ಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ಶೀತಲ್ ರಾವ್ ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆ ಯಾಗಿರುತ್ತಾರೆ.
ಈಕೆ ಉಡುಪಿಯ ಪ್ರದೀಪ್ ಹಾಗು ಗೀತಾಂಜಲಿ ದಂಪತಿಗಳ ಪುತ್ರಿ. ನೃತ್ಯನಿಕೇತನ (ರಿ.) ಕೊಡವೂರು ಸಂಸ್ಥೆಯ ಗುರುಗಳಾದ ಕೊಡವೂರು ಸುಧೀರ್ ರಾವ್ ಹಾಗೂ ಮಾನಸಿ ಸುಧೀರ್ರವರ ಶಿಷ್ಯೆಯಾಗಿರುತ್ತಾರೆ.

ಉಡುಪಿ : ಕೊಡವೂರು ನಿವಾಸಿಯಾದ ಪೂಜಾ ಗೋಪಾಲ್ ಪೂಜಾರಿಯವರು ಡಿಪಾರ್ಟ್ಮೆಂಟ್ ಆಫ್ ಫಾರ್ಮಸಿ ಪ್ರಾಕ್ಟೀಸ್, ಮಣಿಪಾಲ್ ಕಾಲೇಜ್ ಆಫ್ ಫಾರ್ಮಸಿಟಿಕಲ್ ಸೈನ್ಸಸ್, ಮಾಹೆ ಮಾಣಿಪಾಲದ ಸಹ ಪ್ರಾಧ್ಯಾಪಕರಾದ ಡಾ. ಗಿರೀಶ್ ತುಂಗ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಡೆವಲಪ್ಮೆಂಟ್ ಆಫ್ ಸ್ಟ್ರಾಟೆಜಿ ಟು ಇಂಪ್ರೂವ್ ದಿ ರೇಟ್ ಆಫ್ ಮೆಟಾಬಾಲಿಕ್ ಮಾನಿಟರಿಂಗ್ ಪೇಶೆಂಟ್ಸ್ ಆನ್ ಆಂಟಿಸೈಕೋಟಿಕ್ ಮೆಡಿಕೇಷನ್ಸ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಾಹೆ ಮಣಿಪಾಲ ವಿಶ್ವವಿದ್ಯಾನಿಲಯವು ಪಿಎಚ್ಡಿ ಪದವಿ ಪ್ರಧಾನ ಮಾಡಿದೆ.
ಪೂಜಾ ಗೋಪಾಲ್ ಪೂಜಾರಿ ಲಲಿತಾ ಹಾಗು ಗೋಪಾಲ್ ಪೂಜಾರಿ ಇವರ ಪುತ್ರಿ.
ಮಂಗಳೂರು : ನಗರದ ಪಾಂಡೇಶ್ವರದ ಫೊರಮ್ ಮಾಲ್ನಲ್ಲಿರುವ ಶೆರ್ಲಾಕ್ ಪಬ್ನಲ್ಲಿ ಯುವತಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿ ಚುಡಾಯಿಸಿದ ನಾಲ್ವರು ಕಾಮುಕರನ್ನು ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.
ಪುತ್ತೂರು ನೆಹರೂ ನಗರ ನಿವಾಸಿಗಳಾದ ವಿನಯ್(33), ಮಹೇಶ್(27), ಪುತ್ತೂರು ಪಡ್ನೂರು ನಿವಾಸಿಗಳಾದ ಪ್ರಿತೇಶ್(34), ನಿತೇಶ್(33) ಬಂಧಿತ ಕಾಮುಕರು.
ಆ.3ರಂದು ರಾತ್ರಿ 10.30ಸುಮಾರಿಗೆ 22ವರ್ಷದ ಸಂತ್ರಸ್ತ ಯುವತಿ ತನ್ನ ಸ್ನೇಹಿತೆಯೊಂದಿಗೆ ಶೆರ್ಲಾಕ್ ಪಬ್ಗೆ ಬಂದಿದ್ದರು. ಆಕೆಯೊಂದಿಗೆ ಈ ನಾಲ್ವರು ಅಸಭ್ಯವಾಗಿ ವರ್ತಿಸಿ ಮಾನಭಂಗ ಮಾಡುವ ಉದ್ದೇಶದಿಂದ ಎದೆಯ ಭಾಗಕ್ಕೆ ಕೈ ಹಾಕಿದ್ದಾರೆ. ಈ ಬಗ್ಗೆ ವಿಚಾರಿಸಿದ ಮತ್ತೊಬ್ಬಾಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೀಯರ್ ಬಾಟ್ಲಿಯಲ್ಲಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಬಗ್ಗೆ ಸಂತ್ರಸ್ತೆ ನೀಡಿರುವ ದೂರಿನಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ನಾಲ್ವರಿಗೂ ನ್ಯಾಯಾಂಗ ಬಂಧನ ವಿಧಿಸಿದೆ.
ಉಡುಪಿ : ಹಿರಿಯ ಪತ್ರಕರ್ತ, ದೂರದರ್ಶನ ಉಡುಪಿ ಜಿಲ್ಲಾ ವರದಿಗಾರ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ ಇಂದು ರಾತ್ರಿ ಹೃದಯಾಘಾತದಿಂದ ಕಲ್ಮಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಇವರು ಪತ್ನಿ, ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿ, ಮಲ್ಪೆ ಬಿಲ್ಲವ ಸಂಘ, ಎಸ್.ಕೆ.ಪಿ.ಎ. ಸಹಿತ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರು.
ಇವರ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಉಡುಪಿ : ಕಾಂಗ್ರೆಸ್ಸಿನ ದಬ್ಬಾಳಿಕೆ ರಾಜಕಾರಣ ವಿರೋಧಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಲಾಯಿತು.
ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ಆಧಾರ ರಹಿತ ಆರೋಪದಲ್ಲಿ ತೊಡಗಿದೆ. ಪರಶುರಾಮ ಪ್ರತಿಮೆ ನಿರ್ಮಿಸಿದ ಶಿಲ್ಪಿಯ ಬೆಂಗಳೂರಿನ ಮನೆಗೆ ತೆರಳಿ ಕಾಂಗ್ರೆಸ್ನ ಮುಖಂಡರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ದೂರಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಕರಾವಳಿಯ ಸೃಷ್ಟಿಕೃತ ಪರಶುರಾಮನ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಿದರೆ ಕಾಂಗ್ರೆಸ್ ನವರಿಗೆ ಏಕೆ ಹೊಟ್ಟೆಉರಿ? ದೇಶದ ಇತಿಹಾಸ, ರಾಮ ದೇವರು, ಹಿಂದುತ್ವವನ್ನು ಒಪ್ಪುವುದಿಲ್ಲ ಎಂಬುವುದು ಕಾಂಗ್ರೆಸನವರ ನಡುವಳಿಕೆಯಿಂದ ಪದೇ ಪದೇ ಸಾಬೀತಾಗುತ್ತಿದೆ. ಬೆಂಗಳೂರಿನಿಂದ-ಮೈಸೂರಿನವರೆಗೆ ನಡೆದ ಬಿಜೆಪಿ ಪಾದಯಾತ್ರೆಯಿಂದ ಕಾಂಗ್ರೆಸ್ನ ಹಗರಣಗಳು ಲೋಕಕ್ಕೆ ಗೊತ್ತಾಗಿದೆ. ಇದರಿಂದ ಕಾಂಗ್ರೆಸ್ನವರಿಗೆ ಭಯ ಶುರುವಾಗಿದೆ. ಹೀಗಾಗಿ ಅವರೇ ಸೃಷ್ಟಿಸಿರುವ ಪರಶುರಾಮ ಥೀಮ್ ಪಾರ್ಕ್ ಪ್ರಕರಣದ ತನಿಖೆಗೆ ವೇಗ ನೀಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರಕಾರದಲ್ಲಿ ಎಲ್ಲ ಸಾಧ್ಯತೆಗಳಿರುತ್ತದೆ. ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಅವರನ್ನು ಪೊಲೀಸ್ ಇಲಾಖೆಗೆ ನೇಮಕ ಮಾಡಿಕೊಂಡರು ಅಚ್ಚರಿ ಪಡಬೇಕಾಗಿಲ್ಲ. ಕಾಂಗ್ರೆಸ್ ಹಾಗೂ ಪೊಲೀಸ್ ಇಲಾಖೆ ಒಂದೇ ಆದ್ದರಿಂದ ಸ್ವಲ್ಪ ದಿನ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲಿ ಎನ್ನುವ ಕಾರಣಕ್ಕೆ ಉದಯಕುಮಾರ್ ಶೆಟ್ಟಿ ಅವರನ್ನು ನೇಮಕ ಮಾಡಿಕೊಂಡಿದ್ದಾರೋ ಏನು ಗೊತ್ತಿಲ್ಲ. ಅದರ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದರು.
ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್ ಮಾತನಾಡಿ, ಉದಯಕುಮಾರ್ ಶೆಟ್ಟಿ ಅವರಿಗೆ ಕಾರ್ಕಳದಲ್ಲಿ ಪರಶುರಾಮನ ಮೂರ್ತಿ ನಿರ್ಮಾಣ ಆಗಬೇಕಂತಿಲ್ಲ. ಅವರಿಗೆ ಬೇಕಿರುವುದು ರಾಜಕೀಯ ಲಾಭ ಅಷ್ಟೇ. ಅಯೋಧ್ಯೆಯ ರಾಮನ ಮೂರ್ತಿಯನ್ನು ವರ್ಷಾನುಗಟ್ಟಲೇ ಟೆಂಟ್ನಲ್ಲಿ ಇಟ್ಟ ಕಾಂಗ್ರೆಸ್ನವರು, ಇಂದು ಪರಶುರಾಮನ ಮೂರ್ತಿಯನ್ನು ಕಾರ್ಕಳ ಪೊಲೀಸ್ ಠಾಣೆಯ ಗೋಡೌನಲ್ಲಿ ಹಾಕಿದ್ದಾರೆ ಎಂದು ಆರೋಪಿಸಿದರು.
ಪರಶುರಾಮ ಮೂರ್ತಿ ಕೆತ್ತಿದ ಶಿಲ್ಪಿ ಕೃಷ್ಣ ನಾಯ್ಕ್ ಅವರ ಬೆಂಗಳೂರಿನ ಮನೆಗೆ ಹೋಗಿರುವ ಪೊಲೀಸರು ನಾಟಕ ಪ್ರಹಸನ ಮಾಡಿದ್ದಾರೆ. ಪೊಲೀಸರೊಂದಿಗೆ ಉದಯಕುಮಾರ್ ಶೆಟ್ಟಿ ಅವರು ಕೂಡ ಹೋಗಿದ್ದು, ಅವರ ನಿರ್ದೇಶನದಂತೆ ಅಲ್ಲಿ ಚಟುವಟಿಕೆ ನಡೆದಿದೆ. ಅವರಿಗೆ ತನಿಖಾ ಸಂಸ್ಥೆಯಲ್ಲಿ ಯಾವ ಜವಾಬ್ದಾರಿ ಇದೆ. ಸರಕಾರದಲ್ಲಿ ಯಾವ ಸ್ಥಾನ ಇದೆ ಎಂಬುವುದನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ್ ಶೆಟ್ಟಿ, ಮುಖಂಡರಾದ ಮಹಾವೀರ ಹೆಗ್ಡೆ, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಸಂಧ್ಯಾ ರಮೇಶ್, ಕಿರಣ್ ಕುಮಾರ್ ಮೊದಲಾದವರು ಇದ್ದರು.
ಮಂಗಳೂರು : ಮಂಗಳೂರು ಧಕ್ಕೆಯಿಂದ ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ಬೋಟ್ವೊಂದು ಸೋಮವಾರ ಬೆಳಗಿನ ಜಾವ ಸಮುದ್ರ ಮಧ್ಯೆ ಬೆಂಕಿಗಾಹುತಿಯಾದ ಘಟನೆ ವರದಿಯಾಗಿದೆ.
ಹುಸೈನ್ ಎಂಬವರ ಮಾಲಕತ್ವದ ಸಫವಿ ಹೆಸರಿನ ಬೋಟ್ ಬೆಂಕಿಗಾಹುತಿಯಾಗಿದೆ. ಇಂದು ಬೆಳಗಿನ ಜಾವ 3ರಿಂದ 4 ಗಂಟೆಯ ಅವಧಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ವೇಳೆ ಬೋಟ್ನಲ್ಲಿದ್ದ 10 ಮೀನುಗಾರರನ್ನು ಇನ್ನೊಂದು ಬೋಟ್ನಲ್ಲಿದ್ದವರು ರಕ್ಷಿಸಿದ್ದಾರೆ. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
“ರವಿವಾರ ಬೆಳಗ್ಗೆ 10 ಮಂದಿ ಮೀನುಗಾರರೊಂದಿಗೆ ನಮ್ಮ ಬೋಟ್ ಮೀನುಗಾರಿಕೆಗೆ ತೆರಳಿದ್ದು, ಸೋಮವಾರ ಬೆಳಗ್ಗಿನ ಹೊತ್ತು ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಧಕ್ಕೆಯಿಂದ ಸುಮಾರು 88 ನಾಟಿಕಲ್ ದೂರದಲ್ಲಿ ಬೋಟ್ ಮುಳುಗಿದೆ. ಜತೆಯಲ್ಲಿದ್ದ ಬೋಟ್ನವರು ಅವಘಡ ಗಮನಿಸಿ ಮೀನುಗಾರರನ್ನು ರಕ್ಷಿಸಿದ್ದಾರೆ” ಎಂದು ಬೋಟ್ ಮಾಲಕರು ಮಾಹಿತಿ ನೀಡಿದ್ದಾರೆ.
ಉಡುಪಿ : ಪರ್ಯಾಯ ಪುತ್ತಿಗೆ ಶ್ರೀಪಾದರು ಅಮೇರಿಕಾದ ಹೂಸ್ಟನ್ ಮಹಾನಗರದಲ್ಲಿ ಪುತ್ತಿಗೆ ಮಠದ ಶಾಖೆ ಮಾಡಿದ ನಂತರ ಅಲ್ಲಿ ನಿರಂತರ ದೇಸೀ ಚಟುವಟಿಕೆಗಳು ನಡೆಯುತ್ತಿವೆ. ಅಮೆರಿಕಾದ ಮಠದ ಮುಂಭಾಗದಲ್ಲಿರುವ ವಿಶಾಲ ಬಯಲಿನಲ್ಲಿ “ಶಾಂಭವಿ ವಿಜಯ” ಎಂಬ ಯಕ್ಷಗಾನ ಕಲಾ ಪ್ರದರ್ಶನ ಅದ್ಭುತವಾಗಿ ಮೂಡಿಬಂದು ಕಲಾರಸಿಕರ ಮನಸೂರೆಗೊಂಡಿತು.
ಖ್ಯಾತ ಕಲಾವಿದ ಪಟ್ಲ ಸತೀಶ್ ನೇತೃತ್ವದ ತಂಡದ ಕಲಾವಿದರು ಈ ಕಾರ್ಯಕ್ರಮವನ್ನು ಊರಿನಂತೆಯೇ ಅಮೆರಿಕಾದಲ್ಲೂ ಅಚ್ಚುಕಟ್ಟಾಗಿ ನಡೆಸಿ ಕೊಟ್ಟರು.
ಮಹಿಷಾಸುರನ ದೊಂದಿಯ ಆರ್ಭಟ, ದೇವಿಯ ಪರಾಕ್ರಮ ವೈಭವ, ಚಂಡೆಯ ಅಬ್ಬರ, ಈ ಎಲ್ಲದರೊಂದಿಗೆ ವೇಷಧಾರಿಗಳ ಕುಣಿತ. ಈ ಎಲ್ಲವೂ ಕಲಾರಸಿಕರಾಗಿ ಅಲ್ಲೇ ನೆಲಸಿದ್ದ ಅನಿವಾಸಿ ಭಾರತೀಯರನ್ನು ಮೈನವಿರೇಳಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಸುಮಾರು ಐನೂರಕ್ಕೂ ಹೆಚ್ಚು ಮಂದಿ ಬಯಲಿನಲ್ಲಿ ಸೇರಿ ಯಕ್ಷಗಾನವನ್ನು ನೋಡಿ ಆನಂದಿಸಿದರು.
ಬಂಟ್ವಾಳ : ಅನ್ಯಕೋಮಿನ ಯುವಕನೋರ್ವ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಘಟನೆ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಯಂಗಳದಲ್ಲಿ ನಡೆದಿದೆ.
ಅನ್ಯ ಕೋಮಿನ ಯುವಕನೋರ್ವ ವಿವಾಹಿತ ಮಹಿಳೆಯನ್ನು ಅಡ್ಡಗಟ್ಟಿ ನನಗೆ ನೀನು ಬೇಕು, ನಿನ್ನನ್ನು ಅನುಭವಿಸದೆ ಬಿಡುವುದಿಲ್ಲ ಎಂಬುವುದಾಗಿ ಹೇಳಿ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ದೂರನ್ನು ನೀಡಿದ್ದಾಳೆ.
ಆರೋಪಿಯನ್ನು ಕರಿಯಂಗಳ ನಿವಾಸಿ ಉಸ್ಮಾನ್ ಎಂಬಾತನ ಮಗ ತಸ್ಸೀಫ್ ಎಂದು ಗುರುತಿಸಲಾಗಿದೆ. ಈತ ಈ ಹಿಂದೆಯೂ ಕೂಡ ಕಿಟಕಿಯಲ್ಲಿ ಇಣುಕಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿವಾಹಿತ ಮಹಿಳೆಯೊಬ್ಬರು ತನ್ನ ಪುತ್ರಿಯನ್ನು ಟ್ಯೂಷನ್ಗೆ ಬಿಟ್ಟು ಮನೆಗೆ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿ ಎದೆಯ ಭಾಗಕ್ಕೆ ಕೈ ಹಾಕಿ ನೀನು ಸಿಗದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ : ಕಾರ್ಕಳದ ಬೈಲೂರು ಉಮಿಕ್ಕಳ ಬೆಟ್ಟದ ಮೇಲಿನ ಪರಶುರಾಮ ಥೀಂ ಪಾರ್ಕ್ ವಿವಾದ ಮತ್ತೆ ಸದ್ದು ಮಾಡಿದೆ. ನಕಲಿ ಪ್ರತಿಮೆ ಎನ್ನುವ ದೂರಿನ ಹಿನ್ನಲೆಯಲ್ಲಿ ಕಾರ್ಕಳ ನಗರ ಠಾಣೆ ಪೊಲೀಸರು ಪರಶುರಾಮ ಪ್ರತಿಮೆ ನಿರ್ಮಿಸಿದ ಕ್ರಿಷ್ ಆರ್ಟ್ ವರ್ಲ್ಡ್ ಮಾಲಕ ಕೃಷ್ಣ ನಾಯ್ಕ ಅವರಿಗೆ ಸೇರಿದ ಬೆಂಗಳೂರಿನ ಕೆಂಗೇರಿ ಗೋದಾಮಿನಲ್ಲಿ ಸ್ಥಳ ಮಹಜರು ನಡೆಸಿ ಮೂರ್ತಿಯ ಸೊಂಟದ ಮೇಲಿನ ಸುಮಾರು 9 ಟನ್ ತೂಕದ ಪ್ರತಿಮೆಯ ಬಿಡಿಭಾಗಗಳನ್ನು ವಶಕ್ಕೆ ಪಡೆದು ಕಾರ್ಕಳಕ್ಕೆ ತಂದಿದ್ದಾರೆ.
ಪೊಲೀಸರು ಸ್ಥಳ ತನಿಖೆಗೆ ತೆರಳಿದ ಸಂದರ್ಭ ಶಿಲ್ಪಿ ಕೃಷ್ಣ ನಾಯ್ಕ ಅವರು ಫೇಸ್ಬುಕ್ ಲೈವ್ ಬಂದು ಯಾವುದೇ ನೊಟೀಸ್ ನೀಡದೆ ಮೂರ್ತಿಯ ಭಾಗಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಬಿಡಿಭಾಗಗಳನ್ನು ಅಸುರಕ್ಷಿತವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದೆ. ಪರಶುರಾಮನ ಎರಡು ಕಾಲು ಬೆಟ್ಟದಲ್ಲಿದ್ದು, ಇನ್ನೆರಡು ಕಾಲು ಗೋದಾಮಿನಲ್ಲಿ ಪ್ರತ್ಯಕ್ಷವಾಗಿದೆ. ಹಾಗಾದರೆ ಎಷ್ಟು ಕಾಲು? ಎಂದು ಚರ್ಚೆ ನಡೆಯುತ್ತಿದೆ. ಮಾಜಿ ಸಚಿವ ಹಾಲಿ ಶಾಸಕ ಮತ್ತು ಪ್ರತಿಮೆ ನಿರ್ಮಾಣದ ರೂವಾರಿ ಸುನಿಲ್ ಕುಮಾರ್ ವಿರುದ್ಧ ಕಾಂಗ್ರೆಸ್ ಪಕ್ಷ ಮುಗಿಬಿದ್ದಿದ್ದು, ಇನ್ನೊಂದೆಡೆ
ಜಿಲ್ಲಾ ಬಿಜೆಪಿ ಸುನಿಲ್ ಕುಮಾರ್ ಪರ ಬ್ಯಾಟಿಂಗ್ ಮಾಡುತ್ತಿದೆ.
ಉಡುಪಿ : ಕರಾವಳಿಯ ಖಾಸಗಿ ಬಸ್ನ ಚಾಲಕ ಹಾಗೂ ನಿರ್ವಾಹಕರು ಮತ್ತೊಮ್ಮೆ ಮಾನವೀಯತೆ ಮೆರೆದ ಘಟನೆ ಉಡುಪಿಯಲ್ಲಿ ನಡೆದಿದ್ದು, ‘ನವೀನ್’ ಬಸ್ ಸಿಬಂದಿಗಳ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಅಸ್ವಸ್ಥಗೊಂಡ ಯುವತಿಗಾಗಿ ಬಸ್ಅನ್ನೇ ಆಸ್ಪತ್ರೆಗೆ ಕೊಂಡೊಯ್ದ ಚಾಲಕ ಹಾಗೂ ನಿರ್ವಾಹಕ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಆಗಸ್ಟ್ 5ರ ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು ಶಿರ್ವದಿಂದ ಉಡುಪಿಗೆ ‘ನವೀನ್’ ಬಸ್ಸಿನಲ್ಲಿ ಉಡುಪಿಗೆ ಬರುತ್ತಿದ್ದ ಯುವತಿ ಉಡುಪಿಯ ಹಳೆ ತಾಲ್ಲೂಕು ಕಚೇರಿಗೆ ಬರುತ್ತಿದ್ದಂತೆ ಬಸ್ಸಿನಲ್ಲೇ ವಾಂತಿ ಮಾಡಿ ಅಸ್ವಸ್ಥಗೊಂಡಿದ್ದಾಳೆ. ಕೂಡಲೇ ಎಚ್ಚೆತ್ತ ನವೀನ್ ಬಸ್ನ ಚಾಲಕ ಶಶಿಕಾಂತ್, ನಿರ್ವಾಹಕ ಸಲೀಂ ಬಸ್ಸನ್ನು ತಕ್ಷಣವೇ ಟಿಎಂಎ ಪೈ ಆಸ್ಪತ್ರೆಗೆ ಕೊಂಡೊಯ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ ಬಾಲಕಿಯ ಮನೆಯವರಿಗೆ ಮಾಹಿತಿ, ಮನೆಯವರು ಬರುವ ತನಕ ಯುವತಿಗೆ ಚಿಕಿತ್ಸೆಗೆ ಬಸ್ ಸಿಬಂದಿ ಸಹಕಾರ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಇದೇ ರೀತಿಯ ಮಾನವೀಯ ಕಾರ್ಯ ನಡೆದಿದ್ದು ಇದೀಗ ಉಡುಪಿಯಲ್ಲೂ ಅಂತಹುದೇ ಮಾನವೀಯ ನಡೆದಿದ್ದು ನವೀನ್ ಬಸ್ ಸಿಬಂದಿಗಳ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Maax News covers major news and events of Udupi district. This channel provides detailed reports on the political, social, economic, and cultural life of Udupi district.
Maax News, equipped with the most sophisticated studio in Udupi, assures people comprehensive news coverage.