ಉಡುಪಿ : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯೆ ಹಾಗೂ ಕರ್ನಾಟಕದ ಮೊದಲ ಮಹಿಳಾ ಹೃದಯ ರೋಗ ತಜ್ಞೆ ಡಾ. ವಿಜಯಲಕ್ಷ್ಮಿ, ಬಾಳೆಕುಂದ್ರಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ವತಿಯಿಂದ ವೈದ್ಯರ ದಿನಾಚರಣೆ ಸಂದರ್ಭ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಐ.ಎಂ.ಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ|| ರಾಜಲಕ್ಮೀ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ ಹೆಚ್.ಪಿ, ಕಸಾಪ ಉಡುಪಿ ತಾಲೂಕು ಸಲಹೆಗಾರರಾದ ವಿಘ್ನೇಶ್ವರ ಅಡಿಗ, ಸಂ.ಕಾರ್ಯದರ್ಶಿ ರಾಘವೇಂದ್ರ ಪ್ರಭು, ಕರ್ವಾಲು ಉಪಸ್ಥಿತರಿದ್ದರು.
NewsDesk
ಗ್ರಾಮಪಂಚಾಯತ್ ಅಧ್ಯಕ್ಷೆ ವಿರುದ್ದ ಜಾತಿ ನಿಂದನೆ : 8 ಮಂದಿಯ ವಿರುದ್ದ ಪ್ರಕರಣ ದಾಖಲು
ಮಲ್ಪೆ : ತೆಂಕನಿಡಿಯೂರು ಗ್ರಾಮಪಂಚಾಯತ್ ಅಧ್ಯಕ್ಷೆ ವಿರುದ್ದ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 8 ಮಂದಿಯ ವಿರುದ್ದ ಮಲ್ಪೆ ಪೊಲೀಸ್ ಠಾಣೆಯಲ್ಲಿ ದಲಿತ ನಿಂದನೆ ಪ್ರಕರಣ ದಾಖಲಾಗಿದೆ.
ಶೋಭಾ ಎಂಬವರು ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದು ಜೂನ್ 28ರಂದು ಪಿಡಿಒ ದಯಾನಂದ ಅವರು ಎಸ್ಎಲ್ಆರ್ಎಮ್ ಘಟಕದಲ್ಲಿ ನೀರಿನ ಹರಿವಿಗೆ ಅಡಚಣೆಯಾಗಿರುವ ಕಾರಣಕ್ಕೆ ಸ್ಥಳಕ್ಕೆ ಬರುವಂತೆ ಹೇಳಿದ ಹಿನ್ನಲೆಯಲ್ಲಿ ಸಂಜೆ 5 ಗಂಟೆಗೆ ತೆಂಕನಿಡಿಯೂರು ಸ್ಮಶಾನದ ಬಳಿ ಇರುವ ಎಸ್ಎಲ್ಆರ್ಎಮ್ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಬಂದ ಸಮಯದಲ್ಲಿ ಆರೋಪಿಗಳಾದ ಶರತ್ ಬೈಲಕೆರೆ, ಕಿರಣ ಪಿಂಟೊ, ವಿಜಯಪ್ರಕಾಶ್, ಗಾಯತ್ರಿ, ಪುಷ್ಪ ಶಾಲಿನಿ, ಕೃಷ್ಣ ಶೆಟ್ಟಿ ಹಾಗೂ ಇತರರು ಸೇರಿ ಏಕವಚನದಲ್ಲಿ ಬೈದಿದ್ದರು. ನೀನು ಕೀಳು ಜಾತಿಯವಳು, ಎಲ್ಲಿಂದಲೋ ಬಂದು ಇಲ್ಲಿ ಅಧ್ಯಕ್ಷಳಾಗಿದ್ದಿ. ಕೀಳು ಜಾತಿಯವಳಾದ ನಿನಗೆ ಏನು ಕೆಲಸ ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಬಿಡುವುದಿಲ್ಲ ಎಂದು ಹಲ್ಲೆ ನಡೆಸಲು ಮುಂದಾಗಿದ್ದಲ್ಲದೆ ಜೀವಬೆದರಿಕೆ ಒಡ್ಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳು ಶೋಭಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದರಿಂದ ಉಸಿರಾಟದ ತೊಂದರೆ ಕೂಡ ಆಗಿದೆ. ಶೋಭಾರನ್ನು ಅಧ್ಯಕ್ಷ ಪದವಿಯಿಂದ ಕೆಳಗಿಳಿಸಬೇಕೆಂಬ ಉದ್ದೇಶವಿಟ್ಟುಕೊಂಡು ಈ ಕೃತ್ಯ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಎಸ್ಸಿ & ಎಸ್ಟಿ ಕಾಯ್ದೆಯಡಿಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಕಾರ್ಕಳ : ಕಳೆದ 23 ವರ್ಷಗಳಿಂದ ಅಗ್ನಿಶಾಮಕ ದಳದಲ್ಲಿ ಚಾಲಕರಾಗಿದ್ದ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಅಮನಬೆಟ್ಟುವಿನ ನಿವಾಸಿ ಚಂದ್ರಶೇಖರ ಅವರು ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿಯನ್ನು ಹೊಂದಿದ್ದಾರೆ.
2001ರಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿದ್ದ ಅವರು ಬೆಳ್ತಂಗಡಿ, ಮೂಡುಬಿದಿರೆ ಮತ್ತು ಕಾರ್ಕಳದಲ್ಲಿ ಸೇವೆಯನ್ನು ಸಲ್ಲಿಸಿದ್ದರು.
ಇದೀಗ ಕಾರ್ಕಳದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಅವರು ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ.
ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗಮಕ ವಾಚಕ ವ್ಯಾಕ್ಯಾನ ಕಾರ್ಯಕ್ರಮ ಉದ್ಘಾಟನೆ
ಮಣಿಪಾಲ : ಶಿವ ಪ್ರೇರಣಾ ಚಾರಿಟೇಬಲ್ ಟ್ರಸ್ಟ್ (ರಿ.) ಸರಳೇಬೆಟ್ಟು ಮಣಿಪಾಲ ಮತ್ತು ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ಗಮಕವಾಚನ ವ್ಯಾಖ್ಯಾನ ಕಾರ್ಯಕ್ರಮ (ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯದಿಂದ) “ಆತ್ಮ ವಿಕ್ರಯ” ಎಂಬ ಗಮಕ ವಾಚಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ರತ್ನ ಸಂಜೀವ ಕಲಾಮಂಡಲ ಸರಳೇಬೆಟ್ಟು ಮಣಿಪಾಲ ಇಲ್ಲಿ ನೆರವೇರಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸತೀಶ್ ಕುಮಾರ್ ಕೆಮ್ಮಣ್ಣು, ತಾಲೂಕು ಅಧ್ಯಕ್ಷರಾದ ಪ್ರೊ. ಎಂಎಲ್ ಸಾಮಗ, ಗಮಕ ವ್ಯಾಖ್ಯಾನಕಾರರಾದ ಡಾ.ರಾಘವೇಂದ್ರ ರಾವ್, ಗಮಕ ವಾಚಕಿ ಮಂಜುಳಾ ಮಂಚಿ, ಪಾಟೀಲ್ ಕ್ಲೋತ್ ಸ್ಟೋರ್ ಮಾಲೀಕರಾದ ಗಣೇಶ್ ಪಾಟೀಲ್ ಹಾಗೂ ರಮಾನಂದ ಸಾಮಂತ್, ಸಂಗೀತ ಶಿಕ್ಷಕಿ ಉಷಾ ಹೆಬ್ಬಾರ್ ಉಪಸ್ಥಿತರಿದ್ದರು.
ಶ್ರೀಯುತ ನರಸಿಂಹ ನಾಯಕ್ ಇವರು ಕಾರ್ಯಕ್ರಮ ನಿರೂಪಿಸಿದರು. ಹಾರ್ಮೋನಿಯಂ ಗುರುಗಳಾದ ನಿತ್ಯಾನಂದ ನಾಯಕ್ ಹಾಗೂ ತಬಲ ಗುರುಗಳಾದ ನಾಗರಾಜ್ ಕರ್ವಿ (ಸಂಸ್ಥೆಯ ಶಿಕ್ಷಕರು) ಹಾಗೂ ಇತರರು ಜೊತೆಗಿದ್ದರು.
ಉಡುಪಿ : ಕರ್ನಾಟಕ ಪ್ರೆಸ್ ಕ್ಲಬ್ ಉಡುಪಿ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹೋಟೆಲ್ ಮಥುರಾ ಕಂಫರ್ಟ್ಸ್ ಸಭಾಂಗಣದಲ್ಲಿ ಇಂದು ನಡೆಯಿತು.
ಕಾರ್ಯಕ್ರಮವನ್ನು ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸುಚಿತ್ ಕೋಟ್ಯಾನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಬಳಿಕ ಮಾತನಾಡಿದ ಅವರು ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಆರಂಭಗೊಂಡ ದಿನವನ್ನು ಪತ್ರಿಕಾ ದಿನವನ್ನಾಗಿ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ರೆವರೆಂಡ್ ಹರ್ಮನ್ ಮೊಗ್ಲಿoಗ್ ಅವರು 1843 ಜುಲೈ 1 ರಂದು ಮಂಗಳೂರು ಸಮಾಚಾರ ಪತ್ರಿಕೆಯನ್ನು ಆರಂಭಿಸಿದರು. ಕನ್ನಡ ಪತ್ರಿಕೋದ್ಯಮದ ಚರಿತ್ರೆ ಆರಂಭವಾಗಿರುವುದು ತುಳುನಾಡಿನ ಮಂಗಳೂರಿನಲ್ಲಿ ಇದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಸರಿ ತಪ್ಪಿನ ಗೆರೆ ಬಹಳ ಬೇಗನೆ ಅಳಿಸಿ ಹೋಗುತ್ತದೆ. ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿಗಳನ್ನು ಜನ ಹೇಗೆ ನೋಡುತ್ತಾರೆ ಎಂಬುದೇ ಪ್ರಶ್ನೆ ಇದೇ ವರದಿಗಾರರಿಗೆ ಇರುವಂತಹ ದೊಡ್ಡ ಸವಾಲು ಎಂದರು. ಕರ್ನಾಟಕ ಪ್ರೆಸ್ ಕ್ಲಬ್ ನ ನೂತನ ಸದಸ್ಯರಿಗೆ ಐಡಿ ಕಾರ್ಡ್ ವಿತರಿಸಿ ಮಾಧ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪ್ರೆಸ್ ಕ್ಲಬ್ ಉಡುಪಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ವಹಿಸಿದ್ದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಂಚಾಲಕ ರೂಪೇಶ್ ಕಲ್ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಜೊತೆ ಕಾರ್ಯದರ್ಶಿ ಅನಿಲ್ ಆಳ್ವ ಖಜಾಂಚಿ ರಿತೇಶ್ ಕುಮಾರ್ ಸದಸ್ಯರಾದ ಸ್ಟೀವನ್, ನಂದಕುಮಾರ್, ಅನುಷಾ, ಮೊದಲಾದವರು ಉಪಸ್ಥಿರಿದ್ದರು.
ಕರ್ನಾಟಕ ಕ್ಲಬ್ ನ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಸ್ವಾಗತಿಸಿ, ಮಾಲತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕೇಂದ್ರ ಸಚಿವ ಗಡ್ಕರಿ ಭೇಟಿಯಾದ ಸಂಸದ ಬಿ.ವೈ ರಾಘವೇಂದ್ರ; ರಸ್ತೆ ಯೋಜನೆಗಳ ಅನುಷ್ಠಾನಕ್ಕೆ ಮನವಿ
ಬೈಂದೂರು : ಶಿವಮೊಗ್ಗ ಸದಸ್ಯರಾದ ಬಿ. ವೈ. ರಾಘವೇಂದ್ರ ಅವರು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಇಂದು ಗೃಹ ಕಛೇರಿಯಲ್ಲಿ ಭೇಟಿ ಮಾಡಿ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗಬೇಕಾದ ಹೆದ್ದಾರಿ ಕಾಮಗಾರಿಗಳ ಅಗತ್ಯತೆಗಳ ಬಗ್ಗೆ ಚರ್ಚಿಸಿ ಈ ಕೆಳಕಂಡ ಯೋಜನೆಗಳಿಗೆ ಅನುಮೋದನೆ ದೊರಕಿಸಿಕೊಡಲು ಮನವಿ ಮಾಡಿದ್ದಾರೆ.
ಆಗುಂಬೆಘಾಟಿ ರಸ್ತೆಗೆ ಪರ್ಯಾಯವಾಗಿ ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 4 ಪಥದ ಸುರಂಗ ಮಾರ್ಗದ ರಸ್ತೆ ನಿರ್ಮಾಣ,
ಕುಂದಾಪುರದಿಂದ ಗಂಗೊಳ್ಳಿ ಬಂದರಿನವರೆಗೆ 5.60 ಕಿ.ಮೀ ಉದ್ದದ ರಸ್ತೆ ಹಾಗು ಭಾರೀ ಸೇತುವೆ ನಿರ್ಮಾಣ, ರಾ. ಹೆದ್ದಾರಿ 766 ಸಿ ಬೈಂದೂರಿನಿಂದ ವಿವಿಧೋದ್ದೇಶ ಬಂದರಿನವರೆಗೆ ತಾರಾಪತಿ ಅಳವೆಕೋಡಿ ಮೂಲಕ ವಿಸ್ತರಣೆ ಮಾಡಿ 3.80 ಕಿ.ಮೀ ಉದ್ದದ ರಸ್ತೆ ಹಾಗು ಸೇತುವೆಗಳ ನಿರ್ಮಾಣ, ರಾ. ಹೆದ್ದಾರಿ 766 ಸಿ ಬೈಂದೂರಿನಿಂದ ರಾಣಿಬೆನ್ನೂರಿನವರೆಗೆ ಬಾಕಿ ಉಳಿದ ಬಾಗಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣ, ರಾ. ಹೆದ್ದಾರಿ 369 ಇ ಸಾಗರದಿಂದ ಮರಕುಟಕವರೆಗೆ ದ್ವಿಪಥ ರಸ್ತೆ (ಸಾಗರ ಪಟ್ಟಣದ ಬೈಪಾಸ್ ರಸ್ತೆ ಸೇರಿ) ನಿರ್ಮಾಣಕ್ಕೆ ಮನವಿ ಮಾಡಿದ್ದಾರೆ.
ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಸಂಬಂದಿಸಿದ ಕೇಂದ್ರ ಭೂಸಾರಿಗೆ ಮಂತ್ರಾಲಯದ ಅಧಿಕಾರಿಗಳಿಗೆ ಕಾಮಗಾರಿಗಳ ಯೋಜನಾವರದಿ ತಯಾರಿಸಲು ಸಮಾಲೋಚಕರನ್ನು ತಕ್ಷಣ ನಿಯೋಜಿಸಲು ಸೂಚಿಸಿದ್ದು ಯೋಜನಾ ವರದಿ ಪಡೆದು ಮಂಜೂರಾತಿ ನೀಡಲು ಸೂಚಿಸಿದ್ದಾರೆ.
ಉಡುಪಿ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ : ಹಿರಿಯ ಪತ್ರಕರ್ತರಿಗೆ ಪತ್ರಿಕಾ ದಿನದ ಗೌರವ
ಉಡುಪಿ : ಪತ್ರಕರ್ತರು ಕನಸು ಕಾಣಬೇಕಾಗಿದೆ. ದೊರೆತ ಅವಕಾಶವನ್ನು ಬಳಸಿಕೊಳ್ಳಬೇಕು. ನಮ್ಮ ಕೆಲಸದ ಜೊತೆಗೆ ಇತರರ ಸಮಸ್ಯೆಗೆ ಮಿಡಿಯುವುದು ಅತೀ ಮುಖ್ಯ. ನಮ್ಮ ಸೇವೆಯ ಮೂಲಕವೇ ಸಮಾಜವನ್ನು ತಿದ್ದುವ ಕಾರ್ಯ ಮಾಡಬಹುದಾಗಿದೆ ಎಂದು ಮಣಿಪಾಲ ಎಂಐಸಿಯ ಟೆವಿಷಜನ್ ಮತ್ತು ಫಿಲ್ಮ್ ಪ್ರೊಡಕ್ಷನ್ ವಿಭಾಗದ ಪ್ರೋಫೆಸರ್ ಆಫ್ ಪ್ರಾಕ್ಟಿಸ್ ಸತ್ಯಬೋಧ ಜೋಶಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆಯನ್ನು ಕರ್ನಾಟಕದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ್’ ಇದರ ಮೂಲಪ್ರತಿಯನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಮಾಜವನ್ನು ಸುಧಾರಿಸಲು ಹೊರಟ ನಾವು ನಮ್ಮ ಬದುಕನ್ನು ಕೂಡ ನೋಡಿಕೊಳ್ಳಬೇಕಾಗುತ್ತದೆ. ಅದರ ಕಡೆ ನಾವು ಲಕ್ಷ್ಯವಹಿಸಬೇಕಾಗಿರುವುದು ಅತೀ ಅಗತ್ಯವಾಗಿದೆ. ಮುಂದಿನ ಜನಾಂಗಕ್ಕೆ ಈ ಕ್ಷೇತ್ರ ಸುಂದರ ಆಗಿರಲು ಏನು ಮಾಡಬೇಕು ಎಂಬುದರ ಬಗ್ಗೆಯೂ ನಾವೆಲ್ಲ ಚಿಂತನೆ ಮಾಡಬೇಕು. ಜಗತ್ತು ಶ್ರಮ ವಹಿಸಿ ಕೆಲಸ ಮಾಡುವುದರಿಂದ ನಡೆಯುತ್ತೆ ಹೊರತು ಸಿದ್ಧಾಂತದಿಂದ ಅಲ್ಲ. ಹಾಗಾಗಿ ಸಿದ್ಧಾಂತಕ್ಕಿಂತ ಕೆಲಸ ಮುಖ್ಯ ಎಂದರು.
ಸಾಹಿತ್ಯದ ಕಾರ್ಯಕ್ರಮಗಳನ್ನು ಟಿವಿ ಮಾಧ್ಯಮಗಳಲ್ಲಿ ತೋರಿಸಿದರೆ ಜನ ನೋಡುತ್ತಾರೆಯೇ ಎಂಬುದು ಪ್ರಶ್ನೆ. ಆದುರದಿಂದ ಜನರು ಏನನ್ನು ಬಯಸುತ್ತಾರೆಯೇ ಅದನ್ನೇ ಟಿವಿ ಮಾಧ್ಯಮಗಳು ತೋರಿಸುತ್ತವೆ. ಆದುದ ರಿಂದ ನಾವು ಕೂಡ ಸಮಾಜದ ಉದ್ಧಾರಕ್ಕೆ ಕಾರಣವಾಗಬೇಕು. ಅದಕ್ಕೆ ಜನ ಕೂಡ ಬದಲಾಗಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
‘ಪೊಲೀಸ್ ತನಿಖೆಯಲ್ಲಿ ಮಾಧ್ಯಮಗಳ ಪಾತ್ರ’ ಕುರಿತು ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ಧಲಿಂಗಪ್ಪ, ಮಾಧ್ಯಮಗಳು ಜನರ ಭಾವನೆಗಳ ಕಡೆ ಹೆಚ್ಚು ಗಮನ ಕೊಡದೇ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಾಗಿದೆ. ಇಂದ ಜನರ ಮನಸ್ಥಿತಿ ಕೂಡ ಬದಲಾಗಿ, ನರಾತಕ್ಮತದ ಕಡೆ ಹೋಗುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಆ ಬಗ್ಗೆ ನಾವೆಲ್ಲ ಆಲೋಚನೆ ಮಾಡಬೇಕಾಗಿರುವುದು ಅತೀ ಅಗತ್ಯ ಎಂದು ಹೇಳಿದರು.
ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳು ಎಸಗುವ ಲೋಪಗಳನ್ನು ಜನರ ಮುಂದೆ ಇಡುವ ಜವಾಬ್ದಾರಿ ಮಾಧ್ಯಮದ್ದಾಗಿದೆ. ಈ ರಂಗ ಸರಕಾರ ಸೌಲಭ್ಯಗಳನ್ನು ಪಡೆದುಕೊಳ್ಳದೇ ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ಕೆಲಸ ಮಾಡುತ್ತದೆ. ಸರಕಾರ ಸಾಕಷ್ಟು ಹಗರಣಗಳನ್ನು ಮಾಧ್ಯಮಗಳೇ ಬಯಲಿಗೆ ಎಳೆದಿದೆ ಎಂದ ಅವರು, ಇಂದು ಮಾಧ್ಯಮಗಳು ವ್ಯಕ್ತಿಯ ಭೌತಿಕವಾಗಿ ಹರಣ ಮಾಡುವ ಬದಲು ಚಾರಿತ್ರ ಹರಣ ಮಾಡುತ್ತಿದೆ. ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡಿದರೆ ಸ್ವಾಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐಎಂಎ ಉಡುಪಿ ಕರಾವಳಿ ಅಧ್ಯಕ್ಷೆ ಡಾ.ರಾಜಲಕ್ಷ್ಮೀ, ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಉಜ್ವಲ್ ಗ್ರೂಪ್ನ ಆಡಳಿತ ನಿರ್ದೇಶಕ ಅಜಯ್ ಪಿ.ಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. ಹಿರಿಯ ಪತ್ರಕರ್ತ ಮಂಜುನಾಥ ಶೆಣೈ ಜನ್ನಾಡಿ ಅವರಿಗೆ ಪತ್ರಿಕಾ ದಿನದ ಗೌರವ ಸಲ್ಲಿಸಲಾಯಿತು. ನಿವೃತ್ತ ಉಪಸಂಪಾದಕ ಜಯಾನಂದ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಅರಾಡಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ಅತಿಥಿಗಳ ಪರಿಚಯವನ್ನು ಸಂಘದ ಕಾರ್ಯದರ್ಶಿ ರಹೀಂ ಉಜಿರೆ, ಸನ್ಮಾನಿತರ ಪರಿಚಯವನ್ನು ಕುಂದಾಪುರ ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಬೀಜಾಡಿ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಪ್ರಭಾಕರ ಆಚಾರ್ಯ ಚಿತ್ತೂರು ಮಾಡಿದರು. ವಿದ್ಯಾರ್ಥಿಗಳ ಪಟ್ಟಿಯನ್ನು ಮೈಕಲ್ ರೋಡ್ರಿಗಸ್ ವಾಚಿಸಿದರು.
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಇಂಡಿಯಾ ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಮತ್ತು ಪರಿಗಣಿತ ವಿಶ್ವವಿದ್ಯಾನಿಲಯ, ಪ್ರಮುಖ ಬಹುಶಿಸ್ತೀಯ ವಿಶ್ವವಿದ್ಯಾನಿಲಯವು ಡಾ. ರವಿರಾಜ ಎನ್. ಸೀತಾರಾಮ್, ನಿರ್ದೇಶಕ – ಯೋಜನೆ ಮತ್ತು ಮಾನಿಟರಿಂಗ್, ಆಗಿದ್ದ ಇವರು ಮುಖ್ಯ ನಿರ್ವಹಣಾ ಅಧಿಕಾರಿಯಾಗಿ (ಸಿ.ಓ.ಓ.) ನೇಮಕಗೊಂಡಿದ್ದಾರೆ. ಇದು ಜುಲೈ 01, 2024 ರಿಂದ ಜಾರಿಗೆ ಬರಲಿದೆ. ಡಾ. ರವಿರಾಜ ಅವರು ಮಾಹೆಯ ಶೈಕ್ಷಣಿಕೇತರ ಕ್ರಿಯಾತ್ಮಕ ವಿಭಾಗಗಳಾದ ಸಾಮಾನ್ಯ ಸೇವೆಗಳು, ಖರೀದಿ, ಯೋಜನೆಗಳು, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ರೂಪಾಂತರ, ಮಾನವ ಸಂಪನ್ಮೂಲಗಳು, ಕಾನೂನು, ಕಾರ್ಪೊರೇಟ್ ಸಂಬಂಧಗಳು, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ, ಹಾಸ್ಟೆಲ್ಗಳು ಮತ್ತು ಕ್ಯಾಂಪಸ್ ಸುರಕ್ಷತೆ, ಸಾರ್ವಜನಿಕರ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವತ್ತ ಗಮನಹರಿಸುತ್ತಾರೆ.
ಡಾ.ರವಿರಾಜ ಅವರು 1993 ರಲ್ಲಿ ಜೈವಿಕ ವಿಜ್ಞಾನದಲ್ಲಿ ಎಂ.ಎಸ್ಸಿ. ಮತ್ತು 1997ರಲ್ಲಿ ಜೈವಿಕ ವಿಜ್ಞಾನದಲ್ಲಿ (ಸೂಕ್ಷ್ಮಜೀವಶಾಸ್ತ್ರ) ಡಾಕ್ಟರೇಟ್ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದಿರುತ್ತಾರೆ. ಕಾರ್ಯಾಚರಣೆ ನಿರ್ವಹಣೆಯಲ್ಲಿ ಎಂಬಿಎ ಕೂಡ ಪೂರ್ಣಗೊಳಿಸಿದ್ದಾರೆ. ಇದಲ್ಲದೆ, ಅವರು ಕೆನಡಾದ ಮೌಂಟ್ ಆಲಿಸನ್ ವಿಶ್ವವಿದ್ಯಾಲಯ ಮತ್ತು ಆಲ್ಬರ್ಟ್ ಐನ್ಸ್ಟೈನ್ ಕಾಲೇಜ್ ಆಫ್ ಮೆಡಿಸಿನ್, NY, USA ನಲ್ಲಿ ಪೋಸ್ಟ್ಡಾಕ್ಟರಲ್ ತರಬೇತಿಯನ್ನು ಪಡೆದರು, ಅಲ್ಲಿ ಅವರು 2008 ರವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇದರ ನಂತರ, ಅವರು ನ್ಯೂಯಾರ್ಕ್ನ ಮಾಂಟೆಫಿಯೋರ್ ವೈದ್ಯಕೀಯ ಕೇಂದ್ರ/ ಆಲ್ಬರ್ಟ್ ಐನ್ಸ್ಟೈನ್ ಕ್ಯಾನ್ಸರ್ ಕೇಂದ್ರಕ್ಕೆ ಸೇರಿದರು ಮತ್ತು 2010 ರವರೆಗೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
2020ರಲ್ಲಿ, ಅವರು ಕಾರ್ಪೊರೇಟ್ ಸಂಬಂಧಗಳ ಸ್ಥಾಪಕ ನಿರ್ದೇಶಕರಾಗಿ ಮಾಹೆ ಮಣಿಪಾಲಕ್ಕೆ ಸೇರಿದರು ಮತ್ತು ನಂತರ ಮಣಿಪಾಲ್ ಸೆಂಟರ್ ಫಾರ್ ಬಯೋಥೆರಪ್ಯೂಟಿಕ್ಸ್ ರಿಸರ್ಚ್ (MCBR) ನಲ್ಲಿ ಪ್ರೊಫೆಸರ್ ಮತ್ತು ಸಂಯೋಜಕರಾಗಿ ನೇಮಕಗೊಂಡರು. ಅವರ ನಾಯಕತ್ವದಲ್ಲಿ, ಎಂಸಿಬಿಆರ್ ಕೇಂದ್ರವು ಮಾಹೆ ಮತ್ತು ಭಾರತದ ಪ್ರಮುಖ ಸಂಶೋಧನಾ ಕೇಂದ್ರವಾಗಿ ಹೊರಹೊಮ್ಮಿತು. ಮಾರ್ಚ್ 2023ರಲ್ಲಿ, ಅವರು ಯೋಜನೆ ಮತ್ತು ಮಾನಿಟರಿಂಗ್ ವಿಭಾಗದಲ್ಲಿ ನಿರ್ದೇಶಕರಾಗಿ ನೇಮಕಗೊಂಡರು.
ಮಾಹೆ, ಮಣಿಪಾಲದ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂಡಿ ವೆಂಕಟೇಶ್ ಅವರು, ಡಾ ರವಿರಾಜ ಅವರನ್ನು ಅಭಿನಂದಿಸಿದರು.
ತಮ್ಮ ಡಾಕ್ಟರೇಟ್ ಮತ್ತು ಪೋಸ್ಟ್ ಡಾಕ್ಟರಲ್ ಅವಧಿಯಲ್ಲಿ ಸೂಕ್ಷ್ಮ ಜೀವವಿಜ್ಞಾನ, ಕೋಶ ಮತ್ತು ಆಣ್ವಿಕ ಜೀವಶಾಸ್ತ್ರ, ನ್ಯಾನೊ-ಬಯೋಟೆಕ್ನಾಲಜಿ, ಕ್ಯಾನ್ಸರ್ ಜೀವಶಾಸ್ತ್ರ ಮತ್ತು ಪುನರುತ್ಪಾದಕ ಔಷಧದಂತಹ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವಿಜ್ಞಾನಿಯಾಗಿ ಡಾ. ರವಿರಾಜ ಅವರು ಪಿಎಚ್ಡಿ ನಂತರದ 27 ವರ್ಷಗಳ ಜೀವಶಾಸ್ತ್ರದಲ್ಲಿನ ಸಂಶೋಧನಾ ಅನುಭವವನ್ನು ವಿವಿಧ ಕ್ಷೇತ್ರಗಳಲ್ಲಿ ಹೊಂದಿದ್ದಾರೆ ಅವರು ಅಮೇರಿಕನ್ ಲಂಗ್ ಅಸೋಸಿಯೇಷನ್, USA, ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ, USA, ವೈಜ್ಞಾನಿಕ ಸಂಶೋಧನೆಯ ವಾಯುಪಡೆಯ ಕಚೇರಿ, USA ಮತ್ತು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸೇರಿದಂತೆ ಅನೇಕ ಧನಸಹಾಯ ಪಡೆದ ಸಂಶೋಧನಾ ಯೋಜನೆಗಳಿಗೆ ಪ್ರಧಾನ ತನಿಖಾಧಿಕಾರಿ/ ಸಹ-ತನಿಖಾಧಿಕಾರಿಯಾಗಿದ್ದರು. ಅವರು ಮೈಕೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ (MSI) ನ ಆಜೀವ ಸದಸ್ಯರಾಗಿದ್ದಾರೆ ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಸ್ಟೆಮ್ ಸೆಲ್ ರಿಸರ್ಚ್ (ISSCR), USA ಸದಸ್ಯರಾಗಿದ್ದಾರೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ, ಡಾ. ರವಿರಾಜ ಎನ್.ಎಸ್ ಅವರನ್ನು ಅಭಿನಂದಿಸುತ್ತದೆ ಮತ್ತು ಅವರ ಹೊಸ ಜವಾಬ್ದಾರಿಯಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸುತ್ತದೆ.
ಬಂಕೇರಕಟ್ಟ ಸೇತುವೆ ಮುಳುಗಡೆ : ಜಿಲ್ಲಾಧಿಕಾರಿಗಳೊಂದಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ
ಉಡುಪಿ : ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಕೇರಕಟ್ಟ ಸೇತುವೆ ಮಳೆಗಾಲದಲ್ಲಿ ಮುಳುಗಡೆಯಾಗಿ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ. ಯವರೊಂದಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸ್ಥಳಕ್ಕೆ ಭೇಟಿ ನೀಡಿ ಮಳೆ ನೀರು ಸರಾಗವಾಗಿ ಹರಿಯಲು ತಾತ್ಕಾಲಿಕವಾಗಿ ಸೇತುವೆಯ ಕೆಳಭಾಗದ ಹೂಳು ಹಾಗೂ ಕಸಕಡ್ಡಿಗಳನ್ನು ತಕ್ಷಣ ತೆರವು ಮಾಡಲು ಕ್ರಮ ಕೈಗೊಂಡು ಹೊಸ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗ ಡಾ. ಅರುಣ್ ಕೆ., ಕುಂದಾಪುರ ಉಪ ವಿಭಾಗಾಧಿಕಾರಿ ಶ್ರೀಮತಿ ರಶ್ಮಿ, ನಗರಸಭಾ ಸದಸ್ಯರಾದ ಶ್ರೀ ಸುಂದರ ಕಲ್ಮಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜಾತ ಶೆಟ್ಟಿ, ಪಂಚಾಯತ್ ಸದಸ್ಯರಾದ ರಾಜೇಶ್ ಪೂಜಾರಿ, ಶಶಿಧರ ಪೂಜಾರಿ, ಶ್ರೀ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕ ಡಾ| ಶ್ಯಾಮ ಪ್ರಸಾದ್ ಮುಖರ್ಜಿ ಯಶೋಗಾಥೆ ಉಪನ್ಯಾಸ
ಉಡುಪಿ : ಭಾರತೀಯ ಜನಸಂಘದ ಸಂಸ್ಥಾಪಕ ಡಾ| ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪುಣ್ಯ ಸಂಸ್ಮರಣೆಯ ಪ್ರಯುಕ್ತ ಅವರ ಜೀವನಾದರ್ಶಗಳ ಯಶೋಗಾಥೆ ಕುರಿತು ಉಪನ್ಯಾಸ ಕಾರ್ಯಕ್ರಮವು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು.
ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಲೆಕ್ಕ ಪರಿಶೋಧಕ ಗುಜ್ಜಾಡಿ ಪ್ರಭಾಕರ ನಾಯಕ್ ಉಪನ್ಯಾಸವನ್ನು ನಡೆಸಿಕೊಟ್ಟರು.
ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಡಾ| ಶ್ಯಾಮ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಿದರು. ಬಳಿಕ ಗುಜ್ಜಾಡಿ ಪ್ರಭಾಕರ್ ನಾಯಕ್ರವರರಿಗೆ ಹೂಗುಚ್ಚ ಮತ್ತು ಪುಸ್ತಕವನ್ನು ನೀಡಿ ಸ್ವಾಗತಿಸಿದ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಡಾ| ಶ್ಯಾಮ ಪ್ರಸಾದ್ ಮುಖರ್ಜಿ ಅವರ ದೇಶ ಪ್ರೇಮ, ತ್ಯಾಗ, ಬಲಿದಾನ ಹಾಗೂ ಆದರ್ಶಗಳು ಪಕ್ಷದ ಕಾರ್ಯಕರ್ತರಿಗೆ ಪ್ರೇರಣಾದಾಯಕ. ಡಾ| ಮುಖರ್ಜಿ ಅವರ ನಿಸ್ವಾರ್ಥ ಸೇವಾ ಮನೋಭಾವ, ದೂರದರ್ಶಿತ್ವದ ಚಿಂತನೆಗಳು, ಹೋರಾಟಗಳು ಸದಾ ಅನುಕರಣೀಯ. ಮೌಲ್ಯಯುತ ತತ್ವಾದರ್ಶಗಳನ್ನು ನಾಡಿಗೆ ನೀಡಿದ ಡಾ| ಶ್ಯಾಮ ಪ್ರಸಾದ್ ಮುಖರ್ಜಿ ಪ್ರಾತ: ಸ್ಮರಣೀಯರು ಎಂದರು.
ಗುಜ್ಜಾಡಿ ಪ್ರಭಾಕರ ನಾಯಕ್ ಅವರು ಉಪನ್ಯಾಸವನ್ನು ನಡೆಸಿ, ‘ಒಂದು ದೇಶದಲ್ಲಿ ಎರಡು ಧ್ವಜ, ಎರಡು ಪ್ರಧಾನಿ, ಎರಡು ಸಂವಿಧಾನ ಇರಲು ಸಾಧ್ಯವಿಲ್ಲ’ ಎಂಬ ತತ್ವವನ್ನು ಪ್ರತಿಪಾದಿಸಿ ಕಾಶ್ಮೀರದ ವಿಮೋಚನೆಗಾಗಿ ಹೋರಾಡಿ ಹುತಾತ್ಮರಾದ ಡಾ| ಶ್ಯಾಮ ಪ್ರಸಾದ್ ಮುಖರ್ಜಿ ಅವರ ದೇಶಭಕ್ತಿ, ಸಾಧನೆ, ಹೋರಾಟಗಳು ಮತ್ತು ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಪರಿ, ತ್ಯಾಗ, ಬಲಿದಾನದ ಯಶೋಗಾಥೆಯನ್ನು ಎಳೆ ಎಳೆಯಾಗಿ ಬಿಡಿಸಿ ಅವರ ಜೀವನಾದರ್ಶಗಳ ಚಿತ್ರಣವನ್ನು ಸಭೆಯ ಮಂದಿಟ್ಟರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಯರಾಮ್ ಸಾಲ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ಅನಿತಾ ಶ್ರೀಧರ್, ಶ್ರೀಕಾಂತ್ ನಾಯಕ್, ರಾಘವೇಂದ್ರ ಕುಂದರ್ ಉಪಸ್ಥಿತರಿದ್ದರು.