ಉಡುಪಿ : ನಮ ತುಳುವೆರ್ ಕಲಾ ಸಂಘಟನೆ (ರಿ) ಮತ್ತು ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ
‘ಸಿಜಿಕೆ ರಂಗಪುರಸ್ಕಾರ’-2024 ಕ್ಕೆ ಉಡುಪಿ ಜಿಲ್ಲೆಯಿಂದ ನಟ, ನಿರ್ದೇಶಕ, ಸಂಘಟಕ ರವಿರಾಜ್ ಎಚ್ಪಿ ಆಯ್ಕೆಯಾಗಿರುತ್ತಾರೆ.
ಇವರು ಕಳೆದ 30 ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ನಟ-ನಿರ್ದೇಶಕ-ಸಂಘಟಕರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ನಟನೆಗೆ ಹಾಗೂ ನಿರ್ದೇಶನಕ್ಕೆ ರಾಜ್ಯಮಟ್ಟದ ಪ್ರಶಸ್ತಿಗಳು ಬಂದಿರುತ್ತವೆ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಇವರ ಪರಿಕಲ್ಪನೆಯಲ್ಲಿ ನಡೆಸಿದ ಹೀಗೊಂದು ರಂಗ ಕಲಿಕೆ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿರುತ್ತಾರೆ.
ಹಲವು ಟಿವಿ ಧಾರವಾಹಿ, ಚಲನಚಿತ್ರಗಳಲ್ಲಿ ಪೋಷಕ ನಟನಾಗಿ ಪಾತ್ರ ನಿರ್ವಹಿಸಿರುತ್ತಾರೆ. ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇದರ ಸಂಚಾಲಕರಾಗಿ ಉಡುಪಿ ಜಿಲ್ಲೆಯಲ್ಲಿ ಹಲವಾರು ನಾಟಕ, ಸಾಂಸ್ಕೃತಿಕ ಉತ್ಸವಗಳನ್ನು ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬಂದಿರುತ್ತಾರೆ. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನಮ ತುಳುವೆರ್ ಕಲಾ ಸಂಘಟನೆ (ರಿ) ಇದರ ಅಧ್ಯಕ್ಷರಾದ ಸುಕುಮಾರ್ ಮೋಹನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
 
			        


 
			         
                         
                        
 
                        
 
                         
                        
 
                         
                         
                         
                        





 
                        
