರ ಬಿಡಬೇಕು, ನಾಗರಿಕರ ಹಾಗೂ ಹೋಟೆಲ್ ವಸತಿ ಸಮುಚ್ಚಯ ಮಾಲಕರ ಸಮಿತಿ ರಚನೆ ಮಾಡಿ ಘಟಕವನ್ನು ಶುದ್ಧೀಕರಣ ಗೊಳಿಸಬೇಕು ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತ್ ಮೂಲಕ ಜಾಗ ಗುರುತಿಸಿ 10 ಕೋಟಿ ವೆಚ್ಚದಲ್ಲಿ ನೂತನ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗರಾಜ್, ಜೂನಿಯರ್ ಇಂಜಿನಿಯರ್ ನಾಗರಾಜ್ ಎಚ್ ಉಪಸ್ಥಿತರಿದ್ದರು.
ಉಡುಪಿ : ಪ್ರತೀ ಬಾರಿ ತೆರಿಗೆ ವಿಷಯ ಬಂದಾಗ ಮೊದಲಿಗೆ ಟ್ಯಾಕ್ಸಿಗಳ ಮೇಲೆ ಹೊರೆ ಹಾಕಲಾಗುತ್ತದೆ. ಆದರೂ ಸರಕಾರಗಳು ಟ್ಯಾಕ್ಸಿಯವರಿಗೆ ಏನು ನೀಡಿದೆ ಎಂದು ಪ್ರಶ್ನಿಸಿರುವ ಶ್ರೀರಾಮ ಸೇನೆ, ಟ್ಯಾಕ್ಸಿಗಳಿಗೆ ಸಬ್ಸಿಡಿ ತೈಲ ವಿತರಿಸಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಶ್ರೀರಾಮ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಈಗಾಗಲೇ ರಾಜ್ಯ ಸರಕಾರದ ಕೆಲವು ತೆರಿಗೆ ನಿಯಮದಿಂದ ಟ್ಯಾಕ್ಸಿ ಮಾಲಕರು ಸಂಕಷ್ಟ ಅನುಭವಿಸುವಂತಾಗಿದೆ.
ಪ್ರತೀ ಬಾರಿಯೂ ಚುನಾವಣೆ ಇನ್ನಿತರ ಸರಕಾರದ ಕೆಲಸಕ್ಕೆ ಟ್ಯಾಕ್ಸಿಗಳು ಬೇಕು. ಆದರೆ, ನಂತರ ಟ್ಯಾಕ್ಸಿಗಳನ್ನು ಕಡೆಗಣಿಸುವುದು ರಾಜ್ಯ ಸರಕಾರಕ್ಕೆ ಅದರಲ್ಲೂ ಈಗಿನ ಮುಖ್ಯಮಂತ್ರಿಯ ಜಾಯಮಾನವಾಗಿದೆ.
ಕರ್ನಾಟಕದಲ್ಲಿ ತೆರಿಗೆ ಏರಿಸಿ, ಹೊರ ರಾಜ್ಯದ ಪ್ರವಾಸಿಗಳು ಈ ರಾಜ್ಯಕ್ಕೆ ಬಾರದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಿಂದ ಹೈರಾಣಾಗಿರುವ ಟ್ಯಾಕ್ಸಿಗಳಿಗೆ ಮತ್ತೆ ಡೀಸೆಲ್, ಪೆಟ್ರೋಲ್ ದರಏರಿಸುವ ಮೂಲಕ ಬರೆ ಎಳೆಯಲಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ತೈಲ ಬೆಲೆ ಏರಿಕೆ ಮಾಡಿರುವುದು ನಗ್ನ ಸತ್ಯ.
ಗ್ಯಾರಂಟಿಗಳಿಗಾಗಿ ಪಕ್ಷದ ಹಣ ಬಳಸಿ. ಸಾಮಾನ್ಯ ಕುಟುಂಬಗಳನ್ನು ಬಲಿ ಕೊಡಬೇಡಿ ಎಂದು ಅಂಬೆಕಲ್ಲು ಸಲಹೆ ನೀಡಿದ್ದಾರೆ. ಕೂಡಲೇ ಡೀಸೆಲ್ ದರ ಕಡಿಮೆ ಮಾಡಬೇಕು. ಇಲ್ಲವಾದರೆ ಟ್ಯಾಕ್ಸಿಗಳಿಗೆ ಡೀಸೆಲ್ ಸಬ್ಸಿಡಿ ನೀಡಿ ಎಂದು ಸಂಘಟನೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಸರಕಾರವನ್ನು ಆಗ್ರಹಿಸಿದ್ದಾರೆ
ಉಡುಪಿ : ಪ್ರಸಿದ್ಧ ನರರೋಗ ತಜ್ಞ ಹಾಗೂ ಆದರ್ಶ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿದ್ದ ಡಾ. ರಾಜಾ(73) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಬೆಳಿಗ್ಗೆ ಮಣಿಪಾಲದ ರಾಜೀವ್ ನಗರದ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ತಕ್ಷಣ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು.
ಮೃತರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅವರ ಅಗಲುವಿಕೆ ಸಮಾಜಕ್ಕೆ ಹಾಗೂ ವೈದ್ಯಕೀಯ ಲೋಕಕ್ಕೆ ತೀವ್ರ ನಷ್ಟವಾಗಿದೆ.
ಆಗಲಿದ ಅವರ ದಿವ್ಯಾತ್ಮಕ್ಕೆ ಸದ್ಗತಿ ಸಿಗಲೆಂದು ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಶೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀಕೃಷ್ಣ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಉಡುಪಿ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಜಿಲ್ಲೆಯ ನಗರಸಭೆ ವ್ಯಾಪ್ತಿಯಲ್ಲಿ 02, ಪುರಸಭೆ ಮತ್ತು ಪಟ್ಟಣ ಪಂಚಾಯತ್ಗಳಲ್ಲಿ ತಲಾ 01 ರಂತೆ ನಗರ ಪುನರ್ವಸತಿ ಕಾರ್ಯಕರ್ತರ (ಯು.ಆರ್.ಡಬ್ಲ್ಯೂ) ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ 01 ರಂತೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವಿ.ಆರ್. ಡಬ್ಲ್ಯೂ) ನೇಮಕಾತಿಗಾಗಿ ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿ.ಆರ್.ಡಬ್ಲ್ಯೂ ನೇಮಕಾತಿಗಾಗಿ ಬಾಕಿ ಇರುವ ಗ್ರಾಮ ಪಂಚಾಯತ್ಗಳು: ಉಡುಪಿ ತಾಲೂಕಿನ ಕಡೆಕಾರು, ಕೆಮ್ಮಣ್ಣು ಹಾಗೂ ಪೆರ್ಡೂರು. ಬ್ರಹ್ಮಾವರ ತಾಲೂಕಿನ 38 ಕಳತ್ತೂರು ಹಾಗೂ ಚಾಂತಾರು. ಹೆಬ್ರಿ ತಾಲೂಕಿನ ಶಿವಪುರ ಹಾಗೂ ಬೆಳ್ವೆ. ಕಾಪು ತಾಲೂಕಿನ ಬೆಳಪು, ಮಜೂರು ಹಾಗೂ ಹೆಜಮಾಡಿ. ಕುಂದಾಪುರ ತಾಲೂಕಿನ ಹೆಂಗವಳ್ಳಿ ಮತ್ತು ಗುಜ್ಜಾಡಿ. ಬೈಂದೂರು ತಾಲೂಕಿನ ಹಳ್ಳಿಹೊಳೆ ಹಾಗೂ ಕಾರ್ಕಳ ತಾಲೂಕಿನ ಮಾಳ ಮತ್ತು ನಿಟ್ಟೆ. ಕುಂದಾಪುರ ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ನಲ್ಲಿ ಖಾಲಿ ಇರುವ ಯು.ಆರ್.ಡಬ್ಲ್ಯೂ ಹುದ್ದೆಗಳ ನೇಮಕಾತಿಗಾಗಿ, ಎಸ್.ಎಸ್.ಎಲ್.ಸಿ ಉತ್ತೀರ್ಣ/ಅನುತ್ತೀರ್ಣರಾಗಿರುವ, ಶೇ.40 ಕ್ಕಿಂತ ಮೇಲ್ಪಟ್ಟು ವಿಕಲತೆ ಇರುವ ಬಗ್ಗೆ ವೈದ್ಯಕೀಯ ಪ್ರಾಧಿಕಾರದಿಂದ ನೀಡಲ್ಪಟ್ಟಿರುವ ವಿಕಲಚೇತನರ ವಿಶಿಷ್ಟ ಗುರುತುಚೀಟಿ ಮತ್ತು ವೈದ್ಯಕೀಯ ಪ್ರಮಾಣ ಪತ್ರ ಹೊಂದಿರುವ ವಿಕಲಚೇತನರು ತಮ್ಮ ವಾಸಸ್ಥಳ ವ್ಯಾಪ್ತಿಯ ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ನಿಂದ ಪಡೆದ ವಾಸ್ತವ್ಯ ದೃಢೀಕರಣ ಪತ್ರ ಹಾಗೂ 3 ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ ದೂ: 0820- 2574810/2574811 ಅಥವಾ ತಾಲೂಕು ಪಂಚಾಯತ್ನಲ್ಲಿರುವ ಎಂ.ಆರ್.ಡಬ್ಲ್ಯೂ) (ವಿವಿಧೋದ್ಧೇಶ ಪುನರ್ವಸತಿ ಕಾರ್ಯಕರ್ತರು) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪಡುಬಿದ್ರಿ : ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ 2023-24ನೇ ಸಾಲಿನಲ್ಲಿ ನಡೆದ 24 ಕಂಬಳ ಕೂಟಗಳಿಗೆ ಸರಕಾರದಿಂದ ಬರಬೇಕಿದ್ದ ತಲಾ 5 ಲಕ್ಷ ರೂ. ಅನುದಾನ ಇದುವರೆಗೂ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳ ಎಲ್ಲ ಕಂಬಳದ ವ್ಯವಸ್ಥಾಪಕರು ಹಾಗೂ ಜಿಲ್ಲಾ ಸಮಿತಿಯ ತುರ್ತು ಸಮಾಲೋಚನೆ ಸಭೆಯನ್ನು ಜೂ. 16ರ ಅಪರಾಹ್ನ 3 ಗಂಟೆಗೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಕರೆಯಲಾಗಿದೆ.
ಅನುದಾನಕ್ಕಾಗಿ ಜಿಲ್ಲಾ ಕಂಬಳ ಸಮಿತಿಯು ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಸರಕಾರ ಅದನ್ನು ಪರಿಗಣಿಸಿಲ್ಲ. ಆದ್ದರಿಂದ ನಮ್ಮ ಮುಂದಿನ ನಡೆಯ ಬಗ್ಗೆ ಚರ್ಚಿಸಲು ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ಎಲ್ಲ ಜೋಡುಕರೆ ಕಂಬಳ ವ್ಯವಸ್ಥಾಪಕರು ಪಾಲ್ಗೊಳ್ಳಬೇಕು ಎಂದು ಕಂಬಳ ಸಮಿತಿಗಳ ಪದಾಧಿಕಾರಿಗಳು ತಿಳಿಸಿದ್ದಾರೆ.
ಬಕ್ರೀದ್ ಸಂದರ್ಭ ಅನಧಿಕೃತ ಜಾನುವಾರುಗಳ ವಧೆ, ಸಾಗಾಣಿಕೆ ಮಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ – ಜಿಲ್ಲಾಧಿಕಾರಿ
ಉಡುಪಿ : ಬಕ್ರೀದ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆ ಮಾಡುವುದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಕ್ರೀದ್ ಹಬ್ಬದ ಸಂದರ್ಭ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟುವ ಕುರಿತು ಜಿಲ್ಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಟ ಕಂಡುಬಂದಲ್ಲಿ ಹತ್ತಿರದ ಪೋಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಧಿಕೃತ ಜಾನುವಾರು ಸಾಗಾಣಿಕೆ ಮಾಡಬೇಕಾದ ಸಂದರ್ಭದಲ್ಲಿ ಪಶುಸಂಗೋಪನ ಇಲಾಖೆ ನಿಗದಿಪಡಿಸಿದ ನಮೂನೆಯಲ್ಲಿ ಅನುಮತಿ ಹಾಗೂ ಪೋಲಿಸ್ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.
ಅನಧಿಕೃತ ಸಾಗಾಣಿಕೆಯಲ್ಲಿ ವಶಪಡಿಸಿಕೊಂಡ ಜಾನುವಾರುಗಳನ್ನು ಸಂರಕ್ಷಿಸಿ, ಹತ್ತಿರದ ಗೋಶಾಲೆಗೆ ಬಿಡಲು ಸಮೀಪದ ಗೋಶಾಲೆಗಳನ್ನು ಗುರುತಿಸುವಂತೆ ಹಾಗೂ ವಶಪಡಿಸಿಕೊಂಡ ಜಾನುವಾರುಗಳಿಗೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡಲು ಪಶುವೈದ್ಯಾಧಿಕಾರಿಗಳು ಸನ್ನದ್ಧರಾಗಿರಬೇಕು. ಜಾನುವಾರುಗಳಿಗೆ ಅಗತ್ಯವಿರುವ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಿದ್ದರಾಮಯ್ಯ ಸರಕಾರ ಬಂದ ಬಳಿಕ ರಾಜ್ಯದಲ್ಲಿ ರೆಕಾರ್ಡ್ ಬ್ರೇಕ್ ಆದ ಹತ್ಯೆ-ಆತ್ಮಹತ್ಯೆ – ಸಿ.ಟಿ.ರವಿ ಆರೋಪ
ಮಂಗಳೂರು : ಸಿದ್ದರಾಮಯ್ಯ ಸರ್ಕಾರ ಬಂದ ಈ 13 ತಿಂಗಳಲ್ಲಿ ರಾಜ್ಯದಲ್ಲಿ ಹತ್ಯೆ ಮತ್ತು ಆತ್ಮಹತ್ಯೆ ಹಿಂದಿನ ಎಲ್ಲಾ ರೆಕಾರ್ಡ್ ಬ್ರೇಕ್ ಆಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ಎನ್ಸಿಆರ್ಬಿ ಪ್ರಕಾರ ಕಳೆದ ನಾಲ್ಕು ತಿಂಗಳಲ್ಲಿ ಆದ ಹತ್ಯೆಯೇ 500ರ ಗಡಿ ದಾಟಿದೆ. ರೈತರ ಆತ್ಮಹತ್ಯೆ 700ರ ಗಡಿ ದಾಟಿದೆ. ಕೊಲೆ, ಸುಲಿಗೆ, ಭಯ ಇಲ್ಲದ ನಡವಳಿಕೆ ಕಂಡಾಗ ರಾಜ್ಯದಲ್ಲಿ ಕ್ರಿಮಿನಲ್ ಹಾಗೂ ಕಮ್ಯುನಲ್ ಎರಡೂ ಚಟುವಟಿಕೆಗಳು ಹೆಚ್ಚಳವಾಗಿದೆ. ಸರಕಾರ ಕ್ರಿಮಿನಲ್ಗಳ ಪರವಾಗಿ ಮೃದುಧೋರಣೆ, ಕಮ್ಯುನಲ್ಗಳ ಪರವಾಗಿ ಸ್ಪಷ್ಟ ನಿಲುವು ಹೊಂದಿರುವುದೇ ಈ ಸ್ಥಿತಿಗೆ ಕಾರಣ ಎಂದರು.
ಚುನಾವಣೆ ಬಳಿಕ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಟಾರ್ಗೆಟ್ ಆಗುತ್ತಿದ್ದಾರೆ. ಸರ್ಕಾರದ ಕಮ್ಯುನಲ್ ನೀತಿ, ಮತಾಂಧರಿಗೆ ಬೆಂಬಲ ಸಿಕ್ಕಂತಾಗಿದೆ. ಐಸಿಸ್ ಸೇರಿದವರು ರಾಜ್ಯದಲ್ಲಿ ಸಕ್ರಿಯರಾಗಿದ್ದಾರೆ ಎಂಬ ವರದಿ ಬಂದಿದೆ. 50ಕ್ಕೂ ಅಧಿಕ ಸ್ಲೀಪರ್ ಸೆಲ್ ಗಳು ರಾಜ್ಯದಲ್ಲಿ ಸಕ್ರಿಯವಾಗಿದೆ. ಸ್ಪೀಕರ್ ಖಾದರ್ರವರು ಹೊರಗಿನವರು ಅಂಥ ಹೇಳಬೇಕಾಗಿದ್ದು ಐಸಿಸ್ ಜೊತೆ ನಂಟು ಇರುವವನ್ನು. ಅವರನ್ನು ಮೊದಲು ಪಾಕಿಸ್ತಾನಕ್ಕೆ ಅಟ್ಟಬೇಕಿದೆ. ಈ ಸರ್ಕಾರ ಮತಬ್ಯಾಂಕ್ಗಾಗಿ ಮತಾಂಧರನ್ನು ಬೆಂಬಲಿಸುತ್ತಿದೆ. ಇದು ಇಡೀ ದೇಶಕ್ಕೆ ಬಹಳ ಅಪಾಯಕಾರಿ. ಓಟ್ ಜಿಹಾದ್ ಭಾರತದಲ್ಲಿ ಸಂವಿಧಾನವನ್ನೇ ಮುಗಿಸುವ ಸಂಚು ನಡೆಸುತ್ತಿದೆ. ಕಾಂಗ್ರೆಸ್ ಓಟ್ ಜಿಹಾದ್ ಫಲಾನುಭವಿಯಾಗಿದ್ದು, ಇವರು ಜಿಹಾದಿ ಮಾನಸಿಕತೆ ಕುಮ್ಮಕ್ಕು ಕೊಟ್ಟಿದ್ದರಿಂದಲೇ ದೇಶ ವಿಭಜನೆಯಾಗಿದೆ. ಅದರ ಪರಿಣಾಮವೇ ಲವ್ ಜಿಹಾದ್, ಭಯೋತ್ಪಾದನೆ ನಡೆಯುತ್ತಿದೆ ಎಂದರು.
ರಸ್ತೆ ಮಧ್ಯೆ ನಮಾಜ್ ಮಾಡಿದವರ ಕೇಸ್ ವಾಪಾಸ್ ಪಡೆದ ಸರ್ಕಾರ ಪ್ರಶ್ನೆ ಮಾಡಿದ ಶರಣ್ ಪಂಪ್ವೆಲ್ ಮೇಲೆ ಕೇಸ್ ಹಾಕಿತು. ಈ ಮೂಲಕ ಪೊಲೀಸರಿಗೆ ಮತಾಂಧರ ಬೆಂಬಲಿಸುವ ಸಂದೇಶ ಕೊಟ್ಟಂತಾಯಿತು ಎಂದು ಸಿ.ಟಿ.ರವಿ ಹೇಳಿದರು.
ಇಂದ್ರಾಳಿ ರೈಲ್ವೇ ಬ್ರಿಡ್ಜ್ ಬಳಿಯ ದ್ವಿಭಾಜಕದ ಕಲ್ಲುಗಳು ಜೆಸಿಬಿಯಿಂದ ಶಿಫ್ಟ್; ಸುಗಮ ಸಂಚಾರಕ್ಕೆ ಬ್ಯಾರಿಕೇಡ್ ಅಳವಡಿಕೆ
ಉಡುಪಿ : ಇಂದ್ರಾಳಿ ರೈಲ್ವೇ ಬ್ರಿಡ್ಜ್ ಬಳಿ ರಸ್ತೆಯು ಕಿರಿದಾಗಿದ್ದು, ಪದೇ ಪದೇ ಅಪಘಾತಗಳು ನಡೆಯುತ್ತಿದ್ದ ಕಾರಣ ಮಾನ್ಯ ಪೊಲೀಸ್ ಉಪಾಧಿಕ್ಷಕರದ ಡಿ ಟಿ ಪ್ರಭುರವರ ಮಾರ್ಗದರ್ಶನದಲ್ಲಿ, ಮಾನ್ಯ ಮಣಿಪಾಲ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ ವಿ ರವರ ನೇತೃತ್ವದಲ್ಲಿ ಇಂದ್ರಾಳಿ ರೈಲ್ವೇ ಬ್ರಿಡ್ಜ್ ಬಳಿ ರಾ ಹೆ 166 ಎ ರಲ್ಲಿ ರಸ್ತೆಯ ಮದ್ಯೆ ದ್ವಿಭಾಜಕಕ್ಕೆ ಹಾಕಿರುವ ಕಲ್ಲುಗಳನ್ನು ಜೆಸಿಬಿಯಿಂದ ತೆಗೆಸಿ ಅಲ್ಲಿ ಬ್ಯಾರಿಕೆಡ್ಗಳನ್ನು ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.