ಉಡುಪಿ : ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಹತಾಶೆಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ನಡೆದುಕೊಳ್ಳುತ್ತಿರುವ ಮಾಜಿ ಶಾಸಕರು ಕೆಲ ಹಿಂದೂ ವಿರೋಧಿ ಶಕ್ತಿಗಳ ಆಟಕ್ಕೆ ಗೊಂಬೆಯಂತೆ ಕುಣಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಖಂಡ ಹಿಂದೂರಾಷ್ಟ್ರದ ಕಲ್ಪನೆಗೆ ಮಗ್ಗಲ ಮುಳ್ಳಾಗಿರುವ ಗೋ ಭಕ್ಷಕರನ್ನು ದೇವಸ್ಥಾನದ ಪ್ರಾಂಗಣದೊಳಕ್ಕೆ ಕರೆಸಿ ದೇವಸ್ಥಾನದ ಪಾವಿತ್ರ್ಯ ತೆಯನ್ನು ಅಶುದ್ದಿ ಗೊಳಿಸಿರುವಿರಿ. ಹಿಂದೂ ಸಮಾಜದ ಬೆಂಬಲದಿಂದಲೇ ಮೂರು ಬಾರಿ ವಿಧಾನಸಭೆ ಪ್ರವೇಶಿಸಿದ ತಾವು ಅಧಿಕಾರದಲಿದ್ದಾಗ ಹಿಂದೂ ಫೈರ್ ಬ್ರಾಂಡ್ ತರ ನಡೆದುಕೊಳ್ಳುತ್ತಿದ್ದ ತಾವು ಇತ್ತೀಚಿನ ದಿನಗಳ ನಿಮ್ಮ ಕಾರ್ಯವೈಖರಿ ಅನುಮಾನ ಹುಟ್ಟಿಸುವಂತಿದೆ. ಇನ್ನಾದರೂ ಬುದ್ಧಿಕಲಿತು ವೆಂಕಟರಮಣನ ಶಾಪಕ್ಕೆ ತುತ್ತಾಗದೆ ದೇವಸ್ಥಾನ ಶುದ್ಧೀಕರಿಸಿ ಹಿಂದೂ ಸಮಾಜದ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಿ ಎಂದು ಶ್ರೀರಾಮಸೇನೆ ಉಡುಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಪೂಜಾರಿ ಆಗ್ರಹಿಸಿದ್ದಾರೆ.
NewsDesk
ಹಿರಿಯಡಕ : ರಾಷ್ಟ್ರಪ್ರಶಸ್ತಿ ವಿಜೇತ, ಹಿರಿಯಡಕ ಕುದಿ ಗ್ರಾಮದ ಶ್ರೀ ವಿಷ್ಣುಮೂರ್ತಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕುದಿ ವಸಂತ ಶೆಟ್ಟಿ ಅವರು ಸೋಮವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ತನ್ನ ಊರಿನ ಪ್ರೌಢಶಾಲೆಯಲ್ಲಿ 1980ರಿಂದ ಸ್ಥಾಪಕ ಮುಖ್ಯ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕುದಿ ವಸಂತ ಶೆಟ್ಟಿಯವರು ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ 4 ವರ್ಷ, ಅಧ್ಯಕ್ಷರಾಗಿ 5 ವರ್ಷ ಸೇವೆ ಸಲ್ಲಿಸಿದ್ದಾರೆ.
ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿದ್ದ ವಸಂತ ಶೆಟ್ಟಿಯವರು ಊರಿನ ದೇವಸ್ಥಾನ, ದೈವಸ್ಥಾನಗಳ ಸಮಿತಿಯಲ್ಲಿ ಸೇವೆ ಮಾಡಿದ್ದಾರೆ. ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ದೊಡ್ಡ ಕನಸು ಕಂಡು ಅದನ್ನು ನಿಷ್ಠೆ, ಕಠಿಣ ಪರಿಶ್ರಮದಿಂದ ಸಾಕಾರಗೊಳಿಸಿ : ಪದವೀಧರರಿಗೆ ಎಲ್ ಕೆ ಅತೀಖ್ ಕರೆ
ಮಂಗಳೂರು : ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಮತ್ತು ಬ್ಯಾರೀಸ್ ಎನ್ವಿರೋ-ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬೀಡ್ಸ್) ವತಿಯಿಂದ ಬಿಐಟಿ 12ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಮತ್ತು ಬೀಡ್ಸ್ 5ನೇ ಬ್ಯಾಚ್ನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಮಂಗಳೂರಿನ ಇನೊಳಿಯಲ್ಲಿರುವ ಬ್ಯಾರಿಸ್ ನಾಲೆಜ್ ಕ್ಯಾಂಪಸ್ನಲ್ಲಿ ಶನಿವಾರ ನಡೆಯಿತು.
ಹೊಸ ಪದವೀಧರರನ್ನು ಅಭಿನಂದಿಸಿ ಮಾತನಾಡಿದ ಮುಖ್ಯ ಅತಿಥಿ, ಮುಖ್ಯಮಂತ್ರಿಗಳ ಹಾಗು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗು ಬೆಂಗಳೂರು ಬಿಸಿನೆಸ್ ಕಾರಿಡಾರ್ ಲಿ. ನ ಮುಖ್ಯಸ್ಥ ಎಲ್ ಕೆ ಅತೀಖ್ ಅವರು “ಇದು ನಿಮ್ಮ ಜೀವನದ ಒಂದು ಪ್ರಮುಖ ಮೈಲಿಗಲ್ಲು. ಶಿಸ್ತು, ನಿಷ್ಠೆ ಹಾಗು ಕಠಿಣ ಪರಿಶ್ರಮಗಳೇ ಯಶಸ್ವೀ ಹಾಗು ಅರ್ಥಪೂರ್ಣ ವೃತ್ತಿ ಜೀವನಕ್ಕೆ ಅಡಿಪಾಯ ಹಾಕುತ್ತವೆ ಹಾಗು ನಿರ್ಣಾಯಕ ಪಾತ್ರ ವಹಿಸುತ್ತವೆ. ನಮ್ಮ ಜೀವನದ ಗುರಿ ಸಾಧಿಸಲು ಈ ಮೂರು ಅಂಶಗಳು ಅನಿವಾರ್ಯ. ಸ್ಫೂರ್ತಿ ಬಹಳ ಮುಖ್ಯ ಆದರೆ ನಿರಂತರ ಪ್ರಯತ್ನ ಹಾಗು ಕಠಿಣ ಪರಿಶ್ರಮ ಅದರ ಜೊತೆಗಿದ್ದರೆ ಮಾತ್ರ ಫಲಿತಾಂಶ ಸಿಗಲಿದೆ ಎಂದು ಸಲಹೆ ನೀಡಿದರು. ತಮ್ಮ ವೃತ್ತಿ ಬದುಕಿನ ಬಗ್ಗೆ ಹೇಳಿದ ಅತೀಖ್ ಅವರು “ಜೀವನದಲ್ಲಿ ನಾವು ದೊಡ್ಡ ಕನಸುಗಳನ್ನು ಕಾಣಬೇಕು. ನಾನು ಕನಸು ಕಂಡು, ಗುರಿ ಇಟ್ಟುಕೊಂಡಿದ್ದರಿಂದ ವೃತ್ತಿ ಜೀವನದಲ್ಲಿ ಈ ಹಂತಕ್ಕೆ ಬರಲು ಸಾಧ್ಯವಾಯಿತು. ವೈಫಲ್ಯ ನಮ್ಮ ಜೀವನದ ಸಹಜ ಭಾಗ. ಅದನ್ನು ಎದುರಿಸಿ ಮುನ್ನುಗ್ಗಬೇಕು ” ಎಂದು ಕರೆ ನೀಡಿದರು.
ಆಡಳಿತ ಹಾಗು ಆರ್ಥಿಕ ರಂಗಗಳಲ್ಲಿ ಎಲ್ ಕೆ ಅತೀಖ್ ಅವರ ಅಪಾರ ಅನುಭವ, ಪರಿಣತಿ ಹಾಗು ಸಾಧನೆಯನ್ನು ಪ್ರಶಂಸಿಸಿದ ಸಯ್ಯದ್ ಬ್ಯಾರಿ ಅವರು “ಜಗತ್ತಿನ ಯಾರು ಏನೇ ಹೇಳಿದರೂ 21ನೇ ಶತಮಾನ ಭಾರತದ್ದು. ನಮ್ಮ ದೇಶಕ್ಕೆ ಭವ್ಯ ಭವಿಷ್ಯವಿದೆ. ಇಲ್ಲಿ ಧಾರಾಳ ಅವಕಾಶಗಳಿವೆ. ಆದರೆ ನೀವು ಉದ್ಯೋಗ ಕೇಳುವವರಾಗುವ ಬದಲು ಉದ್ಯೋಗ ಸೃಷ್ಟಿಸುವವರಾಗಬೇಕು” ಎಂದು ಪದವೀಧರರಿಗೆ ಕರೆ ನೀಡಿದರು. “ನಮ್ಮ ಸಮಾಜದಿಂದ ಭ್ರಷ್ಟಾಚಾರ, ಕೋಮುವಾದ ಹಾಗು ಅದಕ್ಷತೆ ನಿರ್ಮೂಲನೆಯಾಗಬೇಕು. ಭ್ರಷ್ಟಾಚಾರ ಅಂದರೆ ಕೇವಲ ಆರ್ಥಿಕ ಭ್ರಷ್ಟಚಾರ ಮಾತ್ರವಲ್ಲ, ಮನಸ್ಸು ಹಾಗೂ ಆತ್ಮಸಾಕ್ಷಿಯ ಭ್ರಷ್ಟಚಾರ ಕೊನೆಯಾಗಬೇಕು. ಇಲ್ಲಿ ಸಾರೆ ಜಹಾಂ ಸೆ ಅಚ್ಛಾ, ಹಿಂದೂಸ್ತಾನ್ ಹಮಾರಾ ಎಂಬ ಹಾಡಿನಂತೆ ನಮ್ಮ ಸಮಾಜದ ಎಲ್ಲರಲ್ಲಿ ಐಕ್ಯತೆ ಮೂಡಬೇಕು. ಪದವೀಧರರು ಕಾಲೇಜಿನ ಪರೀಕ್ಷೆ ಮಾತ್ರವಲ್ಲದೆ ಜೀವನದ ಪರೀಕ್ಷೆಗಳಲ್ಲೂ ಪಾಸಾಗಬೇಕು. ಬಿ ಐ ಟಿ ಹಾಗೂ ಬ್ಯಾರೀಸ್ ನ ಎಲ್ಲ ಶಿಕ್ಷಣ ಸಂಸ್ಥೆಗಳು ದೇಶದ ಪ್ರಗತಿಗೆ ಶ್ರಮಿಸುವ ಧ್ಯೇಯದೊಂದಿಗೆ ಸೇವೆ ಸಲ್ಲಿಸುತ್ತಿವೆ. ಅಹಂ, ದುರಾಸೆಗಳನ್ನು ಬದಿಗೊತ್ತಿ ಎಲ್ಲರೂ ದೇಶಕ್ಕೆ ನಾವು ಹೇಗೆ ಸೇವೆ ಸಲ್ಲಿಸಬಹುದು ಎಂಬ ಬಗ್ಗೆ ಚಿಂತಿಸಬೇಕು” ಎಂದು ಸಯ್ಯದ್ ಬ್ಯಾರಿ ಹೇಳಿದರು.
ಪದವಿ ಪ್ರದಾನ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು,”ಸೈಯದ್ ಮೊಹಮ್ಮದ್ ಬ್ಯಾರಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ನಾಯಕ” ಎಂದು ಶ್ಲಾಘಿಸಿದರು. ದೇಶಕ್ಕೆ ಯುವ ಪ್ರತಿಭೆಗಳನ್ನು ಸಮರ್ಪಿಸುತ್ತಿರುವ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು. ಪದವೀಧರ ವಿದ್ಯಾರ್ಥಿಗಳಿಗೆ ಸಾಮಾಜಿಕ ಮತ್ತು ರಾಜಕೀಯ ಜವಾಬ್ದಾರಿಗಳನ್ನು ನೆನಪಿಸಿದ ಪ್ರೊ.ಪಿ.ಎಲ್.ಧರ್ಮ, “ನೀವು ಉದ್ಯೋಗ ಪಡೆಯುವುದರ ಮೇಲೆ ಮಾತ್ರ ಗಮನಹರಿಸಬೇಡಿ. ದೇಶ ಮತ್ತು ವ್ಯವಸ್ಥೆ ನಿಮಗೆ ಬಹಳ ನೀಡಿದೆ, ಆದ್ದರಿಂದ ಅದನ್ನು ಹಿಂತಿರುಗಿಸುವುದು ನಿಮ್ಮ ಕರ್ತವ್ಯ” ಎಂದು ಹೇಳಿದ್ದಾರೆ. ಸಮಾಜ ಮತ್ತು ರಾಜಕೀಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರವನ್ನು ಪ್ರೊ.ಧರ್ಮ ಇದೇ ವೇಳೆ ಒತ್ತಿ ಹೇಳಿದರು.
“ನಾಳೆ ಜಾಗತಿಕ ನಾಯಕರಾಗುವವರಿಗೆ ಇಂತಹ ಸಾಮಾಜಿಕ, ರಾಜಕೀಯ ಪ್ರಜ್ಞೆ ಬಹಳ ಅಗತ್ಯ” ಎಂದು ಹೇಳಿದ ಪ್ರೊ. ಧರ್ಮ “ಸಯ್ಯದ್ ಬ್ಯಾರಿ ಅವರಿಂದ ಪ್ರೇರಣೆ ಪಡೆದು ಯುವ ಪದವೀಧರರು ಸಮಾಜದ ದುರ್ಬಲ ವರ್ಗಗಳ ಮಕ್ಕಳಿಗೆ ಶಿಕ್ಷಣ ಕೊಡಲು ಮುಂದೆ ಬರಬೇಕು” ಎಂದು ಕರೆ ನೀಡಿದರು.
ಶ್ನೈಡರ್ ಎಲೆಕ್ಟ್ರಿಕ್ ಬೆಂಗಳೂರು ಇದರ ಉಪಾಧ್ಯಕ್ಷರಾದ ಚಿತ್ರಾ ಸುಕುಮಾರ್ ಮಾತನಾಡಿ “ಬಿಐಟಿ ಹಸಿರುಮಯ ಸುಂದರ ಕ್ಯಾಂಪಸ್ನಿಂದಲೇ ಇಲ್ಲಿನ ಪದವೀಧರರು ಪರಿಸರ ಸ್ನೇಹಿ ಅಭಿವೃದ್ಧಿಯ ಪ್ರೇರಣೆ ಪಡೆಯಬಹುದು. ವಿದ್ಯಾರ್ಥಿಗಳು ರಾಜಕೀಯ, ಸಾಮಾಜಿಕ ಹಾಗು ತಾಂತ್ರಿಕ ಬದಲಾವಣೆಗಳಿಗೆ ತಕ್ಷಣ ಹೊಂದಿಕೊಳ್ಳುವ ವ್ಯಕ್ತಿತ್ವ ಹಾಗು ಮನೋಭಾವ ರೂಪಿಸಿಕೊಳ್ಳಬೇಕು” ಎಂದು ಹೇಳಿದರು.
ಐಜಿಬಿಸಿ ಮಂಗಳೂರು ಅಧ್ಯಕ್ಷರಾದ ವೆಂಕಟೇಶ್ ಪೈ ಮಾತನಾಡಿ “ನೀವು ಏನೇ ಮಾಡಿದರೂ ಅದನ್ನು ಅತ್ಯಂತ ಪ್ರೀತಿಯಿಂದ, ಶೃದ್ಧೆಯಿಂದ ಮಾಡಿ. ಯುವ ಆರ್ಕಿಟೆಕ್ಟ್ಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನೂ ಅರಿತುಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಐಟಿಯ ಪ್ರಾಂಶುಪಾಲ ಡಾ.ಎಸ್.ಐ.ಮಂಝೂರ್ ಬಾಷಾ ಸ್ವಾಗತಿಸಿ , ಬ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್ನ ಪ್ರಾಂಶುಪಾಲರಾದ ಡಾ. ಅಝೀಝ್ ಮುಸ್ತಫ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಸಮಾರಂಭದಲ್ಲಿ ಪ್ರತಿ ವಿಭಾಗದಿಂದ Best out going student ಪ್ರಶಸ್ತಿ ಮತ್ತು ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಡಾ. ಅಝೀಝ್ ಮುಸ್ತಫಾ ಅವರು ಧನ್ಯವಾದವನ್ನು ಸಮರ್ಪಿಸಿದರು.
ವೇದಿಕೆಯಲ್ಲಿ ಬೀಡ್ಸ್ನ ಪ್ರಾಂಶುಪಾಲ ಡಾ.ಖಲೀಲ್ ರಝಾಕ್, ಬಿಐಟಿ ಪಾಲಿಟೆಕ್ನಿಕ್ ನಿರ್ದೇಶಕ ಡಾ. ಪೃಥ್ವಿರಾಜ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಾಯ್ಸನ್ ಮಿರಾಂಡಾ ಮತ್ತು ರೆಹಾನಾ ಹನೀನಾ ನಿರೂಪಿಸಿದರು.
ಎಂ.ಆರ್.ಪಿ.ಎಲ್ ಸಂಸ್ಥೆಯಿಂದ 1500 ಫಲಾನುಭವಿ ಕುಟುಂಬಗಳಿಗೆ 20 ಲಕ್ಷ ಬೆಲೆಯ ಸಿರಿಧಾನ್ಯ ವಿತರಣೆ
ಸುರತ್ಕಲ್ : ಎಂ.ಆರ್.ಪಿ.ಎಲ್ ಸಂಸ್ಥೆ ತಮ್ಮ ಸಿ.ಎಸ್.ಆರ್. ಅನುದಾನದ ಮೂಲಕ ನಿರಂತರ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು ಮಾದರಿ ಸಂಸ್ಥೆಯಾಗಿ ಮೂಡಿ ಬಂದಿದೆ ಎಂದು ಎಂ.ಆರ್.ಪಿ.ಎಲ್ ಸಿ.ಎಸ್.ಆರ್. ವಿಭಾಗದ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಹೇಳಿದರು.
ಅವರು ತಮ್ಮ ಸಂಸ್ಥೆ ವತಿಯಿಂದ ಎಂಡೋಸಲ್ಪಾನ್, ಎಚ್.ಐ.ವಿ, ರಕ್ತಬಲಹೀನತೆ, ಕ್ಷಯದಿಂದ ಬಳಲುವವರಿಗೆ ವೃದ್ದಾಶ್ರಮ ಮತ್ತಿತರ ಕಡೆಗಳಿಗೆ ಸುಮಾರು 20 ಲಕ್ಷ ರೂಪಾಯಿ ಬೆಲೆಬಾಳುವ ಪೌಷ್ಠಿಕಾಂಶಯುಕ್ತ ಸಿರಿಧಾನ್ಯಗಳನ್ನು ವಿತರಿಸಿ ಮಾತನಾಡಿ ಎಂ.ಆರ್.ಪಿ.ಎಲ್ ಸಂಸ್ಥೆ ಈ ಹಿಂದೆಯೂ ಎಂಡೋಸಲ್ಪಾನ್ ಪೀಡಿತರಾಗಿದ್ದು ಮಲಗಿದಲ್ಲಿಯೇ ಇದ್ದ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳನ್ನು ನೀಡಿದ್ದು, ವೃದ್ದಾಶ್ರಮ ಮತ್ತು ಅಸ್ಪತ್ರೆಗಳಿಗೆ ಅಂಬುಲೆನ್ಸ್ ವಾಹನ ನೀಡಿ ಸಹಕಾರ ನೀಡಿದೆ. ಇದೀಗ ಅನಾರೋಗ್ಯದಿಂದ ಬಲಳುವ 1500 ಫಲಾನುಭವಿಗಳಿಗೆ ಸಿರಿಧಾನ್ಯ ನೀಡಿ ಸಹಕಾರ ನೀಡಲಾಗಿದೆ, ಫಲಾನುಭವಿಗಳು ಇದರಿಂದ ತಮ್ಮ ಆರೋಗ್ಯವನ್ನು ವೃದ್ದಿಸಬಹುದಾಗಿದೆ, ಒಟ್ಟು 20 ಲಕ್ಷ ರೂಪಾಯಿ ಬೆಲೆಬಾಳುವ 1800 ಕಿಲೋ ಸಿರಿಧಾನ್ಯ ವಿತರಿಸಲಾಗಿದ್ದು, ಹೆಚ್ಚಿನ ಕಡೆಗಳಿಗೆ ತೆರಳಿ ನೇರವಾಗಿ ಫಲಾನಿಭವಿಗಳಿಗೆ ನೀಡಲಾಗಿದೆ ಎಂದರು.
ಈ ಸಂದರ್ಭ ಎಂ.ಆರ್.ಪಿ.ಎಲ್ ಅಧಿಕಾರಿ ಸ್ಟೀವನ್ ಪಿಂಟೋ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ನೆಲ್ಲಿಕಾರು ಗ್ರಾ. ಪಂ. ಅಧ್ಯಕ್ಷರ ಜಾತಿ ನಿಂದನೆ : ಆರೋಪಿ ಉಪಾಧ್ಯಕ್ಷರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ ಮಂಗಳೂರಿನ ಜಿಲ್ಲಾ ವಿಶೇಷ ನ್ಯಾಯಾಲಯ
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನೆಲ್ಲಿಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಬೆದರಿಸಿ, ಜಾತಿ ನಿಂದನೆ ಮಾಡಿದ ಆರೋಪ ಪ್ರಕರಣದಲ್ಲಿ ಆರೋಪಿಯನ್ನು ದೋಷಮುಕ್ತಗೊಳಿಸಿ ಮಂಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ) ನ್ಯಾಯಾಲಯ ತೀರ್ಪು ನೀಡಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು ಈ ಆದೇಶ ಹೊರಡಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪಿ ವಿರುದ್ಧದ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು, ಆರೋಪಿಯನ್ನು ಆರೋಪದಿಂದ ಖುಲಾಸೆಗೊಳಿಸಿದೆ.
ಪ್ರಕರಣದ ವಿವರ :
ಆರೋಪಿ ನೆಲ್ಲಿಕಾರು ಗ್ರಾ. ಪಂ. ಉಪಾಧ್ಯಕ್ಷರಾದ ಶಶಿಧರ್ ಎಂ. ವಿರುದ್ಧ 23-06-2021ರಂದು ನೆಲ್ಲಿಕಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಶೀಲಾ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ತಮ್ಮ ವಿರುದ್ಧ ಜಾತಿ ನಿಂದನೆ ಮಾಡಿದ್ದರು ಎಂದು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಪೊಲೀಸರು ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ದೂರುದಾರ ಸಂತ್ರಸ್ತೆ ನೆಲ್ಲಿಕಾರು ಗ್ರಾಮ ಪಂಚಾಯತ್ನ ಅಧ್ಯಕ್ಷರಾಗಿದ್ದರು. ಅವರು ಪರಿಶಿಷ್ಟ ಜಾತಿಯ ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ್ದರು. ದಿನಾಂಕ 22-06-2021ರಂದು ಪಂಚಾಯತ್ನಲ್ಲಿ ಸಾಮಾನ್ಯ ಸಭೆ ನಡೆದ ಸಂದರ್ಭದಲ್ಲಿ ಜಾತಿ ನಿಂದನೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ದೂರುದಾರ ಸುಶೀಲಾ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ 14 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರಾಸಿಕ್ಯೂಷನ್ ಪರವಾಗಿ 21 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ಆರೋಪಿ ಪರವಾಗಿ ಒಂದು ದಾಖಲೆಯನ್ನು ಹಾಜರುಪಡಿಸಲಾಗಿತ್ತು.
ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿಯು ಗ್ರಾಮ ಪಂಚಾಯತ್ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದನ್ನು ಸಾಕ್ಷಿಗಳು ಒಪ್ಪಿಕೊಂಡರು. ಮಾತ್ರವಲ್ಲದೆ, ದೂರುದಾರರು ಸ್ವತಃ ಭ್ರಷ್ಟಾಚಾರದ ಆರೋಪಕ್ಕೆ ಒಳಗಾಗಿ, ಒಂಬುಡ್ಸ್ಮನ್ ತನಿಖೆಯಿಂದ ತಪ್ಪಿತಸ್ಥೆ ಎಂದು ದೃಢವಾಗಿತ್ತು. ದೂರುದಾರೆ ಸುಶೀಲಾ ಮತ್ತು ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಅವರು ಸೇರಿ ನಕಲಿ ಬಿಲ್ ಸೃಷ್ಟಿಸಿ ಲಕ್ಷಗಟ್ಟಲೆ ಹಣದ ದುರುಪಯೋಗ ಮಾಡಿ ಪಂಚಾಯತ್ಗೆ ವಂಚಿಸಿದ್ದು ಸಾಬೀತಾಗಿದ್ದು, ಈ ದಾಖಲೆಯನ್ನು ಸಾಕ್ಷಿಗಳು ಒಪ್ಪಿಕೊಂಡಿದ್ದರು. ದೂರುದಾರೆ ಮತ್ತು PDO ಒಟ್ಟಾಗಿ ರೂ. 1.98 ಲಕ್ಷ ಮರು ಪಾವತಿಸಲು ಆದೇಶವಾಗಿದ್ದು, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿರುವುದಾಗಿ ಪಿಡಿಒ ಒಪ್ಪಿಕೊಂಡಿದ್ದರು.
ಆರೋಪಿಯು ಘಟನೆಯನ್ನು ಸ್ವತಃ ಒಪ್ಪಿಕೊಂಡಿದ್ದರೂ, ತನಗೆ ದೂರುದಾರರ ವಿರುದ್ಧ ಯಾವುದೇ ಜಾತಿ ನಿಂದನೆ ಮಾಡುವ ಉದ್ದೇಶವಿರಲಿಲ್ಲ ಎಂದು ಹೇಳಿಕೊಂಡಿದ್ದರು. ಸಾಕ್ಷಿಗಳ ಹೇಳಿಕೆ ಮತ್ತು ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಮಾನ್ಯ ನ್ಯಾಯಾಲಯ, ಪ್ರಕರಣದಲ್ಲಿ ಆರೋಪಿಯ ವಿರುದ್ಧ ಆರೋಪವನ್ನು ಸಾಬೀತುಪಡಿಸಲು ಅಭಿಯೋಜನೆ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಆರೋಪಿಯ ಪರವಾಗಿ ಮಂಗಳೂರಿನ ಆಧಾಯ ತೆರಿಗೆ ಇಲಾಖೆಯ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಹರ್ಷ ಕುಮಾರ್ ಅವರು ವಾದಿಸಿದ್ದರು.
ಅಂತರಾಷ್ಟ್ರೀಯ ಕಾಮನ್ ವೆಲ್ತ್ ಪಾರ್ಲಿಮೆಂಟ್ ಅಸೋಸಿಯೇಷನ್ ಚುನಾವಣೆಯಲ್ಲಿ ಮತ ಚಲಾಯಿಸಿದ ಯು.ಟಿ.ಖಾದರ್
ಮಂಗಳೂರು : ಅಂತರಾಷ್ಟ್ರೀಯ ಕಾಮನ್ ವೆಲ್ತ್ ಪಾರ್ಲಿಮೆಂಟ್ ಅಸೋಸಿಯೇಷನ್ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಭಾರತವನ್ನು ಬೆಂಬಲಿಸಿದ ಜಾಂಬಿಯಾ ಪರ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ರವರು ಮತ ಚಲಾಯಿಸಿದರು.
ಯು.ಟಿ.ಖಾದರ್ ಅವರು ಕರ್ನಾಟಕದ ಉಳ್ಳಾಲದಲ್ಲಿ ಹುಟ್ಟಿ ಬೆಳೆದ ಓರ್ವ ವ್ಯಕ್ತಿ. ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಪ್ರತಿಷ್ಠಿತ ಸಂಸ್ಥೆಯ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾಗಿ ಭಾರತದ ಪ್ರತಿನಿಧಿಯಾಗಿ, ಮತ ಚಲಾಯಿಸಲು ಅವಕಾಶ ದೊರಕಿದ್ದು ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಚಾರ.
ಭಾರತ ಬೆಂಬಲಿಸಿದ ಜಾಂಬಿಯಾದ ಡಾ.ಕ್ರಿಸ್ಟೋಪರ್ ಕಲಿಲಾ ಗೆಲುವು ಸಾಧಿಸಿದ್ದು, ಮುಂದಿನ ಅವಧಿಗೆ CPA ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಮಂಗಳೂರು : ಬಸ್ಸೊಂದು ಓವರ್ ಟೇಕ್ ಮಾಡುವ ಭರದಲ್ಲಿ ಕಾರೊಂದಕ್ಕೆ ತಾಗಿದೆಯೆಂದು ಯುವಕರ ತಂಡವೊಂದು ಅಡ್ಡಗಟ್ಟಿ ಪ್ರಯಾಣಿಕರಿದ್ದ ಬಸ್ಸಿನೊಳಗೆ ಬಂದು ಚಾಲಕ ಹಾಗೂ ನಿರ್ವಾಹಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಗೂಂಡಾಗಿರಿ ವರ್ತನೆ ತೋರಿದ ಘಟನೆ ವಾಮಂಜೂರಿನಲ್ಲಿ ನಡೆದಿದೆ.
ಮೊಹಮ್ಮದ್ ರಫಿ ಅಫ್ರೀದ್, ಅಕ್ಬರ್, ಜಾಕಿರ್ ಹುಸೇನ್, ಮೊಹಮ್ಮದ್ ಸಾಹಿಲ್, ಮಯತಿ, ಬದ್ರುದ್ದೀನ್ ಎಂಬುವರು ಬಸ್ನೊಳಗೆ ಬಂದು ಗೂಂಡಾಗಿರಿ ವರ್ತನೆ ತೋರಿದವರು.
ಮಂಗಳೂರು-ಮೂಡುಬಿದಿರೆ ನಡುವೆ ಸಂಚರಿಸುವ ಎಪಿಎಂ ಹೆಸರಿನ ಖಾಸಗಿ ಬಸ್ಸನ್ನು ರವಿವಾರ ಮಧ್ಯಾಹ್ನ 12ಗಂಟೆ ವೇಳೆಗೆ ವಾಮಂಜೂರಿನಲ್ಲಿ ಅಡ್ಡ ಹಾಕಿದ ಮುಸ್ಲಿಂ ಯುವಕರ ತಂಡವೊಂದು ನಿರ್ವಾಹಕ – ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ಅಲ್ಲದೆ ಚಾಲಕನಿಗೆ ಹಲ್ಲೆ ಮಾಡಲು ಯತ್ನಿಸಿದ್ದಲ್ಲದೆ, ಚಾಲಕನನ್ನು ಬಸ್ಸಿನಿಂದ ಇಳಿಯುವಂತೆ ಜೋರು ಮಾಡುವ ವಿಡಿಯೋ ಸೆರೆಯಾಗಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಬಸ್ ಸಿಬ್ಬಂದಿ ಮತ್ತು ಯುವಕರ ನಡುವೆ ನಡುಬೀದಿಯಲ್ಲಿ ಹೊಯ್ ಕೈ ನಡೆದಿದೆ. ಬಸ್ಸಿನೊಳಗಡೆ ಬಂದು ಗೂಂಡಾಗಿರಿ ವರ್ತಿಸಿದವರು ವಾಮಂಜೂರಿನಲ್ಲಿ ಮೀನು ಮಾರಾಟ ಮಾಡುವ ವ್ಯಾಪಾರಿಗಳು ಎಂದು ತಿಳಿದು ಬಂದಿದೆ.
ರಂಪಾಟ ನಡೆದ ಬೆನ್ನಲ್ಲೇ ಎರಡೂ ತಂಡಗಳ ವಿರುದ್ಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ನಿಲ್ಲಿಸಿ ಗೂಂಡಾಗಿರಿ ತೋರಿಸಿದ ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಎರಡೂ ಕಡೆಯವರು ದೂರು ಕೊಡಲು ಒಪ್ಪದೆ ರಾಜಿಯಲ್ಲಿ ಪ್ರಕರಣ ಇತ್ಯರ್ಥ ಪಡಿಸಲು ಒಪ್ಪಿಕೊಂಡಿದ್ದಾರೆ. ಪೊಲೀಸರು ಯುವಕರನ್ನು ವಶಕ್ಕೆ ಪಡೆದಿದ್ದು ಮುಚ್ಚಳಿಕೆ ಬರೆಸಿ ಕಳಿಸಿದ್ದಾರೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 119(4) ಅಡಿ ಪ್ರಕರಣ ದಾಖಲಾಗಿದೆ.
ಪಣಂಬೂರು : ಮಂಗಳೂರು ದ್ವಾರಕ ನಗರ ಕೊಟ್ಟಾರ ನಿವಾಸಿಗಳಾದ ಪುಷ್ಪರಾಜ್ ಎಸ್. ಕುಂದರ್, ವೈಶಾಲಿ ಎಲ್. ಬೆಂಗ್ರೆ ಅವರ ಪುತ್ರಿ, ಲಿಮ್ಕಾ ಬುಕ್ ದಾಖಲೆಯ ಪೂರ್ವಿ (7) ಅನಾರೋಗ್ಯದಿಂದ ಮಂಗಳೂರಿನಲ್ಲಿ ನಿಧನ ಹೊಂದಿದಳು.
2019ರಲ್ಲಿ 1 ನಿಮಿಷದಲ್ಲಿ ದಾಖಲೆಯ ರೈಮ್ಸ್ ಆಟವಾಡಿ ಇಂಡಿಯನ್ ಬುಕ್ ಆಫ್ ರೆಕಾಡ್ಸ್ನಲ್ಲಿ ಹೆಸರು ಮಾಡಿದ್ದಳು. ಸಣ್ಣ ಪ್ರಾಯದಲ್ಲೇ ಚುರುಕಿನಿಂದ ಕೂಡಿದ್ದ ಪೂರ್ವಿ ಫುಟ್ಬಾಲ್, ಭರತನಾಟ್ಯದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿ ಜನರ ಪ್ರೀತಿಗೆ ಪಾತ್ರವಾಗಿದ್ದಳು. ವಿವಿಧ ಸಂಘ ಸಂಸ್ಥೆಯಿಂದ ಸಮ್ಮಾನ ಪಡೆದುಕೊಂಡಿದ್ದಳು.
ಗ್ರೀನ್ವುಡ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಲಿಯುತ್ತಿದ್ದ ಪೂರ್ವಿ ಅನಾರೋಗ್ಯಕ್ಕೀಡಾದಾಗ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಅವಳ ನಿಧನಕ್ಕೆ ಬೆಂಗ್ರೆ ವಿದ್ಯಾರ್ಥಿ ಸಂಘ, ಸ್ಥಳೀಯ ಸಂಘ-ಸಂಸ್ಥೆಗಳು ಶೋಕ ವ್ಯಕ್ತಪಡಿಸಿವೆ.
ಮಣಿಪಾಲ : ಮಾದಕ ವಸ್ತು ಗಾಂಜಾ ಸೇವಿಸಿದ ಮೂವರನ್ನು ಮಣಿಪಾಲ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಮಣಿಪಾಲ ಠಾಣೆಯ ಎಎಸ್ಐ ವಿವೇಕಾನಂದ ಬಿ. ಸಿಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ವಿಶಾಖಪಟ್ಟಣದ ಪಪ್ಪು ನಿಶಾಂತ್ ಎಂದು ಹೇಳಿದ್ದು ಆತ ಅಮಲಿನಲ್ಲಿರುವುದು ಕಂಡುಬಂದಿದೆ.
ಮಾದಕ ವಸ್ತು ಸೇವಿಸಿರುವ ಬಗ್ಗೆ ಅನುಮಾನದ ಮೇರೆಗೆ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಅದೇ ರೀತಿ ಶಿವಳ್ಳಿ ಗ್ರಾಮದ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ದೇವಾಂಶ್ ಮಣಿಪಾಲ ಮತ್ತು ಕವಾಯ್ ಗೇರಾ ಎಂಬವರು ಅನುಮಾನಾಸ್ಪದವಾಗಿ ಅಮಲಿನಲ್ಲಿರುವುದು ಕಂಡುಬಂದಿದೆ. ಅವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಒಳಪಡಿಸಿದ್ದು ಗಾಂಜಾ ಸೇವನೆ ಮಾಡಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮೂವರ ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ : ಬೈಲೂರಿನ ಪರಶುರಾಮ ಥೀಮ್ ಪಾರ್ಕ್ನಲ್ಲಿ ಪರಶುರಾಮನ ನಕಲಿ ಮೂರ್ತಿ ನಿರ್ಮಿಸಿಲಾಗಿದೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಶಿಲ್ಪಿ ಕೃಷ್ಣ ನಾಯ್ಕನನ್ನು ಕೇರಳದಲ್ಲಿ ಪೋಲಿಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣ ನಾಯ್ಕ್ ಕೋರ್ಟ್ನಲ್ಲಿ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಿದ್ದರು. ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಗುರುವಾರ ಜಾಮೀನು ತಿರಸ್ಕರಿಸಿ ಆದೇಶ ನೀಡಿತ್ತು. ಅನಂತರ ಪೊಲೀಸರು ಪತ್ತೆ ಕಾರ್ಯ ತೀವ್ರಗೊಳಿಸಿ ಹುಡುಕಾಟ ನಡೆಸಿದ್ದರು. ಕೇರಳದ ಕ್ಯಾಲಿಕಟ್ನಲ್ಲಿ ತಲೆಮರಸಿಕೊಂಡಿದ್ದ ಕೃಷ್ಣ ನಾಯ್ಕ್ನನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಲು ಯಶಸ್ವಿಯಾಗಿದ್ದಾರೆ.
ಕೃಷ್ಣ ನಾಯ್ಕ್ ‘ಕೃಷ್ ಆರ್ಟ್ ವರ್ಲ್ಡ್’ ಎಂಬ ಸಂಸ್ಥೆಯ ಮೂಲಕ ಥೀಮ್ ಪಾರ್ಕ್ನಲ್ಲಿ ಕಂಚಿನ ಪರಶುರಾಮ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ 1.25 ಕೋಟಿ ರೂ. ಹಣ ಪಡೆದುಕೊಂಡು ಕಾಮಗಾರಿ ನಡೆಸಿದ್ದು, ಅನಂತರ ಆರೋಪಿ ಕಂಚಿನ ಮೂರ್ತಿಯನ್ನು ಮಾಡದೆ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಮಾಡಿರುವುದಾಗಿ ಆರೋಪಿಸಿ ನಲ್ಲೂರಿನ ಕೃಷ್ಣ ಶೆಟ್ಟಿ ಅವರು ಜೂನ್ ತಿಂಗಳಲ್ಲಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.