ಪುತ್ತೂರು : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಡಿ.4 ರಂದು ಹಿಂದೂ ಹಿತರಕ್ಷಣಾ ಸಮಿತಿಯಿಂದ ಮಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗೆ ವಿಶ್ವಹಿಂದೂ ಪರಿಷತ್ ಬೆಂಬಲ ನೀಡಲಿದ್ದು, ಪುತ್ತೂರಿನಿಂದ 2 ಸಾವಿರ ಮಂದಿ ಮಂಗಳೂರಿಗೆ ತೆರಳುವ ನಿರೀಕ್ಷೆಯಿದೆ ಎಂದು ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲೆಯ ಅಧ್ಯಕ್ಷ ಡಾ. ಕೃಷ್ಣಪ್ರಸನ್ನ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳನ್ನೇ ಗುರಿಯಾಗಿಟ್ಟುಕೊಂಡು ಇಸ್ಲಾಂ ಮೂಲಭೂತವಾದಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಹಿಂದೂಗಳ ಹಕ್ಕಿಗಾಗಿ ಹೋರಾಟ ಮಾಡಿದ ಇಸ್ಕಾನ್ ಸ್ವಾಮೀಜಿ ಚಿನ್ಮೋಯ್ ಕೃಷ್ಣದಾಸ್ ಅವರನ್ನು ಸುಳ್ಳು ಆರೋಪದಲ್ಲಿ ಬಂಧಿಸಲಾಗಿದೆ. ಅವರ ಆರೋಗ್ಯ ವಿಚಾರಿಸಲು ಬಂದ ಇಬ್ಬರು ಸ್ವಾಮಿಜೀಗಳನ್ನು ವಿನಾಕಾರಣ ಬಂಧಿಸಿದ್ದಾರೆ. ಈ ಎಲ್ಲಾ ಕೃತ್ಯಗಳನ್ನು ವಿಹಿಂಪ ಖಂಡಿಸುತ್ತದೆ.
ಈ ನಿಟ್ಟಿನಲ್ಲಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಡಿ.4 ರಂದು ಬೆಳಿಗ್ಗೆ ಮಂಗಳೂರು ಜ್ಯೋತಿ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದ ಕಚೇರಿಯ ತನಕ ಪ್ರತಿಭಟನೆ ಮೆರವಣಿಗೆ ನಡೆಯಲಿದೆ. ಈ ಪ್ರತಿಭಟನೆಗೆ ವಿಹಿಂಪ ಬೆಂಬಲಿಸಲಿದ್ದು ಪುತ್ತೂರಿನ ತೆಂಕಿಲ ಬಳಿ ಸೇರಿ ಅಲ್ಲಿಗೆ 2 ಸಾವಿರ ಮಂದಿ ತೆರಳಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ವಿಹಿಂಪ ಜಿಲ್ಲಾ ಕೋಶಾಧಿಕಾರಿ ಮಾಧವ ಪೂಜಾರಿ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಬಜರಂಗದಳ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲ್, ವಿಹಿಂಪ ನಗರ ಅಧ್ಯಕ್ಷ ದಾಮೋದರ್ ಪಾಟಾಳಿ ಉಪಸ್ಥಿತರಿದ್ದರು.