ಹೆಬ್ರಿ : ಚಾರ್ಜಿಗೆ ಇರಿಸಿದ್ದ ಎಲೆಕ್ಟ್ರಿಕ್ ಬೈಕಿನ ಬ್ಯಾಟರಿ ಸ್ಫೋಟಗೊಂಡ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಚಾರ ಸಮೀಪ ಸಂಭವಿಸಿದೆ. ಇಲ್ಲಿನ ಬಾಡಿಗೆ ರೂಮಿನಲ್ಲಿ ಇರುವ ವ್ಯಕ್ತಿಯೊಬ್ಬರು ಎಲೆಕ್ಟ್ರಿಕ್ ಬೈಕಿನ ಬ್ಯಾಟರಿಯನ್ನು ಮನೆಯ ಒಳಗೆ ಚಾರ್ಜಿಗೆ ಇಟ್ಟಿದ್ದರು. ಈ ಬ್ಯಾಟರಿ ಅರ್ಧ ಗಂಟೆ ಸಮಯದಲ್ಲಿ ಸ್ಫೋಟಗೊಂಡಿದ್ದು ಮನೆಯಲ್ಲಿ ಆ ಸಂದರ್ಭ ಒಳಗೆ ಯಾರೂ ಇಲ್ಲದೆ ಇದ್ದ ಕಾರಣ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮನೆಯೊಳಗಿದ್ದ ಬಟ್ಟೆಬರೆ, ಬ್ಯಾಟರಿ ಹಾಗೂ ದಿನ ಬಳಕೆಯ ಹಲವಾರು ವಸ್ತುಗಳು ಸುಟ್ಟು ಹೋಗಿವೆ. ಬ್ಯಾಟರಿ ಸ್ಪೋಟಗೊಂಡ ಈ ಪ್ರಕರಣ ಮನೆಯವರ ಆತಂಕಕ್ಕೆ ಕಾರಣವಾಗಿದೆ.
NewsDesk
ಮಾಹೆ ಮತ್ತು ಫಿಟ್ವಿಬ್ ಸಹಭಾಗಿತ್ವದಲ್ಲಿ ಮಲ್ಪೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ನ ವಿದ್ಯಾರ್ಥಿ ವ್ಯವಹಾರಗಳ ವಿಭಾಗ [ಡಿಪಾರ್ಟ್ಮೆಂಟ್ ಆಫ್ ಸ್ಟೂಡೆಂಟ್ ಅಫೇರ್ಸ್] ಮತ್ತು ಕೆಎಂಸಿಯ ಫಿಟ್ನೆಸ್ ಕ್ಲಬ್ [ಫಿಟ್ವಿಬ್] ಜಂಟಿಯಾಗಿ ಮಲ್ಪೆಯ ಕದಿಕೆ ಬಳಿಯ ಸಮುದ್ರಕಿನಾರೆಯಲ್ಲಿ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಿತು. ಮಾದಕವ್ಯಸನದ ವಿರುದ್ಧ ಮಾನಸಿಕ ಜಾಗೃತಿಯನ್ನು ಮೂಡಿಸುವ ಕುರಿತು ಆಶಯವನ್ನು ಕೂಡ ಈ ಕಾರ್ಯಕ್ರಮವು ಹೊಂದಿತ್ತು.
ಮಾಹೆಯ ಯೋಜನೆ ಮತ್ತು ನಿಯಂತ್ರಣ ವಿಭಾಗದ ನಿರ್ದೇಶಕ [ಡೈರೆಕ್ಟರ್ ಆಫ್ ಪ್ಲ್ಯಾನಿಂಗ್ ಆ್ಯಂಡ್ ಮಾನಿಟರಿಂಗ್] ಡಾ. ರವಿರಾಜ್ ಎನ್. ಎಸ್. ಅವರು ಮುಖ್ಯ ಅತಿಥಿಗಳಾಗಿದ್ದು, ‘ಪ್ರತಿಯೊಬ್ಬನ ದಿನನಿತ್ಯದ ಜೀವನದಲ್ಲಿ ಯೋಗಾಭ್ಯಾಸಕ್ಕೆ ವಿಶೇಷ ಮಹತ್ತ್ವವಿದೆ. ಬೋಧಕರು ಮತ್ತು ವಿದ್ಯಾರ್ಥಿಗಳು ಏಕಾಗ್ರತೆಯನ್ನು ಸಾಧಿಸುವಲ್ಲಿಯೂ ಇದು ಪ್ರಯೋಜನಕಾರಿ. ಯೋಗ ಕೇವಲ ಶಾರೀರಿಕ ಚಕುವಟಿಕೆಯಾಗದೆ, ದೇಹ, ಮನಸ್ಸು ಮತ್ತು ಆತ್ಮದ ನಡುವಿನ ಸಮತೋಲಕ್ಕೆ ಕಾರಣವಾಗುತ್ತದೆ. ಶೈಕ್ಷಣಿಕ ವಾತಾವರಣವು ಸ್ಪರ್ಧಾತ್ಮಕವಾಗಿ ಬೆಳೆಯತ್ತಿರುವ ಈ ಸಂದರ್ಭದಲ್ಲಿ ಯೋಚನಾ ಸ್ಪಷ್ಟತೆ, ಭಾವನಾತ್ಮಕ ದೃಢತೆ, ಶಾರೀರಕ ಉಲ್ಲಾಸಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಯೋಗಾಭ್ಯಾಸವು ಸಹಕಾರಿಯಾಗಲಿದೆ’ ಎಂದರು.
ಮಾಹೆಯ ವಿದ್ಯಾರ್ಥಿ ವ್ಯವಹಾರ ವಿಭಾಗದ ನಿರ್ದೇಶಕ [ಡೈರೆಕ್ಟರ್ ಆಫ್ ಸ್ಟೂಡೆಂಟ್ ಅಫೇರ್ಸ್] ರಾದ ಡಾ. ಗೀತಾ ಮಯ್ಯ ಅವರು ಮಾತನಾಡಿ, ‘ಯೋಗವು ದೇಶದ ಭವ್ಯ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಬೆಳೆದು ಬಂದಿದೆ. ವ್ಯಕ್ತಿಯೊಬ್ಬನ ಸಮಗ್ರ ಬೆಳವಣಿಗೆಗೆ ಯೋಗಾಭ್ಯಾಸವು ತುಂಬ ಉಪಯಕ್ತವೆನಿಸುತ್ತದೆ. ಸಮುದ್ರಕಿನಾರೆಯಂಥ ನಿಸರ್ಗ ಸುಂದರ ವಾತಾವರಣದಲ್ಲಿ ಯೋಗಾಭ್ಯಾಸ ಮಾಡುವುದೇ ಒಂದು ವಿಶಿಷ್ಟ ಅನುಭವವಾಗಿದೆ’ ಎಂದರು.
ಮಾಹೆಯ ಯೋಗ ವಿಭಾಗದ ಮುಖ್ಯಸ್ಥರಾದ ಡಾ. ಅನ್ನಪೂರ್ಣಾ ಅವರು ಮಾತನಾಡಿ, ‘ಯೋಗಕ್ಕೆ ವಿಶೇಷ ಅರ್ಥವಿದೆ. ಅದು ಆತ್ಮದ ಯಾನ, ಅಂದರೆ ಆತ್ಮವು ಆತ್ಮದ ಮೂಲಕ ಆತ್ಮದತ್ತ ಪಯಣಿಸುವುದು! ಯೋಗಾಭ್ಯಾಸವು ನಮ್ಮ ಪರಂಪರೆಯಿಂದ ಬಂದ ಬಳುವಳಿಯಾಗಿದ್ದು ಇದು ನಮ್ಮ ಹಿರಿಯರ ಸಮರಸವಾದ ಮತ್ತು ಸ್ವಾಸ್ಥ್ಯಪೂರ್ಣವಾದ ಬದುಕಿನ ದ್ಯೋತಕವಾಗಿದೆ. ಪ್ರಸ್ತುತ ಯೋಗದಿನಾಚರಣೆಯು ಪ್ರತಿಯೊಬ್ಬರು ಯೋಗಾಭ್ಯಾಸ ಮಾಡಲು ಪ್ರೇರೇಪಿಸುವ ಸಂದರ್ಭವಾಗಿದೆ’ ಎಂದರು.
ಫಿಟ್ವಿಬ್ನ ಅಧ್ಯಕ್ಷರಾದ ಅರ್ಜುನ್ ಆಹುಜಾ ಅವರು ಕಾರ್ಯಕ್ರಮ ಸಂಯೋಜಿಸಿದರು. ಮುಖ್ಯ ಯೋಗ ಕಲಾಪದ ಪೂರ್ವದಲ್ಲಿ ಫಿಟ್ವಿಬ್ನ ಸದಸ್ಯರು ಹದಿನೆದು ನಿಮಿಷಗಳ ಕಾಲ ಝುಂಬಾ ಮತ್ತು ಏರೋಬಿಕ್ ಕಲಾಪಗಳನ್ನು ನಡೆಸಿಕೊಟ್ಟರು. ಡಾ. ಅನ್ನಪೂರ್ಣಾ ಯೋಗಾಸನಗಳ ಮಹತ್ತ್ವವನ್ನು ವಿವರಿಸಿದರು. ಆರಂಭದಲ್ಲಿ ಚತ್ರಿಕ್ ಮಿತ್ತಲ್ ಪ್ರಾರ್ಥನಾಗೀತೆಯನ್ನು ಹಾಡಿದರು. ವಿದ್ಯಾರ್ಥಿ ವ್ಯವಹಾರ [ಸ್ಟೂಡೆಂಟ್ ಅಫೇರ್ಸ್] ವಿಭಾಗದ ಉಪನಿರ್ದೇಶಕರಾದ ಅರವಿಂದ ಪಾಂಡೆ ಧನ್ಯವಾದ ಸಮರ್ಪಿಸಿದರು.
ಉಡುಪಿ : ನಮ ತುಳುವೆರ್ ಕಲಾ ಸಂಘಟನೆ (ರಿ) ಮತ್ತು ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ ‘ಸಿಜಿಕೆ ರಂಗಪುರಸ್ಕಾರ’ -2024ಕ್ಕೆ ಮಂಗಳೂರು ಜಿಲ್ಲೆಯಿಂದ ನಾಟಕಕಾರ ನಿರ್ದೇಶಕ ಸಂಘಟಕ ಶಶಿರಾಜ್ ಕಾವೂರು ಆಯ್ಕೆಯಾಗಿರುತ್ತಾರೆ.
ಇವರು ವೃತ್ತಿಯಲ್ಲಿ ನ್ಯಾಯವಾದಿ. ಪ್ರವೃತ್ತಿಯಲ್ಲಿ ನಾಟಕಕಾರ, ನಟ, ಸಂಘಟಕ ಮತ್ತು ಗೀತ ರಚನೆಕಾರ. ಏಕಾದಶಾನನ, ಬರ್ಬರೀಕ, ನೆಮ್ಮದಿ ಅಪಾರ್ಟ್ಮೆಂಟ್ ಫ್ಲಾಟ್ ನಂಬರ್ 252, ಐಸಿಯು, ಸರದಾರನ ಸ್ವಗತ, ಸಂಪಿಗೆನಗರ ಪೋಲೀಸ್ ಸ್ಟೇಶನ್, ದಾಟ್ಸ್ ಆಲ್ ಯುವರ್ ಆನರ್, ಮಿನುಗೆಲೆ ಮಿನುಗೆಲೆ ನಕ್ಷತ್ರ, ವ್ಯೂಹ, ಮರಗಿಡಬಳ್ಳಿ, ಪರಶುರಾಮ, ಛತ್ರಪತಿ ಶಿವಾಜಿ, ನೆಮ್ಮದಿ ಅಪಾರ್ಟ್ಮೆಂಟ್ ಬ್ಲಾಕ್ ಬಿ ಇತ್ಯಾದಿ ನಾಟಕಗಳನ್ನು ಬರೆದಿದ್ದಾರೆ.
ಪೊಸ ಒಸರ್, ಪರ್ಂದ್ ಪೆಲಕಾಯಿ, ಬರ್ಬರೀಕ, ಪಿಲಿತ ಪಂಜ, ಬಿಂಬದುಲಾಯಿದ ಬಿಂಬ, ಮಾಲೆ ಪಟಾಕಿ, ಪುದ್ದು ಕೊಡ್ತರ್ ಇತ್ಯಾದಿ ತುಳು ಪುಸ್ತಕಗಳನ್ನು ರಚಿಸಿದ್ದಾರೆ.
ಧಾರವಾಡದ ದ.ರಾ.ಬೇಂದ್ರೆ ಪ್ರಶಸ್ತಿ, ಫ.ಶಿ.ಭಾಂಡಗೆ ಪ್ರಶಸ್ತಿ, ರಂಗಭೂಮಿ ನಾಟಕ ರಚನಾ ಪ್ರಶಸ್ತಿ, ಎರಡು ಬಾರಿ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎರಡು ಸಲ ರತ್ನವರ್ಮ ಹೆಗ್ಗಡೆ ನಾಟಕ ರಚನಾ ಪ್ರಶಸ್ತಿಗಳನ್ನು ಪಡೆದಿರುತ್ತಾರೆ ಎಂದು ನಮ ತುಳುವೆರ್ ಕಲಾ ಸಂಘಟನೆ (ರಿ) ಇದರ ಅಧ್ಯಕ್ಷರಾದ ಸುಕುಮಾರ್ ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಣಿಪುರ ಸರಕಾರಿ ಸಂಯುಕ್ತ ಪ್ರೌಢಶಾಲೆ ವಿವೇಕ ಕೊಠಡಿ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ
ಮಣಿಪುರ : ಸರಕಾರಿ ಸಂಯುಕ್ತ ಪ್ರೌಢ ಶಾಲೆ ಮಣಿಪುರದ ವಿವೇಕ ಕೊಠಡಿ ನಿರ್ಮಾಣಕ್ಕೆ ರೂ 32.80 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಉದ್ಘಾಟನೆಯನ್ನು ಇಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಮಣಿಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚೈತ್ರಾ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷರಾದ ರಮೇಶ್ ಪೂಜಾರಿ, ಸದಸ್ಯರಾದ ಮಹಮ್ಮದ್ ಷರೀಫ್, ಗೋವಿಂದ ಭಟ್, ಜಾನ್ ಸಿಕೈರಾ, ಹಾಜಿ ಹಸನ್ ಶೇಖ್ ಅಹಮ್ಮದ್, ಬಿಂದು ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯಲ್ಲಮ್ಮ, ಪೌಢಶಾಲಾ ಮುಖ್ಯೋಪಾಧ್ಯಾಯರಾದ ರೂಪರೇಖಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಜಯಂತಿ ಉಪಸ್ಥಿತರಿದ್ದರು.

ಹೆಬ್ರಿ : ಬೈಕ್ಗೆ ಕಾರು ಡಿಕ್ಕಿಯಾದ ಪರಿಣಾಮ ಸವಾರ ಮೃತಪಟ್ಟ ಘಟನೆ ವರಂಗ ಗ್ರಾಮದಲ್ಲಿ ಸಂಭವಿಸಿದೆ.

ಪಳ್ಳಿ ಗ್ರಾಮದ ವಿಶ್ವನಾಥ ಎಂಬವರು ಮೃತ ದುರ್ದೈವಿ. ಇವರು ರವಿ ಎಂಬವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಹೆಬ್ರಿಯಿಂದ ಅಜೆಕಾರು ಕಡೆಗೆ ಬರುತ್ತಿರುವಾಗ ವರಂಗ ಗ್ರಾಮದ ಸೇತುವೆಯಿಂದ ಸ್ವಲ್ಪ ಮುಂದೆ ತಲುಪುವಾಗ ಅಜೆಕಾರು ಕಡೆಯಿಂದ ಹೆಬ್ರಿ ಕಡೆಗೆ ಸಾಗುತ್ತಿದ್ದ ಆಲ್ಟೋ ಕಾರು ಡಿಕ್ಕಿಯಾಗಿದೆ. ಪರಿಣಾಮವಾಗಿ ಸವರಾರಿಬ್ಬರು ರಸ್ತೆಗೆ ಬಿದ್ದು, ಗಾಯಗೊಂಡಿದ್ದರು. ವಿಶ್ವನಾಥ ಅವರು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದು, ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ಪರೀಕ್ಷಿಸಿ ವಿಶ್ವನಾಥ ಅವರು ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತ್ರೇಸಿಯಮ್ಮ ಎಂಬವರೂ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾರದ ಬಳಿಕ ಸಿಕ್ಕಿತು ತಿಪಟೂರು ಯುವಕನ ಮೃತದೇಹ; ಬೀಜಾಡಿಯಲ್ಲಿ ಸಮುದ್ರಪಾಲಾಗಿದ್ದ ಯುವಕ
ಕುಂದಾಪುರ : ಕಳೆದ ಬುಧವಾರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಸಮುದ್ರ ತೀರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ತುಮಕೂರು ಮೂಲದ ಯುವಕನ ಶವ ಇಂದು ಬೆಳಿಗ್ಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಮೃತ ಯುವಕನನ್ನು ತುಮಕೂರು ಜಿಲ್ಲೆಯ ತಿಪಟೂರಿನ ಟಿ.ಆರ್. ಯೋಗೀಶ್ (23) ಎನ್ನಲಾಗಿದೆ. ಕಳೆದ ಬುಧವಾರ (ಜೂನ್ 19) ರಂದು ಸಂಜೆ 6.45ರ ಸುಮಾರಿಗೆ ಕೋಟೇಶ್ವರ ಸಮೀಪದ ದಾರಸ್ ಮನೆ ಸಮೀಪದ ಬೀಚ್ಗೆ ಯೋಗೀಶ್ ಹಾಗೂ ಸಂದೀಪ್ ವಿಹಾರಕ್ಕೆಂದು ಬಂದಿದ್ದರು. ಈ ವೇಳೆ ಯೋಗೀಶ್ ನೀರಿಗಿಳಿದಿದ್ದಾರೆ. ಬುಧವಾರ ಸಂಜೆ ವೇಳೆಗೆ ಮಳೆ ಜಾಸ್ತಿ ಇದ್ದುದಲ್ಲದೆ, ಕಡಲ ಅಲೆಗಳ ಅಬ್ಬರ, ಗಾಳಿಯ ವೇಗವೂ ತುಸು ಜೋರಾಗಿಯೇ ಇತ್ತು. ಅಲೆಯಬ್ಬರಕ್ಕೆ ಯೋಗೀಶ್ ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ಕಂಡ ಜತೆಗಿದ್ದ ಸಂದೀಪ್ ಅವರು ಯೋಗೀಶ್ನನ್ನು ರಕ್ಷಿಸಲು ಪ್ರಯತ್ನಿಸಿದ್ದು, ಈ ವೇಳೆ ಆತ ಸಹ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗುವ ಅಪಾಯವನ್ನು ಅರಿತ ಅಲ್ಲಿದ್ದ ಸ್ಥಳೀಯರು ಸಂದೀಪ್ನನ್ನು ರಕ್ಷಿಸಿದ್ದಾರೆ. ಆದರೆ ಯೋಗೀಶ್ ಮಾತ್ರ ಸಮುದ್ರದ ನೀರಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ನಂದಕುಮಾರ್, ನಗರ ಠಾಣಾ ಎಸ್ಐ ಪ್ರಸಾದ್ ಕುಮಾರ್ ಹಾಗೂ ಪೊಲೀಸ್ ಸಿಬಂದಿ ಹಾಗೂ ಕರಾವಳಿ ಕಾವಲು ಪಡೆಯ ಸಿಬಂದಿ ಭೇಟಿ ನೀಡಿ, ಯುವಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಆದರೆ ರಾತ್ರಿಯಾಗಿದ್ದರಿಂದ ಸ್ಥಗಿತಗೊಳಿಸಲಾಯಿತು. ಇದಾದ ಬಳಿಕ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಯೋಗೀಶ್ ಮೃತದೇಹ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಘಟನೆ ನಡೆದು ಏಳನೇ ದಿನಕ್ಕೆ ಯೋಗೀಶ್ ಮೃತ ದೇಹ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಕುಮಾರಸ್ವಾಮಿ ಚನ್ನಪಟ್ಟಣ ನೋಡೋದಕ್ಕೆ ಮೊದಲೇ ನಾನು ನೋಡಿದ್ದೇನೆ – ಡಿ.ಕೆ.ಶಿ. ಟಾಂಗ್
ಮಂಗಳೂರು : ಚೆನ್ನಪಟ್ಟಣಕ್ಕೆ ನಾನು ಏನೂ ಮಾಡಿಲ್ಲವೆಂದು ಕುಮಾರಸ್ವಾಮಿಯವರಿಗೇನು ಗೊತ್ತು. ಅವರು ಚನ್ನಪಟ್ಟಣ ನೋಡೋದಕ್ಕೆ ಮೊದಲೇ ನಾನು ನೋಡಿದ್ದೇನೆ. ಅವರು ಬಹಳ ತಡವಾಗಿ ರಾಜಕೀಯಕ್ಕೆ ಬಂದವರು. ನಾನು 1985ಕ್ಕೆ ಲೋಕಸಭಾ ಚುನಾವಣೆ ಎದುರಿಸಿವನು. ಅವರು 1995ರ ಬಳಿಕ ರಾಜಕೀಯ ಪ್ರವೇಶಿಸಿದವರು. ಅವರಿಗಿಂತ 10ವರ್ಷಕ್ಕಿಂತ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ನಾನು ಅದೇ ಜಿಲ್ಲೆಯವನು ಎಂದು ಕುಮಾರಸ್ವಾಮಿಯವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.
ಚನ್ನಪಟ್ಟಣ ಉಪಚುನಾವಣೆ ಬಗ್ಗೆ ನನ್ನ ತಮ್ಮ ಡಿ.ಕೆ.ಸುರೇಶ್ಗೆ ಆಸಕ್ತಿಯಿಲ್ಲ. ಜನರು ನಮಗೆ ರೆಸ್ಟ್ ತೆಗೆದುಕೊಳ್ಳುದಕ್ಕೆ ಹೇಳಿದ್ದಾರೆ. ಆದರೆ ಪಾರ್ಟಿ ಕೆಲಸ ಮಾಡಬೇಕೆಂಬ ಆಸೆಯಿದೆ. ನಮಗೆ 85ಸಾವಿರ ಮಂದಿ ಮತಕೊಟ್ಟಿದ್ದಾರೆ. ನಮ್ಮನ್ನು ನಂಬಿದವರ ಬಿಡುವುದಕ್ಕೆ ಆಗೋಲ್ಲ. ದೇವರು ನಮಗೆ ಅಧಿಕಾರ ಕೊಟ್ಟಿದ್ದಾರೆ. 136 ಸೀಟ್ ಕೊಟ್ಟಿದ್ದಾರೆ. ಅದನ್ನು ಉಳಿಸಬೇಕು. ಚನ್ನಪಟ್ಟಣ ಜನಕ್ಕೆ ಏನೂ ಆಗಿಲ್ಲ ಎಂಬ ಭಾವನೆಯಿದೆ. ಅವರಿಗೆ ಅಳಿಲು ಸೇವೆ ಮಾಡೋಣ ಎಂದು ಇದ್ದೇವೆ. ನಾವು ಅಧಿಕಾರದಲ್ಲಿದ್ದಾಗ ಮಾಡಿದ್ದೇವೆ. ಇದೀಗ ರೈಟ್ ಟೈಮ್ ಏನೋ ಸಹಾಯ ಮಾಡೋಣ ಎಂದಿದ್ದೇವೆ ಎಂದರು.
ಹೆಚ್ಚಿನ ಡಿಸಿಎಂ ಹುದ್ದೆ ಕೇಳುವ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೀವು ದಿನಾಲೂ ನ್ಯೂಸ್ ಮಾಡುತ್ತೀರಲ್ಲ. ಇದರಿಂದ ಖುಷಿ ಆಗುವವರಿಗೆ ಆಗಲಿ. ಖುಷಿ ಪಡುವವರನ್ನು ನಾನೇಕೆ ಬೇಡ ಅನ್ನಲ್ಲಿ. ಯಾರು ಏನು ಬೇಕಾದರೂ ಬೇಡಿಕೆ ಮಾಡಲಿ. ಪಾರ್ಟಿ ಯಾರಿಗೆ ಉತ್ತರ ಕೊಡಬೇಕೋ ಕೊಡುತ್ತದೆ ಎಂದರು.
ನನ್ನ ಮೇಲಿನ ದ್ವೇಷಕ್ಕೆ ಬಳ್ಳಾರಿಯಲ್ಲಿ ರಾಜ್ಯಸರಕಾರ ಪರ್ಮಿಷನ್ ನೀಡುತ್ತಿಲ್ಲ ಎಂದು ಕುಮಾರಸ್ವಾಮಿಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಮೈನಿಂಗ್ ಬಗ್ಗೆ ಹೆಚ್ಡಿಕೆಗೆ ಏನು ಮಾಹಿತಿ ಇದೆಯೋ ಗೊತ್ತಿಲ್ಲ. ನನಗಂತೂ ಏನೂ ಗೊತ್ತಿಲ್ಲ ಎಂದು ಹೇಳಿದರು.
ಕುಕ್ಕೆ ಸುಬ್ರಹ್ನಣ್ಯ ಕ್ಷೇತ್ರಕ್ಕೆ ಆಗಮಿಸಿರುವ ಬಗ್ಗೆ ಮಾತನಾಡಿದ ಡಿಕೆಶಿ, ನಾವು ಹಿಂದೂ ಧರ್ಮದವರು. ನಮ್ಮ ರಾಜ್ಯದಲ್ಲಿ ಎಲ್ಲಾ ಸಂಸ್ಕೃತಿಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಅವರವರ ನಂಬಿಕೆ ಪ್ರಕಾರ ಅವರು ಪ್ರಾರ್ಥಿಸುತ್ತಾರೆ. ಬಹಳ ದಿನದಿಂದ ಸುಬ್ರಹ್ಮಣ್ಯಕ್ಕೆ ಹೋಗಬೇಕೆಂಬ ಆಸೆಯಿತ್ತು. ಇಂದು ಕುಟುಂಬ ಸಹಿತ ಹೋಗುತ್ತಿದ್ದೇನೆ ಎಂದು ಹೇಳಿದರು.
ಕುಟುಂಬ ಸಹಿತರಾಗಿ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ ಅವರು ರಸ್ತೆ ಮಾರ್ಗವಾಗಿ ಕುಕ್ಕೆ ಶ್ರೀಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದರು. ಸಂಜೆ ವೇಳೆಗೆ ಶ್ರೀ ಕ್ಷೇತ್ರದಲ್ಲಿ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.
ಕಾಪು : ಕಾಪು ವಿಧಾನಸಭಾ ಕ್ಷೇತ್ರದ ಕಾಪು ಪುರಸಭಾ ವ್ಯಾಪ್ತಿಯ ಕಲ್ಯಾ ಹಾಗೂ ದಂಡತೀರ್ಥ ವಾರ್ಡಿನ ರಸ್ತೆ ಬದಿಯಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗುತ್ತಿರುವ ಬಗ್ಗೆ ಸ್ಥಳೀಯರು ಶಾಸಕರ ಗಮನಕ್ಕೆ ತಂದಿದ್ದು ಸ್ಥಳೀಯರ ಮನವಿಯಂತೆ ಇಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಕಾಪು ಪುರಸಭಾ ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚರಂಡಿಗಳ ಸಮರ್ಪಕ ನಿರ್ವಹಣೆ ಮಾಡದೇ ಇರುವುದರಿಂದ ಮಳೆ ನೀರು ರಸ್ತೆಯ ಮೂಲಕ ಹರಿದು ಮನೆಗಳಿಗೆ ನುಗ್ಗುತ್ತಿದ್ದು ಚರಂಡಿಗಳ ಹೂಳೆತ್ತಿ ಚರಂಡಿಯ ನೀರು ಸರಾಗವಾಗಿ ಹರಿಯುವಂತೆ ಮಾಡಲು ತಕ್ಷಣದಲ್ಲಿ ಕ್ರಮ ವಹಿಸುವಂತೆ ಪುರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಸುರೇಶ ದೇವಾಡಿಗ, ಲತಾ ದೇವಾಡಿಗ, ಕಾಪು ಪುರಸಭೆಯ ಮುಖ್ಯಾಧಿಕಾರಿಗಳಾದ ನಾಗರಾಜ್, ಅಭಿಯಂತರರಾದ ನಯನತಾರ ಹಾಗೂ ಸ್ಥಳೀಯ ಉಪಸ್ಥಿತರಿದ್ದರು.
ಉಡುಪಿ : ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಶ್ರೀ ಕೃಷ್ಣಾನುಗ್ರಹ ಮಕ್ಕಳ ಕೇಂದ್ರ ಮಮತೆಯ ತೊಟ್ಟಿಲಿನಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಮೂಳೆ ರೋಗ ತಜ್ಞ ಹಾಗೂ ಸಂಸ್ಥೆಯ ಅಧ್ಯಕ್ಷ ಡಾ.ಉಮೇಶ್ ಪ್ರಭು, ಪರಿಸರವನ್ನು ಚೆನ್ನಾಗಿ ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ಗಿಡಗಳನ್ನು ನೆಟ್ಟು ಪಾಲನೆ ಮಾಡಬೇಕು ಈ ಸಂಸ್ಥೆಯಲ್ಲಿ ಈ ರೀತಿಯ ಕಾರ್ಯಕ್ರಮ ಮೊದಲಾಗಿ ನಡೆಯುತ್ತಿದೆ ಎಂದರು.
ಕಸಾಪ ಉಡುಪಿ ತಾಲೂಕು ಗೌರವ ಕಾಯ೯ದಶಿ೯ ಜನಾರ್ದನ್ ಕೊಡವೂರು, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಪ್ರದಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ನಿಕಟ ಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ., ಉಪಾಧ್ಯಕ್ಷ ರಘುಪತಿ ರಾವ್, ಕಸಾಪ ಉಡುಪಿ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸ್ವಾಮಿ ಚಿಕ್ಕ ಮಠ, ಕರವೇ ಉಡುಪಿ ಜಿಲ್ಲಾ ಸಂಚಾಲಕ ಪ್ರಭಾಕರ ಪೂಜಾರಿ, ಕೃಷ್ಣಾನುಗ್ರಹ ಮಕ್ಕಳ ಕೇಂದ್ರದ ಮುಖ್ಯಸ್ಥ ಉದಯ್ ಕುಮಾರ್, ಧನ್ವಂತರಿ ನರ್ಸಿಂಗ್ ಕಾಲೇಜಿನ ವಿದ್ಯಾಥಿ೯ಗಳು ಹಾಗು ರೋಟರಾಕ್ಟ್ ಕ್ಲಬ್ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಕಾಂತ್ ಕೆ.ಎನ್ ಸ್ವಾಗತಿಸಿದರು. ವಿಷ್ಣುಪ್ರಸಾದ್ ಪಾಡಿಗಾರು ನಿರೂಪಿಸಿದರು.
ರಾಘವೇಂದ್ರ ಪ್ರಭು, ಕರ್ವಾಲು ವಂದಿಸಿದರು. ಡಾ। ಶ್ರೀಪತಿ ರಾವ್ ಪ್ರಾರ್ಥಿಸಿದರು ಈ ಸಂದಭ೯ದಲ್ಲಿ ಸಂಸ್ಥೆಯ ಆವರಣದಲ್ಲಿ ವಿವಿಧ ಹಣ್ಣಿನ ಸಸ್ಯಗಳನ್ನು ನೆಡಲಾಯಿತು. ಅದೇ ರೀತಿ ಗಿಡಗಳನ್ನು ವಿತರಿಸಲಾಯಿತು.
ಉಡುಪಿ : ಭಾರತೀಯ ದಂಡ ಕ್ರಿಯಾ ಸಂಹಿತೆ ಬದಲಾಗಿ ಜಾರಿಗೊಳ್ಳುತ್ತಿರುವ ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಿಂದ ಪೊಲೀಸರಿಗೆ ಹೆಚ್ಚಿನ ಅಧಿಕಾರ ದೊರೆಯಲಿದೆ. ಇದರಿಂದ ಸಂತ್ರಸ್ತರು ನ್ಯಾಯ ವಂಚಿತರಾಗಲಿದ್ದಾರೆ. ಇದು ಸಂವಿಧಾನ ನಮಗೆ ನೀಡಿರುವ ನ್ಯಾಯ ಪಡೆಯುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಉಡುಪಿಯ ಹಿರಿಯ ನ್ಯಾಯವಾದಿ ಎಂ. ಶಾಂತಾರಾಮ್ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ವಕೀಲರ ಸಂಘ, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಜೂ.24ರಂದು ಸೋಮವಾರ ಹಮ್ಮಿಕೊಳ್ಳಲಾದ ಸಂವಾದ ಕಾರ್ಯಕ್ರಮದಲ್ಲಿ ಭಾರತೀಯ ದಂಡ ಕ್ರಿಯಾ ಸಂಹಿತೆ ಬದಲಾಗಿ ಜಾರಿಗೊಳ್ಳುತ್ತಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಇತರ ಎರಡು ಕಾನೂನುಗಳ ಕುರಿತು ಅವರು ಮಾತನಾಡುತಿದ್ದರು.
ಬ್ರಿಟೀಷರ ಕಾಲದಲ್ಲಿ ಜಾರಿಗೆ ಬಂದ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರೋಸಿಜರ್ ಕೋಡ್(ಸಿಆರ್ಪಿಸಿ), ಭಾರತ ಸಾಕ್ಷ ಅಧಿನಿಯಮ(ಇಂಡಿಯನ್ ಎವಿಡೆನ್ಸ್ ಆ್ಯಕ್ಟ್) ತುಂಬಾ ಪ್ರಮುಖವಾದ ಕಾನೂನುಗಳು. ಇದುವೇ ನಿಜವಾದ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್. ಈ ಮೂರು ಕಾನೂನುಗಳು ರತ್ನಗಳು ಇದ್ದಂತೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಹೊಸ ಕಾನೂನು ಯಾವ ಉದ್ದೇಶಕ್ಕೆ ತರಲಾಗಿದೆ ಎಂಬುದು ಅರ್ಥ ಆಗುತ್ತಿಲ್ಲ ಎಂದರು.
ಭಾರತೀಯ ದಂಡ ಕ್ರಿಯಾ ಸಂಹಿತೆ ಕಾನೂನುಗಳನ್ನು ಬದಲಾಯಿಸುವಂತೆ ಜನರಿಂದ ಯಾವುದೇ ಒತ್ತಾಯಗಳು ಬಂದಿಲ್ಲ ಮತ್ತು ಯಾವುದೇ ಪಕ್ಷಗಳ ಪ್ರಣಾಳಿಕೆಯಲ್ಲೂ ಆ ಬೇಡಿಕೆ ಇರಲಿಲ್ಲ. ಆದರೂ ಏಕಾಏಕಿ ಈ ಹೊಸ ಕಾನೂನುಗಳನ್ನು ಜನರ ಮೇಲೆ ಏರಲಾಗುತ್ತಿದೆ ಎಂದ ಅವರು, ಕಾಲಕ್ಕೆ ತಕ್ಕಂತೆ ಕಾನೂನು ಬದಲಾಗಬೇಕು. ಅದರಂತೆ ಹಲವು ಕಾನೂನುಗಳಿಗೆ ತಿದ್ದುಪಡಿ ಕೂಡ ಆಗಿದೆ. ಆದರೆ ಇಡೀ ಕಾನೂನುಗಳನ್ನೇ ಬದಲಾಯಿಸುವ ಅಗತ್ಯ ಇದೆಯೇ ಎಂಬುದು ಎಲ್ಲರ ಪ್ರಶ್ನೆಯಾಗಿದೆ ಎಂದು ಅವರು ತಿಳಿಸಿದರು.
ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರ ನಾಥ್ ಶಾನುಭೋಗ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ಮೈಕಲ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.