ಉಡುಪಿ : ಉಚ್ಚಾಟನೆಗೊಂಡರೂ ಮಾಜಿ ಶಾಸಕ ರಘುಪತಿ ಭಟ್ಗೆ ಬಿಜೆಪಿ ಪಕ್ಷದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಂಡಾಯ ಎದ್ದಿರುವ ಭಟ್ ಅವರನ್ನು ಇತ್ತೀಚೆಗಷ್ಟೆ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿತ್ತು. ಇದೀಗ ಕರಾವಳಿಯಲ್ಲಿ ಮತ್ತೊಮ್ಮೆ ಬಿಜೆಪಿ ಜಯಭೇರಿ ಬಾರಿಸುತ್ತಿದ್ದಂತೆ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ವಿಜಯೀ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕೋಟ ಶ್ರೀನಿವಾಸ ಪೂಜಾರಿ, ದ.ಕ. ಕ್ಷೇತ್ರದ ಕ್ಯಾ. ಬ್ರಜೇಶ್ ಚೌಟ, ಶಿವಮೊಗ್ಗ ಕ್ಷೇತ್ರದ ಬಿ.ವೈ. ರಾಘವೇಂದ್ರ ಹಾಗೂ ಉತ್ತರ ಕನ್ನಡ ಕ್ಷೇತ್ರದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಾವೇರಿ ಕ್ಷೇತ್ರದ ಬೊಮ್ಮಾಯಿ, ಬೆಳಗಾವಿ ಕ್ಷೇತ್ರದ ಜಗದೀಶ್ ಶೆಟ್ಟರ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ರಘುಪತಿ ಭಟ್ ಅವರ ಪತ್ನಿ ಕೋಟ ಶ್ರೀನಿವಾಸ ಪೂಜಾರಿ ಅವರ ವಿಜಯದ ಬಳಿಕ ನಡೆದ ಸಂಭ್ರಮಾಚರಣೆಯಲ್ಲಿ ಮಹಿಳಾ ಕಾರ್ಯಕರ್ತೆಯರ ಜೊತೆ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
NewsDesk
ಮಂಗಳೂರು : ನಗರದ ರಸ್ತೆಯಲ್ಲಿ ನಮಾಝ್ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಹಾಕಿರುವುದಕ್ಕೆ ವಿಶ್ವ ಹಿಂದೂ ಪರಿಷತ್ ವಿಭಾಗ ಸಹಸಂಚಾಲಕ ಶರಣ್ ಪಂಪ್ವೆಲ್ ವಿರುದ್ಧ ದಾಖಲಾದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಶರಣ್ ಪಂಪ್ವೆಲ್ ವಿರುದ್ಧ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡಸಂಹಿತೆಯ ಕಲಂ 153(ಎ), 506 ರಂತೆ ಪ್ರಕರಣ ದಾಖಲಾಗಿತ್ತು. ಶರಣ್ ಪಂಪ್ವೆಲ್ ಪರ ನ್ಯಾಯವಾದಿ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.
ಮಂಗಳೂರು : ಮಂಗಳೂರಿನ ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಕಿಶೋರ್ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್–ಯುಜಿ) 720ಕ್ಕೆ 720 ಅಂಕ ಪಡೆಯುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅರ್ಜುನ್, ನೀಟ್ನಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಿದ್ದೆ, ಆದರೆ, ಪ್ರಥಮ ರ್ಯಾಂಕ್ ನಿರೀಕ್ಷಿಸಿರಲಿಲ್ಲ. ದೆಹಲಿಯ ಏಮ್ಸ್ನಲ್ಲಿ ವೈದ್ಯಕೀಯ ಶಿಕ್ಷಣ ಓದುವುದು ನನ್ನ ಕನಸಾಗಿತ್ತು. ಕಾಲೇಜು ವೇಳಾಪಟ್ಟಿಯನ್ನು ಚಾಚೂತಪ್ಪದೆ ಅನುಸರಿಸುತ್ತಿದ್ದೆ. ಯಾವುದೇ ಅನುಮಾನ ಇದ್ದರೂ ಉಪನ್ಯಾಸಕರು ಪರಿಹರಿಸುತ್ತಿದ್ದರು. ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯ ಓದು ಗುರಿ ಸಾಧನೆಗೆ ಸಹಕಾರಿಯಾಯಿತು ಎಂದರು.
ಅರ್ಜುನ್ ತಂದೆ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಫಾರ್ಮಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಿಶೋರ್ ಮತ್ತು ಸ್ತ್ರೀರೋಗ ತಜ್ಞೆ ಡಾ. ರಶ್ಮಿ ಅವರ ಪುತ್ರ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 99.8 ಅಂಕಗಳನ್ನು ಅರ್ಜುನ್ ಗಳಿಸಿದ್ದರು.
ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರೊ. ನರೇಂದ್ರ ಎಲ್. ನಾಯಕ್ ಪ್ರತಿಕ್ರಿಯಿಸಿ ಕಠಿಣ ಪರಿಶ್ರಮವೇ ಯಶಸ್ಸು ಎಂಬುದು ಎಕ್ಸ್ಪರ್ಟ್ ಕಾಲೇಜಿನ ಧ್ಯೇಯವಾಕ್ಯವಾಗಿದ್ದು, ಪರಿಶ್ರಮವಿದ್ದರೆ ಯಶಸ್ಸು ಖಂಡಿತ ಸಿಗುತ್ತದೆ. ವಿದ್ಯಾರ್ಥಿಯ ಶ್ರಮ, ಪಾಲಕರು, ಉಪನ್ಯಾಸಕರು, ಕಾಲೇಜಿನ ವಾತಾವರಣದಿಂದ ಇದು ಸಾಧ್ಯವಾಗಿದೆ ಎಂದರು.
ರಾಷ್ಟ್ರಮಟ್ಟದ ವೈದ್ಯಕೀಯ ಅರ್ಹತಾ ಪರೀಕ್ಷೆ ನೀಟ್ 2024: ನಿಖಿಲ್ ಬಿ ಗೌಡ 720ಕ್ಕೆ 710 ಅಂಕ
ಮೂಡುಬಿದಿರೆ : ರಾಷ್ಟ್ರಮಟ್ಟದ ವೈದ್ಯಕೀಯ ಅರ್ಹತಾ ಪರೀಕ್ಷೆ ನೀಟ್ 2024ರ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ನಿಖಿಲ್ ಬಿ ಗೌಡ 720 ಕ್ಕೆ 710ಅಂಕ ಪಡೆದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಕಾಲೇಜಿನ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದ್ದಾನೆ.
ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ, ನೀಟ್ ಸಂಯೋಜಕ ಡಾ. ಪ್ರಶಾಂತ್ ಹೆಗ್ಡೆ ಮತ್ತು ಉಪನ್ಯಾಸಕ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.
ಯಕ್ಷದ್ರುವ ಪಟ್ಲ ಫೌಂಡೇಶನ್ ವತಿಯಿಂದ ಯಕ್ಷಗುರು ಕಾಂತಾವರ ಮಹಾವೀರ ಪಾಂಡಿಯವರಿಗೆ ಕಲಾಗೌರವ ಪುರಸ್ಕಾರ
ಕಾರ್ಕಳ : ಮಂಗಳೂರಿನ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನವರು ಕೊಡಮಾಡಿದ ಪಟ್ಲ ಸಂಭ್ರಮದ 2024ರ ಸಾಲಿನ ಕಲಾ ಗೌರವ ಪುರಸ್ಕಾರವನ್ನು ಕಳೆದ ಮೇ 26ರಂದು ಅಡ್ಯಾರ್ ಗಾರ್ಡನ್ನಲ್ಲಿ ಪುತ್ತೂರು ಡಾ. ಶ್ರೀಧರ ಭಂಡಾರಿಯವರ ಸ್ಮರಣಾರ್ಥ ಗಣ್ಯರ ಸಮಕ್ಷಮ ಯಕ್ಷಗಾನ ಗುರು ಕಾಂತಾವರ ಮಹಾವೀರ ಪಾಂಡಿಯವರಿಗೆ ನೀಡಲಾಯಿತು.
ಟ್ರಸ್ಟ್ನ ಸ್ಥಾಪಕಾಧ್ಯಕ್ಷರು ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಶ್ರೀಮತಿ ಉಷಾ ಶ್ರೀಧರ ಭಂಡಾರಿ, ದೇವಿಪ್ರಸಾದ್ ಇತರರು ಉಪಸ್ಥಿತರಿದ್ದರು.
ಕುಂದಾಪುರ : ಗುಲ್ವಾಡಿ ಗ್ರಾಮದ ಗುಲ್ವಾಡಿ ಟ್ರೇಡರ್ಸ್ ಗೇರುಬೀಜ ಸಂಸ್ಕರಣೆಯ ಘಟಕದಿಂದ ಮುಂಬಯಿಯ ಸಂಸ್ಥೆಯೊಂದು ರೂ.16 ಲಕ್ಷ ಗೇರುಬೀಜ ಖರೀದಿಸಿ ಹಣ ನೀಡದೆ ವಂಚಿಸಿರುವ ಘಟನೆ ನಡೆದಿದೆ.
ಗುಲ್ವಾಡಿ ಗ್ರಾಮದ ಗುಲ್ವಾಡಿ ಟ್ರೇಡರ್ಸ್ ಹೆಸರಿನ ಗೇರುಬೀಜ ಸಂಸ್ಕರಣೆಯ ಘಟಕ ನಡೆಸಿಕೊಂಡಿರುವ ಅಸ್ಮಾ (33) ಅವರಿಗೆ ಮಹಾವೀರ ಟ್ರೇಡಿಂಗ್ ಕಂಪೆನಿ ಮುಂಬಯಿಯ ಮಾಲಕಿ ಭಾರತಿ, ಆಕೆಯ ಪತಿ ನೀಲೇಶ್ ನಿರಂಜನ್, ಅವರ ಬಂಧು ಪಿಯುಷ್ ಗೋಗ್ರಿ ಅವರು ವಂಚಿಸಿದ್ದು, ಅವರ ಮೇಲೆ ಪ್ರಕರಣ ದಾಖಲಾಗಿದೆ.
ನಿತೇಶ್ ಕೆ. ಟಕ್ಕರ್ ಎಂಬ ದಲ್ಲಾಳಿ ಮುಖಾಂತರ ಆರೋಪಿಗಳ ಪರಿಚಯವಾಗಿ 2 ವರ್ಷಗಳಿಂದ ಆರೋಪಿಗಳು ಗೇರುಬೀಜ ಖರೀದಿಸುವ ವ್ಯವಹಾರ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಆರೋಪಿಗಳು ರೂ.16 ಲಕ್ಷ ಮೌಲ್ಯದ ಗೇರು ಬೀಜ ಖರೀದಿಸಿ 15 ದಿನಗಳಲ್ಲಿ ಹಣ ಪಾವತಿಸುವುದಾಗಿ ಹೇಳಿ ಮೋಸ ಮಾಡಿದ್ದಾರೆ
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಪ್ರಮಾಣ ಪತ್ರ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ, ಅಪರ ಜಿಲ್ಲಾಧಿಕಾರಿ ಮಮತಾದೇವಿ, ಸಹಾಯಕ ಚುನಾವಣಾ ಅಧಿಕಾರಿಗಳಾದ ರಶ್ಮಿ ಎಸ್. ಆರ್, ಜಯಮಾದು, ಶಿವಪ್ರಸಾದ್ ಗಾವಂಕರ್ ಕಾಂತರಾಜು, ದಲಿಜತ್ ಕುಮಾರ್, ಜಯಲಕ್ಷ್ಮಮ್ಮ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ದ.ಕ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ; ನಿರ್ಗಮಿತ ಸಂಸದ ನಳಿನ್ ಕುಮಾರ್ ಕಟೀಲ್ ಸಂತಸ
ಮಂಗಳೂರು : ದ.ಕ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ನಿರ್ಗಮಿತ ಸಂಸದ ನಳಿನ್ ಕುಮಾರ್ ಕಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಜಿಲ್ಲೆಯ ಜನ ಬಿಜೆಪಿಯ ಕೈ ಹಿಡಿದಿದ್ದಾರೆ. ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ವರ್ಷಗಳಲ್ಲಿ ಅವರಿಗೆ ಅಭಿವೃದ್ಧಿ ಮಾಡುವ ಅವಕಾಶ ಇದೆ. ಸಂಪೂರ್ಣವಾಗಿ ಅಭಿವೃದ್ಧಿ ಮಾಡುವ ವಿಶ್ವಾಸ ಇದೆ. ಕೋಟಾ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಹದಿನೇಳು ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಮುನ್ನಡೆಯ ಹಾದಿಯಲ್ಲಿದೆ ಎಂದರು.
ಕಳೆದ ಬಾರಿಗಿಂತ ಕಡಿಮೆ ಅಂತರದ ಗೆಲುವು ಹಿನ್ನಲೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಸಹಜವಾಗಿ ಚುನಾವಣೆಯಲ್ಲಿ ವ್ಯತ್ಯಾಸಗಳಾಗುತ್ತದೆ. ಈ ಬಾರಿ ಕಾಂಗ್ರೆಸ್ ಗ್ಯಾರಂಟಿ, ಆಶ್ವಾಸನೆಗಳನ್ನು ನೀಡಿದೆ. ಆದರೂ ಬಿಜೆಪಿ ಒಂದೂವರೆ ಲಕ್ಷ ಮತಗಳ ಅಂತರದ ಜಯ ಪಡೆದಿದೆ ಎಂದರು.
ನಾನು ಕೇರಳದ ಸಹ ಪ್ರಭಾರಿಯಾಗಿ ಕೆಲಸ ಮಾಡಿದ್ದೆ. ಬಿಜೆಪಿ ಕೇರಳದಲ್ಲಿ ತನ್ನ ಅಕೌಂಟ್ ತೆರೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನವಯುಗ ನವಪಥದ ಆಧಾರದಲ್ಲಿ ದ.ಕ. ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವೆ – ಬ್ರಿಜೇಶ್ ಚೌಟ
ಮಂಗಳೂರು : ನವಯುಗ ನವಪಥದ ಆಧಾರದಲ್ಲಿ ಹಿಂದುತ್ವಕ್ಕೆ ಬದ್ಧತೆಯಿರಿಸಿ, ಅಭಿವೃದ್ಧಿಯನ್ನು ಆದ್ಯತೆಯಾಗಿರಿಸಿ ದ.ಕ.
ಜಿಲ್ಲೆಯಲ್ಲಿ ಹೊಸಪರ್ವ, ಹೊಸಕನಸು, ಹೊಸ ಆಶೋತ್ತರಗಳನ್ನು ಜನರ ಮಧ್ಯೆ ಹುಟ್ಟಿಸುತ್ತೇನೆ. ಎಲ್ಲರ ಸಹಕಾರದೊಂದಿಗೆ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇನೆ ಎಂದು ದ.ಕ.ಜಿಲ್ಲೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಹೇಳಿದರು.
ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದಂತೆ ಸುರತ್ಕಲ್ನ ಮತ ಎಣಿಕಾ ಕೇಂದ್ರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ದ.ಕ. ಜಿಲ್ಲೆಯ ಬಿಜೆಪಿಯ ಗೆಲುವು, ಮೋದಿಯವರ, ಹಿಂದುತ್ವದ, ಸಂಘಟನೆಯ ಕಾರ್ಯಕರ್ತರ, ಜಿಲ್ಲಾಧ್ಯಕ್ಷರ ಗೆಲುವು. ಸತ್ಯ, ಧರ್ಮ, ನ್ಯಾಯ, ಹಿಂದುತ್ವದ ಆಧಾರದಲ್ಲಿ ನಾವು ಜಿಲ್ಲೆಯಲ್ಲಿ ಸ್ಪರ್ಧೆ ಮಾಡಿದ್ದೆವು. ತುಳುನಾಡಿನ ದೈವ ದೇವರ ಆಶೀರ್ವಾದದ ಬಲದಿಂದ, ಕಾರ್ಯಕರ್ತರ ಪರಿಶ್ರಮ, ಸಂಘಟನೆಯ ಹಿರಿಯರ ಮಾರ್ಗದರ್ಶನದಿಂದ, ರಾಜ್ಯ ಹಾಗೂ ಕೇಂದ್ರದ ನಾಯಕರ ಬೆಂಬಲದೊಂದಿಗೆ ಈ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿದ್ದೇವೆ ಎಂದರು.
ಈ ಚುನಾವಣೆಯನ್ನು ಕಾಂಗ್ರೆಸ್ ಎಸ್ಡಿಪಿಐ ಒಟ್ಟಾಗಿ ಎದುರಿಸಿದೆ. ಆದರೆ ಚುನಾವಣಾ ಅಂತರದ ಬಗ್ಗೆ ಬಳಿಕ ಮಾಹಿತಿ ನೀಡುತ್ತೇನೆ ಎಂದು ಬ್ರಿಜೇಶ್ ಚೌಟ ಹೇಳಿದರು.
ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆ : ಕಾಪು ಮಂಡಲ ಬಿಜೆಪಿ ವತಿಯಿಂದ ಅಭಿನಂದನೆ
ಕಾಪು : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 2.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಾಪು ಮಂಡಲ ಬಿಜೆಪಿ ವತಿಯಿಂದ ಅಭಿನಂದಿಸಲಾಯಿತು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಮಾತನಾಡಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ 32 ಸಾವಿರಕ್ಕೂ ಅಧಿಕ ಅಂತರ ದೊರಕಿದೆ. ಈ ಗೆಲುವಿಗೆ ಶ್ರಮಿಸಿದ ದೇವದುರ್ಲಭ ಕಾರ್ಯಕರ್ತರಿಗೆ ಶಾಸಕನ ನೆಲೆಯಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಪ್ರಥ್ವಿರಾಜ್ ಶೆಟ್ಟಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಶರಣ್ ಮಟ್ಟು, ಕಾಪು ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಸೋನು ಪಾಂಗಾಳ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಹ ಸಂಚಾಲಕರಾದ ಕುತ್ಯಾರು ನವೀನ್ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.