ಉಡುಪಿ : ಶಿವಾನಂದ ಶೆಟ್ಟಿ ಮತ್ತು ಸುಜಾತ ಶೆಟ್ಟಿ ಹೆಬ್ರಿ ಇವರ ಪುತ್ರಿ, ವಿದ್ಯೋದಯ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಉಡುಪಿ ಇದರ ಏಳನೇ ತರಗತಿ ವಿಧ್ಯಾರ್ಥಿನಿ ಹಾಗೂ ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ, ಬಹುಮುಖ ಪ್ರತಿಭೆಯ ಕುಮಾರಿ ಶಿವಾನಿ ಶೆಟ್ಟಿ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಎಸ್ಜಿಎಸ್ ಅಂತರ್ ರಾಷ್ಟ್ರೀಯ ಯೋಗ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಜರುಗಿದ ಅಂತರ್ ರಾಜ್ಯ ಯೋಗಾಸನ ಸ್ಪರ್ಧೆಯಲ್ಲಿ ಉತ್ಕೃಷ್ಟ ಪ್ರದರ್ಶನ ನೀಡಿ ಅಂತರ್ ರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆ ಆಗಿದ್ದಾಳೆ. ಇವಳಿಗೆ ಯೋಗ ತರಬೇತಿಯನ್ನು ಕೆ. ನರೇಂದ್ರ ಕಾಮತ್ ಕಾರ್ಕಳ ಇವರು ನೀಡಿದ್ದಾರೆ.
NewsDesk
ಉಡುಪಿ : ಜಿಲ್ಲೆಯಾದ್ಯಂತ ವ್ಯಾಪಕವಾಗಿ ಡೆಂಗ್ಯೂ ಹಾಗೂ ಇತರ ಕೆಲವು ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುತ್ತಿದ್ದು ರೋಗಿಗಳು ಸ್ವ-ಔಷಧೋಪಾಚಾರ ಮಾಡಿಕೊಳ್ಳುವುದರಿಂದ ರೋಗ ಪತ್ತೆ ಮಾಡಿ, ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯದೆ ಪ್ರಾಣಾಪಾಯಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಔಷಧ ವ್ಯಾಪಾರಿಗಳು ಕಡ್ಡಾಯವಾಗಿ ವೈದ್ಯರ ಸಲಹಾ ಚೀಟಿ ಇಲ್ಲದೆ ಪ್ಯಾರಾಸಿಟಿಮಲ್ ಮತ್ತು ಇತರೆ ಆಂಟಿಬಯೋಟಿಕ್ ಔಷಧಗಳ ಮಾರಾಟ ಮಾಡಬಾರದು. ಹಾಗೂ ಜಿಲ್ಲೆಯ ಎಲ್ಲಾ ರಕ್ತ ಕೋಶ ಕೇಂದ್ರದವರು ರಕ್ತ ಹಾಗೂ ರಕ್ತ ಉತ್ಪನ್ನಗಳ ಕೊರತೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ರಕ್ತದಾನಿಗಳ ಪಟ್ಟಿಯನ್ನು ಸಿದ್ಧ ಪಡಿಸಿಟ್ಟುಕೊಂಡು ಅವಶ್ಯಕತೆಗೆ ಅನುಗುಣವಾಗಿ ರಕ್ತವನ್ನು ಪಡೆದು ದಾಸ್ತಾನು ಇಟ್ಟುಕೊಳ್ಳಬೇಕೆಂದು ಉಡುಪಿ ಸಹಾಯಕ ಔಷಧಿ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿಯಲ್ಲಿ “ಜೆಸಿಬಿ” ಅಸ್ತ್ರ! ಗುತ್ತಿಗೆದಾರನಿಂದ ಕಳಪೆ ರಸ್ತೆ ಕಾಮಗಾರಿ; ಜೆಸಿಬಿಯಿಂದ ರಸ್ತೆ ಅಗೆಸಿ ವಾರ್ನಿಂಗ್!
ಉಡುಪಿ : ಮಳೆಗೆ ನಗರದ ಹಲವು ರಸ್ತೆಗಳು ಹದಗೆಟ್ಟಿದ್ದು ಸವಾರರು ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಾ ಮುಂದೆ ಸಾಗುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಡಾಂಬರೀಕರಣ ಮಾಡಿದ್ದ ರಸ್ತೆಗಳೂ ಹದಗೆಟ್ಟಿದ್ದು ಹೊಂಡಗಳಿಂದ ಕೂಡಿವೆ. ನಗರದ ಬ್ರಹ್ಮಗಿರಿಯಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆವರೆಗಿನ ಮುಖ್ಯ ರಸ್ತೆ ಕೆಲವು ತಿಂಗಳುಗಳ ಹಿಂದೆಯಷ್ಟೆ ಡಾಂಬರೀಕರಣಗೊಂಡಿತ್ತು. ಇದೀಗ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಎದುರಾಗಿದೆ.
ನಗರಸಭೆ ಪರ್ಯಾಯ ಮಹೋತ್ಸವದ ಅನುದಾನವಾಗಿ ಈ ರಸ್ತೆಗೆ 35 ಲಕ್ಷ ಹಣ ಮಂಜೂರು ಮಾಡಿತ್ತು. ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸಿ, ಇತ್ತೀಚೆಗೆ ಅದರ ಮೇಲೆ ತೇಪೆ ಹಚ್ಚಿಸಿದ್ದರು. ಇದರ ವಿರುದ್ಧ ಸಮಾಜಸೇವಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೂ ಮುಂದಾಗಿದ್ದರು.
ಇಂದು ನಗರಸಭೆ ಆಯುಕ್ತ ರಾಯಪ್ಪ ನೇತೃತ್ವದಲ್ಲಿ ಈ ರಸ್ತೆಯ ತೇಪೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.ಬಳಿಕ ಮಾತನಾಡಿ, ಮಳೆ ಮುಗಿದ ತಕ್ಷಣ ಈ ರಸ್ತೆಯನ್ನು ವೈಜ್ಞಾನಿಕವಾಗಿ ಮತ್ತೆ ಮಾಡಿಕೊಡಬೇಕು. ಗುತ್ತಿಗೆದಾರನ 45 ಲಕ್ಷ ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಸಂಪೂರ್ಣ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಮಾಡಿದ ನಂತರ ಅವರ ಹಣ ಕೊಡಲಾಗುವುದು, ಇದು ಎಲ್ಲ ಗುತ್ತಿಗೆದಾರರಿಗೂ ಎಚ್ಚರಿಕೆ ಎಂದು ಹೇಳಿದ್ದಾರೆ.
ಕಡಲ್ಕೊರೆತ ಪ್ರದೇಶಕ್ಕೆ ಉಡುಪಿ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ; ಸಮಸ್ಯೆ ಬಗೆಹರಿಸುವ ಭರವಸೆ
ಪಡುಬಿದ್ರಿ : ಇಲ್ಲಿನ ನಡಿಪಟ್ಣ ಬಳಿ ಕಡಲ್ಕೊರೆತದಿಂದ ಅಪಾಯದಂಚಿನಲ್ಲಿರುವ ಪ್ರದೇಶಕ್ಕೆ ಇಂದು ಉಡುಪಿ ಜಿಲ್ಲಾಧಿಕಾರಿ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ತಾತ್ಕಾಲಿಕ ಪರಿಹಾರವಾಗಿ ಸಮುದ್ರ ತಟಕ್ಕೆ ಕಲ್ಲು ಹಾಕುವ ಭರವಸೆ ವ್ಯಕ್ತ ಪಡಿಸಿದರು.ಕೆಲವು ದಿನಗಳಿಂದ ಕಡಲು ಕೊರೆತ ತೀವ್ರಗೊಂಡಿದ್ದರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಹಿನ್ನಲೆಯಲ್ಲಿ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಯವರನ್ನು ಸ್ಥಳೀಯರು ಒತ್ತಾಯಿಸಿದರು.
ಸದ್ಯ ಅಪಾಯದಂಚಿನಲ್ಲಿರುವ ಮೀನುಗಾರಿಕಾ ಪರಿಕರಗಳ ಶೇಕರಣ ಕೊಠಡಿ ಸಮುದ್ರ ಪಾಲಾಗುವ ಸಾಧ್ಯತೆ ಇರುವ ಕಾರಣ ಸುಮಾರು 60ಲಕ್ಷ ರೂಪಾಯಿಗಳ ಪರಿಕರಗಳನ್ನು ಸ್ಥಳಾಂತರ ಮಾಡಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ವಿದ್ಯಾ ಕುಮಾರಿಯವರ ಗಮನಕ್ಕೆ ಮೀನುಗಾರ ಪ್ರಮುಖರು ತಂದರು. ತಾತ್ಕಾಲಿಕವಾಗಿ ಬಂಡೆ ಹಾಕುವ ಕಾರ್ಯ ಶೀಘ್ರ ಪ್ರಾರಂಭಿಸಲಾಗುವುದು. ಅದು ಈ ಕಡಲಬ್ಬರದ ಮಧ್ಯೆ ಎಷ್ಟು ಪರಿಣಾಮಕಾರಿ ಎಂಬುದು ತಿಳಿಯದು. ಈ ಪ್ರದೇಶಕ್ಕೆ ಯಾರೂ ಬಾರದಂತೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್, ಕಾಪು ತಹಶಿಲ್ದಾರ್ ಪ್ರತಿಭಾ, ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶೋಭಾ ಹಾಗೂ ಸ್ಥಳೀಯ ಮೀನುಗಾರ ಪ್ರಮುಖರು ಸ್ಥಳದಲ್ಲಿದ್ದರು.
ಉಡುಪಿಯ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳಿಂದ ಸಾವಿರಾರು ಭಕ್ತರಿಗೆ ತಪ್ತಮುದ್ರಾಧಾರಣೆ
ಉಡುಪಿ : ಉಡುಪಿಯ ಶ್ರೀಕೃಷ್ಣಮಠದಲ್ಲಿಂದು ಪ್ರಥಮನ ಏಕಾದಶಿ ಪ್ರಯುಕ್ತ ಪರ್ಯಾಯ ಪುತ್ತಿಗೆ ಶ್ರೀಗಳು ಸಾವಿರಾರು ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಿದರು.
ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ ಮಹಾಪೂಜೆ ಪೂರೈಸಿದ ಪರ್ಯಾಯ ಪುತ್ತಿಗೆ ಸುಗುಣೇಂದ್ರ ಶ್ರೀಗಳು ಸಾವಿರಾರು ಭಕ್ತರಿಗೆ ಮುದ್ರಾಧಾರಣೆ ನಡೆಸಿದರು. ಮುದ್ರಾಧಾರಣೆಗಾಗಿ ಬಂದವರ ಸರತಿ ಸಾಲು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಶ್ರೀಕೃಷ್ಣಮಠದ ಮುಂಭಾಗದಲ್ಲಿತ್ತು.
ಮುದ್ರಾಧಾರಣೆ ಮಾಡುವ ಮುನ್ನ ವೈದಿಕರು ಸುದರ್ಶನ ಹೋಮ ನಡೆಸಿದರು. ಅದರಲ್ಲಿ ಬಿಸಿ ಮಾಡಿದ ಶಂಖ ಚಕ್ರಗಳ ಚಿಹ್ನೆಗಳನ್ನು ಪರ್ಯಾಯ ಶ್ರೀಗಳು ಭಕ್ತರ ತೋಳಿನಲ್ಲಿ ಮುದ್ರಿಸಿದರು. ಉಡುಪಿ ಮಾತ್ರವಲ್ಲದೆ ನಾಡಿನ ಬಹುತೇಕ ಮಠಗಳಲ್ಲಿ ವಿವಿಧ ಮಠಾಧೀಶರುಗಳು ಈ ದಿನ ಭಕ್ತರಿಗೆ ತಪ್ತಮುದ್ರಾಧಾರಣೆ ಮಾಡುವ ಸಂಪ್ರದಾಯವಿದೆ.
ಬ್ರಹ್ಮಾವರ : ಉಡುಪಿಯಲ್ಲಿ ಮಳೆ ಕೊಂಚ ವಿರಾಮ ನೀಡಿದೆ. ಕಳೆದ ಎರಡು ದಿನಗಳಿಂದ ತುಂಬಿ ಹರಿಯುತ್ತಿದ್ದ ನದಿಗಳು ಮಂದಗತಿಯಲ್ಲಿ ಹರಿಯಲಾರಂಭಿಸಿವೆ. ಪಶ್ಚಿಮ ಘಟ್ಟದ ತಪಲು ಪ್ರದೇಶದಲ್ಲೂ ವಾತಾವರಣ ತಿಳಿಯಾಗಿದೆ.
ನೀರಿನ ಹರಿವು ಕಡಿಮೆಯಾಗುತ್ತಿದ್ದಂತೆ ಬ್ರಹ್ಮಾವರ ತಾಲೂಕಿನ ಚಾಂತರು ಗ್ರಾಮದಲ್ಲಿ ಹರಿಯುವ ಸೀತಾ ನದಿ ತನ್ನ ವೇಗ ತಗ್ಗಿಸಿದೆ. ಚಾಂತಾರು ಗ್ರಾಮದ ಹೇರೂರು ಉಗ್ಗೇಲುಬೆಟ್ಟು ಎಂಬಲ್ಲಿರುವ ಕಿಂಡಿ ಅಣೆಕಟ್ಟಿಗೆ ಬಾರಿ ಗಾತ್ರದ ಮರದ ದಿಮ್ಮಿಗಳು ಸಿಲುಕಿತ್ತು. ಹರಿದು ಬರುವ ನೀರಿನಲ್ಲಿ, ದೊಡ್ಡ ಪ್ರಮಾಣದ ಮರದ ದಿಮ್ಮಿಗಳು ಬಂದು ಅಣೆಕಟ್ಟು ಪ್ರದೇಶದಲ್ಲಿ ಸಿಲುಕುವುದು ಸಾಮಾನ್ಯ. ಇದೀಗ ಅಣೆಕಟ್ಟಿಗೆ ಸಿಲುಕಿದ ಮರಗಳನ್ನು ಪಂಚಾಯತ್ ಅಧಿಕಾರಿಗಳು ಸದಸ್ಯರ ನೆರವಿನೊಂದಿಗೆ ತೆರವು ಮಾಡಿದ್ದಾರೆ. ಅಧಿಕಾರಿಗಳ ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ನಿವಾಸಿಗಳೂ ಕೈಜೋಡಿಸಿದ್ದಾರೆ.
ಮಂಗಳೂರು : ನಗರದ ಚಿತ್ರಾಪುರ ಮಠದಲ್ಲಿ ಶಯನಿ ಏಕಾದಶಿಯ ಅಂಗವಾಗಿ ಸಂಪ್ರದಾಯದಂತೆ ನೂರಾರು ಭಕ್ತರಿಗೆ ತಪ್ತ ಮುದ್ರಧಾರಣೆ ನಡೆಯಿತು.
ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಮಠಕ್ಕೆ ಆಗಮಿಸಿರುವ ಭಕ್ತರಿಗೆ ತಪ್ತ ಮುದ್ರಧಾರಣೆ ಮಾಡಿದರು. ಬೆಳಗ್ಗಿನಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ತೋಳು, ಎದೆ, ಹೊಟ್ಟೆಯ ಭಾಗಕ್ಕೆ ಶಂಖ, ಚಕ್ರದ ಮುದ್ರೆ ಹಾರಿಸಿಕೊಂಡರು. ಆಷಾಢಮಾಸದ ಪ್ರಥಮ ಏಕಾದಶಿ ಶ್ರೀಮನ್ನಾರಾಯಣ ಯೋಗ ನಿದ್ರೆಗೆ ಜಾರುವ ದಿನ. ಆದ್ದರಿಂದ ಆ ದಿನ ಮಾಧ್ವ ಸಂಪ್ರದಾಯದಲ್ಲಿ ತಪ್ತ ಮುದ್ರಾಧಾರಣೆಗೆ ವಿಶೇಷ ಮಹತ್ವ ಪಡೆದಿದೆ.
ದೇಹ ಹಾಗೂ ಮನಸ್ಸಿನ ಶುದ್ಧೀಕರಣಕ್ಕೆ ತಪ್ತ ಮುದ್ರಧಾರಣೆ ಮಾಡಲಾಗಾಗುತ್ತದೆ. ತಪ್ತ ಮುದ್ರಧಾರಣೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವೈಜ್ಞಾನಿಕವಾಗಿಯೂ ತಪ್ತಮುದ್ರಧಾರಣೆ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಮಠಾಧೀಶರ ಮೂಲಕ ತಪ್ತಧಾರಣೆ ಮಾಡಲಾಗುತ್ತದೆ. ವಿಷ್ಣುವಿನ ಕರದಾಯುಧಗಳಾದ ಶಂಖ ಮತ್ತು ಚಕ್ರದ ತಾಮ್ರದ ಅಚ್ಚುಗಳನ್ನು ಬಿಸಿಯಿಂದ ಕಾಯಿಸಿ ಮೈಮೇಲೆ ಧರಿಸಿದ್ದಲ್ಲಿ ಮಳೆಗಾಲದಲ್ಲಿ ರೋಗರುಜಿನಗಳು ಬರುವುದಿಲ್ಲ ಎಂಬ ನಂಬಿಕೆಯಿದೆ.
ಹೆಬ್ರಿ : ಹೆಬ್ರಿ ತಾಲೂಕು ಚಾರ ಸಮೀಪದ ಪ್ರಸಿದ್ಧ ಜೋಮ್ಲು ತೀರ್ಥ ಸಂಪೂರ್ಣ ಮುಳುಗಡೆಯಾಗಿದೆ. ಈ ತೀರ್ಥ ಯೂಟ್ಯೂಬರ್ಸ್ ಮತ್ತು ಪ್ರಿ ವೆಡ್ಡಿಂಗ್ ಶೂಟಿಂಗ್ ಮಾಡುವವರ ಸ್ವರ್ಗವಾಗಿದ್ದು, ದಟ್ಟ ಕಾಡಿನ ಮಧ್ಯೆ ಹರಿಯುವ ಸೀತಾ ನದಿಯಿಂದ ಈ ತೀರ್ಥ ಸೃಷ್ಟಿಯಾಗಿದೆ. ಬಂಡೆಗಳ ಮೇಲಿಂದ ಕೆಳಗೆ ಹರಿಯುವ ಸೀತಾ ನದಿಯಿಂದ ಉಂಟಾದ ಫಾಲ್ಸ್ ವಿಶೇಷ ಆಕರ್ಷಣೆಯಾಗಿದ್ದು, ಪ್ರತಿವರ್ಷ ಜೋಮ್ಲು ಉತ್ಸವದ ಮೂಲಕ ಸುದ್ದಿಯಾಗುತ್ತದೆ.
ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯ ಹಿನ್ನೆಲೆ ಸೀತಾ ನದಿ ಉಕ್ಕಿ ಹರಿಯುತ್ತಿದ್ದು, ಜೋಮ್ಲು ತೀರ್ಥ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಜೋಮ್ಲು ಶ್ರೀ ಬೊಬ್ಬರ್ಯ ದೇವಸ್ಥಾನದವರೆಗೂ ನದಿಯ ನೀರು ತುಂಬಿದ್ದು, ಪ್ರವಾಸಿಗರು ಮತ್ತು ಭಕ್ತರು ಜೋಮ್ಲು ತೀರ್ಥ ವೀಕ್ಷಣೆಗೆ ಆಗಮಿಸದಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಉಡುಪಿ : ಕುಂದಾಪುರ ತಾಲೂಕಿನ ಕಂಡೂರಿನಲ್ಲಿ ಗಂಡ ಹೆಂಡತಿ ಪರಸ್ಪರ ಜಗಳ ಮಾಡಿಕೊಂಡ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ಬಳಿಕ ವಾಪಸು ಬರುವಾಗ ಪತಿ ವಾರಾಹಿ ಹೊಳೆಗೆ ಹಾರಿದ ಘಟನೆ ಇಂದು ನಡೆದಿದೆ.
ಹೊಳೆಗೆ ಹಾರಿದ ವ್ಯಕ್ತಿಯನ್ನು ಕಾಳಾವರ ಗ್ರಾಮದ ಅಂಗನವಾಡಿ ಸಮೀಪ ನಿವಾಸಿ ಹರೀಶ್ ಭೋವಿ (40) ಎಂದು ಗುರುತಿಸಲಾಗಿದೆ. ಹರೀಶ್ ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದರು. ಆಗಾಗ ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು. ಮಂಗಳವಾರ ಬೆಳಿಗ್ಗೆ ಜಗಳ ತಾರಕಕ್ಕೇರಿ ಮಕ್ಕಳನ್ನು ಬಾವಿಗೆ ದೂಡಲೆತ್ನಿಸಿದ್ದರು ಎನ್ನಲಾಗಿದೆ. ಇದರಿಂದ ಆತಂಕಗೊಂಡ ಪತ್ನಿ ಕಂಡ್ಲೂರು ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಗಂಡ ಹೆಂಡತಿಯನ್ನು ಠಾಣೆಗೆ ಕರೆಯಿಸಿ ಪಂಚಾಯಿತಿ ಮಾಡಿ ಕಳುಹಿಸಿದ್ದರು. ಠಾಣೆಯಿಂದ ಬರುತ್ತಿದ್ದ ವೇಳೆ ಕಂಡ್ಳೂರು ಸೇತುವೆ ಸಮೀಪ ಆಟೋ ಚಾಲಕನಿಗೆ ರಿಕ್ಷಾ ನಿಧಾನಿಸುವಂತೆ ತಿಳಿಸಿದ ಹರೀಶ್ ಸೇತುವೆಯಿಂದ ವಾರಾಹಿ ಹೊಳೆಗೆ ಹಾರಿದ್ದಾರೆ.
ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯರು, ಪೊಲೀಸರು, ಅಗ್ನಿಶಾಮಕದಳ, ಮುಳುಗುತಜ್ಞರು ಹರೀಶ್ ಪತ್ತೆಗೆ ಶೋಧ ಕಾರ್ಯದಲ್ಲಿ ತೊಡಗಿದರು. ಆದರೆ ವಿಪರೀತ ಮಳೆ, ಉಕ್ಕಿ ಹರಿಯುತ್ತಿರುವ ನದಿ ನೀರಿನಲ್ಲಿ ಪತ್ತೆ ಕಾರ್ಯ ಸಫಲವಾಗಿಲ್ಲ.
ಹರೀಶ್ಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಹಿರಿಯ ಮಗಳು ಮೂರನೇ ತರಗತಿ ಹಾಗೂ ಕಿರಿಯ ಮಗಳು ಅಂಗನವಾಡಿಗೆ ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ವಿಶೇಷ ಶಾಲೆಗಳ ಶಿಕ್ಷಕರ ವೇತನ ಪರಿಷ್ಕರಣೆಗೆ ಅಗತ್ಯ ಕ್ರಮ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಂಗಳೂರು : ರಾಜ್ಯದ ವಿಶೇಷ ವಸತಿ ಶಾಲೆಗಳಲ್ಲಿ ಸೇವಾ ನಿರತ ಸಿಬ್ಬಂದಿಯ ವೇತನ ಪರಿಷ್ಕರಣೆ ಸೇರಿದಂತೆ ಮೂಲಭೂತ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಶೀಘ್ರವೇ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವಿಶೇಷಚೇತನ ಮಕ್ಕಳ ವಸತಿ ಶಾಲೆಗಳ ಸಭೆಯಲ್ಲಿ ಮಾತನಾಡಿದ ಸಚಿವರು, 1982ರ ರಾಜ್ಯ ಅನುಸಂಧಾನ ಸಂಹಿತೆಯಡಿ ನಡೆಯುತ್ತಿರುವ ವಿಶೇಷ ಶಾಲೆಗಳ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯ ಬೇಡಿಕೆಗಳನ್ನು ಇಲಾಖೆ ಸಹಾನುಭೂತಿಯಿಂದ ಪರಿಶೀಲಿಸಲಿದೆ ಎಂದು ಹೇಳಿದರು.
ಸದ್ಯ ವಿಶೇಷ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಶಿಕ್ಷಕೇತರರಿಗೆ ಕಳೆದ 14 ವರ್ಷಗಳಿಂದ ವೇತನ ಪರಿಷ್ಕರಣೆ ಆಗಿಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಹೀಗಾಗಿ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುವುದು. ಜೊತೆಗೆ ಪ್ರತಿ ತಿಂಗಳು ವೇತನ ಭರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು.
ಮಾನಸಿಕ ಭಿನ್ನ ಸಾಮರ್ಥ್ಯದ 25 ವಯೋಮಿತಿ ಮೀರಿದವರಿಗಾಗಿ ವೃತ್ತಿಪರ ತರಬೇತಿ ಕೇಂದ್ರ ಅಥವಾ ಪಾಲನಾ ಕೇಂದ್ರವನ್ನು ರಾಜ್ಯಾದ್ಯಂತ ನಡೆಸುವ ಬಗ್ಗೆ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದರು.
ಸಭೆಯಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರಾದ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ, ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ನಿರ್ದೇಶಕರಾದ ಸಿದ್ದೇಶ್ವರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧಿಕಾರಿಗಳು, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘ ಹಾಗೂ ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.